ಬಸವನಗುಡಿ ಹೋಟೆಲ್ ಗಳು ನಿಮಗೆಷ್ಟು ಗೊತ್ತು?

ಬಸವನಗುಡಿ ಎಂದರೇನೇ ಆಹಾರ ಪ್ರಪಂಚ!

ProfileImg
21 Mar '24
6 min read


image

ಬೆಂಗಳೂರು ಎಂಬ ಮಾಯಾ ನಗರಿಯಲ್ಲಿ ಬಸವನಗುಡಿಗೊಂದು ವಿಶೇಷವಾದ ಸ್ಥಾನಮಾನ. ಅದು ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳ ನಿಲಯ. ಪ್ರತಿ ರಸ್ತೆಯಲ್ಲೂ ಒಬ್ಬ ಕವಿ, ಸಾಹಿತಿ, ಸಂಗೀತಗಾರ, ಕಲಾವಿದ ಇಲ್ಲವೇ ಸಾಫ್ಟ್ ವೇರ್ ಇಂಜಿನಿಯರ್ ಗಳ ದರ್ಶನವಾಗುತ್ತದೆ.

ಅಷ್ಟೇ ಯಾಕೆ ಆಧ್ಯಾತ್ಮದಲ್ಲೂ ಬಸವನಗುಡಿ ಎತ್ತಿದ ಕೈ. ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಯ ಕಡಲೆಕಾಯಿ ತಿನ್ನದವರು, ಅವರು ಖಂಡಿತ ಬೆಂಗಳೂರಿಗರು ಆಗಿರಲು ಸಾಧ್ಯವೇ ಇಲ್ಲ!

ಪ್ರಥಮ ಪೂಜೆಗೆ ಬೃಹದಾಕಾರವಾಗಿ ನಿಂತಿದ್ದಾನೆ 'ದೊಡ್ಡ ಗಣಪತಿ', ಪಕ್ಕದಲ್ಲಿ ಒಂದು 25 ಮೆಟ್ಟಲು ಹತ್ತಿದರೆ 'ದೊಡ್ಡ ಬಸವಣ್ಣ' ಕೂಡ ನಾನಿದ್ದೀನಪ್ಪ ಅಂತಾನೇ. ಕಾರಂಜಿ ಆಂಜನೇಯನ ಕರುಣೆ, ಮಲ್ಲಿಕಾರ್ಜುನನ ಕೃಪಾಕಟಾಕ್ಷ ಕೂಡ ಬಸವನಗುಡಿಗರ ಮೇಲಿದೆ. ವಾಕಿಂಗ್ ಮಾಡೋರಿಗೆ ಬ್ಯುಗಲ್ ರಾಕ್ ಪಾರ್ಕ್, ಕೃಷ್ಣ ರಾವ್ ಪಾರ್ಕ್,  ಮಕ್ಕಳ ಆಟಕ್ಕೆಂದೆ ಶಾಮಣ್ಣ ಪಾರ್ಕ್.

ಡಿ.ವಿ ಗುಂಡಪ್ಪ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕಿ. ರಂ. ನಾಗರಾಜ್ ಹೀಗೆ ಅಸಂಖ್ಯಾತ ಸಾಹಿತಿಗಳಿಂದ ಸಾಹಿತ್ಯದ ಸುಧೆ ಪಸರಿಸಿದ ಸ್ಥಳವಿದು. ಇನ್ನು ಸುಗಮ ಸಂಗೀತ ಕ್ಷೇತ್ರದಲ್ಲಿ ಸಿ. ಅಶ್ವತ್, ಜೀ.ವಿ. ಅತ್ರಿ, ಉಪಾಸನ ಮೋಹನ್ ಹೇಳುತ್ತಲೇ ಹೋದರೆ ಕೊನೆಯಾಗದಷ್ಟು ಸಂಗೀತಗಾರರ ಪಟ್ಟಿ ಸಿದ್ದವಾಗುತ್ತದೆ. ಸಿನಿಮಾರಂಗದಲ್ಲೂ ಪ್ರಣಯರಾಜ ಶ್ರೀನಾಥ್, ಸಿ. ಆರ್. ಸಿಂಹ, ಮಾಸ್ಟರ್ ಹಿರಣ್ಣಯ್ಯ, ಧ್ರುವ ಸರ್ಜಾ ಇನ್ನು ಅದೆಷ್ಟೋ ಹಿರಿಯ-ಕಿರಿಯ ತೆರೆಯ ಕಲಾವಿದರುಗಳ ಕಲಾಭೂಮಿ ಬಸವನಗುಡಿ. ಇನ್ನು ಬೆಂಗಳೂರು ಸಿಲಿಕಾನ್ ವ್ಯಾಲಿಯಾದರೆ ಅದರ ಹಾರ್ಟು ಬಸವನಗುಡಿಯಲ್ಲಿದೆ.

ಅಪ್ಪಟ ಕನ್ನಡಿಗರ ಮಲ್ಲಿಗೆಯಂತಹ ಪ್ರದೇಶ ಬಸವನಗುಡಿ. ಅದಕ್ಕೆ ನೀವು ಗಾಂಧಿ ಬಜಾರಿನಲ್ಲಿ ಕಾಲಿಟ್ಟರೆ ಎಲ್ಲೆಲ್ಲೂ ಮಲ್ಲಿಗೆಯ ಘಮಘಮ, ಬಸವನಗುಡಿ ಎಂದರೆ ಸಾಂಸ್ಕೃತಿಕ ಸರಿಗಮ. ಬಸವನಗುಡಿಯ ವೈವಿಧ್ಯತೆ ಅಡಗಿರುವುದು ಅದರ ಆಹಾರ ಸಂಸ್ಕೃತಿಯಲ್ಲಿ. ಬಹುಶಹ ಇಲ್ಲಿರುವಷ್ಟು ಹೋಟೆಲ್ ಗಳು ಮತ್ತೆಲ್ಲೂ ಬೆಂಗಳೂರಿನಲ್ಲಿ ಕಾಣಸಿಗದು. ಫುಟ್ ಬಾತ್ ನಿಂದ ಮೊದಲುಗೊಂಡು ದರ್ಶನಿಗಳು, ಹೋಟೆಲ್ ಗಳು, ರೆಸ್ಟೋರೆಂಟ್ ಗಳಲ್ಲಿ ದೊರೆಯುವಂತಹ ಇಡ್ಲಿ, ದೋಸೆ ,ಚಿತ್ರಾನ್ನದಿಂದ ಮೊದಲು ಗೊಳಿಸಿ ಭರ್ಜರಿ ಊಟ, ಸೌತ್, ನಾರ್ತ್, ಚೈನೀಸ್, ಕಾಂಟಿನೆಂಟಲ್, ಚಾಟ್ಸ್, ಹೋಳಿಗೆ…ಹೀಗೆ ವೈವಿಧ್ಯಮಯವಾದ ಆಹಾರ ಬಸವನಗುಡಿಯ ವೈಶಿಷ್ಟತೆ!

ಪ್ರತಿಯೊಂದು ಹೋಟೆಲ್ಗೂ ಇಲ್ಲಿ ತನ್ನದೇ ಆದ ವಿಶೇಷವಿದೆ. ಇವುಗಳಲ್ಲಿ ಕೆಲವೊಂದು ಬೆಂಗಳೂರಿನ ಅತ್ಯಂತ ಸುಪ್ರಸಿದ್ಧ ದರ್ಶಿನಿಗಳು ಸಹ ಆಗಿವೆ ಮತ್ತೆ ಕೆಲವೊಂದು ವಿಶ್ವವಿಖ್ಯಾತಿಯನ್ನು ಸಹ ಹೊಂದಿವೆ. ಈಗ ಮೊದಲು ನಮ್ಮ ಪ್ರಯಾಣವನ್ನು ಬಸವನಗುಡಿಯ ಹೃದಯ ಭಾಗವಾದ ನರಸಿಂಹರಾಜ ಕಾಲೋನಿಯಿಂದ ಮೊದಲು ಗೊಳಿಸೋಣ. ಎನ್. ಆರ್. ಕಾಲೋನಿಯ ಬಸ್ ಸ್ಟಾಪ್ ನಿಂದ ಬಲಕ್ಕೆ (ಕಟ್ಟೆ ಭವನದ ಕಡೆಗೆ) ಒಂದು 20 ಹೆಜ್ಜೆ  ಇಟ್ಟರೆ ನಿಮಗೆ ಎದುರಾಗುವುದು ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ಸುಪ್ರಸಿದ್ಧ 'ದ್ವಾರಕಾ ಹೋಟೆಲ್'.

ದ್ವಾರಕಾ ಹೋಟೆಲ್ ಹೆಸರು ಕೇಳಿದ ತಕ್ಷಣ ಬಾಯಲ್ಲಿ 'ಖಾಲಿ ದೋಸೆ' ನೀರೂರಿಸುತ್ತದೆ. ಹೌದು 'ದ್ವಾರಕಾ ಹೋಟೆಲ್' ನಾ ಖಾಲಿ ದೋಸೆ ಅಷ್ಟೊಂದು ಪ್ರಸಿದ್ಧವಾದದ್ದು. ಇಲ್ಲಿ ಖಂಡಿತ ನೀವು ಖಾಲಿ ದೋಸೆ, ಕ್ಯಾರೆಟ್ ಹಲ್ವ,  ಜೊತೆಗೊಂದು ಸ್ಟ್ರಾಂಗ್ ಕಾಫಿ ಕಾಫಿ ಟೆಸ್ಟ್ ಮಾಡಲೇಬೇಕು. ಇದರ ಸಮಯ ಬೆಳಗ್ಗೆ 7.30 ರಿಂದ ಮಧ್ಯಾಹ್ನ 12:30. ಸಂಜೆ 3:30 ರಿಂದ ರಾತ್ರಿ 8:30. ಮಂಗಳವಾರ ರಜಾದಿನ.

ಈಗ ನಮ್ಮ ಪ್ರಯಾಣವನ್ನು ವಾಪಸ್ ಎನ್. ಆರ್. ಕಾಲೋನಿ ಬಸ್ ಸ್ಟಾಪ್ ಕಡೆಗೆ ತೆಗೆದುಕೊಂಡು ಬರೋಣ. ಬಸ್ ಸ್ಟಾಪ್ ಗೆ ಎದುರುನಲ್ಲಿಯೇ 'ಸೌತ್ ಕಿಚನ್' ಎದರಾಗುತ್ತದೆ. ಇಲ್ಲಿ ಯಾವುದೇ ತಿಂಡಿ ಅಥವಾ ಚಟ್ನಿಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಇವರು ಬಳಸುವುದಿಲ್ಲ. ಮೃದುವಾದ ಇಡ್ಲಿಗೆ ಸೌತ್ ಕಿಚನ್ ತುಂಬಾ ಫೇಮಸ್. ಇದರ ಜೊತೆಗೆ ನೀವು ಇಲ್ಲಿ ಸಿರಿಧಾನ್ಯಗಳ ಉಪ್ಪಿಟ್ಟು, ಪೊಂಗಲ್ ಖಂಡಿತ ತಿನ್ನಲೇಬೇಕು. ಇದರ ಎದುರಿಗೆ 'ದೋಸೆ ಮಾಸ್ಟರ್' ಇದ್ದಾನೆ. ದ್ವಾರಕಾದಲ್ಲಿ ಖಾಲಿ ದೋಸೆ ತಿಂದಿರುವ ನೀವಿಲ್ಲಿ ಮಸಾಲೆ ದೋಸೆಯನ್ನು ಸವಿಯಿರಿ.

‘ಏನ್ ಗುರು ಬರಿ ದೋಸೆ, ಇಡ್ಲಿ ಕಥೆನೇ ಆಯ್ತು, ಉತ್ತರ ಕರ್ನಾಟಕದ ತಿಂಡಿ ತಿನಿಸುಗಳೇನು ಇಲ್ವಾ?ಮಾರಾಯ!’ ಅಂತ ನೀವುಗಳು ಕೇಳಬಹುದು. ಅದರ ಸವಿರುಚಿಗೆಂದೇ ‘ ಹೋಟೆಲ್ ಗಮಗಮ’ ಬಸ್ ಸ್ಟಾಪ್ ನಲ್ಲಿಯೇ ಇದೆ. ಉತ್ತರ ಕರ್ನಾಟಕದ ಅದರಲ್ಲೂ ಗದಗ ಶೈಲಿಯ ಜೋಳದ ರೊಟ್ಟಿ, ಶೇಂಗಾ, ಪಲ್ಯ ಜೊತೆಗೆ ಬದನೆಕಾಯಿ ಬಜ್ಜಿ ಇಲ್ಲಿ ಸಕ್ಕತ್ತು ಭರ್ಜರಿ ವ್ಯಾಪಾರ. 'ಬರೀ ತಿಂಡಿಗಳೇ ಆಯ್ತು, ಚಾಟ್ಸ್  ಎಲ್ಲಿ? ಅಂತ ನೀವು ಕೇಳೋದಕ್ಕೆ ಮೊದಲೇ ಹೇಳಿ ಬಿಡ್ತೀನಿ.

ಗಮಗಮ ಇಂದ 10 ಹೆಜ್ಜೆ ಮುಂದೆ ನಡೆದರೆ ಸಾಕು ಶ್ರೀನಿವಾಸ ಕೂಲ್ ಕಾರ್ನರ್ ಕೂಲಾಗಿ ನಿಮ್ಮನ್ನು ಸ್ವಾಗತಿಸುತ್ತದೆ. ಬಸವನಗುಡಿಯ ಒನ್ ಆಫ್ ದ ಬೆಸ್ಟ್ ಚಾಟ್ಸ್ ಸೆಂಟರ್ ಇದು. ಇಲ್ಲಿ ಮಸಾಲ ಪುರಿ ತಿಂದು, ಮ್ಯಾಂಗೋ ಜ್ಯೂಸ್ ಕುಡಿದು ಮುಂದೆ 10 ಹೆಜ್ಜೆ ಹಾಕಿದ್ರೆ ಸಾಕು ಉತ್ತರ ಪ್ರದೇಶದ ಪ್ರಸಿದ್ಧ 'ತಿವಾರಿ ಮಿಠಾಯಿ' ನಲ್ಲಿ ಉತ್ತರ ಭಾರತೀಯ ತಿಂಡಿ ತಿನಿಸುಗಳನ್ನು ಸವಿಯಲು ಅವಕಾಶ ಸಿಗುತ್ತದೆ.

ಅಲ್ಲಿಂದ ಐದಾರು ಹೆಜ್ಜೆಯಲ್ಲಿಯೇ ನಿಮಗೆ ‘ಶ್ರೀ ಗುರು ಕೊಟ್ಟೂರೇಶ್ವರ ದಾವಣಗೆರೆ ಬೆಣ್ಣೆ ದೋಸೆ’ ಕೈ ಬೀಸಿ ಕರೆಯುತ್ತದೆ. ಬೆಂಗಳೂರಿನಲ್ಲಿ ಆರಂಭವಾದ ಮೊದಮೊದಲ ದಾವಣಗೆರೆ ಬೆಣ್ಣೆ ದೋಸೆಗಳಲ್ಲಿ ಇದು ಸಹ ಒಂದಾಗಿದೆ. ಇಲ್ಲೊಂದು ಬೆಣ್ಣೆ ದೋಸೆ ತಿಂದು, ನೆಟ್ಟಗೆ ನೆಟ್ ಕಲ್ಲಪ್ಪ ಸರ್ಕಲ್ ಗೆ ಹೋಗಿ ನಿಂತ್ಕೊಳ್ಳಿ. ಇಲ್ಲಿ ನಿಮಗೆ ನಾಲ್ಕಾರು ತರದ ಆಯ್ಕೆಗಳಿವೆ. ಮೊದಲನೇದು 'ಬಾಂಬೆ ಬಜ್ಜಿ', ಇಲ್ಲಿ ಉದ್ದನೆಯ ಮೆಣಸಿನಕಾಯಿ ಬಜ್ಜಿ ಸಕ್ಕತ್ ಹಾಟ್ ಅಂಡ್ ಸ್ಪೈಸಿ. ಅದರ ಪಕ್ಕದಲ್ಲಿ ‘ಬಳ್ಳಾರಿ ಸೈಕಲ್ ಕೋವಾ’ ದಲ್ಲಿ ಪಾವ್ ಬಾಜಿ ತಿಂದು ಜ್ಯೂಸ್ ಕುಡಿದರೆ ಸೂಪರ್ ಆಗಿರುತ್ತೆ. ಇದರ ಪಕ್ಕದಲ್ಲಿಯೇ ಇರುವ ‘ಉಪಹಾರ ದರ್ಶನಿ’ ಯ ವೈಶಿಷ್ಟವೆಂದರೆ ಇದು ಬೆಂಗಳೂರಿನಲ್ಲಿ ಆರಂಭವಾದ ಎರಡನೆಯ ದರ್ಶಿನಿ ಹೋಟೆಲ್. ಬೆಂಗಳೂರಿನ ಮೊಟ್ಟ ಮೊದಲ ದರ್ಶನಿ ಹೋಟೆಲ್, ಜಯನಗರ ಮೂರನೇ ಬ್ಲಾಕ್ ನಲ್ಲಿದೆ.

ಉಪಹಾರ ದರ್ಶನಿ ಇಡ್ಲಿ-ಸಾಂಬಾರು ಎಂತಹ ಅದ್ಭುತವಾದ ಕಾಂಬಿನೇಷನ್ ಅಂತ ಖಂಡಿತ ನೀವು ತಿಂದ ಮೇಲೆ ಹೇಳೇ ಹೇಳ್ತೀರಾ. ಬೆಣ್ಣೆ ಮಸಾಲೆ ದೋಸೆ ಕೂಡ ಇಲ್ಲಿ ತುಂಬಾ ರುಚಿಕರ. ಇಷ್ಟೆಲ್ಲಾ ತಿಂದಮೇಲೂ ನಿಮಗೆ ಇನ್ನೇನಾದರೂ ಸಿಹಿ ತಿನ್ನುವ ಆಸೆ ಇದ್ದರೆ ಉಪಹಾರ ದರ್ಶನಿ ಪಕ್ಕದಲ್ಲಿಯೇ 'ಮನೆ ಹೋಳಿಗೆ' ಇದೆ. ಬೇಳೆ ಹೋಳಿಗೆಯಿಂದ ಮೊದಲುಗೊಂಡು ಕ್ಯಾರೆಟ್ ಹೋಳಿಗೆ ತನಕ ಇಲ್ಲಿ ಅನೇಕ ಹೋಳಿಗೆಗಳು ಬಿಸಿ ಬಿಸಿ, ರುಚಿ ರುಚಿ, ಸವಿ ಸವಿ…

‘ಏನ್ ಗುರು ಬರೀ ವೆಜ್ಜೆ ಆಯ್ತು, ನಾನ್ ವೆಜ್ ಏನು ಇಲ್ವಾ?’ ಅಂತ ನೀವು ಕೇಳಕ್ಕೆ ಮೊದಲೇ ಅದನ್ನು ಹೇಳ್ಬಿಡ್ತೀನಿ. ನೆಟ್ ಕಲ್ಲಪ್ಪ ಸರ್ಕಲ್ ನಲ್ಲಿಯೇ  ‘ಜೆ.ಕೆ. ಕೋಸ್ಟಲ್ ಕರಿ’ ಅಂತ ಒಂದು ನಾನ್ ವೆಜ್ ಕೋಸ್ಟಲ್ ಹೋಟೆಲ್ ಇದೆ.ಇದರಲ್ಲಿ. ಕೋಸ್ಟಲ್, ತಂದೂರಿ, ಇಂಡಿಯನ್, ಚೈನೀಸ್ ದೊರೆಯುತ್ತದೆ. ಅದೇ ರಸ್ತೆಯಲ್ಲಿ ಒಂದು 15 ಹೆಜ್ಜೆ ಹಾಕಿದ್ದರೆ, ಹಳೆಯ ಒಂದು ಸಣ್ಣ ಹೋಟೆಲ್ ಸಿಗುತ್ತೆ; ಶ್ರೀ ಲಕ್ಷ್ಮಿ ವೆಂಕಟೇಶ್ವರ ಹೋಟೆಲ್. ಇಲ್ಲಿಯ ಖಾರ ಬಾತ್ , ಕೇಸರಿ ಬಾತ್ ತಿಂದವರಿಗೆ ಗೊತ್ತು ತಿನ್ನುವದರೊಳಗಿನ  ಸ್ವರ್ಗ.

ಅಲ್ಲಿಂದ ಮುಂದೆ ಹೋಗೋದು ಬೇಡ, ವಾಪಸ್ ನೆಟ್ ಕಲ್ಲಪ್ಪ ಸರ್ಕಲ್ ನ ‘ಉಪಹಾರ ದರ್ಶನಿ’ ಕಡೆಗೆ ಬಂದು ಇಲ್ಲಿಂದ ಡಿವಿಜಿ ರಸ್ತೆಯಲ್ಲಿ ಮುಂದಿನ ಪಯಣ ಮುಂದುವರಿಸೋಣ. ‘ನಮ್ ಕೈಯಲ್ಲಿ ನಿಂತ್ಕೊಂಡು ತಿನ್ನಕ್ಕಾಗಲ್ಲಪ್ಪ ಆರಾಮಾಗಿ ಕೂತು ತಿನ್ನೋಣ’ ಅನ್ನೋದಾದರೆ  'ನಿಸರ್ಗ ಗಾರ್ಡನ್' ಗೆ ಹೋಗೋಣ. ನಿಜಕ್ಕೂ ನಿಸರ್ಗದ ಮಧ್ಯೆ ಕೂತು ತಿಂದಂತೆ ಇರುತ್ತೆ ನಿಸರ್ಗ ರೆಸ್ಟೋರೆಂಟ್ ನಲ್ಲಿ ಕುಳಿತು ತಿನ್ನುವ ಅನುಭವ. ಸೌತ್, ನಾರ್ಥ್, ಚೈನೀಸ್, ತಿಂಡಿ, ಊಟ ಎಲ್ಲ ಸಿಗುತ್ತೆ. ಸ್ವಲ್ಪ ಮುಂದೆ ಹೋಗಿ ನಿಂತ್ರೆ ಒಂದು ಸಣ್ಣ ಸರ್ಕಲ್, ಬಲಕ್ಕೆ ತಗೊಂಡ್ರೆ ಮೊದಲು ಬಂಗಾರಪೇಟೆ ಚಾಟ್ಸ್, ಅದರ ಎದುರಿಗೆ ಕರ್ನಾಟಕ ರೊಟ್ಟಿ ಅಂಗಡಿ. ಆರಾಮಾಗಿ ಕೂತು ಜೋಳದ ರೊಟ್ಟಿ ಊಟ ಉಂಡು ಬನ್ನಿ.

ಎಡಗಡೆಗೆ ತಿರುಗಿ ಬ್ಯುಗಲ್ ರಾಕ್ ಕಡೆಗೆ ಹೊರಟರೆ ಬೈಟು ಕಾಫಿ. ಇಡ್ಲಿ, ದೋಸೆ, ಕಾಫಿ ಕುಡಿದು ಅಲ್ಲಿ ಸಿಗೋ ದೋಸೆ ಬ್ಯಾಟರ್ ನಾ ಮನೆಗೆ ತಗೊಂಡು ಹೋಗಿ ಬೈಟು ಕಾಫಿಯ ದೋಸೆ ಅಷ್ಟೇ ರುಚಿಯಾದ ದೋಸೆ ಮನೆಯಲ್ಲಿ ನೀವೇ ಮಾಡಿ ತಿನ್ನಿ. ಅದರ ಪಕ್ಕದಲ್ಲಿರೋ 'ಬಾಂಬೆ-ಕೊಲ್ಕತ್ತಾ' ಚಾಟ್ಸ್ ಪಾಯಿಂಟ್ ನಲ್ಲಿ ಸಕ್ಕತ್ತಾಗಿರೋ ಚಾಟ್ಸ್ ಸಿಗತ್ತೆ, ಹಾಗೆ ಮುಂದೆ ಈಸ್ಟ್ ಆಂಜನೇಯ ರೋಡ್ನಲ್ಲಿ ನಡೆದುಹೋದರೆ ರಾಜಸ್ಥಾನಿಗಳು ನಡೆಸುವಂತಹ 'ಬಾಂಬೆ ಸ್ನಾಕ್ಸ್' ನಲ್ಲಿ ಕಚೋರಿ, ಪಾಪಿಡಿ ಮಿಸ್ ಮಾಡದೆ ತಿನ್ನಿ.

ಅಲ್ಲಿಂದ ನೇರವಾಗಿ ಗಾಂಧಿ ಬಜಾರ್ ಸರ್ಕಲ್ಗೆ ಬಂದು ನಿಂತುಬಿಡಿ. ಅಲ್ಲಿಂದ ನೇರವಾಗಿ ಚಲಿಸಿ ಒಂದು 50 ಹೆಜ್ಜೆ ಇಟ್ಟರೆ ಹಳೆಯ ಪ್ರಸಿದ್ಧ ಹೋಟೆಲ್ ಒಂದು ನಿಮಗೆ  ಕಾಣುತ್ತೆ ಅದೇ ಬಸವನಗುಡಿಯ  MTR.  ‘ಮಹಾಲಕ್ಷ್ಮಿ ಟಿಫನ್ ರೂಮ್’. ಹಳೆ ಕಟ್ಟಡ, ಹಳೆ ಪೀಠೋಪಕರಣಗಳು, ಅದೇ ಹಳೆ ಕಾಲದ ಸ್ವಾದಿಷ್ಟಕರ ರುಚಿಕರ ತಿಂಡಿ ತೀರ್ಥ. ಇಲ್ಲಿ ನೀವು ತಪ್ಪದೆ ‘ಪೂರಿ ಸಾಗು’ ತಿನ್ನಲೇಬೇಕು. ಜೊತೆಗೆ ಕ್ಯಾರೆಟ್ ಹಲ್ವ ಮಿಸ್ ಮಾಡಿಕೊಳ್ಳುವ ಆಗಿಲ್ಲ

ಹಾಗೆ ಸ್ವಲ್ಪ ಮುಂದೆ ಹೋಗಿ ಎಡಕ್ಕೆ ನಾರ್ತ್ ರೋಡ್ ನ ಕಾರ್ನರ್ ನಲ್ಲಿ 'ಎಸ್. ಎಲ್. ವಿ' ಸಿಗುತ್ತೆ. ಇಲ್ಲಿ ಉಪ್ಪಿಟ್ಟು ಮಿಸ್ ಮಾಡದೆ ತಿಂದ್ಬಿಡಿ. ಏನಿಲ್ಲ ಆ ಕಡೆಯಿಂದ ಮತ್ತೆ  ಸರ್ಕಲ್ ನಲ್ಲಿ ಎಡಕ್ಕೆ ತಗೊಂಡ್ರೆ ಗಾಂಧಿ ಬಜಾರ್ ಮೈನ್ ರೋಡ್ ಗೆ (ಆಶ್ರಮ ಕಡೆಯಿಂದ) ಬಂದು ಬಿಡ್ತೀರಾ.

ಬಳೆಪೇಟೆ 'ಉಡುಪಿ ಶ್ರೀ ಕೃಷ್ಣ ಭವನ್' ಯಾರಿಗೊತ್ತಿಲ್ಲ ಹೇಳಿ? ಅದೇ 'ಶ್ರೀಕೃಷ್ಣ ಭವನ್ ಗಾಂಧಿ' ಬಜಾರ್ ನಲ್ಲೂ ತನ್ನ ಶಾಖೆಯನ್ನು ಹೊಂದಿದೆ. ಇಲ್ಲಿ ಕುಟುಂಬ ಸಮೇತರಾಗಿ ನೀವು ಒಳ್ಳೆ ಊಟವನ್ನು ಸವಿಯಬಹುದು. ಜೊತೆಗೆ ಇದೇ ಕಟ್ಟಡದಲ್ಲಿ ‘ಶ್ರೀ ವೆಂಕಟೇಶ್ವರ ಸ್ವೀಟ್- ಮೀಟ್ ಸ್ಟಾಲ್’ ಇದ್ದು ಸಿಹಿ ಪದಾರ್ಥಗಳನ್ನು ಖರೀದಿಸಿ. ಹಾಗೆ ಐದಾರು ಮಳಿಗೆಗಳನ್ನು ದಾಟಿಕೊಂಡು ಬಂದರೆ ಅಲ್ಲಿ ಕೂಡ ‘ಕಾಂತಿ ಸ್ವೀಟ್ಸ್’ ಇದೆ. ಇದು ಕೂಡ ಸಿಹಿ ಮತ್ತು ಖಾರ ಪದಾರ್ಥಗಳಿಗೆ ಪ್ರಸಿದ್ಧಿ ಹೊಂದಿದೆ.

ಗಾಂಧಿ ಬಜಾರ್ ಸರ್ಕಲ್ ನ ‘ಐಸ್ ಥಂಡರ್’ ರಲ್ಲಿ ಐಸ್ ಕ್ರೀಮ್ ತಿನ್ನಿ, ಆಶಾ ಸ್ವೀಟ್ ನಲ್ಲಿ ಗುಲಾಬಿ ಜಾಮೂನ್ ಸವಿಯಿರಿ. ಎದುರಿಗೆ ಕಾಣುವ ಸೆಲ್ವರಾಜ್ ಕಡ್ಲೆಪುರಿ ಅಂಗಡಿಯಲ್ಲಿ ಕಡ್ಲೆಪುರಿ ಖರೀದಿ ಮಾಡಿ, ಈ ಅಂಗಡಿಯ ಕಡ್ಲೆಪುರಿ ಸಿಕ್ಕಾಪಟ್ಟೆ ಫೇಮಸ್. ಮನೆಗೆ ತಗೊಂಡು ಹೋಗಿ ಮಂಡಕ್ಕಿ ಒಗ್ಗರಣೆ ಹಾಕಿ, ಕಡ್ಲೆಪುರಿ ಉಪ್ಪಿಟ್ ಮಾಡಿ.. ಅಲ್ಲೇ ಘಮಘಮಿಸೋ ಮಲ್ಲಿಗೆ, ಜಾಜಿ, ಕನಕಾಂಬರ ಮಾರ್ತಾ ಇರ್ತಾರೆ ಒಂದೆರಡು ಮೊಳ ತಗೊಳ್ಳಿ.

'ಏನ್ರೀ ಇಷ್ಟೆಲ್ಲಾ ಹೇಳ್ತಾ ಇದಿರಿ, ಆ ಒಂದು ಹೋಟೆಲ್ ಬಿಟ್ಟಿದ್ದೀರಾ?' ಅಂತ ಕೇಳಬೇಕು ಅಂತ ನೀವಿದ್ದೀರಾ ಅಂತ ನನಗೆ ಗೊತ್ತು. ಹೌದು ಅದೇ ಹೋಟೆಲ್, ಬೆಂಗಳೂರಿನ ಅತ್ಯಂತ ಹಳೆಯ ಈಗಲೂ ಅಷ್ಟೇ ಜನಪ್ರಿಯವಾದ 'ವಿದ್ಯಾರ್ಥಿ ಭವನ್' ಅಲ್ಲಿಯೇ ನಿಮಗೆ ದರ್ಶನ ನೀಡುತ್ತದೆ. ಹೊರಗೆ ಒಂದು ಟೋಕನ್ ತಗೊಂಡು ಅರ್ಧ ಗಂಟೆ ಕಾದರೆ (ತುಂಬಾ ಜನ ಇಲ್ಲ ಅಂದ್ರೆ ಟೋಕನ್ ಬೇಕಿಲ್ಲ) ಒಳಗೆ ಒಂದು ಸೀಟ್ ಸಿಗುತ್ತೆ.

Vidyarthi Bhavan

ಒಂದಾ, ಎರಡಾ ಎಷ್ಟು ಮಸಾಲ ದೋಸೆ ನೀವು ತಿನ್ನಲು ಬಯಸುತ್ತೀರೋ ಅಷ್ಟು, ಒಂದೇ ಸಲ ಆರ್ಡರ್ ಮಾಡ್ಬಿಡ್ಬೇಕು. ಒಂದು ತಿಂದು ಮುಗಿಸಿ ಮತ್ತೆ ಆರ್ಡರ್ ಮಾಡ್ತೀನಿ ಅಂದ್ರೆ ನಡಿಯಲ್ಲ. ಸಾಧ್ಯವಾದರೆ ಒಬ್ಬರಿಗೆ ಎರಡು ಮಸಾಲೆ ದೋಸೆ ಆರ್ಡರ್ ಮಾಡಿ ಒಂದು ಸಿಂಗಲ್ ಇಡ್ಲಿ- ವಡೆ ತಗೊಳ್ಳಿ. ಅದನ್ನು ನೀವು ತಿಂದು ಮುಗಿಸುವುದರೊಳಗೆ ಮಸಾಲೆ ದೋಸೆ ಬಂದುಬಿಡುತ್ತೆ. ಜೊತೆಗೆ ಮಿಸ್ ಮಾಡ್ದೆ ಸ್ಟ್ರಾಂಗ್ ಕಾಫಿ ಕುಡಿದು ನಿಮ್ಮ ವಿದ್ಯಾರ್ಥಿ ಭವನದ ಮಸಾಲೆ ದೋಸೆ ಯಾತ್ರೆಯನ್ನು ಸಂತೃಪ್ತಗೊಳಿಸಿಕೊಳ್ಳಿ.

ಅದೇ ರಸ್ತೆಯಲ್ಲಿ ಸ್ವಲ್ಪ ಚೂರು ಮುಂದೆ ಹೋದರೆ ನಿಮಗೆ ಮೂರು 'ಘರ್...' ಗಳು ಸ್ವಾಗತ ಕೋರುತ್ತವೆ. 'ಕೇಕ್ ಘರ್, 'ರೋಟಿ ಘರ್', 'ಮಿಠಾಯಿ ಘರ್' ಗಳ ನಿಮ್ಮನ್ನು ಎದುರು ಗೊಳ್ಳುತ್ತದೆ. 'ಕೇಕ್ ಘರ್' ನಲ್ಲಿ 'ಆಲೂ ಬನ್' ಬೊಂಬಾಟಾಗಿರುತ್ತೆ. 'ಮಿಠಾಯಿ ಘರ್' ನಲ್ಲಿ ಮಧ್ಯಾಹ್ನ 12:30 ರ ನಂತರ ಬಜ್ಜಿ ಹಾಕ್ತಾರೆ, ಅದರಲ್ಲೂ ಈರುಳ್ಳಿ ಬಜ್ಜಿ..  ಆಹಾ! ಮಿಸ್ ಮಾಡ್ದೆ ತಿನ್ಬೇಕು ರೀ. 'ರೋಟಿ ಘರ್'  ಅಂದ್ರೇನೆ 'ಭರ್ಜರಿ ಊಟ' ಜೊತೆಗೆ ಭರ್ಜರಿ ತಿಂಡಿ ಕೂಡ!

ನೀವು ನಾನ್ ವೆಜ್ ಪ್ರಿಯರಾದರೆ ಪಕ್ಕದಲ್ಲಿ ‘ನ್ಯೂ ಪ್ರಶಾಂತ್ ಹೋಟೆಲ್’ ಇದೆ. ಇನ್ನು ಇತ್ತೀಚಿಗೆ ಇಲ್ಲಿಯೇ ಆರಂಭವಾಗಿರುವ ಆಂಧ್ರ ಶೈಲಿಯ ನಾನ್ವೆಜ್ ಹೋಟೆಲ್ 'ಆಂಧ್ರ ರುಚಿಲು ಕಿಚನ್' ಸ್ವಾದಿಷ್ಟಕರವಾದ ಚಿಕ್ಕನ್ ಗೆ ಸಾಕಷ್ಟು ಜನಪ್ರಿಯವಾಗಿದೆ. ಇದರ ಪಕ್ಕದಲ್ಲಿ 'A2B ಅಡ್ಯಾರ್ ಆನಂದ ಭವನ' ಕೂಡ ಇದೆ. ಅದರ ಎದುರಿಗೆ 'ದ್ವಾರಕಾಮಾಯಿ ರೆಸ್ಟೋರೆಂಟ್' ಕೂಡ ಇದೆ. ಇನ್ನೂ ಸಾಕಷ್ಟು ಸಣ್ಣಪುಟ್ಟ ವಿಶೇಷ ಹೋಟೆಲ್ ಗಳು ಸಹ ಬಸವನಗುಡಿಯಲ್ಲಿದೆ.

ಇಷ್ಟೆಲ್ಲಾ ಹೋಟೆಲ್ ಗಳು ಅಲ್ಲಿ ದೊರೆಯುವಂತಹ ತಿಂಡಿ- ತಿನುಸುಗಳನ್ನು ಕೇಳಿದ ಮೇಲೆ ಖಂಡಿತ ನಿಮ್ಮ ಬಾಯಲ್ಲಿ ನೀರೂರಿರುತ್ತದೆ ಅಂತ ನನಗೆ ಗೊತ್ತು. ಇನ್ಯಾಕೆ ತಡ ಬಸವನಗುಡಿಯ ಕಡೆಗೆ ಹೊರಟು ಬನ್ನಿ. ಇಲ್ಲಿನ ಸಾಂಸ್ಕೃತಿಕ ಪರಿಸರದಲ್ಲಿ ಒಂದಷ್ಟು ಸಮಯ ಕಳೆದು, ಮೇಲೆ ಉಲ್ಲೇಖಿಸಲಾದ ಹೋಟೆಲ್ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಆನಂದದಿಂದ ನಿಮ್ಮ ಕುಟುಂಬ ಸ್ನೇಹಿತರ ಜೊತೆ ರುಚಿಯಾದ, ಸವಿಯಾದ, ಸ್ವಾದಿಷ್ಟಕರವಾದ ತಿಂಡಿ-ತಿನಿಸು -ಊಟವನ್ನು ಸವಿಯಿರಿ . ನಿಮಗೆ ಮತ್ತೊಂದಷ್ಟು ಬಸವನಗುಡಿಯ ಆಹಾರ ಸಂಸ್ಕೃತಿಯನ್ನು ಮುಂಬರುವ ಸಮಯದಲ್ಲಿ ಇನ್ನೊಂದು ಲೇಖನದ ಮೂಲಕ ಪರಿಚಯಿಸುತ್ತೇನೆ.

Disclaimer: This post has been published by Ravindra Kotaki from Ayra and has not been created, edited or verified by Ayra
Category:Food and Cooking



ProfileImg

Written by Ravindra Kotaki

Verified

ಲೇಖಕ/ಅಂಕಣಕಾರ

0 Followers

0 Following