Do you have a passion for writing?Join Ayra as a Writertoday and start earning.

ನನಗೀಗ 30

ಮದುವೆ ಎಂಬ ವ್ಯಾಪಾರ

ProfileImg
03 Jan '24
6 min read


image

“ಕುಜದೋಷ ಇದೆಯಾ? ಸರಿಯಾಗಿ ನೋಡಿ ಹೇಳಿ ಶಾಸ್ತ್ರಿಗಳೇ”

“ನಾನು ಹೇಳ್ತಾ ಇಲ್ಲಮ್ಮ ಈ ಮಾತನ್ನು, ನಿಮ್ಮ ಮಗಳ ಜಾತಕಾನೆ  ಹೇಳ್ತಾ ಇದೆ. ಇದಕ್ಕೆಲ್ಲ ಭಯ ಪಡುವ ಅವಶ್ಯಕತೆ ಇಲ್ಲ. ನಾನು ಕೆಲವು ಪೂಜೆ ಹೇಳ್ತಿನಿ, ಅದನ್ನೆಲ್ಲ ನಿಮ್ಮ ಮಗಳ ಕೈಯಿಂದ ಮಾಡಿಸಿ. ಒಂದು ತಿಂಗಳಲ್ಲೇ ಮದುವೆ ಕೂಡಿ ಬರತ್ತೆ”

“ಆಯ್ತು ಶಾಸ್ತ್ರಿಗಳೇ. ಏನೇನು ಪೂಜೆ ಮಾಡಬೇಕು, ಅದಕ್ಕೆ ಬೇಕಾಗೋ ಸಾಮಗ್ರಿ ಎಲ್ಲ ಒಂದು ಚೀಟಿ ಬರೆದು ಕೊಟ್ಟರೆ ನಾವೆಲ್ಲ ತಯಾರಿ ಮಾಡ್ತಿವಿ”

“ನೋಡಿ ಅಮ್ಮ, ಒಂದು ಕುಂಭ ವಿವಾಹ ಮಾಡಿಸಿ, ಜೊತೆಗೆ ನವಗ್ರಹ ಶಾಂತಿ, ಸರ್ಪ ಸಂಸ್ಕಾರ ಹಾಗೇನೇ ಒಂದು ಹೋಮ ಇಟ್ಟುಕೊಂಡು ಬಿಡಿ. ನಿಮ್ಮೆಲ್ಲ ಆಸೆಗಳು ನೆರವೆರತ್ತೆ”

“ಸರಿ ಶಾಸ್ತ್ರಿಗಳೇ. ಯಾವ ದಿನಾಂಕ ಅನ್ನೋದನ್ನ ಹೇಳಿದರೆ ನಮ್ಮ ಮಗಳಿಗೆ ರಜೆ ಹಾಕೋಕೆ ಹೇಳ್ತೀವಿ”

“ಈ ತಿಂಗಳು 28 ನೆ ತಾರೀಖು ಒಳ್ಳೆಯ ದಿನ ಇದೆ. ಶ್ರಾವಣ ಮಾಸದ ಕೊನೆಯ ಮಂಗಳವಾರ. ಎಲ್ಲದೂ ಶುಭವಾಗತ್ತೆ”

 

“ಆಯ್ತು ಶಾಸ್ತ್ರಿಗಳೇ, ನಾವಿನ್ನು ಬರ್ತೀವಿ. ನೀವೇ ಖುದ್ದಾಗಿ ಬಂದು ಪೂಜೆ ಮಾಡಬೇಕು”

“ಖಂಡಿತ ಖಂಡಿತ, ಹೋಗಿ ಬನ್ನ"

*****

ಪೂಜೆ ಎಲ್ಲ ಸುಸೂತ್ರವಾಗಿ ನಡೆಯಿತು, ನೀವಿನ್ನು ಯೋಚನೆ ಮಾಡೋ ಅಗತ್ಯ ಇಲ್ಲ. ನಿಮ್ಮ ಮಗಳಿಗೆ ತಕ್ಕ ವರ ಸಿಗ್ತಾನೆ. "ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು" ಮಗಳೇ ಎಂದು ಆಶೀರ್ವಾದ ಮಾಡಿದರು ಶಾಸ್ತ್ರಿಗಳು.

*****

 

“ಲಹರಿ ರೆಡಿ ಆಗೋದು ಮುಗಿದಿಲ್ವಾ? ಗಂಡಿನ ಕಡೆಯವರು ಬರೋ ಹೊತ್ತಾಯ್ತು”

“ಆಯ್ತಮ್ಮ ಕಿರುಚಬೇಡ, ಬಂದೆ”

“ನೋಡು ಅವರು ಕೇಳಿದಕ್ಕೆ ಸರಿಯಾಗಿ ಉತ್ತರ ಕೊಡು, ನಮ್ಮ ಮುಂದೆ ಮಾಡಿದ ಹಾಗೆ ಮೊಂಡುತನ ಮಾಡಬೇಡ”

“ಸರಿ ಸರಿ ನಿನ್ನ ಪುರಾಣ ನಿಲ್ಲಿಸಿದ್ರೆ ನಾನು ಸ್ವಲ್ಪ ಜ್ಯೂಸ್ ಕುಡಿತಿನಿ, ಹೊಟ್ಟೆ ತಾಳ ಹಾಕ್ತಿದೆ”

ಅವರಮ್ಮ ಇನ್ನೇನೋ ಹೇಳುವಷ್ಟರಲ್ಲಿ ಹೊರಗೆ ಕಾರು ಬಂದು ನಿಂತ ಶಬ್ದವಾಗಿ ಹೊರಗೋಡಿದರು.

ಲಹರಿ ಜ್ಯೂಸ್ ಕುಡಿದು ಮತ್ತೆ ಕನ್ನಡಿ ಮುಂದೆ ನಿಂತಳು. 

ಮನದಲ್ಲಿ ಹೇಳಲಾಗದ ಆತಂಕ. ಇದೇನು ಮೊದಲ ಬಾರಿಯಲ್ಲ ಗಂಡು ಬರುತ್ತಿರುವುದು ಆದರೂ ಪ್ರತಿ ಬಾರಿ ಏನೋ ಭಯ. ಹೊಸ ಹೊಸ ಆಸೆಗಳು ಅವಳ ಮನದಲ್ಲಿ ಗರಿಗೆದರುತ್ತಿದ್ದವು ಆದರೆ ಅಷ್ಟೇ ಬೇಗ ಗರಿ ಉದುರಿ ಮತ್ತದೇ ನಿರಾಸೆ ಆವರಿಸುತ್ತಿತ್ತು.

"ಬನ್ನಿ ಬನ್ನಿ ಕುಳಿತುಕೊಳ್ಳಿ. ಪ್ರಯಾಣ ಎಲ್ಲ ಸುಖಕರವಾಗಿತ್ತೆ? ಮನೆ ಹುಡುಕೋದು ಕಷ್ಟ ಆಗಲಿಲ್ಲ ತಾನೇ?" ಪ್ರಶ್ನಿಸುತ್ತಿದ್ದರು ಲಹರಿಯ ಅಪ್ಪ.

"ಸಿಟಿಯಲ್ಲಿ ಮನೆ ಹುಡುಕೋದು ಸುಲಭವೇ" ಎಂದರು ಯಾರೋ ಹುಡುಗನ ಕಡೆಯವರು. ಲಹರಿಗೆ ಯಾಕೋ ಆ ಮಾತಿನಲ್ಲಿ ಕೊಂಕು ಕಾಣಿಸಿ, ಮನ ಮುದುಡಿತು. ಅಷ್ಟರಲ್ಲೇ ಅಮ್ಮನ ಧ್ವನಿಗೆ ಅಡುಗೆ ಮನೆ ಹೊಕ್ಕಳು. 

ಬಿಸಿ ಬಿಸಿ ಉಪ್ಪಿಟ್ಟು, ಮೇಲೊಂದಿಷ್ಟು ಚೌ ಚೌ, ಪಕ್ಕದಲ್ಲೆ ತುಪ್ಪದಲ್ಲಿ ಮಾಡಿದ್ದ ಮೈಸೂರ್ ಪಾಕ್ ಇಟ್ಟಿದ್ದ ತಟ್ಟೆ ಹಿಡಿದು ಹೊರ ಬಂದಳು. ಚಂದನದ ಗೊಂಬೆಯಂತಿದ್ದ ಲಹರಿಯನ್ನ ನೋಡಿದ ಕ್ಷಣವೇ ಹುಡುಗನ ಕಣ್ಗಳು ಅರಳಿದವು.

ತಿಂಡಿ, ಚಹಾ ಸೇವನೆಯ ನಂತರ ಷೋ ಕೇಸಿನ ಗೊಂಬೆಯಂತೆ ಅವರ ಮುಂದೆ ಕುಳಿತಿದ್ದಳು ಲಹರಿ. ಕಣ್ಣೆತ್ತಿ ಹುಡುಗನನ್ನ ನೋಡಲು ನಾಚಿಕೆ. ಎಲ್ಲ ಪ್ರಶ್ನೆಗಳಿಗೂ ತಲೆ ತಗ್ಗಿಸಿಯೇ ಉತ್ತರಿಸಿದಳು. ವಧು ಪರೀಕ್ಷೆ ಮುಗಿಸಿ ಮತ್ತೆ ಗೊಂಬೆಯ ಹಾಗೆ ಕೋಣೆ ಸೇರಿ, ಅವರ ಮಾತುಗಳಿಗೆ ಕಿವಿಯಾದಳು.

"ನೋಡಿ ರಾಯರೆ, ನಮಗಂತೂ ಹುಡುಗಿ ಒಪ್ಪಿಗೆಯಾಗಿದಾಳೆ. ಇವತ್ತಿನ ಅವಸರದ ಜೀವನದಲ್ಲಿ ಪದೇ ಪದೇ ಬರೋದು ಹೋಗೋದು ಕಷ್ಟ. ನಿಮಗೂ ಮನಸಿದ್ರೆ ಇವತ್ತೇ ಮಾತುಕತೆ ಮುಗಿಸಿಬಿಡೋಣ ಏನಂತೀರಾ?" ನಗುತ್ತಲೇ ಕೇಳಿದರು ಹುಡುಗನ ತಂದೆ. "ನಿಮ್ಮ ಮಗಳನ್ನು ಒಂದು ಮಾತು ಕೇಳಿಬಿಡಿ" ಮಾತು ಸೇರಿಸಿದರು.

ಅವರ ಮಾತಿಗೆ ಹೆಂಡತಿಯ ಮುಖ ನೋಡಿದ ರಾಯರು, "ಒಂದು ನಿಮಿಷ ಬರುತ್ತೇನೆ" ಎಂದು ಒಳ ಹೋದರು.

ಅಪ್ಪ ಅಮ್ಮನ ಒತ್ತಾಯಕ್ಕೆ ಅರೆಮನಸ್ಸಿನಿಂದಲೇ ಒಪ್ಪಿದಳು ಲಹರಿ. ಹೊರ ಬಂದ ರಾಯರು "ನಮ್ಮ ಕಡೆಯಿಂದಲೂ ಒಪ್ಪಿಗೆಯಿದೆ" ಎಂದರು.

ಆ ಮಾತಿಗೆ ಎಲ್ಲರ ಮುಖವರಳಿತು. "ಜಾತಕ ಅಂತೂ ಹೊಂದಾಣಿಕೆ ಆಗತ್ತೆ. ಇಬ್ಬರಿಗೂ ಒಳ್ಳೆಯ ಜೋಡಿ ಅಂತ ಹೇಳಿದಾರೆ. ಇನ್ನು ಕೊಡೋದು ತಗೊಳೋದು ಮಾತನಾಡಿದ್ರೆ ಅರ್ಧ ಕೆಲಸ ಮುಗಿದ ಹಾಗೆ ನೋಡಿ. ನಮಗಿರೋದು ಒಬ್ಬನೇ  ಮಗ, ಬೇಕಾದಷ್ಟು ಆಸ್ತಿ ಇದೆ. ಮದುವೆ ಆದಮೇಲೆ ನಿಮ್ಮ ಮಗಳು ಹೊರಗೆ ಹೋಗಿ ದುಡಿಯೋದು ಬೇಡ, ಮನೆಯಲ್ಲೇ ಕೆಲಸ ಮಾಡಿಕೊಂಡು ಆರಾಮಾಗಿ ಇರಬಹುದು" ಎಂದರು ಹುಡುಗನ ತಾಯಿ.

"ಅದಕ್ಕೇನಂತೆ, ನಮಗಿರೋದು ಒಬ್ಬಳೇ ಮಗಳು. ನಮ್ಮದೆಲ್ಲ ಅವಳದ್ದೆ. ವರೋಪಚಾರದ ಬಗ್ಗೆ ಚಿಂತೆ ಬೇಡ. ನಿಮ್ಮ ಅಂತಸ್ತಿಗೆ ತಕ್ಕ ಹಾಗೆ ಮಾಡ್ತಿವಿ" ನುಡಿದರು ರಾಯರು.

"ನಿಜ ನಿಜ ಆದರೆ ನೀವು ಇರುವವರೆಗೂ ಇದೆಲ್ಲ ನಿಮ್ಮದೇ ಅಲ್ವಾ, ಮಗಳಿಗೆ ಹೇಗೆ ಕೊಡೋಕೆ ಆಗತ್ತೆ? ಹಾಗೆನೆ ನಮ್ಮ ಬಂಧುಬಳಗದವರು ಹುಡುಗನಿಗೆ ಏನು ಕೊಟ್ಟರು ಅಂತ ಕೇಳಿದಾಗ ಮರ್ಯಾದೆ ಉಳಿಸಿಕೊಳ್ಳಬೇಕಲ್ವಾ" ಎನ್ನುತ್ತಾ ಹಲ್ಲು ಕಿರಿದರು.

ಇದನ್ನೆಲ್ಲ ಕೇಳುತ್ತಿದ್ದ ಲಹರಿ ತಡೆಯಲಾರದೆ ಕೋಣೆಯಿಂದ ಹೊರ ಬಂದವಳೆ "ಅಪ್ಪ ನನಗೆ ಈ ಸಂಬಂಧ ಇಷ್ಟ ಇಲ್ಲ. ನೋಡಿ ನಿಮ್ಮ ಮನೆಗೆ ಸೊಸೆ ಬೇಕಾ ಅಥವಾ ಕೆಲಸದವಳು ಬೇಕಾ? ಇಷ್ಟೆಲ್ಲಾ ಓದಿದ್ದು ಮನೇಲಿ ಕೂರೋದಕ್ಕೆ ಅಲ್ಲ. ಏನಂದ್ರಿ ನೀವು, ನಮ್ಮ ಅಪ್ಪ ಅಮ್ಮ ಇರೋವರೆಗೂ ಆಸ್ತಿ ನನಗೆ ಸಿಗಲ್ಲ ಅಂತಾನಾ ಅದರರ್ಥ ಮದುವೆ ಆದ ತಕ್ಷಣ ಎಲ್ಲ ಕೊಟ್ಟು ಬರಿಗೈ ದಾಸರಾಗಬೇಕಾ ಅವರು? ಥು ನಿಮ್ಮ ಜನ್ಮಕ್ಕೆ ಎದ್ದು ಹೋಗ್ರಿ ಸಾಕು" ಬುಸುಗುಡುತ್ತಲೇ ನುಡಿದಳು. ತಡೆಯಲು ಬಂದ ಅಪ್ಪ ಅಮ್ಮನನ್ನು ಕಣ್ಣಲ್ಲೇ ಸುಮ್ಮನಿರುವಂತೆ ಗದರಿದಳು.

ಅವಳ ಮಾತಿಗೆ ಅವಮಾನಿತರಾದ ಹುಡುಗನ ಮನೆಯವರು, "ವಯಸ್ಸು ಮೂವತ್ತಾದ್ರೂ ಯಾಕೆ ಮದುವೆ ಆಗಿಲ್ಲ ಅನ್ನೋದು ಅರ್ಥ ಆಯ್ತು ನಮಗೆ. ಇಂತವಳನ್ನ ಸೊಸೆ ಮಾಡಿಕೊಂಡ್ರೆ ಮೂರೇ ದಿನಕ್ಕೆ ಸಂಸಾರ ಎಕ್ಕುಟ್ ಹೋಗತ್ತೆ ಬನ್ರಿ, ಇಂತ ಸಂಬಂಧ ಯಾರಿಗೆ ಬೇಕಾಗಿದೆ" ಎನ್ನುತ್ತಾ ಹೊರನಡೆದರು.

ಲಹರಿಯ ತಾಯಿ ದುಃಖದಲ್ಲಿ ಮಗಳ ಕೆನ್ನೆಗೆ ಬಾರಿಸಿ "ಯಾಕೆ ನಮ್ಮ ಹೊಟ್ಟೆ ಉರಿಸ್ತಿಯ? ಇರೋಳು ಒಬ್ಬಳು ಅಂತ ಮುದ್ದು ಮಾಡಿದಕ್ಕೆ ಇದೇನಾ ನೀನು ನಮಗೆ ಕೊಡ್ತಾ ಇರೋ ಬಹುಮಾನ. ಎಲ್ಲರನ್ನೂ ಬೇಡ ಅಂದರೆ ಯಾರೇ ನಿನ್ನ ಮದುವೆ ಆಗ್ತಾರೆ? ಲಹರಿ ನಿನಗೆ ಆಗಲೇ ಮೂವತ್ತಾಯ್ತು ಕಣೆ, ಇನ್ಯಾವಾಗ ಮದುವೆ ಆಗ್ತೀಯಾ? ನಮಗೂ ಮೊಮ್ಮಕ್ಕಳನ್ನ ನೋಡೋ ಆಸೆ ಇರಲ್ವಾ? ಕೈ ಮುಗಿತಿವಿ ಕಣೆ ಇನ್ನು ಮುಂದೆ ಹೀಗೆಲ್ಲ ಮಾಡಬೇಡ" ಅಳುತ್ತಲೇ ನುಡಿದರು ಆಕೆ.

“ಅಮ್ಮ ನಿಮಗೆಲ್ಲ ಏನಾಗಿದೆ? ಅವರು ಹೇಳೋ ಮಾತು ಕೇಳಿಸಿಕೊಂಡ್ರಾ ಇಬ್ಬರೂ? ಮನೆ ಕೆಲಸಕ್ಕೆ ಒಬ್ಬಳು ಬೇಕು ಅಷ್ಟೇ ಅದೂ ಅಲ್ಲದೆ ನೀವಿಬ್ಬರೂ ಎಲ್ಲಾ ಅವರಿಗೆ ದಾನ ಮಾಡಿ ಭಿಕ್ಷೆ ಬೇಡಿ ಬದುಕಿ ಅನ್ನೋ ತರದಲ್ಲಿ ಮಾತನಾಡ್ತಾರೆ. ನನಗೆ ಅಂಥವರು ಬೇಡ ಅಷ್ಟೇ”

"ಹೆಣ್ಣು ಹೆತ್ತಿದೀವಿ ಅಂದಮೇಲೆ ಇದೆಲ್ಲ ಸಹಿಸಬೇಕು ಲಹರಿ. ಅವರು ಹೇಳೋದ್ರಲ್ಲಿ ತಪ್ಪೇನಿದೆ ಹೇಳು, ನಿನಗೂ ವಯಸ್ಸಾಗ್ತಾ ಬಂತು" ಸಮಾಧಾನಿಸಿದರು ರಾಯರು.

“ಅಪ್ಪ ಕಾಲ ಬದಲಾಗಿದೆ. ಮನಸ್ಥಿತಿ ಬದಲಾಯಿಸಿಕೊಳ್ಳಿ. ಗಂಡಿನ ಕಡೆಯವರು ಅಂದ ಮಾತ್ರಕ್ಕೆ ಅವರು ಹೇಳಿದ್ದಕ್ಕೆಲ್ಲ ತಲೆ ಆಡಿಸಬೇಕಾ. ಜಗತ್ತಲ್ಲಿ ಮದುವೆ ಆಗದೆ ಇರೋರು ಲಕ್ಷಾಂತರ ಮಂದಿ ಇದಾರೆ. ಅಷ್ಟಕ್ಕೂ ನನಗೆ ಮದುವೆ ಅವಶ್ಯಕತೆಯೇ ಇಲ್ಲ. ಕೈ ತುಂಬಾ ಸಂಬಳ ಇದೆ,ಮನೆ ಇದೆ, ನೀವಿಬ್ಬರೂ ಇದಿರಾ, ಫ್ರೆಂಡ್ಸ್ ಇದಾರೆ ಇಷ್ಟೇ ಸಾಕು. ನನಗಂತೂ ಸಾಕಾಗಿ ಹೋಗಿದೆ ಇದೆಲ್ಲಾ”

"ಸಮಾಜ ಒಪ್ಪಲ್ಲ ಲಹರಿ. ಹೆಣ್ಣಿಗೆ ಗಂಡಿನ ಆಸರೆ ಬೇಕೇ ಬೇಕು. ನೀನು ಯಾರನ್ನಾದ್ರೂ ಇಷ್ಟ ಪಟ್ಟಿದ್ರೆ ಹೇಳು ಅವರ ಜೊತೆಯೇ ಮದುವೆ ಮಾಡಿಸ್ತೀವಿ" ಕೊನೆಯ ಪ್ರಯತ್ನವೆಂಬಂತೆ ಕೇಳಿದರು ತಾಯಿ.

"ಅಯ್ಯೋ..... ಅಮ್ಮಾ ಒಂದು ವೇಳೆ ಲವ್ ಮಾಡಿದ್ರೆ ನಾನೇ ನಿಮ್ಮ ಮುಂದೆ ಬಂದು ಹೇಳ್ತಾ ಇದ್ದೆ. ನನಗೇನು ಭಯ ಇಲ್ಲ. ಮದುವೆನೆ ಬೇಡ ಅಂತ ಹೇಳ್ತಾ ಇಲ್ಲ ನಾನು. ನನಗೆ ಒಪ್ಪಿಗೆ ಆಗುವಂತವನು ಸಿಕ್ಕಿದ್ರೆ ಈಗಲೇ ಮದುವೆ ಆಗೋಕೆ ರೆಡಿ ಇದಿನಿ. ವಯಸ್ಸಾಗಿದೆ ಅಂತ ಯಾರನ್ನೋ ನನ್ನ ತಲೆಗೆ ಕಟ್ಟೋಕೆ ಬಂದ್ರೆ ನಾನು ಸುಮ್ಮನಿರಲ್ಲ. ನನ್ನ ಜೀವನ, ನನ್ನ ನಿರ್ಧಾರ. ಇದು ನಿಮ್ಮ ತಲೆಯಲ್ಲಿ ಇರಲಿ. ಇನ್ನು ಮುಂದೆ ಇದರ ಬಗ್ಗೆ ಮಾತುಕಥೆ ಬೇಡ. ನನಗೆ ಬೇಕು ಅನ್ನಿಸಿದಾಗ ನಾನೇ ಹುಡುಗನ್ನ ಕರೆದುಕೊಂಡು ಬಂದು ನಿಲ್ಲಿಸ್ತೀನಿ. ಒಂದು ತಿಂಗಳಲ್ಲೇ ಮದುವೆ ಆಗತ್ತೆ ಅಂತ ಹೇಳಿ ಸಾವಿರಾರು ರೂಪಾಯಿ ಪೀಕಿದ್ರಲ್ಲ ಅವರನ್ನ ಹೋಗಿ ಕೇಳಿ, ನೂರೆಂಟು ಪೂಜೆ ಮಾಡಿದ್ರು ಮದುವೆ ಯಾಕೆ ಆಗಿಲ್ಲ ಅಂತ" ಎನ್ನುತ್ತಾ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಳು. ಮಗಳ ವರ್ತನೆ ತಿಳಿದಿದ್ದ ತಂದೆತಾಯಿಯರು ನಿಟ್ಟುಸಿರು ಹೊರಹಾಕಿದರು.

ಕೋಣೆಗೆ ಬಂದ ಲಹರಿಯ ಮನದಲ್ಲಿ ಸಾವಿರ ಸಾವಿರ ಯೋಚನೆಗಳು ಓಡುತ್ತಿದ್ದವು. ಅವಳಿಗೂ ಮದುವೆ ಎಂದರೆ ಇಷ್ಟವೆ. ಏನೋ ಒಂದು ರೀತಿಯ ಪುಳಕ. ಎಲ್ಲರಂತೆ ಗಂಡನ ತೋಳಿನಲ್ಲಿ ಮಲಗಿ ಭವಿಷ್ಯದ ಕನಸು ಕಾಣಬೇಕೆಂಬ ಆಸೆಯೇನೋ ಇದೆ ಆದರೆ ಅವಳ ದುರದೃಷ್ಟಕ್ಕೆ ಒಬ್ಬ ಗಂಡೂ ಕೂಡ ಒಪ್ಪಿಗೆಯಾಗಿರಲಿಲ್ಲ. ಬಂಧುಗಳು, ಸ್ನೇಹಿತರು ಎಲ್ಲರೂ ಸಮಾಧಾನ ಹೇಳುವ ನೆಪದಲ್ಲಿ ಕೊಂಕು ಮಾತನಾಡುವವರೆ. ಅವಳಿಗಿಂತ ಚಿಕ್ಕವರಿಗೆಲ್ಲ ಮದುವೆ ಆಗಿ ಮಕ್ಕಳಾಗಿದೆ ಎಂದು, ಅವಳ ವಯಸ್ಸನ್ನೆ ನೆಪವಾಗಿರಿಸಿ ಸಿಕ್ಕಿದವನನ್ನ ಮದುವೆ ಆಗು ಎಂಬ ಬಿಟ್ಟಿ ಸಲಹೆ ನೀಡಿದವರೆ ಹೆಚ್ಚು. ಇದೆನ್ನೆಲ್ಲ ನೋಡಿ ನೋಡಿ ರೋಸಿಹೋದವಳು ಮದುವೆಯೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಳು.

*****

 

"ಹಾಯ್ ಲಹರಿ, ಫ್ರೀ ಇದಿರ, ಕಾಫಿಗೆ ಹೋಗೋಣ್ವ?" ಹಿಂದಿನಿಂದ ಬಂದ ಧ್ವನಿಗೆ ಕಂಪ್ಯೂಟರ್ ಪರದೆಯ ಮೇಲಿದ್ದ ಕಣ್ಣನ್ನು ತೆಗೆದು ಹಿಂದಿರುಗಿದಳು. ಎದುರಿಗೆ ಆಕೆಯ ಸಹೋದ್ಯೋಗಿ ಶ್ರವಂತ್ ನಗುತ್ತಾ ನಿಂತಿದ್ದ. 

ಕೆಲಸಕ್ಕೆ ಸೇರಿ 3 ತಿಂಗಳಾಗಿತ್ತು ಅಂದಿನಿಂದ ಲಹರಿಯ ಮೇಲೆ ಹೆಚ್ಚಿನ ಕಾಳಜಿ ಆತನಿಗೆ. ಇವರಿಬ್ಬರನ್ನ ನೋಡಿ ಮೂಗು ಮುರಿದವರೆ ಹೆಚ್ಚು. ಚಿಕ್ಕವನನ್ನ ಬುಟ್ಟಿಗೆ ಹಾಕಿಕೊಂಡಿದಾಳೆ ಎನ್ನುವ ಮಾತುಗಳು ಕಿವಿಗೆ ಬಿದ್ದಿದ್ದರೂ ಕೂಡಾ ತಲೆ ಕೆಡಿಸಿಕೊಂಡಿರಲಿಲ್ಲ ಲಹರಿ. 

"ಬಂದೆ ಇರು" ಎನ್ನುತ್ತಾ ಮೊಬೈಲ್ ಹಿಡಿದು ಅವನ ಜೊತೆ ನಡೆದಳು.

ಎರಡು ಕಾಫಿ ಆರ್ಡರ್ ಮಾಡಿ ಎದುರಿಗೆ ಕುಳಿತು ನುಡಿದನು, “ಲಹರಿ ನಿಮ್ಮ ಹತ್ರ ತುಂಬಾ ಮುಖ್ಯವಾದ ವಿಷಯ ಹೇಳೋದಿತ್ತು”

"ಎನ್ ಶ್ರವಂತ್ ಯಾವತ್ತಿನಿಂದ ಮಾತನಾಡೊಕು ಪರ್ಮಿಷನ್ ಕೇಳೋ ಅಂತ ಒಳ್ಳೆ ಬುದ್ದಿ ಬಂತು?" ನಗುತ್ತಾ ಹೇಳಿದಳು.

ಅವಳ ಮಾತಿಗೆ ತಲೆಕೆಡಿಸಿಕೊಳ್ಳದ ಅವನು, "ನಾನು ನಿಮ್ಮನ್ನ ತುಂಬಾ ಪ್ರೀತಿಸ್ತಾ ಇದಿನಿ ಲಹರಿ. ಮದುವೆ ಆಗೋದಾದ್ರೆ ನಿಮ್ಮನ್ನೇ ಅಂತ ನಿರ್ಧಾರ ಮಾಡಿದಿನಿ. ಮನೆಯಲ್ಲೂ ಒಪ್ಪಿದಾರೆ" ಎಂದನು.

"ಆದರೆ ಶ್ರವಂತ್....." ಏನೋ ಹೇಳುತ್ತಿದ್ದವಳನ್ನ ತಡೆದವನೆ ಮಾತು ಮುಂದುವರೆಸಿದ,

"ನಿಮ್ಮ ವಯಸ್ಸು 30. ನನಗೆ 27. ಇದೆ ತಾನೇ ನಿಮ್ಮ ಸಮಸ್ಯೆ. ನನಗೆ ಇದೆಲ್ಲ ಮೊದಲೇ ಗೊತ್ತು. ಪ್ರೀತಿಗೆ ವಯಸ್ಸು ಮುಖ್ಯ ಅಲ್ಲ ಅನ್ನೋದು ನನ್ನ ಅಭಿಪ್ರಾಯ. ಇದನ್ನ ಆದರ್ಶ ಅಂತೆಲ್ಲ ಅಂದುಕೊಳ್ಳಬೇಡಿ. ನನಗೆ ನಿಮ್ಮ ಆಲೋಚನೆ, ವ್ಯಕ್ತಿತ್ವ ಇಷ್ಟವಾಗಿದೆ. ನಿಮಗೂ ನಾನು ಇಷ್ಟ ಆಗಿದ್ರೆ ಒಪ್ಪಿಕೊಳ್ಳಬಹುದು" ಎಂದು ಕಾಫಿ ಹೀರತೊಡಗಿದನು.

ಕಾಫಿ ಕಪ್ಪನ್ನೇ ನೋಡುತ್ತಾ ಕುಳಿತವಳ ಮನ ಡೋಲಾಯಮಾನವಾಗಿತ್ತು. ಒಂದು ವೇಳೆ ಒಪ್ಪಿದರೆ ಸಮಾಜವನ್ನ ಹೇಗೆ ಎದುರಿಸುವುದು ಎನ್ನುವ ಪ್ರಶ್ನೆ ಅವಳನ್ನ ಕಾಡುತ್ತಿತ್ತು.

ಅವಳ ಮೌನವನ್ನ ಇಷ್ಟವಿಲ್ಲವೆಂದು ಅರಿತ ಶ್ರವಂತ್, "ಲಹರಿ ಇದರಲ್ಲಿ ಬಲವಂತ ಎನಿಲ್ಲ. ನಿಮ್ಮ ನಿರ್ಧಾರ ನಮ್ಮ ಸ್ನೇಹಕ್ಕೆ ತೊಂದರೆ ಮಾಡಲ್ಲ. ಮುಂದೆ ಕೂಡಾ ನಾನು ನಿಮಗೆ ಒಳ್ಳೆಯ ಸ್ನೇಹಿತನೆ. ನಿಮಗೆ ಇಷ್ಟ ಇಲ್ಲ ಅಂದ್ರೆ ಕಾಫಿ ಬಿಲ್ ಪೆ ಮಾಡಿ ಹೋಗಿ. ಇಷ್ಟ ಆಗಿದ್ರೆ ನಾನೇ ಬಿಲ್ ಕೋಡ್ತಿನಿ" ಎಂದು ಖಾಲಿ ಕಪ್ ಟೇಬಲ್ ಮೇಲೆ ಇಟ್ಟನು.

ಅವನ ಮಾತಿಗೆ ತಲೆಯೆತ್ತಿದ ಲಹರಿ, "ಕಾಫಿ ಕುಡಿಯದೆ ಎದ್ದು ನಿಂತು ಪರ್ಸ್ ತೆರೆದು ಬಳಿ ಬಂದವಳೇ, ಅವನ ಕೈಯಲ್ಲಿ ಏನನ್ನೋ ತುರುಕಿ, ಬಿಲ್ ಪೆ ಮಾಡಿ ಬನ್ನಿ" ಎಂದು ದರದರನೆ ನಡೆದು ಹೋದಳು.

ಕೈಯಲ್ಲಿದ್ದ ಅವರಪ್ಪನ ವಿಸಿಟಿಂಗ್ ಕಾರ್ಡ್ ನೋಡಿದವನೆ ಸಂತಸದಲ್ಲಿ ಆಕೆ ಹೋದ ದಿಕ್ಕನ್ನೇ ನೋಡುತ್ತಾ ನಿಂತನು..…

 

 

Category : Stories


ProfileImg

Written by Ashwini H K

Numerology Expert Yantra Expert