ಬೆಳ್ಳಾರೆ ಮಾಗಣೆ( ಸುಳ್ಯ ತಾ, ದ ಕ ಜಿಲ್ಲೆ,) ಯ ಐತಿಹಾಸಿಕ ನೋಟ
ಬೆಳ್ಳಾರೆ ಸುಳ್ಯ ತಾಲೂಕಿನ ವ್ಯಾಪ್ತಿಗೆ ಸೇರಿದ ಗ್ರಾಮ.ಹಿಂದೆ ಬೆಳ್ಳಾರೆ ಮಾಗಣೆಯಾಗಿದ್ದ ಬಗ್ಗೆ ಇತಿಹಾಸಜ್ಞರು ತಿಳಿಸಿದ್ದಾರೆ. ಬೆಳ್ಳಾರೆಯನ್ನು ಸಾಮಂತ ಬಲ್ಲಾಳ ಅರಸರು ಆಳುತ್ತಿದ್ದರು. ಇವರು ಬೆಳ್ಳಾರೆ, ಮುಂಡೂರು, ಸರ್ವೆ, ಕೆದಂಬಾಡಿ, ಕೆಯ್ಯೂರು, ಕಾಣಿಯೂರು, ಐವರ್ನಾಡು, ಪಾಲ್ತಾಡಿ, ಪುಣ್ಚಪಾಡಿ, ಸವಣೂರು, ಚಾರ್ವಕ, ಪೆರುವಾಜೆ, ಕೆದಿಲ, ಬಾಳಿಲ, ಕಳಂಜ, ಮುಪ್ಪೇರ್ಯ, ಮುರುಳ್ಯ, ಕಾೈಮಣ, ಕುದ್ಮಾರು, ಮತ್ತು ಕೊಳ್ತಿಗೆ, ಎಂಬ ಇಪ್ಪತ್ತೊಂದು ಗ್ರಾಮಗಳನ್ನು ಆಳುತ್ತಿದ್ದರು. ಬೆಳ್ಳಾರೆಯನ್ನು ಆಳಿದ ಸಾಮಂತರು ಯಾರ ಸಾಮಂತರಾಗಿದ್ದರು ಎಂಬ ಬಗ್ಗೆ ಇದಮಿತ್ಥಂ ಎಂಬ ಮಾಹಿತಿ ಸಿಗುವುದಿಲ್ಲ.
1763ರಲ್ಲಿ ಹೈದರಾಲಿಯು ಬಿದನೂರನ್ನು ವಶಪಡಿಸಿಕೊಂಡಾಗ ತುಳುನಾಡು ಅವನ ವಶವಾಯಿತಾದರೂ, ಕೊಡಗಿನ ಅರಸನೊಂದಿಗೆ ಒಪ್ಪಂದ ಮಾಡಿಕೊಂಡು ಪಂಜ ಮತ್ತು ಕೊಡಗಿನ ಮಾಗಣೆಗಳನ್ನು ಕೊಡಗಿಗೆ ಬಿಟ್ಟು ಕೊಟ್ಟನು. ಕ್ರಿ.ಶ ಆದಿ ಭಾಗದಲ್ಲಿ ಬನವಾಸಿಯ ಕದಂಬ ಚಂದ್ರವರ್ಮನು ಕೊಡಗನ್ನು ಆಳಿಕೊಂಡಿದ್ದನು. ನಂತರ ಕೊಡಗು ಅನೇಕ ವಂಶದವರ ಆಳ್ವಿಕೆಗೆ ಒಳಗಾಯಿತು. ಸುಮಾರು ಕ್ರಿ.ಶ 1600ರಲ್ಲಿ ಇಕ್ಕೇರಿ ನಾಯಕರ ವಂಶದ ಹಾಲೇರಿ ಕುಟುಂಬದ ವೀರರಾಜನು ಕೊಡಗನ್ನು ಆಳ್ವಿಕೆ ಮಾಡಿದ ಬಗ್ಗೆ ರಾಜೇಂದ್ರನಾಮೆಯಲ್ಲಿ ಉಲ್ಲೇಖವಿದೆ. ಕ್ರಿ.ಶ 1775ರಲ್ಲಿ ಅಮರ ಸುಳ್ಯ ಮತ್ತು ಬೆಳ್ಳಾರೆಗಳನ್ನು ಹೈದರಾಲಿ ಪುನಃ ವಶಪಡಿಸಿಕೊಂಡನು. 1791ರಲ್ಲಿ ದೊಡ್ಡ ವೀರರಾಜೇಂದ್ರನು ವಶಪಡಿಸಿಕೊಂಡನು. 1792ರಲ್ಲಿ ಟಿಪ್ಪು ಸುಲ್ತಾನನ ಮನವಿಯ ಮೇರೆಗೆ ಬೆಳ್ಳಾರೆ ಮತ್ತು ಪಂಜ ಮಾಗಣೆಗಳನ್ನು ದೊಡ್ಡ ವೀರರಾಜೇಂದ್ರನು ಟಿಪ್ಪು ಸುಲ್ತಾನನಿಗೆ ಬಿಟ್ಟು ಕೊಟ್ಟನು.
1. ಬೆಳ್ಳಾರೆಯ ಕೋಟೆ ಮತ್ತು ಬ್ರಿಟಿಷರ ಖಜಾನೆ: ಟಿಪ್ಪುವಿನ ಮರಣಾನಂತರ ಬೆಳ್ಳಾರೆ ಮಾಗಣೆಯ 37 ಗ್ರಾಮಗಳನ್ನು ದೊಡ್ಡ ವೀರರಾಜೇಂದ್ರನ ವಶಕ್ಕೆ ಬ್ರಿಟಿಷರು ನೀಡಿದ್ದಾರೆ. ಕೊಡಗಿನ ಕೊನೆಯ ಅರಸ ಚಿಕ್ಕ ವೀರರಾಜೇಂದ್ರನನ್ನು 1834ರಲ್ಲಿ ಬ್ರಿಟಿಷರು ಪದಚ್ಯುತಗೊಳಿಸಿ ಬೆಳ್ಳಾರೆ ಸೇರಿದಂತೆ, ಸುಳ್ಯ ,ಪಂಜ ಸೀಮೆಯ 110 ಗ್ರಾಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗರಸರ ಕಾಲದಲ್ಲಿ ವಸ್ತುರೂಪದಲ್ಲಿ ಭೂ ಕಂದಾಯವನ್ನು ನಗದು ರೂಪಕ್ಕೆ ಬದಲಾಯಿಸಿದರು. ಇದರ ಪ್ರತಿಫಲವಾಗಿ ಒಂದು ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಅದನ್ನು ಬ್ರಿಟಿಷರು ಕಲ್ಯಾಣಪ್ಪನ ಕಾಟುಕಾಯಿ ಎಂದು ಕರೆದರು. ಸುಳ್ಯದ ರೈತಾಪಿ ಜನರು ಕೆದಂಬಾಡಿ ರಾಮೇಗೌಡ,ಕೂಜುಕೋಡು ಮಲ್ಲಪ್ಪ ಗೌಡ ಮೊದಲಾದವರ ನೇತೃತ್ವದಲ್ಲಿ ಬ್ರಿಟಿಷರನ್ನು ಹೊಡೆದೋಡಿಸಲು ತೀರ್ಮಾನಿಸಿದರು .ಪುಟ್ಟ ಬಸಪ್ಪನೆಂಬ ಜಂಗಮನನ್ನು ಕಲ್ಯಾಣಸ್ವಾಮಿ ಎಂದು ಕರೆದು ಈತ ಕೊಡಗಿನ ಅರಸರ ವಂಶದವನು ಎಂದು ಜನರನ್ನು ನಂಬಿಸಿದರು. ಮೊದಲಿಗೆ ಬೆಳ್ಳಾರೆಯ ಕೋಟೆಯ ಒಳಗಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಂಡರು.
(c)ಡಾ.ಲಕ್ಷ್ಮೀ ಜಿ ಪ್ರಸಾದ
ಬೆಳ್ಳಾರೆ ಕೋಟೆಯಲ್ಲಿ ಕಲ್ಯಾಣಸ್ವಾಮಿಗೆ ಪಟ್ಟ ಕಟ್ಟಿದರು. ಬ್ರಿಟಿಷರಿಂದ ವಶಪಡಿಸಿಕೊಂಡ ಬೆಳ್ಳಾರೆಯ ಖಜಾನೆ ಮತ್ತು ಕೋಟೆ ಇಂದಿಗೂ ಇದೆ. ಬೆಳ್ಳಾರೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದ ಬದಿಯಲ್ಲಿ ಈ ಕೋಟೆ ಇದೆ.(ಚಿತ್ರ-1) ಈಗ ಬಂಗ್ಲೆ ಗುಡ್ಡೆ ಎಂದು ಕರೆಯಲ್ಪಡುವ ಕೋಟೆಯ ಮೇಲೆ ಇರುವ ಒಂದು ಕಟ್ಟಡವೇ ಆ ಖಜಾನೆ (ಚಿತ್ರ-2) ಈ ಕಟ್ಟಡದಲ್ಲಿ ಈಗ ವಿಲೇಜಾಫೀಸ್ ಇದೆ. ಕೋಟೆಯ ಸುತ್ತ ತೋಡಿದ ಕಂದಕದ ಕುರುಹು ಈಗ ಕೂಡ ಇದೆ.ಈ ಕೋಟೆಯನ್ನು ಕ್ರಿ.ಶ. 1601ರಲ್ಲಿ ಇಕ್ಕೇರಿಯ ಅರಸರು ಕಟ್ಟಿಸಿದ್ದಾರೆ.
2. ಬೆಳ್ಳಾರೆಯ ಮಾಸ್ತಿ ಕಟ್ಟೆ ಮತ್ತು ಮಾಸ್ತಿ ವಿಗ್ರಹಗಳು ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ಮಾಸ್ತಿ ಕಟ್ಟೆ ಎಂಬ ಪ್ರದೇಶ ಇದೆ. ಬೆಳ್ಳಾರೆ ಪುತ್ತೂರು ಮುಖ್ಯ ರಸ್ತೆಯ ಬಲಭಾಗದಲ್ಲಿ ತುಸುದೂರ ಒಳಗೆ ಹೋಗಿ ಸ್ವಲ್ಪ ಎತ್ತರದ ಗುಡ್ಡೆ ಪ್ರದೇಶದಲ್ಲಿ ಮಾಸ್ತಿ ಕಟ್ಟೆ ಎಂಬ ಹೆಸರಿನ ಕಟ್ಟೆ ಇತ್ತು. ಇಲ್ಲಿ ನಾಲ್ಕು ಶಿಲಾ ಸ್ತಂಭಗಳನ್ನು ನಾಲ್ಕು ದಿಕ್ಕಿಗೆ ನೆಡಲಾಗಿದ್ದು, ಕೆಳಗೆ ಶಿಲೆಯನ್ನು ಹಾಸಲಾಗಿತ್ತು. ಇಲ್ಲಿ ಒಂದು ಸ್ತ್ರೀಯ ಚಿತ್ರ, ಅವಳ ಎತ್ತಿದ ಕೈಯ ಚಿತ್ರ ಹಾಗೂ ಅರ್ಧ ಚಂದ್ರನ ಚಿತ್ರವನ್ನು ಕೆತ್ತಿರುವ ಶಿಲೆ ಇತ್ತು. ಎಂದು ಇದನ್ನು ನೋಡಿರುವ ಪುಷ್ಪರಾಜರು ಹೇಳುತ್ತಾರೆ. ಅವರು ಹೇಳಿರುವ ಪ್ರಕಾರದ ಶಿಲ್ಪವು ಮಹಾಸತಿಗಲ್ಲಿನಲ್ಲಿ ಇರುತ್ತದೆ. ಆದ್ದರಿಂದ ಇಲ್ಲೊಂದುಮಹಾಸತಿಕಲ್ಲು ಇತ್ತೆಂದು ತಿಳಿದು ಬರುತ್ತದೆ. ಕಟ್ಟೆ ಕೂಡಾ ಇರುವುದರಿಂದ ಇದನ್ನು ಮಹಾಸತಿ ಕಟ್ಟೆ ಎಂದು ಕರೆದಿರಬೇಕು. ಕಾಲಾಂತರದಲ್ಲಿ ಇದು ಮಾಸ್ತಿ ಕಟ್ಟೆ ಎಂದಾಗಿದೆ,ಈಗ ಈ ಪ್ರದೇಶದವನ್ನು ಸಮತಟ್ಟಾಗಿಸಿದ್ದು, ಇಲ್ಲಿ ಮಹಾಸತಿ ಕಟ್ಟೆ ಇದ್ದ ಕುರುಹುಗಳು ಅಳಿಸಿ ಹೋಗಿದೆ. 3-4 ವರ್ಷಗಳ ಹಿಂದಿನ ತನಕ ಮಹಾಸತಿ ಕಟ್ಟೆ ಇತ್ತು, ಸುಮಾರು 20-25 ವರ್ಷಗಳ ಮೊದಲು ಇಲ್ಲಿ ಮಹಾಸತಿ ಕಲ್ಲು ಇದ್ದುದನ್ನು ನೋಡಿದವರಿದ್ದಾರೆ, ಈ ಕಲ್ಲು ಈಗ ಎಲ್ಲೋ ಕಳೆದು ಹೋಗಿದೆ.ಆದರೆ ಬೆಳ್ಳಾರೆ ಬೀಡಿನ ಪಟ್ಟದ ಚಾವಡಿಯಲ್ಲಿರುವ ಅಡ್ಯಂತಾಯ ದೈವದ ಗುಡಿಯಲ್ಲಿ ಎರಡು ಮಾಸ್ತಿ ವಿಗ್ರಹಗಳು ಇವೆ ತುಳುನಾಡಿನಲ್ಲಿ ಸತಿ ಸಹಗಮನ ಪದ್ಧತಿ ಅಷ್ಟಾಗಿ ಪ್ರಚಲಿತವಿರಲಿಲ್ಲ,ಆದ್ದರಿಂದ ಸಹಗಮನ ಮಾಡಿದವರ ಸಂಖ್ಯೆ ತೀರಾ ಕಡಿಮೆ ಇದೆ. ಉಡುಪಿ , ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6-7 ಮಹಾಸತಿ ಕಲ್ಲು/ಕಟ್ಟೆಗಳು ಇವೆ. ಬೆಳ್ಳಾರೆಯಲ್ಲಿ ಮಹಾಸತಿ ಕಲ್ಲು ಹಾಗೂ ಕಟ್ಟೆ ಇದ್ದಿದ್ದರೂ ಕೂಡಾ ಇಲ್ಲಿ ಸತಿ ಸಹಗಮನ ಮಾಡಿದವರು ಯಾರು? ಯಾವ ಕಾಲದಲ್ಲಿ? ಇತ್ಯಾದಿ ವಿಚಾರಗಳ ಬಗ್ಗೆ ಏನೂ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ.
3. ಬೆಳ್ಳಾರೆಯ ಬೀಡು ಮತ್ತು ಪಟ್ಟದ ಚಾವಡಿ: ಬೆಳ್ಳಾರೆಯನ್ನು ಜೈನ ಪಾಳೆಯಗಾರರು ಆಳಿದ್ದಕ್ಕೆ ಕುರುಹಾಗಿ ಬೆಳ್ಳಾರೆಯ ಕೋಟೆಯ ಹಿಂಭಾಗದಲ್ಲಿ ಬೀಡಿನ ಅವಶೇಷ ಈಗಲೂ ಇದೆ. ಬಲ್ಲಾಳರ ಬೀಡಿನ ಅವಶೇಷದ ವಾಯುವ್ಯ ಭಾಗದಲ್ಲಿ ಬೆಳ್ಳಾರೆಯ ಪ್ರಧಾನ ದೈವ ಅಡ್ಯಂತಾಯ ಭೂತದ ಚಾವಡಿ ಇದೆ. ಭೂತದ ನೇಮದ ಸಂದರ್ಭದಲ್ಲಿ ಇದು ಪಟ್ಟದ ಚಾವಡಿ ಎಂದು ಕರೆಸಿಕೊಂಡು ಭೂತದ ತದ ನುಡಿಯಾಗುತ್ತದೆ. ಇದರಿಂದಾಗಿ ಜೈನ ಪಾಳೆಯಗಾರರಾದ ಬಲ್ಲಾಳರಸರ ಪಟ್ಟಾಭಿಷೇಕ ಇಲ್ಲಿಯೇ ಆಗುತ್ತಿತ್ತೆಂದು ತಿಳಿದು ಬರುತ್ತದೆ. ಅಡ್ಯಂತಾಯ ಭೂತದ ಚಾವಡಿಯ ಗುಡಿಯಲ್ಲಿ ಕಂಚಿನಿಂದ ನಿರ್ಮಿಸಲ್ಪಟ್ಟ ಎರಡು ಸ್ತ್ರೀ ರೂಪದ ಮೂರ್ತಿಗಳು ಇವೆ ಕೈಯಲ್ಲಿ ಕನ್ನಡಿ ಹಿಡಿದ ಕಾರಣ ಹಾಗು ಮೂರ್ತಿಯ ಲಕ್ಷ್ಮ್ಣಗಳನ್ನೂ ಗಮನಿಸಿದಾಗ ಮಾಸ್ತಿ ವಿಗ್ರಹಗಳು ಎಂದು ಹೇಳ ಬಹುದು ಇದರ ಜೊತೆ "ಎರಡು ಜಲಪಾತ್ರೆಗಳ ರೀತಿಯ ಕಲಶಗಳು ಇದ್ದು ಇವು ಮಾಸ್ತಿ ಹೋಗುವ ಮುನ್ನ ಗಂಗಮ್ಮನ ಪೂಜೆಗೆ ಸತಿಯರು ಬಳಸಿದ ಜಲಪಾತ್ರೆಗಳು ಇವಾಗಿರ ಬಹುದೆಂದೂ ,ಈ ಸ್ತ್ರೀ ವಿಗ್ರಹಗಳು ಮಾಸ್ತಿ ವಿಗ್ರಹಗಳೆಂದು" ಹಂಪಿ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯ್ಯಪಕರೂ ಹಿರಿಯ ವಿದ್ವಾಂಸರೂ ಆದ ದೇವರ ಕೊಂದ ರೆಡ್ಡಿ ಯವರು ಅಭಿಪ್ರಾಯ ಪಟ್ಟಿದ್ದಾರೆ ಈ ಬಗ್ಗೆ ಅಧ್ಯಯನ ನಡೆದರೆ ಸ್ಪಷ್ಟ ಮಾಹಿತಿ ಸಿಗಬಹುದು.
ಪಟ್ಟದ ಚಾವಡಿ
4. ಆನೆ ಕಟ್ಟುವ ಕಲ್ಲು: ಪಟ್ಟದ ಚಾವಡಿಯ ತೆಂಕು ಭಾಗದಲ್ಲಿ ಬೀಡಿನರಮನೆ ಇತ್ತು,ಇದರ ಬಳಿಯೂ ಜೈನ ಬಸದಿ ಕೂಡ ಇತ್ತು.ಕೆಲವರ್ಷಗಳ ಹಿಂದಿನ ತನಕ ಈ ಬಸದಿಯ ಅವಶೇಷ ಕಾಣಿಸುತ್ತಿತ್ತು ಈಗ ನೆಲಸಮವಾಗಿ ಕುರುಹುಗಳು ಅಳಿಸಿ ಹೋಗಿವೆ, ಸಮೀಪದಲ್ಲಿ ಆನೆಗಳನ್ನು ಕಟ್ಟಿ ಹಾಕುವ ಕಲ್ಲುಗಳು ಇದ್ದವು.ಅಂಥಹ ಒಂದು ಆನೆ ಕಟ್ಟುವ ಕಲ್ಲನ್ನು ಈಗ ಕೂಡ ಕಾಣಬಹುದು
5. ಬಂಡಿ ಮಜಲು: ಹಿಂದೆ ಬೆಳ್ಳಾರೆ ಪಟ್ಟಣವಾಗಿತ್ತು. ಸರಕು ಸಾಗಾಟ ಎತ್ತಿನ ಬಂಡಿಗಳ ತಂಗುದಾಣ ಆಗಿದ್ದ ಪ್ರದೇಶವನ್ನು ಬಂಡಿ ಮಜಲು ಎಂದು ಕರೆಯುತ್ತಿದ್ದರು, ಬಂಡಿ ಮಜಲು ಎಂಬ ಈ ವಿಶಾಲವಾದ ಬಯಲು ಪ್ರದೇಶ ಬೆಳ್ಳಾರೆ ಪೇಟೆಯಿಂದ ತುಸು ದೂರದಲ್ಲಿ ಈಗ ಕೂಡ ಇದೆ,
ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕಿ
ಸರ್ಕಾರಿ ಪದವಿ ಪೂರ್ವ ಕಾಲೇಜು
ಬೆಂಗಳೂರು
0 Followers
0 Following