ಗಂಡಸಾದವನು ತನ್ನ ಕುಟುಂಬಕ್ಕಾಗಿ ಕಷ್ಟಪಟ್ಟು ದುಡಿದು ಹಣ ಸಂಪಾದಿಸಿ ಬರುತ್ತಾನೆ. ಆದರೆ ಮಕ್ಕಳು ಆ ಹಣ ತಿನ್ನಲು ಆಗುವುದಿಲ್ಲ. ಮಕ್ಕಳು ಊಟ ತಿನ್ನುತ್ತಾರೆ. ಮಕ್ಕಳು ಹಣದ ಮೇಲೆ ಮಲಗುವುದಿಲ್ಲ, ಹಾಸಿಗೆಯ ಮೇಲೆ ಮಲಗುತ್ತಾರೆ. ಆ ಊಟವನ್ನು ತಯಾರಿಸುವವಳು ಹೆಂಗಸು, ಮತ್ತು ನಿತ್ಯ ಹಾಸಿಗೆಯನ್ನು ಸರಿಪಡಿಸಿ ಹಾಸುವವಳು ಹೆಂಗಸು. ಇವರಿಬ್ಬರು ಸೇರಿ ಕೆಲಸ ಮಾಡಿದಾಗ ಮಾತ್ರ ಸಂಸಾರ ಸಾಗುತ್ತದೆ.
ದಣಿದು ಬರುವ ಪುರುಷನು ನಾಳೆ ಮತ್ತೆ ಎದ್ದು ದುಡಿಮೆಗೆ ಹೋಗುವ ಮಟ್ಟಕ್ಕೆ ಅವನನ್ನು ಮಾನಸಿಕ ಮತ್ತು ದೈಹಿಕವಾಗಿ ಯೋಗ್ಯನನ್ನಾಗಿ ಮಾಡುವುದರ ಹಿಂದೆ ಮಹಿಳೆಯ ಶ್ರಮ ಅಡಗಿರುತ್ತದೆ.
ಪುರುಷನು ದಣಿದು ಸಂಜೆ ಮನೆಗೆ ವಾಪಸ್ ಬರುತ್ತಾನೆ. ಹೊರಗೆ ಹಲವು ಹೊಡೆತಗಳ ನಡುವೆ, ಅವಮಾನಗಳ ಮಧ್ಯೆ ಸಂಸಾರಕ್ಕಾಗಿ ಇಷ್ಟೆಲ್ಲಾ ಮಾಡುತ್ತಾನೆ. ಆದರೆ ಸುಸ್ತಾಗಿ ಮನೆಗೆ ಬಂದ ಆತನ ಎಲ್ಲ ದಣಿವು ದೂರವಾಗಿಸುವವಳು ಹೆಣ್ಣು. ಆತನ ಅಗತ್ಯತೆಗಳನ್ನು ಅವನಿರುವಲ್ಲಿಗೆ ಪೂರೈಸಿ ಕೊಟ್ಟು, ಎಷ್ಟೋ ಜನರಿಂದ ನಿಂದನೆಗೆ ಒಳಪಟ್ಟ ಪತಿಯನ್ನು ತನ್ನ ಯಜಮಾನನೆಂದು ಭಾವಿಸುವ ಏಕೈಕ ಜೀವ ಪತ್ನಿ.
ಇಡೀ ದಿನ ಬಳಲಿ ಬರುವ ಪತಿಯ ಆರೈಕೆ ಮಾಡಿ, ಆತನ ದಣಿವನ್ನು ನಿವಾರಿಸಿ, ಪ್ರೀತಿಯಿಂದ ಬಿಸಿ ಬಿಸಿ ಅಡುಗೆ ಬಡಿಸಿ, ಬೆಳಗಾಗುವುದರೊಳಗೆ ಮತ್ತೆ ಹೊಸ ಹುರುಪಿನಲ್ಲಿ ಕೆಲಸಕ್ಕೆ ಹೋಗುವಂತೆ ಸಂಪೂರ್ಣ ತಯಾರಿ ಮಾಡುವವಳು ಪತ್ನಿ. ಮಹಿಳೆಯ ಈ ಜವಾಬ್ದಾರಿಯುತ ಕೆಲಸಗಳು ನಡೆಯಲಿಲ್ಲವಾದರೆ ಪುರುಷನು ಉತ್ಸಾಹದ ನಾಳೆಯನ್ನು ನೋಡುವುದು ಕಷ್ಟ.
ಪುರುಷ ಮನೆಯಿಂದ ಹೊರಟು ಕೆಲಸಕ್ಕೆ ಹೋದ ಮೇಲೆ ತನ್ನ ಪತ್ನಿ ಮನೆಯಲ್ಲಿ ಹಾಯಾಗಿರುತ್ತಾಳೆ ಎಂದುಕೊಳ್ಳುವಂತಿಲ್ಲ. ನೀವು ಮನೆಯಲ್ಲಿ ಇರುವಾಗ ಆಕೆ ಎಷ್ಟು ಕೆಲಸ ಮಾಡುತ್ತಾಳೋ ಅದಕ್ಕಿಂತ ಹೆಚ್ಚು ಕೆಲಸ ಪುರುಷ ಮಕ್ಕಳು ಮನೆಯಿಂದ ಹೊರಟ ನಂತರ ಮಾಡಬೇಕಿರುತ್ತದೆ.
ಗಂಡ ಮತ್ತು ಮಕ್ಕಳು ಮನೆಯಲ್ಲಿ ಯಾವ ಮಟ್ಟಿಗೆ ಅವಲಂಬಿತರು ಎಂದು ತಿಳಿಯಬೇಕಾದರೆ ಒಂದೇ ಒಂದು ದಿನ ಪತ್ನಿಯನ್ನು ತನ್ನೆಲ್ಲಾ ಜವಾಬ್ದಾರಿಗಳಿಂದ ದೂರ ಇರುವಂತೆ ಹೇಳಿ. ಆಗ ಸಂಸಾರದಲ್ಲಿ ಆಕೆಯ ಮಹತ್ವದ ಪಾತ್ರವನ್ನು ಪ್ರಮಾಣಿಸಬಹುದು.
ಪ್ರತಿಯೊಬ್ಬ ಪುರುಷನು ಆತನ ಮದುವೆಯ ಮುನ್ನಾ ಜೀವನಕ್ಕೂ, ಸಾಂಸಾರಿಕ ಜೀವನಕ್ಕೂ ಅಜಗಜಾಂತರ ವ್ಯತ್ಯಾಸವನ್ನು ಕಾಣುತ್ತಾನೆ. ಮದುವೆಯ ಬಳಿಕ ಬಹುತೇಕ ಪುರುಷರಲ್ಲಿ ತಮ್ಮ ಬ್ಯಾಚುಲರ್ ಜೀವನವೇ ಚೆನ್ನಾಗಿತ್ತು ಎಂಬ ಆಲೋಚನೆ ಬರುವುದು ಸಹಜ. ಅದಕ್ಕೆ ಸಂಸಾರದ ಅಗಾಧ ಜವಾಬ್ದಾರಿಗಳೇ ಕಾರಣ. ಮದುವೆಯ ನಂತರ ಪುರುಷನ ಇಚ್ಛೆಯಂತೆ ನಡೆಯುವುದಕ್ಕಿಂತ ಪರಿಸ್ಥಿತಿ ಮತ್ತು ಅನಿವಾರ್ಯತೆಗಳ ಮೇಲೆ ಆತ ನಡೆಯಬೇಕಿರುತ್ತದೆ.
ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಆತನಿಗೆ ಜವಾಬ್ದಾರಿಗಳು ತಲೆ ಏರಿ ಕುಳಿತುಕೊಳ್ಳುತ್ತವೆ. ಅವುಗಳನ್ನು ನಿಭಾಯಿಸುವ ಗೋಜಿನಲ್ಲಿ ಆತ ತನ್ನ ಆಕಾಂಕ್ಷೆಗಳನ್ನೆಲ್ಲಾ ಮೂಟೆ ಕಟ್ಟಿಟ್ಟು ಮರೆತುಬಿಡುತ್ತಾನೆ. ದಿನಗಳು ಕಳೆಯುತ್ತಾ ಹೋದಂತೆ ಮತ್ತೆಂದಿಗೂ ಆ ಮೂಟೆಯನ್ನು ಬಿಚ್ಚಲು ಸಾಧ್ಯವಿಲ್ಲ ಎಂಬುದು ಆತನಿಗೆ ಅರಿವಾಗುತ್ತಾ ಹೋಗುತ್ತದೆ.
ಪುರುಷನು ಯೋಚಿಸಿವುದು ಇಷ್ಟೇ. ತನ್ನ ಕುಟುಂಬದ ಎಲ್ಲ ಅಗತ್ಯತೆಗಳನ್ನು ಪೂರೈಸಿದರೆ ಅಷ್ಟೇ ಸಾಕು. ತನ್ನ ಯಾವುದೇ ಆಸೆಗಳು ಈಡೇರದಿದ್ದರೂ ಅವುಗಳ ಬಗ್ಗೆ ಯಾವ ತಕರಾರನ್ನೂ ಮಾಡಿಕೊಳ್ಳುವುದಿಲ್ಲ. ಪತ್ನಿ ಮಕ್ಕಳ ಆಸೆಗಳನ್ನೆಲ್ಲಾ ನಡೆಸಿಕೊಡುವಂತಾದರೆ ಆತನಿಗೆ ಬೇರೇನೂ ಬೇಕಿರುವುದಿಲ್ಲ.
ದುಡಿಯುವ ಸ್ಥಳದಲ್ಲಿ ಅನೇಕ ರೀತಿಯ ಮಾತುಗಳನ್ನು ಕೇಳುತ್ತಾನೆ. ಕೆಲವೊಮ್ಮೆ ಬೈಗುಳಗಳು, ಕೆಲವೊಮ್ಮೆ ನಿಂದನೆಗಳು ಸಾಮಾನ್ಯ. ಅದನ್ನೆಲ್ಲಾ ಮೈಗಂಟಿಸಿಕೊಳ್ಳದೆ ದುಡಿಯುವುದು ಅನಿವಾರ್ಯ. ಎಲ್ಲದಕ್ಕೂ ರಾಜಿಯಾಗದೆ ಬೇರೆ ಆಯ್ಕೆ ಆತನ ಮುಂದೆ ಇರುವುದಿಲ್ಲ. ಎಲ್ಲವನ್ನು ಸಂಸಾರಕ್ಕಾಗಿ ಮತ್ತು ಜವಾಬ್ದಾರಿಗಾಗಿ ಸಹಿಸಿ ಸಾಗುವುದಕ್ಕೆ ಪುರುಷ ಆದ್ಯತೆ ನೀಡುತ್ತಾನೆ. ಇಷ್ಟೆಲ್ಲಾ ಇದ್ದರೂ ಬಹಳ ಮಂದಿ ಪುರುಷರು ಇವುಗಳ ಕುರಿತು ಕಿಂಚಿತ್ತು ಮನೆಯವರಿಗಾಗಲಿ, ಹೊರಗಿನವರಿಗಾಗಲಿ ಗೊತ್ತಾಗದಂತೆ ಗುಟ್ಟಾಗಿಡುತ್ತಾರೆ. ಏಕೆಂದರೆ ಪುರುಷ ಕಷ್ಟ ಹೇಳಿಕೊಂಡರೆ ಆತನಿಗೆ ಸಾಂತ್ವಾನ ಸಿಗುವ ಬದಲು ಕೈಲಾಗದವನು ಎಂಬ ಮುದ್ರೆ ಬಿದ್ದು ಬಿಡುತ್ತದೆ. ತಾನು ಅಶಕ್ತ ಎಂಬ ಭಾವನೆ ಯಾರಲ್ಲೂ ಬರುವುದು ಆತನಿಗೆ ಇಷ್ಟವಿರುವುದಿಲ್ಲ. ಹೀಗಾಗಿ ತನ್ನ ನೋವುಗಳನ್ನು ಕೊಂದು ಬದುಕುತ್ತಾ ಸಾಗುತ್ತಾನೆ.
ಪ್ರತಿ ಪುರುಷನಿಗೂ ಆತನ ಯಾವುದೇ ಸ್ವಂತ ಆಸೆ ಈಡೇರುವುದು ಮುಖ್ಯವಾಗಿರುವುದಿಲ್ಲ. ಆತನಿಗೆ ಬೇಕಿರುವುದು ಒಂದಷ್ಟು ನೆಮ್ಮದಿ ಮಾತ್ರ. ಅದು ಮನೆಯವರಿಂದ ಬಿಟ್ಟರೆ ಮತ್ತೆಲ್ಲೂ ಸಿಗುವುದಿಲ್ಲ. ಅಕಸ್ಮಾತ್ ವಿವಿಧ ಕಾರಣಗಳಿಂದ ಮನೆಯಲ್ಲಿ ಆತನಿಗೆ ಉತ್ತಮ ವಾತಾವರಣ ದೊರೆಯದಿದ್ದರೆ ಮನಸ್ಸು ಒಡೆದು ಛಿದ್ರವಾಗಿಬಿಟ್ಟಿರುತ್ತದೆ. ಆದರೆ ಅದು ಯಾರಿಗೂ ಕಾಣುವುದಿಲ್ಲ. ಅಂತಹವರನ್ನು ನತದೃಷ್ಟ ಎಂದು ಕರೆಯಬಹುದು. ಏನೇ ಆದರೂ ಆತನ ಜವಾಬ್ದಾರಿಗಳಿಂದ ರಜೆಯಾಗಲಿ, ವಿರಾಮವಾಗಲಿ ಸಿಗುವುದಿಲ್ಲ. ನೆಮ್ಮದಿ ಇಲ್ಲದೆ ಜೀವವಿದ್ದರೂ ನಿರ್ಜೀವ ವಸ್ತುವಾಗಿ ಬಿಡುತ್ತಾನೆ. ಭಾವನೆಗಳೇ ಇಲ್ಲದೆ ಕೇವಲ ದುಡಿಯುವ ಒಂದು ಯಂತ್ರದಂತಾಗುತ್ತಾನೆ.
ಪತಿ ಮತ್ತು ಪತ್ನಿ ಇಬ್ಬರೂ ತಮ್ಮ ತಮ್ಮ ಕಣ್ಣುಗಳಿಂದ ಪರಸ್ಪರರ ಕಷ್ಟ, ನೋವು, ದುಃಖ ದುಮ್ಮಾನಗಳನ್ನು ನೋಡುವುದು ಮುಖ್ಯ. ಅದರಂತೆ ಒಬ್ಬೊರನ್ನೊಬ್ಬರು ಅರ್ಥ ಮಾಡಿಕೊಂಡು ಪ್ರೀತಿ ಸಲುಗೆಯನ್ನು ಬೆಳೆಸಿಕೊಂಡು, ಅದನ್ನು ಯಾವಾಗಲು ಪ್ರಸ್ತುತವಾಗಿರಿಸಿ, ಬದುಕಿನ ಹೆಜ್ಜೆಗಳನ್ನಿಟ್ಟರೆ ಸಂಸಾರಕ್ಕೆ ಅರ್ಥ ಬರುತ್ತದೆ.
ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ