ಮನೆ ಮನೆ ಕಥೆ

ಆತ್ಮ ಕಥೆಯ ಬಿಡಿ ಭಾಗಗಳು -1

ProfileImg
23 Apr '24
6 min read


image

ಮನೆ ಮನೆ ಕಥೆ..

ಪೇಟೆಯಲ್ಲಿ ಬಾಡಿಗೆ ಮನೆಯೇ ಸಿಗುವುದಿಲ್ಲವೇ..

ಮೂವತ್ತು ವರ್ಷಗಳ ಮೊದಲು ನನ್ನ ಕಲಿಕೆಯನ್ನು ಮುಂದುವರೆಸಲು ನಮ್ಮ ಊರನ್ನು ಬಿಟ್ಟು ಪೇಟೆಗೆ ಹೊರಟಾಗ ನನಗೆ ಪೇಟೆಯಲ್ಲಿ ಬಾಡಿಗೆ ಮನೆಯೇ ಸಿಗುವುದಿಲ್ಲ ಎಂದು ಹೇಳಿ ಹೆದರಿಸಿದ್ದರು ನನ್ನ ಅತ್ತೆಯವರ ಸ್ನೇಹಿತೆ ಎನಿಸಿಕೊಂಡವರು ..
ನಾನು ಅದನ್ನು ನಿಜ ಎಂದೇ ನಂಬಿದ್ದೆ ಕೂಡ..
ನಾನು ಕಟೀಲಿಗೆ ಎಂ ಎ ಗೆ ಸೇರಲು ಹೋದ ದಿನವೇ ಎಕ್ಕಾರು ನಾಗವೇಣಿ ಅಮ್ಮನವರದು ಒಂದು ಬಾಡಗೆ ಮನೆ ಖಾಲಿ ಇರುವುದನ್ನು ಪ್ರಿನ್ಸಿಪಾಲ್ ಡಾ.ಜಿ ಎನ್ ಭಟ್ ಅವರು ತಿಳಿಸಿದ್ದರು
ಅದೊಂದು ಸಣ್ಣ ಓಡಿನ  ಮಣ್ಣಿನ ಮನೆ . ಅದರಲ್ಲಿ ಒಂದು ಅಂದಾಜು 15×10ರ ಚಾವಡಿ ಅದರ ಬಲ ತುದಿಯಲ್ಲಿ ಅಡುಗೆ ಮಾಡಲು ಒಂದು ಕಟ್ಟೆ ಅಲ್ಲಿಯೇ ಒಂದು ಅಡ್ಡ ಗೋಡೆ ಕಟ್ಟಿದ ಸ್ನಾನದ ಕೋಣೆ
ನಮ್ಮಲ್ಲಿ ಒಂದು ಚಾಪೆ ಎರಡು ಬೆಡ್ ಶೀಟ್ ಎರಡು ಕಬ್ಬಿಣದ ಕುರ್ಚಿ ನನ್ನದು ಎರಡು ಚೂಡಿದಾರ್ ಪ್ರಸಾದರದು ಎರಡು ಪ್ಯಾಂಟ್ ಶರ್ಟ್ , ಒಂದು ಸಣ್ಣ ಅಲ್ಯೂಮಿನಿಯಂ ಬಾಣಲೆ ಎರಡು ಲೋಟ ಎರಡು ಸಣ್ಣ ಸಣ್ಣ ಪಾತ್ರೆಗಳು ಎರಡು ಪ್ಲಾಸ್ಟಿಕ್ ಬಕೆಟ್ ಗಳು ಇಷ್ಟೇ ಇದ್ದದ್ದು..
ಈ ಮನೆಯ ಹೊರಭಾಗದಲ್ಲಿ ಸಣ್ಣ ಜಗಲಿ ಇತ್ತು , ಇಲ್ಲಿ ಒಂದು ಫೋಲ್ಡೇಬಲ್ ಮೇಜನ್ನು ಹಾಕಿ ನನ್ನ ಪುಸ್ತಕಗಳನ್ನು ಇರಿಸಿದ್ದೆ.ಓದಿ  ಅದರ ಎದುರುಗಡೆ ಅಂಗೈ ಅಗಲದ ಅಂಗಳ ಅದರ ತುದಿಯಲ್ಲಿ ಒಂದು ಟಾಯ್ಲೆಟ್..

ಓದಿ ಬರೆಯಲು ಇದು ಬಹಳ ಪ್ರಶಸ್ತ ತಾಣ..

.ಪೇಟೆಯ ಯಾವುದೇ ಜಂಜಾಟ ಇರದ ಪ್ರಶಾಂತ ವಾತಾವರಣ ಇತ್ತು.
ಆಗಾಗ ಹಾವುಗಳು ಇಣುಕಿ ಹೋಗುತ್ತಿದ್ದವು

ಅಡಿಕೆ ತೋಟದ ಒಂದು ಮೂಲೆಯಲ್ಲಿ ಗುಡ್ಡೆಗೆ ಹೊಂದಿರುವ ಜಾಗದಲ್ಲಿ ಈ ಮನೆ ಇತ್ತು.ಇದು ಬಾಡಿಗೆ ಕೊಡಲಾಗಿಯೇ ಕಟ್ಟಿಸಿದ ಮನೆ ಇರಲಾರದು

ಏನಾದರೂ ಅಡಿಕೆ ತೆಂಗಿನಕಾಯಿ ಸೌದೆ ಇತ್ಯಾದಿ ಇರಿಸಲು ಕಟ್ಟಿಸಿದ ಕೊಟ್ಟಗೆ ಇರಬಹುದೆನಿಸ್ತದೆ 
ಈ ಮನೆಯ ಗೋಡೆಗಳಿಗೆ ಮರದ ರೀಪು ಪಕ್ಕಾಸುಗಳಿಗೆ ಗೆದ್ದಲು ಹಿಡಿದಿತ್ತು,ನಾವದಕ್ಕೆ ಅಂಗಡಿಯಲ್ಲಿ ಕೇಳಿ ತಂದ ವಿಷ ಬಿಟ್ಟು ಗೆದ್ದಲು ಹುಳುಗಳನ್ನು ಓಡಿಸಿದ್ದೆವು
ಆದರೂ ಆಗೀಗ ಒಂದೊಂದು ಹುಳ ಕಚ್ಚಿದ್ದೂ ಇದೆ 
ಇಲ್ಲಿ ಸೊಳ್ಳೆ ಇರಲೇ ಇಲ್ಲ,ತಂಪಾಗಿರುವ  ಮನೆಗೆ ಫ್ಯಾನ್ ನ ಅವಶ್ಯಕತೆಯೇ ಇರಲಿಲ್ಲ 
ಈ ಮನೆಯಲ್ಲಿ ನಾವು ಕಳೆದ ಒಂದು ವರ್ಷ ನಮ್ಮ ಬದುಕಿನ ಅವಿಸ್ಮರಣೀಯ ಕಾಲ
ನಮಗೆ ಯಾವುದೇ ಕೊರತೆ ಈ ಮನೆಯಲ್ಲಿ  ಕಾಣಿಸಲೇ ಇಲ್ಲ
ಇಲ್ಲಿ ನಾವು ಓನರ್ ಅವರಿಂದ ಅರ್ದ ಕುಡ್ತೆ ಹಾಲು ತಗೊಂಡು ಕಾಫಿಗೆ ಉಪಯೋಗಿಸುತ್ತಿದ್ದೆ.ಊಟಕ್ಕೆ ಮಜ್ಜಿಗೆ ಯನ್ನು ಓನರ್ ನಾಗವೇಣಿ ಅಮ್ಮನವರದು ಕೊಡುತ್ತಿದ್ದರು
ನೀರಿನಲ್ಲಿ ಚಹಾ ಮಾಡಿ ಸ್ವಲ್ಪ ಹಾಲು ಸೇರಿಸುತ್ತಿದ್ದೆವು.
ಅಲ್ಲಿದ್ದ ಒಂದು ವರ್ಷದಲ್ಲಿ ನಮಗೆ ಒಂದೇ ಒಂದು ವಿಷಯದಲ್ಲಿ ಜಗಳ ಆದದ್ದಿಲ್ಲ‌
ಭಿನ್ನಾಭಿಪ್ರಾಯ ಬಂದಿದ್ದಿಲ್ಲ, ನಾವೂ ಅತ್ಯಂತ ಸಂತಸದಿಂದ ಆ ಮನೆಯಲ್ಲಿ ಒಂದು ವರ್ಷ ಕಾಲ ಕಳೆದಿದ್ದೆವು
ಒಂದು ವರ್ಷದ ನಂತರ ಮಂಗಳೂರಿನ ವಿಜಮ ನಿವಾಸಕ್ಕೆ ಬಾಡಿಗೆಗೆ ಬಂದೆವು 
ಇದರ ಓನರ್ ದುಬೈ ಯಲ್ಲಿ ಇದ್ದರು.ಓನರ್ ನ ಅಕ್ಕನ ಗಂಡ ವಿಜಮ ಪೆನ್ ಮಾರ್ಟಿನ ಶ್ಯಾಮಣ್ಣ ನನ್ನ ಅಮ್ಮನ ಚಿಕ್ಕಮ್ಭನ ಮಗಂದಿರಾದ ರಾಮಣ್ಣು ಮಾವ ಮತ್ತು ಅಣ್ಣು ಮಾವನವರ ಆಪ್ತರಾಗಿದ್ದರು
ಇವರ ಸೋದರ ಸೋಸೆ ನಾನು ಎಂಬ ಕಾರಣಕ್ಕೆ ನಮಗೆ ಆ ಮನೆಯನ್ನು ಒಂದೂ ಕಾಲು ಸಾವಿರ ರುಪಾಯಿ ಬಾಡಿಗೆಗೆ ನೀಡಿದ್ದರು.ಅದಕ್ಕೆ ಮೊದಲು ಆ ಮನೆಗೆ ಒಂದೂವರೆ ಸಾವಿರ ಬಾಡಿಗೆಗೆ ಕೊಟ್ಟಿದ್ದರು ಅವರು
ಈ ಮನೆಗೆ ಸೇರಿಕೊಂಡು ಓನರ್ ನ ತಮ್ಮ ಶ್ರೀಕಾಂತ್ ಅವರ ಮನೆ ಇತ್ತು 
ಶ್ರೀಕಾಂತ್ ಅವರಿಗೆ ಸಮರ್ಪಣ್ ಹೆಸರಿನ ಗ್ರೀಟಿಂಗ್ ಕಾರ್ಡ್ ಶಾಪ್ ಇತ್ತು.ಆಗ ಗ್ರೀಟಿಂಗ್ ಕಾರ್ಡ್ ಗಳಿಗೆ ಬಹಳ ಬೇಡಿಕೆ ಇತ್ತು , ಹಬ್ಬಗಳಿಗೆ ಹುಟ್ಟು ಹಬ್ಬಕ್ಕೆ ಪೋಸ್ಟ್  ಮೂಲಕ ಗ್ರೀಟಿಂಗ್ ಕಾರ್ಡ್ ಗಳನ್ನು ಕಳುಹಿಸುತ್ತಿದ್ದರು, ಮೊಬೈಲ್ ಫೋನ್ ವಾಟ್ಸಪ್ ಗಳು ಬಂದ ನಂತರ ಇಂತಹದೊಂದು ಕಾರ್ಡ್ ಕಳುಹಿಸುವ ಪಡೆವ ಸಂಭ್ರಮ ಇತ್ತು ಎಂಬುದೇ ಮರೆತು ಹೋಗಿದೆ 
ಶ್ರೀಕಾಂತ್ ಅವರ ಮಡದಿ ಶೈಲಜಾ ನನ್ನದೇ ವಯಸ್ಸಿನವರು
ಇವರಿಗೂ ನನಗೂ ಗಾಢ ಸ್ನೇಹ ಬೆಳೆಯಿತು 
ಅವರೊಮ್ಮೆ ಮಾತಿನ ನಡುವೆ ವಿಜಯ ನಿವಾಸ್ ಬಹಳ ಅದೃಷ್ಟದ ಮನೆ . ಇಲ್ಲಿ ಬಂದವರೆಲ್ಲ ಸ್ವಂತ ಮನೆ ಮಾಡುತ್ತಾರೆ ಎಂದು 
ಆಗಲೇ ನನಗೆ ಸ್ವಂತ ಮನೆ ಬೇಕೆಂಬ ಕನಸು ಚಿಗುರಿದ್ದು.
1995ಮೇ ತಿಂಗಳಿನಿಂದ 1998 ಸೆಪ್ಟೆಂಬರ್ ತನಕ ಈ ಮನೆಯಲ್ಲಿ ಇದ್ದೆವು..
ಈ ಮೂರು ವರ್ಷಗಳಲ್ಲಿ ನಮಗೆ ಮತ್ತು ಶೈಲಜಾ ದಂಪತಿ ಗಳ ನಡುವೆ ಒಂದೇ ಒಂದು ಸಣ್ಣ ವೈಮನಸ್ಯ ಉಂಟಾಗಿರಲಿಲ್ಲ 
1998 ಸೆಪ್ಟೆಂಬರ್ ನಲ್ಲಿ ನಾವು ಖರೀದಿಸಿದ ಶ್ರೇಯಸ್ ಅಪಾರ್ಟ್ಮೆಂಟ್ ನ ಮನೆಗೆ ಬಂದೆವು
ಯಾಕೋ ಏನೋ ಈ ಮನೆಗೆ ಬಂದ ಮೇಲೆ ನಮಗೆ ಸೋಲಿನ ಮೇಲೆ ಸೋಲು ಬಂತು.ಜೊತೆಗೆ ಆ ಮನೆಯಲ್ಲಿ ಮೊಸಾಯಿಕ್ ಅಡಿಯಿಂದ ಕಪ್ಪು ಕಲೆಗಳು ಹರಡಿದ್ದವು.ಅಪಾರ್ಟ್ಮೆಂಟ್ ಪಕ್ಕದಲ್ಲಿ ಅದಕ್ಕೆ ಸೇರಿಕೊಂಡು ಒಂದು ತೋಡು ಹರಿಯುತ್ತಿತ್ತು ಇದರ ನೀರು ಊಜಿ ಕಲೆ ಆಗುತ್ತದೆ ಎಂದು ಅನೇಕರು ಹೇಳಿದರು
ಜೊತೆಗೆ ಇದರ ಸ್ವಿಚ್ಚು ಬೋರ್ಡ್ ಗಳ ಎಡೆಯಿಂದ ಗೆದ್ದಲು ಹರಡಲು ಶುರು ಆಯಿತು.ಈ ಮನೆಗೆ ದಕ್ಷಿಣ ಬಾಗಿಲು ಇತ್ತು ಅದು ದೋಷಕರ ಎಂದು ಹಲವರು ಹೇಳಿದರು 
ನಮಗೆ ಮೇಲಿಂದ ಮೇಲೆ ಸೋಲು ಬಂದ ಕಾರಣ ನಾವು ಇದನ್ನು ನಂಬಿದೆವು 
ಅದೃಷ್ಟ ವಶಾತ್ ಪ್ರಸಾದರಿಗೆ ಬೆಂಗಳೂರಿನ ಸಾಪ್ಟ್ವೇರ್ ಕಂಪೆನಿಯೊಂದರಲ್ಲಿ ನನ್ನ ಅಣ್ಣ ನ influence ನಲ್ಲಿ  ಒಳ್ಳೆಯ ಕೆಲ ಸಿಕ್ಕಿತು.
ಆಗ ಮಂಗಳೂರಿನ ಮನೆಯನ್ನು ಮಾರಾಟ ಮಾಡಿ ಬೆಂಗಳೂರು ಬಂದೆವು 
ಆ ಮನೆಯನ್ನು ನಾವು ಬೇರೊಬ್ಬರಿಂದ ಖರೀದಿಸಿದ್ದೆವು. ಈ ಮನೆ ಬುಕ್ ಮಾಡಿದ ಸ್ವಲ್ಪ ಸಮಯದಲ್ಲಿ ಅವರ ತಾಯಿ ಗೆ ಕ್ಯಾನ್ಸರ್ ಬಂತು ಎಂದು ಅವರಿದನ್ನು ಮಾರಾಟ ಮಾಡಿದ್ದರು ಎಂದು ನಮಗೆ ನಂತರ ತಿಳಿಯಿತು 
ನಮ್ಮಿಂದ ಈ ಮನೆ ತಗೊಂಡ ರಾಧಾಕೃಷ್ಣ ಅವರಿಗೂ ಏನೋ ಸಮಸ್ಯೆ ಆಗಿ  ಅವರೂ ಮಾರಾಟ ಮಾಡಿದರು ನಂತರ.
ಇವರಿಂದ ತಗೊಂಡವರೂ ಮತ್ತೊಬ್ಬರಿಗೆ  ಮಾರಾಟ ಮಾಡಿದ್ದು ಆ ಮನೆಮವರೊಬ್ಬರು ಒಮ್ಮೆ ಬಸ್ಸಿನಲ್ಲಿ ಸಿಕ್ಕಿದ್ದರು.ಅವರಿಗೂ ಬಹಳ ದುರಂತ ಸಂಭವಿಸಿದ ಬಗ್ಗೆ ಹೇಳಿದ್ದರು
ನನಗೆ ವಾಸ್ತು ಬಗ್ಗೆ ಅಂತಹ ನಂಬಿಕೆ ಇರಲಿಲ್ಲ ಆದರೂ ಈ ಮನೆ ತಗೊಂಡವರಿಗೆಲ್ಲರಿಗೂ ಕೆಡುಕು ಆಗಿದ್ದು ತಿಳಿದ ನಂತರ ವಾಸ್ತು ದೋಷ ಇರಬಹುದು ಎಂದೆನಿಸುತ್ತದೆ ನಮಗೆ ಗೊತ್ತಿಲ್ಲದ ಎಷ್ಟೋ ಅಗೋಚರ ವಿಚಾರಗಳು ಇವೆ
ಇವುಗಳ ಬಗ್ಗೆ ಇಲ್ಲವೇ ಇಲ್ಲ ಎಂದು ಹೇಳಲಾಗದು ಗೊತ್ತಿಲ್ಲ ಎಂದು ಮಾತ್ರ ಹೇಳಬಹುದು ಅಷ್ಟೇ

ನನ್ನನ್ನು ಮದುವೆ ಆಗುವಾಗ ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.ನಮ್ಮ  ಮದುವೆಗೆ ಮೊದಲೇ ಪ್ರಸಾದರು ಬೆಂಗಳೂರಿನ ಮಂಗನ ಹಳ್ಳಿ ಕ್ರಾಸ್ ನ ನಾವು ಈಗ ಇರುವ ಜಾಗವನ್ನು ಖರೀದಿಸಿದ್ದರು. 
ನಾವು ಮಂಗಳೂರಿನಲ್ಲಿ ಇದ್ದಾಗ ಇಲ್ಲಿ ಮನೆಕಟ್ಟದವರ ಸೈಟ್ ಗಳು ಬಿಡಿಎ ಗೆ ಹೋಗುತ್ತದೆ ಹಾಗಾಗಿ ಮನೆ ಕಟ್ಟಿ ಎಂದು ಈ ಸೈಟ್ ಕೊಡಿಸಿದ್ದ ಪ್ರಸಾದರ ಸೋದರ ಮಾವ ಗಂಗಾಧರ ಭಟ್ ಹೇಳಿದರು.
ಹಾಗೆ ನನ್ನ  ಅಣ್ಣ ಕೃಷ್ಣ ಭಟ್ ವಾರಣಾಸಿಯರವರ ಸಹಾಯದಿಂದ ಇಲ್ಲಿ ಸಣ್ಣದೊಂದು ಮನೆ ಕಟ್ಟಿಸಿದ್ದೆವು
ಈಗ ಅಮೇರಿಕಾದಲ್ಲಿ ನೆಲೆಸಿರುವ ನನ್ನ ತಮ್ಮ ಈಶ್ವರ ಭಟ್ ವಾರಣಾಸಿ ಆಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.ಅವರು ಇಲ್ಲಿ ಜವಾಬ್ದಾರಿಗೆ ಇದ್ದರು
ಈಗ ಇಪ್ಪತ್ತೊಂದು ವರ್ಷಗಳ ಇಲ್ಲಿನ ಸ್ಥಳೀಯ ಅಂಜನಪ್ಪ ಎನ್ನುವವರು ಈ ಮನೆ ಕಟ್ಟಲು ಕಾಂಟ್ರಾಕ್ಟ್ ತಗೊಂಡು ಕಟ್ಟಿಸಿಕೊಟ್ಟರು
ನಾವು ನೋಡಲು ಬರದೇ ಇದ್ದರೂ ಚೆನ್ನಾಗಿ ಕಟ್ಟಿಸಿದ್ದು ಗಟ್ಟಿಮುಟ್ಟಾಗಿತ್ತು 
ಈ ಮನೆಗೆ 2008ರಲ್ಲಿ ಬಂದೆವು.ಇದು ವಾಸ್ತು ಪಡೆದು ಕಟ್ಟೆದ ಮನೆಯಲ್ಲ.ನಾನೇ ಒಂದು ಗೆರೆ ಎಳೆದು ಚಿತ್ರ ಮಾಡಿ ಕೊಟ್ಟಂತೆ ಒಂದು 14*10 ಹಾಲ್ ,12*10,10*10ರ ಎರಡು ಸಣ್ಣ ಸಣ್ಣ ಬೆಡ್ರೂಮ್, ಒಂದು 6*10 ಅಡಿಗೆ ಕೋಣೆ, ಒಂದು ಬಾತ್ ರೂಮ್ ಇರುವ ಮನೆಯನ್ನು ಅಚ್ಚುಕಟ್ಟಾಗಿ ಕಟ್ಟಿದ್ದರು
ಈ ಮನೆಗೆ ಬಂದ ಕೂಡಲೇ ನಮ್ಮ ಅದೃಷ್ಟದ ಬಾಗಿಲು ತೆರೆಯಿತು, ನನಗೆ ನನ್ನ ಕನಸಿನ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಹುದ್ದೆ ದೊರೆಯಿತು, ಪ್ರಸಾದರು ಈಗ  ಸೀನಿಯರ್ ಅಕೌಂಟ್ಸ ಮ್ಯಾನೇಜರ್ ಆಗಿ ಮಾಡುತ್ತಿರುವ ಕೆಲಸ ಈ ಮನೆಗೆ ಬಂದ ಒಂದೆರಡು ತಿಂಗಳಲ್ಲಿ ಸಿಕ್ಕಿತು

ನನ್ನ ಲೇಖನಗಳು ಪುಸ್ತಕಗಳು ಪ್ರಕಟವಾದವು.ನನಗೆ ಒಂದು ನನ್ನದೇ ಆದ ಅಸ್ತಿತ್ವ ಸಿಕ್ಕಿತು
2019ರಲ್ಲಿ ಈ ಮನೆಯನ್ನು ಕೆಡವದೇ ಸುತ್ತ ಪಿಲ್ಲರ್ ಹಾಕಿ ಗ್ರೌಂಡ್ ಫ್ಲೋರ್ ಮತ್ತು ಫರ್ಸ್ಟ್ ಫ್ಲೋರ್ ಗಳಲ್ಲಿ ಬಾಡಿಗೆಗೆ ಕೊಡುವಂತೆ ಅಂಗಡಿಗಳನ್ನು ಕಟ್ಟಿ ಎರಡನೇ ಮಹಡಿಯಲ್ಲಿ ನಮಗೆ ಇರಲು ಮೂರು ಬೆಡ್ರೂಮ್ ಗಳ ಸರಳವಾದ ಮನೆ ಕಟ್ಟಿಕೊಂಡೆವು
ನಮ್ಮ ಅದೃಷ್ಟವೋ , ನಾನು ಧರಿಸಿದ ಹರಳುಗಳ ಪಲವೋ ಅಥವಾ ಈ ಜಾಗದ ವಾಸ್ತು ವೋ ಏನೋ ಗೊತ್ತಿಲ್ಲ ಈ ಮನೆಗೆ ಬಂದ ಮೇಲೆ ನಾವು ಕನಸಲ್ಲೂ ಊಹಿಸದ ಬದುಕನ್ನು ಕಂಡದ್ದು ಮಾತ್ರ ನಿಜ .
ಈ ಸೈಟ್ ವಾಸ್ತು ವಿನಂತೆ ಬಹಳ ಶುಭಕರವಾದುದು ಎಂದು ವಾಸ್ತು ತಜ್ಞರು ಆಗಿರುವ ಹಳೆಯ ಹಿರಿಯ  ಸಹೋದ್ಯೋಗಿಗಳಾದ ಪ್ರಭಾಕರ ಸರ್ ಹೇಳಿದ್ದರು.ಅವರು ಹೇಳಿದ್ದು ನಿಜ ಎಂದೆನಿಸುತ್ತದೆ ನನಗೆ ಈಗ

ಇಷ್ಟೆಲ್ಲಾ ಆದರೂ ನನಗೆ ಊರಿಗೆ ಹೋದಾಗಲೆಲ್ಲ ನನಗೆ ಊರಲ್ಲಿ ಮನೆ ಇಲ್ಲ ಎಂಬ ಕೊರಗು ಮನದ ಮೂಲೆಯಲ್ಲಿ ಇತ್ತು 
ಕಳೆದ ವರ್ಷ ಪುತ್ತೂರಿನ ನವಚೇತನ ಎಂಬ ಹಿರಿಯ ನಾಗರಿಕರ ಬಡಾವಣೆ ಬಗ್ಗೆ ಅಕ್ಕನ ಮೂಲಕ ತಿಳಿಯಿತು 
ಇದು ಹಿರಿಯ ನಾಗರಿಕರ ಬಡಾವಣೆ ಆದ ಕಾರಣ ಅನೇಕ ಸೌಲಭ್ಯಗಳು ಇಲ್ಲಿ ಇವೆ., ಇಲ್ಲಿ ಬಹಳ ಭದ್ರತೆ ಇದೆ,ಗೇಟು ದಾಟಿ ಒಳಗೆ ಹೋಗುವಾಗಲೇ ಚೆಕಿಂಗ್ ಇದೆ.ಅಪರಿಚಿತರಿಗೆ ಏಕಾಏಕಿ ಪ್ರವೇಶ ಮಾಡಲು ಆಗುವುದಿಲ್ಲ.ಹಾಗಾಗಿ ಒಬ್ಬೊಬ್ಬರೇ ಇರುವುದಕ್ಕೆ ಭಯವಿಲ್ಲ 
.ಮನೆಗೆ ಬೇಕಾದ ಸಾಮಗ್ರಿಗಳ ಪಟ್ಟಿ ಕೊಟ್ಟರೆ ತಂದು ಕೊಡುವ ವ್ಯವಸ್ಥೆ ಇದೆ  

.ಪೇ ಮಾಡಿದರೆ ಇಲ್ಲಿ ಊಟ ತಿಂಡಿ ಕೂಡ ಮಾಡಿ ಕೊಡುವ ವ್ಯವಸ್ಥೆ ಇದೆ . ಹಾಗಾಗಿ 
ನಾನು ಹೀಗೆ ಹೋದಾಗೆಲ್ಲ  ಅಡುಗೆ  ಊಟ ತಿಂಡಿಯ ಸಮಸ್ಯೆ ಬರುವುದಿಲ್ಲ..
ಬಹಳ ತಂಪಾದ ಹಸಿರಿನ ನಡುವಿನ ಪರಿಸರ ಇಲ್ಲಿದೆ

ಇದು ಹೆಸರಿಗೆ ಹಿರಿಯ ನಾಗರಿಕರ ಬಡಾವಣೆ ಆಗಿದ್ದರೂ ಇಲ್ಲಿ ಕಿರಿಯರು ಇರಬಾರದೆಂದು ಇಲ್ಲ.

ಯಾರಿಗೆ ಬೇಕಾದರೂ ಬಾಡಿಗೆಗೆ ಮನೆ ಕೊಡಬಹುದು.ಇಲ್ಲಿ ಸೈಟ್ ಅಥವಾ ಮನೆ ಖರೀದಿಸುವವರಿಗೆ 55ವರ್ಷ ಆಗಿರಬೇಕು ಎಂಬ ನಿರ್ಬಂಧದ ಹೊರತಾಗಿ ಉಳಿದೆಲ್ಲವೂ ಇತರೆ ಬಡಾವಣೆಯ ಮನೆಗಳಂತೆ..ಯಾವ ವ್ಯತ್ಯಾಸವೂ ಇಲ್ಲ..

ಹಾಗಾಗಿ ಇಲ್ಲಿ ಮನೆ ಜಾಗ ಖರೀದಿಸುವವರು ತಮ್ಮ ಹೆತ್ತವರ ಹೆಸರಿನಲ್ಲಿ ಖರೀದಿಸಿದ್ದಾರೆ, ನಮ್ಮಂತೆ ಸ್ವತಃ ಖರೀದಿಸಿದವರೂ ಇದ್ದಾರೆ,ಪ್ರಸಾದರಿಗೆ 55ವರ್ಷ ಆಗಿದ್ದ ಕಾರಣ ನಮಗೆ ಸಮಸ್ಯೆ ಆಗಲಿಲ್ಲ, ನಾವು ಜಂಟಿಯಾಗಿ ಇಬ್ಬರ ಹೆಸರಿನಲ್ಲಿ ತಗೊಂಡೆವು
.ಒಂದೊಮ್ಮೆ ಅರುವತ್ತು ಆಗಬೇಕೆಂಬ ನಿಯಮ ಇದ್ದಿದ್ದರೆ  ತಾಯಿ ಮತ್ತು ನನ್ನ ಹೆಸರಿನಲ್ಲಿ ಜಂಟಿಯಾಗಿ ತಗೊಳ್ಳುತ್ತಿದ್ದೆ

ನಾವು ರಜೆಯಲ್ಲಿ ಊರಿಗೆ ಹೋದಾಗ ಇರಲೆಂದೇ ತಗೊಂಡ ಕಾರಣ ಬಾಡಿಗೆಗೆ ಕೊಟ್ಟಿಲ್ಲ.

ಬಿಡದಿಯಲ್ಲಿಯೂ ಒಂದು ಸಣ್ಣ ಮನೆ ಕಟ್ಟಬೇಕೆಂಬ ಯೋಚನೆ ಇದೆ, ಸೈಟ್ ಖಾಲಿ ಬಿಟ್ಟರೆ ಏನೇನೋ ಸಮಸ್ಯೆ ಗಳು ಬರುತ್ತವೆ ಹಾಗಾಗಿ ಒಂದು ಸಣ್ಣ ಮನೆ ಕಟ್ಟಿ ಎಂದು ಅನೇಕ ಹಿತೈಷಿಗಳು ಸಲಹೆ ನೀಡಿದ್ದಾರೆ
ದೇವರ ದಯೆ ಇದ್ದರೆ ಇದೂ ಸಾಧ್ಯವಾಗಬಹುದು

ನಮಗಂತೂ ಪೇಟೆಯಲ್ಲಿ ಬಾಡಿಗೆಗೆ ಮಾತ್ರವಲ್ಲ ಸ್ವಂತಕ್ಕೂ ಮನೆ ಸಿಕ್ಕಿದೆ.ಪೇಟೆಯಲ್ಲಿ ಜೀವನ ಇಡೀ ಬಾಡಿಗೆ ಮನೆಯಲ್ಲಿ ಇರವುದು ನಿಜಕ್ಕೂ ಕಷ್ಟ..
ಹಾಗಾಗಿ ಬೆಂಗಳೂರಿನಂತಹ ಪೇಟೆಯಲ್ಲಿ ಕೆಲಸ ಮಾಡುವವರು ಥಳುಕು ಬಳುಕಿನ ಶೋಕಿಯ ಹಿಂದೆ ಹೋಗಿ ದಾಂ ಧೂಂ ಖರ್ಚು ಮಾಡದೆ ಸರಳವಾಗಿ ಬದುಕುತ್ತಾ ಒಂದು ಸೈಟ್ ತಗೊಂಡು ಮನೆಕಟ್ಟಿಕೊಳ್ಳುದು ಒಳ್ಳೆಯದು

ಇಲ್ಲೆಲ್ಲ ಸೈಟಿನ ಬೆಲೆ ಕೋಟಿ ದಾಟಿದೆ.ಮುಖ್ಯ ರಸ್ತೆಯಲ್ಲಿ ಬೇಕಾಡಿದ್ದರೆ ಆರೇಳು ಕೋಟಿ ಕೊಡಬೇಕು 
ಸ್ವಲ್ಪ ಒಳಗೆ ಹೋದರೆ ಈಗಲೂ ಮೂವತ್ತು ನಲುವತ್ತು ಲಕ್ಷ ಕ್ಕೆ ಸೈಟ್ ಸಿಗುತ್ತದೆ ಮತ್ತೆ ಒಂದು ಇಪ್ಪತ್ತೈದು ಮೂವತ್ತು ಲಕ್ಷ ಕ್ಕೆ  ಸರಳವಾಗಿ ಎರಡು ಬೆಡ್ರೂಮಿನ ಮನೆ ಕಟ್ಟ ಬಹುದು

ಧಾರಾಳ ಆದಾಯ ಇರುವವರಿಗೆ ಸಮಸ್ಯೆ ಇಲ್ಲ ಮಧ್ಮಮ ವರ್ಗ ಕಷ್ಟಪಟ್ಟರೆ ಹೇಗೋ ನಮ್ಳಂತೆ ಮನೆ ಮಾಡಬಹುದು

ನನ್ನ ಸ್ನೇಹಿತರೊಬ್ಬರು ಬೆಂಗಳೂರಿನ ನಮ್ಮ ಮನೆ ಸುತ್ತ ಮುತ್ತಲಿನ ಪರಿಸರದಲ್ಲಿ ಸೈಟ್ ಖಾಲಿ ಇದೆಯೇ ಎಂದು ವಿಚಾರಿಸಿದ್ದರು‌.ನಾನು ವಿಚಾರಿಸಿ ಇಲ್ಲಿ ಸಮೀಪದ ಒಂದು ಮನೆ ಮಾರಾಟಕ್ಕೆ ಇದೆ .ಮೂರು ಕೋಟಿ ಹೇಳ್ತಿದ್ದಾರೆ ಎಂದು ತಿಳಿಸಿದೆ
ಯಬ್ಬಾ.. ನಮ್ಮಿಂದ ಆಗದು..ಅದು ಸರಿ ನೀನು ಹೇಗೆ ಇಲ್ಲಿ ಕಮರ್ಷಿಯಲ್ ಕಮ್ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್ ಕಟ್ಟಿಸಿದೆ ಎಂದು ಅಚ್ಚರಿಯಿಂದ ಕೇಳಿದರು.
ಅವರಿಗೆ ನಾವು ಖಾಲಿ ಕೈಯಲ್ಲಿ ಊರಿಂದ ಹೊರನಡೆದ ವಿಚಾರ ಗೊತ್ತಿತ್ತು.ಎಲ್ಲವೂ ದೇವರ ದಯೆ ‌‌ನಾವು ನ್ಯಾಯ ಮಾರ್ಗ ನಡೆದರೆ ದಾರಿಯನ್ನು ದೇವರು ತೋರಿಸುತ್ತಾನೆ
ಅವರಿಗೆ ಸಂಕ್ಷಿಪ್ತವಾಗಿ ನಮ್ಮ ಮನೆ ಕಥೆ ಹೇಳಿದೆ 
ಅದನ್ನು ಇಲ್ಲಿಯೂ  ಬರೆದೆ..
ಸರಳವಾದ ಬದುಕು ನಮಗೆ ಅಗತ್ಯ ಇರುವಷ್ಟನ್ನು ನೀಡುತ್ತದೆ .ಯಾರೋ ಶ್ರೀಮಂತರು ವೈಭವದಲ್ಲಿ ಮೆರೆಯುತ್ತಾರೆ ಎಂದು ಸಾಲ ಮಾಡಿ ಮೆರೆಯಲು ಹೋದರೆ ಮುಂದೆ ಎಲ್ಲವನ್ನೂ ಕಳೆದುಕೊಂಡು ಬೀದಿ ಭಿಕಾರಿ ಆಗಬೇಕಾಗುತ್ತದೆ 
ಅದರಲ್ಲಂತೂ ಯಾವುದೇ ದುಡ್ಡಿನ  ವ್ಯವಹಾರ ಮಾಡುವಾಗ ಕೂಡ ಲಾಯರಲ್ಲಿ ಸಲಹೆ ಪಡೆದೇ ಮಾಡಬೇಕು 
ಎಲ್ಲವೂ ಅಕ್ರಮವಾಗಿ ಮಾಡಿದರೆ ಅಧಪತನ ಖಂಡಿತಾ..
ನನ್ನ ಸ್ನೇಹಿತರಾಗಿದ್ದವರೊಬ್ಬರು ಇಂತಹ ಥಳುಕಿನ ಹಿಂದೆ ಹೋಗಲು ಎರಡು ಮೂರು ಕೋಟಿ ಸಾಲ ಮಾಡಿ ಯಾರಿಗೋ ಕೊಟ್ಟು ಮನೆ ಸೈಟ್   ಎಲ್ಲಾ ಕಳಕೊಂಡಿದ್ದಾರೆ.

ಡಾ.ಲಕ್ಷ್ಮೀ ಜಿ ಪ್ರಸಾದ 




ProfileImg

Written by Dr Lakshmi G Prasad

Verified