ತುಂಬಿದ ಮನೆ

ಮನಗಳು ಸೇರಿದರೆ ತುಂಬಿದ ಮನೆಯಂತೆ.

ProfileImg
18 May '24
3 min read


image

ತುಂಬಿದ ಮನೆ

 ಸೂರ್ಯನಿಗೂ ಚಂದ್ರನಿಗೂ ಬಂದಾರೆ ಮುನಿಸು..... ಹಾಡು ರೇಡಿಯೋ ದಲ್ಲಿ ಬರುತ್ತಿತ್ತು.  ಚಂದ್ರಿ... ಚಂದ್ರಿ..... ಎನ್ನುತ್ತಾ ಒಳಗೆ ಬಂದರು ರಾಮಣ್ಣ.. ಬನ್ನಿ ಎನ್ನುತ್ತಾ ಕಾಲು ತೊಳೆಯಲು ನೀರು ತಂದು ಕೊಟ್ಟರು ಸುಂದ್ರಕ್ಕ. 
    ಚಂದ್ರಿ ಅಂದ್ರೆ ಚಂದ್ರಕ್ಕ ರಾಮಣ್ಣನ ಹೆಂಡತಿ. ಮದುವೆಯಾಗಿ ಕಷ್ಟ ಸುಖಗಳ ಸಮತೋಲನದಲ್ಲಿ ಮೂವತ್ತು ವರ್ಷದ ದಾಂಪತ್ಯ ಸವೆದವರು. ಮುವರು ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳು, ಬಡತನವು ಅಲ್ಲದೆ ಸುಖದ ಸೂಪ್ಪತ್ತಿಗೆಯೂ ಅಲ್ಲದೆ ಒಂದು ಸಾಮಾನ್ಯ ಬದುಕು ಬದುಕುತ್ತಿರುವ ಮಾಧ್ಯಮ ವರ್ಗದ ಕುಟುಂಬ. ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ್ದರು. ಹಾಗು ಇಬ್ಬರು ಗಂಡು ಮಕ್ಕಳ ಮದುವೆಯಾಗಿ ಸೊಸೆ, ಮೊಮ್ಮಕ್ಕಳಿಂದ ತುಂಬಿದ ಸಂಸಾರ. ಚಿಕ್ಕ ಮಗನ ಮದುವೆ ಮಾಡಲು ಸಂಬಂಧ ನೋಡುತ್ತಿದ್ದರು.
    ಹೊಲದಲ್ಲಿ ಕೆಲಸ ಮುಗಿಸಿ ಮಧ್ಯಾನ್ಹ ಊಟಕ್ಕೆ ಮನೆಗೆ ಬಂದಿದ್ದರು ರಾಮಣ್ಣ.
    ಚಂದ್ರಕ್ಕ ತಂದು ಕೊಟ್ಟ ನೀರಿನಲ್ಲಿ ಕಾಲು ತೊಳೆದುಕೊಳ್ಳುತ್ತಾ ಮನೆಯೊಳಗೇ ದೃಷ್ಟಿ ಹರೆಸಿದರು.
    "ಏನೇ ಮನೆ ಇಷ್ಟು ಶಾಂತವಾಗಿದೆ? ಯಾಕೆ ಯಾರು ಇಲ್ವಾ ಮನೇಲಿ? ಯಾರು ಕಾಣಿಸ್ತಾನೆ ಇಲ್ಲ?" ಎಂದರು.
    ಎಲ್ಲರು ಇದ್ದಾರೆ ರಿ. ಎಲ್ಲರು ತಮ್ಮ ತಮ್ಮ ಕೋಣೆಯಲ್ಲಿ ಇದ್ದಾರೆ. ನೀವು ಬನ್ನಿ ಊಟ ಮಾಡಿ ಎಂದರು ಚಂದ್ರಕ್ಕ.
    ಎಲ್ಲರು ಮನೆಯಲ್ಲಿ ಇದ್ರೂ ಇಷ್ಟು ಶಾಂತವಾಗಿದೆಯಾ ಮನೆ? ಅದ್ರಲ್ಲೂ ನಿನ್ನ ಮುದ್ದಿನ ಹೆಣ್ಣುಮಕ್ಕಳು ಬೇರೆ ಹಬ್ಬಕ್ಕೆ ಅಂತ ಬಂದಿದ್ದಾರೆ ಎಲ್ಲರು ಹರಟೆ ಹೊಡ್ಕೊಂಡು ಮಾತಾಡ್ಕೊಂಡು ಮನೇಲಿ ಓಡಾಡ್ಕೊಂಡು ಇರೋರು, ಇವತ್ತ್ಯಾಕೆ ಇಷ್ಟೊಂದು ಶಾಂತವಾಗಿದೆ? ಅನುಮಾನದಿಂದ ಕೇಳಿದರು ರಾಮಣ್ಣ.
    ಅಯ್ಯೋ ಅದೆಲ್ಲ ಏನಿಲ್ಲ ಬಿಡಿ. ನೀವು ಬೆಳಿಗ್ಗೆಯಿಂದ ಏನು ತಿಂದಿಲ್ಲ. ಬನ್ನಿ ಊಟ ಮಾಡಿ ಎಂದು ಒತ್ತಾಯ ಮಾಡಿದರು ಚಂದ್ರಕ್ಕ. ಆದರೂ ರಾಮಣ್ಣನಿಗೆ ಯಾಕೋ ಸಮಾಧಾನವಾಗಲಿಲ್ಲ.
    ಪದಸಾಲೆಯಲ್ಲಿ ನಿಂತು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರನ್ನು ಕರೆದರು. ಎಲ್ಲರು ಒಬ್ಬೊಬ್ಬರಾಗಿ ಕೊಣೆಯಿಂದ ಆಚೆ ಬಂದರು. ಎಲ್ಲರ ಮುಖವು ಸೊಪ್ಪಗಿತ್ತು. ಎಲ್ಲರು ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿದ್ದರು. ಇಲ್ಲಿ ಏನೋ ನಡೆದಿದೆ ಎಂದು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರು ರಾಮಣ್ಣ.
    ಏನಾಯಿತು ಯಾರಾದ್ರೂ ಹೇಳ್ತೀರಾ ಎಂದು ಗದರಿದರು ರಾಮಣ್ಣ. ಆಗ ಚಂದ್ರಕ್ಕ ಭಯದಿಂದ ಮುಂದೆ ಬಂದು ಏನಿಲ್ಲ ರಿ. ಮಕ್ಕಳ ಮಧ್ಯ ಏನೋ ಚಿಕ್ಕ ಅಸಮಾಧಾನ, ಅದಕ್ಕೋಸ್ಕರ ಸ್ವಲ್ಪ ಸಣ್ಣ ಜಗಳ ಮಾಡಿಕೊಂಡಿದ್ದಾರೆ ಅಷ್ಟೇ. ಸರಿ ಹೋಗ್ತಾರೆ ಬಿಡಿ ಎಂದರು.
    ರಾಮಣ್ಣ ಕೇಳಲಿಲ್ಲ. ಏನು ನಡೆದಿದೆ? ಯಾವ ವಿಷಯಕ್ಕೆ ಮನಸ್ತಾಪ ಅನ್ನೋದನ್ನ ಹೇಳಲೇಬೇಕು ಎಂದು ಒತ್ತಾಯ ಮಾಡಿದರು.
    ಆಗ ಚಂದ್ರಕ್ಕ ಹೇಳುವುದಕ್ಕೆ ಶುರುಮಾಡಿದರು.
" ನೋಡಿ ನಮ್ಮ ಕಿರಿ ಸೊಸೆ ಈ ಮನೆಗೆ ಮದುವೆಯಾಗಿ ಬಂದಮೇಲೆ ಮನೆಗೆ ಅಲಂಕಾರದ ಸಾಮಗ್ರಿ ಅದು ಇದು ಅಂತ ತರೆಸಿ ಎಲ್ಲ ಅಚ್ಚುಕಟ್ಟಾಗಿ ಜೋಡಿಸಿ ಮನೆ ಒಳ್ಳೆ ಪೇಟೆ ಮನೆ ತರಹ ಕಾಣೋಹಾಗೆ ಮಾಡಿದ್ದಾಳೆ. ಅದಕ್ಕೆ ಅವಳು ತಾನು ಬಂದಮೇಲೆ ಮನೆ ಸುಂದರವಾಗಿ ಮಾಡಿದ್ದು ಅಂತ ಹೇಳಿಕೊಂಡಳು. ಅದಕ್ಕೆ ದೊಡ್ಡ ಸೊಸೆ ನಾನು ಬಂದಾಗ ಮನೆ ಪರಿಸ್ಥಿತಿ ಕೆಟ್ಟದಾಗಿತ್ತು ಆದ್ರೂ ಸಹಿಸ್ಕೊಂಡು ಬದುಕಿದ್ದೆ ಅಂತ ಹೇಳಿದ್ಲು. ಇಬ್ರು ಹೆಣ್ಣುಮಕ್ಕಳು ಹಾಗಾದ್ರೆ ನಾವಿದ್ದಾಗ ಮನೆ ಚನ್ನಾಗಿ ಇಟ್ಟುಕೊಂಡಿರಲ್ಲ ಅಂತ ನಿಮ್ಮ ಮಾತಿನ ಅರ್ಥನ ಅಂತ ಕೇಳಿದ್ರು? ಹೀಗೆ ಒಬ್ಬರಿಗೊಬ್ಬರಿಗೆ ಮಾತು ಬೆಳೆದು, ಮನಸ್ತಾಪ ಮೂಡಿ, ಈಗ ಒಬ್ಬೊಬ್ಬರು ಒಂದೊಂದು ಮೂಲೆಯಲ್ಲಿ ಕುಳಿತಿದ್ದಾರೆ."  ಎಂದು ನಡೆದದನ್ನೆಲ್ಲ ಅಚ್ಚುಕಟ್ಟಾಗಿ ವಿವರಿಸಿದರು.

  ರಾಮಣ್ಣ ಪರಿಸ್ಥಿತಿ ಅರ್ಥ ಮಾಡಿಕೊಂಡರು. ಮಕ್ಕಳು, ಮೊಮ್ಮಕ್ಕಳು,ಸೊಸೆಯಂದಿರನ್ನೆಲ್ಲ ಸುತ್ತಲು ಕೂಡಿಸಿಕೊಂಡು ಕುಳಿತರು.
  ನೋಡಿ ನಾನು ಚಂದ್ರಾ ಮದುವೆಯಾದಾಗ ನಮ್ಮ ಮನೆ ಬಡತನ ಪರಿಸ್ಥಿತಿಯಲ್ಲಿತ್ತು. ಮನೆಯಲ್ಲಿ ದೊಡ್ಡ ಸಮಸ್ಯೆಯಾಗಿ ಮಧ್ಯರಾತ್ರೀ ಮನೆ ಬಿಟ್ಟು ಬಂದು ಒಂದು ಪುಟ್ಟ ಜಾಗದಲ್ಲಿ ಮನೆ ಕಟ್ಟಿ ಬದುಕಿದ್ವಿ. ದಿನ ಕಳಿತ ಕಳಿತ ಒಂದೊಂದೇ ಇಟ್ಟಿಗೆ ಸೇರಿಸಿ ಗೋಡೆ, ಕೊಣೆಗಳನ್ನ ಕಟ್ಟಿದ್ವಿ.  ನನ್ನ ದೊಡ್ಡ ಮಗಳು ಹುಟ್ಟಿದಾಗ ಸ್ವಪ್ಪ ಸುಧಾರಣೆ ಆಗಿತ್ತು. ಆಮೇಲೆ ಚಿಕ್ಕ ಮಗಳು ಹುಟ್ಟೋವರೆಗೆ ಮನೆ ಒಂದು ರೂಪ ಪಡೆದಿತ್ತು. ಇಬ್ಬರು ಇದೆ ಅಂಗಳದಲ್ಲಿ ಆಟ ಆಡ್ತಿದ್ರು, ಹೂವಿನ ಗಿಡ, ಈ ಮರಗಳನ್ನು ನೆಟ್ಟು ಬೆಳೆಸಿದ್ದು ಇವರೇ. ಅದಕ್ಕೆ ನಮ್ಮ ಮನೆಗೆ ಸ್ವಚ್ಛ ಗಾಳಿ, ಬೆಳಕು, ಅಂಗಳಲ್ಲಿ ನಗುವ ಹೂವುಗಳು, ಆಯಾ ಕಾಲಕ್ಕೆ ಹಣ್ಣು, ಕಾಯಿ ಇದೆಲ್ಲ ಸಿಗ್ತಾಯಿರೋದು.
  ಆಮೇಲೆ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟು ಭಣಗುಡುತ್ತಿದ್ದ ಮನೆಗೆ ಮಗಳಾಗಿ ಬಂದವಳು ಹಿರಿ ಸೊಸೆ. ಮನೆಯೊಳಗೇ ದೀಪ ಹಚ್ಚಿ ಅಂಗಳಲ್ಲಿ ರಂಗವಲ್ಲಿ ಹಾಕಿ. ಗಿಡ ಮರಗಳಿಗೆ ನೀರು ಹಾಕಿ, ಬೆಳೆದ ಹೂವುಗಳಿಂದ ಮನೆಯನ್ನು ಅಲಂಕರಿಸಿ ಮನೆಯಲ್ಲಿ ನಗು ತುಂಬಿದವಳು ಅವಳು. ಇನ್ನು ಸಣ್ಣ ಸೊಸೆ ಬಂದಮೇಲೆ ಈ ಮನೆಗೆ ಆಧುನಿಕ ರೂಪ ಕೊಟ್ಟಳು. ಎಲ್ಲರ ಅಗತ್ಯಕ್ಕೆ ತಕ್ಕಂತೆ, ಈ ಕಾಲಕ್ಕೆ ತಕ್ಕಂತೆ ಎಲ್ಲರಿಗೆ ಇಷ್ಟವಾಗುವಂತೆ ಸುಂದರವಾಗಿ ಬದಲಾಯಿಸಿದಳು.
  ಈಗ ಈ ಮನೆಯಲ್ಲಿ ನಾವೆಲ್ಲ ಒಟ್ಟಾಗಿ ಕುಳಿತಿದ್ದೇವೆ. ಈಗ ನೀವೇ ಹೇಳಿ ನಿಮ್ಮಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂದು ಕೇಳಿದರು ರಾಮಣ್ಣ.
  ಎಲ್ಲರು ಮುಖ ತಗ್ಗಿಸಿ ಕುಳಿತಿದ್ದರು. ಎಲ್ಲ ನೆನಪುಗಳು ಕಣ್ಣಮುಂದೆ ಸುಳಿದು ಎಲ್ಲರ ಕಣ್ಣು ತೆವಗೊಂಡಿದ್ದವು. ಎಲ್ಲರಿಗೂ ಈ ಮನೆಯಲ್ಲಿ ಅವರವರ ಪಾತ್ರ ಅರ್ಥವಾಗಿತ್ತು. ತುಂಬಿದ ಮನೆಯಲ್ಲಿನ ಪ್ರೀತಿಯು ಅರ್ಥವಾಗಿತ್ತು. ಮಾತು, ವಿಮರ್ಶೆ, ಕ್ಷಮಾಪಣೆ, ಯಾವುದರ ಅಗತ್ಯವೂ ಇರಲಿಲ್ಲ. ಮೌನದಲ್ಲಿ, ಕಣ್ಣಿನಲ್ಲಿ ಒಬ್ಬರ ಬಗೆಗೆ ಒಬ್ಬರು ಪ್ರೀತಿ ತೋರಿಸಿದ್ದರು. 
  ರಾಮಣ್ಣ ಮಕ್ಕಳು ಸೊಸೆಯಂದಿರನ್ನು ಕರೆದು ತಬ್ಬಿಕೊಂಡರು. ಎಲ್ಲರು ಪ್ರೀತಿಯಿಂದ ಒಂದಾಗಿದ್ದರು.

ಆಗ ಚಂದ್ರಕ್ಕ ಸಂತಸದಿಂದ ನಡೀರಿ ಈಗ ಎಲ್ಲರು ಸೇರಿ ಊಟಕ್ಕೆ ಕೂಡೋಣ ಎಂದರು. ಆಗ ರಾಮಣ್ಣ ಇನ್ನಷ್ಟು ತಡವಾದರೂ ಪರವಾಗಿಲ್ಲ ಚಂದ್ರಿ ಎಲ್ಲರಿಗೂ ಊಟಕ್ಕೆ ಗೋಡಂಬಿ, ದ್ರಾಕ್ಷಿ ತುಪ್ಪದಲ್ಲಿ ಹುರಿದು ಹಾಕಿ ಪಾಯಸ ಮಾಡಿಕೊಂಡು ಬಾ ಎಂದರು.
"ಅಯ್ಯೋ, ದೀಪಾವಳಿ ಹಬ್ಬ ಆಗಿ ಈಗ ನಾಲ್ಕು ದಿನ ಆಗಿದೆಯಲ್ಲರಿ, ಇವತ್ತ್ಯಾಕೆ ಪಾಯಸ?"ಎಂದರು ಚಂದ್ರಕ್ಕ.
  "ನೋಡೇ ತೋರಣ ಕಟ್ಟಿ, ಹೊಸ ಬಟ್ಟೆ ಹಾಕಿದ್ರೆ ಹಬ್ಬ ಅಲ್ಲ. ದೀಪ ಅಂಗಳಲ್ಲಿ ಅಲ್ಲ ಮನದಲ್ಲಿ ಹಚ್ಚಿ ಬೆಳಗಬೇಕು. ಇವತ್ತು ಆ ದೀಪಗಳು ಹತ್ತಿವೆ. ಆದರಿಂದ ಇವತ್ತೇ ನಮ್ಮ ಮನೆಯಲ್ಲಿ ದೀಪಾವಳಿ". ಎಂದರು.

ಎಲ್ಲರು ಪಾಯಸ ಸವೆಯುತ್ತ ಸಂಭ್ರಮದಿಂದ ಮನದ ಹಬ್ಬ ಆಚರಿಸಿದರು.
• ಒಗ್ಗಟ್ಟು ಬಲ ದ ಜೊತೆ ಸಂತಸವನ್ನು ತರುತ್ತದೆ. ಸಂಭ್ರಮವನ್ನು ಹಂಚುತ್ತದೆ*

ಭಾರ್ಗವಿ ಜೋಶಿ.




ProfileImg

Written by Bhargavi Sn

0 Followers

0 Following