ಕುಂಬಳೆ ಪರಿಸರದ ಅರಿಕ್ಕಾಡಿಯಲ್ಲಿ ಆರಾಧಿಸಲ್ಪಡುವ ಆಲಿ/ ಭೂತ ಆಲಿ ಚಾಮುಂಡಿ ಬಹಳ ಪ್ರಸಿದ್ಧವಾದ ದೈವ.
ಕುಂಬಳೆ ಸಮೀಪದ ಒಂದು ಗುಡ್ಡದಲ್ಲಿ ಪಾರೆ ಸ್ಥಾನ /ಪಾದೆ ಸ್ಥಾನ ಎಂಬ ಕ್ಷೇತ್ರ ಇದೆ. ಇದು ಆಲಿ ಭೂತದ ಮೂಲ ಸ್ಥಾನ .ಆರಿಕ್ಕಾಡಿ ಸಮೀಪದ ಪಾದೆ ಸ್ಥಾನದ ಪ್ರಧಾನ ದೈವ ಪಾಡಾಂಗರೆ ಪೋದಿ(ಪಾಟಾರ್ ಕುಳಂಗದ ಭಗವತಿ ).ಆದರೆ ಈ ಭೂತ ಸ್ಥಾನ ದಲ್ಲಿ ಆಲಿ ಚಾಮುಂಡಿ ಪ್ರಧಾನ ಭೂತಕ್ಕಿಂತ ಹೆಚ್ಚು ಪ್ರಸಿದ್ಧಿ ಪಡೆದಿದೆ.ಅಜ್ಜಿ ಭೂತ , ಶಿರಾಡಿಭೂತ,ರುದ್ರ ಚಾಮುಂಡಿ ಮೊದಲಾದ ಅನೇಕ ದೈವಗಳು ಇತರ ಪ್ರಧಾನ ದೈವಗಳ ಸೇರಿಗೆ ದೈವಗಳಾಗಿದ್ದರೂ,ಪ್ರಧಾನ ದೈವಗಳಲಿಗಿಂತ ಹೆಚ್ಚು ಮಹತ್ವವನ್ನು ಪಡೆದಿದ್ದಾರೆ .ಇದು ತುಳು ಸಂಸ್ಕೃತಿಯಲ್ಲಿ ಅಲ್ಲಲ್ಲಿ ಕಡು ಬರುವ ವಿಶಿಷ್ಟ ವಿದ್ಯಮಾನ . © ಇದು ದುರ್ಬಲರು ಸಬಲರಾಗುತ್ತಿರುವುದರ ಸಂಕೇತವೂ ಇರಬಹುದು .ಏನೇ ಇರಲಿ ಇಲ್ಲಿ ಆಲಿ ಭೂತ ಕೂಡಾ ಪ್ರಧಾನ ದೈವಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರುವುದು ಗಮನಾರ್ಹ ಅಂಶವಾಗಿದೆ ಎಲ್ಲ ಜಾತಿ ಧರ್ಮದ ಜನರು ಆಲಿ ಚಾಮುಂಡಿಯನ್ನು ಭಕ್ತಿಯಿಂದ ನಂಬಿ ಆರಾಧಿಸುತ್ತಾರೆ
ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ, ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದು. ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ.
ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ. ©
ಹೀಗೆ ಆಲಿ ಚಾಮುಂಡಿ ಕೂಡಾ ಮಂತ್ರ ದೇವತೆಯ ಆಗ್ರಹಕ್ಕೆ ತುತ್ತಾಗಿ ದುರಂತವನ್ನಪ್ಪಿ ನಂತರ ದೈವತ್ವವನ್ನು
ಆರಾಧಿಸಲ್ಪಡುವ ಭೂತ.ತುಳುವರ ಭೂತಾರಾಧನೆಯಲ್ಲಿ ಯಾವುದೇ ಜಾತಿ ಭೇದ ಅಂತ ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೋಕ್ಕೊಟು ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ ಅವರು ತಿಳಿಸಿದ್ದಾರ.
ಕ್ರಿಶ್ಚಿಯನ್ ತೆಯ್ಯಂಗೆ ಆರಾಧನೆ ಇರುವ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರು ತಿಳಿಸಿದ್ದಾರೆ . ಅಂತೆಯೇ ತುಳುನಾಡಿನ ಅನೇಕ ಮುಸ್ಲಿಂ ಮೂಲದ ವ್ಯಕ್ತಿಗಳು ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಬಬ್ಬರ್ಯ, ,ಬ್ಯಾರ್ದಿ ಭೂತ, ಬ್ಯಾರಿ ಭೂತ,ಮಾಪುಲೇ ಮಾಪುಳ್ತಿ ಭೂತೊಳು ,ಮಾಪುಳ್ತಿ ಧೂಮಾವತಿ ಮೊದಲಾದವರು ಮುಸ್ಲಿಂ ಮೂಲದ ದೈವತಗಳು. ಹೀಗೆ ಆಲಿ ಭೂತ ಕೂಡಾ ಮುಸ್ಲಿಂ ಮೂಲದ ದೈವ .ಭೂತಗಳಾದ ನಂತರ ಇವರು ಹಿಂದೆ ಯಾರಾಗಿದ್ದರು ಎಂಬ ಪ್ರಶ್ನೆಯೇ ಇರುವುದಿಲ್ಲ .ಎಲ್ಲ ದೈವಗಳೂ ಸಮಾನ .ಎಲ್ಲ ದೈವಗಳಿಗೂ ಒಂದೇ ರೀತಿಯ ಗೌರವ ,ಭಕ್ತಿಯ ನೆಲೆ .ಇದು ತುಳು ನಾಡಿನ ವೈಶಿಷ್ಟ್ಯ . ©
ಆಲಿ ಭೂತ ಕೂಡಾ ಮೂಲತಃ ಮುಸ್ಲಿಂ ಮಂತ್ರವಾದಿ . .ಬೇರೆ ಊರಿನಿಂದ ಆಶ್ರಯಕ್ಕಾಗಿ ಅಲೆದಾಡುತ್ತಾ ಬಂದು ಆರಿಕ್ಕಾಡಿ ಯ ಪಾದೆ ಸ್ಥಾನದ ಬಿಲ್ಲವರಲ್ಲಿ ಆಶ್ರಯ ಬೇಡುತ್ತಾನೆ .ದಯಾಳುಗಳಾದ ಅವರು ಈತನ ದುಷ್ಟತನದ ಹೆಣ್ಣು ಹುಚ್ಚಿನ ಅರಿವಿಲ್ಲದೆ ಆತನಿಗೆ ಆಶ್ರಯ ಕೊಡುತ್ತಾರೆ ಆಲಿಬ್ಯಾರಿ ನೋಡಲು ಕಟ್ಟು ಮಸ್ತಾಗಿ ಸುಂದದರನಾಗಿದ್ದನು .ಇವನಿಗೆ ತುಂಬಾ ,ಹೆಣ್ಣಿನ ಚಪಲ ಇತ್ತು .ಈತ ಮಂತ್ರವಾದಿಯಾಗಿ ಪ್ರಸಿದ್ಧಿ ಪಡೆದಿದ್ದನು. ತನ್ನ ಮಂತ್ರ ಶಕ್ತಿಯಿಂದ ಜನರಿಗೆ,ಊರ ಹೆಣ್ಣು ಮಕ್ಕಳಿಗೆ ನಾನ ರೀತಿಯ ಕಿರುಕುಳ ಕೊಡುತ್ತಿದ್ದನು . ತನ್ನ್ನ ಮಂತ್ರ ಶಕ್ತಿಯಿಂದ ಹೆಣ್ಣು ಮಕ್ಕಳನ್ನು ತನ್ನೆಡೆಗೆ ಸೆಳೆದು ಕೊಳ್ಳುತ್ತಿದ್ದನು . ಆತನ ಮಂತ್ರ ಶಕ್ತಿಯ ಕಾರಣದಿಂದಾಗಿ ಹೆಣ್ಣು ಮರುಳನಾದ ಆತನನ್ನು ವಿರೋಧಿಸಲು , ಜನರಿಗೆ ಸಾಧ್ಯವಾಗುತ್ತಿರಲಿಲ್ಲ . © ತನ್ನ ಮಂತ್ರ ಶಕ್ತಿಯಿಂದಾಗಿ ಆತ ಅಷ್ಟು ಬಲವಂತನಾಗಿದ್ದನು..ಅವನು ಮಂತ್ರ ಶಕ್ತಿಯಿರುವ ಒಂದು ತಾಯಿತವನ್ನು ಕೊರಳಿಗೆ ಕಟ್ಟಿಕೊಂಡಿದ್ದನು .ಅದು ಅವನ ಮೈ ಮೇಲೆ ಇರುವ ತನಕ ಅವನನ್ನು ಸೋಲಿಸಲು ಯಾರಿಂದಲೂ ಅಸಾಧ್ಯವಾಗಿತ್ತು .ಅವನು ತನಗೆ ಆಶ್ರಯ ಕೊಟ್ಟ ಬಿಲ್ಲವರ ಮನೆಯ ದೇಯಿ ಎಂಬ ಹೆಣ್ಣು ಮಗಳನ್ನು ತನ್ನೆಡೆಗೆ ಸೆಳೆಯಲು ಯತ್ನಿಸಿದನು .ಅವಳು ಇವನೆಡೆಗೆ ಬಾರದೆ ಇದ್ದಾಗ ತನ್ನ ಮಂತ್ರ ಶಕ್ತಿಯಿಂದ ಅವಳನ್ನು ಸೆಳೆದು ಅವಳ ಮೇಲೆ ಅತ್ಯಾಚಾರ ಎಸಗಿ ಅವಳ ಸಾವಿಗೆ ಕಾರಣನಾದನು
ಆಗ ಆ ಕುಟುಂಬದವರು ಮಂತ್ರ ದೇವತೆಗೆ ಕೈ ಮುಗಿದು “ಆಲಿ ಬ್ಯಾರಿಯಿಂದ ನಮಗೆ ರಕ್ಷಣೆ ಕೊಡು ನಮ್ಮನ್ನು ಕಾಪಾಡು”ಎಂದು ಬೇಡಿ ಕೊಂಡರು .ತನ್ನ ಭಕ್ತರ ಕಷ್ಟವನ್ನು ಅರಿತ ಮಂತ್ರ ದೇವತೆ ಒಂದು ಸುಂದರ ಹೆಣ್ಣಾಗಿ ಆವಿರ್ಭವಿಸಿ ,ತನ್ನ ಒಡನಾಡಿ ಹೆಣ್ಣು ಮಕ್ಕಳೊಂದಿಗೆ ಒಂದು ಕೆರೆಯಲ್ಲಿ/ಹೊಳೆಯಲ್ಲಿ ಜಲ ಕ್ರೀಡೆಯಾಡುತ್ತದೆ. ಆ ಹೆಣ್ಣಿನ ರೂಪು ಬೆಡಗು ಬಿನ್ನಾಣ ನೋಡಿ ಮರುಳಾದ ಆಲಿ ಬ್ಯಾರಿ ಅವಳಲ್ಲಿ ಮೋಹಗೊಂಡು ಕೆರೆಯ ಬಳಿಗೆ ಬರುತ್ತಾನೆ . ಆಗ ಆ ಹೆಣ್ಣಿನ ಮಾಯಾ ರಪು ಅವನಲ್ಲಿ ನೀನು ಬಟ್ಟೆಯನ್ನು ಕಳಚಿ ಕೆರೆಗೆ ಬರಬೇಕು ಎಂದು ಹೇಳುತ್ತದೆ .ಅಂತೆಯೇ ಅವನು ತನ್ನ ಬಟ್ಟೆಯನ್ನು ಬಿಚ್ಚಿ ಕೆರೆಗೆ ಇಳಿಯುತ್ತಾನೆ .ಆಗ ಆ ಹೆಣ್ಣು ರೂಪದ ಮಂತ್ರ ದೇವತೆ ಅದು ನಿನ್ನ ಕೊರಳಲ್ಲಿ ಇರುವುದು ಏನು ?ಅದನ್ನು ಅಲ್ಲಿಟ್ಟು ಬಾ “ಎಂದು ಹೇಳಿ ಅವನ ಮಂತ್ರ ಶಕ್ತಿಯಿರುವ ತಾಯಿತವನ್ನು ತೆಗೆಯುವಂತೆ ಹೇಳುತ್ತದೆ . ಹೆಣ್ಣಿ ಮೋಹಕ್ಕೆ ಒಳಗಾದ ಆತ ಹಿಂದೆ ಮುಂದೆ ವಿವೇಚಿಸದೆ ತನ್ನ ಮಂತ್ರ ಶಕ್ತಿಯ ತಾಯಿತವನ್ನು ತೆಗೆದಿಟ್ಟು ಕೆರೆಗೆ ಇಳಿಯುತ್ತಾನೆ .ಮಂತ್ರ ಶಕ್ತಿಯುಳ್ಳ ತಾಯಿತದ ಬಲವಿಲ್ಲದ ಆತನನ್ನು ಸ್ತ್ರೀ ರೂಪಿನ ಮಂತ್ರ ದೇವತೆ ಸಂಹರಿಸುತ್ತದೆ ಎಂಬ ಐತಿಹ್ಯವು ಪ್ರಚಲಿತವಿದೆ . © ಆತನನ್ನು ಮಂತ್ರ ದೇವತೆ ತನ್ನ ಸೇರಿಗೆ ದೈವವನ್ನಾಗಿ ಮಾಡುತ್ತದೆ .ಆತ ಮುಂದೆ ಆಲಿ ಭೂತ ,ಆಲಿ ಚಾಮುಂಡಿ ಭೂತವಾಗಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ.
ಇಬ್ಬರು ಹೆಂಗಸರು ನೀರಿನಲ್ಲಿ ಆಟವಾಡುತ್ತ ಆತನನ್ನು ನೀರಿಗಿಳಿಯಲು ಆಹ್ವಾನಿಸಿದರು ಎಂಬ ಐತಿಹ್ಯ ಕೂಡಾ ಪ್ರಚಲಿತ ಇದೆ
ವಾಸ್ತವಿಕ ನೆಲೆಯಲ್ಲಿ ಆಲೋಚಿಸುವುದಾದರೆ ಅಕಸ್ಮಾತ್ ಆಗಿ ಕೆರೆಯಲ್ಲಿ ಮುಳಗಿ ದುರಂತವನ್ನಪ್ಪಿರುವ ಆಲಿ ಬ್ಯಾರಿಯ ಜೊತೆಗೆ ದೈವ ಕಥಾನಕ ಸೇರಿಕೊಂಡಿರುವ ಸಾಧ್ಯತೆ ಇದೆ .ಅಥವಾ ಹೆಣ್ಣಿನ ಮರುಳನಾದ ಆತ ಕೆರೆ /ಹಳ್ಳದಲ್ಲಿ ಸ್ನಾನ ಮಾಡುತ್ತಿರುವ ಸ್ತ್ರೀ ಸಮೀಪಕ್ಕೆ ಹೋಗಲೆತ್ನಿಸಿ ದುರಂತವನ್ನಪ್ಪಿರಬಹುದು ,ಈ ಬಗ್ಗೆ “ಅತಿರೇಕದ ವರ್ತನೆಯ ಮಂತ್ರವಾದಿಯೋಬ್ಬನನ್ನು ಜನರೇ ಸಿಟ್ಟಿಗೆದ್ದು ಗುಪ್ತವಾಗಿ ಮುಗಿಸಿದ ವೃತ್ತಾನ್ತಕ್ಕೆ ಬೇರೊಂದು ಬಣ್ಣ ಬಂದಿರಲೂ ಬಹುದು .ಭೂತ ಮಹಿಮೆಗಳನ್ನು ಪ್ರಚುರ ಗೊಳಿಸಲು ಇಂತ ಕಥೆಗಳು ಅನುಕೂಲ “ಎಂದು ಡಾ. ಅಮೃತ ಸೋಮೆಶ್ವರರು ಅಬಿಪ್ರಾಯ ಪಟ್ಟಿದ್ದಾರೆ .ಇತರ ಭೂತಗಳಂತೆ ಆಲಿ ಭೂತಕ್ಕೆ ಅಣಿ ಜಕ್ಕೆಳಣಿ ಗಳು ಇರುವುದಿಲ್ಲ ಈತನಿಗೆ ಬಣ್ಣ ಬಣ್ಣದ ಲುಂಗಿ ,ಸೊಂಟದ ಪಟ್ಟಿ ,ತಲೆಗೆ ಬಂಗಾರದ /ಬೆಳ್ಳಿಯ ಟೊಪ್ಪಿ ಇರುತ್ತದೆ.ಮೈಗೆ ಗಂಧ ಪೂಸಿ ಮುಖಕ್ಕೆ ಕಪ್ಪು ಬಣ್ಣ ಹಾಕಿದ ಸರಳ ಅಲಂಕಾರ ಇರುತ್ತದೆ.
ಈ ಭೂತಕ್ಕೆ ತುಂಬಾ ಜನರು ಹರಿಕೆ ಹಾಕುತ್ತಾರೆ.ಅನೇಕ ಮುಸ್ಲಿಂ ಸ್ತ್ರೀ ,ಪುರುಷರೂ ಆಲಿ ಭೂತಕ್ಕೆ ಹರಿಕೆ ಒಪ್ಪಿಸಿತ್ತಾರೆ .”ವೇಶ್ಯಾ ವೃತ್ತಿಯ ಹೆಂಗಳೆಯರೂ ಈತನಿಗೆ ನಡೆದುಕೊಳ್ಳುತ್ತಾರೆ,ಈ ವರ್ಷದ ಬೆಳೆ ಹೇಗಿದೆ ? ಎಂಬ ಸರಸ ಪ್ರಶ್ನೆಯನ್ನು ಈ ರಸಿಕ ದೈವ ಕೇಳುವುದುಂಟು “ಎಂದು ಅಮೃತ ಸೋಮೆಶ್ವರರು ಹೇಳಿದ್ದಾರೆ ,”ಮುಸ್ಲಿಂ ಮೂಲದ ವ್ಯಕ್ತಿಯೊಬ್ಬ ದೈವೀಕರಣಗೊಂಡು ಸಾವಿರಾರು ಜನರ ಆರಾಧ್ಯ ಶಕ್ತಿಯಾಗಿರುವುದು ವಿಶೇಷ ಮಾತ್ರವಲ್ಲ,ಈ ಆರಾಧನಾ ವಿದ್ಯಮಾನವು ಆರಾಧನಾ ಮಟ್ಟದ ಕೋಮು ಸೌಹಾರ್ದಕ್ಕೆ ಒಂದು ಕೊಡುಗೆಯೂ ಆಗಿದೆ “ಎಂದು ಅಮೃತ ಸೋಮೆಶ್ವರರು ಅಭಿಪ್ರಾಯ ಪಟ್ಟಿದ್ದಾರೆ .
© ಡಾ.ಲಕ್ಷ್ಮೀ ಜಿ ಪ್ರಸಾದ ಲೇ: ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ
ಮೊಬೈಲ್: 9480516684