ಒಲವಿನ ಖಾತೆ ತೆರೆದವನು ನಾನು

ಒಲವಿನ ಖಾತೆ

ProfileImg
17 Jan '24
3 min read


image

ಒಲವಿನ ಖಾತೆಒಲವಿನ ಖಾತೆ ತೆರೆದವನು ನಾನೇ..ಅದೇ ಒಲವಿನ ಖಾತೆ..ಮುಚ್ಚಿದವನೂ ನಾನೇ..

ಮನದ ಮಾಮರದಲ್ಲಿ ಹಾಡಬೇಕಿದ್ದ ಕೋಗಿಲೆ..ಒಮ್ಮೆಲೆ ಮೂಕವಾದಾಗ..ಕನಸುಗಳೇ ಬತ್ತಿ ಹೋಗಿದ್ದ ನಿದ್ರೆ ಕಂಗಳ ಬಳಿಗೆ ಸರಿದು ಬರದಿದ್ದಾಗ..ಎದೆಯ ಕಪಾಟಿನಲ್ಲಿ ಬೆಚ್ಚಗಿದ್ದ ಪ್ರೇಮಹಕ್ಕಿ..ಒಮ್ಮೆಲೆ ಪ್ರೇಮಗೂಡು ತೊರೆದು ಹಾರಿಹೋದಾಗ..ಈಗ ಅನಿಸುತ್ತಿದೆ..ಒಲವೇ..ನನಗೀಗ ಅರಿವಾಗುತ್ತಿದೆ ಒಲವೇ.. ನನಗೀಗ ಖಚಿತವಾಗುತ್ತಿದೆ.. ನನ್ನ ನೋವಿಗೆ.. ತಲ್ಲಣಗಳಿಗೆ..ನನಗಾಗುತ್ತಿರುವ ಮಾನಸಿಕ ಹಿಂಸೆಗೆ.. ಅಲ್ಲೋಲಕಲ್ಲೋಲವಾಗುತ್ತಿರುವ ಬದುಕಿನ ಅಸ್ಥಿರತೆಗೆ..ಅನುದಿನವೂ.. ಅನುಕ್ಷಣವು ಅನುಭವಿಸುತ್ತಿರುವ ನರಕ ಯಾತನೆಗೆ..ಕಾರಣವೇನೆಂದು ಈಗ ಅರಿವಾಗುತ್ತಿದೆ ಒಲವೇ.. 
ಒಂದು ನಿಸಾಯಕ ಹೆಣ್ಣಿನ ನಿಟ್ಟುಸಿರು.. ಅವಳೆದೆಯ ನೋವು.. ಅವಳ ಮನಸ್ಸಿನಲ್ಲಿ ಮಾಡಿದ ಮೂಕ ರೋಧನೆ.. ಕೊನೆಯ ಕ್ಷಣದವರೆಗೂ ಅವಳು ಶಬರಿಯಂತೆ ಕಾದಿದ್ದ ಆ ಕ್ಷಣ.. ಅಂತಿಮ ಘಳಿಗೆಯವರೆಗೂ ನಾನು ಬಂದೇ ಬರುತ್ತೇನೆ ಎಂದು ಪರಿತಪಿಸಿದ್ದ ಮನಸ್ಸು.. ಕಾದು ನೋಡಿ ಸೊರಗಿದ್ದ
ಆ ಮುಗ್ಧ ಕಂಗಳು.. ಆ ಕಂಗಳಿಂದ ಅವಷ್ಟಕವೇ ಕೆನ್ನೆಯ ಮೇಲೆ ಜಾರಿದ್ದ ಕಣ್ಣೀರು.. ಕಲ್ಯಾಣ ಮಂಟಪದ ಹೆಬ್ಬಾಗಿಲ ಕಡೆಗೆ ಆಗಾಗ ಹೊರಳುತ್ತಿದ್ದ ಆ ಅಮಾಯಕ ಬಟ್ಟಲು ಕಂಗಳ ನೋಟ.. ಕ್ಷಣ ಕ್ಷಣಕ್ಕೂ  ಸದಾ ಮಿನುಗುತ್ತಿದ್ದ ಆ ನೋಟದಲ್ಲಿ ಕುಂದುತ್ತಿದ್ದ ಕಾಂತಿ.. ಮನದಾಳದಲ್ಲಿ ಹೆಮ್ಮರದಂತೆ ಬೆಳೆದು ನಿಂತಿದ್ದ ಆಶಾ ಗೋಪುರ ಒಮ್ಮೆಲೇ ನೆಲಕ್ಕೆ ಕುಸಿಯುವ ಅನುಭವ..
ಇಷ್ಟವಿಲ್ಲದೆಯೇ ಸಿಂಗಾರಗೊಂಡು ಹಸೆಮಣೆ ಏರಿದ್ದವಳ ಮುದ್ದು ಮೊಗದಲ್ಲಿ ನಿರಾಸೆಯ ಭಾವ..
ಮೆಹಂದಿಯ ಚಿತ್ತಾರ ಹಚ್ಚಿದ್ದ ನವಿರಾದ ಕೈಗಳಲ್ಲಿ ಅದೇಕೋ ಸಣ್ಣಗೆ ನಡುಕ... ಕೆಲವೇ ಕ್ಷಣಗಳು..ಅಷ್ಟೇ.. ನೂರಾರು ಕನಸು ಕಂಡಿದ್ದ ಈ ಬದುಕು..ಇನ್ನೊಬ್ಬರ ಜೊತೆಗೆ ಬಲವಂತದಿಂದ ತಳುಕು ಹಾಕಿಕೊಳ್ಳುವ ಸಮಯ..ಮನದಲ್ಲಿ ನೆಲೆಸಿರುವವನಿಗೆಂದೇ ಮೀಸಲಿಟ್ಟ ಈ ಶರೀರ.. ಇನ್ನೊಬ್ಬರ ತೆಕ್ಕೆಗೆ ಜಾರಿಹೋಗುವ ಸಮಯ..ಆರಾಧಿಸಿದ್ದವನ ಜೊತೆ ತುಳಿಯಬೇಕಿದ್ದ ಸಪ್ತಪದಿ..ಇನ್ಯಾರದೋ ಹೆಜ್ಜೆಗೆ ಹೆಜ್ಜೆ ಬೆರೆಸಬೇಕಾದ ಸಮಯ..ಅಂತರಂಗದ ಅರಸನ ಆಜ್ಞೆಗೆಂದೇ ಕದಲುತಿದ್ದ ತಲ್ಲಣಗಳು..ಇನ್ಯಾರದ್ದೋ ಅನುಮತಿಗೆ ಕಾಯುವಂತಹ ಪರಿಸ್ಥಿತಿ..ನೊಂದು ಬಿಟ್ಟೆ..ಒಲವೇ..ಅಲ್ಲ..ಅಲ್ಲ..ನೋಯಿಸಿಬಿಟ್ಟೆ..ನಾನು..
ಆದರೂ ಕೊನೆಗೂ ಬರಲಿಲ್ಲ ನಾನು..

( ಮುಂದಿನ ಭಾಗದಲ್ಲಿ )

-------------------------------------------------

ಶೀರ್ಷಿಕೆ :- ಒಲವಿನ ಖಾತೆ ತೆರೆದವನು ನಾನು

ಗೆಳತಿ..ನಿನ್ನಯ ಸ್ನಿಗ್ದ ಚೆಲುವಿನ
ಮುದ್ದಾದ ಮುಗ್ಧ ಮೊಗವನು
ನನ್ನ ಬೊಗಸೆ ಕೈಗಳಲ್ಲಿ ಹಿಡಿದು
ಸೃಷ್ಟಿಕರ್ತನಿಗೆ ಧನ್ಯವಾದ ಹೇಳಿದವನು ನಾನು..||
 
ಗೆಳತಿ..ನಿನ್ನಯ ಅರಳು ಕಂಗಳನು
ಕಂಗಳಿಗಿಟ್ಟ ಕಾಡಿಗೆ ಸೊಬಗನು
ನನ್ನ ತೋರ್ಬೆರಳಿನಿಂದ ಸ್ಪರ್ಶಿಸಿ 
ಮನದಿ ಸಂತಸ ಪಟ್ಟವನು ನಾನು..||

ಗೆಳತಿ..ನಿನ್ನಯ ನೀಳ ನಾಸಿಕವನು 
ಮೂಗಿಗಿಟ್ಟ ಮೂಗುತಿಯ ಹೊಳಪನು 
ನನ್ನ ಕಣ್ಣ ಕಾಂತಿಯೊಳಗೆ ಬಚ್ಚಿಟ್ಟು 
ಕಂಗಳಾನಂದ ಪಟ್ಟವನು ನಾನು..||

ಗೆಳತಿ.. ನಿನ್ನ ಕೆನ್ನೆಯ ಲಜ್ಜೆಯನು
 ಕೆನ್ನೆಯಿಳಿಜಾರಿನಲ್ಲಿಟ್ಟ ದೃಷ್ಟಿ ಚುಕ್ಕಿಯನು
ಮೈ ಮರೆತವನಂತೆ ದಿಟ್ಟಿಸಿ 
ಆ ಚುಕ್ಕಿಯಲ್ಲಿ ಸಿಕ್ಕಿಕೊಂಡವನು ನಾನು..||

 ಗೆಳತಿ.. ನಿನ್ನಯ ನವಿರಾದ ಹಣೆಯನು
   ಹಣೆಗಿಟ್ಟ ಸಿಂಧೂರದ ಬೊಟ್ಟನು 
ತನ್ಮಯತೆಯ ಮನದಿಂದ ನೋಡಿ
ತಬ್ಬಿಬ್ಬಾಗಿ ಹೋದವನು ..ನಾನು..||

ಗೆಳತಿ.. ನಿನ್ನಯ ಚೆಂದದ ತುಟಿಯನು
ಚೆಂದುಟಿಯಲಿ ಮಿನುಗುವ ನಗುವನು
ಮನದ ಕಪಾಟಿನಲ್ಲಿ ಬಂಧಿಸಿಟ್ಟು 
ಆ ನಗುವಿಗೆ ಮನಸೋತವನು ನಾನು..||

ಗೆಳತಿ..ನಿನ್ನಯ ಕಚ್ಚಿ ತಿನ್ನುವಂತಿದ್ದ ಗಲ್ಲವನು 
ಗಲ್ಲದ ಮೇಲೆ ನೆಲೆಸಿದ್ದ ಹುಟ್ಟುಮಚ್ಚೆಯನು
ಎದೆಯಾಳದಲ್ಲಿ ಹಚ್ಚೊತ್ತಿದಂತೆ ಬಚ್ಚಿಟ್ಟು 
ಆ ಹುಟ್ಟುಮಚ್ಚೆಗೆ ಮರುಳಾದವನು ನಾನು..||

ಗೆಳತಿ.. ನಿನ್ನಯ ಹಣೆಗೆ ಜಾರಿದ ಮುಂಗುರುಳನು
ಸರಿದಾಡುವ ಮುಂಗುರುಳ ಸೊಗಸನು 
ಒಲವಿನ ತಂಗಾಳಿಯಲ್ಲಿ ಸೆರೆಯಾಗಿಸಿ 
ಹೃದಯದಲಿ ಒಲವಿನ ಖಾತೆ ತೆರೆದವನು ನಾನು..||

 ಗೆಳತಿ.. ನಿನ್ನಯ ಕಿವಿಗಿಟ್ಟಿದ್ದ ಓಲೆಯನು
ನೇತುಬಿಟ್ಟ ಜುಮುಕಿಯ ವೈಯ್ಯಾರವನು
ನಿನ್ನ ನಡುವಿನ ಬಳುಕುವಿಕೆಗೆ ಹೋಲಿಸಿ
ಕಲ್ಪನೆಯಲ್ಲೇ ಸರಸಕ್ಕಿಳಿದವನು ನಾನು..||

ಗೆಳತಿ ನಿನ್ನಯ ಶಂಖದಂತಿರುವ ಕೊರಳನು
ಕೊರಳಿನ ಇಳಿಜಾರಿನಲ್ಲಿನ ಸುಖದ ತಾಣವನು
ಊಹಾ ಲೋಕದ ಚಿತ್ರಪಟವಾಗಿಸಿ
ವಿರಹಕ್ಕಿಳಿದು ವಿಹಾರಗೈದವನು ನಾನು ||

--------------------------------------------------

ಶೀರ್ಷಿಕೆ :- ಎಳ್ಳು ಬೆಲ್ಲವ ಸವಿ
 

ಮುಂಜಾನೆಯ ಎಳಬಿಸಿಲು ಇಳೆದೇವಿಯ ಮುದ್ದಿಸಿ
ಭೂರಮೆಯ ಹಣೆಯಲಿ ನೆಲೆಸಿದ ಶುಭಘಳಿಗೆ..
ಬಿಮ್ಮನೆ ಅರಳುತಿರುವ ಕುಸುಮಗಳ ಒಡಲೊಳಗೆ
ಘಮ್ಮನೆ ಪರಿಮಳಿಸಿದೆ  ಹರೆಯದ ಹೂನಗೆ..||

ವರ್ಷಾರಂಭದಲಿ ಅಡಿಯಿರಿಸುತ ಬರುವುದು
ಪಶುಪಕ್ಷಿಗಳ ಸಂಗಾತಿಯೆಂದೆನಿಸಿದ ಸಂಕ್ರಾಂತಿ..
ಪ್ರಕೃತಿಯ ತನುವಿಗೆ ಹಿಮಚಾದರವನು ಸುರಿದು
ಸರಿಸುವುದು ಮನುಜನ ಅಸಡ್ಡೆಯೆಂಬ ಭ್ರಾಂತಿ..||

ಘಮ ಘಮಿಸುತ..ಹಿರಿಹಿರಿ ಹಿಗ್ಗುತ ಬರುತಿಹುದು
ರೈತನ ಅನುಗಾಲದ ಮಿತ್ರನೆಂದೆನಿಸಿದ ಸುಗ್ಗಿಕಾಲ..
ಹೊಲದ ಸಾಲುಗಳಲಿ ಸೊಗಡಾಗಿ ಪರಿಮಳಿಸುವ
ಅವರೆಕಾಯಿಯ ಮೈನಡುಗಿಸಿ ನಕ್ಕಿಹುದು ಚಳಿಗಾಲ..||

ಬಾಲನೇಸರನಿಗೆ ತುಂಬೆಹೂವಿನ ತೋರಣವ ಕಟ್ಟಿ
ಸಂಕ್ರಾಂತಿಯ ಸಂಭ್ರಮಕೆ ಎಳ್ಳು ಬೆಲ್ಲವ ಸವಿದು..
ಸಂಕ್ರಮಣದ ಹಾದಿಗೆ ಮೇಘಗಳನು ಚೆಲ್ಲಿಹುದು
ಇಳಿಸಂಜೆ ಭಾಸ್ಕರನ ಹೊಂಗಿರಣಗಳು ಮುನಿದು..||

ಬೆಲ್ಲದ ಅಚ್ಚು..ಒಣಕೊಬ್ಬರಿ..ಕಬ್ಬಿನ ಜಲ್ಲೆ ತಿಂದು
ಮಲ್ಲಿಗೆಯ ಮುಡಿಯುವ ಕಾಡುಕನ್ಯೆಯ ಅಂದ..
ಮನೆಮನೆಯ ಕೊಟ್ಟಿಗೆಗಳನು ಅಲಂಕಾರ ಗೈದು
ಸಿಂಗಾರಮಾಡಿದ ಗೋಮಾತೆ ನೋಡಲು ಚೆಂದ..||

ಬೆಳೆದುನಿಂತಿದ್ದ ಹಸಿರು ಪೈರಿನ ಫಸಲನು ಕೊಯ್ದು
ಹರ್ಷಿಸುವ ನೆಲದಯೋಗಿಯ ಮನವೆಷ್ಟು ಸೊಗಸು
ಸೂರ್ಯದೇವನ ಪೂಜಿಸುತ.. ಹಬ್ಬದ ಸಂಭ್ರವನು 
ಕಣ್ತುಂಬಿಕೊಳ್ಳಲು ಹೂವಂತೆ ಅರಳುತಿದೆ ಮನಸು..||

--------------------------------------------------

ಶೀರ್ಷಿಕೆ :- ನೀ ಬರೆದ ಸಂಕಲನ

ನನ್ನನು ಇರುಳಲಿ ಕಾಡುತಿರುವ ಕನಸುಗಳಿಗೆ
ನನ್ನೆದೆಯಲಿ ಮಿಸುಕುವ ನೀರವ ತಲ್ಲಣಗಳಿಗೆ
ನನ್ನಾಸೆಗೆ ತಣ್ಣೀರು ಎರಚುವ ಕಟುನುಡಿಗಳಿಗೆ
ಉತ್ತರ ನೀಡುವುದೇ ಗೆಳತಿ..ನೀ ಬರೆದ ಸಂಕಲನ..||

ಆಗಾಗ ವಂಚಿಸುವ ನಿನ್ನ ಚೆಂದುಟಿಯ ಕೆಂಪಿಗೆ
ಮಗದೊಮ್ಮೆ ಏಮಾರಿಸುವ ನಿನ್ನಯ ನಗುವಿಗೆ
ನಂಬಿಕೆಗೇ ದ್ರೋಹವೆಸಗುವ ನಿನ್ನ ಹುಸಿಮಾತಿಗೆ
ಸಮರ್ಥನೆ ನೀಡುವುದೇ ಗೆಳತಿ..ನೀ ಬರೆದ ಸಂಕಲನ..||

ಉಸಿರಿಗೇ ಉಸಿರಾಗಿರುವೆನೆಂಬ  ನಿನ್ನಯ ಆಣೆಗೆ
ಬೆಚ್ಚನೆಯ ಅಪ್ಪುಗೆಯಿತ್ತು ನೀ ನೀಡಿದ ಭರವಸೆಗೆ
ಅಂಗೈಯೊಳಗೆ ಅಂಗೈಯಿಟ್ಟು ನೀ ಕೊಟ್ಟ ಭಾಷೆಗೆ
ವಿವರಣೆ ನೀಡುವುದೇ ಗೆಳತಿ..ನೀ ಬರೆದ ಸಂಕಲನ..||

--------------------------------------------------

2023 ಕ್ಕೊಂದು ವಿದಾಯ ಕವನ

ನಮಗೊಂದು ಮಾತೂ ಹೇಳದೇ
ಸುಮ್ಮನೆ ಸರಿದು ಮರೆಯಾದೆಯಾ
ಎರಡು ಸಾವಿರದ ಇಪ್ಪತ್ಮೂರೇ..
ನಿನ್ನ ಅವಧಿಯಲ್ಲಿ..ನಮ್ಮೊಂದಿಗೆ 
ನೀನೆಂದೂ ಮಾಡಲಿಲ್ಲ ತಕರಾರು..
ಸುಖದುಃಖಗಳನು ಸಮನಾಗಿ ನೀಡಿದರೂ
ನಮಗೆಂದೂ ನೀ ಮಾಡಲಿಲ್ಲ ಬೇಜಾರು..
ಹೋಗಿ ಬಾ ಎರಡುಸಾವಿರದ ಇಪ್ಪತ್ಮೂರೇ..
ನಾವೆಂದೆಂದಿಗೂ ನಿನ್ನವರೇ...

2024 ಕ್ಕೆ ಸ್ವಾಗತ ಕವಿತೆ

ಕನ್ಯೆಯೊಬ್ಬಳ ಕಣ್ಣೋಟದ ಹೊಳಪಿನಂತೆ..
ಚೆಲುವೆಯೊಬ್ಬಳ ಚೆಂದುಟಿಯ 
ಕಾಂತಿಯಂತೆ..
ಸೊಗಸುಗಾತಿಯೊಬ್ಬಳ ಮುಂಗುರುಳ ಸೊಬಗಿನಂತೆ..
ಅಂದಗಾತಿಯೊಬ್ಬಳ ಸೇಬುಗೆನ್ನೆಯ ಲಜ್ಜೆಯಂತೆ..
ಬೆಡಗಿಯೊಬ್ಬಳ ನಡಿಗೆಯ ವೈಯ್ಯಾರದಂತೆ..
ಬಿಂಕವನು ತೋರುತಾ..ಹರುಷವನು ಚೆಲ್ಲುತಾ..
ಬರುತಿರುವೆಯಾ ಹೊಸವರುಷವೇ..
ನಿನಗಿದೋ..ನಮ್ಮೆಲ್ಲರ ಒಲುಮೆಯ ಸ್ವಾಗತ.

--------------------------------------------------

“ಯಾವುದೂ ಬದಲಾಗಿಲ್ಲ..ಬದಲಾದವರು ಯಾರು..?”

ಅದೇ ಮಾಘಿಯ ಚಳಿಗಾಲ..ಮತ್ತದೇ ಇಳಿ ಸಾಯಂಕಾಲ..
ಅದೇ ಕೆಂಪಾದ ದಿಗಂತ..ಮತ್ತದೇ ನೆರಳುಬೆಟ್ಟಗಳ ಸ್ವಗತ..
ಎಂದಿನಂತೆ ಪಡುವಣದೆಡೆಗೆ ದಾಪುಗಾಲಿಡುತ್ತಿರುವ ನೇಸರ..
ನಿನ್ನೆ ಮೊನ್ನೆಗಳಂತೆ ಸಂಭವಿಸುತ್ತಿದೆ ಹಗಲೊಂದರ ಅಸ್ತಂಗತ.
ಈಗೀಗ ನೆನಪಿಸಿಕೊಂಡರೆ..ಯಾವುದೂ ಬದಲಾಗಿಲ್ಲ..
ಹಾಗಿದ್ದರೆ..ಬದಲಾದವರು ಯಾರು..ನಾವಾ..ಸೃಷ್ಟಿಯಾ..?

ಅದೇ ತಣ್ಣಗಿನ ಕೆರೆಯಂಗಳ..ಅದೇ ನೀರಕ್ಕಿಗಳ ಕಲರವ..
ಮತ್ತದೇ ರಂಗೇರಿದ ಬಾನು..ಅದೇ ಕಾಮನಬಿಲ್ಲಿನ ಕಮಾನು..
ಅದೇ ಮೌನತಾಳಿದ ವಧುವಿನಂತೆ ಸಾಗುವ ಮೇಘಗಳು..
ಮತ್ತದೇ ದಿಕ್ಕುಬದಲಿಸದ ತಂಗಾಳಿ..ಧೂಳೆಬ್ಬಿಸಿದ ಗೋಧೂಳಿ.
ಈಗೀಗ ಕಣ್ಣಾಯಿಸಿದರೆ..ಯಾವುದೂ‌ ಬದಲಾಗಿಲ್ಲ..
ಹಾಗಿದ್ದರೆ..ಬದಲಾದವರು ಯಾರು..ನಾವಾ..ಸೃಷ್ಟಿಯಾ..?

ಉದ್ದುದ್ದ ಬೆಳೆದುನಿಂತ ತೆಂಗು.. ತಲೆದೂಗುವುದು ನಿಂತಿಲ್ಲ.
ಬಾನಂಗಳದಲಿ ಹಾರಾಡುವ ಬಾನಾಡಿಗಳ ಉತ್ಸಾಹ ತಗ್ಗಿಲ್ಲ.
ಕೊಟ್ಟಿಗೆ ಮರಳುವ ದನಕರುಗಳಲ್ಲಿನ ನಿಯತ್ತು ನಶಿಸಿಲ್ಲ..
ಕುರಿ ಕಾಯುವ ಅಜ್ಜಪ್ಪನ ವೃದ್ದ ಕಾಲುಗಳಲಿ ಶಕ್ತಿ ಕುಂದಿಲ್ಲ.
ಈಗೀಗ ಯೋಚನೆಗಿಳಿದರೆ ..ಯಾವುದೂ ಬದಲಾಗಿಲ್ಲ..
ಹಾಗಿದ್ದರೆ..ಬದಲಾದವರು ಯಾರು..ನಾವಾ..ಸೃಷ್ಟಿಯಾ..?

ಅದೇ ಫಲವತ್ತಾಗಿ ಬೆಳೆದ ಪೈರು..ಎಲ್ಲೆಲ್ಲೂ ಹಚ್ಚಹಸಿರು..
ರಾಜಕಾಲುವೆಯಲಿ ಬಳಕುತ್ತಾ ಸರಸರನೆ ಹರಿಯುವ ನೀರು..
ಅದೇ ನೀರುನಿಂತ ಗದ್ದೆ..ದುಡಿವ ರೈತನ ಮೈಮನವೆಲ್ಲಾ ಒದ್ದೆ..
ಹಸಿರೊಡಲಲಿ ಜೀರುಂಡೆಗಳ ಸಂಗೀತ..ಕೇಳಲು ಬಲು ಹಿತ..
ಈಗೀಗ ಕಣ್ತುಂಬಿಕೊಂಡರೆ..ಯಾವುದೋ ಬದಲಾಗಿಲ್ಲ..
ಹಾಗಿದ್ದರೆ..ಬದಲಾದವರು ಯಾರು..ನಾವಾ..ಸೃಷ್ಟಿಯಾ..?

ಸಂಜೆಯ ಸೂರ್ಯನ ಹೊನ್ನಕಿರಣಗಳಿಗೆ ಸ್ವಾಗತ ಕೋರುವ
ಭತ್ತದ ತೆನೆಗಳಲ್ಲಿನ ಗಾಂಭೀರ್ಯವಂತೂ ಮಾಸಿಲ್ಲ..
ಗದ್ದೆಗಳಂಚಿನ ದಪ್ಪನೆಯ ಬದುಗಳ ಬಿಲಗಳಲ್ಲಿ ತಂಗಿದ್ದ
ಕಪ್ಪೆಗಳ ವಟಗುಟ್ಟುವ ಗಾಯನವು ಇಂದಿಗೂ ನಿಂತಿಲ್ಲ..
ಈಗೀಗ ನೆನೆಸಿಕೊಂಡರೆ..ಯಾವುದೂ ಬದಲಾಗಿಲ್ಲ..
ಹಾಗಿದ್ದರೆ..ಬದಲಾದವರು ಯಾರು..ನಾವಾ..ಸೃಷ್ಟಿಯಾ..?

ಅದೇ ಇಳಿಸಂಜೆಯಲಿ ಘಮಿಸುವ ಹಿತವಾದ ಪರಿಮಳ..
ಅದೇ..ಮುಸ್ಸಂಜೆಯಲಿ ಮಾರ್ದನಿಸುವ  ಸಂಧ್ಯಾರಾಗ..
ಮತ್ತದೇ..ಆಡಿ ನಲಿದ ಬೃಹದಾಕಾರದ ಕೆರೆಯ ಏರಿ..
ಹಾಯೆನಿಸುವ..ಆಯಾಸವೇ ಕಾಣದ ರೈತನ ಮುಗುಳ್ನಗೆ..
ಈಗೀಗ ಕಣ್ಣಾಯಿಸಿದರೆ..ಯಾವುದೂ ಬದಲಾಗಿಲ್ಲ..
ಹಾಗಿದ್ದರೆ..ಬದಲಾದವರು..ಯಾರು..ನಾವಾ..ಸೃಷ್ಟಿಯಾ..?

ಸಣ್ಣ ಅಲೆಗಳನು ಮೀಟಿ ಈಜಿ ಕುಣಿದ ಅದೇ ಕೆರೆಯ ತೀರ..
ಪಕ್ಕದ ತೋಟದಲಿ ಕದ್ದು ತಿಂದ ಮಾಗಿದ ಸೀತಾಫಲ..
ನೆರಿಗೆಯ ಸಿಕ್ಕಿಸಿ ಪೈರು ಸಿಕ್ಕಿಸುವ ನೀರೆಯರ ಚೆಲುವು
ಅಮ್ಮ ತಂದಿದ್ದ ಬುತ್ತಿಯ ಬಿಚ್ಚಿ ಮುದ್ದೆ ಸವಿದ ಆ ಕ್ಷಣ..
ಈಗೀಗ..ತರ್ಕಕ್ಕಿಳಿದರೆ..ಯಾವುದೂ ಬದಲಾಗಿಲ್ಲ..
ಹಾಗಿದ್ದರೆ..ಬದಲಾದವರು..ಯಾರು..ನಾವಾ..ಸೃಷ್ಟಿಯಾ..?

ನಾವೇ…ಮನುಜರು..ಸೃಷ್ಟಿಯೆಂದಿಗೂ ಬದಲಾಗುವುದಿಲ್ಲ…

--------------------------------------------------

 

ರಚನೆ :- ಜಿಂಕೆ ಮಂಜುನಾಥ್              ಕಲ್ವಮಂಜಲಿ ( ಗ್ರಾಮ )

ಕೋಲಾರ ತಾಲ್ಲೂಕು ಮತ್ತು ಜಿಲ್ಲೆ

 

 

 

 

 

 

Category:Books



ProfileImg

Written by Jinke Manjunath