ಬಿಸಿಲಿನ ಝಳ ಮತ್ತು ಬಿಸಿಗಾಳಿಯಿಂದ ರಕ್ಷಣೆ ಹೇಗೆ?

ತಾಪಮಾನ ಹೆಚ್ಚಾದಂತೆ ಬಿಸಿಗಾಳಿ ಅಧಿಕವಾಗಿ ಜೀವಸಂಕುಲದ ಮೇಲೆ ಪ್ರತಿಕೂಲ ಪರಿಣಾಮ



image

ವಾತಾವರಣದಲ್ಲಿ ತಾಪಮಾನ ಹೆಚ್ಚಾದಾಗ ಗಾಳಿಯು ಬಿಸಿಯಾಗಿ ಜೀವಸಂಕುಲದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇನ್ನಿಲ್ಲದಂತೆ ಸುಡುವ ಬಿಸಿಲ ಬೇಗೆಯಿಂದ ರಕ್ಷಣೆ ಪಡೆದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ನಿರ್ಲಕ್ಷ್ಯದಿಂದ ಆರೋಗ್ಯ ಹದಗೆಡುವುದು ಕಟ್ಟಿಟ್ಟ ಬುತ್ತಿ.

ಬೇಸಿಗೆಯ ಸಂದರ್ಭದಲ್ಲಿ ಸಹಜವಾಗಿ ಉಷ್ಣಾಂಶ ಹೆಚ್ಚಾಗುತ್ತದೆ. ಮನುಷ್ಯನ ದೇಹಕ್ಕೆ ಚಳಿ, ಮಳೆ, ಬಿಸಿಲು ಎಲ್ಲವೂ ಸಮತೋಲನ ಸ್ಥಿತಿಯಲ್ಲಿರಬೇಕು. ಆಗ ಮಾತ್ರ ದೇಹ ಒಗ್ಗಿಕೊಳ್ಳುತ್ತದೆ. ಇಲ್ಲದಿದ್ದರೆ ಏನಾದರೊಂದು ಆರೋಗ್ಯ ಸಮಸ್ಯೆಗೆ ಸಿಲುಕಿ ನರಳುತ್ತದೆ. ಈ ಹಿನ್ನೆಲೆಯಲ್ಲಿ ಅತಿಯಾದ ಉಷ್ಣಾಂಶ ಕೂಡ ಮಾನವನಿಗೆ ಕಾಡುತ್ತದೆ. ಉಷ್ಣಾಂಶ ಹೆಚ್ಚಾಗುತ್ತಾ ಹೋದಂತೆ ವಾತಾವರಣದ ಗಾಳಿ ಕೂಡ ಬಿಸಿ ಗಾಳಿಯಾಗಿ ಮಾರ್ಪಾಡುತ್ತದೆ. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಯಾವೆಲ್ಲಾ ರೀತಿಯ ಪರಿಣಾಮಗಳು ಬೀರುತ್ತವೆ ಎಂಬುದರ ಕುರಿತು ಈ ಲೇಖನದಲ್ಲಿ ಒಂದಷ್ಟು ಅಂಶಗಳನ್ನು ನೀಡಲಾಗಿದೆ. ಅಲ್ಲದೇ ಬಿಸಿಗಾಳಿಯಿಂದ  ಸಂಭವಿಸಬಹುದಾದ ದುಷ್ಪರಿಣಾಮವನ್ನು ತಡೆಗಟ್ಟಲು ಅನುಸರಿಸಬೇಕಾದ ಪ್ರಮುಖ ಸಲಹೆಗಳನ್ನು ಸಹ ಇಲ್ಲಿ ಕೊಡಲಾಗಿದೆ‌. ಈ ಅಂಶಗಳನ್ನು ಅನುಸರಿಸಿ ಆರೋಗ್ಯ‌ದ ಸ್ಥಿತಿ ಉತ್ತಮವಾಗಿ ಇರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನ ಹರಿಸುವುದು ಸೂಕ್ತ.


ನಿರ್ಜಲೀಕರಣ

ಹೆಚ್ಚಾದ ತಾಪಮಾನದಿಂದ ಮನುಷ್ಯನ ದೇಹ ನಿರ್ಜಲೀಕರಣ ಗೊಳ್ಳುತ್ತದೆ. ಅಂದರೆ ದೇಹದಲ್ಲಿ‌ ನೀರಿನ ಪ್ರಮಾಣ ಕಡಿಮೆಯಾಗುವುದು. ಇದನ್ನು ನಿರ್ಲಕ್ಷ್ಯ ಮಾಡಿದರೆ ಮುಂದೆ ದೊಡ್ಟ ಮಟ್ಟದ ಆರೋಗ್ಯ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಹೆಚ್ಚು ತಾಪಮಾನ ಹಾಗೂ ಬಿಸಿಗಾಳಿಯ ವಾತಾವರಣದಲ್ಲಿ ನಿರ್ಜಲೀಕರಣ ವಾಗಲು ಕಾರಣವಾಗುವ ಪ್ರಮುಖ ಅಂಶಗಗಳೆಂದರೆ,

ಅತಿ ಹೆಚ್ಚು ದೈಹಿಕ ಚಟುವಟಿಕೆ : ಯಂತ್ರೋಪಕರಣಗಳ‌ ಮೂಲಕ ಮಾಡುವ ಕೆಲಸ ಅಥವಾ ಅತಿಯಾದ ದೈಹಿಕ ಶ್ರಮ ಹಾಕಿ ಕೆಲಸ‌ ಮಾಡುವುದರಿಂದ ನಿರ್ಜಲೀಕರಣ ಉಂಟಾಗಲು ಕಾರಣವಾಗುತ್ತದೆ. ಇದರೊಂದಿಗೆ ಅಸಮರ್ಪಕ ದ್ರವ ಆಹಾರದ ಸೇವನೆಯಿಂದಲೂ ಸಮಸ್ಯೆ ಉದ್ಭವ ಆಗುತ್ತದೆ.
ಬಿಸಿಲಿಗೆ ಹೆಚ್ಚು ತೆರದುಕೊಳ್ಳುವುದು, ಹೆಚ್ಚು ಸಮಯ ನಿರಂತರ ದುಡಿಯುವುದು ಈ ರೀತಿಯ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು.


ಮನುಷ್ಯನ ದೇಹ ನಿರ್ಜಲೀಕರಣಗೊಂಡರೆ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಅವುಗಳೆಂದರೆ

ನೀರಿನ ದಾಹ ಹೆಚ್ಚಾಗುವುದು : ಇದು ನಿರ್ಜಲೀಕರಣದ ಮೊದಲ ಹಂತ. ದೇಹಕ್ಕೆ ಅಗತ್ಯವಾದ ನೀರನ್ನು ಸೇವಿಸುವುದು ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಮೊದಲ ಆದ್ಯತೆಯಾಗಬೇಕು‌. ಕೆಲಸದ ಒತ್ತಡದಲ್ಲಿ ಅಥವಾ ಇನ್ಯಾವುದೇ ಕಾರಣಕ್ಕೆ ನೀರು ಸೇವೆನೆ ಮಾಡುವುದು ಕಡಿಮೆಯಾಗಬಾರದು.  ದ್ರವ ಸೇವನೆಯಲ್ಲಿ ನಿರ್ಲಕ್ಷ್ಯ ವಹಿಸುವುದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.

ನಿರ್ಜಲೀಕರಣದಿಂದ ಕುಳಿತಲ್ಲೇ ಬೆವರುವುದು, ತಲೆಸುತ್ತು, ತಲೆನೋವಿನಂತಹ ಸಮಸ್ಯೆಗಳು ಉದ್ಭವವಾಗುತ್ತವೆ. ಇದು ರಕ್ತದೊತ್ತಡದ ಮೇಲೂ ಪರಿಣಾಮ ಬೀರುತ್ತದೆ. ಅದಲ್ಲದೇ ಜ್ವರ ಬಂದಂತೆ ದೇಹ ಬಿಸಿಯಾಗುವುದು ಕೂಡ ನಿರ್ಜಲೀಕರಣದ ಲಕ್ಷಣವಾಗಿದೆ.

ಮೂತ್ರ ಮಾಡುವಾಗ ಹೆಚ್ಚಿನ ದುರ್ವಾಸನೆ ಬೀರುವುದು, ಮೂತ್ರ ವಿಸರ್ಜನೆ ವೇಳೆ ಉರಿ ಕಾಣಿಸಿಕೊಳ್ಳುವುದು ಮತ್ತು ಮೂತ್ರವು ಗಾಢ ಬಣ್ಣದಿಂದ ಕೂಡಿರುವುದು ಸಹ ನಿರ್ಜಲೀಕರಣದ ಲಕ್ಷಣವಾಗಿದೆ. 

ಈ ರೀತಿಯ ಪ್ರಾಥಮಿಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಒಂದು ಕಡೆ ಹೆಚ್ಚಾದ ತಾಪಮಾನ ಹಾಗೂ ಮತ್ತೊಂದು ಕಡೆ ಕಡಿಮೆ ದ್ರವ್ಯ ಸೇವನೆ ಇದಕ್ಕೆ ಮೂಲ ಕಾರಣವಾಗಿದೆ. ಹಾಗಾಗಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವ ಮೂಲಕ ಪುನರ್ಜಲೀಕರಣ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.  

ಪ್ರತಿಯೊಬ್ಬರೂ ನಿತ್ಯ ಐದಾರು ಲೀಟರ್‌ಗೂ ಹೆಚ್ಚು ಪ್ರಮಾಣದ ಶುದ್ಧ ಕುಡಿಯುವ ನೀರನ್ನು ಸೇವಿಸಬೇಕು. ಜೊತೆಗೆ ತಾಜಾ ಹಣ್ಣಿನ ರಸಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಗಟ್ಟಿ ಆಹಾರ ಪದಾರ್ಥಗಳನ್ನು ತ್ಯಜಿಸಿ, ಊಟ ತಿಂಡಿಗೂ ಸಾಧ್ಯವಾದಷ್ಟು ದ್ರವ ರೂಪದ ಆಹಾರವನ್ನೇ ಸೇವನೆ ಮಾಡುವುದು ಉತ್ತಮ ಅಭ್ಯಾಸ. ಬಹು ಮುಖ್ಯವಾಗಿ ಫ್ರಿಡ್ಜ್ ನಲ್ಲಿ ಇರಿಸಿದ ಪಾನೀಯಗಳ ಸೇವನೆ ಉಷ್ಣ ವಾತಾವರಣದ ಸಮಯದಲ್ಲಿ ಸರಿಯಾದ ಕ್ರಮವಲ್ಲ. ಮತ್ತು ಕೆಫೀನ್ ಅನ್ನು ತ್ಯಜಿಸಬೇಕು.


ನಿರ್ಜಲೀಕರಣದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು :

ಅತಿಸಾರ ಬೇದಿ

ಅಧಿಕ ತಾಪಮಾನದಿಂದ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ನೀರು ಕಲುಷಿತಗೊಳ್ಳುವುದು ಸಹಜ. ಕಲುಷಿತಗೊಂಡ ನೀರಿನ ಸೇವನೆಯಿಂದ ಸಾಮಾನ್ಯವಾಗಿ ಅತಿಸಾರ ಅಥವಾ ಬೇದಿ ಉಂಟಾಗುತ್ತದೆ. ಈ ಪರಿಣಾಮ ಸುಸ್ತು ಹೆಚ್ಚಾಗಿ ಇನ್ನಿಲ್ಲದ ಆರೋಗ್ಯ ಸಮಸ್ಯೆಗಳು ಉಲ್ಬಣವಾಗುತ್ತವೆ. ಅತಿಸಾರ ಅಥವಾ ಬೇದಿಯಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.

ಹೀಟ್ ಸ್ಟ್ರೋಕ್

ತಾಪಮಾನವು 40° ಅಥವಾ ಅದಕ್ಕಿಂತ ಹೆಚ್ಚು ದಾಖಲಾದಾಗ ಹೊರಗಿನ ವಾತಾವರಣಕ್ಕೆ ಹೆಚ್ಚು ತೆರೆದುಕೊಂಡರೆ ಹೀಟ್ ಸ್ಟ್ರೋಕ್‌ಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ಇದರಿಂದ ಬಲಹೀನಗೊಳ್ಳುವುದು, ಮಂಪರು ಉಂಟಾಗುವುದು, ಯಾವುದೇ ಕೆಲಸದಲ್ಲೂ ಆಸಕ್ತಿ ಕಡಿಮೆ ಆಗುವುದು, ದೇಹ ಕೈಕಾಲುಗಳು ಸುಡುವುದು, ಬೆವರು ಸುರಿಯುವುದು, ಪಿಡ್ಸ್‌ನಂತಹ ಸಮಸ್ಯೆಗೆ ಗುರಿಯಾಗುವುದು, ಕೊನೆಗೆ ಪ್ರಜ್ಞಾಹೀನ ಸ್ಥಿತಿಗೆ ತಲುಪುವ ಸಂಭವವಿರುತ್ತದೆ. ಈ ರೀತಿಯ ಸಮಸ್ಯೆಗಳಿಗೆ ತುತ್ತಾದ ವ್ಯಕ್ತಿಯನ್ನು ಮೊದಲು ತಂಪಾದ ವಾತಾವರಣ ಇರುವ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ಮೈ ಬಿಸಿಯಾಗಿದ್ದರೆ ಒದ್ದೆ ಬಟ್ಟೆಯಿಂದ ಇಡೀ ಮೈಯನ್ನು ತಂಪಾಗುವ ವರೆಗೂ ಒರೆಸಬೇಕು. ದೇಹದ ಮೇಲೆ ಒದ್ದೆ ಬಟ್ಟೆ ಇರಿಸಿ ತಲೆಯ ಮೇಲೆ ತಣ್ಣೀರು ಹಾಕಬೇಕು. ರೋಗ ಲಕ್ಷಣಗಳು ಉಲ್ಬಣಗೊಂಡು ದೀರ್ಘ ಕಾಲದವರೆಗೆ ಇದ್ದರೆ ಅಂತಹ ವ್ಯಕ್ತಿಯನ್ನು ಕೂಡಲೇ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆಗೆ ಒಳಪಡಿಸಬೇಕು. ಹೀಗೆ ಮುನ್ನೆಚ್ಚರಿಕೆ ವಹಿಸಿಕೊಳ್ಳುವುದು ಒಳ್ಳೆಯದು.


ನೀರಿನಂಶ ಕಡಿಮೆಯಾದರೆ ಬಹು ಅಂಗಾಂಗ ವೈಫಲ್ಯ

ಮಾನವನ ದೇಹದ ಮೂರನೇ ಎರಡು ಭಾಗ ನೀರಿನಿಂದ ಕೂಡಿದೆ.‌ ಇದು ಜೀರ್ಣಕ್ರಿಯೆಗೆ ಪೂರಕವಾಗಿರುತ್ತದೆ. ಅಲ್ಲದೇ  ಕೀಲುಗಳು ಮತ್ತು ಕಣ್ಣುಗಳ ಆರೋಗ್ಯ ಸೇರಿದಂತೆ ದೇಹದ ಕಶ್ಮಲಗಳನ್ನು ಹೊರ ಹಾಕುವ ಪ್ರಕ್ರಿಯೆಗೆ ಸಹಕಾರಿಯಾಗಿದೆ. ಹೀಗಾಗಿ ಮಾನವನ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಈ ಎಲ್ಲಾ ಪ್ರಕ್ರಿಯೆಗಳಲ್ಲಿ ತೊಡಕುಂಟಾಗಿ ಕೊನೆಗೆ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಬೇಕಾಗುತ್ತದೆ. ಇದರ ಪರಿಣಾಮವಾಗಿ ಸಾವು ಕೂಡ ಸಂಭವಿಸುವ ಸಾಧ್ಯತೆಗಳಿವೆ.


ಅನುಸರಿಸಬೇಕಾದ ಇತರ ಮಾರ್ಗಗಳು

ಮನೆಯಿಂದ ಹೊರ ಹೋಗುವಾಗ ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದು, ತಲೆಗೆ ಯಾವುದೇ ತರಹದ ಟೋಪಿ ಅಥವಾ ಕ್ಯಾಪ್ ಧರಿಸುವುದು, ನೀರನ್ನು ಜೊತೆಯಲ್ಲಿ ಕೊಂಡೊಯ್ಯುವುದು. ಸಾಧ್ಯವಾದಷ್ಟು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಓಡಾಡದೆ ಮನೆಯಲ್ಲಿ ಅಥವಾ ಇತರ ಸೂಕ್ತ ಸ್ಥಳಗಳಲ್ಲಿ ತಂಗುವುದು, ನಿರ್ಜಲೀಕರಣಕ್ಕೆ ಕಾರಣವಾಗುವ ಆಲ್ಕೋಹಾಲ್, ಟೀ, ಕಾಫಿಗಳನ್ನು ತಪ್ಪಿಸುವುದು, ತಂಗಳು ಆಹಾರ ಪದಾರ್ಥಗಳನ್ನು ಸೇವಿಸದಿರುವುದು, ನಿಂಬೆಹಣ್ಣಿನ ಪಾನೀಯ, ಮನೆಯಲ್ಲಿ ತಯಾರಿಸಿದ ಮಜ್ಜಿಗೆ ಸೇವಿಸುವುದು, ನಿತ್ಯ ತಣ್ಣೀರು ಸ್ನಾನ ಮಾಡುವುದು ಇವೆಲ್ಲಾ ಸೂಚನೆಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ.


ವಾಹನ ಚಾಲಕರು ವಹಿಸಬೇಕಾದ ಸುರಕ್ಷತೆ

ನೀವು ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದರೆ ಈ ಅಧಿಕ ಉಷ್ಣಾಂಶದ ಹಿನ್ನೆಲೆ ಕೆಲಸದ ಅವಧಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ವಾಹನ ಚಾಲನೆ ಸ್ಥಗಿತ ಗೊಳಿಸುವುದು ಉತ್ತಮ. ಬೆಳೆಗ್ಗೆ ಮತ್ತು ಸಂಜೆಯ ನಂತರ ವಹನ ಚಾಲನೆ ಮಾಡುವುದು ಸೂಕ್ತ. ಇದರೊಂದಿಗೆ ಆಗಿಂದಾಗ್ಗೆ ನೀರು ಹಾಗೂ ಹಣ್ಣಿನ ರಸ ಸೇವಿಸುವುದು ಒಳ್ಳೆಯದು, ಮಾಂಸಾಹಾರ ತಪ್ಪಿಸುವುದು, ಹೀಟ್ ಪದಾರ್ಥಗಳನ್ನು ಅರಿತು ತ್ಯಜಿಸುವುದರಿಂದ‌ ಆರೋಗ್ಯ ಹದಗೆಡದಂತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಒಟ್ಟಾರೆ ಬಿಸಿಲಿನ ತಾಪ ಹಾಗೂ ಬಿಸಿಗಾಳಿಯಿಂದ ರಕ್ಷಣೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನ ಹರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಮೇಲಿನ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಿದರೆ ಆರೋಗ್ಯವಾಗಿರಲು ಸಾಧ್ಯ.

 

Disclaimer: The views expressed in this article are solely those of the author and do not represent the views of Ayra or Ayra Technologies. The information provided has not been independently verified. It is not intended as medical advice. Readers should consult a healthcare professional or doctor before making any health or wellness decisions.
Category:Health and Wellness



ProfileImg

Written by ಎಂ.ಡಿ.ಯುನುಸ್

Verified

ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ