ಇಂಡಿಯಾ ಹೆಸರು ಬಂದಿದ್ದು ಹೇಗೆ; ಇಲ್ಲಿದೆ ಇತಿಹಾಸ

ProfileImg
01 Oct '23
7 min read


image

ಕೇಂದ್ರ ಸರ್ಕಾರ ಇಂಡಿಯಾ ಎಂಬ ಹೆಸರನ್ನು ತೆಗೆದುಹಾಕಲು ತೀರ್ಮಾನಿಸಿರುವುದು ದೇಶದಲ್ಲಿ ದೊಡ್ಡ ರಾಜ್ಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ದೇಶದ ಹೆಸರನ್ನು ಇಂಡಿಯಾದಿಂದ ಭಾರತ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಹೊರಟಿದೆ. ಬ್ರಿಟಿಷರ ಬಳುವಳಿಯಾಗಿರುವ ಇಂಡಿಯಾ ಪದ ಜಾಗತಿಕ ಮಟ್ಟದಲ್ಲಿ ಭಾರತವನ್ನು ಗುರುತಿಸುವ ಪದವಾಗಿ ಬೆಳೆಯಿತು. ಆದರೆ ದೇಶೀಯವಾಗಿ ಭಾರತ ಪದ ಬಳಕೆ ಹಾಗೆಯೇ ಉಳಿದುಕೊಂಡಿತು. ಕ್ರಮೇಣ ದೇಶದ ಆಧುನಿಕತೆಯನ್ನು ಇಂಡಿಯಾ ಎಂದು ಪರಂಪರೆಯನ್ನು ಭಾರತ ಎಂದು ಉಲ್ಲೇಖೀಸಲಾಗುತ್ತಿತ್ತು.

ಇಂಡಿಯಾ ಎಂಬ ಹೆಸರಿನ ಮೂಲ ಕೆದಕುತ್ತಾ ಹೋದರೆ, ಈ ಶಬ್ದದ ಉತ್ಪತ್ತಿಯ ಹಿಂದೆ ಪ್ರಾಚೀನ ಕಾಲದ ಹಲವು ಕುತೂಹಲಕಾರಿ ಮಾಹಿತಿಗಳು ತೆರೆದುಕೊಳ್ಳುತ್ತವೆ. ಇಂಡಿಯಾವು ಸಿಂಧೂ ಎಂಬ ಪದದಿಂದ ಬಂದಿದ್ದು. ಅನಂತರ ಇತಿಹಾಸದುದ್ದಕ್ಕೂ, ವಿವಿಧ ನಾಗರಿಕತೆಗಳು ಮತ್ತು ಭಾಷೆಗಳ ಪ್ರಭಾವವು ಇಂಡಿಯಾ ಪದಕ್ಕೆ ಹೊಸ ಸ್ವರೂಪವನ್ನು ನೀಡುತ್ತಾ ಬಂದಿವೆ.

ಸಿಂಧೂ ನದಿ ಮತ್ತು ಅದರ ಸಂಸ್ಕೃತ ಮೂಲ: 'ಸಿಂಧೂ’ ಎಂಬ ಪದ ಮೊದಲ ಉಲ್ಲೇಖ ಕಂಡಿದ್ದು ಋಗ್ವೇದದಲ್ಲಿ. ಈ ಪವಿತ್ರ ಗ್ರಂಥವು ಕ್ರಿ.ಪೂ. 1700-1100ರ ನಡುವೆ ಭಾರತ ಉಪಖಂಡದ ವಾಯವ್ಯ ಪ್ರದೇಶದಲ್ಲಿ ರಚನೆಯಾಗಿದೆ. ಅಲ್ಲದೇ ಇದು ಗಮನಾರ್ಹ ಸಾಂಸ್ಕೃತಿಕ ಮತ್ತು ಭಾಷಾ ಪ್ರಾಮುಖ್ಯವನ್ನು ಹೊಂದಿದೆ. ಋಗ್ವೇದದಲ್ಲಿ “ಸಿಂಧೂ’ ಎಂದರೆ ಭಾರತದ ಪ್ರಾಚೀನ ನಾಗರಿಕತೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಿಂಧೂ ನದಿಯನ್ನು ಪ್ರತಿನಿಧಿಸುತ್ತದೆ.

ಹಿಂಡೋಸ್‌, ಇಂಡಸ್‌ ಮತ್ತು ಅದರ ಗ್ರೀಕ್‌ ನಂಟು: ಪ್ರಾಚೀನ ಭಾರತದ ಸಾಂಸ್ಕೃತಿಕ ಮತ್ತು ಭೌಗೋಳಿಕ ಜ್ಞಾನವು ವಿಸ್ತರಿಸುತ್ತಾ ಹೋದಂತೆ, ನೆರೆಯ ಅರಬರು ಮತ್ತು ಇರಾನಿಯನ್ನರು “ಸಿಂಧೂ’ ಎಂಬ ಪದವನ್ನು ಎದುರುಗೊಂಡಾಗ, 'ಸ’ (ಎಸ್‌) ಶಬ್ದವನ್ನು 'ಹ'(ಎಚ್‌) ಎಂದು ಉಚ್ಚರಿಸಿದರು. ಅಂದರೆ ಸಿಂಧೂ ನದಿಯಾಚೆಗಿನ ಪ್ರದೇಶವನ್ನು ಈ ನೆರೆಯ ದೇಶಗಳು 'ಹಿಂದೂ’ ಎಂದು ಕರೆಯಲಾರಂಭಿಸಿದರು. ಇದೇ ವೇಳೆ, ಭಾರತ ಉಪ ಖಂಡದೊಂದಿಗೆ ತನ್ನದೇ ಆದ ಸಂಬಂಧವನ್ನು ಹೊಂದಿದ್ದ ಗ್ರೀಕರು, 'ಹಿಂದೂ’ ಪದವನ್ನು 'ಇಂಡೋಸ್‌' ಎಂದು ಅಳವಡಿಸಿಕೊಂಡು, ಅದನ್ನು 'ಇಂಡಸ್‌' ಎಂದು ಉಚ್ಚರಿಸಿದರು.

ಆಂಗ್ಲಭಾಷೆಯಲ್ಲಿ 'ಇಂಡಿಯಾ' ಪದ ಬಂದಿದ್ದು ಹೇಗೆ?:
ಇಂಡಿಯಾ ಎಂಬುವುದು ಭಾರತದ ಭಾಷೆಯ ಪದವಲ್ಲ, ಇದು ಗ್ರೀಕ್ ಭಾಷೆಯ ಇಂಡಿಕಾ ಎಂಬ ಪದದಿಂದ ಬಂದಿದೆ ಎನ್ನಲಾಗಿದೆ. ಈ ಪದವನ್ನು ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಗ್ರೀಕ್‌ ರಾಯಭಾರಿ ಮೆಗಾಸ್ತನೀಸ್‌ ಮೊದಲಿಗೆ ಪ್ರಯೋಗ ಮಾಡಿದ್ದ, ಅಲ್ಲಿಂದ ಭಾರತವನ್ನು ಇಂಡಿಯಾ ಎಂದು ಕರೆಯಲಾಯಿತು.  ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ಭಾರತವನ್ನು ಬ್ರಿಟಿಷರು ಇಂಡಿಯಾ ಎಂದು ಕರೆಯಲಾರಂಭಿಸಿದರು ಎನ್ನಲಾಗಿದೆ.

ಕಿಂಗ್‌ ಆಲ್ಫೆಡ್‌ ಅವರ ಒರೋಸಿಯಸ್‌ ಅನುವಾದದಲ್ಲಿ, ಅಂದರೆ ಹಳೆಯ ಇಂಗ್ಲಿಷ್‌ನಲ್ಲಿ ಈ ಪದ ಕಾಣಿಸಿಕೊಂಡಿತ್ತು. ಆದರೆ ಫ್ರೆಂಚ್‌ ಭಾಷೆಯ ಪ್ರಭಾವಕ್ಕೆ ಒಳಗಾಗಿ 'ಇಂಡಿಯಾ’ ಪದವು ‘Ynde’ ಅಥವಾ ‘Inde’ ಎಂದು ಬದಲಾಯಿತು. ಬಳಿಕ ಕ್ರಿ.ಶ. 15ನೇ ಶತಮಾನದ ಉತ್ತರಾರ್ಧದಿಂದ ಕ್ರಿ.ಶ.1650ರ ವರೆಗೆ 'ಇಂಡಿಯಾ’ ಹೆಸರು ಮತ್ತೆ ಪ್ರತ್ಯಕ್ಷವಾಯಿತು. ಲ್ಯಾಟಿನ್‌, ಸ್ಪ್ಯಾನಿಶ್‌ ಅಥವಾ ಪೋರ್ಚುಗೀಸ್‌ ಭಾಷೆಗಳ ಪ್ರಭಾವವೇ ಈ ಪದ ಮತ್ತೆ ಬಳಕೆಯಾಗಲು ಕಾರಣ ಎಂದು ಹೇಳಬಹುದು. ಪರಿಣಾಮ ವೆಂಬಂತೆ ಕಿಂಗ್‌ ಜೇಮ್ಸ್‌ ಅವರ ಬೈಬಲ್‌ನ ಮೊದಲ ಆವೃತ್ತಿಯಲ್ಲಿ ಹಾಗೂ ಖ್ಯಾತ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್‌ ಅವರ ಕೃತಿಗಳಲ್ಲಿ 'ಇಂಡಿಯಾ’ ಪದವು ಕಾಣಿಸಿಕೊಂಡಿತು. ತದನಂತರ ಇಂಗ್ಲಿಷ್‌ ಭಾಷೆಯ ಬಳಕೆಯಲ್ಲಿ, ವಿಶಾಲ ಹಾಗೂ ವೈವಿಧ್ಯಮಯ ನೆಲವಾದ 'ಇಂಡಿಯಾ' ದೇಶದ ಹೆಸರು ಹಾಗೆಯೇ ಉಳಿದುಬಿಟ್ಟಿತು.

ಒಟ್ಟಿನಲ್ಲಿ  ಇಂಡಿಯಾ ಎಂಬ ಹೆಸರು ಜಾಗತಿಕ ಇತಿಹಾಸದಲ್ಲಿ ಆಳವಾಗಿ ಬೇರೂರಿದ್ದು, ಕಾಲ ಕ್ರಮೇಣ ವಿಕಸನಗೊಳ್ಳುತ್ತಾ ಬಂದಿದೆ. ಸಂಸ್ಕೃತದ ಸಿಂಧೂವಿನಿಂದ ಹುಟ್ಟಿ, ನೆರೆರಾಷ್ಟ್ರಗಳಿಂದ ಹಿಂಡೋಸ್‌, ಇಂಡೋಸ್‌ ಎಂದು ಕರೆಯಲ್ಪಟ್ಟು, ವಿವಿಧ ಭಾಷೆಗಳ ಪ್ರಭಾವಕ್ಕೆ ಒಳಗಾಗಿ ಕೊನೆಗೆ ಇಂಗ್ಲಿಷ್‌ನಲ್ಲಿ ಇಂಡಿಯಾ ಆಗಿ ಬದಲಾಯಿತು.

ಇಂಡಿಯಾ ಹೆಸರಿಗೆ ಆಕ್ಷೇಪ ಇಂದಿನದಲ್ಲ..

ದೇಶದ ಸಂವಿಧಾನ ರಚನೆಯ ವೇಳೆ ಸಂವಿಧಾನ ಸಭೆಯ ಸದಸ್ಯರು ಭಾರತ ಉಪಖಂಡದ ಅಧಿಕೃತ ಹೆಸರು ಏನಾಗಿರಬೇಕು ಎಂಬ ಬಗ್ಗೆ ಗಂಭೀರ ಹಾಗೂ ವಿಸ್ತೃತ ಚರ್ಚೆ ನಡೆಸಿದ್ದರು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ತಮ್ಮ 'ಡಿಸ್ಕವರಿ ಆಫ್ ಇಂಡಿಯಾ’ ಕೃತಿಯನ್ನು ಬರೆಯುವಾಗಲೂ, ಭಾರತದೊಂದಿಗೆ ನಂಟು ಹೊಂದಿರುವ ವಿವಿಧ ಹೆಸರುಗಳ ಕುರಿತು ಆಳವಾದ ಅಧ್ಯಯನ ನಡೆಸಿದ್ದರು. ಇಂಡಿಯಾ, ಹಿಂದುಸ್ಥಾನ, ಭಾರತ… ಹೀಗೆ ದೇಶದ ಹೆಸರುಗಳ ಕುರಿತು ಗಾಢ ಚಿಂತನೆ ನಡೆಸಿದ್ದಾಗಿ ಅವರು ತಮ್ಮ ಪುಸ್ತಕದಲ್ಲೂ ಉಲ್ಲೇಖೀಸಿದ್ದಾರೆ. ಆದರೆ ಕೊನೆಗೆ ಸಂವಿಧಾನ ಅಂತಿಮ ರೂಪ ಪಡೆದಾಗ, ನೆಹರೂ ಗುರುತಿಸಿದ್ದ ಮೂರರ ಪೈಕಿ ಒಂದು ಹೆಸರನ್ನು ಕೈಬಿಡಲಾಗಿತ್ತು. ಅಲ್ಲದೇ ಮೊದಲ ವಿಧಿಯಲ್ಲಿ, “ಇಂಡಿಯಾ, ಅಂದರೆ ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ' ಎಂದು ಉಲ್ಲೇಖೀಸಲಾಗಿತ್ತು.

ಗೊಂದಲ, ವಿವಾದ: ಅನಂತರದ ವರ್ಷಗಳಲ್ಲಿ, ಹಲವು ಬಾರಿ ದೇಶದ ಹೆಸರಿನ ಬಗ್ಗೆ ಆಕ್ಷೇಪಗಳು, ವಿವಾದಗಳು ಎದ್ದವು. ಇಂಡಿಯಾ ಮತ್ತು ಭಾರತ ಮಾತ್ರವೇ ಐತಿಹಾಸಿಕವಾಗಿ ಉಪಖಂಡದೊಂದಿಗೆ ನಂಟು ಹೊಂದಿದ್ದ ಹೆಸರುಗಳಾಗಿರಲಿಲ್ಲ. ಭಾರತ ಉಪಖಂಡವು “ಮೆಲೂಹಾ’ ಎಂಬ ಹೆಸರಿನೊಂದಿಗೂ ಪ್ರಾಚೀನವಾಗಿ ಗುರುತಿಸಿಕೊಂಡಿತ್ತು ಎಂದು ವಿದ್ವಾಂಸರು ವಾದಿಸಿದ್ದರು. ಮೆಸೊಪೊಟೇಮಿಯಾದ ಪುರಾತನ ಕೃತಿಗಳಲ್ಲಿ ಸಿಂಧೂ ಕಣಿವೆ ನಾಗರಿಕತೆಯನ್ನು ಉಲ್ಲೇಖೀಸಲು ಮೆಲೂಹಾ ಎಂಬ ಪದವನ್ನು ಬಳಸಲಾಗುತ್ತಿತ್ತಂತೆ. ಇದ ಲ್ಲದೇ, ಜಂಬೂ ದ್ವೀಪ, ನಾಭಿವರ್ಷ, ಆರ್ಯಭಟ ಎಂಬ ಹೆಸರುಗಳೂ ಭಾರತ ದೊಂದಿಗೆ ತಳುಕು ಹಾಕಿಕೊಂಡಿತ್ತು. ಅನಂತರದಲ್ಲಿ ಪರ್ಷಿಯನ್ನರು ಭಾರತ ಉಪಖಂಡಕ್ಕೆ ಬಳಸಿದ ಹೆಸರೇ 'ಹಿಂದೂ ಸ್ಥಾನ’. ಆದರೂ, ದೇಶದ ಸಂವಿಧಾನವು ಅಧಿಕೃತವಾಗಿ ಒಪ್ಪಿ ಕೊಂಡಿದ್ದು “ಇಂಡಿಯಾ ಮತ್ತು ಭಾರತ’ ಹೆಸರುಗಳನ್ನು.

ಸಂವಿಧಾನ ರಚನಾ ಸಭೆಯಲ್ಲೇ ಭಿನ್ನಮತ: ಸಂವಿಧಾನ ರಚನಾ ಸಭೆಯಲ್ಲಿ 'ಒಕ್ಕೂಟದ ಹೆಸರು ಮತ್ತು ಭೂಭಾಗ’ ಎಂಬ ಸೆಕ್ಷನ್‌ ಕುರಿತು ಚರ್ಚೆ ಆರಂಭವಾಗಿದ್ದು 1949ರ ಸೆ.17ರಂದು. ಸಂವಿಧಾನದ ಮೊದಲ ವಿಧಿಯಲ್ಲಿ 'ಇಂಡಿಯಾ, ಅಂದರೆ ಭಾರತವು ರಾಜ್ಯಗಳ ಒಕ್ಕೂಟವಾಗಿರಬೇಕು’ ಎಂಬುದನ್ನು ಉಲ್ಲೇಖೀಸಿದ ಕ್ಷಣದಿಂದಲೇ ಪ್ರತಿನಿಧಿಗಳ ನಡುವೆ ಭಿನ್ನ ಅಭಿಪ್ರಾಯಗಳು ಮೂಡಿದ್ದವು.

ಫಾರ್ವರ್ಡ್‌ ಬ್ಲಾಕ್‌ನ ಸದಸ್ಯರಾಗಿದ್ದ ಹರಿ ವಿಷ್ಣು ಕಾಮತ್‌ ಅವರು ಈ ಉಲ್ಲೇಖವನ್ನು “ಭಾರತ, ಅಥವಾ ಆಂಗ್ಲ ಭಾಷೆಯಲ್ಲಿ ಇಂಡಿಯಾವು ರಾಜ್ಯಗಳ ಒಕ್ಕೂಟ ವಾಗಿರಬೇಕು’ ಎಂದು ಬದಲಾಯಿಸಬೇಕು ಎಂದು ಸಲಹೆಯಿತ್ತಿದ್ದರು. ಕೇಂದ್ರ ಪ್ರಾಂತಗಳು ಮತ್ತು ಬೇರಾರ್‌ ಪ್ರಾಂತಗಳನ್ನು ಪ್ರತಿನಿಧಿಸಿದ್ದ ಸೇs… ಗೋವಿಂದ ದಾಸ್‌ ಅವರು, 'ಭಾರತ, ವಿದೇಶಗಳಲ್ಲಿ ಇದನ್ನು ಇಂಡಿಯಾ ಎಂದು ಕರೆಯಲಾಗುತ್ತದೆ’ ಎಂದು ಬದಲಾಯಿಸುವಂತೆ ಆಗ್ರಹಿಸಿದ್ದರು.

ಸಂಯುಕ್ತ ಪ್ರಾಂತಗಳ ಗುಡ್ಡಗಾಡು ಜಿಲ್ಲೆಗಳನ್ನು ಪ್ರತಿನಿಧಿ ಸಿದ್ದ ಹರ್‌ಗೊವಿಂದ್‌ ಪಂತ್‌ ಅವರು, 'ಉತ್ತರ ಭಾರತದ ಜನರು ಭರತವರ್ಷ ಎಂಬ ಹೆಸರಲ್ಲದೇ ಬೇರೇನನ್ನೂ ಬಯಸುವುದಿಲ್ಲ’ ಎಂದಿದ್ದರು. 'ಇಂಡಿಯಾ’ ಎಂಬ ಪದದ ಮೇಲೆ ಕೆಲವು ಸದಸ್ಯರಿಗೆ ಯಾಕೆ ಅಷ್ಟೊಂದು ಒಲವು ಎಂದು ಅರ್ಥ ವಾಗುತ್ತಿಲ್ಲ. ನಮ್ಮ ದೇಶಕ್ಕೆ ಈ ಹೆಸರನ್ನು ಕೊಟ್ಟಿದ್ದು ವಿದೇಶಿ ಯರು. ನಮ್ಮ ದೇಶದ ಶ್ರೀಮಂತಿಕೆಯ ಬಗ್ಗೆ ತಿಳಿದು, ನಮ್ಮ ಸಂಪತ್ತನ್ನು ಕೊಳ್ಳೆ ಹೊಡೆಯುವ ಉದ್ದೇಶದಿಂದ ಬಂದು, ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡವರು ಕೊಟ್ಟ ಹೆಸರಿದು. ನಾವು ಈಗಲೂ ಇದೇ ಹೆಸರನ್ನು ನೆಚ್ಚಿಕೊಂಡರೆ, ಅನ್ಯ ಆಡಳಿತಗಾರರು ಹೇರಿರುವ ಹೆಸರನ್ನು ಬಳಸಲು ನಮಗೆ ಸ್ವಲ್ಪವೂ ಮುಜು ಗರವಿಲ್ಲ ಎಂದು ನಾವೇ ಸಾಬೀತುಪಡಿಸಿಕೊಂಡಂತಾಗುತ್ತದೆ. ಇಂಡಿಯಾ ಹೆಸರನ್ನು ಯಾರೂ ಒಪ್ಪಬಾರದು ಎಂದು ಖಡಕ್ಕಾಗಿ ನುಡಿದಿದ್ದರು.

ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ಒಂದು ಅಧಿಕೃತ ಹೆಸರಿದ್ದರೆ, ಅದರ ಹಿಂದೆ ಒಂದಷ್ಟು ಅನ್ವರ್ಥ ನಾಮಗಳೂ ಇರುತ್ತವೆ. ಅಂಥದ್ದೇ ಒಂದಷ್ಟು ಅನ್ವರ್ಥನಾಮಗಳು (ಪರ್ಯಾಯ ಹೆಸರುಗಳು) ಭಾರತಕ್ಕೂ ಇದೆ. ಭಾರತಕ್ಕೆ ಇರುವ ಒಂದಷ್ಟು ಪ್ರಸಿದ್ಧ ಅನ್ವರ್ಥ ನಾಮಗಳು ಹೀಗಿವೆ…

ದ್ರಾವಿಡ
ಪ್ರಾಕೃತಿಕವಾಗಿ ನದಿಗಳಿಂದಾಗಿ ಬೇರ್ಪಡುವ ಭಾರತದ ದಕ್ಷಿಣ ಭಾಗವನ್ನು ದ್ರಾವಿಡ ಎಂದು ಕರೆಯಲಾಗುತ್ತದೆ. 'ದ್ರಾವಿಡ' ಎಂಬ ಪದಕ್ಕೆ 'ಸಂಧಿ' ಎಂಬ ಅರ್ಥವಿದೆ. 'ದ್ರವ್ಯ' ಎಂದರೆ ನೀರು, 'ವಿಡ' ಎಂದರೆ ಸೇರುವ ಜಾಗ. ಹೀಗಾಗಿ ಅರಬ್ಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿ ಸೇರುವ ಭೂ ಭಾಗವನ್ನು 'ದ್ರಾವಿಡ' ಎಂದು ಕರೆಯಲಾಗುತ್ತದೆ.

ಜಂಬೂದ್ವೀಪ
ವೇದ ವಿಶ್ವವಿಜ್ಞಾನದಲ್ಲಿ ಮತ್ತು 'ಮಾರ್ಕಾಂಡೇಯ ಪುರಾಣ’, 'ಸೂರ್ಯ ಸಿದ್ಧಾಂತ’ದಲ್ಲಿ ಭಾರತವನ್ನು 'ಜಂಬೂದ್ವೀಪ' ಎಂದೂ ಕರೆಯಲಾಗಿದೆ. ಆಯುರ್ವೇದಲ್ಲಿ ಔಷಧಿಯ ಗುಣವಿದೆ ಎಂದು ಹೇಳಲಾದ ಜಂಬೂ (ನೆರಳೆಹಣ್ಣು) ಹೇರಳವಾಗಿ ಬೆಳೆಯುತ್ತಿದ್ದರಿಂದ, ಈ ಭಾಗವನ್ನು “ಜಂಬೂದ್ವೀಪ’ ಎನ್ನಲಾಗಿದೆ.

ಅಜನಭ ವರ್ಷ
‘ಅಜನಭ ವರ್ಷ’ ಎಂಬುದು ಭಾರತದ ಮೊದಲ ಹೆಸರು ಎಂದು ಹೇಳಲಾಗುತ್ತದೆ. ಸಂಸ್ಕೃತದಲ್ಲಿ “ಅಜ’ ಎಂಬುದು ವೇದಪುರುಷ ಅಥವಾ ಬ್ರಹ್ಮದೇವರ ಮತ್ತೂಂದು ಹೆಸರಾಗಿದೆ. “ನಭ’ ಎಂದರೆ ಕೇಂದ್ರ ಅಥವಾ ಹೊಕ್ಕಳು ಎಂಬ ಅರ್ಥವಿದ್ದು, ವಿಸ್ತಾರವಾದ ಜಾಗಕ್ಕೆ “ವರ್ಷ’ ಎನ್ನಲಾಗುತ್ತದೆ. “ಅಜನಭ ವರ್ಷ’ ಎಂಬುದನ್ನು ಕೆಲವೊಮ್ಮೆ ಸರಳವಾಗಿ ’ಅಜನಭ’ ಎಂದು ಕರೆಯುವುದುಂಟು.

ಆರ್ಯವರ್ತ
'ಆರ್ಯ' ಎಂಬುದಕ್ಕೆ ಶ್ರೇಷ್ಠ, ಘನವಾದ ಅಥವಾ ಉದಾತ್ತವಾದ ಎಂಬಂತಹ ಹಲವು ಅರ್ಥವಿದೆ. ಭೂಮಿಗೆ 'ವರ್ತ' ಎಂದೂ ಕರೆಯಲಾಗುತ್ತದೆ. ಶ್ರೇಷ್ಠರು, ಘನವಾದ ಅಥವಾ ಉದಾತ್ತವಾದವರು ಇರುವ ಭೂಮಿಯನ್ನು 'ಆರ್ಯವರ್ತ' ಎಂದು ಕರೆಯಲಾಗುತ್ತದೆ.

ನಾಭಿವರ್ಷ
ಅಗ್ನಿಧ್ರ ರಾಜನ ಮಗ ನಾಭಿ ಹಿಮಾಲಯದಿಂದ ಹಿಡಿದು ದಕ್ಷಿಣದ ಸಮುದ್ರ ತೀರದವರೆಗೆ ಭಾರತದ ಭೂಮಿಯನ್ನು ಆಳ್ವಿಕೆ ಮಾಡಿದ್ದ ಎಂದು ಹೇಳಲಾಗುತ್ತದೆ. “ವರ್ಷ’ ಎಂದರೆ ಖಂಡ ಅಥವಾ ಭೂ ಭಾಗ ಎಂಬ ಅರ್ಥವಿದೆ. ಹೀಗಾಗಿ ನಾಭಿ ಆಳ್ವಿಕೆ ಮಾಡಿದ ಭೂಮಿಯನ್ನು 'ನಾಭಿ ವರ್ಷ’ ಎಂದೂ ಕರೆಯುವುದುಂಟು.

ಇಳಾವತಿ ವರ್ಷ
ಕೆಲವೊಂದು ಸಾಹಿತ್ಯ ಮತ್ತು ಕೃತಿಗಳಲ್ಲಿ ಭಾರತದ ಭೂ ಭಾಗವನ್ನು 'ಇಳಾವತಿ ವರ್ಷ’ ಎಂದೂ ಉಲ್ಲೇಖೀಸಲಾಗಿದೆ. ಭೂಮಿಯನ್ನು ಆಳುವ ಮಹಿಳೆ ಎಂಬ ಅರ್ಥವನ್ನು ಈ ಪದ ಹೊಂದಿದೆ.

ಭರತವರ್ಷ
'ನಾಭಿ ವರ್ಷ'ದಂತೆಯೇ ಭಾರತವನ್ನು 'ಭರತ ವರ್ಷ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಭರತ ಎಂಬ ರಾಜನು 'ವರ್ಷ’ ಎಂದರೆ ಖಂಡ ಅಥವಾ ಭೂ ಭಾಗವನ್ನು ಆಲ್ವಿಕೆ ಮಾಡಿದ್ದರಿಂದ, ಭಾರತವನ್ನು 'ಭರತ ವರ್ಷ’ ಎಂದು ಕರೆಯಲಾಗುತ್ತದೆ.

ಮೋಕ್ಷ ಭೂಮಿ
ಭಾರತೀಯ ಶಾಸ್ತ್ರ, ಪುರಾಣ ಮತ್ತು ಪುಣ್ಯ ಕಥೆಗಳಲ್ಲಿ ಮೋಕ್ಷಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿದೆ. ಹುಟ್ಟಿನ ಬಳಿಕ ಸಾವು. ಸಾವಿನ ಬಳಿಕ ಮೋಕ್ಷ ಪ್ರಾಪ್ತಿಯಾಗಬೇಕು ಎಂಬುದು ಬಹುತೇಕರ ಬಯಕೆ. ಇಂಥ ಮೋಕ್ಷಕ್ಕೆ ಭಾರತವೇ ಶ್ರೇಷ್ಠ ಎಂಬುದು ವರ್ಣನೆಯಲ್ಲಿರುವುದರಿಂದ, ಇದನ್ನು 'ಮೋಕ್ಷ ಭೂಮಿ’ ಎಂದು ಕರೆಯಲಾಗುತ್ತದೆ.

ಹಿಮವತ್‌ ಪ್ರದೇಶ
ಭಾರತದ ಬಹುತೇಕ ಭೂ ಪ್ರದೇಶಗಳಲ್ಲಿ ಬೃಹತ್‌ ಬೆಟ್ಟ-ಗುಟ್ಟಗಳನ್ನು ಸರ್ವೇ ಸಾಮಾನ್ಯವಾಗಿ ಕಾಣಬಹುದಾಗಿದೆ. ಹೀಗಾಗಿ ಭಾರತವನ್ನು 'ಹಿಮವತ್‌’ ಅಂದರೆ ಪರ್ವತಗಳ ರಾಜ ಅಥವಾ 'ಹಿಮವತ್‌ ಪ್ರದೇಶ’ ಎಂದು ಕರೆಯಲಾಗುತ್ತದೆ.

ಇಂಡಿಯಾ
ಕ್ರಿ. ಪೂ. 3ನೇ ಶತಮನದಲ್ಲಿ ಭಾರತಕ್ಕೆ ತನ್ನ ಬೃಹತ್‌ ಸೇನೆಯೊಂದಿಗೆ ಆಗಮಿಸಿದ್ದ ಗ್ರೀಕ್‌ ಮಹಾರಾಜ ಅಲೆಕ್ಸಾಂಡರ್ ಮತ್ತು 'ಹಿಂದ್‌’ ಎಂಬುದರ ಬದಲಾಗಿ 'ಇಂಡ್‌’ ಎಂಬ ಪದವನ್ನು ಬಳಕೆ ಮಾಡಿದ್ದರು. ಕ್ರಮೇಣ 'ಇಂಡ್‌' ಎಂಬುದು ಕಾಲಾಂತರದಲ್ಲಿ 'ಇಂಡಿಯಾ’ ಎಂಬುದಾಗಿ ಬದಲಾಯಿತು.

ಹಿಂದೂಸ್ಥಾನ
ಭಾರತದ ಮೇಲೆ ಮೊದಲು ದಾಳಿ ಮಾಡಿದ್ದ ಪರ್ಷಿಯನ್ನರು ಸಿಂಧೂ ನದಿ ಭೂ ಭಾಗದ ಜನರನ್ನು ಹಿಂದೂಗಳು ಎಂದು ಕರೆದಿದ್ದರು. ಅವರು ವಾಸಿಸುವ ಭೂ ಪ್ರದೇಶವನ್ನು ಹಿಂಧೂಸ್ಥಾನ ಎಂದು ಕರೆಯಲಾಯಿತು.

ಪುಣ್ಯಭೂಮಿ
ವೇದಗಳು, ಪುರಾಣ ಮತ್ತು ಪುಣ್ಯ ಕಥೆಗಳಲ್ಲಿ ಭಾರತವನ್ನು “ಪುಣ್ಯ ಭೂಮಿ’ ಎಂದು ಉಲ್ಲೇಖೀಸಲಾಗಿದೆ. ಭಾರತದ ಭೂ ಭಾಗದಲ್ಲಿ ದೈವಿಕ ಅಂಶಗಳಿರುವುದರಿಂದ ಇದನ್ನು “ಪುಣ್ಯ ಭೂಮಿ’ ಎಂದು ಕರೆಯಲಾಗುತ್ತದೆ.

ಕರ್ಮಭೂಮಿ
ಕರ್ಮ ಸಿದ್ಧಾಂತದ ಪ್ರಕಾರ ಭೂಮಿಯಲ್ಲಿ ಹುಟ್ಟಿದ ಪ್ರತಿ ಜೀವಿಯೂ ಕರ್ಮಗಳನ್ನು ಮಾಡಲೇಬೇಕು. ಇಂಥ ಕರ್ಮಗಳಲ್ಲಿ ಸತ್ಕರ್ಮ ಮನುಷ್ಯನನ್ನು ಉನ್ನತಿಗೆ ತೆಗೆದುಕೊಂಡು ಹೋಗುತ್ತದೆ. ಇಂಥ ಸತ್ಕರ್ಮಗಳನ್ನು ಮಾಡಲು ಭಾರತ ಯೋಗ್ಯ ಭೂಮಿಯಾಗಿರುವುದರಿಂದ ಇದನ್ನು 'ಕರ್ಮ ಭೂಮಿ’ ಎನ್ನಲಾಗುತ್ತದೆ.

ಯೋಗಭೂಮಿ
ವೇದಗಳು, ಪುರಾಣಗಳು ಮತ್ತು ಪುಣ್ಯಕಥೆಗಳು ಯೋಗ ಜೀವನದ ಮೂಲಕ ಅಂತಿಮವಾಗಿ ಭಗವಂತನಲ್ಲಿ ಐಕ್ಯವಾಗುವುದನ್ನು ಪುಷ್ಠಿàಕರಿಸುತ್ತವೆ. ಹೀಗಾಗಿ ಭಾರತದ ಭೂಮಿಯನ್ನು 'ಯೋಗ ಭೂಮಿ’ ಎಂದೂ ಕರೆಯಲಾಗುತ್ತದೆ.

ಪವಿತ್ರ ಭೂಮಿ
ಜಗತ್ತಿನಲ್ಲಿಯೇ ಅತ್ಯಂತ ಪರಿಶುದ್ಧ ಭೂ ಭಾಗವನ್ನು ಹೊಂದಿರುವ ಪ್ರದೇಶ ಎಂದು ಕರೆಸಿಕೊಂಡಿರುವುದರಿಂದ ಭಾರತವನ್ನು 'ಪವಿತ್ರ ಭೂಮಿ’ ಎಂದು ಇಲ್ಲಿನ ಪುರಾಣಗಳು ಮತ್ತು ಪುಣ್ಯ ಕಥೆಗಳಲ್ಲಿ ಉಲ್ಲೇಖೀಸಲಾಗಿದೆ.

ಸ್ವಾತಂತ್ರ್ಯಾನಂತರ ಭಾರತದ ಸಂವಿಧಾನ ಕರಡು ಪ್ರತಿಯಲ್ಲಿ ಭಾರತ ಎಂಬ ಹೆಸರಿನ ಪ್ರಸ್ತಾಪ ಇರಲಿಲ್ಲ. 1948 ನವೆಂಬರ್ 4 ರಂದು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾದ ಡಾ. ಬಿ. ಆರ್. ಅಂಬೇಡ್ಕರ್ ಅವರು ಮಂಡಿಸಿದ ಸಂವಿಧಾನದ ಕರಡು ಪ್ರತಿಯಲ್ಲಿ ಭಾರತದ ಹೆಸರು ಇರಬೇಕು ಎಂಬ ವಾದ ಕೇಳಿ ಬಂತು. ಬರೋಬ್ಬರಿ 1 ವರ್ಷ ಕಾಲ ಈ ಆಗ್ರಹ ಮಾಡಲಾಯ್ತು. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು 1949 ಸೆಪ್ಟೆಂಬರ್ 18 ರಂದು ಸಂವಿಧಾನದ ಕರಡು ಪ್ರತಿಗೆ ಮೊದಲ ತಿದ್ದುಪಡಿ ತರಲು ಮುಂದಾದರು.

ಈ ವೇಳೆ ದೇಶದ ಹೆಸರನ್ನು ಇಂಡಿಯಾ ಅಂದರೆ ಭಾರತ.. ಇದು ಸಂಯುಕ್ತ ಗಣರಾಜ್ಯ ಎಂದು ನಮೂದಿಸಲಾಗಿತ್ತು. ಆದರೆ, ದೇಶಕ್ಕೆ ಎರಡು ಹೆಸರೇಕೆ? ದೇಶಕ್ಕೆ ಭಾರತ ಎಂಬ ಒಂದೇ ಹೆಸರು ಸಾಕು ಎಂಬ ವಾದಗಳು ಕೇಳಿ ಬಂದವು. ಇಂಡಿಯಾ ಎಂದು ಬರೆದ ಬಳಿಕ ಎರಡು ಕಾಮಾಗಳನ್ನು ಹಾಕಿ ನಂತರ ಭಾರತ ಎಂದು ಬರೆಯೋದು ಏಕೆ ಎಂಬ ಸವಾಲನ್ನೂ ಸದಸ್ಯರು ಹಾಕಿದರು. ಈ ವೇಳೆ ಇಂಡಿಯಾ ಅನ್ನೋ ಹೆಸರಿನ ಮೂಲದ ಬಗ್ಗೆಯೂ ಚರ್ಚೆ ನಡೆದಿತ್ತು.

ಇಂಡಿಯಾ ಅನ್ನೋದು ದೇಶದ ಸಾವಿರಾರು ವರ್ಷಗಳ ಗುಲಾಮಗಿರಿಯ ಸಂಕೇತ ಎಂದು ಆಗಿನ ಅಸೆಂಬ್ಲಿ ಸದಸ್ಯರಾದ ಎಚ್. ವಿ. ಕಾಮತ್ ಅವರು ವಾದಿಸಿದರು. ಗ್ರೀಕರು ಭಾರತಕ್ಕೆ ತಮ್ಮ ಅನುಕೂಲಕ್ಕೆ ತಕ್ಕಂತೆ ಇಂಡಿಯಾ ಎಂದು ಕರೆದರು. ಆ ನಂತರ ನಿರಂತರವಾಗಿ ನಡೆದ ವಿದೇಶೀ ದಾಳಿಗಳಿಂದ ಭಾರತ ತನ್ನ ಆತ್ಮವನ್ನೇ ಕಳೆದುಕೊಂಡಿತ್ತು. ಮಹಾತ್ಮ ಗಾಂಧಿ ಅವರು ಭಾರತ ತನ್ನ ಆತ್ಮವನ್ನು ಗುರ್ತಿಸಿಕೊಳ್ಳಲು ನೆರವಾಗಿದ್ದಾರೆ ಎಂದು ಕೆಲವು ಸದಸ್ಯರು ತಮ್ಮ ನಿಲುವು ಮಂಡಿಸಿದರು.

ಇಂಡಿಯಾ ಅನ್ನೋ ಹೆಸರು ನಮಗೆ ಅವಮಾನ ಮಾಡಿದಂತೆ, ಏಕೆಂದರೆ ವಿದೇಶೀಯರು ಇಟ್ಟ ಹೆಸರು ಅದು ಅನ್ನೋ ವಾದವನ್ನ ಹರಗೋವಿಂದ ಪಂತ್ ಅವರು ಮಂಡಿಸಿದರು. ಇನ್ನೂ ಕೆಲವರು, ಭಾರತವನ್ನು ಹಿಂದೂಸ್ತಾನ ಎಂದೂ ಕರೆಯಬಹುದು. ಏಕೆಂದರೆ, ಭಾರತೀಯರೆಲ್ಲರೂ ಹಿಂದೂಗಳೇ ಅಲ್ಲವೇ ಎಂದರು. ಒಟ್ಟಿನಲ್ಲಿ, ದೇಶಕ್ಕೆ ಭಾರತ ಎಂಬ ಹೆಸರೇ ಇರಬೇಕು ಎಂಬ ನಿಲುವನ್ನು ಮಂಡಿಸಲಾಯಿತಾದರೂ ಸಂವಿಧಾನದ ಅಸೆಂಬ್ಲಿಯಲ್ಲಿ ಈ ನಿಲುವಳಿಗೆ ಸೋಲಾಯ್ತು. ಅಂತಿಮವಾಗಿ ದೇಶದ ಹೆಸರು ಇಂಡಿಯಾ ಅಂದರೆ ಭಾರತ ಇದು ಸಂಯುಕ್ತ ಗಣರಾಜ್ಯ ಎಂಬ ಹೆಸರೇ ಅಂತಿಮವಾಯ್ತು. ಅಂದಿನಿಂದಲೂ ದೇಶದ ಹೆಸರನ್ನು ಇಂಡಿಯಾ ಅಥವಾ ಭಾರತ ಎಂಬ ಎರಡೂ ಹೆಸರಿನಲ್ಲಿ ಕರೆಯಬಹುದಾಗಿದೆ.

ಸಾಮಾನ್ಯವಾಗಿ ಕನ್ನಡ, ಹಿಂದಿ ಸೇರಿದಂತೆ ಎಲ್ಲ ಭಾಷೆಗಳಲ್ಲೂ ದೇಶದ ಹೆಸರನ್ನು ಭಾರತ ಎಂದೇ ಬರೆಯಲಾಗುತ್ತೆ. ಇಂಗ್ಲಿಷ್‌ನಲ್ಲಿ ಮಾತ್ರ ದೇಶದ ಹೆಸರು ಇಂಡಿಯಾ ಆಗಿಬಿಡುತ್ತೆ. ಈ ಎರಡೂ ಹೆಸರುಗಳ ಬದಲು ಒಂದೇ ಹೆಸರನ್ನು ಅಂತಿಮ ಮಾಡಬೇಕು, ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯತೆ ಇದೆ.

ಸಂವಿಧಾನ ತಜ್ಞರು ಪ್ರಕಾರ, ಇಂಡಿಯಾ ಹೆಸರಿನ ಬದಲು ಭಾರತ ಎಂಬ ಹೆಸರನ್ನು ಬಳಸೋದು ಸಂವಿಧಾನದ ಪ್ರಕಾರ ತಪ್ಪಲ್ಲ. ಯಾವ ಅಡೆತಡೆಯೂ ಇಲ್ಲ. ಒಂದು ವೇಳೆ ಇಂಡಿಯಾ ಹೆಸರನ್ನು ತೆಗೆದು ಹಾಕಿ ಕೇವಲ ಭಾರತ ಅನ್ನೋ ಹೆಸರನ್ನೇ ಉಳಿಸಬೇಕು ಅನ್ನೋದಾದ್ರೆ, ಸಂವಿಧಾನದ ಆರ್ಟಿಕಲ್ 368ಗೆ ತಿದ್ದುಪಡಿ ತರುವ ಮೂಲಕ ಸಂವಿಧಾನದ ಪ್ರಸ್ತಾವನೆಯನ್ನೇ ಬದಲಿಸಬೇಕಾಗುತ್ತದೆ. ಈ ನಿಲುವಳಿಗೆ ಸಂಸತ್‌ನ ಉಭಯ ಸದನಗಳಲ್ಲೂ 3ರಲ್ಲಿ ಎರಡರಷ್ಟು ಸದಸ್ಯರ ಸಮ್ಮತಿ ಬೇಕಾಗುತ್ತದೆ. ಜೊತೆಗೆ ಅರ್ಧಕ್ಕೂ ಹೆಚ್ಚು ರಾಜ್ಯಗಳ ವಿಧಾನಸಭೆಗಳ ಅನುಮೋದನೆ ಕೂಡಾ ಬೇಕಾಗುತ್ತದೆ.

Category:Education



ProfileImg

Written by shruti mopagar