ಅಂದಹಾಗೆ ನಾನು- ಇವಳು ಜೊತೆಯಾಗಿ ಹತ್ತಿರ ಹತ್ತಿರ ಹನ್ನೆರಡು ವರ್ಷವಾಗುತ್ತಾ ಬಂತು. ಆದರೂ ‘ಗುರು, ನಿಂದು ಲವ್ ಮ್ಯಾರೇಜಾʼ ಎಂದು ಕೇಳುವ ನನ್ನ ಹಳೆಯ ಸ್ನೇಹಿತರ, ಸಹಪಾಠಿಗಳ ಸಂಖ್ಯೆಗೇನೂ ಇವತ್ತಿಗೂ ಕಡಿಮೆಯಿಲ್ಲ. ಅವರಿಗೆ ಈ ʼಗುರು'ಮತ್ತು ‘ಲವ್ ಮ್ಯಾರೇಜ್’ ನಡುವೆ ಇರುವ ಲಿಂಕೇ ಅರ್ಥ ಆಗ್ತಿಲ್ಲ. ನನಗೇ ಅರ್ಥವಾಗಿಲ್ಲ ಎಂದಮೇಲೆ ಅವರಿಗೆಲ್ಲಿಂದ ಅರ್ಥವಾಗಬೇಕು!
ನಾನು ಡಿಗ್ರಿ ಕ್ಲಾಸಲ್ಲೇ ಸಿಕ್ಕಾಪಟ್ಟೆ ‘ಡೀಸೆಂಟ್ʼ, ‘ರಿಸರ್ವ್ಡ್ʼ, ಎಂಬ ಪಟ್ಟ ಗಟ್ಟಿಸಿಕೊಂಡಿದ್ದೆ. ಕಾಲೇಜಲ್ಲೇ ತಮ್ಮ ಹವಾ ಸೃಷ್ಟಿಸಿಕೊಂಡಿದ್ದ ಸ್ನೇಹಿತರಿಗೆ ನಾನು ಒಗ್ಗಿಬರದ ಆಸಾಮಿಯಾಗಿದ್ದೆ ! ಹಾಗಂತ ನಾನು ಸಿಕ್ಕಾಪಟ್ಟೆ ರಿಸರ್ವ್ಡ್ ಅಂತೇನೂ ಇರಲಿಲ್ಲ. ಎಲ್ಲರಲ್ಲೂ ಮಾತಾಡುವ ಆದರೆ ಯಾರಿಗೂ ಚಡ್ಡಿ ದೋಸ್ತ್ ಅನ್ನಿಸಿಕೊಳ್ಳದ ಕ್ಯಾಟಗರಿ. ನನಗೆ ಅವರೆಂದರೆ ಅಚ್ಚರಿ ಹೆಮ್ಮೆ, ಅವರಿಗೋ ನನ್ನ ಬಗ್ಗೆ ಕರುಣೆ!
ಡಿಗ್ರಿ ಕಳೆದು ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿಯೂ ಹೆಚ್ಚೇನೂ ಬದಲಾವಣೆ ಆಗಲಿಲ್ಲ. ಕೆಲಸದ ಅನುಭವದಿಂದ ಒಂದಷ್ಟು ಕಲಿಯುವ- ಕಲಿಸುವ ಪರಿಪಾಠ ಒಲಿದಿತ್ತು ಅಷ್ಟೆ. ನಾನೂ ಲೆಕ್ಚರರ್ ಆಗಬೇಕು, ಅದಕ್ಕಾಗಿ ರೆಗ್ಯುಲರ್ ಎಂ.ಸಿ.ಜೆ ಮಾಡಬೇಕು ಎಂದು ನಾನು ತೆಗೆದುಕೊಂಡ ಗಟ್ಟಿ ನಿರ್ಣಯ ಆ ದೇವರ ಆಟಾನಾ ಎಂದು ಈಗಲೂ ಅನಿಸುತ್ತಿದೆ. ಇಲ್ಲದಿದ್ದರೆ ನನಗೆ ಹೊಸ ಗೆಳೆಯರ ಬಳಗ, ನನ್ನ ಎಸ್.ಡಿ.ಎಂ ಕಾಲೇಜಿನಲ್ಲೇ ಮತ್ತೆರಡು ವರ್ಷ ಕಲಿಯುವ ಅವಕಾಶ ಸಿಗುತ್ತಿರಲಿಲ್ಲ. ಜೊತೆಗೆ ನನ್ನ ಒಲವಿನ ಸಂಗಾತಿ ಕೂಡ…!
ಮೊದಲ ವರ್ಷ ಹಾಗೇ ಕಳೆದಿತ್ತು. ಆದರೆ ಆ ಬ್ರಹ್ಮ ನಮ್ಮಿಬ್ಬರ ಮಧ್ಯೆ ಆಗಲೇ ಗಂಟು ಬೆಸೆದಿದ್ದ ಎಂದುನಂತರವಷ್ಟೇ ತಿಳಿಯಿತು. ಪ್ರೀತಿ- ಪ್ರೇಮದ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದಿದ್ದ ನಾನು ಆಕೆಯ ವಿಷಯದಲ್ಲಿ ಯಾಕೋ ಭಿನ್ನವಾಗತೊಡಗಿದೆ. ಅದು ಆಕರ್ಷಣೆಗೂ ಮೀರಿದ್ದು, ಅದನ್ನೇ ಪ್ರೀತಿ ಅನ್ನುತ್ತಾರೇನೋ. ಯಾರಿಗೂ ಹೇಳದೆ ಕೇಳದೆ ‘ಬದುಕಿದರೆ ಇವಳೊಂದಿಗೆ ಮಾತ್ರʼ ಎಂಬ ಸೀರಿಯಸ್ ನಿರ್ಧಾರಕ್ಕೆ ಬಂದುಬಿಟ್ಟಿದ್ದೆ. ಆದರೂ ರೋಸ್ ಕೊಟ್ಟು ರೊಮ್ಯಾಂಟಿಕ್ ಆಗಿ ಪ್ರೀತಿ-ಪ್ರೇಮ ಎಂದುಬಿಟ್ಟರೆ, ಇರುವ ಅಮೂಲ್ಯ ಸ್ನೇಹವೂ ಹೋಗಿಬಿಟ್ಟೀತು ಎಂಬ ‘ಪುಕ್ಕಲುತನʼ !
ಅಂತೂ ಮನಸ್ಸಿನಲ್ಲಿರೋದನ್ನೆಲ್ಲಾ ಹೇಳಿ, ಪ್ರೀತಿ ಬೇಡವಾದರೂ ಸ್ನೇಹ ಬಿಡಬೇಡ ಎಂದು ಇಂಗ್ಲಿಷ್‌ನಲ್ಲಿ (ಆ ಇಂಗ್ಲಿಷ್ ಎಲ್ಲಿಂದ ಬಂತೋ!) ಒಂದಷ್ಟು ಉದ್ದದ ಇಮೇಲ್ ಕಳಿಸಿದ್ದೂ ಆಯಿತು! ಮನಸ್ಸಲ್ಲಿ ಮಾತ್ರ ಢವಢವ… ಏನು ಹೇಳುತ್ತಾಳೋ ಎಂಬ ಅಂಜಿಕೆ. ನನ್ನಿಂದ ಈ ರೀತಿಯ ಪ್ರೇಮ ನಿವೇದನೆಯನ್ನು ನಿರೀಕ್ಷೆಯೇ ಮಾಡಿರದಿದ್ದ ಆಕೆಯಿಂದ ಸಿಕ್ಕಿದ್ದು –‘ಯೋಚಿಸಿ ಹೇಳುತ್ತೇನೆʼ ಎಂಬ ಪ್ಲಾಟ್ ಪ್ರತಿಕ್ರಿಯೆ.
ಅಕ್ಟೋಬರ್‌ನಲ್ಲಿ ಕಳಿಸಿದ ಪತ್ರಕ್ಕೆ, ಉತ್ತರ ಸಿಕ್ಕಿದ್ದು ಮುಂದಿನ ಫೆಬ್ರವರಿ ಹನ್ನೊಂದರಂದು!. ಯಾರಿಗೆ ಬೇಕಪ್ಪಾ ನಾಲ್ಕು ತಿಂಗಳ ಆ ಕಾಯೋ ಕೆಲಸ. ಆದರೂ ಕಾದದ್ದು ಸಾರ್ಥಕವಾಯಿತು. ಆ ಒಲವಿನ ಸಂದೇಶದಿಂದ ನನಗಂತೂ ಸ್ವರ್ಗಕ್ಕೆ ಮೂರೇ ಗೇಣು ಅನ್ನುವಂತಾಗಿತ್ತು. ಜಾತಿ-ಧರ್ಮದ ಕಿರಿಕಿರಿ ಇಲ್ಲದಿದ್ದರಿಂದ ಲವ್ ಕಮ್ ಅರೇಂಜ್ಡ್ ಮ್ಯಾರೇಜಿಗೂ ಅಡ್ಡಿ ಎದುರಾಗಲಿಲ್ಲ.
ಮದುವೆಯೇನೋ ಆಯಿತು, ಜೀವನ ಸಾಗಬೇಕಲ್ಲಾ… ಅದಿನ್ನೂ ವೃತ್ತಿ ಜೀವನದ ಆರಂಭ. ಬಾಡಿಗೆ ಮನೆಯಲ್ಲಿ ವಾಸ. ಕನಸು ಕಾಣಲು ಅಲ್ಲಿ ಸಮಯವಿರಲಿಲ್ಲ. ಜೊತೆಗೆ ವರ್ಷ ಮುಗಿಯುವುದರೊಳಗೆ ಬೈಕ್‌ಆಕ್ಸಿಡೆಂಟ್, ಮಲೇರಿಯಾ ಹೀಗೆ ಸಾಲು ಸಾಲು ಸಂಕಷ್ಟಗಳು…
ನಿರ್ಧಾರ ಮಾಡಿಯಾಗಿತ್ತು, ಮತ್ತದು ಗಟ್ಟಿಯಾಗಿತ್ತು. ನಮ್ಮಿಬ್ಬರಿಗೂ ಅದು ಜೀವನದ ಆರಂಭವಷ್ಟೇ. ಕಲ್ಲು- ಮುಳ್ಳುಗಳ ಹಾದಿ ಸವೆಸುವುದು ಸಾಕಷ್ಟು ಕಷ್ಟವಿತ್ತು. ಅನಿರೀಕ್ಷಿತ ಬೆಳವಣಿಗೆಗಳು, ಬೇಡವೆಂದರೂ ತೆಗೆದುಕೊಳ್ಳಲೇಬೇಕಾಗಿದ್ದ ನಿರ್ಧಾರಗಳು ನಮ್ಮಿಬ್ಬರ ಆತ್ಮಸ್ಥೈರ್ಯವನ್ನೇ ಪರೀಕ್ಷಿಸಿದವು. ಆದರೆ ನಮ್ಮಿಬ್ಬರ ಪ್ರೀತಿಯ ಬಲದ ಮುಂದೆ ಕಷ್ಟಗಳು ಸೋತವು. ಪ್ರತಿ ಕ್ಷಣದಲ್ಲೂ ಜೊತೆಯಾಗಿ ನಿಂತ ಆಕೆ, ಸುಖಕ್ಕಿಂತ ದುಃಖದಲ್ಲೇ ಹೆಚ್ಚು ಪಾಲಿರಲಿ ಎಂಬ ಅಮೂಲ್ಯ ಪ್ರೀತಿಯನ್ನು ಇಂದಿಗೂ ಅರಿಯದಾಗಿದ್ದೇನೆ…
ನನಗೆ ತಿಳಿದಿದೆ. ನಾವಿನ್ನೂ ಕ್ರಮಿಸಬೇಕಾದ ದೂರ ಸಾಕಷ್ಟಿದೆ. ಆದರೆ ನನಗೀಗ ಧೈರ್ಯವಿದೆ. ಮತ್ತು ಆ ಧೈರ್ಯ ನೀನೇ ಆಗಿರುವೆ!. ಸುಖ- ದುಃಖದಲ್ಲಿ ಸದಾ ನೀನಿರುವೆ, ನನ್ನ ಮಾತು- ಮೌನ ಎರಡನ್ನೂ ನೀನು ಮತ್ತು ನೀನಷ್ಟೇ ಅರ್ಥ ಮಾಡಿಕೊಳ್ಳಬಲ್ಲೆ. ನೀನ್ಯಾವತ್ತೂ ನನ್ನ ಮೇಲೆ ನಿನ್ನ ನಿರೀಕ್ಷೆಯ ಭಾರ ಹೊರಿಸಿಲ್ಲ. ನನ್ನ ಸಂತೋಷದಲ್ಲೇ ಸುಖಿಯಾಗಿರುವ ನಿನಗೆ ನಾನು ಏನು ತಾನೆ ಕೊಡಬಲ್ಲೆ. ಒಂದಂತೂ ಹೇಳಬಲ್ಲೆ. ನಿನ್ನ ಜೊತೆ ನಾನಿದ್ದೇನೆ, ನಿನ್ನ ಪುಟ್ಟ ನಿರೀಕ್ಷೆಗಳನ್ನು ಈಡೇರಿಸಲು ನನ್ನ ಕೈಲಾದದ್ದನ್ನು ಮಾಡಬಲ್ಲೆ…ನಿನಗೂ ಬೇಕಿರುವುದು ಇಷ್ಟೇ ತಾನೇ…
ನಿನ್ನ ಪ್ರೀತಿಯ ಪರಿಯ ನಾನಿನ್ನೂ ಅರಿತಿಲ್ಲ. ಅದು ಸಾಗರದಂತೆ ಮಿತಿಯಿಲ್ಲದ್ದು, ಜೀವಾನಿಲದಂತೆ ಸ್ವಾರ್ಥವಿಲ್ಲದ್ದು ಎಂಬುದನ್ನಷ್ಟೇ ಬಲ್ಲೆ. ಹಾಗಾದರೆ ಈ ಪ್ರೀತಿಗೆ ನಾನು ಅರ್ಹನೇ, ಇದಕ್ಕೆ ಪ್ರತಿಯಾಗಿ ನಾನೇನು ಕೊಡಬಲ್ಲೆ ಎಂಬ ಯೋಚನೆ ಹಲವು ಬಾರಿ ಕಾಡಿದ್ದಿದೆ. ಉತ್ತರವೂ ದೊರೆತಿದೆ…ಇದಕ್ಕೆ ಬೇಕಿರುವುದೂ ಬರೀ ಪ್ರೀತಿಯಷ್ಟೇ…
ಪ್ರೀತಿಯನ್ನು ಹಗುರ ಮಾತುಗಳಿಂದ ಹಂಗಿಸುವಾಗ ಯಾಕೋ ನಮ್ಮ ಪ್ರೀತಿಯ ಬಗ್ಗೆ ಸಾರಿ ಹೇಳಬೇಕು ಅನಿಸುತ್ತದೆ. ಹಾಗಂತ ಪ್ರೀತಿ ನನಗೇನೂ ಹೊಸದಾಗಿರಲಿಲ್ಲ. ಒಂದು ಸಾಂತ್ವಾನದ ನುಡಿಯಿಲ್ಲದೆ, ತಮ್ಮವರಿಲ್ಲದೆ ನೊಂದ ಅದೆಷ್ಟೋ ಜೀವಗಳಿರುವ ಈ ಜಗದಲ್ಲಿ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅಪ್ಪ-ಅಮ್ಮ, ಅಣ್ಣ-ಅತ್ತಿಗೆ, ಬಂಧುಮಿತ್ರರನ್ನು ಪಡೆಯಲು ನಾನೆಷ್ಟು ಅದೃಷ್ಟ ಮಾಡಿದ್ದೆ. ಆದರೆ ನೀನಿಲ್ಲದೆ ನಾನು ಹೇಗಿರುತ್ತಿದ್ದೆ, ಜೀವನ ಅದೆಷ್ಟು ಅಪೂರ್ಣವಾಗಿರುತ್ತಿತ್ತು ಎಂಬ ಕಲ್ಪನೆಯೇ ನನ್ನನ್ನು ವಿಸ್ಮಿತನನ್ನಾಗಿಸುತ್ತದೆ…
ಹೌದು, ನನಗೆ ಜೀವನದಲ್ಲಿ ಇದಕ್ಕಿಂದ ದೊಡ್ಡ ವರ ಇನ್ನೇನು ಬೇಕು. ಉದ್ಯೋಗ ಬಿಟ್ಟು ಮತ್ತೆ ಓದಲೆಂದು ಬಂದಿದ್ದು ನಮ್ಮಿಬ್ಬರ ಭೇಟಿಗೆ ಆ ದೇವರೇ ಸೃಷ್ಟಿಸಿದ ನೆಪವೇ?! ಪ್ರೀತಿ-ಪ್ರೇಮ ಎಂಬ ಬಗ್ಗೆ ಆಸಕ್ತಿಯೇ ಇಲ್ಲದ ನಾನು “ಬದುಕಿದರೇ ಇವಳ ಜೊತೆಯೇ” ಎಂಬ ನಿರ್ಧಾರ ಮಾಡಿದ್ದಾದರೂ ಹೇಗೆ! ನಿನ್ನ ಮೇಲಿದ್ದ ಪ್ರೀತಿಯನ್ನು ಯಾರದೋ ಕಥೆ ಎಂಬಂತೆ ಹಂಚಿಕೊಳ್ಳುವ ಧೈರ್ಯ ನನಗೆ ಬಂದಿದ್ದಾದರೂ ಎಲ್ಲಿಂದ…!
ನಾನು ಯಾವತ್ತೂ ಒಂಟಿಯಾಗಿಲ್ಲ. ಆ ಭಾವನೆ ಒಂದು ಕ್ಷಣವೂ ಮನಸ್ಸಿನಲ್ಲಿ ಸುಳಿಯಲೂ ಆಕೆ ಬಿಟ್ಟಿಲ್ಲ. ನನ್ನನ್ನೇ ನಂಬಿ ಬಂದಾಕೆ, ತನ್ನ ಬೇಕು ಬೇಡಗಳನ್ನು ಕಡೆಗಣಿಸಿ ಅನುಕ್ಷಣವೂ ನನಗಾಗಿ ಬದುಕಿದ್ದಾಳೆ ಎಂದರೆ ಅದು ಸಾಮಾನ್ಯ ಸಂಗತಿಯಲ್ಲ. ನನಗೆ ಬದುಕು ಬಲು ಸುಂದರ ಅನಿಸುವಂತೆ ಮಾಡಿದ್ದು ಆಕೆಯೇ.
ಕಷ್ಟಗಳು ಪ್ರೀತಿಯನ್ನು ಪರೀಕ್ಷೆಗೆ ಒಡ್ಡುತ್ತವೆ. ಅನಿರೀಕ್ಷಿತ ಘಟನೆಗಳು, ಸೋಲುಗಳು ಭಾವನೆಗಳನ್ನು ಕದಡುತ್ತವೆ. ಆದರೆ ಎಲ್ಲವನ್ನೂ ಮೀರಿ ಜೊತೆಗೆ ನಡೆದಿದ್ದೇವೆ. ಪರೀಕ್ಷೆ ಗೆದ್ದಿದ್ದೇವೆ. ಆಕೆಗೂ ಹೀಗೇ ಅನಿಸೀತೇ….ಗೊತ್ತಿಲ್ಲ. ಆಕೆಯದು ನಗುವ ನಯನ ಮಧುರ ಮೌನ, ಮಿಡಿವ ಹೃದಯ… ಅದರೊಳಗೆ ನೋವೂ ಇದ್ದೀತೂ. ʼಕ್ಷಮಿಸುʼ ಎನ್ನುವ ಹಂತ ದಾಟಿ ಬಂದಿದ್ದೇವೆ. ಮಾತೆಂಬ ಔಪಚಾರಿಕತೆ ಈಗ ಬೇಕಿಲ್ಲ. ಇದುವೇ ನಿಜವಾದ ಪ್ರೀತಿಯಲ್ಲವೇ….
ಪಕ್ವ ಪ್ರೀತಿ ಕಷ್ಟ ಮರೆಸಿದೆ. ಈಗಲೂ ಬದುಕಿನಾಟ ಮುಂದುವರಿದಿದೆ. ಪ್ರೀತಿಯನ್ನೇ ಉಸಿರಾಡುವ, ನನ್ನ ಚಿಕ್ಕ ಕೋಪಕ್ಕೂ ಕಣ್ಣೀರಾಗುವ, ತಾಯಿ ಹೃದಯದ, ಮಗು ಮನಸ್ಸಿನ ಆಕೆಯಿದ್ದರೆ ನಾನು ನೂರೆಂಟು ವರ್ಷ ದಾಟಬಲ್ಲೆ! ಮಗ ಮಗಳಂತೂ ಜೀವನವನ್ನು ಮತ್ತಷ್ಟು ಸುಂದರವಾಗಿಸಿದ್ದಾರೆ.ಜೀವನ ಅಚ್ಚರಿಗಳ ಜೊತೆಗೆ ಅದೃಷ್ಟವನ್ನೂ ತರುತ್ತದೆ.
ಲೈಫ್ ಈಸ್ ಬ್ಯೂಟಿಫುಲ್…. ಅವಳು ಜೊತೆಗಿದ್ದರೆ ನನಗೆ ಅನುದಿನವೂ ಸುಂದರ ನಾಳೆಯಿದೆ!