ನಾವು ಮದುವೆಯಾಗಿ ಹದಿನೈದು ವರ್ಷ ಆಯ್ತು. ಕೀರ್ತಿಗೊಂದು ಆರತಿಗೆ ಎರಡು ಅವಳಿಗಳು ನಮಗಾಯ್ತು. ನನ್ನ ಹೃದಯದಲ್ಲಿ ಕೋಮಲವಾದ ಭಾವನೆಗಳಿವೆ ಎಂಬುದು ನನ್ನಾಕೆಗೆ ಇನ್ನೂ ಅರ್ಥವೇ ಆಗಿಲ್ಲ, ಹಾಗೆ ನೋಡಿದರೆ ಅರ್ಥವಾಗುವ ಯಾವ ಲಕ್ಷಣಗಳು ಇದುವರೆಗೂ ಕಂಡಿಲ್ಲ, ಹಾಗಾಗಿ ನಾನು ಆಕೆಯಿಂದ ಅದನ್ನು ನಿರೀಕ್ಷೆ ಕೂಡ ಮಾಡುವುದಿಲ್ಲ.
ನಾನೇನೆ ಬರೆದರು ಅದನ್ನು ಮೊದಲು ನನ್ನಾಕೆ ಓದಬೇಕು. ಅದರ ಆಳ ಅಗಲವನ್ನು ವಿಸ್ತಾರತೆಯನ್ನು ದ್ವನಿ ಶೈಲಿಯನ್ನು, ಕಡೆಗೆ ಕಾಗುಣಿತ ದೋಷಗಳನ್ನು ತಿದ್ದಿ ತೀಡಿ ಅನಿಸಿಕೆ ಹೇಳಬೇಕು. ಅಂತ ಕವಿಯತ್ರಿ ಹೆಂಡತಿ ಸಿಗಬೇಕಿತ್ತು. ಹಾಗಂತ ಒಂದು ಕನಸಿತ್ತು. ಆದರೆ ನನ್ನಾಸೆಗೆ ದೇವರು ಕಲ್ಲು ಹಾಕಿದ್ದು ಮಾತ್ರ ಎಷ್ಟು ಸತ್ಯವೋ ನನ್ನಾಕೆ ಉತ್ತಮ ವಿಮರ್ಶಕಿ ಎನ್ನುವುದು ಅಷ್ಟೇ ಸತ್ಯ
ಆಕೆ ನನ್ನ ಕವಿತೆ ಲೇಖನಗಳನ್ನು ಮನಃಪೂರ್ವಕವಾಗಿ ಓದಿ ಕಾಗುಣಿತ ದೋಷಗಳನ್ನು ಎತ್ತೇನಿಸಿ ನನ್ನ ಜರಿದು ವಾಕ್ಯ ದೋಷವಿದೆ ಅದು ಹಾಗಲ್ಲ ಹೀಗಿರಬೇಕು ಬೆಪ್ಪುತಕ್ಕಡಿಯೆಂದು ಹಳಿದು ಕಡೆಗೊಂದು ಪ್ರಶ್ನೆಯ ಬಾಣ ಎಳೆದುಬಿಡುತ್ತಾಳೆ. ಯಾರವಳು? ಹಳೆ ಲವ್ವರ್ ನೆನಪಾಗಿರಬೇಕಲ್ಲ ನಿಮಗೆ. ಒಂದಾದ್ರೂ ನನ್ನ ಬಗ್ಗೆ ಬರೆದದ್ದು ಉಂಟಾ ಅವಳ ಟೀಕಾ ಪ್ರಹಾರದ ವರೆಸೆ ಇದು.
ಅವಳ ಪ್ರಕಾರ ನಾನು ಪ್ರೀತಿಯ ಬಗ್ಗೆ ಬರೆಯುವುದು ಮಾತನಾಡುವುದು ಒಬ್ಬ ಕವಿಯಾಗಿ ಅಷ್ಟೇ. ಕವಿತೆ ಬರೆಯುವುದಕ್ಕೆ ಮಾತ್ರ ಸೀಮಿತವಂತೆ ಹಾಗಾಗಿ ನಾನೊಬ್ಬ ಮಹಾ ಸುಳ್ಳುಗಾರ ನಂಬಿಕೆಗೆ ಯೋಗ್ಯವಲ್ಲದ ಪ್ರಾಣಿಯೇ ಸರಿ. ಹಾಳಾದ್ದು ಎಲ್ಲ ಕವಿಗಳ ಪಾಡು ಗೋಳು ಇದೆ. ಕೆಲವರು ಹೇಳಿಕೊಂಡಿದ್ದಾರೆ ಕೆಲವರು ಬರೆದುಕೊಂಡಿದ್ದಾರೆ ಉಳಿದವರು ಪದ್ಯದಲ್ಲಿ ತೋರ್ಪಡಿಸಿಕೊಂಡಿದ್ದಾರೆ. ವಾಸ್ತವಿಕವಾಗಿ ಇದರಲ್ಲಿ ನಂದು ಒಂದು ಪದವಿದೆ ನೀವೇ ಊಹಿಸಿಕೊಳ್ಳಿ.
ಈಗ ಜಾಸ್ತಿ ವಿಷಯಾಂತರ ಮಾಡುವುದು ಬೇಡ. ನಾನು ಹೇಳಬೇಕಾದುದ್ದನ್ನು ನೇರವಾಗಿ ಹೇಳಿ ಬಿಡುತ್ತೇನೆ. ಕಾಲೇಜಿನಲ್ಲಿ ಓದುವಾಗ ನೀವು ಯಾರಿಗೂ ಪ್ರೇಮಪತ್ರ ಬರೆದಿಲ್ಲವೇ ನನ್ನಾಕೆಯ ಕುತೂಹಲದ ಪ್ರಶ್ನೆ. ವಾಸ್ತವಿಕವಾಗಿ ಅದು ವಿನೋದಭರಿತವಾಗಿ ತೇಲಿ ಬಂದರು ಆಂತರ್ಯದಲ್ಲಿ ಪತ್ತೆದಾರಿಯ ಚೋರನನ್ನು ಹುಡುಕುವ ತಂತ್ರವೇ ಆಗಿರುತ್ತಿತ್ತು. ನಾನು ಮಹಾಕದೀಮ ಹತ್ತಾರು ಊರಿನ ನೂರಾರು ಬಗೆಯ ನೀರು ಕುಡಿದು ಕುಡಿಸಿದ ಭೂಪ. ತದೇಕವಾದ ಗಾಂಭೀರ್ಯ ವಾಣಿಯಿಂದ ನಮ್ಮ ಮನೆಯಲ್ಲಿ ಅದಕ್ಕೆಲ್ಲ ಅವಕಾಶವೇ ಇರಲಿಲ್ಲ. ಅಷ್ಟಕ್ಕೂ ನನಗೆ ಅಂತಹ ಬುದ್ಧಿವಂತಿಕೆ ಕೂಡ ಇರಲಿಲ್ಲ ಎನ್ನುತ್ತಿದ್ದೆ. ಮೇಲಿಂದ ಒಂದು ಸಾಕ್ಷಿಕರಣದ ಸ್ಪಷ್ಟೀಕರಣದ ಮಾತು ಆ ಜಾಣೇ ಇದ್ದಿದ್ದರೆ ನಾನೇಕೆ ನಿನ್ನ ಮದುವೆ ಆಗ್ತಾ ಇದ್ದೆ ನೀನೇ ಹೇಳು.
ಈ ಹೆಣ್ಣು ಮಕ್ಕಳೇ ಹೀಗೆ ಮಾತಿಗಾಗಿ ಮಾತಾಡೋ ಪ್ರತಿ ಮಾತಿನ ಹಿಂದೆ ಒಂದು ಪೊಲೀಸ್ ಬುದ್ದಿಯ ಹುಡುಕಾಟವಿರುತ್ತದೆ. ಹುಡುಗಾಟದ ಪೋಲಿತನವನ್ನು ಹೆಮ್ಮೆಯೆಂಬ ಭಾವದಲ್ಲಿ ಹೇಳಿಕೊಂಡರೆ ಮನೆ ಜೈಲಾಗುವುದು ಜೋಕೆ ಅಷ್ಟಕ್ಕೂ ಇಷ್ಟುದ್ದವಾದ ಪೀಠಿಕೆ ಬರೆಯಲೊಂದು ಕಾರಣವಿದೆ.ರೀ ಈ ಸಲ ನೀವೇಕೆ ನನಗೊಂದು ಪ್ರೇಮ ಪತ್ರ ನೀವೇಕೆ ಬರೆಯಬಾರದು ಬೇಡಿಕೆಯನೊಂದಿಟ್ಟಳು. ನಾನು ಅದು ಸುಲಭವಲ್ಲ ಈಗ ಎಂದೆ ಯಾಕ್ರೀ ಹಾಗಂತೀರಾ ನಿಮಗೆ ನನ್ನ ಕಂಡ್ರೆ ಏನು ಅನಿಸುವುದಿಲ್ಲವೇ ಮರು ಪ್ರಶ್ನೆ ಎಸೆದಳು ವ್ಯರ್ಥ ವಾದಕ್ಕಿಂತ ಪ್ರಯತ್ನವೇ ಲೇಸೆಂದೆ. ಬರೆಯುವೆ ಆದರೆ ಒಂದು ಶರತ್ತು, ನಿನ್ನನ್ನು ಕಾಲೇಜಿನ ಗೆಳತಿ ಎಂದು ಭಾವಿಸಿಕೊಂಡು ಬರೆಯುವೆ ಆಗಬಹುದಾ ಹೇಳು ಎಂದೆ. ಅದಕ್ಕವಳು ಆ ಭಾಗ್ಯವಂತು ಆಗ ಬರಲಿಲ್ಲ ಈಗಲಾದರೂ ಕಲ್ಪಿಸಿಕೊಳ್ಳುವೆ ಎಂದು ಬರೆಯಲು ಸಮ್ಮತಿಸಿದಳು. ಪ್ರೀತಿ ಪ್ರೇಮದ ಬಗ್ಗೆ ತುಂಬಾ ಕವಿತೆ ಬರೆದ ನನಗೆ ಸಾಕಷ್ಟು ವರ್ಷದ ನಂತರ ಮತ್ತೊಮ್ಮೆ ಬರೆಯುವ ಪ್ರೇಮ ಪತ್ರ ಬರೆಯುವ ಉತ್ಸಾಹವೇನೋ ಬಂತು ಆದರೆ ವಸ್ತು ವಿಚಾರ ಮಾತ್ರ ತಣ್ಣಗಿರಿಸಿತು. ಆದರೂ ಬರೆಯಲೇಬೇಕಿತ್ತು ಬೇಡಿಕೆ ಅನ್ನದಿದ್ದರೂ ಅದೊಂದು ಶಾಸನ ಜಾರಿಯಾಗಿತ್ತು.
ಒಂದೇ ಮಾತಿನಲ್ಲಿ ಹೇಳುವುದಾದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಡಿಯರ್ಸ್ಟ್ ಅಂಡ್ ನಿಯರೆಸ್ಟ್ ಪ್ರೇಮಿಗೆ ನಿನ್ನ ಪ್ರಿಯತಮನ ಹೃದಯದ ಮಾತಿನ ಒಲವಿನ ಪತ್ರ
"ಈ ರೂಪೂ ಮೆಹಕ ಏ ಝಲಫ್ ಬಿಕರಿ ಏ ದಿಲ್ ರುಬಾನ ತೇರಾ ಮಧಯ ಹೋಷ್ ಮುಜುಕೋ ಕರಾನೇ ಲಗ ಹೈ" ಹೀಗೆ ಹೇಳಿದ್ದು ನಾನಲ್ಲ ನನ್ನ ಹೃದಯ. ಅದು ಕೂಡ ನನ್ನ ತಪ್ಪಲ್ಲ. ಈ ಕಣ್ಣುಗಳದ್ದು. ನಿನ್ನ ಮೊದಲ ಬಾರಿಗೆ ಕಾಲೇಜಿನಲ್ಲಿ ನೋಡಿದಾಗ ನಿನ್ನ ಸೌಂದರ್ಯಕ್ಕೆ ಈ ಹೃದಯ ಮರುಳಾಯಿತು. ನಿನ್ನ ಕಾಣುತ್ತಲೇ ಈ ಮನಸ್ಸು ಹೃದಯವನ್ನು ನಿನಗೆ ಅರ್ಪಿಸಿತು. ಅದು ಕೂಡ ಹೃದಯ ಮಾಡಿದ ತಪ್ಪೇ ಹೊರತು ನಾನಲ್ಲ.
" ಮೇರಾ ಮನ್ ಕ್ಯೂ ತುಜೆ ಚಾಹೇ ನಾ ಜಾನೇ ಕ್ಯೂ ಜುಡುಗಯಾ ಕೈ ಸೇ ಎ ಬಂಧನ್ ಕೈ ಸೇ ಹೀ ದಿವಾನಿ ಹೈ ಕೈ ಸೇ ಹೇ ದಿವಾನಾ ಪನ್" ನನ್ನ ಹೃದಯದ ಬಾಗಿಲು ನಿನ್ನಾಗಮನಕ್ಕೆ ತೆರವಾಗಿದೆ. ನಿಜವಾಗಿಯೂ ಅದೆಷ್ಟೋ ಸುಂದರ ಅಲೆಗಳು ಬಂದು ಹೋಗಿವೆ. ಅದೆಷ್ಟೋ ಸುಂದರ ಕುಸುಮಗಳು ಬೇಡಿಕೊಂಡಿವೆ. ಆದರೆ ಈ ಹೃದಯ ಯಾರ ಕರೆಗೂ ಓಗೋಡಲಿಲ್ಲ. ನಿನ್ನ ನೋಡುತಲಿ ತಟ್ಟನೆ ಬಾಗಿಲು ತೆರೆದುಕೊಂಡಿದೆ. ನಿನಗರಿವಿಲ್ಲದಂತೆ ಅಲ್ಲಿ ನಿನ್ನ ಬಂಧಿಸಿ ಭದ್ರವಾಗಿಸಿಕೊಂಡಿದೆ.
"ನೂರು ಜನ್ಮಕ್ಕೂ ನೂರಾರು ಜನ್ಮಕು ಒಲವಾತಾರೆಯ ಒಲಿದೊಲಿದು ಬಾರೆಯ ನನ್ನ ಆತ್ಮ ನನ್ನ ಪ್ರಾಣ ನೀನೆಂದು" ಮದುವೆ ಎಂಬುದು ಜನ್ಮ ಜನ್ಮದ ಅನುಬಂಧವೆನ್ನುವುದಾದರೆ ನೀನೇ ನನ್ನ ಜನ್ಮ ಜನ್ಮದ ಅರ್ಧಾಂಗಿನಿ. ಈ ಜನ್ಮದಲ್ಲಿ ಈ ಕಾಲೇಜಿನಲ್ಲಿ ನನ್ನೆದುರಿಗೆ ನೀ ಬಂದಿರುವೆ. ನಿಜ ಹೇಳಿಬಿಡುವೆ ಸರಿಯಾಗಿ ಆಲಿಸಿಕೋ. ಪ್ರತಿದಿನ ನಿನ್ನ ನೋಡದೆ ಹೋದರೆ ನನಗೆ ಊಟ ರುಚಿಸದು , ಕಣ್ಣಿಗೆ ನಿದ್ರೆ ಹತ್ತದು, ಓದು ಬರೆಹಕ್ಕೆ ಮನಸಾಗದು, ಒಂದೆಡೆ ಸ್ಥಿರವಾಗಿರಲಾಗದು. ಹೆಂಡ ಕುಡಿದ ಕೋತಿಯಂತೆ ಆಡುವುದು ಈ ನನ್ನ ಮನ. ಸದಾ ನೀ ಎದುರಿಗಿರಬೇಕು ಕಣ್ಣಲ್ಲಿ ಕಣ್ಣಿಟ್ಟು ನೀ ನನ್ನ ನಾನು ನಿನ್ನ ನೋಡಬೇಕು. ಪ್ರೀತಿ ಎನ್ನುವ ಹೂವು ಸದ್ದು ಗದ್ದಲವಿಲ್ಲದೆ ನಮ್ಮಿಬ್ಬರಲಿ ಅರಳಬೇಕು. ಕಣ್ಣುಗಳೆರಡು ಕೂಡಿದರೆ ಸಾಲದು ಮನಸುಗಳೆರಡು ಬೆಸೆಯಬೇಕು. ಈ ತರಹ ನಿನ್ನೆದುರು ಕುಳಿತು ಹರಟೆ ಹೊಡೆಯಬೇಕು ಎಂದು ಮನಸ್ಸು ಬಯಸುತ್ತಿದೆ. ಆದರೆ ಸಾಧ್ಯವಾಗುತ್ತಿಲ್ಲ ಧೈರ್ಯ ಸಾಲದಾಗಿದೆ.
" ಹಿಂದೆ ಯಾವ ಜನ್ಮದಲ್ಲೂ ಮಿಂದ ಪ್ರೇಮ ಜಲದ ಕಂಪು ಬಂದು ಸೇರೋ ಎದೆಯ ಭಾವ ಹೇಳಲಾರೆ ನಾ ತಾಳಲಾರೆ" ನನ್ನ ಹೃದಯದ ತಳಮಳ ಹೇಳಬೇಕು. ಅದು ಮನದ ಬಯಕೆ ಅದನ್ನು ವ್ಯಕ್ತಪಡಿಸುವ ಬಗೆಯಂತೂ ಹೊಳೆಯುತ್ತಿಲ್ಲ. ಪ್ರಪಂಚದಲ್ಲಿ ಲಿಪಿ ಇಲ್ಲದ ಭಾಷೆಗಳು ಸಾಕಷ್ಟಿವೆ ಆದರೆ ಲಿಪಿಯು ಇಲ್ಲದ ಪದವು ಇಲ್ಲದ ನಿಶಬ್ದವಾದ ಭಾಷೆಯೊಂದಿಗೆ ಅದು ಪ್ರೇಮಿಗಳ ಕಣ್ಣಿನ ಭಾಷೆ. ಅದರಲ್ಲಿ ನಾನು ನಿನ್ನೆದುರು ಪ್ರೇಮನಿವೇದನೆ ಮಾಡುವ ಆಸೆ ಆದರೆ ನಿನ್ನೆದುರು ಬಂದಾಗ ನಿನ್ನ ಮುದ್ದಾದ ಮೊಗವ ಕಂಡಾಗ ಮುಂಗುರುಳ ನೆಗೆದಾಟ ನೋಡುತ ಮೋಹಕ ಕಣ್ಣಿನ ಹೊಯ್ದಾಟ ಕಾಣುತ್ತ ನಾ ಬಂದ ಉದ್ದೇಶ ಮರೆತುಬಿಡುವೆ. ನೀ ದೂರ ಸರಿದಂತೆ ವಿಲವಿಲನೇ ಒದ್ದಾಡಿ ಬಿಡುವೆ.
ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿಬಿಡುವ ಆಸೆ, ಒಂದೇ ಉಸಿರಿಗೆ. ಆದರೆ ಏಕೋ ಒಳಗೊಳಗೆ ಭಯ ಆತಂಕ. ನೀನೆಲ್ಲಿ ನನ್ನ ಪ್ರೇಮವನ್ನು ತಿರಸ್ಕಾರ ಮಾಡಿಬಿಡುತ್ತೀಯೋ, ಹತ್ತಿರವೂ ಆಗದೆ ದೂರಕ್ಕು ಸರಿಯಲಾಗದೆ ನನ್ನೊಳಗಿನ ಚೇತನ ಸೊರಗುತಿದೆ, ಕೊರಗುತಿದೆ, ಮರುಗುತಿದೆ. ನಾನೀಗ ನಿನ್ನಿಂದ ದೂರವಾಗಿ ಬದುಕಿರಲಾರದಷ್ಟು ಹತ್ತಿರವಾಗಿದ್ದೇನೆ. ನೀನಿಲ್ಲದೆ ಹೋದರೆ ನಾನೊಂದು ಜೀವಂತ ಶವದಂತೆಯೇ ಸರಿ.
"ಒಲವಿನ ಉಡುಗೊರೆ ಕೊಡಲೇನು ರಕುತದಿ ಬರೆದೆನು ಇದ ನಾನು" ನನ್ನೊಲುವಿನ ಜೀವದ ಚೇತನವೇ ನೀನಿಂದು ನನ್ನೊಳಗಿನ ರಕುತದ ಕಣಕಣದಲ್ಲೂ ನೆಲೆಯಾಗಿರುವೆ. ಅದಕ್ಕಾಗಿ ಈ ಒಲವಿನ ಓಲೆಯನ್ನು ನಾ ಬರೆಯುತ್ತಿರುವೆ. ನನ್ನ ಪ್ರೇಮದ ಈ ಪುಟ್ಟ ಸಸಿಯನ್ನು ನಿನ್ನ ಕೈಗೆರಿಸಿದ್ದೇನೆ. ನಾಶಗೊಳಿಸದೆ ನೀರಿರೆದು ಪೋಷಿಸುವೆಯಾ? ನೀರು ಗೊಬ್ಬರವ ಹಾಕದೆ ನಡುಬೀದಿಗೆಸೆದು ಹೋಗುವಷ್ಟು ಕಠೋರ ಹೃದಯ ನಿನ್ನದಲ್ಲವೆಂದು ನಾ ಬಲ್ಲೆ.
"ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ ನಿನಗೆಂದೆ ಬರೆದ ಪ್ರೇಮದ ಓಲೆ" ನಾವಿಬ್ಬರೂ ನೋಡುವುದಕ್ಕಿಂತ ಮೊದಲೇ ಪ್ರೇಮಿಗಳು. ಜನ್ಮ ಜನ್ಮಕ್ಕೂ ನೀನೇ ನನ್ನೊಲವು. ಅಂತಹ ಪ್ರೀತಿ ಶುರುವಾಗಿದ್ದು ಕಣ್ಣಿನಿಂದ, ಹೃದಯದಿಂದ. ಈ ಮೇಲ್, ವಾಟ್ಸಾಪ್ ಗಳಿಲ್ಲ ಮೊಬೈಲ್ ಕೈಗೆಟುಕುವ ಆರಂಭದ ಯುಗದಲ್ಲಿ ನಮ್ಮಿಬ್ಬರ ಪ್ರೇಮ ಅರಳಿದೆ. ಈ ಪ್ರೀತಿಯ ಆಳ ವ್ಯಕ್ತಪಡಿಸಲು ರಕ್ತದಲ್ಲಿ ಪ್ರೇಮಪತ್ರ ಬರೆಯಬೇಕಾಗಿಲ್ಲ. ನನ್ನ ರಕ್ತದ ಕಣಕಣದಲ್ಲೂ ಅದು ಅನುರಕ್ತವಾಗಿದೆ. ಕಣ್ಣಿನ ಮೂಲಕ ಆರಂಭವಾದ ಈ ಪ್ರೇಮ ವ್ಯವಹಾರ ಮುಂದೆ ಸಾಗಲಿ. ಈ ಪ್ರೇಮದ ಅನುಭವವನು ಪದಗಳಲ್ಲಿ ಹೇಳುವುದು ಲಿಪಿಯಲ್ಲಿ ಬರೆಯುವುದು ಸುಲಭವಲ್ಲ ಹಾಗಾಗಿ ಭಾವನೆಯನ್ನು ಪದವಾಗಿಸಿ ಈ ಪ್ರೇಮದೋಲೆ ಬರೆದಿರುವೆ ಓದಿಕೋ. "ಲವ್ ಅಟ್ ಫಸ್ಟ್ ಸೈಟ್" ಎನ್ನುವ ಹಾಗೆ ನನ್ನದು ಈಗೀಗ ಅದೇ ಭಾವ ನಿನ್ನಲ್ಲಿ.
ಈ ಪ್ರೀತಿ ಪ್ರೇಮ ದುಷ್ಯಾಂತ ಶಾಕುಂತಲೆಯ ಕಥೆಯಂತಲ್ಲ, ಸಿನಿಮಾದ ಹಾಗೆ ಹಾಡು ಮರ ಸುತ್ತುವುದು ಅಲ್ಲ. ನಾಯಕ ಖಳನಾಯಕ ಡಿಶುಂ ಡಿಶುಂ ಎಂದು ಹೊಡೆದಾಡುವುದಿಲ್ಲ. ಕಥೆ ಕಾದಂಬರಿ ಧಾರವಾಹಿಯಂತಲ್ಲ. ನಿಜ ಜೀವನದಲ್ಲಿ ಇವು ಬರುವುದೇ ಇಲ್ಲ. ಕಿತ್ತಾಟ ಮುನಿಸು ಮನಸ್ತಾಪ ಸಮರಸಗಳ ಬೆರೆತ ಜೀವನ. ನಗುವಿನ ಏರಿಳಿತದ ಕೊರಕಲು ದಾರಿಯಂತೆ ಈ ಬದುಕು. ಸುಂದರ ಪ್ರಕೃತಿಯಂತೆ ಬರ್ತೀಯಾ ಒಂದು ಪ್ರಯಾಣ ಮಾಡೋಣ. ಈ ದಿವಸದಿಂದ ಏಳು ಹೆಜ್ಜೆಯ ನಾ ಎಣಿಸುವೆ. ಏಳು ಜನ್ಮಕ್ಕಾಗುವಷ್ಟು ಒಲವ ನೀ ಕೊಡುಗೆಯಾ? ಒಪ್ಪಿತವೆಂದರೆ ತಿರುಗಿ ನಗುವೊಂದನ್ನು ಬೀರು. ಇಲ್ಲವಾದರೆ ಬೆನ್ನು ಮಾಡಿ ಹೊರಟೆಬಿಡು. ಮುಂದಿನ ಜನ್ಮಕಾದರೂ ಮತ್ತೆ ಕಾಯುವೆ ಮನಸಾದರೆ
ಇಂತಿ ನಿನ್ನವನಾಗ ಬಯಸುವ
ಪ್ರೇಮಿ
ಈ ಪತ್ರ ಆಕೆ ಓದಿದ್ದಾಳೆ. ಈಗಲೂ ಆಕೆಯ ಕುತೂಹಲ ಒಂದೇ, ಯಾರವಳು? ನಿಮ್ಮನ್ನು ಕಾಡುತ್ತಿರುವವಳು. ನನ್ನೊಂದಿಗೆ ಮುಚ್ಚುಮರೆ ಏನು? ಮದುವೆಯಾಯ್ತು ಮಕ್ಕಳಾಯಿತು,ತಲೆ ಕೂದಲು ಬೆಳ್ಳಗಾಯಿತು. ವಿಮರ್ಶಕೀಯ ಪ್ರಶ್ನೆ ಮಾತ್ರ ಬದಲಾಗಲಿಲ್ಲ. ಎಂದೆಂದಿಗೂ ಬದಲಾಗಲ್ಲ ಬಿಡಿ. ಹಾಗಂತ ನಾವೇನು ಇಂದಿಗೂ ಬದಲಾಗಲಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ. ವಿಚಾರ ಕೈ ಬಿಡಿ ಆದರೆ ಚಿಂತನೆ ಬಿಡಬೇಡಿ.
ಕಡೆಯದಾಗಿ ಒಂದು ಹಾಡು ನೆನಪಾಗುತ್ತೆ ಹೇಳ್ಬಿಡ್ತೀನಿ ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗಬೇಡಿ ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ ಯಾವತ್ತೂ ಇರಬಾರದು ಒಬ್ಬಳನ್ನೇ ಕಟ್ಕೊಂಡು ಮತ್ತೊಬ್ಳ ನಂಬರ್ ಇಟ್ಕೊಳ್ಳಿ ಈ ಹಾಡು ಸಾಧ್ಯವಾದರೆ ಜೀವನಕ್ಕೆ ಅಳವಡಿಸಿಕೊಳ್ಳಿ ಸುಖ ಬೇಕು ಅಂದ್ರೆ ಗೌಪ್ಯತೆ ಕಾಪಾಡಿಕೊಳ್ಳಿ ಸಣ್ಣ ಅನುಭವದ ಕಿವಿಮಾತು ನೀವು ತಿಳ್ಕೊಳ್ಳಿ ತಮಾಷೆ ತಪ್ ತಿಳ್ಕೊಬೇಡ್ರಿ ಎಲ್ಲರಿಗೂ ನಮಸ್ಕಾರ.
*****
ಅಂಗನ
ಡಾ.ನವೀನ್ ಕುಮಾರ್ ಎ.ಜಿ
ಕನ್ನಡ ಭಾಷಾ ಶಿಕ್ಷಕರು
ವಿಶ್ವದರ್ಶನ ಪ್ರೌಢಶಾಲೆ
ಇಡಗುಂದಿ
ಯಲ್ಲಾಪುರ ತಾಲೂಕ್
ಉತ್ತರಕನ್ನಡ ಜಿಲ್ಲೆ
9900861126