ನಾನೂ ಪ್ರಸಿದ್ಧ ಕಾದಂಬರಿಯ ಪ್ರಮುಖ ಪಾತ್ರವಾದೆ
ಕಾಲ ಪುರುಷನ ನಡೆ ಅನೂಹ್ಯವಾದುದು.ಈ ಮಹನೀಯ ಆಳನ್ನೂ ಅರಸಾಗಿಸಬಲ್ಲ ,ಅರಸನನ್ನೂ ಆಳಾಗಿಸಬಲ್ಲ.
ಅಂತೆಯೇ ಕಾಸರಗೋಡಿನ ಕೋಳ್ಯೂರು ಎಂಬ ಪುಟ್ಟ ಹಳ್ಳಿಯಲ್ಲಿ ಬಡ ಮಧ್ಯಮ ವರ್ಗದ ಪುರೋಹಿತರ ಮಗಳಾಗಿ ಹುಟ್ಟಿದ ನನ್ನನ್ನೂ ಪ್ರಸಿದ್ಧ ಕಾದಂಬರಿಯೊಂದರ ಪ್ರಮುಖ ಪಾತ್ರವಾಗಿಸಿದ.
ಹೌದು..
ಖ್ಯಾತ ಸಾಹಿತಿ ಕಾದಂಬರಿಗಾರ ಕೃಷಿ ವಿಜ್ಞಾನಿ ಡಾ.ಗಣೇಶಯ್ಯ ಅವರ ಪತ್ತೆದಾರಿ ಶೈಲಿಯ ಐತಿಹಾಸಿಕ ಕಾದಂಬರಿ “ಬಳ್ಳಿ ಕಾಳ ಬಳ್ಳಿ”ಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಬಂದಿದ್ದೇನೆ
ಹೇಗೆ ಎಂಬುದನ್ನು ಖ್ಯಾತ ಕಾದಂಬರಿಗಾರ ಡಾಕೆ ಎನ್ ಗಣೇಶಯ್ಯನವರ ಮಾತುಗಳಲ್ಲೇ ಕೇಳಿ
"ಭೂತಾರಾಧನೆಯಲ್ಲಿ ಸತ್ಯವಾದ ಕಲ್ಪನೆ
"ನಗರ ಬಸದಿ ಕೇರಿಯಲ್ಲಿರುವ ಜಟ್ಟಿಗರ ಪೂಜಾಮಂಟದ ಬಳಿ ನಡೆಯುವ ಪೂಜೆಯನ್ನು ಕಾದಂಬರಿಯ ಒಂದು ಪ್ರಮುಖ ವಸ್ತುವನ್ನಾಗಿಸಿಕೊಳ್ಳುವ ಉದ್ದೇಶದಿಂದ ಹುಡುಕಾಡುತ್ತಿದ್ದೆ.ಡಾ.ಲಕ್ಷ್ಮೀ ಜಿ ಪ್ರಸಾದ ಎಂಬವರು ಬರೆದಿದ್ದ ಬ್ಲಾಗ್ ನಲ್ಲಿ ದೊರೆತ ಜಟ್ಟಿಗರ ಭೂತಾರಾಧನೆಯ ವಿವರಗಳು ನಾನು ಕಲ್ಪಿಸಿಕೊಂಡಿದ್ದ ಕೊಂಡಿ ಕೇವಲ ಕಲ್ಪನೆಯಲ್ಲ ಸತ್ಯ ಎನ್ನುವುದಕ್ಕೆ ಪ್ರಮುಖ ಆಧಾರ ಒದಗಿಸುವುದರ ಜೊತೆಗೆ ಭೂತಾರಾಧನೆಯನ್ನು ಚರಿತ್ರೆಯನ್ನು ಹೇಳುವ ಮಾಧ್ಯಮವಾಗಿ ಉಪಯೋಗಿಸಲು ಅನುವು ಮಾಡಿ ಕೊಟ್ಟವು ಕೂಡಾ.ತಕ್ಷಣ ಭೂತಾರಾಧನೆ ಬಗ್ಗೆ ಯೇ ಪಿ ಎಚ್ ಡಿ ಮಾಡಿ ಅನೇಕ ಪುಸ್ತಕಗಳನ್ನು ಅನೇಕ ಪ್ರಬಂಧಗಳನ್ನೂ ಬರೆದ ಭೂತಾರಾಧನೆಯ ಲಕ್ಷ್ಮೀ ಎಂದೇ ಗುರುತಿಸಲ್ಪಟ್ಟಿರುವ ಡಾ ಲಕ್ಷ್ಮೀ ಜಿ ಪ್ರಸಾದರನ್ನು ಸಂಪರ್ಕಿಸಿ ಹೆಚ್ಚಿನ ವಿವರಗಳಿಗಾಗಿ ಚರ್ಚಿಸಲು ಸಮಯ ಕೋರಿದಾಗ,ತಾವಾಗಿ ಮನೆಗೆ ಬಂದು ಸುಮಾರು ಮೂರು ಗಂಟೆಗಳ ನಮ್ಮ ಕುಟುಂಬದೊಂದಿಗೆ ಬೆರೆತು ತಮ್ಮ ಸಂಶೋಧನೆಯ ಹತ್ತಾರು ಅನುಭವಗಳನ್ನು ನೋವು ನಲಿವುಗಳನ್ನೂ ಹಂಚಿಕೊಳ್ಳುತ್ತಿದ್ದಂತೆ ಅವರೇ ಕಾದಂಬರಿಯ ಒಂದು ಪ್ರಮುಖ ಪಾತ್ರವಾಗಿ ರೂಪುಗೊಳ್ಳತೊಡಗಿದ್ದರು . ಹಾಗಾಗಿಯೇ ಅವರು ಡಾ.ಲಕ್ಷ್ಳೀ ಪೋದ್ದಾರಾಗಿ ಕಾದಂಬರಿಯಲ್ಲಿ ಕಾಣಿಸಿಕೊಂಡಿದ್ದಾರೆ.ಈ ಕಾರಣದಿಂದಲೇ ಲಕ್ಷ್ಮೀ ಪ್ರಸಾದ ಅವರ ಆಕರಗಳನ್ನು ಕಾದಂಬರಿಯಲ್ಲಿ. ಲಕ್ಷ್ಮೀ ಪೋದ್ದಾರ್ ಉದಾಹರಿಸುವುದು ಓದುಗರಿಗೆ ವಿಚಿತ್ರವಾಗಿ ಕಾಣಬಹುದು.ನಂತರ ಅವರು ಹಲವಾರು ಸಲಹೆಗಳನ್ನೂ ಪಾಡ್ದನಿಗಳ ಕನ್ನಡ ಮತ್ತು ತುಳು ಭಾಷಾಂತರವನ್ನೂ ,ನೇತ್ರಾಣಿಯ ಫೋಟೋಗಳನ್ನೂ ಒದಗಿಸಿಕೊಟ್ಟದ್ದರಿಂದ ಕಾದಂಬರಿಗೆ ಹೊಸ ಆಯಾಮವೇ ದೊರೆಯಿತು .ಬಳ್ಳಿ ಕಾಳ ಕರಿಮೆಣಸು ಸಂಪೂರ್ಣವಾಗಿ ಸಂಸ್ಕರಣಗೊಂಡು ಬಿಳಿಯ ಮೆಣಸಾಯಿತು "
ಈ ಮಾತನ್ನು ಗಣೇಶಯ್ಯನವರು ಕಾದಂಬರಿಯ ಕೊನೆಯಲ್ಲಿ ಹೇಳಿದ್ದಾರೆ
ಇಲ್ಲಿ ನನ್ನ ಪಾತ್ರ ಲಕ್ಷ್ಮೀ ಪೊದ್ದಾರ್ ಎಂಬ ತುಳು ಜಾನಪದ ಸಂಶೋಧಕಿಯದು
ನಮ್ಮದು ಪುರುಷ ಪ್ರಧಾನ ಸಮಾಜ.ನಡು ರಾತ್ರಿ ಹಳ್ಳಿಗಳ ಮೂಲೆ ಮುಡುಕುಗಳಲ್ಲಿ ನಡೆಯುವ ಅನೇಕ ವಿಧಿ ನಿಷೇಧಗಳು ಇರುವ ಅತ್ಯಂತ ಪರಿಶ್ರಮ ಬೇಡುವ ಭೂತಾರಾಧನೆಯ ಅಧ್ಯಯನ ಮಾಡಲು ಪುರುಷರೂ ಹಿಂದೇಟು ಹಾಕುತ್ತಾರೆ.ನಾನು ಅನೇಕ ಸವಾಲುಗಳನ್ನು ಎದುರಿಸುತ್ತಾ ಕ್ಷೇತ್ರ ಕಾರ್ಯ ಆಧಾರಿತ ಅಧ್ಯಯನ ಮಾಡಿ ಬರೆದಾಗ ಅದರ ಬಗ್ಗೆ
ಆ ಪೊಣ್ಜೋವುದ ಪಾತೆರನು ಎಂಕ್ಲು ಲೆಕ್ಕೊಗು ದೀಪುಜ ( ಆ ಹೆಂಗಸಿನ ಮಾತನ್ನು ನಾವು ಲೆಕ್ಕಕ್ಕೆ ಇಡುವುದಿಲ್ಲ ) ಎಂದವರೂ ಇದ್ದರು
ಆದರೆ ಗಣೇಶಯ್ಯನವರರು ಹಾಗೆ ಮಾಡದೆ ನಾನು ಬ್ಲಾಗ್ ನಲ್ಲಿ ಬರೆದಿದ್ದ ಜಟ್ಟಿಗ ದೈವಗಳ ಕುರಿತಾದ ಬರಹದಲ್ಲಿ ರಾಣಿ ಭೈರಾದೇವಿಯ ಬದುಕಿನ ಕಥೆಯು ಸೂಚ್ಯವಾಗಿ ಇದೆ ಎಂದು ಗ್ರಹಿಸಿದರು
ಡಾಕೆ ಎನ್ ಗಣೇಶಯ್ಯನವರ ಬಳ್ಳಿ ಕಾಳ ಬೆಳ್ಳಿ ಕಾದಂಬರಿ ಓದಿದ ನೂರಾರು ಮಂದಿ ನನ್ನನ್ನು ಗುರುತಿಸಿದ್ದಾರೆ,ಮಾತನಾಡಿದ್ದಾರೆ
ನಾನು ಎಂದಾದರೊಂದು ದಿನ ಕಥೆ ಕಾದಂಬರಿಗಳ ಪಾತ್ರ ಆಗುವೆನೆಂದು ಕನಸಲ್ಲೂ ಊಹಿಸಿರಲಿಲ್ಲ
2016ನೇ ಇಸವಿ.. ಬಹುಶಃ ಆಗಷ್ಟ್ ತಿಂಗಳು ಇರಬೇಕು
ನನ್ನ ಇ ಮೇಲ್ ಗೆ ಒಂದು ಸಂದೇಶ ಬಂತು,ಜಟ್ಟಿಗ ದೈವಗಳ ಬಗ್ಗೆ ಮಾಹಿತಿ ಬೇಕಾಗಿದೆ , ಪ್ರಸ್ತುತ ಜರ್ಮನಿಯಲ್ಲಿ ಇದ್ದೇನೆ , ಮುಂದೆ ಸಂಪರ್ಕಿಸುವೆ ಎಂದು,
ನನಗೆ ಇ ಮೇಲ್ ಗೆ ತುಂಬಾ ಮೆಸೇಜ್ ಗಳು ಬರುತ್ತಿರುತ್ತವೆ ಹಾಗಾಗಿ ಕಳುಹಿದ್ದು ಯಾರೆಂದು ನಾನು ಅಷ್ಟಾಗಿ ಗಮನಿಸಿರಲಿಲ್ಲ
ಇದಾಗಿ ಸ್ವಲ್ಪ ಸಮಯದ ನಂತರ ವಾಟ್ಸಪ್ ಗೆ ಮೆಸೇಜ್ ಮಾಡಿದರು.ನಾನು ಆಗಷ್ಟೇ ಇಂಟರ್ ನೆಟ್ ಬಳಕೆ ಶುರು ಮಾಡಿದವಳು.ನನಗೆ ಉತ್ತರಿಸಲು ಭಯ ಆತಂಕ.. ಹಾಗಾಗಿ ಸುಮ್ಮನಿದ್ದೆ
ಅದರ ನಂತರ ಒಬ್ಬರು ಕರೆ ಮಾಡಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರೊಫೆಸರ್ ಕೃಷಿ ವಿಜ್ಞಾನಿ ಡಾ ಕೆ ಎನ್ ಗಣೇಶಯ್ಯನವರು ಮಾತನಾಡುತ್ತಾರೆನಾನವರ ವಿದ್ಯಾರ್ಥಿ ಎಂದು ಹೇಳಿದರು.ಆಯಿತು ಎಂದು ಹೇಳಿದೆ
ಇದಾಗಿ ಕೆಲ ದಿನಗಳ ನಂತರ ಡಾ.ಗಣೇಶಯ್ಯನವರು ಕರೆ ಮಾಡಿ ನಾನು ಬ್ಲಾಗ್ ನಲ್ಲಿ ಹಾಕಿದ್ದ ಜಟ್ಟಿಗ ದೈವಗಳ ಬಗ್ಗೆ ಮಾತನಾಡಬೇಕಿತ್ತು, ಯಾವಾಗ ಬರಲಿ ಎಂದು ಕೇಳಿದರು
ನಾನು ಒಂದು ದಿನ ನಾನು ಆಗ ಕೆಲಸ ಮಾಡುತ್ತಿದ್ದ ನೆಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜಗೆ ಬರಲು ತಿಳಿಸಿದೆ
ದುರದೃಷ್ಟವಶಾತ್ ಆ ದಿನ ನನಗೆ ಆಫೀಸ್ ಕೆಲಸದ ಮೇಲೆ ಬೇರೆ ಕಡೆಗೆ ನಮ್ಮ ಪ್ರಾಂಶುಪಾಲರು ನಿಯೋಜನೆ ಮಾಡಿದರು.
ಇದು ಗೊತ್ತಾದ ಕೂಡಲೇ ಗಣೇಶಯ್ಯನವರಿಗೆ ಫೋನ್ ಮಾಡಿ ಈ ದಿನ ಬರುವುದು ಬೇಡ ಎಂದು ತಿಳಿಸಿದೆ
ಅದಾಗಿ ಒಂದು ವಾರದೊಳಗೆ ಅವರ ಸಮಯ ಕೇಳಿಕೊಂಡು ನಾನೇ ಹೋದೆ . ಜಟ್ಟಿಗ ದೈವದ ಕುರಿತು ನನ್ನಲ್ಲಿರುವ ಮಾಹಿತಿ ಫೋಟೊಗಳನ್ನು ನೀಡಿದೆ, ಜೊತೆಗೆ ಭೂತಾರಾಧನೆಯ ಕುರಿತಾದ ನನ್ನ ಅಧ್ಯಯನವನ್ನು ತಿಳಿಸಿದೆ
ಮೂರು ಗಂಟೆ ಮಾತು ಕಥೆಯ ನಂತರ ನಾನು ಮನೆಗೆ ಹೊರಟಾಗ ಅವರು ನನ್ನ ಕಾದಂಬರಿಯಲ್ಲಿ ನಿಮ್ಮನ್ನು ಒಂದು ಪಾತ್ರ ಮಾಡುತ್ತೇನೆ ಎಂದರು.
ನನ್ನನ್ನಾ? ಎಂದು ಅಚ್ಚರಿಯಿಂದ ಕೇಳಿದೆ , ಹೌದು ನೀವು ಕಾದಂಬರಿಯಲ್ಲಿ ಡಾ ಲಕ್ಷ್ಮೀ ಪೋದ್ದಾರ್ ಎಂಬ ಹೆಸರಿನ ಪಾತ್ರ ಆಗಿರುತ್ತೀರಿ ಎಂದರು
ನಾನು ಎಂದೂ ಕಾದಂಬರಿ ಬರೆದಿಲ್ಲ.ಕಾದಂಬರಿಯಲ್ಲಿ ಮಂದಣ್ಣನಂತಹ ಜೀವಂತ ಪಾತ್ರಗಳನ್ನು ಬಳಸಿರುವ ಕರ್ವಾಲೋ ಕಾದಂಬರಿ ಓದಿದ್ದೆ.ಮಂದಣ್ಣನಿಗೆ ಅವರದ್ದೇ ಆದ ವಿಶಿಷ್ಟ ಜ್ಞಾನ ಗುಣ ಸ್ವಭಾವಗಳು ಇವೆ ಹಾಗಾಗಿ ಕಾದಂಬರಿಯ ಪಾತ್ರವಾಗಿರುವುದರಲ್ಲಿ ಅಚ್ಚರಿ ಏನಿಲ್ಲ.
ನನ್ನಲ್ಲಿ ಅಂತಹದ್ದು ಏನಿದೆ? ಎಂದು ಅರ್ಥವಾಗಲಿಲ್ಲ.
ಇದಾಗಿ ಎರಡು ತಿಂಗಳ ನಂತರ ಎರಡು ಕನ್ನಡ ಕವಿತೆಗಳನ್ನು ಕಳುಹಿಸಿ ತುಳುವಿಗೆ ಅನುವಾದಿಸಿ ಕೊಡಲು ಗಣೇಶಯ್ಯನವರು ಕೇಳಿದರು.ನಾನು ಅನುವಾದಿಸಿ ಕೊಟ್ಟೆ.
ನನಗೂ ಕಥೆಗಳನ್ನು ಬರೆಯುವ ಅಭ್ಯಾಸ ಇದ್ದ ಕಾರಣ ಕಾದಂಬರಿಯ ತುಸು ಭಾಗವನ್ನು ಊಹಿಸಿದೆ.ಈ ಕಾದಂಬರಿಯಲ್ಲಿ ಬರುವ ರಹಸ್ಯಾತ್ಮಕ ಗೂಢಾರ್ಥ ಇರುವ ತುಳು ಹಾಡನ್ನು ತುಳುವಿನಿಂದ ಕನ್ನಡಕ್ಕೆ ಅನುವಾದಿಸುವ ಸಣ್ಣ ಪಾತ್ರ ನನ್ನದು ಇರಬಹುದು ಎಂದು ಊಹಿಸಿದ್ದೆ
ಆದರೆ ಖ್ಯಾತ ಸಾಹಿತಿ ಕಾದಂಬರಿಗಾರ ಕೃಷಿ ವಿಜ್ಞಾನಿ ಡಾ.ಗಣೇಶಯ್ಯ ಅವರ ಪತ್ತೆದಾರಿ ಶೈಲಿಯ ಐತಿಹಾಸಿಕ ಕಾದಂಬರಿ “ಬಳ್ಳಿ ಕಾಳ ಬಳ್ಳಿ”ಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಬಂದಿದ್ದೇನೆ
ಇಲ್ಲಿ ಲಕ್ಷ್ಮೀ ಪೋದ್ದಾರ್ ಗೆ ಪ್ರಮುಖ ಪಾತ್ರವಿದೆ
ನಾನು ಭೂತಾರಾಧನೆ ಬಗ್ಗೆ ಹೇಳುವ ವಿಚಾರಗಳನ್ನು ಲಕ್ಷ್ಮಿ ಪೋದ್ದಾರ್ ಮೂಲಕ ಕವಿ ಜನತೆಯ ಎದುರು ಇಟ್ಟಿದ್ದಾರೆ ಭೂತಾರಾಧನೆಯಲ್ಲಿ ಅಡಕವಾಗಿರುವ ಐತಿಹಾಸಿಕ ವಿಚಾರಗಳು ಕೂಡ ಕಾದಂಬರಿಗೆ ಆಕರವಾಗಬಲ್ಲವು ಎಂಬುದನ್ನು ಅವರು ತೋರಿಸಿಕೊಟ್ಟಿದಾರೆ.
ಈ ಹಿಂದೆ ಡಾ .ಅಮೃತ ಸೋಮೇಶ್ವರ ಅವರು ತುಳುವರ ಪಾಡ್ದನ ಹಾಗೂ ಭೂತಾರಾಧನೆ ಕುರಿತು ತಿಳಿಸಲು ನಾಟಕ ಕಾದಂಬರಿ ಕಥೆಗಳನ್ನು ರಚಿಸಿ ಜನರ ಮುಂದಿಡಬೇಕು ಎಂದು ಹೇಳಿದ್ದರು.
ಈಜೋ ಮಂಜೊಟ್ಟಿ ಗೋಣ ಪಾಡ್ದನ ಹಾಗೂ ಉರವ, ಎರಡು ಬಂಟ ದೈವಗಳ ಕಥಾನಕವನ್ನು ಆಧರಿಸಿ ನಾನು ಒಂದು ಸಣ್ಣ ನಾಟಕ ಬರೆದಿದ್ದು ನಮ್ಮ ವಿದ್ಯಾರ್ಥಿಗಳ ಮೂಲಕ ಪ್ರದರ್ಶನ ಮಾಡುವ ಯತ್ನ ಮಾಡಿದ್ದೆ
ಆದರೆ ಇವೆಲ್ಲ ತುಳು ಸಂಸ್ಕೃತಿ ಯ ಅರಿವಿರುವವರಿಗೆ ಮಾತ್ರ ಸ್ಪಷ್ಟವಾಗಿ ಅರ್ಥವಾಗಲು ಸಾಧ್ಯ ಯಾಕೆಂದರೆ ಅಲ್ಲಿ ತುಳುವಿನ ಭೂತಪದಕ್ಕೆಇರುವ ಅರ್ಥ ಆರಾಧನಾ ಸ್ವರೂಪದ ಬಗ್ಗೆ ಹೇಳಿಲ್ಲ ಬಹುಶಃ ಮೊದಲ ಬಾರಿಗೆ ತುಳುನಾಡಿನ ಭೂತಾರಾಧನೆ ಬಗ್ಗೆ ಕನ್ನಡ ಕಾದಂಬರಿಯಲ್ಲಿ ಈ ರೀತಿಯ ಮಾಹಿತಿಯನ್ನು ನೀಡಿದವರು ಡಾ. ಗಣೇಶಯ್ಯ ಅವರೇ ಇರಬೇಕು
ಈ ಕಾದಂಬರಿಯಲ್ಲಿ ಚೌಂಡಿ ಮತ್ತು ಜಟ್ಟಿಗ/ ಜತ್ತಿಂಗ ದೈವಗಳ ಕಥಾನದಲ್ಲಿ ಚೆನ್ನ ಭೈರಾದೇವಿಯ ಇತಿಹಾಸದ ಎಳೆಯನ್ನು ಕಂಡುಕೊಂಡದ್ದು ಅವರ ತೀವ್ರ ವಿಚಕ್ಷಣಾ ಗುಣಕ್ಕೆ ಸಾಕ್ಷಿಯಾಗಿದೆ
ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಕುರಿತಾಗಿ ಸಾಕಷ್ಟು ಇತಿಹಾಸದ ಮಾಹಿತಿ ಇದೆ. ನಿಧಿ ಶೋಧದ ಕಥಾನಕ ಬಿಟ್ಟರೆ ಉಳಿದೆಲ್ಲವೂ ಅದರಲ್ಲಿ ಇರುವುದು ನಡೆದು ಹೋದ ಸತ್ಯ ಘಟನೆಗಳು
ಕನ್ನಡ ಖ್ಯಾತ ಕಾದಂಬರಿಗಾರರಾದ ಡಾ.ಕೆ ಎನ್ ಗಣೇಶಯ್ಯ ಅವರ ಐತಿಹಾಸಿಕ ಮತ್ತು ಕಾಲ್ಪನಿಕ ಕಥಾವಸ್ತು ಇರುವ ಬಳ್ಳಿ ಕಾಳ ಬೆಳ್ಳಿಯಲ್ಲಿ ನಾನು ತುಳು ಸಂಶೋಧಕಿ ಡಾ.ಲಕ್ಷ್ಮೀ ಪೋದ್ದಾರ್ ಎಂಬ ಪ್ರಮುಖ ಪಾತ್ರವಾಗಿರುವದ್ದು ನನ್ನ ಬದುಕಿನ ಅವಿಸ್ಮರಣೀಯ ಅನುಭವ ಆಗಿದೆ
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜು
ಬೆಂಗಳೂರು
0 Followers
0 Following