ಹೇ... ಮೂರ್ಖ... ಮನುಜರೇ...
ನಾ.. ಬರುತ್ತಿಲ್ಲವೆಂದು ದೂಷಿಸಬೇಡಿ….ನನ್ನನ್ನು
ನಾ..ಬರುವ ಹಾದಿಯನ್ನೆಲ್ಲ ಮುಚ್ಚಿ ಅಟ್ಟಹಾಸದಿ
ತೋರುತ್ತಿರುವಿರಿ ನಿಮ್ಮಯ ಸ್ವಾರ್ಥವನ್ನು
ಕಾಡುಗಳನ್ನು ಕಡಿದು ಕಟ್ಟಿರುವಿರಿ ನಾಡನ್ನು
ಪ್ಲಾಸ್ಟಿಕ್ ಎಂಬ ವಿಷ ಉಣಿಸಿ ಬತ್ತಿಸಿರುವಿರಿ
ನನ್ನಯ ನೀರಿನ ಸೆಲೆಯನ್ನು
ಮತ್ಹೇಗೆ....ಮನ್ನಿಸಲಿ ನಾ ..
ನಿಮ್ಮಯ ಘೋರ ...ತಪ್ಪನ್ನು...?
ನೀ ಮಾಡಿದ ತಪ್ಪಿಗೆ ಬೇಯುತ್ತಿದೆ ವಸುದೆಯೊಡಲು
ಬಳಲಿ ಚೀತ್ಕರಿಸುತ್ತಿವೆ ಪ್ರಾಣಿ ಪಶು ಪಕ್ಷಿ ಸಂಕುಲನಗಳು
ಬತ್ತಿ.. ಬತ್ತಿ..ಒಣಗುತ್ತಿವೆ ಹಸಿರು ಗಿಡ ಮರಗಳು..!
ಕುಡಿಯಲು ನೀರು ಸಿಗುತ್ತಿಲ್ಲ
ಮಲಗಲು ಎಲ್ಲೂ ನೆರಳಿಲ್ಲ
ಇರಲು ನಿಮ್ಮಂತೆ ಅವರಿಗೆ ಸೂರಿಲ್ಲ !
ಹಸಿರಿಗೆ ಉಸಿರಾಗಿ; ಧಾಹಕ್ಕೆನೀರಾಗಿ
ಉರಿಯುತ್ತಿರುವ ಬಿರು ಬಿಸಿಲಿಗೆ ತಂಪಾಗಿ
ಸುಡುವ ಅವನಿಯ ತಾಪಕ್ಕೆ ತುಂತುರುವಾಗಿ
ತಂಗಾಳಿಯೊಂದಿಗೆ ಸುರಿದುಬಿಡು
ಭುವಿಗೆ ಅಮೃತದ ಸಿಂಚನವಾಗಿ... !
ಮನುಜರ ತಪ್ಪನ್ನೆಲ್ಲಾ ಮನ್ನಿಸಿ
ಬಿರಿದ ಧರಣಿಯೊಡಲ ಬೇಗೆಯ ತಣಿಸಿ
ಇಳೆಗೆ ವರ್ಷ ಧಾರೆಯ ಹರಿಸಿಬಿಡು ನಮ್ಮನ್ನು ಕರುಣಿಸಿ
ಹೀಗೆಂದು ನೊಂದು ಬೊಬ್ಬಿಡುತ್ತಿವೆ; ಮೂಕ
ಸಂಕುಲನಗಳು ನನ್ನನ್ನು ಪ್ರಾರ್ಥಿಸಿ !
Author ✍️
0 Followers
0 Following