Do you have a passion for writing?Join Ayra as a Writertoday and start earning.

ಹೃದಯದ ಮಾತುಗಳು

ಹೀಗೊಂದು ಅಭ್ಯರ್ಥನಾ ಸಂದೇಶ

ProfileImg
14 Oct '23
5 min read


image

'ಟಿನ್ !' ವಾಟ್ಸಪ್ ಮೆಸೇಜ್ ಬಂದ ಸದ್ದು. ಯಾರು ಕಳಿಸಿದರು? ಏನಿದೆ ? ನಾನು ತಕ್ಷಣ ಮೊಬೈಲ್ ನೋಡಲು ಹೋಗಲಿಲ್ಲ. ಯಾಕೆಂದು ಹೇಳಲು ಅಂತಾ ವಿಶೇಷ ಕಾರಣಗಳೇನು ನನ್ನಲ್ಲಿ ಇಲ್ಲ. ಒಂದಷ್ಟು ಉದಾಸೀನ ತುಂಬಿದೆ ಎಂದೇ ಹೇಳಬಹುದು.

ಟಿನ್ ! ಟಿನ್ ! ಟಿನ್ ! ಮತ್ತೆ ಮೇಲಿಂದ ಮೇಲೆ ಮೇಸೇಜಿನ ಹಾವಳಿ. ಈಗ ಮನಸ್ಸಿಗನಿಸಿತು 'ಯಾರೋ ಬಹಳ ಅವಸರದಲ್ಲಿದ್ದಾರೆ'. ಮೊಬೈಲ್ ಕೈಗೆತ್ತಿಕೊಂಡು ಪರದೆ ಮೇಲೆ ಕಣ್ಣೋಡಿಸಿದೆ. ಅಪರಿಚಿತ ನಂಬರಿನಿಂದ ಒಂದೇ ಸವನೆ ಮೆಸೇಜ್‌ಗಳು ಬಂದಿದ್ದವು‌.

ಒಂದೊಂದನ್ನೇ ಓದುತ್ತಾ ಸಾಗಿದೆ.‌ ಮೊದಮೊದಲು ಅಚ್ಚರಿಯ ಜೊತೆಗೆ ತಮಾಷೆ ಎನಿಸಿತು. ಹೆಣ್ಣೊಬ್ಬಳು ನನ್ನ ಬಳಿ ಸಹಾಯ ಯಾಚಿಸುತ್ತಿರುವ ಮೆಸೇಜುಗಳು. ಒಂದು ಸುಂದರವಾದ ಬರಹದ ಸಹಾಯ. ಅದೂ.. ಪತಿಗೆ ಕಳುಹಿಸಲು ಎಂದು ಬರೆದಿದ್ದಳು. ಜತೆಗೆ ಕಾರಣವನ್ನೂ ಲಗತ್ತಿಸಿದ್ದಳು. 'ನಮ್ಮ ವೈವಾಹಿಕ ಜೀವನದ ವಾರ್ಷಿಕೋತ್ಸವವಿದೆ. ಅದಿಕ್ಕೆ ಆ ದಿನದಂದು ಪತಿಯವರಿಗೆ ಅವರ ಮೇಲಿನ ನನ್ನ ಪ್ರೀತಿಯನ್ನು ತೋರಿಸಿ ಕೊಡಬೇಕಾಗಿದೆ. ಹಾಗೆ ಕಳೆದ ಸುಮಧುರ ದಿನಗಳ ನೆನಪನ್ನು ಮತ್ತೆ ಮೂಡಿಸ ಬೇಕಾಗಿದೆ. ಆದರೇ, ನನಗೆ ಇದನ್ನೆಲ್ಲ ಅವರಿಗೆ ಬಾಯಿಮಾತಲ್ಲಿ ತಿಳಿಸಲು ಸಾಧ್ಯವಾಗುತ್ತಿಲ್ಲ. ವ್ಯಕ್ತಪಡಿಸುವ' ಎಂದರೆ ನನ್ನನ್ನು ಅಷ್ಟು ಸಮಾಧಾನದಿಂದ ಅವಲೋಕಿಸುವ ವ್ಯವಧಾನ ಇತ್ತೀಚಿನ ದಿನಗಳಲ್ಲಿ ಅವರಲ್ಲಿ ಇಲ್ಲ ಎಂದು ನನಗನ್ನಿಸುತ್ತಿದೆ. ಎಲ್ಲೋ.. ಎಲ್ಲವೂ.. ಬದಲಾಗುತ್ತಿದೆ, ಕಳೆದು ಹೋಗುತ್ತಿವೆಯೇನೋ ಎಂಬ ಭಯ ನನ್ನಲ್ಲಿ ಆವರಿಸಿಬಿಟ್ಟಿದೆ. ಇದು ನನ್ನ ಭ್ರಮೆಯಾಗಿರಲೂ ಬಹುದು. ನಿಜವಾಗದಿರಲೀ ಎಂದೇ.. ನನ್ನ ಈ ಪ್ರಯತ್ನ. ಒಂದು ಸುಂದರ ಬರಹದಲ್ಲಿ ನನ್ನೆಲ್ಲಾ ಪ್ರೀತಿ, ಮನದ ಭಾವಗಳನ್ನು ಅಚ್ಚು ಮೂಡಿಸಿ ವಾಟ್ಸಪ್ ಸಂದೇಶವಾಗಿ ಅವರಿಗೆ ರವಾನಿಸುವುದೆಂದೂ. ಇದಕ್ಕೆ ನನಗೆ ದಯವಿಟ್ಟು ನಿಮ್ಮ ಸಹಾಯ ಬೇಕಾಗಿದೆ. ನಿಮ್ಮ ಬರಹಕ್ಕೆ ಅಂತಹಾ ಶಕ್ತಿ ಇದೆ ಎಂದು ನನ್ನ ನಂಬಿಕೆ. ನೀವು ಇದನ್ನು ನನಗೆ ನೀಡುವ ದಾನ ಅಥವಾ ಬಿಕ್ಷೆ ಎಂದು ತಿಳಿದರೂ ಸರಿಯೆ. ಆದರೆ ದಯವಿಟ್ಟು ನಿರಾಕರಿಸದೇ ನನಗೆ ಈ ಸಹಾಯ ಮಾಡಿ ಪುಣ್ಯಕಟ್ಟಿಕೊಳ್ಳ ಬೇಕೆಂದೂ ಆಕೆ ಕೋರಿಕೊಂಡಿದ್ದು. ತನ್ನ ಹೆಸರಿನ‌ ಕೂಡ ಕಿರು ವಿವರಣೆಯನ್ನೂ ನೀಡಿರುತ್ತಾಳೆ. ನನಗೆ ಒಂದಷ್ಟು ಹೆಚ್ಚಿನ ಒತ್ತಡವನ್ನೇ ಹೇರಿದಂತಿದ್ದವು ಆ ಸಂದೇಶಗಳು.

ಇಲ್ಲಿ ನಮ್ಮಿಬ್ಬರ ಮಧ್ಯೆ ಇದ್ದದ್ದು ಯಾವ ಸ್ನೇಹನೂ ಅಲ್ಲ, ಸಂಬಂಧನೂ ಅಲ್ಲ. ಆಕೆಯ ಪಾಲಿಗೆ ನಾನೋರ್ವ ಮನೋಜ್ಞ ಬರಹಗಾರ್ತಿ ಹಾಗೂ ಆಕೆ ನನ್ನ ಬರಹದ ದೊಡ್ಡ ಅಭಿಮಾನಿ. ನನಗೋ.. ಆಕೆ ಯಾರೆಂದೇ ತಿಳಿಯದು. ಸಹಾಯ ಬೇಡುತ್ತಿರುವ ಓರ್ವ ಅಪರಿಚಿತ ಹೆಣ್ಣು ಅಷ್ಟೆ. ಇನ್ನು ಆಕೆಗೆ ಇದ್ದದ್ದು, ನನ್ನ ಬರಹದ ಮೇಲಿನ ಅಗಾಧವಾದ ಭರವಸೆ. ಆದರೇ ನನ್ನಲ್ಲಿದ್ದದ್ದು, ಅಪರಿಚಿತೆಯಾದ ಹೆಣ್ಣಿಗೆ ಈ ವಿಚಿತ್ರವಾದ ಸಹಾಯ ಮಾಡಬೇಕೇ.. ಬೇಡವೇ.. ಎಂಬ ದ್ವಂದ್ವ ಭಾವ! ಹಾಗಂತ, ಈರೀತಿಯ ಸಹಾಯ ನನ್ನಲ್ಲಿ ಯಾಚಿಸುತ್ತಿರುವುದು ಇವಳೇ ಮೊದಲಲ್ಲ, ಆದರೇ...... ಮುಂಚೆ ಸಹಾಯ ಪಡೆದುಕೊಂಡವರೆಲ್ಲಾ ನನ್ನ ಪರಿಚಿತರೇ ಆಗಿದ್ದರು.

ಇದೀಗ ಒಂದೆರಡು ಸಲ ಮೇಲಿಂದ ಮೇಲೆ ಅವಳ ಸಂದೇಶಗಳನ್ನೇ ಓದಿದೆ. ತಲೆಕೊಡವುತ್ತಾ ಮೊಬೈಲನ್ನು ಅಲ್ಲೇ ಬಿಟ್ಟು ಕಿಟಕಿಯ ಬಳಿ ಬಂದು ನಿಂತು ಹೊರ ಜಗತ್ತಿಗೆ ಕಣ್ಣು ಹಾಯಿಸಿದೆ. ಬಾನಿನಲ್ಲಿ ಮುಸುಕಿದ ಕಾರ್ಮೋಡಗಳ ಹಿಂಡು, ಗಾಳಿಯು ಜೋರಾಗಿ ಬೀಸುತ್ತಾ ಮೋಡಗಳನ್ನು ದೂರಕ್ಕೆ ತಳ್ಳುವ ಸತತ ಪ್ರಯತ್ನ ಮಾಡುತ್ತಲೇ ಇತ್ತು. ಮೋಡವೋ 'ನಾನು ಇನಿತೂ ಮಿಸುಕಾಡಲಾರೆ' ಎಂದು ಮುಖ ಊದಿಸಿ ಕೂತ ಹಠಮಾರಿಯಂತೆ ಕಾಣಿಸುತ್ತಿತು.

ನಾನೀಗ ಮತ್ತೇ ಬಂದು ಮೇಜಿನ ಮೇಲೆ ಜೋಡಿಸಿಟ್ಟ ಪುಸ್ತಕಗಳನ್ನು ಎಣಿಸುತ್ತಾ ಕುಳಿತೆ. ಯಾಕೋ ಇವತ್ತು ನನ್ನಲ್ಲಿ ಸ್ವಲ್ಪ ಹೆಚ್ಚೇ ಆಲಸ್ಯ ಛಾಯಿಸಿತ್ತು. ನನ್ನ ಮುಂದೆ ಇದ್ದ ಮೇಜಿನ ಮೇಲೆ ಎರಡು ಕೈಗಳನ್ನೂರಿ ಹಾಗೆ ತಲೆಯಾನಿಸಿ ಕಣ್ಮುಚ್ಚಿದೆ.

ವಿಶಾಲ ಕಡಲೊಂದು ನೋವಿನಿಂದೆಂಬಂತೆ ಜೋರಾಗಿ ಭೋರ್ಗರೆಯುತ್ತಿತ್ತು. ಅನಾಧಾರ ತೋರುತ್ತಾ ತನ್ನಿಂದ ದೂರ ಆಗಸದತ್ತ ಸಾಗಿದ್ದ ತನ್ನದೇ ಜೀವ ತುಂತುರುಗಳು ಅಲ್ಲಿ‌ ಬ್ರಹತ್ತ್ ಮೋಡಗಳಾಗಿ ಕಟ್ಟಿನಿಂತದ್ದು ಕಂಡು ಕಡಲು‌ ದುಃಖಿಸುತ್ತಿತ್ತು. ಮಾಡಿದ ತಪ್ಪಿನರಿವಾಗಿ ಅವುಗಳು ಮಳೆಯಾಗಿ ಧರೆಗೆ ಸುರಿದು ಮತ್ತೇ ನನ್ನ ಬಳಿ ಮರಳಲೀ ಎಂದು ಪ್ರಾರ್ಥಿಸುತ್ತಿರುವಂತಿತ್ತು. ನಾನು ಥಟ್ಟನೆ ಕಣ್ಣುಬಿಟ್ಟೆ ! ಇದೇನು ಕಂಡಿದ್ದು ? ಕನಸೋ..? ಅಥವಾ ನನ್ನ ದ್ವಂದ್ವ ಮನಸ್ಸನ್ನು ಕಾಡುತ್ತಿರುವ ಘಟನೆಯ ಚಿತ್ರರೂಪಕವೋ ನಾನು ಅರಿಯದಾದೆ. ಯಾಕೋ ತಲೆಯ ಒಂದು ಬದಿ ಸಣ್ಣಗೆ ಸಿಡಿಯುತಿತ್ತು. ಅಡುಗೆ ಕೋಣೆಗೆ ಹೋಗಿ ಚಹಾ ಮಾಡಿಕೊಂಡು ಬಂದು ಕುಳಿತೆ. ಬಿಸಿ ಬಿಸಿಯಾಗಿ ಸ್ವಾದ ಹೀರಲು ಚಹಾದ ಕಪ್ಪಿಗೆ ತುಟಿ ಹಚ್ಚಿದೆ. ಸುರ್ರೆನ್ನುವ ಸದ್ದಿನೊಂದಿಗೆ ಗುಟುಕು ಗುಟುಕಾಗಿ ಟೀ ಗಂಟಲನ್ನೂ ಹಾಯ್ದು ಹೊಟ್ಟೆ ಸೇರುತ್ತಲೇ.. ನನ್ನಲ್ಲಿನ ಉದಾಸೀನವೆಲ್ಲಾ ಮಾಯವಾಗಿ ಮತ್ತೇ ಚೇತರಿಕೆ, ಉಲ್ಲಾಸ ಮರಳಿ ಬಂದಿತ್ತು. ಮಂದಹಾಸ ದೊಂದಿಗೆ ಮೊಬೈಲನ್ನು ಕೈಗೆತ್ತಿ ಪಟಪಟನೆ ಟೈಪಿಸ ತೊಡಗಿದೆ.

ಅಂದು ಕೈಗಳಲ್ಲಿ ಚೆಂದದ ಮೈಲಾಂಜಿ ಚಿತ್ತಾರವನ್ನು ಬಿಡಿಸಿಕೊಂಡು ತಲೆ ಬಗ್ಗಿಸಿ ಕುಳಿತಿದ್ದ ನಾನು, ನನ್ನ ಕಣ್ಣಪಟಲದಲ್ಲಿ ತುಂಬಿಕೊಂಡಿದ್ದ ನಿಮ್ಮ ನಗು ತುಂಬಿದ ಆ ಸುಂದರ ಮುಖಾರವಿಂದ. ನನ್ನನ್ನು ನಿಖಾಃ ಆಗಲಿರುವ ನೀವು ಮತ್ತು ನಿಮ್ಮೊಂದಿಗೆ ವೈವಾಹಿಕ ಜೀವನದಲ್ಲಿ ಮುಂದೆ ಒಂದೇ ನೊಗದ ಜೋಡೆತ್ತಿನಂತೆ ಸಂಸಾರವನ್ನು ಸಮಾನವಾಗಿ ತೂಗಿಸಿಕೊಂಡು ಸಾಗಬೇಕೆಂದು ಬಯಸಿ ಕನಸು ಕಾಣುತ್ತಿದ್ದ ನಾನು.

ಹೌದು ! ಆ ಕ್ಷಣ ನನ್ನ ಮನದ ಬಯಕೆ ಅದೊಂದೇ ಆಗಿತ್ತು. ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ನಾವಿಬ್ಬರು ಪ್ರೀತಿ ಹಂಚಿಕೊಂಡು ಕಷ್ಟ-ಸುಖದಲ್ಲಿ ಪರಸ್ಪರರಿಗೆ ಶಕ್ತಿಯಾಗಿ ಮುನ್ನಡೆಯ ಬೇಕೆನ್ನುವುದು. ಹೀಗೆ ಕುಳಿತವಳ ಯೋಚನೆಗೆ ತೆರೆ ಬಿದ್ದದ್ದೇ ಕಸಿನ್ಸ್‌ ಹಿಂಡಾಗಿ ಬಂದು ನನ್ನನ್ನು ಸುತ್ತುವರಿದು ಹತ್ತು ಹಲವು ಸವಾಲುಗಳನ್ನು ಹಾಕಿ ಛೇಡಿಸ ತೊಡಗಿದಾಗಲೇ, 'ಏನಮ್ಮಾ... ಮದುಮಗ ಮಹಾರಾಜನ ಧ್ಯಾನದಲ್ಲಿ ಮುಳುಗಿರುವೆಯಾ..? ಏನು ಕನಸು ನಮಗೂ ಹೇಳು.. ಹೇಳು..' ಎಂದವರು ನಿಮ್ಮ ಹೆಸರಿನಲ್ಲಿ ನನ್ನ ತಲೆತಿನ್ನುತ್ತಾ ಸತಾಯಿಸತೊಡಗಿದಾಗ‌ ನಾನು ನಾಚಿ ನೀರಾಗಿದ್ದೆ.

ಮದುಮಗಳಾಗಿ ಚೆಂದದ ವಸ್ತ್ರ ಧರಿಸಿ ವಡವೆಗಳನ್ನೇರಿ ಭವ್ಯ ಅಲಂಕಾರದಲಿ ಕಾತರ ತುಂಬಿ ಮುಖ‌ ಕಾಣದಂತೆ ಅಡ್ಡಲಾಗಿ ಹಾಕಿದ್ದ ಪರದೆಯೊಳಗೆ ಬಗ್ಗಿ ಕುಳಿತ ನಾನು; ಮೈಕಿನಲ್ಲಿ ತೇಲಿ ಬಂದ ನಿಖಾಃನ ವಾಕ್ಯಗಳೊಂದಿಗಿನ 'ಖುಬೂಲ್' ಎನ್ನುವ ದೃಢವಾದ ನಿಮ್ಮ ಗಡಸು ಧ್ವನಿಯನ್ನು ಕೇಳುತ್ತಲೇ ಬಹಳ ರೋಮಾಂಚನಗೊಂಡಿದ್ದೆ.

ಮತ್ತೆ ಕೆಲವೇ ಕ್ಷಣಗಳಲ್ಲಿ ಸ್ನೇಹಿತೆಯರು ಕೈಕೊಟ್ಟುವಿಕೆಯೊಂದಿಗೆ ಒಪ್ಪನ ಪಾಟ್ ಹಾಡುತ್ತಾ.. ನನ್ನನ್ನು ಸುತ್ತುವರಿದಾಗ, ಅಣ್ಣಂದಿರ ತಕ್ಬೀರ್ ಧ್ವನಿಯೊಂದಿಗೆ ಸಡಗರದಿಂದ ಹೆಜ್ಜೆ ಎತ್ತಿಟ್ಟು ಬಂದ ನೀವು ನನ್ನೆದುರು ನಿಂತಾಗ ನಿಮಿಷಕ್ಕೆ ಎಪ್ಪತ್ತೆರಡರ ಬದಲು ನೂರ ನಲ್ವತ್ತನಾಲ್ಕು ಬಾರಿ ಬಡಿದುಕೊಳ್ಳಲು ತೊಡಗಿದ್ದ ನನ್ನೆದೆಯನ್ನು ಸಾವರಿಸಿಕೊಳ್ಳುವುದೇ.. ನನಗೆ ಬಹಳ ತ್ರಾಸದಾಯಕವಾಗಿತ್ತು. ಮತ್ತೆ ನೀವು ಕೈಯ್ಯಲ್ಲಿಡಿದಿರುವ ಗುಲಾಬಿ ಹಾಗೂ ಮಲ್ಲಿಗೆ ಹೂಗಳನ್ನು ಪೋಣಿಸಿದ 'ಬಂಧಿ' ಎನ್ನುವ ಸುಂದರ ಹಾರವನ್ನು ನನ್ನ ಕೊರಳಿಗೆ ಹಾಕಿ ನನ್ನ ಪಕ್ಕದಲ್ಲಿ ಅಸೀನರಾದಾಗ ನಿಮ್ಮನ್ನು ಒಂದು ಬಾರಿ ನೋಡಿ ಕಣ್ತುಂಬಿಸಿಕೊಳ್ಳ ಬೇಕೆನ್ನುವ ನನ್ನ ಮನದ ಬಯಕೆಯನ್ನು ಅದುಮಿಡಲು ನಾನು ಹರಸಾಹಸವನ್ನೇ ಪಡಬೇಕಾಯ್ತು. ಸೇರಿದ್ದ ಜನರ ನಗು, ಹಾಸ್ಯ ಚಟಾಕಿ, ಗದ್ದಲಕ್ಕೆ ನಾಚಿಕೆಯಿಂದ ನಾನು ಇನ್ನಷ್ಟು ಬಗ್ಗಿ ಕುಳಿತ್ತಿದ್ದೆ.

ನನ್ನಮ್ಮ ನೀಡಿದ ಹಾಲಿನ ಲೋಟದಿಂದ ಒಂದು ಸ್ವಲ್ಪ ಹಾಲು ಕುಡಿದ ನೀವು ಆ ಲೋಟವನ್ನು ತಲೆ ತಗ್ಗಿಸಿ ಕುಳಿತ ನನ್ನತ್ತ ಚಾಚಿದಾಗ, ನಿಮಗೆ ಸಹಕರಿಸಲೆಂದೇ ನನ್ನ ತಲೆಯನ್ನು ಬಲವಂತದಿಂದ ಬಾಬಿಯವರು ಮೇಲೆತ್ತಿದ್ದರು. ನೀವು ಹಾಲಿನ ಲೋಟ ನನ್ನ ತುಟಿಗಿಟ್ಟಾಗ ಗುಟುಕು ಹಾಲನ್ನಷ್ಟೇ ನಾ ಕುಡಿದಿದ್ದರೂ.... ಆ ನೊರೆ ಹಾಲು ಬರೀಯ ಹಾಲು ಮಾತ್ರಾ ಹಾಗಿರಲಿಲ್ಲ, ನಿಜಕ್ಕೂ ನನ್ನ ಪಾಲಿಗದು ಸಿಹಿ ಅಮೃತವೇ ಆಗಿತ್ತು.

ಮದುವೆ ಸಮಾರಂಭದ ಒಂದೊಂದೇ ಕಾರ್ಯಕ್ರಮಗಳು ಮುಗಿಯುತ್ತಾ ಬಂದರೂ ಪ್ರತೀಕ್ಷಣವೂ ಪ್ರೇಮದಿಂದ ತೇದಿದ ನಡೆ-ನುಡಿಯಿಂದ ನೀವು ನನ್ನ ಎದೆಗೂಡಿನಲ್ಲಿ ಇನ್ನಷ್ಟು, ಮತ್ತಷ್ಟು ಭದ್ರವಾಗಿದ್ದು, ನನ್ನ ಬಾಳಿಗೆ ಬೆಳಕಾಗಿದ್ದುದೇ ಅಲ್ಲದೇ.. ತವರನ್ನು ತೊರೆದು‌ ಬಂದ ನನಗೆ ಆ ನೋವು ಕಿಂಚಿತ್ತೂ ಕಾಡದಂತೆ ನಿತ್ಯವೂ ಮಮತೆಯನ್ನು ಉಣಬಡಿಸುತ್ತಾ ಹೊಸ ಪರಿಚಯ ಪರಿಸರಕ್ಕೆ ಹೊಂದಿಕೊಳ್ಳಲು ಹಾಗೂ ಅತ್ತೆ ಮನೆಯ ಎಲ್ಲರನ್ನು ಪ್ರೀತಿಯಿಂದ ಸಂಭಾಳಿಸಿಕೊಂಡು ನಗುನಗುತ್ತಾ ಬೆರೆಯಲು ಕಲಿಸಿ, ಕೆಲಸಕಾರ್ಯಗಳಲ್ಲೂ ಸಹಾಯ ಮಾಡುತ್ತಾ ನನ್ನ ಹಿಂದೆ ಮುಂದೆಯೇ ಸುತ್ತುತ್ತಾ ಕಣ್ಣಮಣಿಯಂತೆ ನನ್ನನ್ನು ನೋಡಿಕೊಂಡದ್ದು, ಇವುಗಳೆಲ್ಲವೂ ನಾನು ಸ್ವರ್ಣಾಕ್ಷರದಲ್ಲಿ ಬರೆದಿಡುವಂತದ್ದಾಗಿತ್ತು.

ತದನಂತರದ ದಿನಗಳು ತಿಂಗಳುಗಳಾಗಿ ಉರುಳುತ್ತಿರಲು ನನ್ನೆದೆಯ ಮೂಲೆಯಲ್ಲೊಂದು ಕಳವಳ ಕಾಡುತ್ತಿತ್ತು. ಅದು ನೀವು ಗಲ್ಫ್‌ಗೆ ಮರುಳಲಿರುವ ದಿನದ ಕುರಿತಾಗಿತ್ತು,‌ ಆದರೇ... ನನ್ನ ಪಾಲಿನ ಭಾಗ್ಯವೆಂದರೆ 'ಲಾಕ್‌ಡೌನ್' ಎಂಬ ಕಾರಣವು ನೀವು ಹೋಗುವುದನ್ನು ತಡೆದಾಗ, ನನಗೆ ಇನ್ನಷ್ಟು ನಿಮ್ಮ ಪ್ರೀತಿಯ ಕೊಳದಲ್ಲಿ ಮೀಯಲು ಪರಸ್ಪರರನ್ನು ಅರಿತುಕೊಳ್ಳಲು ಅವಕಾಶಮಾಡಿ ಕೊಟ್ಟಿರುವುದಕ್ಕೆ ಸಂಭ್ರಮಿಸುತ್ತಾ ದೇವನಿಗೆ ಅದೆಷ್ಟು ಶುಕ್ರು ಅದಾ ಮಾಡಿದ್ದೆನೋ ನನಗೇ ಗೊತ್ತು. ಇದರ ಜತೆಗೆ ಕರುಣಾಮಯಿ ದೇವನು ನಮ್ಮ ಬಾಳಿನಲ್ಲಿ ತಂದುಕೊಟ್ಟ ಇನ್ನೊಂದು ತೀರದ ಖುಷಿಯೆಂದರೆ ನಿಮ್ಮ ಕರುಳ ಕುಡಿಯೊಂದು ನನ್ನ ಹೊಟ್ಟೆಯಲ್ಲಿ ಬೆಳೆಯ ತೊಡಗಿದ್ದು. ತಿಂಗಳು ಒಂಬತ್ತು ತುಂಬಿ ಮುದ್ದಾದ ಕಂದಮ್ಮ ಮಡಿಲು ತುಂಬಿದಾಗ ನಾವಿಬ್ಬರು ಸೇರಿ ಪಟ್ಟ ಸಂಭ್ರಮ ಅದೆಷ್ಟೆಂದು ನಿಮಗೂ ನೆನಪಿರಬಹುದಲ್ಲವೇ.

ವಿವಾಹ ಬಂಧನದಲ್ಲಿ ಒಂದಾಗಿ ವರ್ಷಗಳು ಉರುಳಿ ಇದೀಗ ನಾವು ಮತ್ತೊಂದು ವಿವಾಹ ವಾರ್ಷಿಕೋತ್ಸವದ ಹೊಸ್ತಿಲಿನಲ್ಲಿ ಬಂದು ನಿಂತಿರುವೆವು. ನೀವಿತ್ತ ಪ್ರೀತಿಯನ್ನು ಸ್ಪುಟವಾಗಿ ವರ್ಣಿಸಲು ಈ ಬರಹದಲ್ಲಿ ನನಗೆ ಅಸಾಧ್ಯವಾದರೂ ಕೂಡಾ.. ನಿಮ್ಮ ಪ್ರೀತಿಯನ್ನು ಪ್ರತೀಕ್ಷಣವೂ ಬೆಚ್ಚಗೆ ಎದೆಗೂಡಿನಲ್ಲಿ ತುಂಬಿ ಬಚ್ಚಿಟ್ಟಿರುವ ಸೌಭಾಗ್ಯವಂತೆ ನಾನು. ಮನದಲ್ಲಿ ಉಕ್ಕಿ ಬರುವ ಉದ್ವೇಗದ ಮಾತುಗಳನ್ನಿಂದು ಇಲ್ಲಿ ಅಕ್ಷರಕ್ಕಿಳಿಸಿ ನಿಮಗೊಪ್ಪಿಸಿರುವೆ. ಇಂದಿನವರೇಗೇ ನೀವು ನೀಡಿದ ಆ ಅಮೂಲ್ಯವಾದ ಪ್ರೀತಿ, ಆತ್ಮೀಯತೆ ಅದು ನಮ್ಮ ಜೀವನದ ಕೊನೇಯ ವರೇಗೂ ಹೀಗೆಯೆ ಹಸಿರಾಗಿ ಕಂಗೊಳಿಸುತ್ತಿರಲೀ ಎಂದು ಬೇಡುವುದೊಂದೇ ನಿಮ್ಮಿಂದ ನಾನು ಬಯಸುವ ಮಹಾ ಕೊಡುಗೆಯಾಗಿದೆ.

'ಪ್ರೇಮ'ವೆಂಬ ಎರಡಕ್ಷರ ಸುಂದರ ಪದ ನನ್ನ ಜೀವನದಲ್ಲಿ ನಿಮ್ಮ ಹೆಸರಿನೊಂದಿಗೆ ಆರಂಭವಾಗಿದ್ದು, ನಿಮ್ಮ ಹೆಸರಿನೊಂದಿಗೇ ಪರಲೋಕದಲ್ಲೂ ಇದೇತರ ಜೋಡಿಸಿರಲೀ ಎಂದು ದೇವನಲ್ಲಿ ದೈನ್ಯದಿಂದ ಪ್ರತೀದಿನ ಕೈಯ್ಯೆತ್ತಿ ಬೇಡುತ್ತಿರುವೆನು. ನಿತ್ಯ ಪ್ರೇಮ ಪಲ್ಲಕಿಯನ್ನು ಅಲಂಕರಿಸಿ ನನಗೆ ಪ್ರೀತಿಯೆಂಬ ಸವಿಜೇನ ಉಣಿಸುವ ನನ್ನ ಹೃದಯದ ರಾಜನಿಗಿದೋ.. ನಿಮ್ಮ ಪ್ರೇಯಸಿ, ಸುಮಧುರ ವಿವಾಹ ವಾರ್ಷಿಕೊತ್ಸವದ ಹೃದಯ ತುಂಬಿದ ಶುಭಾಶಯಗಳನ್ನು ಅರುಹುತ್ತಿರುವೆನು.   
-ಇತೀ ನಿಮ್ಮವಳು

ಅಪರಿಚಿತೆಯ ಸಂದೇಶ ಬಂದ ನಂಬರಿಗೆ ನಾನಿದನ್ನು ರವಾನಿಸುವಾಗ. ನನ್ನ ಮನದಲ್ಲೊಂದು ಮೌನ ಶುಭಹಾರೈಕೆಯೂ ಇತ್ತು. "ನೀವಿಬ್ಬರೂ ಪ್ರೀತಿಯಿಂದ ಸದಾಕಾಲ ಸುಖವಾಗಿರಿ".
ಓದುತ್ತಿರುವ ನೀವುಗಳೂ ಆಶೀರ್ವದಿಸಿ.

Category : Personal Experience


ProfileImg

Written by Heart Beat