ಕಿಡ್ನಿಗಳು ನಮ್ಮ ರಕ್ತದಲ್ಲಿನ ಕಲ್ಮಶವನ್ನು ಬೇರ್ಪಡಿಸಿ ಅದನ್ನು ಮೂತ್ರದ ಮೂಲಕ ಹೊರ ಹಾಕುವ ಕೆಲಸ ಮಾಡುತ್ತವೆ. ಹಲವು ಕಾರಣಗಳಿಂದ ಈ ಕಿಡ್ನಿಗಳೇನಾದರು ವೈಫಲ್ಯವಾದರೆ ಮಾನವನ ದೇಹದಲ್ಲಿ ರಕ್ತ ಶುದ್ಧೀಕರಣ ಕ್ರಿಯೆ ನಿಂತುಹೋಗುತ್ತದೆ. ಇದರಿಂದ ಮನುಷ್ಯನ ಆರೋಗ್ಯ ಹದಗೆಡುತ್ತದೆ.
ಕ್ರಿಯೇಟೆನೈನ್ ಮತ್ತು ಯೂರಿಯ ರಕ್ತದಲ್ಲಿನ ಎರಡು ಪ್ರಮುಖ ಧಾತುಗಳು. ರಕ್ತದಲ್ಲಿ ಇವುಗಳ ಪ್ರಮಾಣ ಹೆಚ್ಚಾಗೋದನ್ನು ಕಿಡ್ನಿಗಳು ತಡೆಯುತ್ತವೆ. ಅಂದರೆ ಅವುಗಳನ್ನು ಆರೋಗ್ಯಕರ ಕಿಡ್ನಿಗಳು ರಕ್ತದಿಂದ ಬೇರ್ಪಡಿಸಿ ರಕ್ತವನ್ನು ಶುದ್ಧೀಕರಣ ಮಾಡುವ ಕ್ರಿಯೆಯನ್ನು ನಿರಂತರವಾಗಿ ಮಾಡುತ್ತಿರುತ್ತವೆ.
ಅಕಸ್ಮಾತ್ ಕಿಡ್ನಿ ವೈಫಲ್ಯಗೊಂಡು ರಕ್ತ ಶುದ್ಧೀಕರಣ ಕಾರ್ಯ ಸರಿಯಾಗಿ ಆಗಲಿಲ್ಲವೆಂದಾದರೆ ಅಂತಹ ಸಂದರ್ಭದಲ್ಲಿ ನೆಫ್ರೋಲಜಿ ವೈದ್ಯರು ಡಯಾಲಿಸಿಸ್ ಪ್ರಕ್ರಿಯೆಗೆ ಸೂಚಿಸುತ್ತಾರೆ. ಅದೇ ಈ ಕೃತಕ ಕಿಡ್ನಿಯಂತೆ ಕಾರ್ಯಾಚರಿಸುವ ಡಯಾಲಿಸರ್ ಮಷೀನ್.
ಡಯಾಲಿಸಿಸ್ ನಡೆಸಲು ಮೊದಲು ಎವಿ - ಗ್ರಾಫ್ಟ್ ಅಥವಾ ಎವಿ - ಫಿಸ್ಟೂಲ ಮಾಡಲಾಗುತ್ತದೆ. ಅಂದರೆ ವ್ಯಕ್ತಿಯ ದೇಹದಿಂದ ರಕ್ತ ಎಳೆಯಲು ಮತ್ತು ರಕ್ತವನ್ನು ಪುನಃ ದೇಹಕ್ಕೆ ಕಳುಹಿಸಲು ಟ್ಯೂಬ್‌ಗಳನ್ನು ಅಳವಡಿಸುತ್ತಾರೆ. ಇದು ಡಯಾಲಿಸಿಸ್ ಯಂತ್ರದ ಪಂಪ್ ಗೆ ಕನೆಕ್ಟ್ ಆಗಿರುತ್ತದೆ. ಈ ಟ್ಯೂಬ್ ಮೂಲಕ ಪಂಪ್ ಮನುಷ್ಯನ ರಕ್ತವನ್ನು ಎಳೆದು ಡಯಾಲಿಸರ್ ಗೆ ರವಾನಿಸುತ್ತದೆ.
ಡಯಾಲಿಸರ್ ಎಂದು ಕರೆಸಿಕೊಳ್ಳುವ ಈ ಫಿಲ್ಟರ್ ರಕ್ತವನ್ನು ಶುದ್ಧೀಕರಿಸುತ್ತದೆ. ಶುದ್ಧೀಕರಣಗೊಂಡ ರಕ್ತವು ಟ್ಯೂಬ್ ಮೂಲಕ ದೇಹಕ್ಕೆ ಸೇರುತ್ತದೆ. ಒಮ್ಮೆ ಈ ಡಯಾಲಿಸಿಸ್ ಪ್ರಕ್ರಿಯೆ ನಡೆಯಲು ನಾಲ್ಕು ಗಂಟೆಗಳ ಸಮಯ ಹಿಡಿಯುತ್ತದೆ.
ವ್ಯಕ್ತಿಯ ದೈಹಿಕ ಶಕ್ತಿ ಮತ್ತು ಅನಾರೋಗ್ಯದ ತೀವ್ರತೆಯ ಆಧಾರದ ಮೇಲೆ ವಾರದಲ್ಲಿ ಎರಡು ಅಥವಾ ಮೂರು ಬಾರಿ ಡಯಾಲಿಸಿಸ್ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗುತ್ತದೆ.
ಈ ಡಯಾಲಿಸಿಸ್ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಒಮ್ಮೆ ಪಡೆಯಬೇಕಾದರೆ ಕನಿಷ್ಠ 1000 ದಿಂದ ಒಂದೂವರೆ ಸಾವಿರ ಖರ್ಚಾಗುತ್ತೆ. ಅದರಂತೆ ವಾರಕ್ಕೆ ಮೂರರಿಂದ ನಾಲ್ಕುವರೆ ಸಾವಿರ, ತಿಂಗಳಿಗೆ 9 ರಿಂದ 13500 ಸಾವಿರ ಹಣ ಖರ್ಚು ಮಾಡಬೇಕು.
ನಾವು ಸುಮ್ಮನೆ ಕುಳಿತಿದ್ದಾಗ, ನಡೆಯುವಾಗ, ಮಾತನಾಡುವಾಗ, ಕೆಲಸ ಮಾಡುವಾಗ, ಮಲಗಿದ್ದಾಗ ಇನ್ನೂ ಯಾವಾಗಲೂ ಕಿಡ್ನಿಗಳು ಸದ್ದಿಲ್ಲದೇ ನಮ್ಮ ರಕ್ತವನ್ನು ಶುದ್ಧ ಮಾಡುತ್ತಲೇ ಇರುತ್ತದೆ. ಇದಕ್ಕಾಗಿ ನಾವು ಯಾವುದೇ ಸಮಯ ಕೊಡಬೇಕಿಲ್ಲ. ಬೆಡ್ ಮೇಲೆ ಮಲಗುವ ಹಾಗಿಲ್ಲ, ಯಾವುದೇ ಚಿಕಿತ್ಸೆ ಪಡೆಯುವಂತಿಲ್ಲ. ಹಣ ಅಂತೂ ಖರ್ಚೇ ಮಾಡುವಂತಿಲ್ಲ. ಎಲ್ಲವೂ ಪ್ರಾಕೃತಿಕವಾಗಿ ನಡೆಯುತ್ತದೆ.
ಆಸ್ಪತ್ರೆಯ ಬೆಡ್ ಮೇಲೆ ನಿರಂತರ ನಾಲ್ಕು ಗಂಟೆ ಮಲಗಿ ಯಂತ್ರದ ಮೂಲಕ ಒಂದೇ ಒಂದು ಸಲ ನಮ್ಮ ದೇಹದ ರಕ್ತವನ್ನು ಶುದ್ಧೀಕರಣ ಮಾಡಿಸಿಕೊಳ್ಳುವುದು ಎಷ್ಟು ಹಿಂಸೆಯೋ ಅದೇ ನಮ್ಮ ಕಿಡ್ನಿಗಳಾದ್ರೆ ನಮ್ಮ ದೇಹದ ಪೂರ್ತಿ ರಕ್ತವನ್ನು ಒಂದು ದಿನಕ್ಕೆ ಬರೊಬ್ಬರಿ 36 ಸಲ ಶುದ್ಧೀಕರಣ ಮಾಡುತ್ತದೆ. ವಿಷಯ ಏನಂದ್ರೆ ಕಿಡ್ನಿ ಗಳು ನಡೆಸುವ ಈ ಕ್ರಿಯೆ ನಮ್ಮ ದೇಹಕ್ಕೆ ಕಿಂಚಿತ್ತೂ ಗೊತ್ತೇ ಆಗೋದಿಲ್ಲ.
ಹೀಗೆ ನಡೆಯುವ ಡಯಾಲಿಸಿಸ್ ನಿಂದ ದೂರ ಉಳಿಯಬೇಕಾದರೆ, ನಮ್ಮ ಕಿಡ್ನಿಗಳ ಆರೋಗ್ಯ ತುಂಬಾ ಮುಖ್ಯ. ಹಾಗಾದ್ರೆ ಕಿಡ್ನಿಗಳ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ?
ರಕ್ತದೊತ್ತಡ, ಮತ್ತು ಮಧುಮೇಹ ಪರೀಕ್ಷೆ
30 ವರ್ಷಗಳು ತುಂಬಿದ ಮಹಿಳೆ, ಪುರುಷರಿಬ್ಬರು ತಪ್ಪದೇ ಪ್ರತಿ ವರ್ಷಕ್ಕೆ ಎರಡು ಬಾರಿಯಾದರೂ ಬಿಪಿ ಶುಗರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಬಿಪಿ ಮತ್ತು ಶುಗರ್ ಎಂಬುದು ಮನುಷ್ಯನ ಜೊತೆಯಲ್ಲೇ ಬದುಕುವ ಆರೋಗ್ಯದ ವಿರೋಧಿಗಳು. ಇವುಗಳನ್ನು ನಿಯಂತ್ರಣದಲ್ಲಿಡಬೇಕಾದ್ದು ಅತ್ಯಂತ ಜವಾಬ್ದಾರಿಯುತ ಕೆಲಸ. ಹಲವಾರು ಮಂದಿ ಬಿಪಿಯನ್ನು ನಿರ್ಲಕ್ಷ್ಯ ಮಾಡುವುದುಂಟು. ಅದರಲ್ಲೂ ಯುವಕರು, ಏರುಪೇರು ತೋರಿಸಬಹುದು ಎಂಬ ಭಯದಲ್ಲೇ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ಇದು ಬಹಳ ತಪ್ಪು. ಕಡ್ಡಾಯವಾಗಿ ಆಗಾಗ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಧಿಕ ರಕ್ತದೊತ್ತಡ ಇದೆ ಎಂದಾದರೆ ತಕ್ಷಣ ಅದಕ್ಕೆ ವೈದ್ಯರ ಸಲಹೆ ಪಡೆದು ನಿಯಂತ್ರಣಕ್ಕೆ ತರುವ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಒಂದು ಕೊಂಡರೆ ಮತ್ತೊಂದು ಉಚಿತ ಎಂಬಂತೆ ಅದರ ಹಿಂದೆಯೇ ಮಧುಮೇಹಕ್ಕೆ ತುತ್ತಾಗುವಿರಿ.
ಸ್ವಯಂ ಔಷಧೋಪಚಾರ ಸಲ್ಲ
ವೈದ್ಯರ ಸಲಹೆ ಇಲ್ಲದೇ ಯಾವುದೇ ಔಷಧಿಗಳನ್ನು ಸೇವಿಸಬಾರದು. ಅಗತ್ಯಕ್ಕಿಂತ ಹೆಚ್ಚು ನೋವು ಮತ್ತು ಉಪಶಮನ ಮಾತ್ರೆಗಳನ್ನು ಸೇವಿಸಬಾರದು. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರಬಹುದು. ಒಂದು ಸಮಸ್ಯೆಯನ್ನು ಪರಿಹರಿಸಲು ಯಾವುದೇ ವೈದ್ಯಕೀಯ ಸಲಹೆ ಇಲ್ಲದೇ ಸ್ವಯಂ ಕೈಗೊಳ್ಳುವ ಔಷಧ ಅಡ್ಡ ಪರಿಣಾಮವಾಗಿ ಗುಣವಾಗುವ ಬದಲಾಗಿ ಇನ್ನಿತರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಬಹುದು. ಅಲ್ಲದೇ ಹೆಚ್ಚಿನ ಮಾತ್ರಗಳು ಕಿಡ್ನಿಯ ಆರೋಗ್ಯವನ್ನು ಬಲಿಪಡೆಯುವ ಸಾಧ್ಯತೆಗಳು ಹೆಚ್ಚು.
ಯಾವುದರಿಂದ ದೂರವಿರಬೇಕು ಎನ್ನುವುದಾದರೆ,
ಶುದ್ಧವಲ್ಲದ ಅಥವಾ ಗಡಸು ನೀರಿನ ಸೇವನೆ ಒಳ್ಳೆಯದಲ್ಲ. ಇದರಿಂದ ಕಿಡ್ನಿಯಲ್ಲಿ ಕಲ್ಲುಗಳು ಉತ್ಪತ್ತಿಯಾಗಿ ಅದರ ಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ. ಕುಡಿಯಲು ಅತ್ಯಂತ ಶುದ್ಧವಾದ ನೀರನ್ನೇ ಬಳಸಬೇಕು. ನಮ್ಮ ಹೊಟ್ಟೆಯೊಳಗೆ ಸೇರುವ ನೀರು ಎಷ್ಟು ಶುದ್ಧವಿರುತ್ತದೆ ಅಷ್ಟು ನಮ್ಮ ಆರೋಗ್ಯ ಹದವಾಗಿರುತ್ತದೆ. ಸದಾ ಬಿಸಿ ನೀರು ಸೇವನೆ ಉತ್ತಮ ಅಭ್ಯಾಸ. ಹಗಲಿನ ಹೊತ್ತು ನೀರಿನ ಸೇವನೆ ಹೆಚ್ಚಾಗಿರಬೇಕು.ರಾತ್ರಿ ಸಮಯ ಅಗತ್ಯಕಷ್ಟೇ ನೀರನ್ನು ಸೇವಿಸಬೇಕು.
ಮದ್ಯಪಾನ, ಧೂಮಪಾನ ಮಾರಕ
ಅತಿಯಾದ ಮದ್ಯಪಾನ ಮತ್ತು ಧೂಮಪಾನದಿಂದ ಕಿಡ್ನಿಗಳು ಹಾಳಾಗುವುದಲ್ಲದೇ, ದೇಹದ ಇತರ ಭಾಗಗಳು ಸಹ ಕೆಡುತ್ತವೆ. ಹೃದಯ ಸಂಬಂಧಿ ಕಾಯಿಲೆ ಅಲ್ಲದೇ ಶ್ವಾಸಕೋಶ ಮತ್ತು ಲಿವರ್ ಸಂಬಂಧಿ ಕಾಯಿಲೆಗಳು ಬೆಂಬಿಡದಂತೆ ಕಾಡುತ್ತವೆ. ಕಾಯಿಲೆಗೆ ಔಷಧಿ ಪಡೆದು ಗುಣಪಡಿಸಿಕೊಳ್ಳುವುದಕ್ಕಿಂತ ಕಾಯಿಲೆ ಬಾರದಂತೆ ತಡೆಗಟ್ಟುವುದು ಉತ್ತಮ. ಹೀಗಾಗಿ ಹಣ ಕೊಟ್ಟು ಮದ್ಯಪಾನ ಮತ್ತು ಧೂಮಪಾನ ಮಾಡಿ ಅದರಿಂದ ಮಾರಕ ರೋಗಕ್ಕೆ ತುತ್ತಾಗುವುದಕ್ಕಿಂತ ಅವುಗಳನ್ನು ತ್ಯಜಿಸಿ ಹಣ ಮತ್ತು ಆರೋಗ್ಯ ಎರಡನ್ನೂ ಕಾಪಾಡಿಕೊಳ್ಳುವುದು ಒಳ್ಳೆಯದು.
ಪ್ರತಿಯೊಬ್ಬರಿಗೂ ವ್ಯಾಯಾಮ ಜರೂರಿ
ಅತಿಯಾದ ತೂಕ ಮತ್ತು ಅತಿಯಾದ ಕೊಲೆಸ್ಟ್ರಾಲ್ ನಿಂದ ಕಿಡ್ನಿ ವೈಫಲ್ಯ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ವಯಸ್ಸು, ಎತ್ತರಕ್ಕೆ ಅನುಗುಣವಾಗಿ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ನಿತ್ಯ ಒಂದು ಗಂಟೆ ವ್ಯಾಯಾಮ ಅಥವಾ ಸಾಮಾನ್ಯ ಕಾಲ್ನಡಿಗೆ (ನಾರ್ಮಲ್ ವಾಕಿಂಗ್)ಯನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
ಉತ್ತಮ ಆಹಾರ ಸೇವನೆ ರೂಢಿಸಿಕೊಳ್ಳಿ
ಪ್ರತಿಯೊಬ್ಬರೂ ಮನೆಯಲ್ಲಿ ತಯಾರಿಸುವ ಆಹಾರಗಳನ್ನು ಮಾತ್ರ ಸೇವಿಸುವ ಅಭ್ಯಾಸವಿರಿಸಿಕೊಳ್ಳುವುದು ಒಳ್ಳೆಯದು. ಹೋಟೆಲ್ ತಿನಿಸುಗಳು, ಬೀದಿಬದಿ ಪದಾರ್ಥಗಳು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ಎಣ್ಣೆ ಜಿಡ್ಡಿನ ಆಹಾರವನ್ನು ಯಥೇಚ್ಚವಾಗಿ ಬಳಸುವುದು ಒಳ್ಳೆಯದಲ್ಲ. ಎಣ್ಣೆಯಲ್ಲಿ ಕರಿದ ಪದಾರ್ಥಗಳು ಅನಾರೋಗ್ಯದ ಮೊದಲ ಮೆಟ್ಟಿಲು. ಕೇವಲ ಮನೆಯಲ್ಲಿ ರೀಫೈಂಡ್ ಮಾಡಿದ ಅಡುಗೆ ಎಣ್ಣೆಯಲ್ಲಿ ತಯಾರಿಸಿದ ಪದಾರ್ಥಗಳನ್ನು ಅಲ್ಪ ಪ್ರಮಾಣದಲ್ಲಿ ಅಗತ್ಯಕ್ಕಷ್ಟೇ ಸೇವಿಸಬೇಕು. ಇದರೊಂದಿಗೆ ಯಥೇಚ್ಛವಾಗಿ ನೀರು ಕುಡಿಯಬೇಕು.
ಹೀಗೆ ಮೇಲಿನ ಅಂಶಗಳನ್ನು ಪಾಲಿಸಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಸರಿಯಾದ ರೀತಿಯಲ್ಲಿ ನಿಯಮಗಳನ್ನು ಅನುಸರಿಸಿದರೆ ದೈಹಿಕ ಹಾಗೂ ಮಾನಸಿಕವಾಗಿಯೂ ಸದೃಢತೆಯಿಂದಿರಲು ಸಾಧ್ಯ. ಇಲ್ಲದಿದ್ದಲ್ಲಿ ಅಂಗಾಂಗಗಳ ಆರೋಗ್ಯ ಬಲಿಕೊಟ್ಟು ನಿತ್ಯ ನರಕ ದರ್ಶನದ ಬದುಕು ಸಾಗಿಸುವ ಹಂತಕ್ಕೆ ತಲುಪುವುದು ನಿಶ್ಚಿತ. ಅದರಲ್ಲೂ ಕಿಡ್ನಿಗಳ ಅನಾರೋಗ್ಯ ಗಂಭೀರ ರೋದನೆಗೆ ತಳ್ಳುತ್ತದೆ ಎಚ್ಚರ. ಇಂದಿನ ದಿನಮಾನಗಳಲ್ಲಿ ಬದುಕಲು ಆರೋಗ್ಯವು ಹಣಕ್ಕಿಂತಲೂ ಮುಖ್ಯ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ.
ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ
0 Followers
0 Following