ಕೊಳಲಿಗೋ ತನ್ನೊಡಲಿಗೆ ಗಾಳಿ ತುಂಬುವ ತುಟಿಯ ನಿರೀಕ್ಷೆ
ಸ್ವರಕ್ಕೆ ಲಯ ನೀಡುವ ಬೆರಳಿಂದ ಬೆನ್ನು ತಟ್ಟಿಸಿಕೊಳ್ಳೊ ಬಯಕೆ
ಬಿದಿರ ಕೊಳಲಿಗೆ ತನ್ನ ಏದುಸಿರನು
ಬಸಿ ಬಸಿದು ತುಂಬಿದಂತೆ
ಸವಿ ನಿನಾದವ ಆಲಿಸುವ ಎದೆಗೂಡ ಹಕ್ಕಿಗೋ ಭಾವಪರವಶತೆ
ಕೊಳಲ ನುಡಿಸುವವಗೆ ಜಗದ ಪರಿವೆಯಿಲ್ಲ, ಧ್ಯಾನಮಗ್ನನಾತ
ಉಸಿರು ತುಂಬಿದಾಗ ನಾದ ತರಂಗದಿ ಜೀವಕಳೆಯೋ ಅದ್ಭುತ
ಊದಿದುಸಿರು ಗಾಳಿಯಲಿ ಲೀನವಾಗುತ್ತಾ ಸಾಗುವುದು ಮತ್ತೆ,
ಮಣ್ಣಿಂದಲೇ ಬಂದು ಮಣ್ಣ ಗರ್ಭವನೆ ಸೇರುವ ನೀತಿಯಂತೆ
ಎತ್ತಣ ಬಿದಿರು ? ಯಾರ ಉಸಿರು ? ಪ್ರಶ್ನೆಗಳ ಕೇಳುವರಾರಿಲ್ಲ
ನಾದಕೆ ತಲೆದೂಗುವಾತಗೆ ಕೊಳಲನೂದಿದ ಉಸಿರ ಜಾತಿ ಬೇಕಿಲ್ಲ
ಕೊಳಲು, ಉಸಿರಿನ ಬಾಂಧವ್ಯ ಮಧುರವಾಗಿ ಹೊರಹೊಮ್ಮುವುದು
ಮುರಿದಾಗ ಕೊಳಲು, ಕಡಿದು ಗಾಳಿಯ ನಂಟು ಕಟ್ಟಿಗೆಯಾಗುವುದು
0 Followers
0 Following