ವಿದ್ಯಾರ್ಥಿ ದೆಸೆಯಿಂದಲೇ ರಕ್ತದಾನಿಯಾದ ನಾನು..

ಹೆಮ್ಮೆಯಿಂದ ಮೊದಲ ಬಾರಿ ರಕ್ತ‌ ಕೊಟ್ಟಿದ್ದು..

ProfileImg
15 Jun '24
2 min read


image

ಈ ಲೇಖನ ಮುಖ್ಯವಾಗಿ ಯುವಕರಿಗೆ ಎಂದರೇ ತಪ್ಪಾಗಲಾರದು. ಇಂದಿನ ಯುವಕರು ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡು ವರ್ಷಕ್ಕೆ ಮೂರು ಬಾರಿಯಾದರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರೆ ರಕ್ತ ಕೊರತೆಯಿಂದ ತೊಂದರೆಯಲ್ಲಿರುವ ಹಲವು ಜೀವಗಳನ್ನು ಉಳಿಸಿದ ಪುಣ್ಯ ಬರುತ್ತದೆ.

ಸಮಾಜದಲ್ಲಿ ವಿದ್ಯಾವಂತರು ರಕ್ತದಾನದ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡುವುದು ಅನಿವಾರ್ಯ ಎಂದು ಭಾವಿಸಬೇಕು.ಏಕೆಂದರೆ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಯಾವುದು ಇಲ್ಲ, ಸರ್ಕಾರವು 104ಸಹಾಯವಾಣಿ ನೀಡಿ ರಕ್ತದ ಅವಶ್ಯಕತೆ ಇರುವಾಗ ಉಚಿತ ಕರೆ ಮಾಡಿ ಎನ್ನುತ್ತಿದ್ದಾರೆ. ಈ ಯೋಜನೆಯನ್ನು ಇನ್ನಷ್ಟು ಜನ ಸ್ನೇಹಿಯಾಗಿ ಅನುಷ್ಠಾನ ಮಾಡುವ ಅನಿವಾರ್ಯತೆ ಇದೆ.

ರಕ್ತದಾನ ದಿನಾಚರಣೆ: 

ಸಿಂಧನೂರು ನಗರದ ಸನ್ ರೈಸ್ ನರ್ಸಿಂಗ್ ಕಾಲೇಜು ಹಾಗೂ ಶ್ರೀಶಕ್ತಿ ರಕ್ತ ಭಂಡಾರ ಸಂಸ್ಥೆಯವರು ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ನಗರದ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಕ್ತದಾನದ ಮಹತ್ವ ಸಾರುವ ಘೋಷಣೆ ಕೂಗಿ ಕಾಲ್ನಡಿಗೆಯಲ್ಲಿ ಜಾಗೃತಿ ಜಾಥಾ ನಡೆಸಿ, ರಕ್ತದಾನ ಶಿಬಿರ ಆಯೋಜಿಸಿದ್ದರು.

ನಂತರ ಇದೇ ಕಾರ್ಯಕ್ರಮದಲ್ಲಿ ವಿಶೇಷವಾಗಿ ಅತಿಹೆಚ್ಚು ಬಾರಿ ರಕ್ತ‌ದಾನ ಮಾಡಿದ ರಕ್ತದಾನಿಗಳನ್ನು ಗುರುತಿಸಿ, ಅವರಿಗೆ ಸನ್ಮಾನ ಮಾಡಿ ವಿದ್ಯಾರ್ಥಿಗಳಿಗೆ ಅವರ ಅನುಭವಗಳನ್ನು ಹಂಚುವ ಪ್ರೇರಣಾದಾಯಕ ಕಾರ್ಯಕ್ರಮ ನಡೆಸಿದರು. ಎಲ್ಲಾ ರಕ್ತದಾನಿಗಳು ಅಂತಿಮವಾಗಿ ಹೇಳಿದ್ದು ಇಷ್ಟೇ, “ನೀವು ರಕ್ತದಾನ ಮಾಡಿ, ನಿಮ್ಮವರಿಗೂ ರಕ್ತದಾನ ಮಾಡುವಂತೆ ಹೇಳಿ” ಎನ್ನುವುದಾಗಿತ್ತು.

ವಿದ್ಯಾರ್ಥಿ ದೆಸೆಯಿಂದಲೇ ರಕ್ತದಾನಿಯಾದ ಬಗ್ಗೆ:

ಸಿಂಧನೂರು ನಗರದ ಕನಕದಾಸ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಡಿ.ಇ.ಡಿ ಮಾಡಿ ಶಿಕ್ಷಕನಾಗಬೇಕು ಎಂಬ ಹಂಬಲದಿಂದ ಇದ್ದ ನಾನು, ವಿದ್ಯಾರ್ಥಿ ದೆಸೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವುದು ಮತ್ತು ರಾಷ್ಟ್ರ ಪುರುಷರ ಲೇಖನಗಳನ್ನು ಬರೆಯುವುದು ನನ್ನ ಹವ್ಯಾಸವಾಗಿತ್ತು. 

ಸ್ವಯಂಪ್ರೇರಿತ ರಕ್ತದಾನದಿಂದ ಧನ್ಯತಾಭಾವ:ಈ ವಿದ್ಯಾರ್ಥಿ ದೆಸೆಯಲ್ಲಿದ್ದ   ಸಮಯದಲ್ಲಿ ನನ್ನ ಸ್ನೇಹಿತನ ಸಂಬಂಧಿಕರಿಗೆ  ತುರ್ತು ಪರಿಸ್ಥಿತಿಗೆ ರಕ್ತದ ಅವಶ್ಯಕತೆ ಇದ್ದಾಗ, ಸಹಜವಾಗಿ ನಾನು ಸಾಮಾಜಿಕ ಕಾರ್ಯಗಳಲ್ಲಿ ಇರುವುದನ್ನು ಗಮನಿಸಿದ ನನ್ನ ಸ್ನೇಹಿತ ರಕ್ತದ ಅವಶ್ಯಕತೆ ಇರುವ ಬಗ್ಗೆ ನನ್ನಲ್ಲಿ ತನ್ನ ಸಮಸ್ಯೆ ಬಗ್ಗೆ ಹೇಳಿಕೊಂಡನು. ಆ ಕ್ಷಣ ರಕ್ತದಾನ ಯಾರು ಮಾಡುತ್ತಾರೆ, ಅದನ್ನು ಹೇಗೆ ವ್ಯವಸ್ಥೆ ಮಾಡಿ,ರೋಗಿಗೆ ಮುಟ್ಟಿಸಬೇಕು ಎಂಬ ಕಲ್ಪನೆ ಆಗ ಕ್ಷಣಕ್ಕೆ ಇರಲಿಲ್ಲ. ಆದರೂ ಈ ರಕ್ತದಾನದ ಬಗ್ಗೆ ಇತರರಿಂದ ತಿಳಿದುಕೊಂಡು ರಕ್ತಭಂಡಾರಕ್ಕೆ ತೆರಳಿ ಸ್ವಯಂ ಪ್ರೇರಿತನಾಗಿ ನಾನೇ ನನ್ನ Bಪಾಸಿಟಿವ್ ಗುಂಪಿನ ರಕ್ತವನ್ನು ಮೊದಲ ಬಾರಿಗೆ ದಾನ ಮಾಡಿದ್ದು, ನನಗೆ ಹೆಮ್ಮೆ ಎನಿಸಿತು. ನನ್ನ ರಕ್ತದಾನ  ಆತಂಕದಲ್ಲಿದ್ದ ಕುಟುಂಬದವರಲ್ಲಿ ಸಂತಸ ಮೂಡಿಸಿತು.ಇದು ನನಗೆ ಮೊದಲ ಅನುಭವವಾದರೂ ನಾನು ಮಾಡಿದ ರಕ್ತದಾನ ನನ್ನಲ್ಲಿ ಧನ್ಯತಾ ಭಾವ ಮೂಡಿಸಿತು.

ನಿರಂತರ ರಕ್ತದಾನದ ಕಾರ್ಯಕ್ಕೆ ಸಹಕಾರ:ಅಂದಿನಿಂದ ಇಂದಿನವರೆಗೆ ಸುಮಾರು 20ಕ್ಕೂ ಹೆಚ್ಚು ಬಾರಿ , ಕಳೆದ 14ವರ್ಷದಿಂದ ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡುತ್ತಲೇ ಇದ್ದೇನೆ. ಇಂದು ಆತ್ಮೀಯರು ನನ್ನ ಸೇವೆ ನೋಡಿ ತುರ್ತು ಪರಿಸ್ಥಿತಿಗೆ ರಕ್ತದ ಅವಶ್ಯಕತೆ ಇರುವಾಗ ನನ್ನ ಸಹಕಾರ ಕೇಳುತ್ತಿದ್ದಾರೆ. ನಾನು ಸಮಯ ನೋಡದೇ ರಕ್ತದಾನ ಮಾಡಿದ ಉದಾಹರಣೆ ಇವೆ. ಹಲವು ಸಮಯದಲ್ಲಿ  ನನ್ನ ಸಂಪರ್ಕದಲ್ಲಿರುವ ರಕ್ತದಾನಿಗಳಿಗೆ ಸಂದೇಶವನ್ನು ವಾಟ್ಸಪ ಮೂಲಕ ರವಾನಿಸಿ ಮನವಿ ಮಾಡಿದ್ದು ಮತ್ತು ರಕ್ತಭಂಡಾರಕ್ಕೆ ಕರೆ ಮಾಡಿ, ರಕ್ತದ ಲಭ್ಯತೆ ಇರುವ ಬಗ್ಗೆ ವಿಚಾರಿಸಿ, ರಕ್ತದ ಅವಶ್ಯಕತೆ ಇರುವವರಿಗೆ ಸಹಕರಿಸುವ ಕಾರ್ಯವನ್ನು ನಿಸ್ವಾರ್ಥವಾಗಿ, ಆತ್ಮಸಂತೃಪ್ತಿಗಾಗಿ, ನನ್ನ ಕೈಲಾದಷ್ಟು ಮಾಡುತ್ತಿದ್ದೇನೆ.

ರಕ್ತದಾನಕ್ಕೆ ಹಿಂಜರಿಕೆ ಬೇಡ:

ಇಂದಿನ ತಾಂತ್ರಕ ಯುಗದಲ್ಲಿಯೂ ಕೆಲವು ಜನ ಸ್ವಯಂ ಪ್ರೇರಿತರಾಗಿ ರಕ್ತದಾನದ ಮಾಡಲು ಹಿಂಜರಿಯುತ್ತಿರುವುದು ವಿಷಾದನೀಯವಾಗಿದೆ. ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರೇ ಹೇಳುತ್ತಾರೆ. ಆರೋಗ್ಯವಂತ ವ್ಯಕ್ತಿಗಳು ವರ್ಷಕ್ಕೆ ಮೂರು ಬಾರಿಯಾದರೂ ರಕ್ತದಾನ ಮಾಡಿ. ವಿದ್ಯಾವಂತ ಸುಶಿಕ್ಷಿತರು, ಸಮಾಜದಲ್ಲಿ ರಕ್ತದಾನ ಮಾಡುವ ಬಗ್ಗೆ ತಾವು ಮುಂದಾಗಿ, ತಮ್ಮ ಆರೋಗ್ಯವಂತ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಕನಿಷ್ಠ ವರ್ಷಕ್ಕೆ ಮೂರು ಬಾರಿಯಾದರೂ ಸ್ವಯಂ ಪ್ರೇರಿತರಾಗಿ ರಕ್ತದಾನದ ಮಾಡುವಂತೆ ಪ್ರೋತ್ಸಾಹ ಮಾಡಬೇಕು.  ಪ್ರತಿ ವರ್ಷ ಜೂನ್ 14ರಂದು ವಿಶ್ವದಾದ್ಯಂತ ವಿಶ್ವ ರಕ್ತದಾನಿಗಳ ದಿನಾಚರಣೆ ಮಾಡುವ ಮೂಲಕ ಸರ್ಕಾರವು ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ  ರಕ್ತದಾನದ ಬಗ್ಗೆ ಜಾಗೃತಿ ಜಾಥಾಗಳು, ರಕ್ತದಾನ ಶಿಬಿರಗಳ ಮಾಡಿ, ರಕ್ತದಾನದ  ಮಾಡುವುದರಿಂದ ಜನರಿಗೆ ಆಗುವ ಅನುಕೂಲಗಳ, ಬಗ್ಗೆ ತಿಳುವಳಿಕೆ ನೀಡುವ ಕಾರ್ಯ ಮಾಡುತ್ತಿವೆ.

 ಇನ್ನಾದರೂ ರಕ್ತದಾನಿಗಳ ಸಂಖ್ಯೆ ಹೆಚ್ಚಾಗಲಿ ಎನ್ನುವುದೇ ನನ್ನ ಲೇಖನದ ಆಶಯವಾಗಿದೆ.




ProfileImg

Written by Avinash deshpande

Article Writer, Self Employee