ಬುಧನ ಮೇಲೆ ಮಾನವ!

ಬುಧಗ್ರಹದ ಸೋಜಿಗಗಳು

ProfileImg
27 Mar '24
8 min read


image

         ಅಂದು ಶಾಲೆಯಿಂದ ಮನೆಗೆ ಬಂದ ಗಗನದೀಪನಿಗೆ ಮನಸ್ಸೆಲ್ಲಾ ಕಸಿವಿಸಿಯಾಗಿತ್ತು. ಏಕೆಂದರೆ ಕಳೆದ ವಾರ ನಡೆದ ಪರೀಕ್ಷೆಯಲ್ಲಿ ಅವನಿಗೆ ಅತ್ಯಂತ ಕಡಿಮೆ ಅಂಕಗಳು ಬಂದಿದ್ದವು. ಸಮಾಜ ವಿಜ್ಞಾನದಲ್ಲಿ ಇಪ್ಪತ್ತೈದಕ್ಕೆ ಕೇವಲ ಹತ್ತು ಅಂಕ ಬಂದಿದ್ದರೆ ಆಂಗ್ಲಭಾಷೆಯಲ್ಲಿ ಹನ್ನೆರಡು ಅಂಕ ಬಂದಿದ್ದವು. ಅದಕ್ಕೆ ಶಿಕ್ಷಕರು 'ಪ್ರಯೋಜನಕ್ಕೆ ಬಾರದವನು, ದಡ್ಡ' ಎಂದೆಲ್ಲ ಬೈದಿದ್ದರಿಂದ ಅವನು ಖಿನ್ನನಾಗಿದ್ದ. ರಾತ್ರಿ ಊಟವನ್ನೂ ಮಾಡದೆ ಹೋಗಿ ಹಾಸಿಗೆಯಲ್ಲಿ ಅಡ್ಡಾದ‌. ಚಿಂತೆಯಿಂದ ಬಹಳ ಹೊತ್ತು ನಿದ್ರೆ ಬರಲಿಲ್ಲ. ಎಷ್ಟೋ ಹೊತ್ತಿಗೆ ಕಣ್ಣುಮುಚ್ಚಿದ. 

        ಮಧ್ಯರಾತ್ರಿ ಕಳೆದಮೇಲೆ ಹಠಾತ್ತಾಗಿ ಕಿಟಕಿಯಿಂದ ಏನೋ ಕಣ್ಣುಕುಕ್ಕುವ ಬೆಳಕು ಕಂಡಂತಾಗಿ ಎಚ್ಚರವಾಯಿತು. ಎದ್ದು ನೋಡಿದರೆ ಕಿಟಕಿಯ ಹೊರಗೆ ಒಂದು ವಿಶೇಷವಾಗಿ ಕಾಣುತ್ತಿದ್ದ ವಿಮಾನ! ಅದರ ಗಾತ್ರ ಒಂದು ಸಾಧಾರಣ ಬಸ್ಸಿನಷ್ಟೇ ಇದ್ದರೂ ಆಕಾರ ಮಾತ್ರ ಅದು ಆಕಾಶದಲ್ಲಿ ಹಾರಾಡುವ ವಾಹನ ಎಂಬುದನ್ನು ಸ್ಪಷ್ಟಪಡಿಸುತ್ತಿತ್ತು. ಆದರೆ ಅದಕ್ಕಿಂತ ಅವನನ್ನು ಆಶ್ಚರ್ಯಕ್ಕೆ ದೂಡಿದ ವಿಷಯವೆಂದರೆ ಅದರ ಎಲ್ಲೆಡೆ ಪ್ರಜ್ವಲಿಸುತ್ತಿದ್ದ ನೀಲಿ ಹಸಿರು ದೀಪಗಳು! ವಿಮಾನದ ಮೇಲೆ ಮತ್ತು ಸುತ್ತೆಲ್ಲ ಉರಿಯುತ್ತಿದ್ದ ಆ ದೀಪಗಳು ಹೊಸದೊಂದು ಕಿನ್ನರಲೋಕವನ್ನೇ ಸೃಷ್ಟಿಸಿದ್ದವು.

        ಆಶ್ಚರ್ಯದಿಂದ ಅದನ್ನೇ ನೋಡುತ್ತಿದ್ದ ಗಗನದೀಪನನ್ನು ಪರಿಚಿತ ಧ್ವನಿಯೊಂದು ಕರೆದಂತಾಯಿತು. ಅಚ್ಚರಿಯಿಂದ ಧ್ವನಿ ಬಂದತ್ತ ತಿರುಗಿದ. ಅಲ್ಲಿ ಇಸ್ರೋದಲ್ಲಿ ವಿಜ್ಞಾನಿಯಾಗಿದ್ದ ಅವನ ಮಾವ ಚಂದ್ರಶೇಖರ್ ವಿಮಾನದ ಬಾಗಿಲಲ್ಲಿ ನಿಂತು ಅವನನ್ನು ಕರೆಯುತ್ತಿದ್ದರು. ಗಗನದೀಪ್ ಮಂತ್ರಮುಗ್ಧನಾಗಿ ಮನೆಯ ಬಾಗಿಲು ತೆರೆದು ವಿಮಾನದತ್ತ ಹೆಜ್ಜೆಹಾಕಿದ. ಅವನ ಮಾವ ಆತ್ಮೀಯವಾಗಿ ಅವನ ಹೆಗಲಮೇಲೆ ಕೈಹಾಕಿ ಒಳಕ್ಕೆ ಕರೆದುಕೊಂಡರು. ಅವನು ಒಳಹೋದಕೂಡಲೇ ವಿಮಾನದ ಬಾಗಿಲು ಮುಚ್ಚಿಕೊಂಡಿತು. 'ಇನ್ನು ನಾವು ಗುರಿತಲುಪುವವರೆಗೆ ಆರಾಮವಾಗಿ ನಿದ್ರಿಸು. ನಾನು ಇವತ್ತು ನಿನ್ನನ್ನು ಒಂದು ವಿಶೇಷ ಜಾಗಕ್ಕೆ ಕರೆದೊಯ್ಯುತ್ತಿದ್ದೇನೆ' ಎಂದರು. ಗಗನದೀಪ್ ವಿಮಾನದ ಸುಖಾಸೀನದಲ್ಲಿ ಒರಗಿ ಕಣ್ಮುಚ್ಚಿದ.

        ಎಷ್ಟೋ ಹೊತ್ತಾದಮೇಲೆ ಮಾವ ಅವನ ಭುಜ ಅಲುಗಿಸಿ ಎಚ್ಚರಿಸಿದರು. ಕಣ್ಣು ಹೊಸಕಿಕೊಳ್ಳುತ್ತ ಎದ್ದ ಅವನಿಗೆ ತಾನು ಎಲ್ಲಿದ್ದೇನೆಂದೇ ಅರಿವಾಗಲಿಲ್ಲ. ಅವನ ವಿಮಾನ ವಿಶಾಲವಾದ ಒಂದು ಬಯಲಿನಲ್ಲಿ ನಿಂತಂತಿತ್ತು. ಅಲ್ಲಲ್ಲಿ ಹೊಂಡಗಳಿದ್ದವು. ಆದರೆ ಅಲ್ಲೆಲ್ಲೂ ಒಂದು ಹುಲ್ಲುಕಡ್ಡಿ ಕೂಡ ಕಾಣಲಿಲ್ಲ.  ಇದೆಲ್ಲದಕ್ಕಿಂತ ವಿಚಿತ್ರವಾಗಿದ್ದೆಂದರೆ ಸೂರ್ಯ ಆಗಸದಲ್ಲಿ ನಿಗಿನಿಗಿ ಉರಿಯುತ್ತಿದ್ದರೂ ಆಕಾಶ ಎಲ್ಲೆಡೆ ಕಡುಗಪ್ಪಾಗಿಯೇ ಕಾಣುತ್ತಿತ್ತು! ಸೂರ್ಯನ ಗಾತ್ರ ಕೂಡ ಬಹಳ ದೊಡ್ಡದಾಗಿತ್ತು. ಜೊತೆಗೆ ಆ ಹಗಲಿನಲ್ಲಿ ಕೂಡ ನಕ್ಷತ್ರಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಆದರೆ ಆ ನಕ್ಷತ್ರಗಳೆಲ್ಲ ಮಿನುಗದೇ ಗ್ರಹಗಳಂತೆಯೇ ಹೊಳೆಯುತ್ತಿದ್ದವು. ಇದೆಲ್ಲ ಏನೆಂದೇ ಅರ್ಥವಾಗದೇ ಗಗನದೀಪ್ ಬೆಕ್ಕಸಬೆರಗಾಗಿ ಆಗಸದತ್ತ ನೋಡುತ್ತಿದ್ದ. 

         ಅವನ ಮಾವನಿಗೆ ಅವನ ಗೊಂದಲ ಅರ್ಥವಾಯಿತು. ಅವರತ್ತ ನೋಡಿ ಮುಗುಳ್ನಕ್ಕರು. 'ಏನೋ ಗಗನ್, ಏನೂ ಅರ್ಥವಾಗುತ್ತಿಲ್ಲವೇ? ನಾವು ಎಲ್ಲಿದ್ದೇವೆ ಹೇಳು ನೋಡೋಣ?' ಎಂದು ಕೇಳಿದರು. ಗಗನ್ ಇನ್ನಷ್ಟು ಗೊಂದಲಕ್ಕೀಡಾಗಿ ಸುತ್ತೆಲ್ಲ ನೋಡಿದ. ಇನ್ನೂ ವಿಮಾನದ ಯಾವ ಬಾಗಿಲನ್ನೂ ತೆರೆದಿರಲಿಲ್ಲ. ಆದರೆ ಅದರ ವಿಶಾಲವಾದ ಗಾಜಿನ ಕಿಟಕಿಯ ಮೂಲಕ ಹೊರಗಿನ ದೃಶ್ಯಗಳೆಲ್ಲ ಸ್ಪಷ್ಟವಾಗಿ ಕಾಣುತ್ತಿದ್ದವು. ವಿಶಾಲವಾಗಿ ಹರಡಿದ್ದ ಬಯಲಿನಲ್ಲಿ ಎಷ್ಟು ದೂರಕ್ಕೆ ಕಣ್ಣು ಹಾಯಿಸಿದರೂ ಒಂದೇ ಒಂದು ಹುಲ್ಲುಕಡ್ಡಿಯೂ ಕಾಣುತ್ತಿರಲಿಲ್ಲ. ಜೊತೆಗೆ ಯಾವುದೇ ಪ್ರಾಣಿಯಾಗಲೀ ಪಕ್ಷಿಯಾಗಲೀ ಕಡೇಪಕ್ಷ ಒಂದು ಹುಳ ಸಹ ಕಾಣಿಸಲಿಲ್ಲ. ಇದೆಂಥ ಮರುಭೂಮಿ? 'ಮಾವಾ, ಬಹುಶಃ ನಾವು ಅಮೆರಿಕದ ಸಾವಿನ ಕಣಿವೆ (ಡೆತ್ ವ್ಯಾಲಿ) ಮರುಭೂಮಿಯಲ್ಲಿದ್ದೇವೆ ಎನ್ನಿಸುತ್ತಿದೆ' ಎಂದ ಗಗನ್. 

         ತನ್ನ ಕನ್ನಡಕವನ್ನು ತೆಗೆದು ಕೈಯಲ್ಲಿ ಹಿಡಿದ ಅವರು 'ಒಂದರ್ಥದಲ್ಲಿ ಇದು ಸಹ ಸಾವಿನ ಕಣಿವೆಯೆಂಬುದು ನಿಜ. ಆದರೆ ಇದು ಅಮೆರಿಕದ ಸಾವಿನ ಕಣಿವೆಯಲ್ಲ. ನಿಜ ಹೇಳಬೇಕೆಂದರೆ ಇದು ಯಾವ ಭೂಖಂಡಕ್ಕೂ ಸೇರಿದ್ದಲ್ಲ. ಅಷ್ಟೇ ಏಕೆ, ನಾವೀಗ ನಿಂತಿರುವುದು ಸಹ ಭೂಮಿಯ ಮೇಲಲ್ಲ' ಎಂದರು. ಗಗನದೀಪನಿಗೆ ಇನ್ನೊಂದು ಅಚ್ಚರಿ. ʼಹಾಗಾದರೆ ನಾವು ನಿಂತಿರುವುದು ಎಲ್ಲಿ ಮಾವಾ?ʼ ಎಂದು ಪ್ರಶ್ನಿಸಿದ. ʼನೋಡು, ಇಲ್ಲಿ ನಿನಗೆ ಸುತ್ತಲಿನ ಆಕಾಶವನ್ನು ನೋಡಿದರೆ ಒಂದಿಷ್ಟು ಸುಳಿವುಗಳು ಸಿಗಬಹುದು. ಭೂಮಿಯ ಮೇಲಲ್ಲ ಎಂದರೆ ಬೇರೊಂದು ಆಕಾಶಕಾಯದ ಮೇಲೆ ಇಳಿದಿದ್ದೇವೆ ಎಂದೇ ಅರ್ಥ. ಆದರೆ ಅದು ನಮ್ಮ ಸೌರವ್ಯೂಹದ್ದೇ ಆಕಾಶಕಾಯ. ನಿನಗೆ ಇರುವ ಸೌರವ್ಯೂಹದ ಜ್ಞಾನದ ಆಧಾರದಲ್ಲಿ ಊಹಿಸು ನೋಡೋಣʼ ಎಂದರು.

         ಅವನಿಗೆ ಯೋಚನೆಗಿಟ್ಟುಕೊಂಡಿತು. ಅವನಿಗೆ ಸೌರವ್ಯೂಹದ ಬಗ್ಗೆ ವಿಪರೀತ ಆಸಕ್ತಿ ಇದ್ದಿದ್ದು ನಿಜ. ಜೊತೆಗೆ ಅದರ ಬಗ್ಗೆ ತಿಳಿದುಕೊಳ್ಳಲು ಕಂಡಕಂಡವರನ್ನೆಲ್ಲ ಕೇಳುತ್ತಿದ್ದ. ಆದರೆ ಅವನ ಜ್ಞಾನದಾಹವನ್ನು ತಣಿಸುವಂಥವರು ಯಾರೂ ಸಿಗುತ್ತಿರಲಿಲ್ಲ. ಹಾಗಾಗಿ ಅವನಿಗೆ ಅದರ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ʼಮಾವಾ, ಭೂಮಿಯ ಮೇಲಲ್ಲ ಎಂದರೆ ನಾವು ಚಂದ್ರನ ಮೇಲೆ ಇದ್ದೇವೆ ಎನ್ನಿಸುತ್ತಿದೆ. ಏಕೆಂದರೆ ಚಂದ್ರನ ಮೇಲ್ಮೈಯ ಚಿತ್ರಗಳನ್ನು ಪತ್ರಿಕೆಗಳಲ್ಲಿ ನೋಡಿದ್ದೇನೆ. ಅದು ಹೆಚ್ಚುಕಡಿಮೆ ಇದೇರೀತಿ ಇತ್ತು.ʼ ಎಂದ. ʼಗಗನ್‌ ನೀನು ಹೇಳಿದ್ದು ಸರಿ, ಆದರೆ ಚಂದ್ರನ ಮೇಲೆ ನಾವು ಇದ್ದಿದ್ದರೆ ಸೂರ್ಯನ ಗಾತ್ರ ಏಕೆ ಭೂಮಿಯ ಮೇಲೆ ಕಾಣುವುದಕ್ಕಿಂತ ದೊಡ್ಡದಾಗಿ ಕಾಣುತ್ತಿದೆ? ಸೂರ್ಯನಿಂದ ಭೂಮಿಯ ಮತ್ತು ಚಂದ್ರನ ದೂರಗಳೆರಡೂ ಒಂದೇ ಎಂಬುದು ನಿನಗೆ ಗೊತ್ತಲ್ಲ? ಹಾಗಾಗಿ ಭೂಮಿಯಿಂದ ಕಂಡಷ್ಟೇ ದೊಡ್ಡದಾಗಿ ಚಂದ್ರನ ಮೇಲಿನಿಂದಲೂ ಕಾಣಬೇಕಲ್ಲವೇ? ಇದೇಕೆ ದೊಡ್ಡದಾಗಿ ಕಾಣುತ್ತಿದೆ?ʼ ಎಂದು ಪ್ರಶ್ನಿಸಿದರು. ಗಗನದೀಪ್‌ಗೆ ಹೌದೆನ್ನಿಸಿತು. ಆದರೆ ಎಷ್ಟು ಯೋಚಿಸಿದರೂ ಅದಕ್ಕೆ ಕಾರಣ ಹೊಳೆಯಲೇ ಇಲ್ಲ. ಅವರೇ ಅವನ ಅನುಮಾನ ಪರಿಹರಿಸಿದರು. ʼನೋಡು, ನಾವೀಗ ಬುಧಗ್ರಹದ ಮೇಲೆ ಇದ್ದೇವೆ. ನಿನಗೆ ಗೊತ್ತಲ್ಲ, ಬುಧಗ್ರಹ ನಮ್ಮ ಚಂದ್ರನಿಗಿಂತ ಸ್ವಲ್ಪ ದೊಡ್ಡದು. ಆದರೆ ಬುಧನ ಮೇಲ್ಮೈ ನಮ್ಮ ಚಂದ್ರನ ಮೇಲ್ಮೈಯನ್ನೇ ಬಹುಪಾಲು ಹೋಲುತ್ತದೆ. ಬುಧ ನಮ್ಮ ಭೂಮಿಗಿಂತ ಸೂರ್ಯನಿಗೆ ಬಹಳ ಹತ್ತಿರದಲ್ಲಿರುವುದು ನಿನಗೆ ಗೊತ್ತಲ್ಲ? ಅದಕ್ಕೇ ಬುಧನ ಮೇಲಿಂದ ಸೂರ್ಯ ಅಷ್ಟೊಂದು ದೊಡ್ಡದಾಗಿ ಕಾಣುತ್ತದೆ. ಅಲ್ಲದೆ ಬುಧನ ಮೇಲೆ ವಾತಾವರಣದ ಕವಚವೂ ಇಲ್ಲ. ಸೂರ್ಯನಿಗೆ ಇಷ್ಟೊಂದು ಸನಿಹದಲ್ಲಿರುವುದರಿಂದ ಹಗಲಿನಲ್ಲಿ ಬುಧ ಉರಿಯುವ ಕುಲುಮೆ. ಈಗ ನಮ್ಮ ಈ ವಾಹನದೊಳಗೆ ನಮಗೆ ಬೇಕಾದ ಎಲ್ಲ ಅನುಕೂಲತೆಗಳೂ ಇವೆ. ಅತ್ಯುತ್ತಮ ಹವಾನಿಯಂತ್ರಣದ ವ್ಯವಸ್ಥೆ ಇರುವುದರಿಂದ ಹೊರಗಿನ ವಾತಾವರಣದ ಯಾವುದೇ ಬದಲಾವಣೆಗಳು ನಮ್ಮ ಮೇಲೆ ಪ್ರಭಾವ ಬೀರವು. ಒಂದುವೇಳೆ ಈ ಬಾಗಿಲನ್ನು ತೆಗೆದು ನಾವು ಬುಧನ ಮೇಲೆ ಇಳಿದಿದ್ದೇ ಆದರೆ ಕ್ಷಣಾರ್ಧದಲ್ಲಿ ಶವಗಳಾಗುತ್ತೇವೆʼ ಎಂದರು. 

         ಗಗನ್‌ ಬೆರಗಿನಿಂದ ಸೂರ್ಯನತ್ತಲೇ ನೋಡುತ್ತಿದ್ದ. ಭೂಮಿಯಿಂದ ಕಾಣುವುದಕ್ಕಿಂತ ಎರಡು ಪಟ್ಟು ದೊಡ್ಡದಾಗಿದ್ದ ಸೂರ್ಯ ಸುಮಾರು ನಾಲ್ಕೈದು ಪಟ್ಟು ಹೆಚ್ಚಿನ ಬೆಳಕು ಮತ್ತು ಶಾಖವನ್ನೂ ಅಲ್ಲಿ ಕೊಡುತ್ತಾನೆ ಎಂಬುದು ಅವನಿಗೆ ಗೊತ್ತಿತ್ತು. ಆದರೆ ಅವನ ವಾಹನದ ವಿಶೇಷ ಗಾಜಿನ ಮೂಲಕ ನೋಡುತ್ತಿದ್ದುದರಿಂದ ಅವನಿಗೆ ಕಣ್ಣಿಗೆ ಏನೂ ಆಯಾಸವಾಗಲಿಲ್ಲ ಅಥವಾ ಕಣ್ಣು ಕುಕ್ಕಿದಂತೆಯೂ ಅನ್ನಿಸಲಿಲ್ಲ. ಆದರೆ ಅದರ ಅಸಾಧಾರಣ ಗಾತ್ರ ಮಾತ್ರ ಸ್ಪಷ್ಟವಾಗಿ ತಿಳಿಯುತ್ತಿತ್ತು. ಜೊತೆಗೆ ಸೂರ್ಯನಿಂದ ಸಾಕಷ್ಟು ದೂರದಲ್ಲಿ ನಕ್ಷತ್ರಗಳೆಲ್ಲ ಭೂಮಿಯ ಮೇಲೆ ಕಂಡಂತೆಯೇ ಕಾಣುತ್ತಿದ್ದವು. ಹಗಲಿನಲ್ಲೇ ನಕ್ಷತ್ರಗಳು ಕಾಣುವ ಕೌತುಕ ಅವನಿಗೆ ಅಚ್ಚರಿ ಉಂಟುಮಾಡಿತ್ತು. ತನ್ನ ಕೈಗಡಿಯಾರವನ್ನು ನೋಡಿಕೊಂಡಾಗ ಅದರಲ್ಲಿ ಸಮಯ ಏಳುಗಂಟೆ ತೋರಿಸುತ್ತಿತ್ತು. ʼಸಮಯ ಈಗ ಏಳು ಗಂಟೆ ಆಗಿದೆ. ನಾವು ಇಲ್ಲೇ ವಿಶ್ರಾಂತಿ ಪಡೆಯೋಣ ಮಾವಾ. ಸಂಜೆಯಾದಮೇಲೆ ಇನ್ನಷ್ಟು ಅಚ್ಚರಿಗಳನ್ನು ಕಾಣಬಹುದಲ್ಲವೇ? ರಾತ್ರಿಯ ಆಗಸ ಇನ್ನಷ್ಟು ಸುಂದರವಾಗಿ ಕಾಣಬಹುದು. ಬೇರೆ ಗ್ರಹಗಳು ಹಾಗೂ ನಕ್ಷತ್ರಗಳನ್ನೆಲ್ಲ ಭೂಮಿಯ ಮೇಲೆ ನೋಡುವುದಕ್ಕಿಂತ ಸ್ಪಷ್ಟವಾಗಿ ನೋಡಬಹುದಲ್ಲವೇ?ʼ ಎಂದು ಕೇಳಿದ. ʼಖಂಡಿತ ನೋಡಬಹುದು, ಆದರೆ ಅದಕ್ಕೆ ನೀನು ನಿನ್ನ ಕೈಗಡಿಯಾರದ ಪ್ರಕಾರ ಕಾಯುತ್ತ ಕುಳಿತರೆ ಅದರಲ್ಲಿ ಸಂಜೆ ಏಳುಗಂಟೆ ಆದರೂ ಕೂಡ ಆಕಾಶದ ಸೂರ್ಯ ಒಂದಿಷ್ಟೂ ಮುಂದಕ್ಕೆ ಚಲಿಸಿದ್ದು ನಿನಗೆ ಗೊತ್ತಾಗುವುದಿಲ್ಲ. ಅದರಲ್ಲಿ ದಿನಾಂಕ ಇದ್ದರೆ ನೋಡು. ಸರಿಯಾಗಿ ಎಂಬತ್ತೆಂಟು ದಿನಗಳ ಬಳಿಕವಷ್ಟೇ ಸೂರ್ಯಾಸ್ತವಾಗುವುದನ್ನು ಕಾಣಬಹುದು. ಏಕೆಂದರೆ ನಾವು ಈಗ ಭೂಮಿಯ ಮೇಲೆ ಇಲ್ಲ, ಬುಧನ ಮೇಲಿದ್ದೇವೆ. ಬುಧನ ಒಂದು ದಿನದ ಅವಧಿ ಭೂಮಿಯ 176 ದಿನಗಳಷ್ಟು ದೀರ್ಘ. ಅದರಲ್ಲಿ ಎಂಬತ್ತೆಂಟು ದಿನಗಳಷ್ಟು ದೀರ್ಘವಾದ ಹಗಲು ಮತ್ತು ಅಷ್ಟೇ ದೀರ್ಘವಾದ ರಾತ್ರಿ ಇರುತ್ತದೆ ಎಂಬುದನ್ನು ನೀನು ಮರೆತಿದ್ದೀಯಾ ಅಥವಾ ನಿನಗಿದು ಗೊತ್ತಿರಲಿಲ್ಲವಾ?ʼ ಎಂದು ಕೇಳಿದಾಗ ಗಗನ್‌ ಅಚ್ಚರಿಯಿಂದ ಅವರತ್ತ ನೋಡಿದ. ʼಇಲ್ಲ ಮಾವಾ, ನನಗಿದು ಗೊತ್ತಿರಲಿಲ್ಲ. ಬುಧ ಅಷ್ಟೊಂದು ನಿಧಾನವಾಗಿ ಸುತ್ತುವುದೇ?ʼ ಎಂದು ಕೇಳಿದ. ʼಹಾಂ, ಬುಧ ತನ್ನ ಕಕ್ಷೆಯ ಮೇಲೆ ಒಂದು ಸುತ್ತು ಸುತ್ತಲು ಭೂಮಿಯ 58.7 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಅದಕ್ಕೆ ಸೂರ್ಯನ ಸುತ್ತ ಸುತ್ತಲು ಕೇವಲ 88 ದಿನ ಸಾಕು. ವಾಸ್ತವವಾಗಿ ಬುಧ ದೂರದ ನಕ್ಷತ್ರಗಳಿಗೆ ಸಂಬಂಧಿಸಿದಂತೆ ತನ್ನ ಅಕ್ಷದ ಮೇಲೆ ಐವತ್ತೊಂಬತ್ತು ದಿನಗಳಿಗೇ ಒಂದು ಸುತ್ತು ಸುತ್ತುವುದು ನಿಜವಾದರೂ ಸೂರ್ಯನಿಗೆ ಸಂಬಂಧಿಸಿದಂತೆ ಒಂದು ಸುತ್ತು ಸುತ್ತಲು 176 ದಿನಗಳು ಬೇಕು. ಇದರಿಂದಾಗಿ ಬುಧನ ದಿನದ ಅವಧಿ ಭೂಮಿಯ 176 ದಿನಗಳಷ್ಟು ದೀರ್ಘವಾಗಿದೆʼ ಎಂದರು. ಹಾಗಾಗಿ ಈಗ ಮುಂಜಾನೆಯಾಗಿದೆ, ಸಂಜೆಯಾಗಲು ಇನ್ನೂ ಮೂರು ತಿಂಗಳು ಕಾಯಬೇಕಾಗುತ್ತದೆʼ ಎಂದರು. ಅದನ್ನು ಕೇಳಿ ಗಗನ್‌ಮುಖ ಪೆಚ್ಚಾಯಿತು. 

       ʼಗಗನ್‌, ಬೇಜಾರು ಮಾಡಿಕೊಳ್ಳಬೇಡ, ನಮ್ಮ ಈ ವಾಹನದಲ್ಲಿ ಪ್ರಯಾಣ ಮಾಡುತ್ತ ಗ್ರಹದ ಇನ್ನೊಂದು ಭಾಗಕ್ಕೆ ನಾವು ಹೋಗೋಣ. ಅಲ್ಲಿಂದ ರಾತ್ರಿಯ ಆಗಸವನ್ನು ನೋಡಬಹುದು. ಅತ್ಯಂತ ವೇಗವಾಗಿ ಪ್ರಯಾಣಿಸುವ ನಮ್ಮೀ ವಾಹನದಲ್ಲಿ ಏಳೂವರೆ ಸಾವಿರ ಕಿಲೋಮೀಟರ್‌ಗಳ ದೂರವನ್ನು ಗಂಟೆಯೊಳಗೆ ಕ್ರಮಿಸಬಹುದುʼ ಎಂದು ಹೇಳಿ ಅದರ ಚಾಲಕನ ಸ್ಥಾನದಲ್ಲಿ ಕುಳಿತರು. ಆ ವಾಹನ ಕೆಲವೇ ಕ್ಷಣಗಳಲ್ಲಿ ಮೇಲೇರಿತು. ಅವರು ಹೇಳಿದ್ದಂತೆಯೇ ಗಂಟೆಯೊಂದು ಕಳೆದಬಳಿಕ ಬುಧನ ಇನ್ನೊಂದು ಬದಿಗೆ ತಲುಪಿದ್ದರು. ಅಲ್ಲಿ ಕತ್ತಲು ಕವಿದಿತ್ತು. ಆದರೆ ಆಗಸವನ್ನು ಕಂಡ ಗಗನ್‌ಅಲ್ಲಿ ಅಮೋಘವಾದ ದೃಶ್ಯಗಳನ್ನು ಕಂಡು ಪ್ರಖರವಾದ ಎರಡು ನಕ್ಷತ್ರಗಳು ಆಗಸದಲ್ಲಿದ್ದ ಬೇರೆಲ್ಲ ನಕ್ಷತ್ರಗಳನ್ನೂ ಮೀರಿಸುವಂತೆ ಹೊಳೆಯುತ್ತಿದ್ದವು. ಅವುಗಳ ಪೈಕಿ ಒಂದಂತೂ ಈ ಹಿಂದೆ ಭೂಮಿಯ ಆಗಸದಲ್ಲಿ ಅವನು ನೋಡಿದ್ದ ಯಾವುದೇ ಗ್ರಹ ಅಥವಾ ನಕ್ಷತ್ರದ ಕಾಂತಿಯನ್ನೂ ಮೀರಿಸಿ ಹೊಳೆಯುತ್ತಿತ್ತು. ಇನ್ನೊಂದು ಅದಕ್ಕಿಂತ ಸ್ವಲ್ಪ ಕಡಿಮೆ ಪ್ರಕಾಶಮಾನವಾಗಿದ್ದರೂ ಅದು ಕೂಡ ಭೂಮಿಯ ಮೇಲಿಂದ ಕಾಣುವ ಯಾವುದೇ ನಕ್ಷತ್ರ ಅಥವಾ ಗ್ರಹಕ್ಕಿಂತಲೂ ಪ್ರಕಾಶಮಾನವಾಗಿ ಕಾಣುತ್ತಿತ್ತು. ಜೊತೆಗೆ ಅದರ ಸಮೀಪದಲ್ಲೇ ಅದರಷ್ಟು ಪ್ರಕಾಶಮಾನವಲ್ಲದ, ಆದರೆ ಬಹುತೇಕ ನಕ್ಷತ್ರಗಳನ್ನು ಮೀರಿಸುವಷ್ಟು ಪ್ರಕಾಶಮಾನವಾದ ಇನ್ನೊಂದು ಕಾಯ ಕಾಣಿಸಿತು. ಅವುಗಳನ್ನು ಕಂಡ ತಕ್ಷಣ ಅವು ನಕ್ಷತ್ರಗಳಲ್ಲ ಎಂಬುದು ಅವನಿಗೆ ಸ್ಪಷ್ಟವಾಗಿ ತಿಳಿಯಿತು. ಅದನ್ನು ಗಮನಿಸಿದ ಚಂದ್ರಶೇಖರ್‌ ʼಇವು ಯಾವುವು ಹೇಳು ನೋಡೋಣ?ʼ ಎಂದು ಕೇಳಿದರು. ʼಆ ಪ್ರಕಾಶಮಾನವಾದ ಗ್ರಹ ಶುಕ್ರ, ಆ ಜೋಡಿಗಳು ನಮ್ಮ ಭೂಮಿ ಮತ್ತು ಚಂದ್ರʼ ಎಂದ. ʼನಿಜ, ಶುಕ್ರನನ್ನು ನೋಡಿದೆಯಾ? ಶುಕ್ರ ಅಷ್ಟೊಂದು ಪ್ರಕಾಶಮಾನವಾಗಿದೆ ಅಲ್ಲವೇ? ಬುಧನಿಂದ ಕಾಣುವ ಶುಕ್ರನ ನೋಟ, ನಮ್ಮ ಸೌರವ್ಯೂಹದಲ್ಲಿ ಯಾವುದೇ ಗ್ರಹದಿಂದ ಕಾಣುವ ಬೇರೆ ಗ್ರಹದ ಅತ್ಯಂತ ಪ್ರಕಾಶಮಾನವಾದ ನೋಟ. ಶುಕ್ರ, ಭೂಮಿ ಮತ್ತು ಬುಧ ಎರಡರಿಂದಲೂ ಹೆಚ್ಚುಕಡಿಮೆ ಸಮಾನದೂರದಲ್ಲಿದೆ. ಕೆಲವೊಮ್ಮೆ ಬುಧನಿಂದಲೇ ಹೆಚ್ಚು ದೂರದಲ್ಲಿರುತ್ತದೆ. ಆದರೂ ಬುಧನ ಮೇಲಿನಿಂದಲೇ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಕಾರಣವೇನೆಂದು ಹೇಳಬಹುದೇ?ʼ ಎಂದು ಕೇಳಿದರು. ʼಹಾಂ, ಶುಕ್ರ ಭೂಮಿಗೆ ಒಳಗ್ರಹ, ಅಂದರೆ ಸೂರ್ಯನಿಗೆ ಭೂಮಿಗಿಂತ ಹೆಚ್ಚು ಸಮೀಪದಲ್ಲಿದೆ. ಆದ್ದರಿಂದ ಭೂಮಿಯ ಮೇಲಿನಿಂದ ಯಾವತ್ತೂ ಶುಕ್ರನ ಪೂರ್ಣಬಿಂಬವನ್ನು ನೋಡಲು ಸಾಧ್ಯವಿಲ್ಲ, ಆದರೆ ಬುಧನಿಗೆ ಶುಕ್ರ ಹೊರಗ್ರಹವಾಗಿರುವುದರಿಂದ ಶುಕ್ರನ ಪೂರ್ಣಬಿಂಬವನ್ನು ನೋಡಬಹುದಾಗಿದೆ. ಅಲ್ಲದೆ ಭೂಮಿಯ ಮೇಲಿಂದ ಶುಕ್ರನನ್ನು ಕೇವಲ ಮುಂಜಾನೆ ಮತ್ತು ಮುಸ್ಸಂಜೆ ಮಾತ್ರ ನೋಡಲು ಸಾಧ್ಯ, ಆದರೆ ಬುಧನ ಮೇಲಿನಿಂದ ಶುಕ್ರನನ್ನು ಇಡೀ ರಾತ್ರಿ ನೋಡಬಹುದಾಗಿದೆʼ ಎಂದ. ಚಂದ್ರಶೇಖರ್‌ ಮೆಚ್ಚಿ ತಲೆದೂಗಿದರು. 

         ʼಮಾವಾ, ರಾತ್ರಿಯಾಗಿ ಬಹಳ ಹೊತ್ತಾಯಿತು. ಚಂದ್ರೋದಯವಾಗಲು ಇನ್ನೆಷ್ಟು ಹೊತ್ತು ಬೇಕು? ಕೆಲವು ಕ್ಷಣ ಅಥವಾ ಗಂಟೆಗಳಲ್ಲಿ ಚಂದ್ರೋದಯವಾಗಬಹುದೇ ಅಥವಾ ದಿನಗಟ್ಟಲೆ ಕಾಯಬೇಕಾಗುತ್ತದೆಯೇ?ʼ ಎಂದು ಪ್ರಶ್ನಿಸಿದ ಗಗನ್.‌ ಚಂದ್ರಶೇಖರ್‌ ನಗುತ್ತ ಹೇಳಿದರು, ʼಗಂಟೆಗಳಲ್ಲ, ದಿನಗಳೂ ಅಲ್ಲ, ನೀನು ವರ್ಷಗಟ್ಟಲೆ ಕಾದರೂ ಇಲ್ಲಿ ಚಂದ್ರೋದಯ ಆಗುವುದೇ ಇಲ್ಲ, ಏಕೆಂದರೆ ಬುಧನಿಗೆ ಯಾವುದೇ ಚಂದ್ರ ಇಲ್ಲ. ನಮ್ಮ ಸೌರವ್ಯೂಹದಲ್ಲಿ ಬುಧ ಮತ್ತು ಶುಕ್ರ ಇವೆರಡೇ ಚಂದ್ರರಿಲ್ಲದ ಗ್ರಹಗಳು. ಆದರೆ ರಾತ್ರಿ ಬುಧನ ಆಗಸದಲ್ಲಿ ಶುಕ್ರ ಮತ್ತು ಭೂಮಿಗಳು ಕೊಡುವ ಬೆಳಕು ಯಾವ ಚಂದ್ರನ ಬೆಳಕಿಗೂ ಕಡಿಮೆಯಿಲ್ಲದಂತೆ ನಮಗೆ ದಾರಿ ತೋರಿಸುತ್ತದೆ ನೋಡು. ಜೊತೆಗೆ ಭೂಮಿಯ ಮೇಲೆ ಆಗಾಗ ಮೋಡ ಕವಿದು ಚಂದ್ರ, ನಕ್ಷತ್ರ ಎಲ್ಲವೂ ಮುಚ್ಚಿಹೋಗಿ ಹುಣ್ಣಿಮೆಯ ರಾತ್ರಿಗಳಲ್ಲಿ ಕೂಡ ಕರಾಳ ಕತ್ತಲು ಕವಿಯಬಹುದು. ಆದರೆ ಬುಧನ ಮೇಲೆ ವಾತಾವರಣವೇ ಇಲ್ಲದ ಕಾರಣ ಮೋಡಗಳೂ ಇಲ್ಲ, ಬಾಹ್ಯಾಕಾಶ ವೀಕ್ಷಣೆಗೆ ಯಾವ ಅಡಚಣೆಯೂ ಇಲ್ಲಿ ಇಲ್ಲʼ ಎಂದರು. 

         ಇದನ್ನೆಲ್ಲ ಇಷ್ಟುಹೊತ್ತು ವಾಹನದ ಒಳಗೇ ಕುಳಿತು ಸುತ್ತಲೂ ಅಳವಡಿಸಿದ್ದ ಗಾಜಿನ ಕಿಟಕಿಗಳಿಂದಲೇ ನೋಡಿದ್ದ ಗಗನದೀಪನಿಗೆ ಹೊರಗೆ ಹೋಗಿ ನೋಡಬೇಕೆಂಬ ಆಸೆಯಾಯಿತು. ವಾಹನದ ಬಾಗಿಲು ತೆರೆಯಲು ಹೊರಟ. ಕೂಡಲೇ ಅವನನ್ನು ತಡೆದ ಚಂದ್ರಶೇಖರ್‌ಅವನಿಗೆ ಒಂದು ಬಾಹ್ಯಾಕಾಶ ಉಡುಗೆಯನ್ನು ಕೊಟ್ಟರು. ʼಈ ವಾಹನದೊಳಗೆ ಭೂಮಿಯ ಮೇಲೆ ಇರುವಂಥದ್ದೇ ವಾತಾವರಣವನ್ನು ಕೃತಕವಾಗಿ ಸೃಷ್ಟಿ ಮಾಡಿದ್ದೇನೆ. ಆದರೆ ನೀನು ಹೊರಗೆ ಹೋಗುವುದಾದರೆ ಅಲ್ಲಿ ವಾತಾವರಣ ಇರುವುದಿಲ್ಲ ಎಂಬುದನ್ನು ನೆನಪಿಡಬೇಕು. ಹಾಗಾಗಿ ಈ ವಿಶೇಷವಾದ ಉಡುಪನ್ನು ಹಾಕಿಕೊಂಡೇ ಹೋಗಬೇಕು. ಇಲ್ಲವಾದರೆ ಕ್ಷಣಾರ್ಧದಲ್ಲಿ ನಿನ್ನ ಅಂತ್ಯವಾಗುತ್ತದೆ. ವಾಹನದ ಬಾಗಿಲು ತೆರೆಯುವ ಮೊದಲು ನೀನು, ನಾನು ಇಬ್ಬರೂ ಇದನ್ನು ಧರಿಸಿ ಆಮೇಲೆ ಕೆಳಗಿಳಿಯೋಣʼ ಎಂದರು. ಇಬ್ಬರೂ ಆ ಉಡುಪನ್ನು ಧರಿಸಿ ವಾಹನದಿಂದ ಕೆಳಕ್ಕಿಳಿದು ಬುಧನ ನೆಲದ ಮೇಲೆ ಓಡಾಡತೊಡಗಿದರು. 

         ಓಡಾಡುವಾಗ ತಾನು ಸಾಕಷ್ಟು ಹಗುರವಾಗಿದ್ದೇನೆ ಎಂಬ ಅನುಭವ ಅವನಿಗೆ ಆಯಿತು. ಬುಧನ ಮೇಲೆ ಗುರುತ್ವ ಭೂಮಿಯ ಮೇಲಿನ ಗುರುತ್ವದ ಶೇಕಡಾ 37ರಷ್ಟು ಮಾತ್ರ ಇರುತ್ತದೆ ಎಂದು ಮಾವ ಹೇಳಿದ್ದು ನೆನಪಾಯಿತು. ಅಲ್ಲಲ್ಲಿ ಹರಡಿದ್ದ ಉಲ್ಕಾಕುಳಿಗಳನ್ನು ವೀಕ್ಷಿಸುತ್ತಿದ್ದ ಅವನಿಗೆ ಹಠಾತ್ತಾಗಿ ತನ್ನಿಂದ ಸುಮಾರು ಐವತ್ತು ಮೀಟರ್ ಮುಂದೆ ಭಾರೀ ಗಾತ್ರದ ಕಲ್ಲೊಂದು ನೆಲಕ್ಕೆ ಅಪ್ಪಳಿಸುವುದು ಕಂಡಿತು. ಹೆಚ್ಚುಕಡಿಮೆ ಒಂದು ಫುಟ್ಬಾಲ್‌ಗಾತ್ರಕ್ಕಿದ್ದ ಆ ಭಾರಿ ಕಲ್ಲು ನೆಲಕ್ಕೆ ಅಪ್ಪಳಿಸುವುದನ್ನು ಕಂಡ ಅವನು ಭಯದಿಂದ ಒಂದು ಕ್ಷಣ ಕಣ್ಣುಮಚ್ಚಿಕೊಂಡ. ಅವನ ಕೈಗಳು ಯಾಂತ್ರಿಕವಾಗಿ ಕಿವಿಗಳನ್ನು ಮುಚ್ಚಿಕೊಳ್ಳಲು ಅತ್ತ ಹೋದವು. ಆದರೆ ಅವನಿಗೆ ಅಚ್ಚರಿಯಾಗುವಂತೆ ಯಾವುದೇ ಶಬ್ದವೂ ಕೇಳಲಿಲ್ಲ! ಇದೇನೆಂದು ಅಚ್ಚರಿಗೊಂಡು ಕಣ್ಣುತೆರೆದವನಿಗೆ ನೆಲಕ್ಕೆ ಅಪ್ಪಳಿಸಿದ ಕಲ್ಲು ಚೂರುಚೂರಾಗುವುದು ಕಣ್ಣಿಗೆ ಬಿತ್ತು. ಆದರೆ ಸುತ್ತೆಲ್ಲ ಧೂಳು ಎದ್ದಿದ್ದರೂ ಯಾವುದೇ ಶಬ್ದ ಕೇಳಲಿಲ್ಲ. ಅಲ್ಲದೇ ಧೂಳು ಎಲ್ಲೆಡೆ ಹರಡಿಕೊಳ್ಳುವ ಬದಲು ಮೇಲೆದ್ದಷ್ಟೇ ವೇಗವಾಗಿ ನೆಲಕ್ಕೆ ಬಿತ್ತು. ಆಗ ಅವನಿಗೆ ನೆನಪಾಯಿತು, ಬುಧನ ಮೇಲೆ ವಾತಾವರಣ ಇಲ್ಲವಾದ್ದರಿಂದ ಧೂಳು ಕೂಡ ಮೇಲಕ್ಕೆದ್ದಷ್ಟೇ ವೇಗವಾಗಿ ಕೆಳಕ್ಕೆ ಬೀಳುತ್ತದೆ ಎಂಬುದು ನೆನಪಾಯಿತು. 

         ತಾವು ಸೌರವ್ಯೂಹದ ಇತರ ಗ್ರಹಗಳನ್ನೂ ಸಂದರ್ಶಿಸಬೇಕಿರುವುದರಿಂದ ಹೊರಡೋಣವೆಂದು ಚಂದ್ರಶೇಖರ್‌ ಹೇಳಿದರು. ಗಗನ್‌ಗೆ ಒಂದು ವಿಷಯ ಇನ್ನೂ ತಲೆಯನ್ನು ಕೊರೆಯುತ್ತಿತ್ತು. “ಮಾವಾ, ನೀವು ಬುಧನ ಒಂದು ದಿನವನ್ನು ವಿವರಿಸಿದ್ದು ನನಗೆ ಅರ್ಥವಾಗಲಿಲ್ಲ. ನಕ್ಷತ್ರಗಳಿಗೆ ಸಂಬಂಧಿಸಿದಂತೆ ಅದು 58.7 ದಿನಗಳಲ್ಲಿ ಒಂದು ಸುತ್ತುತ್ತದೆ ಎಂದಿರಿ. ಆದರೆ ಸೂರ್ಯನಿಗೆ ಸಂಬಂಧಿಸಿದಂತೆ 176 ದಿನಗಳಿಗೆ ಒಂದು ಸುತ್ತು ಸುತ್ತುತ್ತದೆ ಎಂದಿರಿ. ಇದು ಹೇಗೆ ಸಾಧ್ಯ? ನಕ್ಷತ್ರಗಳಿಗೆ ಹಾಗೂ ಸೂರ್ಯನಿಗೆ ಸಂಬಂಧಿಸಿದಂತೆ ಎರಡೆರಡು ಬೇರೆಬೇರೆ ವೇಗಗಳಲ್ಲಿ ಬುಧ ಸುತ್ತುವುದಂತೂ ಸಾಧ್ಯವಿಲ್ಲವಲ್ಲ?” ಎಂದು ಕೇಳಿದ. “ಒಳ್ಳೆಯ ಪ್ರಶ್ನೆ, ಗಗನ್‌, ಹೇಳುತ್ತೇನೆ ಕೇಳು. ಚಲನೆ ಎಂಬುದು ಸಾಪೇಕ್ಷ ಎಂಬುದು ನಿನಗೆ ಗೊತ್ತಲ್ಲ? ಅಕ್ಕಪಕ್ಕದಲ್ಲಿ ಚಲಿಸುತ್ತಿರುವ ಎರಡು ರೈಲುಗಳು ಒಂದೇ ವೇಗದಲ್ಲಿ ಮುಂದುವರೆಯುತ್ತಿದ್ದರೆ ಮತ್ತು ಒಳಗೆ ಕುಳಿತವನಿಗೆ ಪಕ್ಕದ ರೈಲನ್ನು ಬಿಟ್ಟು ಬೇರೇನೂ ಕಾಣದಿದ್ದರೆ ಅವನಿಗೆ ಆ ರೈಲುಗಳು ಚಲಿಸುತ್ತಿವೆ ಎಂಬುದೇ ತಿಳಿಯುವುದಿಲ್ಲ. ಏಕೆಂದರೆ ಆ ಎರಡು ರೈಲುಗಳು ಒಂದಕ್ಕೊಂದು ಸಂಬಂಧಿಸಿದಂತೆ ನಿಶ್ಚಲ ಸ್ಥಿತಿಯಲ್ಲಿರುತ್ತವೆ. ನಾವು ಯಾವುದೇ ಗ್ರಹದ ಸ್ವಭ್ರಮಣ ವೇಗವನ್ನು ಲೆಕ್ಕಹಾಕಬೇಕಾದರೆ ಅದನ್ನು ಬೇರೆ ಯಾವುದಕ್ಕಾದರೂ ಹೋಲಿಸಿಯೇ ಹೇಳಬೇಕಾಗುತ್ತದೆ. ಅದಕ್ಕೆ ನಾವು ಎರಡು ವಿಧದ ವಸ್ತುಗಳಿಗೆ ಹೋಲಿಸಿದಂತೆ ಗ್ರಹದ ಸ್ವಭ್ರಮಣ ವೇಗವನ್ನು ಕಂಡುಹಿಡಿಯುತ್ತೇವೆ. ಒಂದು, ನಮ್ಮ ಸೌರವ್ಯೂಹಕ್ಕೆ ಸಂಬಂಧವೇ ಇರದ ಯಾವುದಾದರೂ ದೂರದ ನಕ್ಷತ್ರ, ಇನ್ನೊಂದು ನಮ್ಮದೇ ಸೂರ್ಯ. ದೂರದ ನಕ್ಷತ್ರಕ್ಕೆ ಸಂಬಂಧಿಸಿದಂತೆ ಹೇಳುವಾಗ ನಕ್ಷತ್ರ ನಮ್ಮ ಆಕಾಶದಲ್ಲಿ ಒಂದು ನಿಶ್ಚಿತ ಬಿಂದುವಿನಲ್ಲಿ ಕಂಡರೆ ಮತ್ತೆ ಅದು ಅದೇ ಬಿಂದುವಿಗೆ ಬರಲು ಎಷ್ಟು ಕಾಲ ಬೇಕಾಗುತ್ತದೆ ಎಂಬುದನ್ನು ಕಂಡುಹಿಡಿದು ಅದನ್ನು ಒಂದು ದಿನವೆನ್ನುತ್ತಾರೆ. ಇದನ್ನು ಸೈಡೆರಿಯಲ್‌ ಡೇ ಅಥವಾ ಒಂದು ತಾರಾದಿನ ಎನ್ನುತ್ತಾರೆ. ಇದನ್ನೇ ನಮ್ಮ ಸೂರ್ಯನಿಗೆ ಸಂಬಂಧಿಸಿದಂತೆ ಲೆಕ್ಕಹಾಕಿದಾಗ ಸೂರ್ಯ ಆಗಸದಲ್ಲಿ ಒಂದು ನಿಶ್ಚಿತ ಬಿಂದುವಿನಲ್ಲಿ ಕಾಣಿಸಿಕೊಂಡು, ಪುನಃ ಅದೇ ಬಿಂದುವಿನಲ್ಲಿ ಕಾಣಿಸಿಕೊಳ್ಳಲು ಬೇಕಾಗುವ ಕಾಲವನ್ನು ಒಂದು ಸೋಲಾರ್‌ ಡೇ ಅಥವಾ ಒಂದು ಸೌರದಿನ ಎನ್ನುತ್ತಾರೆ. ಈ ದಿನ ತಾರಾದಿನಕ್ಕೆ ಸಮನಾಗಿರುವುದಿಲ್ಲ. ಏಕೆಂದರೆ ಗ್ರಹಗಳು ತಮ್ಮ ಅಕ್ಷದ ಮೇಲೆ ಸುತ್ತುತ್ತಿರುವಂತೆಯೇ ಸೂರ್ಯನ ಸುತ್ತಲೂ ಸುತ್ತುತ್ತಿರುತ್ತವೆ. ಆದ್ದರಿಂದ ಆ ಗ್ರಹಕ್ಕೆ ಸಂಬಂಧಿಸಿದಂತೆ ಸೂರ್ಯನ ಸ್ಥಾನ ಬದಲಾಗುತ್ತದೆ. ಗ್ರಹ ತನ್ನ ಅಕ್ಷದ ಮೇಲೆ ಒಂದು ಸುತ್ತು ಸುತ್ತಿ ಮುಗಿಸಿದಾಗ ಅದು ಸೂರ್ಯನ ಸುತ್ತಲೂ ಸಾಕಷ್ಟು ದೂರ ಚಲಿಸಿರುವುದರಿಂದ ಅದರ ಸ್ಥಾನದಲ್ಲಿ ಅಲ್ಪ ವ್ಯತ್ಯಾಸವಾಗಿರುತ್ತದೆ. ಹಾಗಾಗಿ ಅದು ಮತ್ತೆ ಅದೇ ಸ್ಥಾನದಲ್ಲಿ ಕಾಣಬೇಕೆಂದರೆ ಇನ್ನೂ ಸ್ವಲ್ಪ ಕಾಲ ಬೇಕಾಗುತ್ತದೆ. ಭೂಮಿಯ ವಿಷಯದಲ್ಲಿ ಕೂಡ ಈ ಎರಡು ದಿನಗಳಲ್ಲಿ ಸುಮಾರು ನಾಲ್ಕು ನಿಮಿಷಗಳ ವ್ಯತ್ಯಾಸ ಕಂಡುಬರುತ್ತದೆ. ಆದರೆ ಭೂಮಿಯ ಸ್ವಭ್ರಮಣ ವೇಗ ಸಾಕಷ್ಟು ಹೆಚ್ಚಿರುವುದರಿಂದ ಈ ವ್ಯತ್ಯಾಸ ಅಷ್ಟು ಕಡಿಮೆ ಇರುತ್ತದೆ. ಆದರೆ ಬುಧನ ಸ್ವಭ್ರಮಣ ವೇಗ ತುಂಬಾ ಕಡಿಮೆ. ಆದ್ದರಿಂದ ಈ ವ್ಯತ್ಯಾಸ ವಿಪರೀತ ಹೆಚ್ಚು” ಎಂದು ವಿವರಿಸಿದರು. 

        ಹೊಸದೊಂದು ವಿಷಯ ತಿಳಿದುಕೊಂಡ ಖುಷಿಯಲ್ಲಿ ಗಗನ್‌ ಮಾವನಿಗೆ ಧನ್ಯವಾದ ಹೇಳುತ್ತಾ ಮರಳಿ ನೌಕೆಯನ್ನೇರಿದ.

Category:Fiction



ProfileImg

Written by Srinivasa Murthy

Verified