ಮುಂಜಾನೆ ನಾನೆದ್ದು ಯಾರ್ಯಾರಾ ನೆನೆಯಾಲೀ ?

ProfileImg
21 Feb '24
4 min read


image

ಮುಂಜಾನೆ ನಾನೆದ್ದು ಯಾರ್ಯಾರಾ ನೆನೆಯಾಲೀ ?

ಎಷ್ಟೊಂದು ಅರ್ಥ ಪೂರ್ಣವಾದ ಹಾಡು . ನಮ್ಮ ನೆಲದ ಗುಣವೇ ಹಾಗಲ್ಲವೇ ? ನೆಲ-ಜಲ, ಮಣ್ಣು , ಜಾನುವಾರುಗಳು ಎಲ್ಲವನ್ನೂ ಪೂಜಿಸುತ್ತೇವೆ. ಅವುಗಳೊಡನೆ ಏನೋ ಭಾವನಾತ್ಮಕ ಬೆಸುಗೆ.
ನಮ್ಮದು ಎನ್ನುವ ಒಂದು ಬೆಚ್ಚಗಿನ ಅನುಭೂತಿ . ಈ ಹಾಡಿನಲ್ಲಿರುವುದೂ ಅದೇ... ಎಲ್ಲವೂ ಬದುಕಿಗೆ ಮುಖ್ಯವಾಗಿರುವಾಗ ಯಾವುದಕ್ಕೇ ಮೊದಲು ನಮಸ್ಕರಿಸಲಿ ಎಂದು . ಭಾವನೆಗೆ ಬಹು ಬೆಲೆಯಲ್ಲವೇ ? ಹಿಂದಿನ ಕಾಲದಲ್ಲಿ ಕೋಳಿ ಕೂಗುವ ಮೊದಲೇ ತಂಗಾಳಿಯೊಂದಿಗೆ ತೇಲಿ ಬರುವ ಹಾಡು ಅದು . ಬಹು಼ಷಃ ಬೆಳಗಿನ ಸುಪ್ರಭಾತವೆಂದೇ ಹೇಳಬಹುದೇನೋ.. ಹೆಂಗಸರು ಕೆದರಿದ ಕೂದಲ ಸರಿಪಡಿಸಿ ದೇವರಿಗೊಂದು ದೀಪ ಇಟ್ಟು ಬಾಗಿಲಿಗೆ ನೀರು ಹಾಕಿ , ರಂಗೋಲಿ ಇಟ್ಟು  ಒಲೆ ಹಚ್ಚಿದರೆ  ಹಂಡೆಯ ಬಿಸಿನೀರು ಕೊತ ಕೊತ ಕುದ್ದು ,ಕಾಫಿಯ ಘಮ ಹೊಗೆಯಾಡಲಾರಂಭಿಸುತ್ತದೆ .

ಗಂಡಸರು ಒಲೆಯ ಬುಡದಲ್ಲಿ ಕೂತು ಕಾಫಿ ಹೀರಿ ನಂತರ ಜಾನುವಾರುಗಳಿಗೆ ಹುಲ್ಲು ಹಾಕಿ, ಕಂಬಳಿ ಹೆಗಲಿಗೇರಿಸಿ ಕುಡುಗೋಲು ಹಿಡಿದು ಹೊಲದ ಕಡೆಗೆ ಮುಖ ಮಾಡುತ್ತಾರೆ. ಬೆಳಗಿನ ಜೋಗುಳ ಕೇಳುತ್ತಾ ಚಿಕ್ಕ ಮಕ್ಕಳು ಮಗ್ಗುಲಾಗಿ ಮತ್ತೆ ನಿದ್ದೆ ಹೋದರೆ ದೊಡ್ಡವರಿಗೊಂದು  ಸ್ಪೂರ್ತಿ ಗೀತೆಯದು . ತುಂಬು ಕುಟುಂಬದಲಿ ಅಡುಗೆ ತಾಸಿನ ಕೆಲಸವಲ್ಲ, ಅರ್ದ ದಿನವದೇ ಕೆಲಸವಾದರೂ ತಪ್ಪೇ ನಿಲ್ಲ. ಎಲ್ಲರ ಜೊತೆ ಹರಟುತ್ತಾ ಒಂದು ಕೆಲಸದಲ್ಲಿ ತೊಡಗಿದರೆ ಕೆಲಸದ ಆಯಾಸ ತಿಳಿಯುವುದೇ ಇಲ್ಲ. ಒಬ್ಬರು ಮಲ್ಲಿಗೆಯ ದಂಡೆ ಮಾಡಿದರೆ  ಉಳಿದವರಿಗೂ ಹಂಚಿ ಮುಡಿಯವಷ್ಟು ಹೊಂದಾಣಿಕೆಯ ಜೀವನ . ಒಂದು ಮಗು ಬೆಳಿಗ್ಗೆ ಒಬ್ಬರ ಹತ್ತಿರ ಊಟ ಮಾಡಿಸಿಕೊಂಡರೆ ರಾತ್ರಿ ಊಟ ಬೇರೊಬ್ಬರ ಹತ್ತಿರ. ಅವಿಭಕ್ತ ಕುಟುಂಬದಲ್ಲಿ ಸಹಕಾರ   ಮನೋಭಾವನೆ  ಹೆಚ್ಚು . ಈಗಿನಂತೆ ಎಲ್ಲವೂ ನನ್ನದು ಎನ್ನುವ ಮನೋಭಾವವಿರಲಿಲ್ಲ. ಹಂಚಿ ತಿಂದಷ್ಟೂ ಸಂತೋಷ ಹೆಚ್ಚು ಎಂಬ ನಂಬಿಕೆ. ಈಗಿನವರಂತೆ ನನ್ನ ಮನೆ , ನನ್ನ ಸೈಟು , ನನ್ನ ಕಾರು  ಅವುಗಳ ಪರಿಕಲ್ಪನೆಯೇ ಇಲ್ಲದ ದಿನಗಳು .ನಮ್ಮ ಮನೆ-ನಮ್ಮವರು ಇಷ್ಟೇ  ಎಲ್ಲರಲ್ಲಿರುವ   ಭಾವನೆ. ತಮ್ಮ ಒಡವೆಯನ್ನೆ ಬೇರೆಯವರಿಗೂ ಹಾಕಿ ಖುಷಿ ಪಡುವ ಮಂದಿ. ಈಗಿನ ದಿನಗಳಲ್ಲಿ ಪಕ್ಕದ ಮನೆಯವರೆಂದರೆ ಜಾನುವಾರುಗಳ ನೋಡುವಂತೆ ಕೆಕ್ಕರಿಸಿ ನೋಡುವುದುಂಟು .ಕಾಂಕ್ರೀಟ್ ಮನೆಗಳಲ್ಲಿ ಕಾಂಕ್ರೀಟ್ ಮನಸ್ಸುಗಳು .ಯಾವುದೇ ಭಾವವಿಲ್ಲದ  ಮರಳುಗಾಡಿನ  ಅಸಂತುಷ್ಟ  ಮರದಂತೆ ಅಲ್ಲಲ್ಲಿ ಅಪ್ಪ- ಅಮ್ಮ ನೊಂದಿಗೆ ಒಂದು ಮಗು . ಅದೂ ಜಾತಕಪಕ್ಷಿ. ಅಪ್ಪ - ಅಮ್ಮನ ಮುಖ ನೋಡದೆ ಅದೆಷ್ಟೋ ದಿನ ದಾಟಿ ಬಿಟ್ಟಿರುತ್ತದೆ. ಎಲ್ಲವಿದ್ದರೂ  ಏನೂ ಇಲ್ಲದ ಜೀವನ , ಕಾಡುವ ಒಂಟಿತನ , ಅಭದ್ರತೆ, ಅಸ್ವಸ್ಥ ಮನಸ್ಸು . ಸಾರ್ವಜನಿಕವಾಗಿ ಬೆರೆಯವಲ್ಲಿ ಏನೋ ಮುಜುಗರ, ಯಾವಾಗಲೂ ಗೆಲ್ಲಬೇಕು . ಇಲ್ಲದಿದ್ದರೆ ಎಲ್ಲವೂ ಮುಗಿಯಿತೆಂಬ ಭಾವನೆ. ಯಾವುದು ತಪ್ಪು ಯಾವುದು ಸರಿ ಎಂದು ಅರ್ಥ ಮಾಡಿಸಲು ಹಿರಿ ತಲೆಗಳಿಲ್ಲ. ಹಿರಿಯರೊಂದಿಗೆ ಬೆರೆತಷ್ಟೂ ಮನಸ್ಸು ಹದಗೊಳ್ಳುತ್ತದೆ. ಪಕ್ವವಾಗುತ್ತದೆ. ಬದುಕಿನ ಏರಿಳಿತವನ್ನು ನಿಭಾಯಿಸುವ ಕಲೆ ಕರಗತವಾಗುತ್ತದೆ. ಏನು ಮಾಡಬೇಕು ? ಏನು ಮಾಡಬಾರದು? ಎಲ್ಲರೊದಿಗೆ ಹೇಗಿರಬೇಕು . ಯಾವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು . ಹೀಗೆ ಎಲ್ಲವನ್ನೂ ಒಂದೊಂದಾಗಿ ಅರಿಯಲು ಸಾದ್ಯವಾಗುತ್ತದೆ.  ಈಗಂತೂ ಎಲ್ಲದಕ್ಕೂ ಮೊಬೈಲ್ ಮೊರೆ ಹೋಗುವ ಕಾಲ.ಅದರಲ್ಲಿ ನಿಜವೆಷ್ಟೋ ಸುಳ್ಳೆಷ್ಟೋ ? ಅಂಟಿಕೊಂಡಂತಹಾ ಜೀವನ . ದಿನದ ಮುಕ್ಕಾಲುಭಾಗ ಮೊಬೈಲ್ಜೊತೆಯಲ್ಲಿ . ಅದರಿಂದ ನಾನೇನೂ ಹೊರತಾಗಿಲ್ಲ. ಕಾಲದೊಂದಿಗೆ ಹೊಂದಾಣಿಕೆಯಾಗಬೇಕಲ್ಲಾ .

ಬೆಳಗಿನ ಜಾವ ಎದ್ದು ಸೂರ್ಯ ರಶ್ಮಿಗಾಗಿ ಹೊಂಬಣ್ಣದ ಕರ್ಟನ್ ಸರಿಸಿದೆ. ತಂಗಾಳಿಯು ಸುಂಯ್ಯೆಂದು ಮೈಸೋಕಿ ಹೋಯ್ತು .ಮರಗಿಡಗಳು ಇಬ್ಬನಿಗೆ ತೋಯ್ದಿದ್ದವು .ಮಣ್ಣಿನ ವಾಸನೆ ಘಮ್ಮೆಂದು ಮೂಗಿಗೆ ಬಡಿಯುತ್ತಿತ್ತು . ಹೊಂಬಿಸಿಲು ಹದವಾಗಿ ಹರಡಿತ್ತು.  ಆಹ್ಲಾದಕರ  ವಾತಾವರಣ. ಭಾನುವಾರದ ತಿಂಡಿಯ ಗೋಜಿರಲಿಲ್ಲ. ಸ್ವಿಗ್ಗಿಯಲ್ಲಿ ಹಬ್ಬ ಮಾಡುವ ದಿನವದು . ಎಲ್ಲರೂ ನಿದ್ರಾ ದೇವಿಯ ತೆಕ್ಕೆಯಲ್ಲಿದ್ದರೆ ನನಗೆ ಅಂದೇ ಇನ್ನೂ ಬೇಗನೆ ಎಚ್ಚರವಾಗಿಬಿಟ್ಟು ಎಲ್ಲರು ಏಳುವವರೆಗೂ  ಮರಿ ಹಾಕಿದ ಬೆಕ್ಕಿನಂತೆ ಅಚೀಚೆ ಸುತ್ತು ಹಾಕುತ್ತೇನೆ. ಕೆಲಸಗಳು ಇಲ್ಲವೆಂದಲ್ಲ. ಆ ದಿನವಾದರೂ ಹಾಯಾಗಿರೋಣವೆಂದಷ್ಟೇ . ವಾಕಿಂಗ್,ಟಿವಿ, ದಿನಸಿ ಗೋಜು ದಿನಾ ಇದ್ದದ್ದೇ . ಏನೇ ಆಗಲೀ ಈ ಕಾಫಿ ಕುಡಿಯುವುದಿದೆಯಲ್ಲಾ ಅದರಷ್ಟು ಖುಷಿಯ ಸಂಗತಿ ಬೇರಿಲ್ಲ ನೋಡಿ..

ಅದು ದಿನಾ ಹೊಸತು , ಎಷ್ಟು ಸಲ ಕುಡಿದರೂ ಮತ್ತಷ್ಟು ಕುಡಿಯಬೇಕೆನ್ನುವ ಮನಸ್ತಿತಿ . ಹತ್ತು ಹಲವು ಯೋಚನೆಗಳಲ್ಲಿ ಸದಾ ಮುಳುಗೇಳುವ ನಮಗೆ ಕಾಫಿಯೊಂದು ಧ್ಯಾನಸ್ಥ ಮನಃಸ್ಥಿತಿ .ಅದರಲ್ಲಿಯೇ ಮನ ತಲ್ಲೀನಗೊಳ್ಳುವಂತೆ  ಅದೇನು ಮೋಡಿ ಮಾಡಿದೆಯೋ ? ತುಟಿಗಂಟಿದ ಕಾಫಿಯ ಹನಿಗಳನ್ನು ನಾಲಿಗೆಯಲ್ಲಿ ಸವರಿ ಮೊಬೈಲ್ ಎತ್ತಿಕೊಂಡೆ.ಹನಿಗಳನ್ನು ಬಿಡುವುದಿಲ್ಲವೆಂದು ಕೊಳ್ಳಬೇಡಿ. ಕಣಕಣವೂ ಅಮೃತವದು . ಅದರ ಅನುಭವವಾಗಬೇಕೆಂದರೆ ಮಲೆನಾಡಿಗೆ ಬರಬೇಕು . ಚಳಿಯಲ್ಲಿ ಕಾಫಿ ಹೀರಬೇಕು.

ದೂರದ ಗೆಳತಿಗೊಂದು ಶುಭದಿನದ ಸಂದೇಶ ಕಳಿಸಿದೆ..ಬದುಕೇ ಬರಡಾಗಿದೆ ಇನ್ಯಾವ ಸುಂದರ ಮುಂಜಾವು ? ಆ ಕಡೆಯಿಂದ ಬಂದ ಸಂದೇಶ ನೋಡಿ ಕುಡಿದ ಕಾಫಿಯೆಲ್ಲಾ ನೆತ್ತಿ ಸೇರಿದಂತಾಯಿತು . ಯಾಕೆ ಅಂತದ್ದೇ ನಾಯಿತು ? ಎಂದೆ. ಗಂಡನಿಗೆ ನನ್ನ ಮೇಲೆ ಅನುಮಾನ. ದುಡಿಯದಿದ್ದರೆ ಒಬ್ಬರ ಸಂಬಳ ಸಾಲುವುದಿಲ್ಲ. ದುಡಿಯಲು ಹೋದರೆ ಮಕ್ಕಳ ನೋಡುವವರಾರು ? ಮನೆಯ ಒಳಗೂ - ಹೊರಗೂ ದುಡಿಯಲು ಇತ್ತೀಚಿಗೆ ಆರೋಗ್ಯವೂ ಸ್ಪಂದಿಸುತ್ತಿಲ್ಲ. ಒಂದು ನಿಮಿಷವೂ ನನಗಾಗಿ ಸಮಯ ಸಿಗುತ್ತಿಲ್ಲ. ದುಡಿದರೂ ಅವಮಾನ ತಪ್ಪುತ್ತಿಲ್ಲ. ಗಂಡನ ಕುಡಿತದ ಚಟ . ಸಾಲದವರ ಕಾಟ. ಬದುಕು ಮೂರಾ ಬಟ್ಟೆಯಾ ಗಿದೆ. ನಿದ್ದೆಯಿಲ್ಲದ ರಾತ್ರಿಗಳು ಅದೆಷ್ಟು ಕಳೆದಿವೆಯೋ ? ಎಲ್ಲರ ಹಾಗೆ ಸಿನಿಮಾಕ್ಕೆ , ಪಾರ್ಟಿಗೆ ಮೇಕಪ್ ಗೆ ಖರ್ಚು ಮಾಡುವವಳಲ್ಲ ನಾನು . ಹೇಗೆಗೋ ಬದುಕುವವರ ಜೀ ವನ ಸುಂದರವಾ ಗಿದೆ. ನಿಯತ್ತಿಗೆ ಈ ದಿನಗಳಲ್ಲಿ ಬೆಲೆಯೇ ಇಲ್ಲವೇನೋ ? ಅಡುಗೆ ಮನೆಯ ನಾಲ್ಕು ಗೋಡೆಗಳ ಮದ್ಯೆ ಜೀವನ ಕಳೆಯುತ್ತಿದೆ. ನನ್ನ ಕನಸು - ಭಾವನೆಗಳು ಕಾಲದೊಂದಿಗೆ ಹೂತು ಹೋಗುತ್ತಿವೆ. ಎಲ್ಲರೂ ವೀಕೆಂಡ್ನಲ್ಲಿ ಹೆಂಡತಿ ಮಕ್ಕಳ ಜೊತೆ ಸುತ್ತುತ್ತಿದ್ದರೆ ನಾನು ಮಾತ್ರ ಮನೆಯ ಮೂಲೆಯ ಬಲೆ ತೆಗೆಯುತ್ತಿರುತ್ತೇನೆ. ವಾಸ್ತವದೊಂದಿಗೆ ಕೈ ಜೋಡಿಸಬೇಕಾ ? ಕನಸು ಗಳಿಗಾಗಿ ಬದುಕಬೇಕಾ ? ಹೇಳೆ ಗೆಳತಿ ಎಂದಾಗ ಅಸ್ಪಷ್ಟ ಬದುಕಿನ ಚಿತ್ರಣವೊಂದು ಹಾದು ಹೋದಂತಾಯ್ತು.  ನಿಯತ್ತಿಗೆ ಬಹುಷಃ ಬೆಲೆಯಿಲ್ಲವೇನೋ. ಅನುಮಾನದ ಮತ್ತು  ಅಗೌರವ ತೋರಿಸುವ ಜನರ ನಡುವೆ ಹೊಂದಾಣಿಕೆಯ ಜೀವನ  ಸಾದ್ಯವೇ . ಉಸಿರು ಗಟ್ಟಿಸಿದಂತಾಗುವುದಿಲ್ಲವೇ?  ಹಸನಾಗಿದ್ದರಷ್ಟೇ ಬದುಕು. ಇಲ್ಲವೆಂದರೆ  ದಿಕ್ಕೆಟ್ಟ ದಿಕ್ಸೂಚಿಯಿಲ್ಲದ ಹಡಗು. ಆ ಕ್ಷಣಕ್ಕೆ ಬೀಸುವ ಗಾಳಿ ಚುಚ್ಚಿದಂತಾಯಿತು . ಮಣ್ಣಿನ ವಾಸನೆ ಗಬ್ಬುನಾರತೊಡಗಿತು . ಸೂರ್ಯನು ಯಾಕೋ ಮೋಡದ ಮರೆಯಲ್ಲೇ ಇಣುಕುತ್ತಿದ್ದ. ಹಸಿದ ಕಾಗೆಯೊಂದು ಮಾಂಸವನ್ನು ಕುಕ್ಕಿ ಕುಕ್ಕಿ ತಿನ್ನುತ್ತಿತ್ತು . ಬದುಕು ಅಸಹ್ಯವೆನಿಸತೊಡಗಿತು .

Escaping reality Painting by Samar Mouawad | Saatchi Art

 

 

 

 

 

 

Category:World



ProfileImg

Written by Soumya Jambe