ಕೋಟಿಗಟ್ಟಲೆ ದುಡ್ಡು ಖರ್ಚು ಮಾಡಿ ಕಲಿತು ಹೊರ ಬರುವ ಹೊತ್ತಿಗೆ ಇದು ಅಸಲು ಬಡ್ಡಿ ಸೇರಿ ಎಷ್ಟಾಗುವುದಿಲ್ಲ? ಇದನ್ನು ಇವರುಗಳು ಹಿಂದೆ ಪಡೆಯಬೇಡವೆ?! ಜೊತೆಗೆ ಘನತೆಗೆ ತಕ್ಕಂತೆ ಬಂಗಲೆ ಕಾರು ಇಟ್ಟುಕೊಂಡು ಬದುಕಬೇಡವೇ? ಉನ್ನತ ಶಿಕ್ಷಣದ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕಲೇಬೇಕಾಗಿದೆ.
ಕೆಲ ವರ್ಷಗಳ ಹಿಂದೆ ಹೊಟ್ಟೆನೋವಿನ ಕಾರಣಕ್ಕೆ ಪುತ್ತೂರಿನ ಒಂದು ಖಾಸಗಿ ಆಸ್ಪತ್ರೆಗೆ ಹೋಗಿದ್ದೆ. ದಾಖಲಾಗಬೇಕು ಎಂದು ಹೇಳಿದರು. ದಾಖಲಾದೆ. ಅನೇಕ ಪರೀಕ್ಷೆಗಳನ್ನು ಮಾಡಿದರು. ಕೊನೆಯಲ್ಲಿ "ನಿಮಗೆ ಪೆಲ್ವಿಕ್ಸ್ ಅಪೆಂಡಿಕ್ಸ್ ಆಪರೇಷನ್ ಮಾಡಬೇಕಾಗುತ್ತದೆ" ಎಂದು ಹೇಳಿದರು.
ವಿಪರೀತ ಗಾಬರಿಯಾಯಿತು. ಏಕೆಂದರೆ ಎರಡು ವರ್ಷಗಳ ಹಿಂದೆಯಷ್ಟೇ ನನಗೆ ಅಪೆಂಡಿಕ್ಸ್ ಆಪರೇಷನ್ ಆಗಿತ್ತು.ಅಲ್ಲದೆ ನನಗೆ ನೋವು ಇದ್ದ್ದುದು ಎಡ ಕಿಬ್ಬೊಟ್ಟೆಯಲ್ಲಿ. ಅಪೆಂಡಿಕ್ಸ್‌ಬಲ ಕಿಬ್ಬೊಟ್ಟೆಯಲ್ಲಿ ಉಂಟಾಗುವ ನೋವು ಎಂದೂ ನನಗೆ ಗೊತ್ತಿತ್ತು. ಪೆಲ್ವಿಕ್ಸ್ ಅಪೆಂಡಿಕ್ಸ್ ಎಂದರೆ ಬೇರೇನೋ ಇರಬಹುದು ಎನಿಸಿತು. ಎಂತಕ್ಕೂ ಇರಲಿ ಎಂದು ನಮ್ಮ ಪರಿಚಿತರಾದ ಇನ್ನೋರ್ವ ವೈದ್ಯರಲ್ಲಿ ಈ ಬಗ್ಗೆ ಕೇಳಿದೆವು. ಆಗ ಅವರು ಒಮ್ಮೆ ಆಪರೇಷನ್ ಆದಮೇಲೆ ಪುನಃ ಅಪೆಂಡಿಕ್ಸ್ ಆಗಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಆಗ ನಾನು ಆ ಆಸ್ಪತ್ರೆಯ ವೈದ್ಯರಲ್ಲಿ ನನಗೆ ಅಪೆಂಡಿಕ್ಸ್ ಆಪರೇಷನ್ ಆಗಿರುವ ಬಗ್ಗೆ ತಿಳಿಸಿದೆ. ಆಗ ಅವರು ಗಾಯದ ಗುರುತು ಎಲ್ಲಿದೆ ಎಂದು ತೋರಿಸಲು ಹೇಳಿದರು. ನನಗೆ ಲಾಪ್ರೋಸ್ಕೋಪಿಕ್ ಸರ್ಜರಿ ಆಗಿರುವ ಕಾರಣ ಗಾಯದ ಗುರುತು ಇಲ್ಲ ಎಂದು ತಿಳಿಸಿದೆ. ಆಗ ಅವರು ಕೂಡಲೇ ಆ ಸ್ಕ್ಯಾನಿಂಗ್ ರಿಪೋರ್ಟ್ ಅನ್ನು ಹಿಂದೆ ಪಡೆದು ಎಡ ಭಾಗದಲ್ಲಿ ಸ್ಟೋನ್ ಇದೆಯೆಂದು ಹೇಳಿ ಬೇರೆ ರಿಪೋರ್ಟ್ ಕೊಟ್ಟರು.ವೈದ್ಯೋ ನಾರಾಯಣೋ ಹರಿಃ. ವೈದ್ಯರನ್ನು ದೇವರೆಂದೇ ಕಾಣುವ ಸಂಸ್ಕೃತಿ ನಮ್ಮದು. ರೋಗ ರುಜಿನಗಳು ಕಾಡಿ ಜೀವನ್ಮರಣದ ಪ್ರಶ್ನೆ ಬಂದಾಗ ವೈದ್ಯನೇ ದೇವರಾಗುತ್ತಾನೆ. ನಮ್ಮ ದೇಶದಲ್ಲಿ ಅತ್ಯಂತ ಗೌರವವನ್ನು ಪಡೆದ ವೃತ್ತಿ ವೈದ್ಯರದು.
ಇದೊಂದು ವಿಶಿಷ್ಟವಾದ ಪವಿತ್ರ ವೃತ್ತಿ. ಆದರೆ ಇಂದು ಈ ವೃತ್ತಿಯಲ್ಲಿ ಇಂಥ ಪಾವಿತ್ರ್ಯ ಉಳಿದಿದೆಯೇ ಎಂಬುದೊಂದು ಪ್ರಶ್ನೆ. ಇಂದು ಈ ಪವಿತ್ರ ವೃತ್ತಿಯಲ್ಲಿ ವ್ಯಾಪಾರೀಕರಣ ಹೆಚ್ಚುತ್ತಿದೆ ಎನ್ನುವುದು ಖೇದದ ವಿಚಾರ. ನೆಗಡಿ ಜ್ವರ ಬಂದು ವೈದ್ಯರ ಹತ್ತಿರ ಹೋದರೆ ರಕ್ತ ಪರೀಕ್ಷೆಯಿಂದ ಹಿಡಿದು ಎಕ್ಸ್‌ರೇ, ಸ್ಕ್ಯಾನಿಂಗ್ ಎಲ್ಲವನ್ನೂ ಮಾಡಿಸಿಕೊಂಡು ಬರಲು ಚೀಟಿ ಕೊಡುತ್ತಾರೆ! ಈ ಮೊದಲೇ ಬೇರೆ ಕಡೆ ರಕ್ತ ಪರೀಕ್ಷೆ ಮಾಡಿಸಿದ್ದರೂ ತಾವು ಹೇಳಿದಲ್ಲಿಯೇ ಇನ್ನೊಮ್ಮೆ ಮಾಡಿಸಿಕೊಂಡು ಬರಬೇಕು ಎಂದು ತಾಕೀತು ಮಾಡುತ್ತಾರೆ.
ಈಗಂತೂ ದುಬಾರಿಯಾಗಿರುವ ಸಿಟಿ ಸ್ಕ್ಯಾನಿಂಗ್, ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸುವುದು ಸಾಮಾನ್ಯ ಆಗಿದೆ.ಗ್ರಹಚಾರವೆಂಬಂತೆ ಏನೋ ಕಾಲು ಜಾರಿ ಬಿದ್ದು ಕೈಗೋ ಕಾಲಿಗೋ ಏಟು ಮಾಡಿಕೊಂಡರಂತೂ ಮುಗಿಯಿತು! ಮೂರು ನಾಲ್ಕು ಬಾರಿ ಎಕ್ಸ್‌ರೇ ತೆಗೆಸುವುದು ಅನಿವಾರ್ಯ. ಮೂಳೆಯನ್ನು ಜೋಡಿಸುವ ಆಪರೇಷನ್ ಏನಾದರೂ ಆಗಬೇಕಿದ್ದರಂತೂ ಆಪರೇಷನ್‌ಗೆ ಮೊದಲು, ನಂತರ ಎಂದು 15-20 ಬಾರಿ ಎಕ್ಸ್‌ರೇತೆಗೆಸುವುದು ಸಾಮಾನ್ಯ. ಒಂದೇ ಭಾಗವು ಮೂರಕ್ಕಿಂತ ಹೆಚ್ಚು ಸಲ ಎಕ್ಸ್‌ರೇಗೆ ತೆರೆದುಕೊಂಡರೆ ಕ್ಯಾನ್ಸರ್ ಬರುವ ಸಾಧ್ಯತೆ ತುಂಬಾ ಹೆಚ್ಚು ಎಂದು ಗೊತ್ತಿದ್ದರೂ ಯಾಕೆ ಪ್ರತಿಯೊಂದಕ್ಕೂ ನಾನಾ ತರಹದ ಪರೀಕ್ಷೆ ಮಾಡಿಸುತ್ತಾರೆ?
ಇದಕ್ಕೆ ಉತ್ತರ ತಿಳಿಯಬೇಕಾದರೆ ವೈದ್ಯಕೀಯ ಶಿಕ್ಷಣದ ಮೂಲವನ್ನು ಕೆದಕಬೇಕಾಗುತ್ತದೆ.ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದಲ್ಲಿ ಪ್ರತಿಭೆಗೆ ಅವಕಾಶವಿಲ್ಲದಾಗಿದೆ. ದೊಡ್ಡ ದೊಡ್ಡ ಕಾಲೇಜ್‌ಗಳನ್ನು ತೆರೆದ ಖಾಸಗಿ ಸಂಸ್ಥೆಗಳ ವ್ಯವಸ್ಥಾಪಕರು ಅದನ್ನು ವ್ಯಾಪಾರವನ್ನಾಗಿ ಮಾಡುತ್ತಿದ್ದಾರೆ. ಹಣದ ದುರಾಸೆ ಇಲ್ಲಿ ತಾಂಡವವಾಡುತ್ತಿದೆ. ಎಲ್ಲಿ ಬುದ್ಧಿಶಕ್ತಿಯ ಆವಶ್ಯಕತೆ ಇದೆಯೋ ಅಲ್ಲಿ ಹಣದ ಬಲದಿಂದ ಶ್ರೀಮಂತರ ಮಕ್ಕಳು ಮಾತ್ರ ವೈದ್ಯಕೀಯ ಕ್ಷೇತ್ರದಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಮುಖ್ಯ ಕ್ಷೇತ್ರಗಳಾದ ಜನರಲ್ ಮೆಡಿಸಿನ್, ಸರ್ಜರಿ,ಅರ್ಥೋಪಿಡಿಕ್ಸ್, ಪೀಡಿಯಾಟ್ರಿಕ್ಸ್, ಅನಸ್ತೇಶಿಯ, ರೇಡಿಯೋ ಡಯಾಗ್ನಾಸಿಸ್, ಇಎನ್‌ಟಿ, ಆಪ್ತಮಾಲಜಿ, ಓಬಿಜೆ ಮೊದಲಾದವುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಪ್ರತಿಭೆಗಳಿಗೆ ಅವಕಾಶ ಸಿಗುವುದೇ ಇಲ್ಲ. ಯಾಕೆಂದರೆ ಹೆಚ್ಚಿನ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಖಾಸಗಿ ವ್ಯಕ್ತಿಗಳ ಹಿಡಿತದಲ್ಲಿವೆ. ವೈದ್ಯಕೀಯ ಶಿಕ್ಷಣ ಸಂಸ್ಥೆ ತೆರೆಯುವುದು ಒಂದು ಲಾಭಕರ ಉದ್ಯಮವಾಗಿದ್ದು ಕೋಟಿಗಟ್ಟಲೆ ಹಣ ಸುರಿದು ಅಲ್ಲಲ್ಲಿ ನಾಯಿಕೊಡೆಗಳಂತೆ ಮೆಡಿಕಲ್ ಶಿಕ್ಷಣ ಕಾಲೇಜ್‌ಗಳು ತಲೆಯೆತ್ತಿವೆ. ಯಾವುದೇ ಸರಿಯಾದ ಸೌಲಭ್ಯ ಇಲ್ಲದಿದ್ದಾಗಲೂ ವಿದ್ಯಾರ್ಥಿಗಳಿಂದ ಕೋಟಿಗಟ್ಟಲೆ ದುಡ್ಡನ್ನು ವಸೂಲಿ ಮಾಡುತ್ತಿವೆ.ಕಾಮೆಡ್-ಕೆಯ ಖಾಸಗಿ ಕಾಲೇಜ್‌ಗಳು, 33 ಪ್ರತಿಶತ ಅಲ್ಪ ಸಂಖ್ಯಾತ ಕಾಲೇಜ್‌ಗಳು, 20 ಪ್ರತಿಶತ ಡೀಮ್ಡ್ ವಿ.ವಿ.ಗಳು 25 ಪ್ರತಿಶತ ಸೀಟುಗಳನ್ನು ಸರಕಾರಕ್ಕೆ ಬಿಟ್ಟುಕೊಡಬೇಕು ಎಂಬ ನಿಯಮವಿದೆ ಮತ್ತು ಉಳಿದ ಸೀಟ್‌ಗಳನ್ನು ಮೆರಿಟ್ ಮೇಲೆ ಕೊಡಬೇಕು ಎಂಬ ನಿಯಮವೂ ಇದೆ. ಇದನ್ನು ಈ ಕಾಲೇಜ್‌ಗಳು ಪಾಲಿಸುತ್ತವಾ? ಬೇಡಿಕೆ ಹೆಚ್ಚಿಲ್ಲದ ಪ್ಯಾರಾ ಮೆಡಿಕಲ್ ಸೀಟ್‌ಗಳನ್ನು ಕೊಟ್ಟು ಕಣ್ಣು ಒರೆಸುವ ನಾಟಕ ಮಾಡುತ್ತಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಾ ಇದೆ.
ಒಂದೊಮ್ಮೆ ನ್ಯಾಯವಾಗಿ ನಿಯಮಾವಳಿಯಂತೆ ಸೀಟುಗಳನ್ನು ಬಿಟ್ಟುಕೊಟ್ಟರೂ ಕೂಡಾ ಶುದ್ಧ ಪ್ರತಿಭೆಗಳಿಗೆ ಬೆರಳೆಣಿಕೆಯಷ್ಟು ಸೀಟ್‌ಗಳು. ಖಾಸಗಿಯವರು ಸರಕಾರಕ್ಕೆ ಕೊಡುವ ಸೀಟುಗಳಲ್ಲಿ ಅರ್ಧಾಂಶ ಮೀಸಲಾತಿಗೆ ಹೋಗುತ್ತವೆ. ಅಂದರೆ 33-25 -20 ಪ್ರತಿಶತಗಳ ಅರ್ಧಾಂಶ ಎಂದರೆ 16-12-10 ಪ್ರತಿಶತ ಮಾತ್ರ ಜನರಲ್ ಮೆರಿಟ್‌ಗೆ ಸಿಗುತ್ತದೆ. ಅದರಲ್ಲಿಯೂ 30 ಪ್ರತಿಶತ ಗ್ರಾಮೀಣ ಹಾಗೂ ಸರಕಾರೀ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರಿಗೆ ಮೀಸಲಾಗುತ್ತದೆ. ಅಂದರೆ ಶೇ. 10, 8, 7 ಸೀಟುಗಳು ಮಾತ್ರ ಶುದ್ಧ ಪ್ರತಿಭೆಗಳಿಗೆ ಸಿಗುತ್ತವೆ. ಸರ್ಕಾರಿ ಕಾಲೇಜ್‌ಗಳಲ್ಲಿ 50 ಪ್ರತಿಶತ ಸೀಟ್‌ಗಳು ಜನರಲ್ ಮೆರಿಟ್‌ಗೆ ಸಿಗುತ್ತವೆ.
ಈ ಬಾರಿ ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗೆ ಕುಳಿತ ಓರ್ವ ವಿದ್ಯಾರ್ಥಿಕೊಟ್ಟಿರುವ ಮಾಹಿತಿ ಪ್ರಕಾರ ಪ್ರತಿ ವರ್ಷ ಸುಮಾರು 5000 -6000 ವಿದ್ಯಾರ್ಥಿಗಳು ಉನ್ನತ ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಗೆ ಕಟ್ಟುತ್ತಾರೆ. ಇಲ್ಲಿ ಕ್ಲಿನಿಕಲ್ ಸಬ್ಜೆಕ್ಟ್ ಇರುವ ಒಟ್ಟು ಸೀಟ್‌ಗಳು ಸುಮಾರು 500-600. ಇದರಲ್ಲಿ ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ ಸಿಗುವ ಸೀಟ್‌ಗಳು ಸುಮಾರು 130-150 (ದಶಕದ ಹಿಂದೆ ಒಟ್ಟು 432 ಸೀಟುಗಳು ಲಭ್ಯವಿದ್ದವು ಅದರಲ್ಲಿ ಜನರಲ್ ಮೆರಿಟ್‌ಗೆ ಲಭ್ಯವಿದ್ದದ್ದು 79 ಸೀಟುಗಳು).
ಇದರಲ್ಲಿ 30 ಪ್ರತಿಶತ ಸೀಟುಗಳು ಸರ್ಕಾರಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಿದ ವೈದ್ಯರಿಗೆ ಮೀಸಲಾಗಿದ್ದು 90-100 ಸೀಟುಗಳು ಮಾತ್ರ ನಿಜವಾದ ಪ್ರತಿಭಾವಂತರಿಗೆ ಸಿಗುತ್ತಿವೆ. ಅಂದರೆ ಕೇವಲ 10-15 ಪ್ರತಿಶತದಷ್ಟು ಮಾತ್ರ. ಉಳಿದಂತೆ ಎಲ್ಲ ಸೀಟ್‌ಗಳು ದುಡ್ಡು ಇರುವವರ ಪಾಲಾಗುತ್ತಿವೆ. ಉಳಿದ ಸೀಟ್‌ಗಳನ್ನೂ ಕೂಡಾ ಮೆರಿಟ್ ಮೇಲೆ ತುಂಬಬೇಕು ಎಂಬ ನಿಯಮವಿದೆಯಾದರೂ ಅದು ಯಾವುದೂ ಜಾರಿಯಲ್ಲಿಲ್ಲ. ಆದರೆ ಇವನ್ನು ಕೂಡಾ ಅನೇಕ ಡೀಮ್ಡ್ ವಿ.ವಿ.ಗಳು ಹಾಗೂ ಅಲ್ಪ ಸಂಖ್ಯಾತ ಖಾಸಗಿ ಕಾಲೇಜ್‌ಗಳು ಪ್ರಸ್ತುತ ಸರಿಯಾಗಿ ಸೀಟ್ ಹಂಚಿಕೆ ಮಾಡುತ್ತಿಲ್ಲ ಎನ್ನುವುದು ನಿಜಕ್ಕೂ ಚಿಂತನೀಯ ವಿಚಾರ.
ಹೀಗೆ 70-75 ಪ್ರತಿಶತ ಮಂದಿ ಹಣದ ಬಲದಿಂದ ಕಲಿತವರೇ ಆಗಿರುತ್ತಾರೆ. ಇದರಿಂದಾಗಿಯೇ ಬಹುಶಃ ಆಪರೇಷನ್ ಆದಾಗ ಕತ್ತರಿ ರೋಗಿಯ ಹೊಟ್ಟೆಯೊಳಗೆ ಉಳಿದುಬಿಡುತ್ತದೆ! "ಆಪರೇಷನ್ ಸಕ್ಸಸ್ ಬಟ್ ಪೇಷಂಟ್ ಡೆಡ್" ಆಗುತ್ತಿರುವುದು!ಕಾಮೆಡ್-ಕೆ ಪ್ರಸ್ತುತ ಕ್ಲಿನಿಕಲ್ ವಿಷಯಗಳ ಸ್ನಾತಕೋತ್ತರ ಶಿಕ್ಷಣಕ್ಕೆ ಮೆರಿಟ್ ಸೀಟ್‌ಗಳಿಗೆ ವರ್ಷಕ್ಕೆ ಸುಮಾರು ಐದು ಲಕ್ಷ (5,01,600 ರು) ಶುಲ್ಕ ನಿಗದಿಪಡಿಸಿದೆ. ಮೂರು ವರ್ಷದ ಶಿಕ್ಷಣಕ್ಕೆ ವಿದ್ಯಾರ್ಥಿ ಹದಿನೈದು ಲಕ್ಷದಷ್ಟು ಶುಲ್ಕವೇ ನೀಡಬೇಕಾಗುತ್ತದೆ.
ಇದಲ್ಲದೆ ಕಾಲೇಜ್‌ಗಳಲ್ಲಿ ಬೇರೆ ಶುಲ್ಕ, ಖರ್ಚುಗಳು ಇರುತ್ತವೆ. ಎಷ್ಟೇ ಕಡಿಮೆ ಲೆಕ್ಕ ಹಾಕಿದರೂ ಮೂರು ವರ್ಷದಲ್ಲಿ ಸುಮಾರು ಇಪ್ಪತ್ತೈದು ಲಕ್ಷ ಖರ್ಚು ಆಗಿಯೇ ಆಗುತ್ತದೆ.ಪ್ರತಿ ವರ್ಷ ಸರ್ಕಾರೀ ಕಾಲೇಜ್‌ಗಳಲ್ಲಿ ಸೀಟ್ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಕಾಮೆಡ್-ಕೆಯವರು ಸೀಟ್ ಆಯ್ಕೆ ಪ್ರಕ್ರಿಯೆ ನಡೆಸುತ್ತಾರೆ. ಸರ್ಕಾರಿ ಕಾಲೇಜ್‌ಗಳ ಹಾಗೂ ಕಾಮೆಡ್-ಕೆ, ಸರಕಾರಕ್ಕೆ ಬಿಟ್ಟು ಕೊಡುವ ಸೀಟ್‌ಗಳಿಗೆ ಶುಲ್ಕ ಕಡಿಮೆ ಇರುತ್ತದೆ ಮತ್ತು ನುರಿತ ಸಿಬ್ಬಂದಿ, ಗುಣಮಟ್ಟದ ಸೌಲಭ್ಯಗಳು ಇರುವ ಕೆಲವು ಸರ್ಕಾರಿ ಕಾಲೇಜ್‌ಗಳಿಗೆ ತುಂಬಾ ಬೇಡಿಕೆ ಇದೆ. ಆದರೆ ಈ ಬಾರಿ ಕಾಮೆಡ್-ಕೆ ಸರ್ಕಾರಕ್ಕಿಂತ ಮೊದಲೇ ಕೌನ್ಸಿಲಿಂಗ್ ಮಾಡಿದೆ. ಇದರಿಂದಾಗಿ ಸರ್ಕಾರಿ ಕಾಲೇಜ್ ಸೀಟ್‌ಗಾಗಿ ಕಾಯದೆ ದುಬಾರಿ ಶುಲ್ಕ ನೀಡಿ ಕಾಮೆಡ್-ಕೆ ಸೀಟ್‌ಗಳನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾಯಿತು.
ಕಾಮೆಡ್-ಕೆ ಮೆರಿಟ್‌ಗೆ ಕೊಡುವ 42 ಪ್ರತಿಶತ ಸೀಟ್‌ಗಳಿಗೆ ಇಷ್ಟು ಶುಲ್ಕವಿದ್ದರೆ ಇನ್ನು ಉಳಿದ ಸೀಟ್‌ಗಳಿಗೆ ಎಷ್ಟು ಕೊಡಬೇಕಾಗಬಹುದು? ಈ ಬಗ್ಗೆ ಜನ ಸಾಮಾನ್ಯರಿಗೆ ಊಹಿಸುವುದಕ್ಕೂ ಕೂಡಾ ಕಷ್ಟ. ಉನ್ನತ ವೈದ್ಯಕೀಯ ಶಿಕ್ಷಣದ ಸೀಟ್‌ಗಳಿಗೆ ತೀರಾ ಸಾಮಾನ್ಯ ಹೆಸರುಳ್ಳ ಕಾಲೇಜ್‌ಗಳಿಗೆ ಒಂದು ಕೋಟಿಯಷ್ಟು ದುಡ್ಡು ಕೊಡಬೇಕು. ಇನ್ನು ಪ್ರಸಿದ್ಧ ಕಾಲೇಜ್‌ಗಳಲ್ಲಿ ಹೆಚ್ಚು ಬೇಡಿಕೆ ಇರುವ ವಿಭಾಗಗಳಲ್ಲಿ ಸೀಟ್ ಸಿಗಬೇಕಾದರೆ ಎರಡು ಮೂರು ಕೋಟಿಗಳಷ್ಟು ದುಡ್ಡು ಕೊಡಬೇಕಾಗುತ್ತದೆ, ಮೇಜಿನ ಅಡಿಯಿಂದ!ಹೀಗೆ ಕೋಟಿಗಟ್ಟಲೆ ದುಡ್ಡು ಖರ್ಚು ಮಾಡಿ ಕಲಿತು ಹೊರ ಬರುವ ಹೊತ್ತಿಗೆ ಇದು ಅಸಲು ಬಡ್ಡಿ ಸೇರಿ ಎಷ್ಟಾಗುವುದಿಲ್ಲ? ಇದನ್ನು ಇವರುಗಳು ಹಿಂದೆ ಪಡೆಯಬೇಡವೆ?! ಜೊತೆಗೆ ಘನತೆಗೆ ತಕ್ಕಂತೆ ಬಂಗಲೆ ಕಾರು ಇಟ್ಟುಕೊಂಡು ಬದುಕಬೇಡವೇ? ಇವರು ತಾವು ಕಲಿಯಲು ಖರ್ಚು ಮಾಡಿದ ಹಣವನ್ನು ಕೊನೆಯ ಪಕ್ಷ ಹತ್ತು ವರ್ಷಗಳಲ್ಲಿ ಹಿಂದೆ ಪಡೆಯಬೇಕಿದ್ದರೂ ವರ್ಷಕ್ಕೆ ಇಪ್ಪತ್ತು ಮೂವತ್ತು ಲಕ್ಷದಷ್ಟು ಗಳಿಸಬೇಕು ಜೊತೆಗೆ ಆಡಂಬರದ ಬದುಕಿಗೆ ದುಡ್ಡು ಬೇಕು. ಹಾಗಾಗಿ ಇವರು ದುಡ್ಡು ಗಳಿಸುವ ದಾರಿಯತ್ತ ಮಾತ್ರ ನೋಡುತ್ತಾರೆ.
ಆದ್ದರಿಂದಲೇ ಸ್ವಲ್ಪ ಬಿದ್ದು ತಾಗಿಯೋ, ಶೀತ ನೆಗಡಿಯಾಗಿಯೋ ಅಥವಾ ಇನ್ನೇನೋ ಆಗಿ ಡಾಕ್ಟರ್ ಹತ್ರ ಹೋದರೆ ರಕ್ತ ಪರೀಕ್ಷೆಯಿಂದ ಹಿಡಿದು ಎಕ್ಸ್‌ರೇ, ಸಿಟಿ ಸ್ಕ್ಯಾನಿಂಗ್, ಎಂಆರ್‌ಐ ಸ್ಕ್ಯಾನಿಂಗ್ ಇತ್ಯಾದಿ ಸಾವಿರ ಪರೀಕ್ಷೆಗಳನ್ನು ಮಾಡಿಸುತ್ತಾರೆ. ಅಲ್ಲಿಂದ ಸಾಕಷ್ಟು ಕಮಿಷನ್ ಬರುತ್ತದೆ. ಇದು ಉತ್ಪ್ರೇಕ್ಷೆಯ ಮಾತುಗಳಲ್ಲ. ಉನ್ನತ ವೈದ್ಯಕೀಯ ಶಿಕ್ಷಣದಲ್ಲಿ ಇಷ್ಟು ದೊಡ್ಡ ಸಮಸ್ಯೆ ಇದ್ದರೂ ಕೂಡ ನಾವೆಲ್ಲಾ ಅದು ಮೆಡಿಕಲ್ ಓದುವ ವಿದ್ಯಾರ್ಥಿಗಳ ಸಮಸ್ಯೆ ಮಾತ್ರ ಎಂದು ಸುಮ್ಮನಾಗುತ್ತೇವೆ. ಆದರೆ ಅದರ ದುಷ್ಪರಿಣಾಮ ನಮ್ಮ ಮೇಲೆ ಆಗುತ್ತದೆ ಎಂಬುದನ್ನು ನಾವು ಮರೆಯಬಾರದು. ಉನ್ನತ ಶಿಕ್ಷಣದ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕಲೇಬೇಕಾಗಿದೆ. ಈ ಬಗ್ಗೆ ಧ್ವನಿ ಎತ್ತಲೇಬೇಕಾದ ಅನಿವಾರ್ಯತೆ ಇದೆ. ಸರ್ಕಾರವೇ ಎಲ್ಲ ಉನ್ನತ ಶಿಕ್ಷಣ ಕಾಲೇಜ್‌ಗಳನ್ನು ನಡೆಸಿದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದೆನಿಸುತ್ತದೆ. ಆಗ ವೈದ್ಯರು ಯಮರಾಜನ ಸಹೋದರರಾಗದೆ ನಿಜಕ್ಕೂ ದೇವರಾಗಬಹುದು.- ಡಾ. ಲಕ್ಷ್ಮೀ .ಜಿ. ಪ್ರಸಾದ, ಉಪನ್ಯಾಸಕರು
(ಸೂಚನೆ:ಕೆಲವು ವರ್ಷಗಳ ಹಿಂದೆ ಬರೆದ ಬರಹ ಇದು..ಈಗ ನೀಟ್ ಮೂಲಕ ಆಯ್ಕೆ ಇದೆ.ಆದರೂ ಪರಿಸ್ಥಿತಿ ಹೀಗೆಯೇ ಇದೆ ಎಂದು ಅನೇಕರು ಹೇಳಿದ್ದಾರೆ )