"ಆಕಸ್ಮಿಕವಾಗಿ ದೊರೆತ ಸಹಾಯ"

ಸಹಾಯವೆನ್ನಲೋ, ಉಪಕಾರವೆನ್ನಲೋ, ಋಣವೆನ್ನಲೋ ತಿಳಿಯದು



image

    ನನ್ನದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪುಟ್ಟ ಊರು. ಪದವಿ ಶಿಕ್ಷಣವನ್ನು ಆಗಷ್ಟೇ ಮುಗಿಸಿ ಉದ್ಯೋಗವನ್ನು ಅರಸುತ್ತಿದ್ದ ದಿನಗಳು, ಜೊತೆಗೆ ನಿರಾಸೆ, ಹತಾಶೆಯಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದ ದಿನಗಳು. ಯಾಕೆಂದರೆ ಶಿಕ್ಷಣಕ್ಕಾಗಿ ಮಾಡಿದ ಸಾಲದ ಹೊಣೆ ನನ್ನ ಹೆಗಲ ಮೇಲಿತ್ತು. ಮನೆಯವರಿಗೆ ಹೊರಿಸದೆ ನಾನೇ ತೀರಿಸಬೇಕೆಂಬ ಛಲವಿತ್ತು.

         ಆಗಾಗ ಮಂಗಳೂರಿಗೆ ಉದ್ಯೋಗದ ಸಂದರ್ಶನಕ್ಕಾಗಿ ಹೋಗುತ್ತಿದ್ದೆ. ಎಷ್ಟೋ ಬಾರಿ ಹೋಗುತ್ತಿದ್ದ ನನಗೆ ಅದೊಂದು ಮರೆಯಲಾಗದ ಕ್ಷಣ. ಆ ದಿನ ಮಂಗಳೂರಿನ ಒಂದು ಪ್ರಸಿದ್ಧ ಫೈನಾನ್ಸ್ ಕಂಪೆನಿಗೆ ಸಂದರ್ಶನಕ್ಕೆಂದು ಹೊರಟಿದ್ದೆ. ಯಾವುದೋ ಒಂದು ನಿರ್ದಿಷ್ಟ ಜಾಗದಲ್ಲಿ ಇಳಿಯಬೇಕಾದವಳು, ಇನ್ಯಾವುದೋ ಜಾಗದಲ್ಲಿ ಇಳಿದೆ. ಏನೂ ಗೊತ್ತಾಗದೇ ದಿಕ್ಕೇ ತೋಚದಂತಾಗಿತ್ತು. ಆಗದ ಮನಸ್ಥಿತಿಗೂ, ಈಗದ ಮನಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಪ್ರಬುದ್ಧತೆಯ ಮಟ್ಟ, ದೈರ್ಯದ ಮಟ್ಟ, ಆತ್ಮವಿಶ್ವಾಸದ ಮಟ್ಟ ಒಮ್ಮೊಮ್ಮೆ ನಮ್ಮ ಸಂದರ್ಭಕ್ಕೆ  ತಕ್ಕಂತೆ, ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ.

       ದಿಕ್ಕೇ ತೋಚದೇ ಇರುವಾಗ  ಆಕಸ್ಮಿಕವಾಗಿ ಒಬ್ಬ ಅಪರಿಚಿತ ವ್ಯಕ್ತಿ ಬಂದರು. ಅವರು ಏನೂ ಎತ್ತ ಅಂತ ವಿಚಾರಿಸಿ, ನಾನು ಹೋಗಬೇಕಾದ ಜಾಗಕ್ಕೆ ಸ್ವತಃ ಅವರೇ ತಲುಪಿಸಿದರು. ಅವರ ಹೆಸರಾಗಲೀ, ಅವರ ಬಗ್ಗೆ ಬೇರೇನೂ ಮಾಹಿತಿಯು ನನಗೆ ಗೊತ್ತಿರಲಿಲ್ಲ. ಆ ಕ್ಷಣಕ್ಕೆ ಆಪತ್ಭಾಂಧವನಂತೆ ಕಂಡರು. ಮನೆಯಲ್ಲಿ ಹೇಳಿದಾಗ ಅಮ್ಮನೂ ಖುಷಿ ಪಟ್ಟರು. ಖುಷಿಯೊಂದಿಗೆ, ಬೇರೆ ಎಲ್ಲಿಗಾದರೂ ಕರೆದುಕೊಂಡು ಹೋಗುತ್ತಿದ್ದರೆ, ಏನಾಗುತ್ತಿತ್ತು ಎಂಬ ಆತಂಕ.  ಆ ವ್ಯಕ್ತಿಗೆ ನನ್ನ ಜೊತೆ ಹಿಂದಿನ ಜನ್ಮದಲ್ಲಿ ಏನೋ ಒಂದು ಋಣ ತೀರಿಸಲು ಬಾಕಿಯಿತ್ತು ಎಂದು ನನ್ನ ಅನಿಸಿಕೆ. ಇಲ್ಲದಿದ್ದರೆ ಅಷ್ಟೊಂದು ದೊಡ್ಡ ಜನಸಮೂಹದಲ್ಲಿ ಯಾರು, ಹೇಗೆ ಎಂದು ಅರಿಯುವವರಾರು. 

        ಸಹಾಯವೋ, ಉಪಕಾರವೋ, ಋಣವೋ ಏನೆಂದು ಹೇಳಲಿ, ಪದಗಳೇ ಸಿಗದು. ಎಲ್ಲಿದ್ದರೂ, ಹೇಗಿದ್ದರೂ ಆ ಪರೋಪಕಾರಿ ಅಣ್ಣ ಖುಷಿಯಾಗಿರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ಇದೊಂದು ನೆನಪಿನಂಗಳದಿ ಇನ್ನೂ ಮಾಸಿ ಹೋಗದೇ ಉಳಿದಿರುವ ಘಟನೆಯಾಗಿದೆ.

Category:Personal Experience



ProfileImg

Written by ಸ್ವಾತಿ ಎಂ.ಪಿ.