Do you have a passion for writing?Join Ayra as a Writertoday and start earning.

ಜಲಜನಕ

ಭವಿಷ್ಯದ ಅಕ್ಷಯ ಶಕ್ತಿಭಂಡಾರ?

ProfileImg
27 Mar '24
7 min read


image

ಜಲಜನಕ’ (ಹೈಡ್ರೋಜನ್) ಈ ವಿಶ್ವದಲ್ಲಿರುವ ಅತ್ಯಂತ ಹಗುರವಾದ ಮೂಲಧಾತು ಮತ್ತು ಅತೀ ಹೆಚ್ಚಿನ ಪ್ರಮಾಣದಲ್ಲಿರುವ ಮೂಲಧಾತುವೂ ಇದೇ. ನಕ್ಷತ್ರಗಳಲ್ಲಿನ ಪ್ರಧಾನವಾದ ದ್ರವ್ಯ ಜಲಜನಕವೇ. ಇಡೀ ವಿಶ್ವದ ಶೇಕಡಾ ತೊಂಬತ್ತರಷ್ಟು ದ್ರವ್ಯ ಜಲಜನಕವೇ ಆಗಿದೆ. ನಮ್ಮ ಸೂರ್ಯನೂ ಸೇರಿದಂತೆ ಜಗತ್ತಿನ ಎಲ್ಲ ನಕ್ಷತ್ರಗಳ ಶಕ್ತಿಯ ಮೂಲ ಇದೇ. ಭೂಮಿಯ ಮೇಲೆ ಸಹ ನೀರಿನ ರೂಪದಲ್ಲಿ ಹೇರಳವಾಗಿರುವ ಈ ಧಾತುವಿನತ್ತ ಈಗ ಎಲ್ಲರೂ ದೃಷ್ಟಿ ಹರಿಸುತ್ತಿದ್ದಾರೆ. ಏಕೆಂದರೆ ಭೂಮಿಯನ್ನು ಇತ್ತೀಚಿನ ದಿನಗಳಲ್ಲಿ ಪೆಡಂಭೂತವಾಗಿ ಕಾಡುತ್ತಿರುವ ಶಕ್ತಿಯ ಬಿಕ್ಕಟ್ಟು ಮತ್ತು ಪರಿಸರ ಮಾಲಿನ್ಯಕ್ಕೆ ಸೂಕ್ತ ಪರಿಹಾರವೆಂದರೆ ಜಲಜನಕವೊಂದೇ. ಆದ್ದರಿಂದ ವಿಜ್ಞಾನಿಗಳು ಇದರತ್ತ ಆಸಕ್ತಿಯಿಂದ ನೋಡುತ್ತಿದ್ದಾರೆ. 

ಇಂದು ಭೂಮಿಯ ಶಕ್ತಿಯ ಅಗತ್ಯತೆಯ ಬಹುಪಾಲು ಮೂಲಗಳು ಪಳೆಯುಳಿಕೆ ಇಂಧನಗಳೇ ಆಗಿವೆ. ಎಂದಾದರೊಂದು ದಿನ ಮುಗಿದು ಹೋಗುವ ಈ ಇಂಧನಗಳು ಅಪಾರ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಮತ್ತಿತರ ವಿಷಾನಿಲಗಳನ್ನು ಹೊಮ್ಮಿಸುತ್ತ ಇಡೀ ಭೂಮಿಯನ್ನು ಬಿಸಿ ಪ್ರಳಯದತ್ತ ಕೊಂಡೊಯ್ಯುತ್ತಿವೆ. ಇವುಗಳಿಗೆ ಹೋಲಿಸಿದರೆ ಜಲಜನಕದ ಬೈಜಿಕ ಸಮ್ಮಿಳನದಿಂದ ಬಿಡುಗಡೆಯಾಗುವ ಶಕ್ತಿ ಅಪಾರವಾದದ್ದು ಅಷ್ಟೇ ಅಲ್ಲ, ಅದು ಮಾಲಿನ್ಯರಹಿತ ಕೂಡ. ಆದರೆ ಅದನ್ನು ಸಾಧಿಸುವುದು ಅಷ್ಟು ಸುಲಭವಲ್ಲ. ನಕ್ಷತ್ರಗಳ ಒಳಗೆ ಅತ್ಯುನ್ನತ ತಾಪಮಾನದಲ್ಲಿ ಮಾತ್ರ ಜರುಗುವ ಈ ಕ್ರಿಯೆಯನ್ನು ಭೂಮಿಯ ಮೇಲೆ ಸಾಧಿಸಲು ನಮಗೆ ಇರುವ ಅತಿದೊಡ್ಡ ಅಡಚಣೆಯೆಂದರೆ ಆ ಅಸಾಧ್ಯ ತಾಪಮಾನ. ಕೆಲವು ಲಕ್ಷ ಡಿಗ್ರಿ ಸೆಲ್ಷಿಯಸ್ ಮೀರುವ ಈ ಉಷ್ಣಾಂಶದಲ್ಲಿ ನಮಗೆ ಗೊತ್ತಿರುವ ಯಾವುದೇ ವಸ್ತುವೂ ಘನರೂಪದಲ್ಲಿ ಉಳಿಯುವುದಿಲ್ಲ. ಕಬ್ಬಿಣ ಸಹ ಕ್ಷಣಾರ್ಧದಲ್ಲಿ ಕಾದು ಆವಿಯಾಗುತ್ತದೆ. ಹಾಗಾದರೆ ಈ ಅಪಾರ ಉಷ್ಣತೆಯ ಜಲಜನಕವನ್ನು ಹಿಡಿದಿಡುವುದಾದರೂ ಹೇಗೆ? 

ಹಾಗಾದರೆ ಜಲಜನಕದ ಸಮ್ಮಿಳನಕ್ಕೆ ಈ ಅತೀವ ಉಷ್ಣಾಂಶ ಏಕೆ ಬೇಕು ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಕಾರಣ ವಿದ್ಯುತ್ಕಾಂತೀಯ ಶಕ್ತಿ. ಎರಡು ಧನಾತ್ಮಕ ಚಾರ್ಜ್ ಗಳು ಪರಸ್ಪರ ವಿಕರ್ಷಿಸುತ್ತವೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಜಲಜನಕದ ಬೀಜಗಳು (ನ್ಯೂಕ್ಲಿಯಸ್) ಒಂದು ಪ್ರೋಟಾನ್ ನಿಂದ ಆಗಿರುವುದರಿಂದ ಅವು ಪರಸ್ಪರ ವಿಕರ್ಷಿಸುತ್ತವೆ. ಆ ವಿಕರ್ಷಣಾ ಬಲ ಎಷ್ಟೊಂದು ತೀವ್ರವಾಗಿರುತ್ತದೆ ಎಂದರೆ ಅದರ ಮುಂದೆ ಗುರುತ್ವಾಕರ್ಷಣ ಬಲ ಲೆಕ್ಕಕ್ಕೇ ಇಲ್ಲ. ಈ ಅಗಾಧವಾದ ವಿಕರ್ಷಣೆಯನ್ನೂ ಮೀರಿ ಜಲಜನಕದ ನ್ಯೂಕ್ಲಿಯಸ್ ಗಳು ಒಂದನ್ನೊಂದು ಸಮೀಪಿಸಿ ಡಿಕ್ಕಿ ಹೊಡೆದು ಹೀಲಿಯಂ ಪರಮಾಣುವಿನ ಉತ್ಪಾದನೆಯಾಗಿ, ಈ ಪ್ರಕ್ರಿಯೆಯಲ್ಲಿ ಶಕ್ತಿಯ ಉತ್ಪಾದನೆ ಆಗಬೇಕು. ಆ ಅಗಾಧ ವಿಕರ್ಷಣಾ ಬಲವನ್ನು ಹಿಮ್ಮೆಟ್ಟಿಸಿ ಪರಮಾಣುಗಳು ಹತ್ತಿರ ಬರಬೇಕೆಂದರೆ ಅಪಾರವಾದ ಉಷ್ಣತೆ ಬೇಕಾಗುತ್ತದೆ. 

ನಾವು ಜಲಜನಕವನ್ನು ಇಂದು ಸಹ ಇಂಧನವನ್ನಾಗಿ ಬಳಸುತ್ತಿದ್ದೇವೆ. ಆದರೆ ನಾವು ಬಳಸುತ್ತಿರುವುದು ಬೇರೆಯದೇ ರೀತಿಯಲ್ಲಿ. ಬೈಜಿಕ ಸಮ್ಮಿಳನ ಕ್ರಿಯೆ ಸದ್ಯಕ್ಕಂತೂ ಅಸಾಧ್ಯವಾದ್ದರಿಂದ ನಾವು ಜಲಜನಕವನ್ನು ಬೇರೆ ಇಂಧನಗಳನ್ನು ಬಳಸುವಂತೆಯೇ ಬಳಸುತ್ತಿದ್ದೇವೆ. ಈ ರೀತಿ ಬಳಸುವುದರಿಂದ ಶುದ್ಧ ನೀರು ಬಿಡುಗಡೆಯಾಗುತ್ತದೆ. ಇದರಿಂದ ಯಾವುದೇ ಮಾಲಿನ್ಯ ಉಂಟಾಗುವುದಿಲ್ಲ. ಹಾಗಾಗಿ ಇದು ಸಹ ಅತ್ಯಂತ ದಕ್ಷವಾದ ಇಂಧನವೇ ಆಗಿದೆ. ಆದರೆ ಸಮಸ್ಯೆ ಎಂದರೆ ಪ್ರಕೃತಿಯಲ್ಲಿ ಜಲಜನಕ ಶುದ್ಧರೂಪದಲ್ಲಿ ಧಾರಾಳವಾಗಿ ಲಭ್ಯವಿಲ್ಲ. ನಾವು ನೀರಿನಿಂದ ಮೊದಲು ಅದನ್ನು ಪ್ರತ್ಯೇಕಿಸಿ ನಂತರ ಇಂಧನವಾಗಿ ಬಳಸಬಹುದು. ಮೊದಲು ನೀರಿನ ಮೂಲಕ ವಿದ್ಯುತ್ತನ್ನು ಹಾಯಿಸಿ ಆಮ್ಲಜನಕ ಮತ್ತು ಜಲಜನಕಗಳನ್ನು ಪ್ರತ್ಯೇಕಿಸಬೇಕಾಗುತ್ತದೆ. ಆದರೆ ನೀರಿನಿಂದ ಅದನ್ನು ಪ್ರತ್ಯೇಕಿಸುವುದಕ್ಕೇ ಅಪಾರವಾದ ಶಕ್ತಿ ವ್ಯಯವಾಗುತ್ತದೆ. ಅದಕ್ಕೆ ಹೋಲಿಸಿದರೆ ಅದನ್ನು ಉರಿಸಿದಾಗ ಬಿಡುಗಡೆಯಾಗುವ ಶಕ್ತಿ ತುಂಬ ಕಡಿಮೆ. ಆದ್ದರಿಂದಲೇ ಅದನ್ನು ದೊಡ್ಡಮಟ್ಟದಲ್ಲಿ ಇಂಧನವಾಗಿ ಬಳಸುವ ಪ್ರಯತ್ನ ಇದುವರೆಗೆ ಯಶಸ್ವಿಯಾಗಿಲ್ಲ. ಆದ್ದರಿಂದ ಬೈಜಿಕ ಸಮ್ಮಿಳನವನ್ನೇ ಸಾಧಿಸಬೇಕೆಂಬುದು ವಿಜ್ಞಾನಿಗಳ ಉದ್ದೇಶ. ಅದಕ್ಕಾಗಿ ಈಗ ಅವಿರತ ಪ್ರಯತ್ನ ಸಾಗಿದೆ. 

ಬೈಜಿಕ ವಿದಳನ ಕ್ರಿಯೆಯಿಂದ ಶಕ್ತಿಯ ಉತ್ಪಾದನೆ ಈಗಾಗಲೇ ನಡೆಯುತ್ತಿದೆ. ನಮ್ಮ ಎಲ್ಲ ಅಣುಸ್ಥಾವರಗಳಲ್ಲಿ ನಡೆಯುತ್ತಿರುವುದು ಇದೇ ಪ್ರಕ್ರಿಯೆ. ಯುರೇನಿಯಂ ಇದರಲ್ಲಿ ಬಹುಮುಖ್ಯವಾಗಿ ಬಳಕೆಯಾಗುತ್ತಿರುವ ಇಂಧನ. ಇದನ್ನು ಬಿಟ್ಟರೆ ಥೋರಿಯಂ, ಪ್ಲುಟೋನಿಯಂಗಳನ್ನು ಸಹ ಬಳಸಲಾಗುತ್ತದೆ. ಆದರೆ ಈ ಅಣು ಸ್ಥಾವರಗಳನ್ನು ಬಹಳ ಜೋಪಾನವಾಗಿ ಕಾಯ್ದುಕೊಳ್ಳಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಇಡೀ ಊರೇ ಸ್ಮಶಾನವಾಗುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ರಷ್ಯಾದ ಚೆರ್ನೋಬಿಲ್ ಅಣುಸ್ಥಾವರದ ದುರಂತ. 1986ರಲ್ಲಿ ನಡೆದ ಈ ದುರಂತ ಇನ್ನೂ ಜನಮಾನಸದಿಂದ ಮರೆಯಾಗಿಲ್ಲ. ಜೊತೆಗೆ 1945ರಲ್ಲಿ ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಅಮೆರಿಕ ಮಾಡಿದ ಅಣುಬಾಂಬ್ ದಾಳಿಯ ಪರಿಣಾಮವನ್ನು ಎಪ್ಪತ್ತು ವರ್ಷಗಳ ನಂತರವೂ ನಾವು ಕಾಣುತ್ತಿದ್ದೇವೆ. ಆದ್ದರಿಂದ ಅಣುಸ್ಥಾವರಗಳಿಂದ ಉತ್ಪಾದನೆಯಾಗುವ ಶಕ್ತಿ ಅಗಾಧವಾದರೂ ಅದರಿಂದ ಉತ್ಪತ್ತಿಯಾಗುವ ತ್ಯಾಜ್ಯವಸ್ತುಗಳು ಸಹ ಬಹಳ ಅಪಾಯಕಾರಿ. ಯುರೇನಿಯಂ ವಿದಳನದಿಂದ ಉಂಟಾಗುವ ಬೇರಿಯಂ ಮತ್ತು ಕ್ರಿಪ್ಟಾನ್ ಗಳಲ್ಲದೆ ಇನ್ನೂ ಅನೇಕ ಹಾನಿಕಾರಕ ವಿಕಿರಣ ವಸ್ತುಗಳು ಕೋಟ್ಯಾಂತರ ವರ್ಷಗಳವರೆಗೆ ವಿಕಿರಣ ಹೊರಸೂಸುತ್ತಲೇ ಇರುತ್ತವೆ. ಆದ್ದರಿಂದ ಅವುಗಳನ್ನೆಲ್ಲ ಆಳವಾದ ಕಾಂಕ್ರೀಟ್ ಗುಂಡಿಗಳಲ್ಲಿ ಹೂತು ಹಾಕಬೇಕು. ಇಡೀ ಪ್ರದೇಶಕ್ಕೆ ವಿಕಿರಣ ಸಿಂಪಡಣೆ ಆಗಿರುತ್ತದೆ. ಆದ್ದರಿಂದ ಅಲ್ಲಿಗೆ ಮನುಷ್ಯರು ದೀರ್ಘಕಾಲ ಹೋಗುವಂತೆಯೇ ಇಲ್ಲ. ಈ ಎಲ್ಲ ಸಮಸ್ಯೆಗಳಿಗೆ ಉತ್ತರವಾಗಬಲ್ಲ ಪರಿಹಾರವೆಂದರೆ ಬೈಜಿಕ ಸಮ್ಮಿಳನ ಕ್ರಿಯೆ. ಇದರಿಂದ ಉಂಟಾಗುವ ವಿಕಿರಣಶೀಲ ವಸ್ತುಗಳ ಪ್ರಮಾಣ ಬಹಳ ಕಡಿಮೆ. 

ಬೈಜಿಕ ಸಮ್ಮಿಳನದಲ್ಲಿ ನಾಲ್ಕು ಜಲಜನಕದ ಪರಮಾಣುಗಳು ಸೇರಿ ಒಂದು ಹೀಲಿಯಂ ಪರಮಾಣು ಉತ್ಪಾದನೆಯಾಗುತ್ತದೆ. ಈ ಕ್ರಿಯೆ ನಿರಂತರವಾಗಿ ಕಳೆದ ಐದುನೂರು ಕೋಟಿ ವರ್ಷಗಳಿಂದ ಸೂರ್ಯನೊಳಗೆ ನಡೆಯುತ್ತ ಇದೆ. ಈ ಕ್ರಿಯೆಯಲ್ಲಿ ನಷ್ಟವಾಗುವ ದ್ರವ್ಯರಾಶಿಯು ಶಕ್ತಿಯ ರೂಪದಲ್ಲಿ ಬಿಡುಗಡೆಯಾಗುತ್ತದೆ. ಇದನ್ನು ಸಾಧಿಸಲು ಹೊಸ ತಂತ್ರಗಳನ್ನು ಹುಡುಕುತ್ತಿದ್ದಾರೆ. ಅಯಸ್ಕಾಂತೀಯ ವಲಯದೊಳಗೆ ಅಪಾರ ಉಷ್ಣಾಂಶದ ದ್ರವ್ಯವನ್ನು ಹಿಡಿದಿಡುವುದು ಒಂದು ಮುಖ್ಯವಾದ ಯೋಜನೆ. ಈ ದ್ರವ್ಯವನ್ನು ಹಿಡಿದಿಡಬಲ್ಲ ಪಾತ್ರೆ ಯಾವುದೂ ಇಲ್ಲದ ಕಾರಣ ಅಯಸ್ಕಾಂತೀಯ ವಲಯ ಇದಕ್ಕೆ ಉತ್ತರವಾಗಬಲ್ಲದು. ಏಕೆಂದರೆ ಇದು ಅತ್ಯಧಿಕ ಉಷ್ಣಾಂಶವನ್ನು ಸಹ ಸಹಿಸಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಈ ಅಯಸ್ಕಾಂತ ವಲಯ ಅತ್ಯಂತ ಶಕ್ತಿಶಾಲಿಯಾಗಿರಬೇಕಾಗುತ್ತದೆ. ಇಷ್ಟೊಂದು ಶಕ್ತಿಶಾಲಿ ವಲಯವನ್ನು ಸೃಷ್ಟಿಸುವುದು ಸಹ ಸುಲಭವಲ್ಲ. ಆದ್ದರಿಂದ ಈ ಪ್ರಯತ್ನ ಇನ್ನೂ ಯಶಸ್ವಿಯಾಗಿಲ್ಲ.

ಕೋಲ್ಡ್ ಫ್ಯೂಶನ್ ಎಂಬ ಇನ್ನೊಂದು ಪ್ರಯತ್ನ ಅನೇಕ ವರ್ಷಗಳಿಂದ ಇದೆ. ಅತ್ಯಂತ ಕಡಿಮೆ ಉಷ್ಣತೆಯಲ್ಲಿ ಸಹ ಬೈಜಿಕ ಸಮ್ಮಿಳನವನ್ನು ಸಾಧಿಸುವ ತಂತ್ರವಿದು. 1989ರಲ್ಲಿ ಮಾರ್ಟಿನ್ ಫ್ಲೆಶ್ ಮ್ಯಾನ್ ಮತ್ತು ಸ್ಟ್ಯಾನ್ಲಿ ಪೋನ್ಸ್ ಎಂಬ ಇಬ್ಬರು ವಿಜ್ಞಾನಿಗಳು ತಾವು ಕೋಲ್ಡ್ ಫ್ಯೂಶನ್ ಅನ್ನು ಸಾಧಿಸಿದ್ದಾಗಿ ಹೇಳಿಕೊಂಡರು. ಅವರು ತಮ್ಮ ಮೇಜಿನ ಮೇಲೆ ಒಂದು ಪ್ರಯೋಗ ನಡೆಸುತ್ತಿದ್ದಾಗ ಅಪಾರವಾದ ಶಕ್ತಿ ಬಿಡುಗಡೆಯಾಗಿದ್ದನ್ನು ಕಂಡುಕೊಂಡರು. ಅಷ್ಟೊಂದು ಅಪಾರ ಶಕ್ತಿ ಬೈಜಿಕ ಕ್ರಿಯೆಯಿಂದಲ್ಲದೆ ಬೇರೆ ಕ್ರಿಯೆಯಿಂದ ಉತ್ಪಾದನೆಯಾಗುವುದು ಸಾಧ್ಯವೇ ಇಲ್ಲವೆಂಬುದು ಅವರ ಅಭಿಪ್ರಾಯವಾಗಿತ್ತು. ಒಂದು ವೇಳೆ ಇದು ಸಾಧ್ಯವಾಗಿದ್ದಲ್ಲಿ ಜಗತ್ತಿಗೆ ಅತೀ ಕಡಿಮೆ ವೆಚ್ಚದಲ್ಲಿ ಅಪರಿಮಿತ ಶಕ್ತಿಯ ಮೂಲವೊಂದು ದೊರಕಿದಂತಾಗುತ್ತಿತ್ತು. ಆದರೆ ಈ ಪ್ರಯೋಗವನ್ನು ಮತ್ತೊಮ್ಮೆ ಸಾಧಿಸಲು ಜಗತ್ತಿನಾದ್ಯಂತ ವಿಜ್ಞಾನಿಗಳು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಜೊತೆಗೆ ಮಾರ್ಟಿನ್ ಮತ್ತು ಸ್ಟ್ಯಾನ್ಲಿ ಅವರ ಪ್ರಯೋಗದಲ್ಲಿ ಅನೇಕ ತಪ್ಪುಗಳಿದ್ದುದು ಬೆಳಕಿಗೆ ಬಂದಿತು. ಆದ್ದರಿಂದ ಅವರು ಕಂಡುಹಿಡಿದದ್ದು ಬೈಜಿಕ ಕ್ರಿಯೆಯನ್ನಲ್ಲ ಎಂಬುದು ದೃಢಪಟ್ಟಿತು. 1989ರ ಕೊನೆಯ ವೇಳೆಗೆ ವಿಜ್ಞಾನಿಗಳು ಕೋಲ್ಡ್ ಫ್ಯೂಶನ್ ಪ್ರಕ್ರಿಯೆಯನ್ನು ಮುಗಿದ ಅಧ್ಯಾಯವೆಂದು ಘೋಷಿಸಿದರು. ಏಕೆಂದರೆ ಅದನ್ನು ಸಾಧಿಸುವುದು ಪ್ರಾಯೋಗಿಕವಾಗಿ ಅಸಾಧ್ಯ ಎಂಬುದು ಆಗ ದೃಢಪಟ್ಟಿತ್ತು.

ಹಾಗೆ ನೋಡಿದರೆ ಈ ನಿಟ್ಟಿನಲ್ಲಿ ಮಾರ್ಟಿನ್ ಮತ್ತು ಪೋನ್ಸ್ ಅವರ ಪ್ರಯತ್ನಗಳು ಮೊದಲಿನದ್ದೂ ಅಲ್ಲ, ಕೊನೆಯದ್ದೂ ಅಲ್ಲ. ಇದರ ಇತಿಹಾಸ 1920ರಷ್ಟು ಹಿಂದಕ್ಕೆ ಹೋಗುತ್ತದೆ. ಥಾಮಸ್ ಗ್ರಹಾಂ ಎಂಬಾತ ಹತ್ತೊಂಬತ್ತನೇ ಶತಮಾನದಲ್ಲೇ ಇದರ ಬಗ್ಗೆ ಪ್ರಯೋಗ ನಡೆಸಿದ್ದರೂ ಆತ ಅದರಲ್ಲಿ ಯಶಸ್ವಿಯಾಗಲಿಲ್ಲ. 1920ರಲ್ಲಿ ಆಸ್ಟ್ರಿಯದ ವಿಜ್ಞಾನಿಗಳಾದ ಫ್ರೆಡ್ರಿಕ್ ಪಾನೆತ್ ಮತ್ತು ಕುರ್ಟ್ ಪೀಟರ್ಸ್ ಒಂದು ಪ್ರಯೋಗದಲ್ಲಿ ಪಲಾಡಿಯಮ್ ವೇಗವರ್ಧಕವನ್ನು ಬಳಸಿ ಬೈಜಿಕ ಸಮ್ಮಿಳನ ಕ್ರಿಯೆ ಯಶಸ್ವಿಯಾಗಿದೆ ಎಂದು ಘೋಷಿಸಿದರು. ಆದರೆ ಆ ಯಶಸ್ಸು ಅಲ್ಪಕಾಲದ್ದಾಗಿತ್ತು. ಅವರು ವಾತಾವರಣದಲ್ಲಿ ಇದ್ದ ಹೀಲಿಯಂ ಅನ್ನೇ ಗಮನಿಸಿ ಅದನ್ನು ಬೈಜಿಕ ಸಮ್ಮಿಳನದಲ್ಲಿ ಉತ್ಪಾದನೆಯಾದ ಹೀಲಿಯಂ ಎಂದು ತಪ್ಪಾಗಿ ಭಾವಿಸಿದ್ದರು. ಆದ್ದರಿಂದ ಅವರು ಕೂಡಲೇ ತಮ್ಮ ಘೋಷಣೆಯನ್ನು ಹಿಂತೆಗೆದುಕೊಂಡರು.

ಬಹುಶಃ ಪ್ರಪಂಚದಲ್ಲಿ ವಿಜ್ಞಾನಿಗಳಷ್ಟು ಆಶಾವಾದಿಗಳು ಬೇರಾರೂ ಇಲ್ಲ ಎಂದರೆ ತಪ್ಪಾಗಲಾರದು. ಪದೇ ಪದೇ ವಿಫಲರಾದರೂ ಕೂಡ ಮರಳಿ ಯತ್ನ ಮಾಡುತ್ತ ಒಂದು ಕೆಲಸ ಸಿದ್ಧಿಸುವ ತನಕ ತಮ್ಮ ಪ್ರಯತ್ನವನ್ನು ಮುಂದುವರೆಸುವವರೆಂದರೆ ವಿಜ್ಞಾನಿಗಳು. ಅದಕ್ಕೆ ಥಾಮಸ್ ಆಲ್ವಾ ಎಡಿಸನ್ ಅತ್ಯುತ್ತಮ ಉದಾಹರಣೆ. ಅವನು ವಿದ್ಯುತ್ ಬಲ್ಬ್ ತಯಾರಿಸುವ ಮೊದಲು ಸುಮಾರು ಒಂದು ಸಾವಿರ ವಿಫಲ ಯತ್ನಗಳನ್ನು ನಡೆಸಿದ್ದನಂತೆ! ಆದರೂ ನಿರಾಶನಾಗದೆ ಪ್ರಯತ್ನ ಮುಂದುವರೆಸಿ ಯಶಸ್ಸು ಪಡೆದ. ಅದೇ ರೀತಿ ಜಲಜನಕದ ಹಿಂದೆ ಬಿದ್ದ ವಿಜ್ಞಾನಿಗಳು ಸಹ ನಿರಂತರ ಆಶಾವಾದಿಗಳಾಗಿ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ. 1994ರಲ್ಲಿ ಡೇವಿಡ್ ಗುಡ್ ಸ್ಟೀನ್ ಎಂಬ ಭೌತಶಾಸ್ತ್ರದ ಪ್ರೊಫೆಸರ್ ಬೈಜಿಕ ಸಮ್ಮಿಳನದ ಬಗೆಗೆ ಜಗತ್ತಿನಲ್ಲಿ ಇನ್ನಷ್ಟು ಹೆಚ್ಚಿನ ಸಂಶೋಧನೆಗಳು ಮೂಲವಿಜ್ಞಾನದ ಮಟ್ಟದಲ್ಲಿ ಆಗಬೇಕಿದೆ ಎಂದು ಪ್ರತಿಪಾದಿಸಿದ. ಆದರೆ ಈ ಸಂಶೋಧನೆಗಳಿಗೆ ಧನಸಹಾಯ ಬರಬರುತ್ತಾ ಕಡಿಮೆಯಾಗತೊಡಗಿತು. ಏಕೆಂದರೆ 1989ರ ವೈಫಲ್ಯ ಸರ್ಕಾರಗಳನ್ನು ಬಹಳವಾಗಿ ಕಾಡುತ್ತಿತ್ತು. ಆದ್ದರಿಂದ ಇದು ನಷ್ಟದ ಬಾಬತ್ತು ಎಂದು ಸರ್ಕಾರಗಳು ಧನಸಹಾಯವನ್ನು ಕಡಿಮೆ ಮಾಡಿದವು. 1991ರ ಸಂದರ್ಭದಲ್ಲಿ ಜಗತ್ತಿನಾದ್ಯಂತ ಸುಮಾರು 600 ಜನ ಇದರ ಮೇಲೆ ಪ್ರಯೋಗ ಮಾಡುತ್ತಿದ್ದರು. ಆದರೆ 2004ರ ವೇಳೆಗೆ ಈ ಸಂಖ್ಯೆ 200ಕ್ಕೆ ಇಳಿಯಿತು. 

ಯಾವುದೇ ಸಂಶೋಧನೆಯಲ್ಲಾದರೂ ಅಮೆರಿಕ ಮುಂಚೂಣಿಯಲ್ಲಿರುವುದು ಸಾಮಾನ್ಯ. ಅದೇ ರೀತಿ ಬೈಜಿಕ ಸಮ್ಮಿಳನದ ಬಗೆಗಿನ ಸಂಶೋಧನೆಯಲ್ಲೂ ಅಮೆರಿಕವೇ ಬೇರೆಲ್ಲ ದೇಶಗಳಿಗಿಂತ ಮುಂದಿದೆ. ಸಿಡ್ನಿ ಕಿಮ್ಮೆಲ್ ಎಂಬ ಕೋಟ್ಯಾಧೀಶನೊಬ್ಬ ಈ ವಿಷಯದಲ್ಲಿ ಬಹಳ ಆಸಕ್ತಿ ವಹಿಸಿದ. ಬೈಜಿಕ ಸಮ್ಮಿಳನ ಕ್ರಿಯೆಯಿಂದ ಶಕ್ತಿ ಉತ್ಪಾದನೆಯಾದರೆ ಜಗತ್ತಿನ ಶಕ್ತಿಯ ಬಿಕ್ಕಟ್ಟೆಲ್ಲ ಕ್ಷಣಾರ್ಧದಲ್ಲಿ ಪರಿಹಾರವಾಗುತ್ತದೆ ಎಂಬ ವಿಷಯ ಅವನಿಗೆ ಗೊತ್ತಿತ್ತು. 2009 ರ ಏಪ್ರಿಲ್ 19ರಂದು ಅಮೆರಿಕದ ರಾಬರ್ಟ್ ಡಂಕನ್ ಎಂಬ ಭೌತಶಾಸ್ತ್ರಜ್ಞನೊಬ್ಬ ಅಮೆರಿಕದ “ಸಿಕ್ಸ್ಟಿ ಮಿನಿಟ್” ಎಂಬ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಇದರ ಬಗ್ಗೆ ಬಹಳ ಆಸ್ಥೆಯಿಂದ ಮಾತನಾಡಿದ್ದ. ಅದನ್ನು ಗಮನಿಸಿದ ಕಿಮ್ಮೆಲ್ 2012ರಲ್ಲಿ ಐದೂವರೆ ದಶಲಕ್ಷ ಡಾಲರ್ ಗಳಷ್ಟು ಅಪಾರ ಹಣವನ್ನು ಈ ಸಂಶೋಧನೆಗಾಗಿಯೇ ದಾನ ಮಾಡಿದ. “ಸಿಡ್ನಿ ಕಿಮ್ಮೆಲ್ ಇನ್ ಸ್ಟಿಟ್ಯೂಟ್ ಫಾರ್ ನ್ಯೂಕ್ಲಿಯರ್ ರಿನೈಸೆನ್ಸ್” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ. ಇದರಲ್ಲಿ ಜಲಜನಕದ ಪರಮಾಣುಗಳನ್ನು ಪಲಾಡಿಯಮ್ ವೇಗವರ್ಧಕವನ್ನು ಬಳಸಿ ಶಕ್ತಿ ಉತ್ಪಾದನೆಗೆ ಬಳಸುವ ಬಗೆಗೆ ಸಂಶೋಧನೆ ನಡೆಸಲು ಒತ್ತು ನೀಡಲಾಗಿತ್ತು. 2013ರಲ್ಲಿ ಗ್ರಹಾಮ್ ಕೆ ಹುಬ್ಲರ್ ಎಂಬಾತನನ್ನು ಇದರ ನಿರ್ದೇಶಕನನ್ನಾಗಿ ನೇಮಿಸಲಾಯಿತು. ಆತ ಅಮೆರಿಕದ ಜಲಸೇನೆಯ ಪ್ರಯೋಗಾಲಯದಲ್ಲಿ ಸುಮಾರು 40 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಅನುಭವಿ. ಈತನ ಮುಂದಾಳತ್ವದಲ್ಲಿ ಸಂಶೋಧನೆ ಸಾಗುತ್ತಿದೆ.

ಈ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಇನ್ನಿತರ ರಾಷ್ಟ್ರಗಳೆಂದರೆ ಇಟಲಿ, ಜಪಾನ್ ಮತ್ತು ಭಾರತ. ಜಪಾನ್ ದೇಶ 1992ರಿಂದ 1997ರವರೆಗೆ ಇಪ್ಪತ್ತು ಮಿಲಿಯನ್ ಡಾಲರ್ ಗಳನ್ನು ಇದಕ್ಕಾಗಿ ವಿನಿಯೋಗಿಸಿತು. ಆದರೆ 1997ರ ಅಂತ್ಯದಲ್ಲಿ ಇದರ ನಿರ್ದೇಶಕರಾಗಿದ್ದ ಹಿಡಿಯೋ ಇಕೆಗಾಮಿ ಅವರು ಇದರ ಬಗೆಗಿನ ಸಂಶೋಧನೆಗಳನ್ನು ತಾವು ಕೈಬಿಟ್ಟಿರುವುದಾಗಿ ಘೋಷಿಸಿದರು. ಏಕೆಂದರೆ ಅವರು ನಿರೀಕ್ಷಿಸಿದ್ದಂಥ ಯಶಸ್ಸು ಅವರಿಗೆ ದೊರೆತಿರಲಿಲ್ಲ.

ಭಾರತದಲ್ಲಿ ಕೂಡ ಇದರ ಬಗೆಗೆ ಅನೇಕ ಸಂಶೋಧನೆಗಳು ನಡೆಯುತ್ತಿವೆ. “ಭಾಭಾ ಅಟಾಮಿಕ್ ರಿಸರ್ಚ್ ಸ್ಟೇಶನ್” ಇದರಲ್ಲಿ ಸಾಕಷ್ಟು ಸಂಶೋಧನೆ ನಡೆಸಿತ್ತು. ಆದರೆ 1990ರ ಕೊನೆಯಲ್ಲು ಈ ಸಂಶೋಧನೆಯನ್ನು ನಿಲ್ಲಿಸಲಾಯಿತು. ಏಕೆಂದರೆ ಈ ವಿಚಾರದಲ್ಲಿ ವಿಜ್ಞಾನಿಗಳ ನಡುವೆ ಸಹಮತವಿರಲಿಲ್ಲ. ಆದರೆ 2008ರಲ್ಲಿ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್” ಎಂಬ ಸಂಸ್ಥೆ ಈ ಬಗೆಗಿನ ಸಂಶೋಧನೆಗಳನ್ನು ಮತ್ತೆ ಪ್ರಾರಂಭಿಸಬೇಕೆಂದು ಸಲಹೆ ನೀಡಿತು. ಆದ್ದರಿಂದ ಮತ್ತೆ ಹಲವೆಡೆ ಸಂಶೋಧನೆಗಳು ಪ್ರಾರಂಭವಾದರೂ ಸದ್ಯಕ್ಕೆ ಅದನ್ನು ನಿಲ್ಲಿಸಲಾಗಿದೆ. ಈಗ ಇದನ್ನು ಸಾಧಿಸಲು ಇರುವುದು ಎರಡೇ ದಾರಿಗಳು. ಒಂದು ಆ ಅತ್ಯಧಿಕ ಉಷ್ಣಾಂಶವನ್ನು ತಾಳಿಕೊಳ್ಳಬಲ್ಲಂಥ ಪಾತ್ರೆಯೊಂದನ್ನು ಕಂಡುಹಿಡಿಯುವುದು ಅಥವಾ ಕಡಿಮೆ ಉಷ್ಣತೆಯಲ್ಲೇ ಬೈಜಿಕ ಸಮ್ಮಿಳನವನ್ನು ಸಾಧಿಸುವುದು. ಸದ್ಯಕ್ಕಂತೂ ಎರಡೂ ಸಾಧ್ಯತೆಗಳು ಬಹಳ ದೂರ ಇದೆ.

ಬೈಜಿಕ ಸಮ್ಮಿಳನವಲ್ಲದೆ ಜಲಜನಕವನ್ನು ಹಾಗೇ, ಅಂದರೆ ನಾವು ಗೋಬರ್ ಗ್ಯಾಸ್ ಅಥವಾ ಬಯೋಗ್ಯಾಸ್ ಬಳಸುವಂತೆ ಇಂಧನವಾಗಿ ಬಳಸಿದರೂ ಪಳೆಯುಳಿಕೆ ಇಂಧನಗಳಿಗಿಂತ ಮೂರು ಪಟ್ಟು ದಕ್ಷವಾಗಿ ಬಳಸಬಹುದು ಮತ್ತು ಅದರಿಂದ ಯಾವುದೇ ಮಾಲಿನ್ಯಕಾರಕಗಳೂ ಉಂಟಾಗುವುದಿಲ್ಲ. ಆದರೆ ಅದಕ್ಕೆ ಕೂಡ ಅಡೆತಡೆಗಳಿವೆ. ಮೊದಲ ಅಡ್ಡಿಯೆಂದರೆ ಈ ಮೊದಲೇ ಹೇಳಿದಂತೆ ಜಲಜನಕ ಪ್ರಕೃತಿಯಲ್ಲಿ ಶುದ್ಧರೂಪದಲ್ಲಿ ಲಭ್ಯವಿಲ್ಲ. ನೀರಿನಿಂದ ಅದನ್ನು ಪಡೆಯುವುದಕ್ಕೇ ಅಧಿಕ ಶಕ್ತಿಯನ್ನು ಬಳಸಬೇಕಾಗುತ್ತದೆ. ಎರಡನೆಯ ಸಮಸ್ಯೆಯೆಂದರೆ ಶುದ್ಧರೂಪದಲ್ಲಿ ಜಲಜನಕವನ್ನು ಪಡೆಯಲು ಸಾಧ್ಯವಾದರೂ ಅದು ಅತ್ಯಂತ ಹಗುರವಾದ ಅನಿಲವಾದ್ದರಿಂದ ಅದನ್ನು ಸಂಗ್ರಹಿಸುವುದು ಸಹ ಬಹಳ ಕಷ್ಟ. ಅತೀವ ಒತ್ತಡದಲ್ಲಿ ಸಂಗ್ರಹಿಸಿದಾಗ ಮಾತ್ರ ಅದನ್ನು ಕಡಿಮೆ ಸ್ಥಳಾವಕಾಶದಲ್ಲಿ ಸಂಗ್ರಹಿಸಬಹುದು. ಹಾಗಾಗಿ ಸದ್ಯಕ್ಕಂತೂ ಜಲಜನಕವನ್ನು ಇಂಧನವಾಗಿ ಬಳಸುವುದು ವ್ಯಾಪಕವಾಗಿ ಸಾಧ್ಯವಾಗುತ್ತಿಲ್ಲ. 

ಜಲಜನಕದ ಬೈಜಿಕ ಸಮ್ಮಿಳನ ಕ್ರಿಯೆಯ ಬಗೆಗೆ ಮಾತನಾಡುವಾಗ ನಮ್ಮ ಸೌರವ್ಯೂಹದ ಗುರುಗ್ರಹದ ಉದಾಹರಣೆಯನ್ನು ನೀಡಬಹುದು. ಗುರುಗ್ರಹ ನಮ್ಮ ಭೂಮಿಯ 318 ಪಟ್ಟು ದ್ರವ್ಯರಾಶಿ ಹೊಂದಿರುವ ಗ್ರಹ. ಜೊತೆಗೆ ಅದರ ದ್ರವ್ಯರಾಶಿಯ ಬಹುಭಾಗ ಜಲಜನಕವೇ ಆಗಿದೆ. ಅಂದರೆ ಅದು ನಕ್ಷತ್ರಗಳಲ್ಲಿರುವ ದ್ರವ್ಯವೇ. ಆದರೆ ಅಷ್ಟೊಂದು ದ್ರವ್ಯವನ್ನು ಹೊಂದಿದ್ದರೂ ಅದು ಯಾಕೆ ನಕ್ಷತ್ರವಾಗಿಲ್ಲವೆಂದರೆ ಇದೇ ಕಾರಣ. ಈ ದ್ರವ್ಯವು ನಮ್ಮ ಭೂಮಿಗೆ ಹೋಲಿಸಿದರೆ ಅತಿ ಹೆಚ್ಚು ಎಂಬುದು ನಿಜವಾದರೂ ಸೂರ್ಯ ಅಥವಾ ಇತರ ನಕ್ಷತ್ರಗಳಿಗೆ ಹೋಲಿಸಿದರೆ ಅದು ಅತ್ಯಲ್ಪ. ಹಾಗಾಗಿ ಗುರುತ್ವಾಕರ್ಷಣ ಶಕ್ತಿಯ ಮೂಲಕ ವಿದ್ಯುದಯಸ್ಕಾಂತೀಯ ವಿಕರ್ಷಣ ಬಲವನ್ನೂ ಮೀರಿ ಬೈಜಿಕ ಸಮ್ಮಿಳನ ಕ್ರಿಯೆಯನ್ನು ಆರಂಭಿಸಲು ಈ ದ್ರವ್ಯರಾಶಿ ಏನೇನೂ ಸಾಲದು. ಆದ್ದರಿಂದಲೇ ಗುರು ನಕ್ಷತ್ರವಾಗದೇ ಗ್ರಹವಾಗಿಯೇ ಉಳಿದಿದೆ. ವಿಶ್ವದಲ್ಲಿ ಇದೇ ರೀತಿ ಸ್ವಲ್ಪದರಲ್ಲೇ ನಕ್ಷತ್ರ ಪಟ್ಟದಿಂದ ವಂಚಿತವಾಗಿ ಉಳಿದ ಅನೇಕ ಗ್ರಹಗಳಿವೆ. 

ಆದರೆ ಈ ಎಲ್ಲ ಇಲ್ಲಗಳ ನಡುವೆಯೂ ಬೈಜಿಕ ಸಮ್ಮಿಳನ ಕ್ರಿಯೆಯನ್ನು ಸಂಪೂರ್ಣ ಅಸಾಧ್ಯವೆಂದು ತಳ್ಳಿಹಾಕುವಂತೆಯೂ ಇಲ್ಲ. ಏಕೆಂದರೆ ವಿಜ್ಞಾನ ಇಂದು ಎಷ್ಟೊಂದು ಮುಂದುವರೆದಿದೆ ಎಂದರೆ ಹತ್ತೊಂಬತ್ತನೇ ಶತಮಾನದಲ್ಲಿ ತೀರಾ ಹಾಸ್ಯಾಸ್ಪದ ಎನ್ನಿಸಬಹುದಾಗಿದ್ದ ಎಷ್ಟೋ ಕಲ್ಪನೆಗಳು ಇಂದು ನಿಜವಾಗಿವೆ. ಹಾಗಾಗಿ ಸದ್ಯೋಭವಿಷ್ಯದಲ್ಲಿ ಅಲ್ಲವಾದರೂ ಇನ್ನು ಒಂದೆರಡು ದಶಕಗಳ ಬಳಿಕ ವಿಜ್ಞಾನಿಗಳು ಹೊಸ ವಿಧಾನಗಳಿಂದ ಇದನ್ನು ಸಾಧಿಸಬಹುದಾದ ಎಲ್ಲ ಸಾಧ್ಯತೆಗಳೂ ಇವೆ. ಅಲ್ಲಿಯವರೆಗೆ ನಾವು ಕಾಯಬೇಕಷ್ಟೆ. ಒಮ್ಮೆ ಅದು ಸಾಧ್ಯವಾದರೆ ನಮ್ಮ ಶಕ್ತಿಯ ಸಮಸ್ಯೆಗಳೆಲ್ಲ ಒಂದೇ ಏಟಿಗೆ ಪರಿಹಾರವಾಗುತ್ತದೆ. ಒಂದೇ ಒಂದು ಉತ್ತರವು ನೂರೆಂಟು ಪ್ರಶ್ನೆಗಳಿಗೆ ಪರಿಹಾರವಾಗಬಲ್ಲದು. ಆ ದಿನಕ್ಕಾಗಿ ನಾವು ಕಾಯಬೇಕಷ್ಟೆ!

Category : Education


ProfileImg

Written by Srinivasa Murthy