ಉತ್ತರಾ ದೇವಿಯ ಕಥೆಯಂತೆ ಅಮಾನುಷ ಕಥಾನಕವಿರುವ ಪಾಡ್ದನ ಹೊನ್ನಮ್ಮಜೇವು.
ಹೊನ್ನಮ್ಮಜೇವಿನ ಗಂಡ ಮಾಲಿಂಗ ಸೆಟ್ಟಿ ಮದುವೆಯಾದ ಮರುದಿನವೇ ದಂಡಿಗೆ ಹೋಗಬೇಕಾಗಿ ಬರುತ್ತದೆ.
ಆಗ ಅವನು ತನ್ನ ಮಡದಿಯನ್ನು ಕಲ್ಲಿನ ಕೋಣೆಯೊಳಗೆ ಬಂಧಿಸಿ ಬೀಗ ಹಾಕಿ ಹೋಗುತ್ತಾನೆ.
ಮಾಲಿಂಗಸೆಟ್ಟಿ ದಂಡಿಗೆ ಹೋದ ವಿಚಾರ ತಿಳಿದ ಪುತ್ತೂರಿನ ಜಾಗಣಂತೋಡೆಯ ಹೊನ್ನಮ್ಮಜೇವನ್ನು ಪಡೆಯಲು ಉಪಾಯ ಹೂಡುತ್ತಾನೆ.
ಮಡಿವಾಳ್ತಿ ಅಬ್ಬಕ್ಕನಿಗೆ ಹೊನ್ನಮ್ಮಜೇವನ್ನು ಕರೆತಂದರೆ ಕಳಸ ತುಂಬ ದುಡ್ಡನ್ನು ಕೊಡುತ್ತೇನೆ ಎಂದು ಆಮಿಷ ಒಡ್ಡುತ್ತಾನೆ.
ಅಂತೆಯೇ ಆಮಿಷಕ್ಕೊಳಗಾದ ಮಡಿವಾಳ್ತಿ ಅಬ್ಬಕ್ಕ ಮಾಲಿಂಗಸೆಟ್ಟಿಯ ತಾಯಿಯ ಮನವೊಲಿಸಿ ಹೊನ್ನಮ್ಮಜೇವು ಇರುವ ಕೋಣೆಯ ಬೀಗ ತೆಗೆಸಿ ಅವಳೊಡನೆ ಮಾತನಾಡುತ್ತಾಳೆ.
ಜಾಗಣಂತೋಡೆಯನ ಅಂಗಳದಲ್ಲಿ ನಡೆಯುವ ಗುಬ್ಬಿಯಾಟ, ದೊಂಬರಾಟಗಳ ಬಗ್ಗೆ ಹೇಳುತ್ತಾಳೆ. ಅವನು ಕಟ್ಟಿಸಿದ ಕೋಟೆಯನ್ನು ನೋಡಿ ಬರೋಣ ಎನ್ನುತ್ತಾಳೆ.
ಕೋಣೆಯಲ್ಲಿನ ಏಕಾಂತವಾಸಕ್ಕೆ ನೊಂದೋ ಅಥವಾ ಸ್ವಭಾವತಃ ಚಂಚಲಸ್ವಭಾವದವಳಾದ ಹೊನ್ನಮ್ಮಜೇವು ಇದೇ ರಾತ್ರಿ ಹೋಗಿ ಇದೇ ರಾತ್ರಿಯೇ ಬರುತ್ತೇವೆ ಎಂದು ಅತ್ತೆಯಲ್ಲಿ ಹೇಳಿ ಮಡಿವಾಳ್ತಿ ಅಬ್ಬಕ್ಕನೊಡನೆ ಹೋಗುತ್ತಾಳೆ.
ಅಬ್ಬಕ್ಕನಿಂದ ವಂಚನೆಗೊಳಗಾಗಿ ಜಾಗಣಂತೋಡೆಯನ ಉಪ್ಪರಿಗೆಗೆ ಸೇರುತ್ತಾಳೆ. ಅಲ್ಲಿಂದ ನಂತರ ಅವಳಿಗೆ ಹೊರಬರಲು ಆಗಲಿಲ್ಲವೋ ಅಥವಾ ಅವಳು ಕ್ರೂರವಾಗಿ ನಡೆಸಿಕೊಂಡು ಕಲ್ಲಿನ ಕೋಣೆಯಲ್ಲಿ ಬಂಧಿಸಿದ ಗಂಡ ಮಾಲಿಂಗಸೆಟ್ಟಿಗಿಂತ ಬೇಕುಬೇಕಾದ್ದನ್ನು ಕೊಡಿಸುವ ಜಾಗಣಂತೋಡೆಯನೇ ವಾಸಿ ಎನ್ನಿಸಿತೋ ಏನೋ?
ಪಾಡ್ದನದಲ್ಲಿ ಅವಳ ಭಾವನೆಗಳ ಬಗ್ಗೆ ತಿಳಿಯುವುದಿಲ್ಲ. ಆದರೆ ಗಂಡನನ್ನು ಮರೆತು ಅಲ್ಲಿ ಸುಖವನ್ನು ಕಂಡುಕೊಂಡಿದ್ದಳು ಎಂಬುದು ಅವಳು ಬಳೆ ಹಾಕಲು ಆಸೆ ಪಟ್ಟುದುದರಲ್ಲಿ ತಿಳಿಯುತ್ತದೆ.
ಜಾಗಣಂತೋಡೆಯನ ಉಪ್ಪರಿಗೆಯಲ್ಲಿ ಬಲಾತ್ಕಾರವಾಗಿ ಇರಿಸಲ್ಪಟ್ಟಿದ್ದರೆ, ಅಲ್ಲಿರುವುದು ಅವಳಿಗೆ ಒಲ್ಲದ ವಿಚಾರವಾಗಿರುತ್ತಿದ್ದರೆ ಅವಳು ಬಳೆ ತೊಡಲು ಖಂಡಿತಾ ಆಶಿಸುತ್ತಿರಲಿಲ್ಲ.
ಆದರೆ ದಂಡಿನಿಂದ ಬಂದ ಮಾಲಿಂಗಸೆಟ್ಟಿ ವಿಷಯ ತಿಳಿದು ಬಳೆಗಾರನ ವೇಷದಲ್ಲಿ ಜಾಗಣಂತೋಡೆಯನ ಬೀಡಿಗೆ ಹೋಗಿ ಬಳೆ ತೊಡಲು ಆಶಿಸಿದ ಹೊನ್ನಮ್ಮಜೇವಿನ ಕೈಹಿಡಿಕೊಂಡು ಬಂದ ಜಾಗಣಂತೋಡೆಯನನ್ನು ಕೊಂದು ಹೊನ್ನಮ್ಮಜೇವನ್ನು ಎಳೆತಂದು ಮೂರು ದಾರಿ ಕೂಡುವಲ್ಲಿ ಸಿಗಿದು ಮೂರು ತುಂಡು ಮಾಡುತ್ತಾನೆ.
ಈ ಎರಡೂ ಕಥಾನಕಗಳು ಮೂಲ ಆಶಯ ಒಂದೇ ಆಗಿದೆ. ದಾರಿ ತಪ್ಪಿದ ಹೆಂಡತಿಯನ್ನು ತುಂಡು ಮಾಡಿ ಸಾಯಿಸುವ ಗಂಡಿನ ಕ್ರೌರ್ಯ ಇಲ್ಲಿ ಕಾಣಿಸುತ್ತದೆ. ಎರಡೂ ಕಥೆಗಳಲ್ಲಿ ಹೆಣ್ಣನ್ನು ದಾರಿತಪ್ಪಿಸುವಲ್ಲಿ ಮಡಿವಾಳ/ಮಡಿವಾಳ್ತಿಯ ಪಾತ್ರ ಮುಖ್ಯವಾಗುತ್ತದೆ.