“ನಾಳೆ ಸುಧಿ ಮದ್ವಿಗ ಹೋಗಬೇಕು, ಮುಹೂರ್ತ ಲಗು ಅದ ಮೊಬೈಲ್ ಆಫ್ ಮಾಡಿ ಮಲ್ಕೊ ಎಂದು ನನ್ನ ಯಜಮಾನ್ರು ಸಿಡಿಮಿಡಿ ಮಾಡಿದರು .” “ಹ್ಮ್ಮ್ ನಾಯೇನ ಮದ್ವಿಗ ಬರುದಿಲ್ಲ “ , ನೀವು, ಅಮ್ಮ ಹೋಗ್ರಿ “ ಎಂದು ತುಸು ಕೋಪದಿಂದ ಹೇಳಿದೆ. ನಮ್ಮ ಮನೆಯಲ್ಲಿ ನನ್ನ ಧ್ವನಿಯ ಏರಿಳಿತವನ್ನು ಅಷ್ಟಾಗಿ ಗಮನಿಸುವ ಗೋಜಿಗೇ ಹೋಗುವುದಿಲ್ಲ.ಇವಳಿಗೆ ಕೋಪಾನ ತಾಪಾನ ಅಂತ ತಿಳ್ಕೋಳೋ ವ್ಯವಧಾನವೂ ಇಲ್ಲ ಬಿಡಿ. ಮತ್ತ್ಯಾಕೆ ಇಲ್ಲ ಸಲ್ಲದು ಅರ್ಥ ಮಾಡ್ಕೊಂಡು, ಮೈ ಮೇಲೆ ತಾರಸಿ ಎಳ್ಕೊಳ್ಳುದು ಅಂತ. ನಾನಾಗಿಯೇ ‘ ನನಗೆ ಕೋಪ ‘ ಅಂತ ಘಟ್ಟಿಸಿ ಹೇಳಿದಾಗ ಮಾತ್ರ, "ಯಾಕೆ….? "ಅಂತ ಕೇಳೂ ವಾಡಿಕೆ.
“ ಯಾಕ ಏನಾತು, ಯಾಕ ಬರಂಗಿಲ್ಲ …? ಅಂತ ಪತಿಯ ಮರುಪ್ರಶ್ನೆ ಶರವೇಗದಿ ಬಂತು. ಅವರು ನಮ್ಮ ಮನಿ ಎಲ್ಲ ಕಾರ್ಯಕ್ರಮಕ್ಕ, ತಪ್ಪದ ಬಂದಾರ, ನಾವು ಹೋಗಲಿಲ್ಲ ಅಂದ್ರ ಛಂದ ಕಾಣಸ್ತದಾ, ನೀನೇ ಹೇಳು , ಸುಲೋಚನಾ ವೈನಿ ಆಫೀಸಕ್ಕ ರಜಾ ಹಾಕಿ ಬಂದಿದ್ರು ಅಂಥಾದ್ರಾಗ…” ನನ್ನ ಪತಿ ಮಾತು ಮುಂದೆವರೆಸುವದರಲ್ಲೆನೆ ನಾನು ಅವರ ಮಾತನ್ನು ತಡೆದು. “ ನೋಡ್ರಿ ನನಗೆ ನಾಳೆ ಮದ್ವಿಗೆ ಉಡೋದಕ್ಕೆ ಯಾವುದೂ ಛಂದ ಸೀರಿಲ್ಲ , ಅದಕ್ಕ ಮ್ಯಾಚಿಂಗ್ ಆಭರಣ ಇಲ್ಲ. ಅದಕ್ಕೆ ನಾ ಬರುದಿಲ್ಲ ಎಂದು ನನ್ನ ಗಂಭೀರ ಕಾರಣ ಕೊಟ್ಟೆ ”. ನಮ್ಮ ಯಜಮಾನ್ರು ಒಂದು ಕ್ಷಣ ಅವಾಕ್ಕಾಗಿ, ಧಿಗ್ಗ ಎಂದು, ಎದ್ದು ಕೋಣೆ ಲೈಟ್ ಹಾಕಿ, ಹೊಸ ವಾರ್ಡರೋಬ ಬಾಗಿಲು ತಗೆದು ,” ಅಲ್ಲ….ಇಲ್ಲೆ ನೋಡಿಲ್ಲೆ ಸೀರೆ ಇಡಲಿಕ್ಕೆ ಜಾಗ ಇಲ್ಲ ಅಂತ ಇನ್ನೊಂದು ವಾರ್ಡ್ ಡ್ರೋಬ್ ಮಾಡಿಸಿಕೊಂಡಿ , ಈಗ ಸೀರೆ ಇಲ್ಲ ಅಂತಿ , ಇದೆಂಥ ಕುಂಟ ನೆಪ ನಿಂದು “ ಅಂತ ಸ್ವಲ್ಪ ಬಿರುಸಿನಿಂದ ಹೇಳಿದರು. “ ಅಲ್ರಿ ಹಂಗಲ್ಲ…ಇವೆಲ್ಲ ಸೀರಿ ನಾ ಉಟ್ಟಾಯ್ತು, ಅಮ್ಮ ಕೊಡಿಸಿದ ಬನಾರಸ್ ಕಾಟನ್ ಸೀರೆ, ಶುಭಾ ವೈನಿ ತಮ್ಮನ ಮಗಳ ಮದ್ವಿಗೆ ಉಟ್ಟಾಗೆದ , ಎಲ್ಲ ಬಳಗದವರಿಗೆ , ನನ್ನ ಹತ್ರ ಯಾವ್ ಯಾವ್ ಸೀರಿ ಅವ ಅಂತ ಗೊತ್ತಾಗಿ ಬಿಟ್ಟದ. ಅವರು ಫೋಟೋ ಆಲ್ಬಮ್ನಲ್ಲು ನಾನು ಆ ಸೀರೆ ಉಟ್ಟ ಫೋಟೋ ಅದ , ಈಗ ಮತ್ತೆ ಅದೇ ಸೀರೆ ಹೆಂಗ ಉಡಲಿ ಅಂತ ನನ್ನ ಚಿಂತಿ “ ಅಂತ ಮನಸಿನ ವೇದನೆಯನ್ನು ಹೊರಹಾಕಿದೆ, ಸುದ್ದಾತ್ ನಡಿ….ಎಂದು ಹಣೆಗೆ ಕೈ ಚಚ್ಚಿ “ ಆ ಪಿಂಕ್ ರೇಷ್ಮೆ ಸೀರಿ ಟ್ರೈ ಮಾಡು” ಅಂತ ಪತಿ ಹೇಳಿದಾಗ, “ ಅಯ್ಯಯ್ಯೋ ಮರೋ ಬ್ಯಾಡಪಾ , ಮೊನ್ನೆ ಸೌಮ್ಯನ ರಿಸೆಪ್ಶನ್ ಗೆ ಅದೇ ಸೀರೆ ಉಟ್ಟಿದ್ದೆ , ಅದೇ ನಿಮ್ಮ ಸುಲ್ಲು ಮೌಶಿ, ಹೇಳಿದ್ರು “ ಚಂದ ಅದ ಸೀರಿ , ಮೊನ್ನೆ ದೇಶಪಾಂಡೆ ಅವರ ಮನ್ಯಾಗ ನಾಮಕರಣಕ್ಕೂ ನೀ ಇದೆ ಸಿರಿ ಉಟ್ಟಗೊಂಡಿದ್ದಿ ಹೌದಿಲ್ಲೋ ? ನೋಡುದ್ಯಾ ನನಗೆ 70 ವರ್ಷ ಆದರೂ ನೆನಪಿನ ಶಕ್ತಿ ಹೆಂಗ ಅದ. ಒಮ್ಮೆ ನೋಡಿದ್ರ ಸಾಕ, ಕಣ್ಣಾಗ ಚಿತ್ರ ಕೊತ ಬಿಡತದ “ ಅಂತ ಹೇಳಿದ್ರು. “ ನಾಳೆ ಸುಲ್ಲು ಮೌಶಿ ಬಂದೆ ಬರತಾರೆ , ಅವರ ತಂಗಿ ರಮಾ ಮೌಶಿನೂ ಬರ್ತಾರ , ಅವರಂತೂ ನಾ ಯಾವ ಕ್ಲಿಪ್ ಹಾಕೊಂಡಿದ್ದೆ ಅಂತಾನು ನೆನಪಿಟ್ಟಿರ್ತಾರ. ಅದಕ್ಕ ನನಗೆ ಬರಲಿಕ್ಕೆ ಮನಸಿಲ್ಲ ನಿಮಗ ಹೆಂಗಸ್ರ ಸಮಸ್ಯೆ ಕ್ಷುಲಕ ಅನಸ್ತಿರಬೇಕು, ಆದ್ರ ನಮಗ ಹಗಲ ರಾತ್ರಿ ಎದಿ ಕೊರಿತಾವ ಗೊತ್ತೇನು…” “ ಇದಲ್ಲದೆ ಸೆಲ್ಫಿ ತಕ್ಕೊಂಡು ಸ್ಟೇಟಸ್ ಅಪ್ಡೇಟ್ ಮಾಡಬೇಕು, ನನ್ನ ಫ್ರೆಂಡ್ಸು ‘ ‘You look fresh in stale saree too ‘ಅಂತ ಕಾಮೆಂಟ್ ಮಾಡ್ತಾರ , ನಾನು ಆಗ ಏನಂತ ರಿಪ್ಲೈ ಮಾಡ್ಲಿ ಹೇಳ್ರಿ? ‘Thank you dear ‘ ಅಂತ ಹೇಗೆ ಅನ್ನಲಿ, ಎಂಥ ‘ ಟ್ಯೂಬ್ ಲೈಟ್ ‘ ಅದ ನೋಡು taunt ತಿಳಿವಲ್ದು ಅನ್ಕೋತಾರ. “ ಆತ ಬಿಡು, ಏನ್ ಮಾಡ್ತೀಯೋ ಮಾಡು, ನನಗಂತೂ ಕಣ್ಣ ಎಳಿಲಿಕ್ಕಹತ್ತದ, ನಾನ ಮಲ್ಕೊತಿನಿ “ ಅಂತ ಹೇಳಿ ಒಂದೆ ನಿಮಿಷದಲ್ಲಿ ಗೊರಕೆ ಶಬ್ದ. ‘ ಅಬ್ಬಾ ಇವರಿಗೆ ಯಾವಾಗ್ಲೂ ನಿದ್ದಿನೆ ‘ ಎನ್ನುತ್ತಾ ಮಾಕಾಡೆ ಮಲಗಿದೆ.
ನಿದ್ದೆ ಆವರಿಸುವಾಗಲೇ ವಾರ್ಡರೋಬಿನ ಹತ್ತಿರ …. ಬೆಳಕು ಚೆಲ್ಲಿದಂತಾಯಿತು, ಯಾರೋ ಮುದಿ ಹೆಂಗಸು, ಕೈಯಲ್ಲಿ ‘ಮಂತ್ರ ದಂಡ ‘ ಹಿಡಿದುಕೊಂಡು ಬಂದಳು, ಮಗು ನಾನೂ, ‘ ಸಿಂಡ್ರೆಲ್ಲಾಗೆ ಮೇಕೋವರ್ ಮಾಡಿದ ಏಂಜಲ್ ‘ ಅಂತ ಹೇಳಿದಳು. ‘ ಹಾ ‘ ಅಂತ ಬಿಟ್ಟ ಬಾಯಿ ಬಿಟ್ಟ ಹಾಗೆ ಕುಳಿತೆ. ಪಕ್ಕದಲ್ಲಿ ಮಲಗಿದ ಪತಿಯನ್ನು ಎಬ್ಬಿಸಲು ಪ್ರಯತ್ನ ಮಾಡಿದೆ,” ರಿ ಏಂಜಲ್ ಬಂದಾಳ ಏಳ್ರಿ, ಏಳ್ರಿ “ ಅವರು ಮಗ್ಗಲು ಬದಲಿಸಿ, ಗೊರಕೆ ಶಬ್ದ ಇನ್ನೂ ತಾರಕಕ್ಕೆ ಕೊಂಡೊಯ್ದರು. ಆಗ ಏಂಜಲ್ ಹೇಳಿದಳು… “ ಮಗು ಬಿಡು, ನಿನ್ನ ಗಂಡನನ್ನು ಎಬ್ಬಿಸುವುದಕ್ಕೆ ವ್ಯರ್ಥ ಪ್ರಯತ್ನ ಮಾಡಬೇಡ. ನಾನು ಮುದಿ ಏಂಜಲ್ ಅಂತ ತಿಳಿದು ಮತ್ತೆ ಮಲಗಿ ಬಿಡುತ್ತಾನೆ “ ನಿನಗೆ ಏನು ವರ ಬೇಕೋ ಕೇಳು, ಅಂದಾಗ ನಾನೂ ಸಿಂಡ್ರೆಲ್ಲಾ ಥರ ಮೇಕ್ ಓವರ್ ಬೇಡ್ಲಾ ಅಂತ ಅನ್ಕೊಂಡೇ, ಆಗ ಏಂಜಲ್ ಹೇಳಿದಳು “ ಇಲ್ಲಮ್ಮ ನನಗೆ ಈಗಿನ ‘ಫ್ಯಾಷನ್ ಟ್ರೆಂಡ್ಸ್’ ಬಗ್ಗೆ ಅಷ್ಟೊಂದು ಪರಿಚಯ ಇಲ್ಲ, ಅದರ ಬದಲಾಗಿ ಬೇಕಾದರೆ ನಿನಗೆ ಒಂದು ದಿನದ ಮಟ್ಟಿಗೆ ಅದೃಶ್ಯವಾಗುವ ವರ ಕೊಡುತ್ತೇನೆ. ಅವಾಗ ನೀನು ಯಾವ ಸೀರೆ ಉಟ್ಟರೂ ಯಾರು ನೋಡಲ್ಲ “ ಅಂತ ಹೇಳಿದಳು. “ ಹೌದಾ ಹಾಗಾದ್ರೆ ಸೆಲ್ಫಿ ತೊಗೂಬಹುದಾ ? ಅಂತ ಕೇಳಿದೆ ಅತಿ ಉತ್ಸಾಹದಿಂದ ಕೇಳಿದೆ. “ ಇಲ್ಲಮ್ಮ ಅದು ಸಾಧ್ಯ ಇಲ್ಲ “ ಅಂತ ಬೇಸರದಿಂದ ಹೇಳಿದಳು “ ಇರಲಿ ಬಿಡು, ಅದೃಶ್ಯ ಮಾಡಿಬಿಡು, ನಾನು ಮದುವೆಗೆ ಹೋಗಲೇ ಬೇಕು, ಸುಧಿ ಹುಡುಗಿ ಒಂದು ಲಕ್ಷ ಬೆಲೆಯ ಮೈಸೂರ್ ಸಿಲ್ಕ್ ಧಾರೆ ಸೀರೆ ತೊಗೊಂಡಿದ್ದಾಳಂತೆ ಅದನ್ನು ನಾನು ನೋಡ್ಲೇಬೇಕು “ ಏಂಜಲ್ ಅಂದು ಬಿಡಿ ‘ತಥಾಸ್ತು’ ಎಂದು ಗಡಿಬಿಡಿಯಲ್ಲೇ ಹೇಳಿದೆ. “ ಸರಿ, ಆದ್ರೆ ನೆನಪಿಡು,ಸಿಂಡ್ರೆಲ್ಲಾ ಥರ ರಾತ್ರಿ ಹತ್ತು ಗಂಟೆಯವರೆಗೆ ಮಾತ್ರ ಅದೃಶ್ಯದ ವ್ಯಾಲಿಡಿಟಿ ಇದೆ “. “ಸರಿ “ ಅದಕ್ಕೂ ಒಪ್ಪಿಕೊಂಡೆ.
ಬೆಳಗ್ಗೆ ಎದ್ದೆ, ನಮ್ಮ ಯಜಮಾನ್ರು ನನ್ನ, ಎಬ್ಬಿಸೋಕೆ ಹೋಗ್ಲೇ ಇಲ್ಲ, ಬೇಗ ರೆಡಿ ಆಗಿ ಅಮ್ಮನ ಜೊತೆ ಹೊರಟೇ ಬಿಟ್ರು, ನನ್ನನ್ನು ಕರೀತಾರೆ, ಕರೀತಾರೆ ಅಂತ ಮಲಗಿರೋ ನಾಟಕ ಮಾಡ್ತಾ ಇದ್ದೆ. ಅತ್ತೆ ಮಾತ್ರ ಬಿಡದೆ ಕೇಳಿದ್ರು “ ಎಲ್ಲಿ, ಸೊಸೆ ಬರಲ್ವಾ? “ ಇಲ್ಲಮ್ಮ ಅವಳು ಆಗ್ಲೇ ವಾಕ್ ಹೋದ್ಲು ಅಂತ ಕಾಣ್ಸತದ , ರೂಮನ್ಯಾಗ ಇಲ್ಲ. ‘ “ ಮದುವೆಗೆ ಬರುದಿಲ್ಲ ಅಂತ ನಿನ್ನೆನೆ ಹೇಳಿದ್ಲು “ ಅಂತ ಪತಿಯ ಮಾತು ಕಿವಿಗೆ ಅಪ್ಪಳಿಸಿತು . “ಅಲ್ಲರೀ ನಾನು ಇಲ್ಲೆ ಇದ್ದೀನಿ,….ಅಂತ ಕೂಗಿದೆ, ಇವರು ಯಾಕೆ ಹೀಗೆ ಹೇಳ್ತಾ ಇದ್ದಾರೆ ಅಂತ ಸಿಟ್ಟು ಉಕ್ಕಿತು. ಆಗ ರಾತ್ರಿ ಬಂದ ಏಂಜಲ್ ವರ ನೆನಪಾಯಿತು. “ ಒಹ್ ನಾನು ಯಾರಿಗೂ ಕಾಣಸ್ತಾ ಇಲ್ಲ, ಇದೇನಾಶ್ಚರ್ಯ “ ಎಂದುಕೊಂಡೆ. ಸರಿ ನಾನು ಹೊರಟೆ ಬಿಡತೀನಿ ಮದುವೆಗೆ, ಯಾವ ಸೀರೆ ಚಿಂತೆನೂ ಇಲ್ಲ,ಯಾವ ಮೇಕ್ ಅಪ್ ರಗಳೆನೂ ಇಲ್ಲ. ‘ನಾನು ಯಾರಿಗೂ ಕಾಣೋದೇ ಇಲ್ಲ’. ಅಂದ್ಮೇಲೆ ತೊಟ್ಟ ಬಟ್ಟೆ ಮೇಲೆನೆ ಹೊರಟೆ, ನಮ್ಮ ಯಜಮಾನ್ರು ಬರೋ ಒಂದೂವರೆ ಗಂಟೆ ಮುಂಚೆ, ಕ್ಷಣಾರ್ಧದಲ್ಲಿ ಮದುವೆ ಛತ್ರಕ್ಕೆ ಹೋದೆ.
ಅಲ್ಲಿ ಇನ್ನೂ ಯಾರು ಬಂದಿರಲಿಲ್ಲ. ನಾನೆ ಮೊದಲು ಇರಬೇಕು ಅತಿಥಿಯಾಗಿ ಎಂಟ್ರಿ ಮಾಡಿದ್ದು. ಭಾರತೀಯರಲ್ಲಿ ತಡವಾಗಿ ಕಾರ್ಯಕ್ರಮಕ್ಕೆ ಹೋದರೆ ಮಾನ ಜಾಸ್ತಿ. ಇಷ್ಟು ಬೇಗ ಬಂದ್ಲಾ ಇವಳು, ಮನೆಯಲ್ಲಿ ಏನು ಕೆಲಸ ಇಲ್ಲ ಅನ್ಸುತ್ತೆ ಅಂತ ಮೂಗು ಮುರಿಯುವ ಅವಕಾಶ ಯಾರಿಗೂ ಕೊಟ್ಟಿಲ್ಲ ಅಂತ ಖುಷಿ ಪಟ್ಟೆ. ಯಾಕಂದ್ರೆ ನಾನೀಗ ‘ಅದೃಶ್ಯ’ ಮದುವೆ ಮನೆಯಲ್ಲಿ,ವಧುವಿಗೆ ಅಲಂಕಾರ ನಡೆದಿತ್ತು.ಮೈಸೂರ್ ಸಿಲ್ಕ್ ಸೀರೆ ಮಿಂಚ್ತಾ ಇತ್ತು. ನೋಡಿ ತೃಪ್ತಿಪಟ್ಟೆ. ಇಷ್ಟು ದುಬಾರಿ ಸೀರೆ ಎಷ್ಟು ಉಪಯುಕ್ತ ನಾ ಕಾಣೆ ಅಂದುಕೊಂಡೇ.
ಇತ್ತ ಗಂಡಿನ ಕಡೆಯವರು ಏನು ಮಾಡುತ್ತಿದ್ದಾರೆ ಅಂತ ನೋಡುವ ಕುತೂಹಲದಿಂದ ಒಳ ಹೋದೆ, ವರಪೂಜೆಗೆ ಕೊಟ್ಟ ಬೆಳ್ಳಿ ತಟ್ಟೆ ನೋಡ್ತಾ, “ ಅಷ್ಟಕಷ್ಟೆ ಅದ, ಭಾಳ ತೆಳು ಅದ ತಾಬಾಣ,ರೊಕ್ಕಕ್ಕ ಶಾಣ್ಯಾತನ ಮಾಡಿದ್ರ ಹಿಂಗ ಅಂತ ಮುಖ ಸಿಂಡರಿಸಿ ಕೂತಿದ್ರು. ಇದಾತು ಇನ್ನ ಬಂಗಾರ ಚೈನು ಕೊಡಬೇಕಂತ ಮಾತ ಆಗೇದ, ಅದ ಅರೇ ಹೆಂಗ ಇರ್ತದೂ” ಅಂತ ಗುಸು ಗುಸು ಕೇಳಿಸಿತು… ಹೆಣ್ಣು ಹೆತ್ತವರ ಪಾಡು ನೆನೆದು ದುಃಖ ಒಟ್ಟರಿಸಿತು ಅಲ್ಲೇ ಇಟ್ಟು ಹೋದ ಬೆಳ್ಳಿ ತಟ್ಟೆ ಕದಿಯಲು ಬಂದ ಅಗುಂತಕ ಕಳ್ಳನ್ನನ್ನು ನೋಡಿತು ನನ್ನ ಅದೃಶ್ಯ ಶರೀರ. ಹೋಗಿ ಅದನ್ನು ಕಸಿದು, ಮತ್ತೆ ಭದ್ರವಾಗಿ ಬ್ಯಾಗ್ ಅಲ್ಲಿ ಮುಚ್ಚಿ ಇಟ್ಟೆ. ಅದೃಶ್ಯ ಆಗಿದ್ದಕ್ಕೂ ಒಂದು ಒಳ್ಳೆ ಕೆಲಸ ಮಾಡಿದೆನಲ್ಲ ಎಂದು ಸಮಾಧಾನಪಟ್ಟೆ .
ದೂರದಲ್ಲಿ ಸುಲ್ಲು ಮೌಶಿ ಬಂದಿದ್ದು ನೋಡಿದೆ, ಹೋಗಿ ಸ್ವಲ್ಪ ಕಪಿ ಚೇಷ್ಟೆ ಮಾಡುವ ಮನಸ್ಸಾಯಿತು. ಅವರ ಹೆಗಲ ಮೇಲಿದ್ದ ಬ್ಯಾಗ್ ಏಳದೇ , ಮೊದಲೇ, ತಾವು ಮತ್ತು ತಮ್ಮ ಬ್ಯಾಗ್ ಬಗ್ಗೆ ಅತೀವ ಕಾಳಜಿವಹಿಸುವ ಮೌಶಿ, ಹಿಂದೆ ಮುಂದೆ ಕಣ್ಣು ಹಾಯಿಸುತ್ತ “ ಅವ್ವಾssss ಯಾರೋ ನನ್ನ ಬ್ಯಾಗ ಎಳೆದಂಗ ಆಗ್ಲಿಖತ್ತದ ಸುಡ್ಲಿ, ಯಾರೋ ಪಾಕೀಟ ಕಳ್ಳ ಬಂದಾನ, ಹ್ಮ್ಮ್ ಆದ್ರ ಸುಲ್ಲುನ ಬ್ಯಾಗ ಕದಿಯು ಖದೀಮಾ ಇನ್ನೂ ಈ ಜಗತ್ತನ್ಯಾಗ ಹುಟ್ಟಿಲ್ಲ ಬಿಡು “ ಎಂದು ಕೈಯಲ್ಲೇ ತಿವದು ಮತ್ತೆ ಕುಳಿತರು. ನಾನು ಮುಸಿ ಮುಸಿ ನಕ್ಕೆ. ಮತ್ತೆ ಅವರ ಜಡೆಗೆ ಹಾಕಿದ್ದ ಮಲ್ಲಿಗೆ ಮಾಲೆ ಜಗ್ಗಿ, ಅವರ ಕಿವಿಗೆ ತೂರಿಸಿದೆ , ಮೌಶಿ ಎದ್ದು, “ ಏನ ಗಂಡಸರಪ್ಪಾ , ಛಂದ ಹೆಣ್ಣಮಕ್ಕಳನ ನೋಡಿದ್ರ ಸಾಕು, ವಯಸ್ಸಾದ್ರೂ, ಕಾಲೇಜು ಹುಡುಗುರ ಥರ ಚಾಷ್ಟಿ ಮಾಡ್ತಾರ “ ಅಂತ ಕುರ್ಚಿ ಬದಲಿಸಿದರು. ಏಪತ್ತು ವರ್ಷದ ಸುಲ್ಲು ಮೌಶಿಯ ‘ಸೆಲ್ಫ್ ಲವ್ ‘ ನೋಡಿ,ನಾನು ನಕ್ಕು ನಕ್ಕು ಸುಸ್ತಾದೆ. ಧಾರೆ ಸಮಯ ಸಮೀಪಿಸಿತು , ಜನ ಹೆಚ್ಚಾದರೂ, ಮದುವೆ ಶಾಸ್ತ್ರ ನೋಡುವದನ್ನು ಬಿಟ್ಟು, ಅತಿಥಿಗಳು ತಮ್ಮ ಮೊಬೈಲ್ನಲ್ಲಿ ಮುಳುಗಿದ್ದರು. ಎಲ್ಲ ಹೆಂಗಳೆಯರು, ಇತರ ಹೆಂಗಸರ ಸೀರೆ, ಬ್ಲೌಸ್, ಅಲಂಕಾರ ನೋಡಿ, ಕಾಮೆಂಟ್ ಮಾಡುವದರಲ್ಲಿ ಮಗ್ನರಾಗಿದ್ದರು.
ನಮ್ಮ ಯಜಮಾನ್ರು ಸ್ವಲ್ಪ ಸಪ್ಪೆ ಆಗಿದ್ದರು, ಎಲ್ಲರು “ಎಲ್ಲಿ ನಿಮ್ಮ ಹೆಂಡತಿ ಬಂದಿಲ್ಲಾ” ಅಂತ ಕೇಳ್ತಾ ಇದ್ರು. ಇವರಿಗೆ ಏನು ಹೇಳಬೇಕೆಂದು ಗೊತ್ತಾಗ್ತಾ ಇರಲಿಲ್ಲ. ನನಗೂ ಅವರ ಮುಖ ನೋಡಿ ಪಾಪ ಅನಿಸಿತು, ಹೋಗಿ ಅವರ ಕೆನ್ನೆ ಚಿವುಟಿ ಬಂದೆ, ಅವರು ಸ್ವಲ್ಪ ಗಾಬರಿ ಆಗಿ ಅತ್ತ ಇತ್ತ ನೋಡಿದರೂ, ಮತ್ತೆ ಸುಮ್ಮನಾದರು. ಪಕ್ಕದಲ್ಲಿ ಕುಳಿತ ಅಮ್ಮನೇ ಹೀಗೆ ಮಾಡಿದಳಾ ಎಂದು ಸಂಶಯಪಟ್ಟರು, ನನಗೆ ನಗು ತಡೆಯಲಾಗಲಿಲ್ಲ. ಮತ್ತೆ ಹಿಂದಿನಿಂದ ಶರ್ಟ್ ಜಗ್ಗಿದೆ, ಹಿಂದೆ ಕುಳಿತ ಸುಲ್ಲು ಮೌಶಿನೇ, ಎಂದು ತಿಳಿದರು. ಸುಲ್ಲು ಮೌಶಿ ಕೇಳಿದರು…” ಯಾಕೋ ಆರಾಮ ಇದ್ದಿ ಇಲ್ಲೋ? ಹೆಂಡತಿನ ಭಾಳ ತಲಿ ಮ್ಯಾಲ ಕುಡುಸಬಾರದು, ಬಂದ್ರ ಬಾ ಬಿಟ್ಟರ ಬಿಡು ಅನ್ಬೇಕು ಅಂತ ಮಗನ ಬೆನ್ನ ತಟ್ಟುತಿದ್ದರು.” ಅಲ್ಲೇ ಅದೃಶ್ಯ ರೂಪದಲ್ಲಿ ಇದ್ದ ನನಗೆ ‘ ಹೆಣ್ಣಿಗೆ ಹೆಣ್ಣೇ ಶತ್ರು’ ಅಂತ ಆಕಾಶವಾಣಿ ಆದ ಹಾಗೆ ಅನಿಸಿತು. ಆಮೇಲೆ ಯಾಕೋ ಬೋರ್ ಅನಿಸಿ, ಬೇರೆ ಎಲ್ಲಾದ್ರೂ ತೆರಳೋಣ ಅನಿಸಿತು. ಆದ್ರೇ ಮದುವೆಗೆ ಹೋದ ಮೇಲೆ ಊಟ, ಐಸ್ ಕ್ರೀಮ್, ಪಾನ್ ಬಿಟ್ಟು ಹೋಗಕ್ಕಾಗುತ್ತಾ? ಅದನ್ನು ಮುಗಿಸೇ ಹೊರಟೆ.
ಮದುವೆಗೆ ಬಂದು ಒಂದ ಸಿಂಗಲ ಫೋಟೋ ತಗಿಸಿ ಕೊಳ್ಳಲಿಲ್ಲ ಅಂತ ಬೇಜಾರಾಯ್ತು. ಅದೇ ಬೇಜಾರಿನಲ್ಲಿ, ಟ್ರಾಫಿಕ್ ಜಾಮ್ ಆಗಿರೋ ರೋಡನ್ನು ತುಂಬಾ ಸಲೀಸಾಗಿ ಕ್ರಾಸ್ ಮಾಡಿದ ಮೇಲೆ ಸ್ವಲ್ಪ ಬೇಜಾರು ಕಮ್ಮಿ ಆಯಿತು. ಟಿಕೆಟ್ ಇಲ್ಲದೆ ಕ್ರಿಕೆಟ್ ಸ್ಟೇಡಿಯಂಗೆ ನುಗ್ಗಿ, ಕೆಲವು ಗಂಟೆ ಕ್ರಿಕೆಟ್ ನೋಡಿದೆ, ಸಿನಿಮಾ ಚಿತ್ರೀಕರಣ, ಹಾಡಿನ ರೆಕಾರ್ಡಿಂಗ್, ನ್ಯೂಸ್ ಚಾನೆಲ್ ಚಿತ್ರೀಕರಣ ಇವೆಲ್ಲ ನೋಡಿದೆ. ಎಲ್ಲಿ ಎಲ್ಲಿ, “ನೋ ಅಡ್ಮಿಶನ್ ವಿದೌಟ್ ಪರ್ಮಿಷನ್” ಇದೆಯೂ ಅಲ್ಲಿ ಎಲ್ಲ ಕಡೆ ಹೊಕ್ಕು,ಹಾಯ್ದು ಬಂದೆ. ಮನುಷ್ಯನ ಸಹಜ ಸ್ವಭಾವ ಗೊತ್ತಲ್ಲ…ಯಾವ್ದು ಬೇಡ ಅಂತಾರೆ ಅದನ್ನು ಮಾಡಿ ನೋಡುವ ತವಕ. ದುಬೈಗೆ ಹೋಗಿ ಬರಲಾ ಎಂದು ಯೋಚಿಸಿದೆ, ಸಮಯದ ಅಭಾವ ನನ್ನನ್ನು ತಡೆಯಿತು. ಚಿನ್ನದ ಅಂಗಡಿಗೆ ಹೋಗಿ ನನ್ನ ಇಷ್ಟದ ಒಡವೆ ಧರಿಸಲೇ ಎಂದು ಆಸೆ ಆದರೂ ನಾ ಹಾಕಿದ ಒಡವೆ ಯಾರು ನೋಡಿಯಾರು ಎಂದು ನನ್ನ ಅವಸ್ಥೆಗೆ ಅಸಮಾಧಾನವಾಯಿತು.
ಗೋಡೆಯ ಮೇಲಿದ್ದ ಗಡಿಯಾರ ನನ್ನ ಸಮಯ ಮುಗಿಯಲು ಬರಿ ಹದಿನೈದು ನಿಮಿಷ ಬಾಕಿ ಅಂತ ತೋರಿಸುತ್ತಿತ್ತು. ಅಬ್ಬಾ ಇನ್ನ ಮನೆಗೆ ಹೋಗಬೇಕು , ಅಂತ ಮನಸ್ಸು ತವಕಿಸಿತು. ನನ್ನವರು ನನ್ನ ನೋಡಬೇಕು ಎನಿಸಿತು. ನನ್ನ ಅಸ್ತಿತ್ವ ಕೊಡುವ ಸಂತೋಷ ಈ ಅದೃಶ್ಯ ರೂಪ ಕೊಡದು ಎಂದು ಖೇದವೆನಿಸಿತು. ಯಾರ ಕೆಟ್ಟ ದೃಷ್ಟಿ, ಕಾಕದೃಷ್ಟಿ, ಕಾಮುಕ ದೃಷ್ಟಿ ತಾಗದೆ, ಮುಖ ನೋಡಿ ವ್ಯಕ್ತಿತ್ವ ಅಳೆಯುವ ಜನರ ಮಾತಿಗೆ ಆಹಾರವಾಗದೆ, ಉಡುಗೆ, ಶರೀರದ ಆಕಾರ, ತೂಕ, ಬಣ್ಣದ ಬಗ್ಗೆ ಯಾವುದೇ ಕುಹಕ, ಅಪಹಾಸ್ಯದ ಮಾತು ಕೇಳದೆ ಆರಾಮವಾಗಿ ‘ಅಪನೇ ಮರ್ಜಿ ಕೀ ಮಾಲೀಕ ‘, ಆಗಿ ಸುತ್ತಾಡಲು ಅವಕಾಶ ಸಿಕ್ಕಿತಲ್ಲ ಎಂದು ಸಂತೋಷವೂ ಆಯಿತು. ಆದರೂ ಚಂಚಲ ಮನ ಮತ್ತೆ ನಿಜರೂಪ ಬೇಡಿತು.
ಮನೆಯಲ್ಲಿ ಎಂಜಿಲ್ ನನಗಾಗಿ ಕಾಯುತ್ತ ಶತಪಥ ಹಾಕುತಿದ್ದಳು, ಮಂತ್ರ ದಂಡ ಪ್ರಯೋಗಿಸಿ ನನ್ನ ದೇಹ ನನಗಿತ್ತಳು. ನನಗೆ ನನ್ನ ದೇಹ, ನನ್ನ ಸೀರೆ ಒಡವೆ, ನಮ್ಮವರ ಬಗ್ಗೆ ಪ್ರೀತಿಯ ಪಾಠ ಹೇಳಿಕೊಟ್ಟಳು. ಥ್ಯಾಂಕ್ಸ್ ಇನ್ನೇನು ಬರಬ್ಯಾಡ್ರಿ, ಎಂದು ಹೊಸ ವಾರ್ಡರೋಬ ಅಲ್ಲಿ ಮಾಯವಾದ ಎಂಜಿಲನನ್ನು ಬಂಧಿಸಿ, ಬಾಗಿಲು ಹಾಕಿ ಬೀಗ ಜಡದೆ.
ಅಷ್ಟ್ರಲ್ಲಿ ಡೋರ್ ಬೆಲ್ಲ ರಿಂಗಣಿಸಿತು, ಓಡಿ ಬಾಗಿಲು ತೆರೆದೆ, ನನ್ನ ನೋಡಿಯೂ ನೋಡದ ಹಾಗೆ ಪತಿ ನಡೆದರು, “ಹೆಂಗಾತು ಮದುವಿ” ಅಂತ ಕೇಳಿದ್ರೂ ಉತ್ತರಿಸದೆ ಒಳ ನಡೆದರು, ಅಯ್ಯೋ ನನ್ನ ನಿಜ ರೂಪ ಬಂದಿದೆಯ ಇಲ್ವೋ ಎಂದು ಸಂಶಯ ಒಳಗೊಳಗ ಕಾಡಿತು. "ಅವನ ಮಾತಾಡಸಬ್ಯಾಡ ಸಿಟ್ಟು ಬಂದದ, ಅವನ್ನ ಯಾರೂ ಮಾತಾಡಸ್ಲಿಲ್ಲ ಅಂತ, ಮಾತಾಡಿಸಿದವರೂ ನಿಮ್ಮ ಹೆಂಡತಿ ಯಾಕ ಬರಲಿಲ್ಲ ಅಂತ ಕೇಳಿದ್ರಂತ. ಮಂದಿನೂ ವಿಚಿತ್ರ ಕಣ್ಣು ಮುಂದೆ ಕಾಣಿಸುವವರನ್ನ ಬಿಟ್ಟು ಕಾಣದವರ ನೋಡಬೇಕಂತಾರ ಎನ್ನುತ್ತಾ ಒಳ ನಡೆದರು. ಅಬ್ಬಾ ಅಂತೂ ಅತ್ತೆ ಕಣ್ಣಿಗೆ ನಾ ಕಂಡೆ ಎಂದು ಸಂತೋಷಪಟ್ಟೆ. ಪತಿಯನ್ನು ರಮಿಸಲು ಕಡಕ್ಕ ಚಹಾ ಮಾಡಲು ಅಡುಗೆ ಮನೆಗೆ ಹೊಕ್ಕೆ. ಈ ಅಡುಗೆ-ತಿಂಡಿ-ಚಹಾ ತನ್ನ ತಾನೇ ತಯಾರ ಆಗೋ ಪ್ಯಾಕೇಜ ಇದೆಯಾ ಅಂತ ಎಂಜಿಲ್ಲನ್ನ ಕೇಳಿ ನೋಡಬೇಕು ಎಂದು ಗೊಣಗಿದೆ.
ಮೃಣಾಲಿನಿ ❤️❤️
English,Kannada Blogger
0 Followers
0 Following