ಅಮ್ಮನ ಮಡಿಲು ಮಡದಿಯ ಒಡಲು ಭೂಲೋಕದ ಸ್ವರ್ಗಗಳು

ProfileImg
28 Mar '24
4 min read


image

ಹೌದು ನಾನು ನೀನು ಒಬ್ಬರನ್ನೊಬ್ಬರು ಪ್ರೀತಿಸೋದಕ್ಕೆ ಶುರು ಮಾಡಿ ಇವತ್ತಿಗೆ ಒಂದು ವರ್ಷ ಕಳೀತು. ಹೇಗೆ ಕಳಿತು ಎಲ್ಲಾ ನಿನ್ನೆ ಮೊನ್ನೆ ಶುರುವಾದಂಗಿದೆ. ನಿನ್ನ ಮಡಿಲಲ್ಲಿ ಮಲಗ್ತಾ ಮಲಗ್ತಾ ಕಾಲ ಕಳೆದದ್ದೇ ಗೊತ್ತಾಗಲಿಲ್ಲ ಯಾನಿ. ನಮ್ಮ ಪರಿಚಯ ನಾನ್ ನಿನ್ನ ಹಿಂದೆ ಬಿದ್ದದ್ದು. ನಿನ್ನ ಒಲಿಸೋಕೆ ಪಟ್ಟ ಪಾಡು. ಕೆಲವೊಮ್ಮೆ ಸೋತೋಗ್ಬಿಡ್ತಿದ್ದೆ ಯಾನಿ. ಇದೆಲ್ಲ ಬೇಕಾ ಅನ್ಸಿಬಿಡೋದು ಬೇಡವೇ ಬೇಡ ಅಂತ ದೂರ ಹೋಗೋಕೆ ತುಂಬಾ ಪ್ರಯತ್ನ ಪಟ್ಟಿದಿನಿ ಯಾನಿ ಆದ್ರೆ ಅಮ್ಮ ಹೇಳ್ತಿದ್ದ ಋಣಾನುಬಂಧ ನಿಜ ಅನ್ಸುತ್ತೆ ಹೇಗೆ ಕಟ್ಟಿ ಹಾಕಿ ಬಿಡ್ತು ಇಬ್ಬರನ್ನು. ಎಷ್ಟು ಕಿತ್ತಾಡ್ಕೊಂಡಿದ್ವಿ ನೋಡಿರೋರೆಲ್ಲ ಎಷ್ಟ ಗಲಾಟೆ ಮಾಡ್ತೀರೋ ಅಂತಿದ್ರು, ಇವ್ರಿಬ್ರು ಈ ಜನುಮದಲ್ಲಿ ಒಂದಾಗಲ್ಲ ಅಂತಿದ್ರು. ಆದ್ರೂ ಹೇಗೆ ಅಂಟಿ ಕೊಂಡ್ವಿ ಅಲಾ ಮಿಂಚು ಬಾರದೆ ಸಿಡಿಲು ಬರಲ್ಲ ಅನ್ನೋ ಹಾಗೆ ನೀನಿಲ್ಲದೆ ನಾನಿಲ್ಲ ಅನ್ನೋಥರ ಆಗಿದ್ದಿವಿ. ಕೆಲವಂದ್ಸಾರಿ ಎಲ್ಲ ಕನ್ಸು ಅನ್ಸಿ ಬಿಡುತ್ತೆ ಯಾನಿ. ಮತ್ತೆ ಮರಳಿ ಆ ಕ್ಷಣಗಳು ಬಂದ್ರೆ ಹೇಗಿರುತ್ತೆ ಅಲ್ವಾ?. ನಿನ್ನ ನೋಡಿದ ಆ ಕ್ಷಣನೇ ಈ ಮನಸ್ಸು ಇವ್ಳು ನನ್ನವಳೇ ಅಂತ ನಿರ್ಧಾರ ಮಾಡಿತ್ತು ಆವತ್ತಿನಿಂದ ಶುರು ನಿನ್ ಹಿಂದೆ ಸುತ್ತಾಟ. ಕೇವಲ ಪುಸ್ತಕ, ಓದು, ಗೀಚು, ಅಮ್ಮ ಅಷ್ಟೇ ನನ್ನ ಪ್ರಪಂಚವಾಗಿತ್ತು. ನೀನು ಬೇಕು ಅಂತ ಅನ್ಸಿದ್ದೆ ನನ್ಗೂ ತಿಳಿಯದ ನಿಗೂಢ ರಹಸ್ಯ. ಯಾವಾಗ ನೀನು ನನ್ನ ಪ್ರಪಂಚವಾದೆಯೋ ಗೊತ್ತಿಲ್ಲ. 
ಈ ಗಾಳಿ ತಂಪು ವಾತಾವರಣ ಯೆಲ್ಲಾ ನೆನಪುಗಳನ್ನ ನನಗಾಗಿಯೇ ಹೊತ್ತು ತರುತ್ತಿದೆಯೆನೋ ಎನ್ನುವಂತಿದೆ ಯಾನಿ. ಈ ಗಾರ್ಡನ್ನು ಈ ಬೆಂಚು ಅದ್ರ ಮೇಲೆ ನೀನು ನಿನ್ ಮಡಿಲಲ್ಲಿ ನಾನು. ಎಲ್ಲಾ ನೋಡ್ತಿದ್ರೆ ಊಹೆಗೂ ಮೀರಿದ ಹಿತವಾದ ಬದುಕು ಅನ್ಸುತ್ತೆ. ಸಿಂಪಲ್ ಆದ್ರು ಸೂಪರ್ ಆಗಿದೆ. ಆಡಂಬರ ಇಲ್ಲ ಸರಳವಾದ ಜೀವನ. ಈ ಒಂದು ವರ್ಷ ಕಳೆದ ಹಾಗೆ ನಿನ್ನ ನಗುಸ್ಕೊಂಡು ಆ ನಗು ಮೊಗವನ್ನ ನೋಡಿಕೊಂಡು ಈ ಪೂರ್ತಿ ಬದುಕನ್ನ ಕಳೀಬೇಕು ಅನ್ನೋ ಆಸೆ ಯಾನಿ ನಂಗೆ. ನೆರವೇರುತ್ತಲ್ವ ನನ್ನ ಆಸೆ ನೀನು ನನ್ನ ಜೊತೆಗೇ ಇರ್ತಿಯಾ ಅಲ್ಲವ ಯಾನಿ. ನಿನ್ನ ಬಿಟ್ಟೋಗಬೇಕು ಅಂತ ಅಂದ್ಕೊಂಡ ಪ್ರತೀ ಸಾರಿನು ನಿನಿಲ್ಲದ ಆ ಬದುಕು ನೆನ್ಸ್ಕೊಂಡ್ರೆ ಭಯ ಆಗ್ತಿತ್ತು ಅದಿಕ್ಕೆ ನೀನೆಷ್ಟು ಕೋಪ ಮಾಡಿಕೊಂಡ್ರೂ ನಿನ್ನ ಹಿಂದೆ ಬರ್ತಾ ಇದ್ದದ್ದು.  ನೀನು ಹೇಗಿದ್ದೀಯ ಟ್ರಾವಲ್ ಮಾಡುವಾಗ ಲೊಕೇಷನ್ ರೀಚ್ ಆದಿಯಾ ಅಂದಾಗ್ಲೆಲ್ಲ ಅದೆಲ್ಲ ನಿನಗ್ಯಾಕೆ ಅಂತಿದ್ದೆ ನೀನು. ನನಗೆ ಮುಂದಿನ ಮಾತುಗಳೇ ತೋಚುತ್ತಿರ್ಲಿಲ್ಲ ಇದಕ್ಕೇನ್ ಹೇಳೋದು ಅನ್ಸಿಬಿಡೋದು ನನ್ ಪ್ರೀತಿ ಇವಳಿಗ್ಯಾಕೆ ಅರ್ಥವಾಗ್ತಿಲ್ಲ ಅನ್ಸಿ ಬಿಡ್ತಿತ್ತು. ಕೆಲ್ವೊಂದ್ಸಾರಿಯಂತು ಪ್ರಾಣಾನೇ ಹೋದಂಗಾಗೋದು ಗೊತ್ತ. ಆವಾಗ್ಲೆಲ್ಲ ತಣ್ಣಗಾಗೋಕೆ ಒಂದು ಹಾಡು ಬರ್ದಿದ್ದೀನಿ

ಎಲ್ಲವೂ ತಿಳಿದರೂ ಏನನ್ನೂ ಅರಿಯದಂತೆ 
ಹೇಳುತಾಳವಳು, ಅದೆಲ್ಲ ನಿಮಗ್ಯಾಕ್ರಿ ಅಂದೆ

ಇರುಳೆಲ್ಲ ಕಾದೆ, ಹಗಲೆಲ್ಲ ನೊಂದೆ
ಒಳಗೊಳಗೆ ನಾನೆಷ್ಟು ಬೆಂದೆ
ತಿಳಿಯ ಬಯಸಿ ನಿನ್ನೊಳಗಿನ ಕ್ಷೇಮವ
ಹೇಗಿರುವೆಯೆಂದು ಕೇಳ ಬಂದರೆ

ಎಲ್ಲವೂ ತಿಳಿದರೂ ಏನನ್ನೂ ಅರಿಯದಂತೆ 
ಹೇಳುತಾಳವಳು ಅದೆಲ್ಲ ನಿಮಗ್ಯಾಕ್ರಿ ಅಂದೆ

ನಿನ್ನಿಂದ ನಾನದೇನನ್ನು ಬಯಸಿದೆ
ಒಂದೊಳ್ಳೆ ಮಾತು ಕೇಳಬೇಕೆಂದೆ
ಹೇಳಿದರದೇನು ಕಳೆದುಕೊಳ್ಳುವೆ 
ಕಾಳಜಿಯಿಂದ ನಾನೇನೋ ಕೇಳಿದೆ

ಎಲ್ಲವೂ ತಿಳಿದರೂ ಏನನ್ನೂ ಅರಿಯದಂತೆ 
ಹೇಳುತಾಳವಳು ಅದೆಲ್ಲ ನಿಮಗ್ಯಾಕ್ರಿ ಅಂದೆ

ಕಾದ ಜೀವದ ತಾಳ್ಮೆಯರಿಯದೆ
ಒಳ ಮನಸ್ಸಿನ ಭಾವವರಿಯದೆ
ಆ ಮಾತಿಗೆ ಜೀವ ಹೋದಂತಾಗಿದೆ
ಅಂತಾಳೆ ಕಿಂಚಿತ್ತೂ ಕರುಣೆಯೆ ಇಲ್ಲದೆ

ಎಲ್ಲವೂ ತಿಳಿದರೂ ಏನನ್ನೂ ಅರಿಯದಂತೆ 
ಹೇಳುತಾಳವಳು ಅದೆಲ್ಲ ನಿಮಗ್ಯಾಕ್ರಿ ಅಂದೆ

ಕೇಳಿದೊಡನೆ ಬೆವೆತು ಕೆಂಡವಾದೆ 
ಮುಂದಿನ ಮಾತಿಗೆ ಪರದಾಡಿದೆ
ಶಾಂತವಾಗಲು ಹೀಗೆ ಹಾಡೊಂದ 
ಬರೆದೆ ನೀ ನನ್ನವನಳೇ ಎಂದೆ

ಎಲ್ಲವೂ ತಿಳಿದರೂ ಏನನ್ನೂ ಅರಿಯದಂತೆ 
ಹೇಳುತಾಳವಳು ಅದೆಲ್ಲ ನಿಮಗ್ಯಾಕ್ರಿ ಅಂದೆ....

ಹೀಗೆ ನೀನು ಕೋಪ ತೋರಿಸಿದಾಗ್ಲೆಲ್ಲ ಏನೇನೋ ಗೀಚಿ ಸಮಾಧಾನ ಮಾಡ್ಕೊತಿದ್ದೇ. ಇಷ್ಟೆಲ್ಲಾ ಕಷ್ಟ ಆದ್ರೂ ನನ್ನ ಹಿಂದೆ ಯಾಕೋ ಬಿದ್ದೆ ಅನ್ಕೋತಿದ್ದೀಯ  ಗೊತ್ತಿಲ್ಲ ಕಣೋ ನಿನ್ನ ನೋಡಿದ್ಮೇಲೆ ಅನಿಸಿದ್ದು ಅಂದ್ರೆ ಜೀವನ ಪೂರ್ತಿ ಇವಳ ಜೊತೆ ನೆಮ್ಮದಿಯಾಗಿರ್ತೀನಿ ಅಂತ. ನಿನ್ನಲ್ಲಿ ಅಮ್ಮನ ಛಾಯೆಗಳಿವೆ ಯಾನಿ ನಿನ್ನೀ ಸಹನೆ ನನ್ನ ಮುದ್ದು ಮಾಡೋ ರೀತಿ ನೋಡುತ್ತಾ ಇದ್ರೆ ಅವಳೇ ನೆನಪಾಗ್ತಾಳೆ.

ನಾನೊಂದ್ಸಾರಿ ಅಮ್ಮನ್ ಕೇಳಿದ್ದೆ 
ಅಮ್ಮ ಆಕಾಶ ಅದ್ಹೇಗಮ್ಮ ಅಷ್ಟು ವಿಶಾಲವಾಗಿದೆ
ಶಾಂತವಾಗಿದೆ ತಿಳಿಯಾಗಿದೆ ನಮ್ ಮನ್ಸು ಹಾಗೆ ಇರ್ಬೇಕು ಅಂತ ಬಯಸೋ ಥರ ಇದೆಯಲ್ಲ ಅಂತ ತಿಳಿ ಸಂಜೆಯಲ್ಲಿ ತಂಗಾಳಿ ನನಗಾಗಿಯೇ ಏನೋ ಏಂಬಂತೆ ಹೊತ್ತು ತರುತ್ತಿದ್ದ ಪಕ್ಕದ ಮಲ್ಲಿಗೆ ಹೂವಿನ ಸುಗಂಧ ಸೇವಿಸುತ್ತ ಒಂಟಿತನದಿಂದ ತುಸು ಬೇಜಾರಲಿದ್ದ ನಾನು ಅಂಗಳದಲ್ಲಿ ಚಾಪೆಯ ಹಾಸಿ ಮೇಲೆ ಕೂತ ಅಮ್ಮನ ಮಡಿಲಲ್ಲಿ ಮಲಗಿ ಕೇಳಿದ್ದೆ.

ನಾನು ಏನೆಂದು ಅರಿವಿದ್ದ ಅಮ್ಮ ತಕ್ಷಣ ನನ್ನ ಮನಸ್ಸಿನ ಭಾವನೆಗಳನ್ನರಿತು ಅಮ್ಮ ನನ್ನತಲೆ ಕೂದಲಲ್ಲಿ ಬೆರಳುಗಳಾಡಿಸುತ್ತ  ಹಣೆಯನ್ನು ಸವರುತ್ತ ಯಾಕೋ ಬೇಜಾರಾಗಿದ್ದಿಯಾ ಯಾರ್ ಜೊತೆನಾದ್ರು ಮನಸ್ತಾಪ ಮಾಡಿಕೊಂಡಿಯಾ ಅಂದ್ಲು ಹೀಗೆ ಅಲ್ವ ಅಮ್ಮ ಅಂದ್ರೆ ತನ್ನ ಮೃದು ಧ್ವನಿಯಲ್ಲೇ ಮನಸ್ಸಲ್ಲೇನಿದ್ರು ಬಾಯಿಂದ ಅದನ್ನ ಆಚೆ ಹಾಕಿಸ್ತಾಳೆ. ಏನೋ ಹೇಳೊಕೊದ್ರೆ ಇವಂದೆನಪ್ಪ ಗೋಳು ಅನ್ನೋ ಜಗದಲ್ಲಿ ಸಾವಿರ ಸಾರಿ ಹೇಳುದ್ರು ಕೂತ್ಕೊಂಡ್ ಕೇಳ್ತಾಳೆ. ಅಮ್ಮ ಅಲ್ವ ಸಹನೆ ಅನ್ನೋ ಪದಕ್ಕೆ ಅವಳೇ ನಾಂದಿ ಹಾಡಿರಬೇಕು. ಮನಸ್ಸು ಮರ್ಕಟ ಅಂತಾರಲ್ಲ ಯಾಕೊ ಕುಣಿಯೋದ್ ಬಿಟ್ಟು ಮಂಕಾಗಿದೆಯಮ್ಮ ದೇಹವೇ ಜಿಡ್ಡು ಹಿಡಿದಂತೆ ಮಾಡಿದೆಯಮ್ಮ ಅಂದೆ. ಅದಕ್ಕಮ್ಮ, ನಿನಗ್ ಗೊತ್ತಾ ಆಕಾಶಕ್ಕೂ ಮೋಡ ಕವಿಯುತ್ತೆ ಕಣೋ ನಮ್ ಮನ್ಸನ್ನ ಕಷ್ಟಗಳು ಆಲೋಚನೆಗಳು ಭಾವನೆಗಳು ಗೊಂದಲಗಳು ಆವರಿಸಿಕೊಂಡಿರೊ ಹಾಗೆ ಮುಂದೇನು ಎಂಬ ದಾರಿಯೇ ಕಾಣುವುದಿಲ್ಲ. ಕಂಡವರು ಮೋಡಗಳಿಂದ ತುಂಬಿದ ಆ ಮುಗಿಲನ್ನೇನು ನೋಡುತ್ತೀಯ ಎಂದು ಹೋಗುವ ಹಾಗೆ ಆಲೋಚನೆಗಳಲ್ಲೇ ಮುಳುಗಿರೋ ಯಾವಾಗಲೂ ಡಿಪ್ರೆಶನ್ ಅಲ್ಲೇ ಇರೊ ಇವನ ಜೊತೆ ಏನು ಮಾತಾಡೋದು ಅಂತ ಬಿಟ್ಟೋಗ್ತಾರೆ ,ಆದರೆ ನಾವು ನೊಂದುಕೊಳ್ಳಬಾರದು ಕಣೊ. ಮುಗಿಲು ನೊಂದುಕೊಳ್ಳುವುದಿಲ್ಲ. ಆದರೆ ಸೂರ್ಯ ಬಂದು ಅವನ ಶಾಖಕ್ಕೆ ಮೋಡ ಕರಗಿ ಮಳೆಯಾಗಿ ಸುರಿಯುತ್ತದೆ ಮುಗಿಲು ತಿಳಿಯಾಗುತ್ತದೆ ಅಲ್ಲಿವರೆಗೆ ಆಕಾಶ ಕಾಯುತ್ತೆ.ಆ ಬರುವ ಸೂರ್ಯನಿಗಾಗಿ ಆಕಾಶ ಕಾಯುತ್ತೆಕಣೋ. ಹಾಗೆ ನಮ್ ಜೀವನದಲ್ಲೂ ಸೂರ್ಯ ಬರ್ತಾನೆ, ಅಲ್ಲಿಯವರೆಗೆ ನಾವು ಕಾಯಬೇಕು ಕುಗ್ಗಬಾರದುಕಣೋ ಸೂರ್ಯ ಬಂದು ಮನಸ್ಸು ತಿಳಿಯಾದಾಗ ಆಕಾಶ ನೋಡು ಅದಕ್ಕೂ 
ನಿಂಗೂ ವ್ಯತ್ಯಾಸವೇ ಇಲ್ಲ ಅನ್ಸುತ್ತೆ ಅಲ್ಲಿವರ್ಗು ಕಾಯ್ಬೇಕು ಅಷ್ಟೇ ಅಂದ್ಲು. ಯಾವತ್ತೂ ದುಡುಕಬಾರದು. ಬಂದು ಸಂಜೆಯಾಗುತ್ತಲೇ ಮರೆಯಾಗುವ ಸೂರ್ಯನಿಗಾಗಿ ಗಗನ ನೊಂದುಕೊಳ್ಳುವುದಿಲ್ಲ ಬರುವ, ಬಂದು ನಗುವ ನಲಿವ ನಕ್ಷತ್ರಗಳಿಗೆ ಚಂದ್ರನಿಗೆ ಮಡಿಲು ನೀಡುತ್ತೆ. ಅವುಗಳ ನಲಿವು ಕಾಣುತ್ತ ತನ್ನ ನೋವನ್ನು ತಾನೇ ಮರೆತು ಮರುದಿನ ಬರುವ ಸೂರ್ಯನಿಗಾಗಿ ಗಗನ ಕಾಯುತ್ತೆ ಕಣೋ. ತಾಳ್ಮೆಯೆಂದೂ ಕಳೆದುಕೊಳ್ಳುವು
ದಿಲ್ಲ. ಬಂದಾಗ ಅನುಭವಿಸಿ ಮತ್ತೆ ಮರಳಿ ಬರುವವರೆಗೆ ಕಾಯುವುದೇ ಜೀವನ ಕಣೋ ಅಂತ ಹೇಳಿದ್ದಳು ಅಮ್ಮ. ಮತ್ತೆ ನೊಂದರೂ ಸಹ ನೋವು ತೋರಿಸದೇ ಬರುವ ನಕ್ಷತ್ರಗಳಿಗೆ ಮಡಿಲ್ಲಿ ಸ್ಥಾನ ಕೊಡಬೇಕು. ನಾನೇ ನೋವಲ್ಲಿದ್ದೀನಿ ಅಂತ ದೂರಬಾರದು ಮರಳಿ ಬರುವ ಸೂರ್ಯನಿಗಾಗಿ ಕಾಯಲೇಬೇಕು. ಕಾಯುವುದೇ ಜೀವನ ಅಂದಿದ್ಳು.

ಹಾಗೆ ಕಾದು ಕ್ಲಾಸಿನಲ್ಲಿ ಕೂತಿದ್ದ ನನ್ನ ಕಣ್ಣೆದುರು ನೀನು ಬಂದೆ ಯಾನಿ. ಅದ್ಯಾವ ಕ್ಷಣದಲ್ಲಿ ಕಣ್ಣಿಗೆ ಹೊಕ್ಕು ಮನಸ್ಸಿಗಿಳಿದೆಯೋ. ಮೋಡಗಳು ಆಕಾಶವನ್ನಾವರಿಸಿಕೊಂಡಂತೆ ಭಾವನೆಗಳಿಂದ ಮುಚ್ಚಿದ ಮನಸ್ಸು ನಿನ್ನ ಕಂಡಾಗಲೆ   ಹೇಳತೊಡಗಿತ್ತು, ಹಂಬಲಿಸತೊಡಗಿತ್ತು ನೀನು ಕಾಯುತ್ತಿದ್ದ ಸೂರ್ಯ ಇವಳೆ ನೋಡು ಎಂದು ಕೂಗಿ ಕೂಗಿ ಹೇಳುತ್ತಿತ್ತು ಯಾನಿ. ನಿನ್ನ ಕಂಡಾಗಲೇ ಅಮ್ಮ ಹೇಳಿದ ಪೂರ್ತಿ ಕಥೆ ಸ್ಮ್ರತಿಪಟಲದಲ್ಲಿ ಮಿಂಚಿನಂತೆ ಗೋಚರವಾಗತೊಡಗಿತ್ತು. ನೀನು ಬಂದಾದ ಮೇಲೆ ಆಕಾಶ ನೋಡಿದೆ ನಾನು ನನಗನಿಸ್ತು ಯಾನಿ ನನ್ನ ಮನಸ್ಸಿಗನುಸ್ತು ಆಕಾಶಕ್ಕೂ ನನಗೂ ಯಾವುದೇ ವ್ಯತ್ಯಾಸವಿಲ್ಲ ಅನುಸ್ತು. ಅಮ್ಮ ಹೇಳಿದ್ಲಲ್ಲ ಹೀಗನಿಸುತ್ತೆ ಅಂತ ಆ ಆಕಾಶದ ಕಥೆ ನನ್ನದೆ ಎಂದು ಅನಿಸಿತು ಯಾನಿ. ಬಂದು ಮರೆಯಾದ ಸೂರ್ಯನಿಗಾಗಿ ಗಗನ ಕಾಯುವ ಹಾಗೆ ನಾನು ನಿನಗಾಗಿ ಕಾಯುವೆ ಯಾನಿ. ನಕ್ಷತ್ರಗಳ ಹಾಗೆ ಬರುವವರಿಗೆ ನೋವು ತೋರಿಸದೆ ಮಡಿಲು ನೀಡುತ್ತ ಮತ್ತೆ ಬರುವ ನಿನಗಾಗಿ ನಾನು ಕಾಯುವೆ ಯಾನಿ ಕಾಯುತ್ತಲೇ ಇರುವೆ. ನಾನಿಲ್ಲಿಗೆ ಬರುವ ಮುಂಚೆ ನನ್ನ ಪ್ರಪಂಚ ಎಂದರೆ ಅದು ಅಮ್ಮನೆ ಯಾನಿ. ಅವಳ ಕಾಣದೆ ಬೆಳಕೇ ಹರಿಯದು ದಿನ ಶುರುವೇ ಆಗದು. ಅವಳಿಲ್ಲದ ಆ ಕ್ಲಾಸಿನಲ್ಲಿ ನಾನು ಇಲ್ಲಿ ಒಬ್ಬಂಟಿಯಾಗಿ ಇರಬೇಕಾ ಎಂದು ಯೋಚಿಸುತ್ತಿರುವಾಗಲೇ ಸೂರ್ಯನಿಗಾಗಿ ಬಾನು ಸೃಷ್ಟಿ ಕಾಯುವ ಹಾಗೆ ನಾನು ನಿನಗಾಗಿ ಕಾಯುತ್ತಿರುವಾಗಲೇ ನೀನು ಕಣ್ಣೆದುರು ಬಂದದ್ದು, ಈ ಮನದೆದುರು ಪ್ರತ್ಯಕ್ಷವಾದದ್ದು ಯಾನಿ.   

ಇಷ್ಟೊಂದು ಗೊಂದಲಗಳೇಕೆ?     ಅವಕ್ಕೆ ಸಿಕ್ಕಿ ಮನ ದಣಿಯುವುದೇಕೆ?
ಇದರ ಮಧ್ಯೆ ಆತ್ಮ ಬಡುವಾಗಬೇಕೆ?
ಸಮಯದ ಮೇಲಿರಲೊಂದಿಷ್ಟು ನಂಬಿಕೆ
ಬದಲಾಗುವುದೆಲ್ಲ ತಕ್ಕಂತೆ ಕಾಲಕೆ..... 
                                          -ಕಿರಣ

Category:Fiction



ProfileImg

Written by kiran kallyanashetty