ಹುಚ್ಸೋಮ
‘ಗೌರಿ,,,, ಎಲ್ಲಿ ಹೋದೆ? ಬಾ ಇಲ್ಲಿ. ನಿನಗೆ ಇವತ್ತು ಮೃಷ್ಟಾನ್ನ ಭೋಜನ ತಂದೀನಿ’ ಎಂದು ಸೋಮ ಕೂಗಿದ. ಸೋಮನ ಧ್ವನಿ ಕೇಳಿದ ಗೌರಿ ಸಂಸಾರ ಸಮೇತವಾಗಿ ಬಂದಳು. ಯಾರು ಈ ಗೌರಿ ಎಂಬ ಪ್ರಶ್ನೆ ಕಾಡುತ್ತಿದ್ದೆಯೇ? ಇಲ್ಲಿನ ಗೌರಿ ಸೋಮನ ಮುದ್ದಿನ ನಾಯಿ. ಪ್ರತಿವರ್ಷ ನಾಲ್ಕಾರು ಮರಿಗಳಿಗೆ ಜನ್ಮದಾತೆ. ಹಗಲು ರಾತ್ರಿ ಸೋಮನ ಮನೆಯ ಕಾವಲುಗಾರಿಣಿ. ಹಂಗಾರೆ ಸೋಮ ಯಾರು? ಅವ್ನ ಕೆಲ್ಸ ಏನು? ಅವ್ನ ವಾಸ ಎಲ್ಲಿ? ಎಂಬಿತ್ಯಾದಿ ಪ್ರಶ್ನೆಗಳು ತಲೆಯೊಳಗೆ ಗಿರಕಿ ಹೊಡಿಯೋದು ಸಹಜ.
ಅಂದಹಾಗೆ ಇದು ಸುಮಾರು ಇಪ್ಪತೈದು ವರ್ಷಗಳ ಹಿಂದಿನ ನೈಜಚಿತ್ರಣ. ಸೋಮ ನಮ್ಮೂರು ಹೊಳಗುಂದಿಯ ನಲವತ್ತರ ಆಸುಪಾಸಿನ ವಯಸ್ಕ. ತಾಯಿ ಇರೋತನಕ ಸೋಮನ ಜೀವನ ಹೆಂಗೋ ನಡೆದಿತ್ತು. ಆದರೆ ತಾಯಿ ತೀರಿಕೊಂಡ ಮೇಲೆ ಸೋಮ ಪರದೇಶಿಯಾದ. ತಾಯಿ ಬದುಕಿದ್ದಾಗಲೇ ಹುಚ್ಚ ಎಂಬ ಹಣೆಪಟ್ಟಿ ಇತ್ತು. ಯಾರೂ ಮನೆಯ ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ಹಾಳುಬಿದ್ದ ಮಣ್ಣಿನ ಮನೆಯೇ ಅವನ ಅರಮನೆ. ಒಬ್ಬಂಟಿ ಜೀವನ ಎನ್ನುವಂತಿಲ್ಲ. ಆ ಮನೆಯಲ್ಲಿ ಇರೋದೇ ಅವನೊಬ್ಬನೇ. ಆದರೂ ಗೌರಿಯಂತಹ ನಾಲ್ಕಾರು ನಾಯಿಗಳು ಸದಾ ಅವನ ಜೊತೆಗಿರುತ್ತಿದ್ದವು. ಮನೆಯ ವಠಾರದಲ್ಲಿ ಅವನ ಹಿಂದೆಯೇ ಓಡಾಡುತ್ತವೆ. ಈ ನಾಯಿಗಳಿಗೆ ಆಹಾರ ತರುವುದೇ ಅವನಿಗೆ ಒಂದು ದೊಡ್ಡ ಕೆಲ್ಸ. ಅವನು ತನಗಾಗಿ ಎಂದೂ ದುಡಿದವನಲ್ಲ. ಯುವಕನಾಗಿದ್ದಾಗಲೂ ಅಷ್ಟೇ. ಯಾವ ಕೆಲಸಕ್ಕೂ ಹೋದವನಲ್ಲ. ತಲೆ ಸರಿ ಇಲ್ಲದವನು ಎಂದು ಎಲ್ಲರೂ ಮೂದಲಿಸುವವರೇ. ಹಾಗಾಗಿ ಯಾರೋ ಕೆಲಸ ಕೊಡಲೇ ಇಲ್ಲ. ಸೋಮ ಸೋಮಾರಿಯಾದ.
ಆದರೆ ಈಗ ಅವನ ಜೊತೆಗೆ ಇರುವ ನಾಲ್ಕಾರು ನಾಯಿಗಳಿಗಾದರೂ ಆಹಾರ ತರಬೇಕಲ್ಲವೇ? ಅದಕ್ಕಾಗಿ ಒಂದೆರಡು ಹೋಟೆಲ್‌ಗಳಿಗೆ ನೀರು ಹಾಕುವುದು, ಪಾತ್ರೆ ತೊಳೆಯುವುದು ಮಾಡುತ್ತಾನೆ. ಅವರು ಕೊಟ್ಟ ತಿಂಡಿ ತಿನಿಸುಗಳಲ್ಲಿ ಅಲ್ಪಸ್ವಲ್ಪ ತಾನು ತಿಂದು ಉಳಿದಿದ್ದನ್ನು ನಾಯಿಗಳಿಗೆ ಹಾಕುತ್ತಾನೆ. ಅವುಗಳು ಅದೇ ಮೃಷ್ಟಾನ್ನ ಎಂಬಂತೆ ಬಾಲ ಅಲ್ಲಾಡಿಸುತ್ತಾ ಹಂಚಿಕೊಂಡು ತಿನ್ನುತ್ತವೆ. ಅವು ತಿನ್ನುವುದನ್ನು ನೋಡಿ ಖುಷಿ ಪಡುವ ಸೋಮ, ಅವುಗಳ ಮೈ ನೇವರಿಸುವ ಮೂಲಕ ತನ್ನ ಪ್ರೀತಿಯನ್ನು ಉಣಬಡಿಸುತ್ತಾನೆ. ಕೆಲವೊಮ್ಮೆ ಅವುಗಳೂ ಸಹ ಇವನ ಮೂತಿಗೆ ಲೊಚಲೊಚ ಮುದ್ದು ಕೊಡುತ್ತವೆ. ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುತ್ತವೆ.
ಸೋಮ ಎಲ್ಲಾ ಹುಚ್ಚರಂತಿಲ್ಲ. ದಿನವೂ ತಪ್ಪದೇ ಸ್ನಾನ ಮಾಡುತ್ತಿದ್ದ. ಮೈಮೇಲೆ ಹರಕು ಬಟ್ಟೆಗಳಿದ್ದರೂ, ಸ್ವಚ್ಛವಾಗಿರುತ್ತಿದ್ದವು. ಪ್ರತಿದಿನವೂ ಊರ ಸಮೀಪದ ಕೆರೆಯೇ ಆತನ ಬಾತ್ ರೂಮ್. ಮಟಮಟ ಮಧ್ಯಾಹ್ನ ಕೆರೆಯ ಬಳಿ ಬಂದು, ಬಟ್ಟೆಗಳನ್ನೆಲ್ಲಾ ಸ್ವಚ್ಛವಾಗಿ ತೊಳೆದುಹಾಕಿ, ತಾನೂ ಸ್ನಾನ ಮಾಡುವುದು ಅವನ ದಿನಚರಿಯಲ್ಲಿ ಸೇರಿತ್ತು. ಸೋಮ ಸ್ನಾನ ಮಾಡಲೆಂದು ಕೆರೆಗೆ ಬಂದಾಗ ಬಟ್ಟೆ ತೊಳೆಯಲು ಬಂದ ಊರಿನ ನಾರಿಮಣಿಗಳು ಅವನ ಅಂಗಸೌಷ್ಠವವನ್ನು ಕದ್ದು ಮುಚ್ಚಿ ನೋಡುತ್ತಿದ್ದರು. ಸೋಮ ಗಡ್ಡಧಾರಿ ಎಂಬುದನ್ನು ಬಿಟ್ಟರೆ, ಸುರಸುಂದರಾಗ. ಆಕರ್ಷಕ ಬಟ್ಟೆ ಹಾಕಿದರೆ ಥೇಟ್ ಸಿನಿಮಾ ನಟನಂತೆ ಕಾಣುತ್ತಿದ್ದ.
ಹಳ್ಳಿಯ ಓಣಿಗಳಲ್ಲಿ ನಡೆಯುವಾಗ ಯಾರನ್ನೂ ಕಣ್ಣೆತ್ತಿ ನೋಡಿದವನಲ್ಲ. ಯಾರಾದ್ರೂ ಕರೆದು ತಿನ್ನಲು ಏನಾದರೂ ಕೊಟ್ಟರೆ, ಮೊದಲು ಅದನ್ನು ಮೂಸಿನೋಡಿ ತಿನ್ನುತ್ತಿದ್ದ. ಹಳಸಿದ್ದು ಎನ್ನುವುದು ತಿಳಿದರೆ ಅದನ್ನು ತಿನ್ನದೇ ತನ್ನ ಪರಿವಾರಕ್ಕೆ ಒಯ್ಯುತ್ತಿದ್ದ. ಅಂತಹ ಸೂಕ್ಷö್ಮತೆ ಅವನಲ್ಲಿತ್ತು. ಸೋಮ ಯಾರ ತಂಟೆಗೂ ಹೋದವನಲ್ಲ. ಅವನನ್ನು ಕೆಣಕಿದರೆ ಯಾರನ್ನೂ ಬಿಡುವವನಲ್ಲ. ಕೆಲವು ಪಡ್ಡೆ ಹುಡುಗರು ಇವನನ್ನು ಕೆಣಕಿ ಮೈ ಹಣ್ಣಾಗಿಸಿಕೊಂಡಿದ್ದಾರೆ. ಯಾರ ಬಳಿಯೂ ಕಾಸು ಕೇಳಿದವನಲ್ಲ. ಕರೆದು ಕೆಲಸ ಕೊಟ್ರೆ ಮಾತ್ರ ಮಾಡೋನು. ಅವರು ಕೊಟ್ಟ ಆಹಾರ ಮತ್ತು ಒಂದಿಷ್ಟು ಪುಡಿಗಾಸು ಪಡೆಯೋನು. ಈ ಪುಡಿಗಾಸಿನಿಂದ ಬೀಡಿ ಸೇದೋನು. ಅವನು ಬೀಡಿ ಸೇದಿ ಹೊಗೆ ಬಿಡೋದು ಚಿಕ್ಕ ಹೈಕಳಿಗೆ ಮೋಜಿನಾಟ. ತಮ್ಮ ಬಳಿಯಿದ್ದ ಕಿರುಗಾಸು ನೀಡಿ ಬೀಡಿ ತಂದುಕೊಟ್ಟು ಸೇದಿಸಿ ಮೋಜು ನೋಡುತ್ತಿದ್ದರು. ಅವ್ನು ಮಕ್ಕಳಿಗೆ ಎಂದೂ ತೊಂದರೆ ಕೊಟ್ಟೋನಲ್ಲ.
ಒಮ್ಮೆ ಸಂಜೆ ವೇಳೆ ತನ್ನ ಪರಿವಾರದೊಂದಿಗೆ ಓಣಿಯಲ್ಲಿ ಹೊರಟಿದ್ದ. ಅವನ ಪರಿವಾರಕ್ಕೆ ಇನ್ನೊಂದು ತಂಡದ ಕೆಲವು ಸದಸ್ಯರು ಅಟ್ಯಾಕ್ ಮಾಡಿದರು. ಅವರನ್ನು ಓಡಿಸಲು ಬಡಿಗೆಯೊಂದಿಗೆ ಓಡಿಹೋದ. ದಾರಿ ಸಮತಟ್ಟಾಗಿರಲಿಲ್ಲ. ಓಡುವಾಗ ಕಾಲುತೊಡಕಾಗಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡ. ಗಾಯ ರಕ್ತ, ಕೀವು ತುಂಬಿಕೊಂಡು ಕ್ರಮೇಣವಾಗಿ ದೊಡ್ಡದಾಗಿ ವ್ರಣ(ಗಾಯ)ವಾಯಿತು. ಇದನ್ನು ವಾಸಿ ಮಾಡಿಕೊಳ್ಳುವುದು ಅವನಿಂದ ಆಗಲಿಲ್ಲ. ಸ್ಥಳಿಯರ ಸಲಹೆ ಕೇಳಲಿಲ್ಲ. ಆದರೂ ಕೆರೆಗೆ ಸ್ನಾನಕ್ಕೆ ಹೋಗುವುದು ತಪ್ಪಲಿಲ್ಲ. ಅಂದು ಕದ್ದುಮುಚ್ಚಿ ಇವನ ಸ್ನಾನ ನೋಡುತ್ತಿದ್ದ ನಾರಿಯರು ಇಂದು ಮೂಗು ಮುಚ್ಚಿಕೊಳ್ಳುವಂತಾಗಿತ್ತು. ಗಾಯದಿಂದ ಹರಡುತ್ತಿದ್ದ ಕೆಟ್ಟ ವಾಸನೆ ಇಡೀ ಪರಿಸರವನ್ನೇ ಆವರಿಸುತ್ತಿತ್ತು. ಓಣಿಯಲ್ಲಿ ನಡೆದು ಬರುವಾಗ ದೂರದಿಂದಲೇ ಗಾಯದ ವಾಸನೆ ಮೂಗಿಗೆ ಅಡರುತ್ತಿತ್ತು. ಜನರು ಮನೆಯ ಬಾಗಿಲನ್ನು ದಢಾರೆಂದು ಮುಚ್ಚಿಕೊಳ್ಳುತ್ತಿದ್ದರು. ಕುಂಟುತ್ತಾ ಕುಂಟುತ್ತಾ ಕಾಲೆಳೆದುಕೊಂಡು ಬರುತ್ತಿದ್ದ. ಅವನನ್ನು ದೂರದಿಂದ ಚಿಕ್ಕ ಮಕ್ಕಳಿಗೆ ತೋರಿಸಿ ಹೆದರಿಸುತ್ತಿದ್ದರು. ಸದಾ ಹೆಗಲಿಗೆ ನೇತು ಹಾಕಿಕೊಂಡಿರುತ್ತಿದ್ದ ಬಟ್ಟೆ ಚೀಲ ತೋರಿಸಿ “ನೋಡಲ್ಲಿ ಹುಚ್ಸೋಮ ಬಂದ. ನೀನು ಚಾಸ್ಟಿ ಮಾಡಿದ್ರೆ ಅವನ ಚೀಲದಲ್ಲಿ ಹಾಕಿ ಕಳಿಸ್ತೀನಿ” ಅಂತ ಹೆದರಿಸುತ್ತಿದ್ದರು. ಆದರೆ ಸೋಮ ಮಕ್ಕಳನ್ನು ನೋಡಿ ನಗುತ್ತಿದ್ದ. ಮಕ್ಕಳು ಅಂದ್ರೆ ಸೋಮನಿಗೆ ಮಕ್ಕಳ ಮೇಲೆ ಪ್ರೀತಿ ಜಾಸ್ತಿ. ಆದರೆ ಜನ ಅವನನ್ನು ಮಕ್ಕಳನ್ನು ಹೆದರಿಸೋ ವ್ಯಕ್ತಿ ಎಂದು ಬಿಂಬಿಸಿದ್ರು.
ಸೋಮನ ಕಾಲಿಗೆ ಆದ ಗಾಯ ವಾಸಿಯಾಗಲಿಲ್ಲ. ಓಡಾಡಲೂ ಆಗದೇ ಮನೆಯ ಬಳಿಯೇ ಇರತೊಡಗಿದ. ತನ್ನ ಪರಿವಾರಕ್ಕೆ ಆಹಾರ ನೀಡಲಾಗದ ಸ್ಥಿತಿ ಕಂಡು ಮನದಲ್ಲೇ ಮರುಗಿದ. ಇತ್ತ ಗೌರಿ ಮತ್ತು ಆಕೆಯ ಪರಿವಾರ ತನ್ನೊಡೆಯನಿಗೆ ಆದ ಸ್ಥಿತಿ ಕಂಡು ರೋಧಿಸತೊಡಗಿದವು. ಅವುಗಳ ಭಾಷೆ ಇವನಿಗೆ ತಿಳಿಯುತ್ತಿಲ್ಲ, ಇವನ ಭಾಷೆ ಅವುಗಳಿಗೆ ಅರ್ಥವಾಗುತ್ತಿಲ್ಲ. ಆದರೆ ಅವರಿಬ್ಬರ ಮಧ್ಯೆ ಇದ್ದ ಅವಿನಾಭಾವ ಸಂಬಂಧದ ಭಾವನೆಗಳು ಇಬ್ಬರಿಗೂ ಅರ್ಥವಾಗಿದ್ದವು. ಮನಷ್ಯರಿಗೆ ಮನುಷ್ಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಮೂಕ ಪ್ರಾಣಿಗಳು ಮನುಷ್ಯನನ್ನು ಅರ್ಥಮಾಡಿಕೊಂಡಿದ್ದವು.
ಹೀಗೆ ಬದುಕಿದ್ದ ಸೋಮ ಅನ್ನ ಆಹಾರ, ನೀರು ಇಲ್ಲದೇ ಕೊನೆಗೊಂದು ರಾತ್ರಿ ಕೊನೆಯುಸಿರೆಳೆದ. ಅವನು ಸತ್ತದ್ದು ಯಾರಿಗೂ ತಿಳಿಯಲೇ ಇಲ್ಲ. ಗೌರಿ ಮತ್ತು ಪರಿವಾರದವರು ತನ್ನೊಡೆಯನ ಸಾವನ್ನು ಕಂಡು ರೋಧಿಸತೊಡಗಿದರು. ಇವರ ರೋಧನಕ್ಕೆ ಅಕ್ಕಪಕ್ಕದ ಮನೆಯವರು ಎಚ್ಚೆತ್ತರು. ಹೊರಬಂದು ನೋಡಿದರೆ ಸೋಮ ಕೈಕಾಲು ಚಾಚಿಕೊಂಡು ಅಂಗಾತ ಬಿದ್ದುಕೊಂಡಿದ್ದಾನೆ. ನಾಲ್ಕಾರು ಜನ ಗಟ್ಟಿ ಮನಸ್ಸು ಮಾಡಿ ಕೈಕಾಲು ಮುಟ್ಟಿ ನೋಡಿದರು. ಆಗಲೇ ಸೋಮ ಸತ್ತು ಬಹಳ ಹೊತ್ತಾಗಿತ್ತು. ಅವನಿಗೆ ಬಂಧುಗಳೆನ್ನುವವರು ಯಾರೂ ಇರಲಿಲ್ಲವಾದ್ದರಿಂದ ಸತ್ತಾಗ ಅಳಲು ಯಾರೂ ಇರಲಿಲ್ಲ. ಆದರೆ ಗೌರಿ ಮತ್ತು ಆಕೆಯ ಪರಿವಾರದವರ ಅಳು ಯಾರಿಗೂ ಅರ್ಥವಾಗಲೇ ಇಲ್ಲ. ಊರ ಜನರೇ ಅವನಿಗೆ ಮಣ್ಣು ನೀಡಿದರು. ಯಾವುದೇ ಮತ, ಧರ್ಮದ ಹಂಗೂ ಇಲ್ಲದ ಸೋಮ ಕೊನೆಗೂ ‘ಹುಚ್ಸೋಮ’ನಾಗಿಯೇ ಉಳಿದ.
ಆರ್.ಬಿ.ಗುರುಬಸವರಾಜ