ಅಂತರಾಷ್ಟ್ರೀಯ ಕ್ರಿಕೆಟಿನಲ್ಲಿ ಮಿಂಚಿದ ಮರೆಯಾದ “ಜಿಮ್ಮಿ”

ಜೇಮ್ಸ್ ಆಂಡರ್ಸನ್

ProfileImg
14 Nov '24
3 min read


image

ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಆದ ಅಧ್ಯಾಯವನ್ನ ರಚಿಸಿದ, ಖ್ಯಾತ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ತಮ್ಮ ಕ್ರಿಕೆಟ್ ಜೀವನಕ್ಕೆ ಇತ್ತೀಚಿಗೆ ನಿವೃತ್ತಿ ಘೋಷಿಸಿದ್ದಾರೆ. ಸತತ ಎರಡು ದಶಕಗಳಿಂದ ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗಿಯಾಗಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇವರ ನಿವೃತ್ತಿಗೆ ಕ್ರಿಕೆಟ್ ದಿಗ್ಗಜರು ಮತ್ತು ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

          ಜೇಮ್ಸ್ ಆಂಡರ್ಸನ್ ಕ್ರಿಕೆಟ್ ಜಗತ್ತಿನಲ್ಲಿ ಯಾವುದೇ ಗ್ಲಾಮರ್ ಇಲ್ಲದ ಒಬ್ಬ ಸಾಧಾರಣ ಬೌಲರ್. ಎರಡು ದಶಕಗಳಿಗೂ ಹೆಚ್ಚು ಕಾಲ ಆಡಿದ ಬೌಲರ್ನನ್ನು ಕಾಣಬಹುದು. ಆಸ್ಟ್ರೇಲಿಯಾದ ಗ್ಲೇನ್ ಮೆಕ್ಗ್ರಾತ್, ಬ್ರೆಟ್ ಲೀ, ಮಿಷೆಲ್ ಜಾನ್ಸನ್, ದಕ್ಷಿಣ ಆಫ್ರಿಕದ ಶಾನ್ ಪೊಲಾಕ್, ಡೇಲ್ ಸ್ಟೇನ್, ಭಾರತದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಜಹೀರ್ ಖಾನ್, ಆಶಿಶ್ ನೆಹ್ರಾ, ಪಾಕಿಸ್ತಾನದ ಶೋಯಿಬ್ ಅಖ್ತರ್, ವಾಸಿಂ ಅಕ್ರಂ, ವಕ್ಕರ್ ಯೂನಿಸ್ ಮುಂತಾದ ಬೌಲರ್ಗಳಿಗೆ ಸಿಕ್ಕ ಅವಕಾಶಗಳು, ಗೌರವ, ಪ್ರಚಾರ ಆಂಡರ್ಸನ್ ಅವರಿಗೆ ಸಿಕ್ಕಿದೆ.

ಆಂಡರ್ಸನ್ ಕ್ರಿಕೆಟ್ ಪಾದಾರ್ಪಣೆ ಜೋರಾಗಿ ಇರಲಿಲ್ಲ. 2002ರ ಮೆಲ್ಬೋರ್ನ್ನಲ್ಲಿ ಆಸ್ಟ್ರೇಲಿಯಾದ ವಿರುದ್ದ ಅಂತರಾಷ್ಟ್ರೀಯ ಕ್ರಿಕೆಟಿಗೆ ಬಂದರು. ಆರು ಓವರ್ಗಳಲ್ಲಿ 46 ರನ್ ನೀಡಿ ಒಂದು ವಿಕೆಟ್ ಪಡೆಯಲು ಮಾತ್ರ ಯಶಸ್ವಿಯಾದರು. ನಂತರ ನಡೆದ ಎಲ್ಲಾ ವಿದ್ಯಾಮಾನಗಳು ಇತಿಹಾಸ. 2003ರ ವಿಶ್ವಕಪ್ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾದ ಜೇಮ್ಸ್ ಆಂಡರ್ಸನ್ ಪಾಕಿಸ್ತಾನದ ವಿರುದ್ದ ನಾಲ್ಕು ವಿಕೆಟ್ ಕಿತ್ತು ಪಂದ್ಯಶ್ರೇಷ್ಠರಾಗಿದ್ದಲ್ಲದೇ ಪಾಕಿಸ್ತಾನದ ಎದುರು ಇಂಗ್ಲೆಂಡಿಗೆ ಜಯಕ್ಕೆ ಕಾರಣರಾದರು. ಅದೇ ವರ್ಷ ಜಿಂಬಾಬ್ಬೆ ವಿರುದ್ದ ಟೆಸ್ಟ್ ಕ್ರಿಕೆಟಿನಲ್ಲಿ ಕಾಣಿಸಿಕೊಂಡು 5 ವಿಕೆಟ್ಗಳನ್ನು ಪಡೆಯುವ ಮೂಲಕ ತನ್ನ ವೃತ್ತಿ ಜೀವನವನ್ನು ಆರಂಭಿಸಿದರು ಜೊತೆಗೆ ಇಂಗ್ಲೆಂಡ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದರು. 

ವಿಶ್ವ ಕ್ರಿಕೆಟ್ ಜಗತ್ತನ್ನು ಆಸ್ಟ್ರೇಲಿಯಾ ತಂಡ ಆಳುತ್ತಿದ್ದ ಕಾಲ. ಆರಂಭದಲ್ಲಿ ಸ್ವೀವ್ ವಾ, ಆನಂತರ ರಿಕಿ ಪಾಂಟಿಂಗ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಇಡೀ ವಿಶ್ವ ಕ್ರಿಕೆಟನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡ ಕಾಲವಾಗಿತ್ತು. ಆದರೆ 2003-04ರಲ್ಲಿ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ತಂಡಕ್ಕೆ ಬಲವಾದ ಪೆಟ್ಟುಕೊಟ್ಟಿತು. 

2005 ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅವಿಸ್ಮರಣಿಯ ವರ್ಷ. ಹದಿನೆಂಟು ವರ್ಷಗಳ ನಂತರ ಆಸ್ಟ್ರೇಲಿಯಾ ನೆಲದಲ್ಲೇ ಆಸ್ಟ್ರೇಲಿಯಾ ತಂಡವನ್ನೇ ಸೋಲಿಸಿ ಆಶಿಸ್ ಸರಣಿ ಗೆದ್ದುಕೊಂಡರು. ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿದ್ದ ತಂಡವನ್ನು ಸೋಲಿಸಿ ಇತಿಹಾಸವನ್ನು ನಿರ್ಮಿಸಿದರು. ಮೈಕಲ್ ವಾನ್ ನೇತೃತ್ವದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾದ ಅಟ್ಟಹಾಸವನ್ನು ಮಟ್ಟಹಾಕಿ ಆಶಿಸ್ ಸರಣಿ ಗೆದ್ದ ವರ್ಷವಾಗಿದೆ. ಆದರೆ ಇಂತ ಸಾಧನೆ ಮಾಡಿದ ತಂಡದಲ್ಲಿ ಜೇಮ್ಸ್ ಆಂಡರ್ಸನ್ ಮಾತ್ರ ಇರಲಿಲ್ಲ. 2010-11 ರಿಂದ ಇಂಗ್ಲೆಂಡ್ ತಂಡದ ಅವಿಭಾಜ್ಯ ಅಂಗವಾಗಿದ್ದ “ಜಿಮ್ಮಿ”, ಇಂಗ್ಲೆಂಡ್ ತಂಡವು 24 ವರ್ಷಗಳ ಬಳಿಕ ಕಾಂಗರೂಗಳನ್ನು ಅವರ ನೆಲದಲ್ಲೇ ಸೋಲಿಸಿದ್ದಾಗ ಸರಣೆಯಲ್ಲಿ 24 ವಿಕೆಟ್ ತೆಗೆದು ಗರಿಷ್ಟ ಬೌಲರ್ ಆಗಿ ಕಾಣಿಸಿಕೊಂಡರು. 

          ಆಂಡರ್ಸನ್ ಅವರ ಈ ಸುದೀರ್ಘ ಅವಧಿಯ ದೈಹಿಕ ಕ್ಷಮತೆಗೆ ಅವರನ್ನು ಇಂಗ್ಲೆಂಡ್ ಬಳಸಿಕೊಂಡ ರೀತಿಯೂ ಕಾರಣ ಎನ್ನಬಹುದು. ಆಂಡರ್ಸನ್ ಅವರನ್ನು ದೀರ್ಘಾವಧಿ ಕ್ರಿಕೆಟಿಗಾಗಿಯೇ ಮೀಸಲಾಗಿಟ್ಟಿತು. ಟಿ20 ಮತ್ತು ಏಕದಿನ ಪಂದ್ರಗಳಲ್ಲಿ ಅವರನ್ನು ಹೆಚ್ಚು ಆಡಿಸದೇ ಕೇವಲ ಟೆಸ್ಟ್ ಕ್ರಿಕೆಟಿಗಾಗಿಯೇ ಮೀಸಲಾಗಿಟ್ಟರು. ತಮ್ಮ ದೇಶದ ಇತರ ಆಟಗಾರರೆಲ್ಲ ಐಪಿಎಲ್ ಆಡಲು ನಿರ್ಧರಿಸಿದರೂ ಕೂಡ ಆಂಡರ್ಸನ್ ಮಾತ್ರ ಇತ್ತ ಕಡೆ ಗಮನ ನೀಡಲಿಲ್ಲ. ಹಾಗಾಗಿಯೇ ಅವರು ಎರಡು ದಶಕಗಳಷ್ಟು ಟೆಸ್ಟ್ ಕ್ರಿಕೆಟ್ ಆಡಲು ಸಾಧ್ಯವಾಯಿತು. ಇನ್ನೂ ಟೆಸ್ಟ್ ಕ್ರಿಕೆಟಿನಲ್ಲಿ ನೂರು ಟೆಸ್ಟ್ ಆಡಿರುವವರ ಪಟ್ಟಿ ನೋಡಿದಾಗ ಬ್ಯಾಟರ್ಗಳ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಅದು ಬಿಟ್ಟರೆ ಸ್ಪಿನ್ನರ್ಗಳನ್ನ ಕಾಣಬಹುದು ಅಷ್ಟೇ. ವೇಗದ ಬೌಲರ್ಗಳ ಪಟ್ಟಿ ನೋಡಿದರೆ ಭಾರತದ ಕಪಿಲ್ ದೇವ್, ಆಸ್ಟ್ರೇಲಿಯಾದ ಗ್ಲೇನ್ ಮೆಕ್ಗ್ರಾತ್, ಬ್ರೆಟ್ ಲೀ, ದಕ್ಷಿಣ ಆಫ್ರಿಕದ ಶಾನ್ ಪೊಲಾಕ್ ಮತ್ತು ಮಖಾಯ ಎಂಟಿನಿ, ಪಾಕಿಸ್ತಾನದ ವಾಸಿಂ ಅಕ್ರಂ ಹೀಗೆ ಅಂಥವರ ಸಾಲಿಗೆ ಆಂಡರ್ಸನ್ ಹೊಸ ಹೆಸರು ಅಂತ ಹೇಳಬಹುದು. ಏಕೆಂದರೆ ಆಂಡರ್ಸನ್ 188 ಪಂದ್ಯವನ್ನಾಡಿರುವುದು ನಿಜಕ್ಕೂ ವಿಶೇಷ. 

ಇಂಗ್ಲೆಂಡ್ ತಂಡದ ಮತ್ತೊಬ್ಬ ಬೌಲರ್ ಸ್ಟುವರ್ಟ್ ಬ್ರಾಡ್ ಜೊತೆ ಸೇರಿಕೊಂಡು ಅನೇಕ ದಾಖಲೆಗಳನ್ನು ನಿರ್ಮಿಸಿದರು. ಬ್ರಾಡ್ ಜೊತೆ ಆಡುತ್ತಿದ್ದಾಗ 150ಕ್ಕೂ ಹೆಚ್ಚು ಟೆಸ್ಟ್ ಆಡಿ 600ಕ್ಕೂ ಹೆಚ್ಚು ವಿಕೆಟ್ ಪಡೆದ ಕ್ರಿಕೆಟ್ ಜಗತ್ತಿನ ಏಕಮಾತ್ರ ವೇಗದ ಬೌಲಿಂಗ್ ಜೋಡಿಯಾಗಿತ್ತು. ಈ ದಾಖಲೆಗಳನ್ನು ಕ್ರಿಕೆಟ್ ಜಗತ್ತಿನಲ್ಲಿ ಮುಂದೆ ಸಹ ಯಾರಾದರೂ ಮುರಿಯಬಲ್ಲರು ಎನ್ನಿಸುವುದಿಲ್ಲ. ಏಕೆಂದರೆ ವೇಗಿಗಳಿಬ್ಬರು, ಒಂದೇ ತಂಡದಿಂದ 150ಕ್ಕೂ ಹೆಚ್ಚು ಟೆಸ್ಟ್ ಆಡಿ 600ಕ್ಕೂ ಹೆಚ್ಚು ವಿಕೆಟ್ ತೆಗೆಯುವುದು ಅಪರೂಪದ ಕ್ಷಣವಾಗಿದೆ. ಕ್ರಿಕೆಟ್ ಜಗತ್ತಿನಲ್ಲಿ ಇಂಥ ಇನ್ನೊಂದು ವೇಗದ ಬೌಲರ್ಗಳ ಜೋಡಿಗಳನ್ನ ನೋಡಲು ಸಾಧ್ಯವಾಗುವುದಿಲ್ಲ ಎಂದು ಹೆಮ್ಮೆಯಿಂದ ಹೇಳಬಹುದು. ಹರ್ಭಜನ್ ಸಿಂಗ್ ಅವರಿಗೆ “ಭಜ್ಜಿ”, ಅನಿಲ್ ಕುಂಬ್ಳೆ ಅವರಿಗೆ “ಜಂಬೋ” ಅಂತ ಅಡ್ಡಹೆಸರು ಇರುವಂತೆ ಜೇಮ್ಸ್ ಅಂಡರ್ಸನ್ ಅವರಿಗೆ “ಜಿಮ್ಮಿ” ಮತ್ತು “ಕಿಂಗ್ ಆಫ್ ಸ್ವಿಂಗ್” ಅಂತ ಅಡ್ಡಹೆಸರು ಇರುವುದನ್ನ ನಾವು ಗಮನಿಸಬಹುದು. 

ಜೇಮ್ ಆಂಡರ್ಸನ್ ಅವರು ಟೆಸ್ಟ್ ಕ್ರಿಕೆಟಿನಲ್ಲಿ ಬರೋಬ್ಬರಿ 40,000ಕ್ಕೂ ಅಧಿಕ ಬೌಲ್ ಮಾಡಿದ್ದಾರೆ. ತಮ್ಮ ಕೊನೆಯ ಟೆಸ್ಟ್ ಪಂದ್ಯದಲ್ಲಿ 40,000 ಎಸೆತಗಳ ಗಡಿ ದಾಟಿದ ಆಂಡರ್ಸನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ವೇಗದ ಬೌಲರ್ ಎನಿಸಿಕೊಂಡರು. ಇದಲ್ಲದೆ ಒಟ್ಟಾರೆ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ 50,000 ಚೆಂಡುಗಳನ್ನು ಬೌಲ್ ಮಾಡಿದ ವಿಶ್ವದ ಏಕೈಕ ವೇಗದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ತಮ್ಮ 21 ವರ್ಷಗಳ ಸುದೀರ್ಘ ಅವಧಿಯಲ್ಲಿ 704 ವಿಕೆಟ್ಗಳನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾ ಎದುರು ಒಟ್ಟು 39 ಟೆಸ್ಟ್ ಆಡಿ, 117 ವಿಕೆಟ್ ತೆಗೆದಿದ್ದಾರೆ. ಭಾರತದ ವಿರುದ್ದ 39 ಟೆಸ್ಟ್ ಆಡಿದ ಆಂಡರ್ಸನ್ ಅವರು 149 ಭಾರತೀಯ ಕ್ರಿಕೆಟಿಗರ ವಿಕೆಟ್ ಪಡೆದಿದ್ದಾರೆ.

ಟೆಸ್ಟ್ ಅಲ್ಲದೆ, ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ ಪರ ಏಕದಿನದಲ್ಲೂ ಅದ್ಬುತ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್ ಪರ 194 ಏಕದಿನ ಪಂದ್ಯಗಳನ್ನಾಡಿರುವ ಅವರು 29.22 ಸರಾಸರಿಯಲ್ಲಿ 269 ವಿಕೆಟ್ಗಳನ್ನು ಪಡೆದಿದ್ದಾರೆ. ಏಕದಿನದಲ್ಲಿ ಎರಡು ಬಾರಿ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಇದಲ್ಲದೇ ಆಂಡರ್ಸನ್ ಇಂಗ್ಲೆಂಡ್ ಪರ 19 ಟಿ20 ಪಂದ್ಯಗಳನ್ನು ಆಡಿದ್ದು, 7.84ರ ಎಕಾನಮಿಯಲ್ಲಿ 18 ವಿಕೆಟ್ಗಳನ್ನು ಪಡೆದಿದ್ದಾರೆ. 

ಇತ್ತೀಚೆಗೆ ನಿವೃತ್ತರಾದ ಟೆಸ್ಟ್ ಸ್ಪೆಷಲಿಸ್ಟ್ ಆಂಡರ್ಸನ್ ಜುಲೈ 2024ರಲ್ಲಿ ಲಾರ್ಡ್ಸ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ನಿವೃತ್ತಿಯ ನಂತರ ಇಂಗ್ಲೆಂಡ್ ತಂಡದೊಂದಿಗೆ ಮೆಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ 40 ವರ್ಷ ಪ್ರಾಯದ ಆಂಡರ್ಸನ್ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಆಡುವುದಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

Category:Sports



ProfileImg

Written by santhosh m

ಹವ್ಯಾಸಿ ಬರಹಗಾರ

0 Followers

0 Following