ಡಿಜಿಟಲ್‌ ಸಾಕ್ಷರತೆ ಬಗ್ಗೆ ನಿಮಗೆಷ್ಟು ಗೊತ್ತು!

ProfileImg
11 Sep '23
5 min read


image

ಕಾಲೇಜು ಅಥವಾ ಕೆಲಸದ ಸ್ಥಳಗಳಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಇಂದು ಡಿಜಿಟಲ್ ಸಾಕ್ಷರತೆ ಅತ್ಯಗತ್ಯ. ತಂತ್ರಜ್ಞಾನದಲ್ಲಿ ಪ್ರಗತಿಯಾದಂತೆ, ಕಂಪ್ಯೂಟರ್‌ಗಳ ಪರಿಚಯವು ಇಂದು ಸಂವಹನ ವಿಧಾನವಾಗಿ ಮಾರ್ಪಟ್ಟಿರುವುದರಿಂದ ಓದುವ ಮತ್ತು ಬರೆಯುವ ಸಾಂಪ್ರದಾಯಿಕ ವಿಧಾನಗಳು ಹಿನ್ನಡೆ ಸಾಧಿಸಿವೆ.

ಡಿಜಿಟಲ್ ಸಾಕ್ಷರತೆಯು ಮೂಲಭೂತವಾಗಿ ಪ್ರಸ್ತುತ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸಿಕೊಂಡು 21 ನೇ ಶತಮಾನದಲ್ಲಿ ಓದಲು, ಬರೆಯಲು ಮತ್ತು ಸಂವಹನ ಮಾಡಲು ಅಗತ್ಯವಿರುವ ಕೌಶಲ್ಯ ಮತ್ತು ಸಾಮರ್ಥ್ಯಗಳ ಸ್ವಾಧೀನವಾಗಿದೆ. ದುರದೃಷ್ಟವಶಾತ್ ವಿಕಲಚೇತನ ವಿದ್ಯಾರ್ಥಿಗಳು ಯಶಸ್ವಿಯಾಗಲು ಅಗತ್ಯವಾದ ಕೌಶಲ್ಯಗಳನ್ನು ಪಡೆದುಕೊಳ್ಳುವಲ್ಲಿ ಹೆಚ್ಚಿನ ಸವಾಲನ್ನು ಅನುಭವಿಸುತ್ತಾರೆ.

ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಡಿಜಿಟಲ್‌ ಸಾಕ್ಷರರು ಕಡಿಮೆ. ತಂತ್ರಜ್ಞಾನದ ಕುರಿತು ಜನರಿಗೆ ಅರಿವು ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರವು 'ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ' ಎಂಬ ಹೊಸ ಯೋಜನೆ ಆರಂಭಿಸಿದ್ದು, ಇದರ ಮೂಲಕ ಜನರಿಗೆ ಇಂಟರ್ನೆಟ್ ಮತ್ತು ತಂತ್ರಜ್ಞಾನ ಬಳಕೆಯನ್ನು ಕಲಿಸಲಾಗುತ್ತದೆ. ಈ ಯೋಜನೆ ಕುರಿತ ಪೂರ್ಣ ವಿವರ ಇಲ್ಲಿದೆ.

ಡಿಜಿಟಲ್‌ ಸಾಕ್ಷರತೆ ಎಂದರೇನು?

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಎಲ್ಲ ಯುವಕರಿಗಾಗಿ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ ಪ್ರಾರಂಭಿಸಲಾಗಿದೆ. ಕಂಪ್ಯೂಟರ್, ಇಂಟರ್ನೆಟ್ ಅನ್ನು ಸರಿಯಾಗಿ ಬಳಸುವುದು ಹೇಗೆಂದು ಗೊತ್ತಿರದ ಯುವಕರಿಗೆ ಕಂಪ್ಯೂಟರ್ ಸಂಬಂಧಿತ ತರಬೇತಿ ನೀಡಲಾಗುವುದು.

ಈ ತರಬೇತಿಯಲ್ಲಿ ಯುವಕರಿಗೆ ಕಂಪ್ಯೂಟರ್, ಇಂಟರ್ನೆಟ್ ಬಳಕೆ, ಇಮೇಲ್ ಕಳುಹಿಸುವುದು ಮತ್ತು ಸ್ವೀಕರಿಸುವುದು, ಅಂತರ್ಜಾಲದ ಸಹಾಯದಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸುವುದು, ಯಾವುದೇ ವಿಷಯದ ಬಗ್ಗೆ ಅಂತರ್ಜಾಲದಲ್ಲಿ ಸರಿಯಾದ ರೀತಿಯಲ್ಲಿ ಹುಡುಕುವುದು. ಮೊಬೈಲ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್‌ನಲ್ಲಿ ಪಾವತಿ ಮಾಡುವುದು. ಕಂಪ್ಯೂಟರ್ ಟೈಪಿಂಗ್, ವಿದ್ಯುತ್ ಬಿಲ್ ಪಾವತಿ, ರೈಲ್ವೆ, ವಿಮಾನ ಟಿಕೆಟ್ ಬುಕಿಂಗ್ ಮೊದಲಾದ ಆನ್‌ಲೈನ್‌ ಆಧಾರಿತ ಚಟುವಟಿಕೆಗಳ ತರಬೇತಿ ನೀಡಲಾಗುತ್ತದೆ.

ಈ ಯೋಜನೆಯ ಕೆಲವು ಮಾಹಿತಿ
ಯೋಜನೆಯ ಹೆಸರು - ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ
ಪ್ರಾರಂಭಿಸಿದವರು - ಕೇಂದ್ರ ಸರ್ಕಾರ
ತರಬೇತಿಯ ಅವಧಿ - 20 ಗಂಟೆಗಳು
ತರಬೇತಿ ಶುಲ್ಕ- ಉಚಿತ
ಯೋಜನೆಯ ಉದ್ದೇಶ- ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಯುವಕರಿಗೆ ಕಂಪ್ಯೂಟರ್ ಮತ್ತು ಇಂಟರ್ನೆಟ್ ತರಬೇತಿ ನೀಡುವುದು.

ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನದ ಉದ್ದೇಶ

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಯುವಕರನ್ನು ಕಂಪ್ಯೂಟರ್ ಮತ್ತು ಇಂಟರ್ನೆಟ್‌ನೊಂದಿಗೆ ಸಂಪರ್ಕಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದರಿಂದಾಗಿ ಗ್ರಾಮೀಣ ಯುಕರು ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಳ್ಳಬಹುದು.

ಒಂದು ಸಮೀಕ್ಷೆಯ ಪ್ರಕಾರ, ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಶೇ.6ರಷ್ಟು ಕುಟುಂಬಗಳು ಮಾತ್ರವೇ ಕಂಪ್ಯೂಟರ್‌ ಹೊಂದಿವೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ ಆರಂಭಿಸಿದ್ದಾರೆ.

ದೇಶದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡುವುದು ಕೂಡ ಈ ಅಭಿಯಾನದ ಮೂಲ ಉದ್ದೇಶವಾಗಿದೆ.

ಈ ಅಭಿಯಾನದ ಪ್ರಯೋಜನಗಳು..

>ಈ ಅಭಿಯಾನದಡಿ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಯುವಕರಿಗೆ ಕಂಪ್ಯೂಟರ್ ಮತ್ತು ಇಂಟರ್ನೆಟ್ ತರಬೇತಿ ನೀಡಲಾಗುತ್ತದೆ.
>ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಯುವಕರಿಗೆ ನೀಡುವ ತರಬೇತಿಗೆ ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ. 
>ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯ ಇಲ್ಲದ ಗ್ರಾಮೀಣ ಕುಟುಂಬದ ಯಾವುದೇ ಸದಸ್ಯರು ಈ ಅಭಿಯಾನದಡಿ ತರಬೇತಿ ಪಡೆಯಬಹುದು.
>ಈ ಯೋಜನೆಯಡಿ, ಕಂಪ್ಯೂಟರ್‌ನ ಮೂಲಭೂತ ವಿಷಯಗಳು ಮತ್ತು ಇಂಟರ್ನೆಟ್ ಅನ್ನು ಹೇಗೆ ಸರಿಯಾಗಿ ಬಳಸುವುದು ಎಂಬುದರ ಕುರಿತು ಯುವಕರಿಗೆ ಮಾಹಿತಿ ಒದಗಿಸಲಾಗುತ್ತದೆ.
>ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ನಾಗರಿಕರು ತರಬೇತಿ ಪಡೆಯುವ ಮೂಲಕ ಸರ್ಕಾರದ ವಿವಿಧ ಸೌಲಭ್ಯಗಳು, ಹಣಕಾಸು ಸೇವೆಗಳು, ಆರೋಗ್ಯ ಸೇವೆಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ.
>ಕಂಪ್ಯೂಟರ್‌ಗಳನ್ನು ಶಿಕ್ಷಣ ಲಭ್ಯವಿಲ್ಲದ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೂಡ ಈ ಯೋಜನೆಯಡಿ ತರಬೇತಿ ಪಡೆಯಬಹುದು.
>ತಮ್ಮ ಶಾಲೆ ಅಥವಾ ಕಾಲೇಜುಗಳಲ್ಲಿ ಡಿಜಿಟಲ್ ಸಾಕ್ಷರತೆ ಮತ್ತು ಕಂಪ್ಯೂಟರ್ ತರಬೇತಿ ಸೌಲಭ್ಯ ಹೊಂದಿರದ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬಹುದು.
>ಈ ಯೋಜನೆಯಡಿ ತರಬೇತಿ ನೀಡಲು ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರು ಮತ್ತು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಆದ್ಯತೆ ನೀಡಲಾಗುತ್ತದೆ.

ಯೋಜನೆಯ ಲಾಭ ಪಡೆಯಲು ಅರ್ಹತೆ ಮತ್ತು ಅಗತ್ಯ ದಾಖಲೆಗಳು
ಈ ಅಭಿಯಾನದ ಅಡಿಯಲ್ಲಿ ಭಾರತೀಯ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ವಯಸ್ಸು 18 ರಿಂದ 60 ವರ್ಷಗಳ ನಡುವೆ ಇರಬೇಕು. ಅರ್ಜಿದಾರರ ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣಪತ್ರ, ಗುರುತಿನ ಚೀಟಿ, ಮೊಬೈಲ್ ನಂಬರ್, ಪಾಸ್ಪೋರ್ಟ್ ಅಳತೆಯ ಫೋಟೋ ಹೊಂದಿರಬೇಕು.

ಅರ್ಜಿ ಸಲ್ಲಿಕೆಗೆ ಹೀಗೆ ಮಾಡಿ.. 
-ಡಿಜಿಟಲ್ ಸಾಕ್ಷರತೆ ತರಬೇತಿ ಪಡೆಯಲು, ಮೊದಲು ನೀವು ಯೋಜನೆಯ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ.
-ವೆಬ್‌ಸೈಟ್ ತೆರೆದ ನಂತರ, 'ನೇರ ಅಭ್ಯರ್ಥಿ ಆಯ್ಕೆ' ಬಟನ್‌ ಕ್ಲಿಕ್‌ ಮಾಡಿ.
-ಕಂಪ್ಯೂಟರ್‌ ಪರದೆ ಮೇಲೆ ಲಾಗಿನ್ ಫಾರ್ಮ್ ತೆರೆಯುತ್ತದೆ. ಈ ಫಾರ್ಮ್‌ನ ಕೆಳಭಾಗದಲ್ಲಿ, ನೀವು ರಿಜಿಸ್ಟರ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
-ಪರದೆಯ ಮೇಲೆ ಅರ್ಜಿ ನಮೂನೆಯು ತೆರೆಯುತ್ತದೆ, ಅದರಲ್ಲಿ ನೀವು ಅರ್ಜಿದಾರರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು.
-ಅರ್ಜಿದಾರರ ಹೆಸರು, ಆಧಾರ್ ಸಂಖ್ಯೆ, ಲಿಂಗದಲ್ಲಿ ಹುಟ್ಟಿದ ದಿನಾಂಕ, ಶಿಕ್ಷಣ ಮಾಹಿತಿ, ಈ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಕೆಳಗೆ ನೀಡಲಾದ ಆಡ್ ಬಟನ್ ಮೇಲೆ ಕ್ಲಿಕ್ ಮಾಡಿ.
-ಮುಂದಿನ ಪುಟದಲ್ಲಿ KYC ಮಾಡಬೇಕು, ಇದಕ್ಕಾಗಿ ನಿಮಗೆ ಮೂರು ಆಯ್ಕೆಗಳಿವೆ. ಮೊದಲು ಫಿಂಗರ್‌ಪ್ರಿಂಟ್ ಸ್ಕ್ಯಾನ್, ಎರಡನೆಯದಾಗಿ - -ಕಣ್ಣುಗಳನ್ನು ಸ್ಕ್ಯಾನ್  ಮಾಡಿ, ಮೂರನೆಯದಾಗಿ ಮೊಬೈಲ್ ಫೋನ್‌ನಲ್ಲಿ OTP ಮೂಲಕ, ನೀವು ಈ ಮೂರು ಆಯ್ಕೆಗಳಲ್ಲಿ ಯಾವುದನ್ನಾದರೂ ಒಂದನ್ನು ಆಯ್ಕೆ ಮಾಡಬಹುದು.
-OTP ಆಯ್ಕೆ ಮಾಡಿಕೊಂಡರೆ, ನಿಮ್ಮ ಮೊಬೈಲ್‌ ಸಂಖ್ಯೆ ನಿಡಬೇಕಾಗುತ್ತದೆ. ನಂತರ ನೀವು 'ಒಟಿಪಿ ಮೌಲ್ಯೀಕರಿಸಿ' ಕ್ಲಿಕ್ ಮಾಡುವ ಮೂಲಕ ಮುಂದುವರಿಯಬೇಕು.
-ನಂತರ ನೀವು ಬಳಕೆದಾರ ಐಡಿ ಪಾಸ್‌ವರ್ಡ್ ಅನ್ನು ರಚಿಸಬಹುದು, ಅದರ ಸಹಾಯದಿಂದ ನೀವು ಪೋರ್ಟಲ್‌ನಲ್ಲಿ ನಿಮ್ಮ ಖಾತೆಯನ್ನು ತೆರೆಯಲು ಸಾಧ್ಯವಾಗುತ್ತದೆ.

ತರಬೇತಿ ನಂತರ ಸರ್ಟಿಫಿಕೇಟ್‌ ನೀಡಲಾಗುವುದು
ಈ ಅಭಿಯಾನದಡಿ ತರಬೇತಿ ಪಡೆದ ನಂತರ ಸರ್ಟಿಫಿಕೇಟ್‌ ಪಡೆಯುತ್ತೀರಿ. ಆದರೆ, ತರಬೇತಿಯ ನಂತರ ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಈ ಪರೀಕ್ಷೆಯಲ್ಲಿ 25 ಪ್ರಶ್ನೆಗಳಿಗೆ ಉತ್ತರಿಸಲು ನಿಮ್ಮನ್ನು ಕೇಳಲಾಗುತ್ತದೆ. ಇದರಲ್ಲಿ ನೀವು ಕನಿಷ್ಠ 7 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬೇಕು. ಅದರ ನಂತರವೇ ಅಭ್ಯರ್ಥಿಯನ್ನು ಪಾಸ್ ಎಂದು ಪರಿಗಣಿಸಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ನೀವು ವೆಬ್‌ಸೈಟ್‌ನಿಂದಲೇ ನಿಮ್ಮ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದು.

ಭಾರತದ ಸಾಕ್ಷರತಾ ವರದಿ ಪ್ರಕಾರ ಭಾರತದ 121 ಕೋಟಿ ಜನರಲ್ಲಿ ಸಾಕ್ಷರರ ಪ್ರಮಾಣ ಶೇ.74.04.ಅಂದರೆ ಶೇ.26 ಮಂದಿ ಇಂದಿಗೂ ಅನಕ್ಷರಸ್ಥರು. 2001ರಲ್ಲಿ ಸಾಕ್ಷರತೆಯ ಪ್ರಮಾಣ ಶೇ.64.83 ಇತ್ತು. ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ, ಪುರುಷರಿಗೆ ಹೋಲಿಸಿದರೆ ಮಹಿಳಾ ಸಾಕ್ಷರತೆಯ ಪ್ರಮಾಣ ನೆಗೆದಿರುವುದು. 2003 ರಲ್ಲಿ ಶೇ.53.67ರಷ್ಟಿದ್ದ ಮಹಿಳಾ ಸಾಕ್ಷರತೆ ಪ್ರಮಾಣವು ಹತ್ತು ವರ್ಷಗಳಲ್ಲಿ ಶೇ.65.46ಕ್ಕೇರಿದೆ. ಈ ನೆಗೆತಕ್ಕೆ ಹೋಲಿಸಿದರೆ ಪುರುಷರ ಸಾಕ್ಷರತೆಯ ವೃದ್ಧಿಯ ಪ್ರಮಾಣ ಕಡಿಮೆ. ಅಂದರೆ ಶೇ.75.26 ಇದ್ದದ್ದು ಶೇ.82.14ಕ್ಕೆ ಅದು ವೃದ್ಧಿಯಾಗಿದೆ. ಕೇರಳವು ಶೇ.93.91 ಸಾಕ್ಷರತೆಯೊಂದಿಗೆ ದೇಶದಲ್ಲಿ ನಂ.1 ಸಾಕ್ಷರತಾ ರಾಜ್ಯ ಎಂಬ ಸ್ಥಾನವನ್ನು ಕಾಯ್ದುಕೊಂಡಿದೆ. ಕೇರಳದ ಬಳಿಕ ಎರಡನೇ ಸ್ಥಾನದಲ್ಲಿರುವುದು ಲಕ್ಷದ್ವೀಪ (ಶೇ.92.28). ಬಿಹಾರವಿನ್ನೂ ಶೇ.63.82 ಸಾಕ್ಷರತೆಯೊಂದಿಗೆ ಈ ಏಣಿಯ ಕೆಳತುದಿಯಲ್ಲಿದೆ. ಅರುಣಾಚಲ ಪ್ರದೇಶ ಶೇ.66.95 ಸಾಕ್ಷರತೆಯೊಂದಿಗೆ ಬಿಹಾರಕ್ಕಿಂತ ಮುಂದಿದೆ.

ಭಾರತದಲ್ಲಿ ಇಂಟರ್ನೆಟ್ ಬಳಕೆದಾರರು ನಗರ ಪ್ರದೇಶದಲ್ಲಿ ಈಗಾಗಲೇ ಶೇ.60ರಷ್ಟು ಮಂದಿ (44.40 ಕೋಟಿ ನಗರವಾಸಿ ಜನರಲ್ಲಿ ಅಂದಾಜು 26.90 ಕೋಟಿ ಮಂದಿ ) ಇಂಟರ್ನೆಟ್ ಬಳಸುತ್ತಿದ್ದರೆ, ಅಂತರ್ಜಾಲವು ಗ್ರಾಮೀಣ ಭಾಗವನ್ನು ವ್ಯಾಪಿಸಿದ ಪ್ರಮಾಣ ಶೇ.17 (90.60 ಕೋಟಿ ಗ್ರಾಮೀಣ ಜನಸಂಖ್ಯೆಯಲ್ಲಿ 16.30 ಕೋಟಿ) ಮಾತ್ರ. ಅಂದರೆ, 75 ಕೋಟಿ ಗ್ರಾಮೀಣ ಮಂದಿಗೆ ಇನ್ನೂ ಇಂಟರ್ನೆಟ್ ಬಳಕೆಯ ಉಪಯುಕ್ತತೆಯ ಅರಿವೂ ಇಲ್ಲ, ಅದು ಅವರನ್ನು ತಲುಪಿಯೂ ಇಲ್ಲ, ಹಾಗಾಗಿ ಭಾರತ ಡಿಜಿಟಲ್ ಸಾಕ್ಷರತೆಯ ಕಡೆ ಗಮನ ಹರಿಸಬೇಕಿದೆ.

ಇತ್ತೀಚಿನ ಬೆಳವಣಿಗೆಗಳು..

ಹಿಂದುಸ್ತಾನ್ ಕೋಕಾ-ಕೋಲಾ ಬೆವರೇಜಸ್ (ಎಚ್‌ಸಿಸಿಬಿ), ದೇಶಾದ್ಯಂತ 25,000 ಮಹಿಳೆಯರಿಗೆ ಆರ್ಥಿಕ ಮತ್ತು ಡಿಜಿಟಲ್ ಸಾಕ್ಷರತೆ ತರಬೇತಿಯನ್ನು ನೀಡುವುದಾಗಿ ಪ್ರಕಟಿಸಿದ್ದು, ವಿವಿಧ ಸ್ಥಳಗಳಲ್ಲಿ ವಿಭಿನ್ನ ಹಿನ್ನೆಲೆಯ ಮಹಿಳೆಯರನ್ನು ಸಜ್ಜುಗೊಳಿಸುತ್ತದೆ ಮತ್ತು ಆರ್ಥಿಕ ಮತ್ತು ತಾಂತ್ರಿಕ ಜ್ಞಾನದಲ್ಲಿನ ಕೌಶಲ್ಯ ಅಂತರವನ್ನು ಕಡಿಮೆ ಮಾಡಲಿದೆ.

ಈ ಪ್ರಯತ್ನದ ಮೂಲಕ, HCCB ಮಹಿಳೆಯರನ್ನು ಬೆಂಬಲಿಸಲು ಬಯಸುತ್ತದೆ, ಅವರು ಆರ್ಥಿಕ ಸ್ವಾತಂತ್ರ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಾಗೂ ಸರ್ಕಾರ ಮತ್ತು ಡಿಜಿಟಲ್ ಪ್ರಪಂಚವು ನೀಡುವ ಅವಕಾಶಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. HCCB ದೇಶಾದ್ಯಂತ ಹಲವಾರು ಮಹಿಳಾ ನೇತೃತ್ವದ ಸ್ವ-ಸಹಾಯ ಗುಂಪುಗಳನ್ನು ಸುಗಮಗೊಳಿಸಿದೆ. ಇಂದು ಅವರು ಉದ್ಯಮಗಳನ್ನು ನಡೆಸುವಷ್ಟು ಸಶಕ್ತರಾಗಿದ್ದಾರೆ. ಈ ಸಂಚಲನದ ಮೂಲಕ ಹೆಚ್ಚಿನ ಉದ್ಯಮಿಗಳನ್ನು ಸೃಷ್ಟಿಸಲು HCCB ಹಾತೊರೆಯುತ್ತದೆ.

ತರಬೇತಿಯನ್ನು ರಾಷ್ಟ್ರಾದ್ಯಂತ ಗುರುತಿಸಲಾದ ಸ್ಥಳಗಳಲ್ಲಿ ತರಗತಿ ಆಧಾರಿತ ಸ್ವರೂಪದಲ್ಲಿ ನಡೆಸಲಾಗುತ್ತದೆ. ಫಲಾನುಭವಿಗಳನ್ನು ಅವರ ಆಸಕ್ತಿಗಳು, ಅಗತ್ಯಗಳು ಮತ್ತು ಪ್ರಸ್ತುತ ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆಯ ಮಟ್ಟವನ್ನು ಆಧರಿಸಿ, ಗುಂಪುಗಳಲ್ಲಿ ಗುರುತಿಸಿ ತರಬೇತಿ ನೀಡಲಾಗುತ್ತದೆ. ಪ್ರಯತ್ನವು ಹೆಚ್ಚು ಕೇಂದ್ರೀಕೃತ ಮತ್ತು ಪರಿಣಾಮಕಾರಿ ಕಲಿಕೆಯ ಅನುಭವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಈ ಹಣಕಾಸಿನ ಸಾಕ್ಷರತಾ ತರಬೇತಿಯು, ಬ್ಯಾಂಕಿಂಗ್ ಬೇಸಿಕ್ಸ್, ಖಾತೆ ತೆರೆಯುವ ಕಾರ್ಯವಿಧಾನಗಳು, ಏಕೀಕೃತ ಪಾವತಿಗಳ ಇಂಟರ್ಫೇಸ್ (ಯುಪಿಐ) ತರಬೇತಿ, ಹೂಡಿಕೆ ಮಾರ್ಗದರ್ಶನ, ನೆಟ್ ಬ್ಯಾಂಕಿಂಗ್ ಮತ್ತು ಮಹಿಳೆಯರಿಗಾಗಿ ವಿವಿಧ ಸರ್ಕಾರಿ ಯೋಜನೆಗಳಾದ ಬೇಟಿ ಬಚಾವೋ ಬೇಟಿ ಪಢಾವೋ, ಸುಕನ್ಯಾ ಸಂ ರಿದ್ಧಿ ಯೋಜನೆ, ನಾರಿ ಶಕ್ತಿ ಮುಂತಾದ ಮೂಲಭೂತ ಪರಿಕಲ್ಪನೆಗಳನ್ನು ಒಳಗೊಂಡಿರುತ್ತದೆ.

HCCB ನಲ್ಲಿ ಸಂಸ್ಕೃತಿಯ ಪ್ರಮುಖ ಅಂಶವೆಂದರೆ ನಮ್ಮ ಉದ್ಯೋಗಿಗಳಿಗೆ ಮಾತ್ರವಲ್ಲದೆ ಸಮುದಾಯಗಳಿಗೂ ಸಮಾನ ವಾತಾವರಣವನ್ನು ಖಚಿತಪಡಿಸುವುದು. ಮಹಿಳೆಯರ ಆರ್ಥಿಕ ಸಾಕ್ಷರತೆ ಮತ್ತು ಡಿಜಿಟಲ್ ಸಾಮರ್ಥ್ಯವನ್ನು ಹೆಚ್ಚಿಸುವುದು. ಮಹಿಳಾ ನೇತೃತ್ವದ ಅಭಿವೃದ್ಧಿಗಾಗಿ ಪಿಎಂ ಮೋದಿ ಅವರ ಇತ್ತೀಚಿನ ಕರೆ ಮತ್ತು ಅವರ ಹಲವಾರು ಜಿ 20 ಭಾಷಣಗಳಲ್ಲಿ ಒಳಗೊಳ್ಳುವಿಕೆ ಮತ್ತು ಸಕಾರಾತ್ಮಕ ಬದಲಾವಣೆಯನ್ನು ಉತ್ತೇಜಿಸುವಲ್ಲಿ ತಂತ್ರಜ್ಞಾನದ ಪ್ರಾಮುಖ್ಯತೆ ಇದೆ.

ಡಿಜಿಟಲ್ ಸಾಕ್ಷರತೆ ಎಂಬುದು ಎಷ್ಟೇ ಪ್ರತಿಧ್ವನಿಸಿದರು ಕೆಲವರು ಈ ಯೋಜನೆಯಿಂದ ದೂರ ಉಳಿದಿರುವುದು ವಿಪರ್ಯಾಸವೇ ಸರಿ. ಆದಷ್ಟು ಎಲ್ಲರಿಗೂ ಈ ಯೋಜನೆ ಬಗ್ಗೆ ತಿಳಿಸುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ. 
 

Category:Technology



ProfileImg

Written by shruti mopagar

0 Followers

0 Following