ಯುವಕರಲ್ಲಿ ಶೇ 25 ರಷ್ಟು ಹೆಚ್ಚಾದ ಹೃದಯಾಘಾತ..! ಎಚ್ಚರ ತಪ್ಪದಿರಿ

ಆರೋಗ್ಯದ ಬಗೆಗಿನ ನಿರ್ಲಕ್ಷ್ಯವೇ ಯುವಕರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣ



image

ಇತ್ತೀಚೆಗೆ ನಾವೆಲ್ಲರೂ ಕಾಣುತ್ತಿರುವ ಹಾಗೆ ಗಟ್ಟಿಮುಟ್ಟಾದ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ. ಇಪ್ಪತೈದರಿಂದ‌ ನಲವತ್ತು ವರ್ಷದೊಳಗಿನ ಯುವಕರು ಹೃದಯದ ಸಮಸ್ಯೆಗೆ ತುತ್ತಾಗುತ್ತಿರೋದು ಹೆಚ್ಚಾಗುತ್ತಿದೆ. ವರದಿಯೊಂದರ ಪ್ರಕಾರ ಸಾಂಕ್ರಾಮಿಕ ಕಾಲದ ನಂತರ ಯುವಕರಲ್ಲಿ ಇದ್ದಕ್ಕಿಂದ್ದಂತೆ ಶೇ 25 ರಷ್ಟು ಹಾರ್ಟ್ ಅಟ್ಯಾಕ್ ಹೆಚ್ಚಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಇದು ಆತಂಕಕಾರಿಯಾದರೂ ಮುನ್ನೆಚ್ಚರಿಕೆ ವಹಿಸುವ ಮೂಲಕ ಹೃದಯಾಘಾತ ತಡೆಯುವುದು ಸಾಧ್ಯ ಎಂಬ ಅಭಿಪ್ರಾಯ ವೈದ್ಯಲೋಕದ್ದಾಗಿದೆ.

ಇಂದಿನ ಯುವ ಪೀಳಿಗೆಯು ಹೃದಯ ನಾಳಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಹೆಚ್ಚು ತುತ್ತಾಗುತ್ತಿದೆ ಎಂದು ವೈದ್ಯಕೀಯ ಪರಿಣಿತರು ಹೇಳುತ್ತಾರೆ. ಸಾಂಕ್ರಾಮಿಕ ಬಳಿಕ ಈ ಸಮಸ್ಯೆಯಲ್ಲಿ ಹೆಚ್ಚಳ ಕಂಡು ಬಂದಿರುವುದು ಇದೆ.

ಭಾರತದಲ್ಲಿ ಸುಮಾರು ಶೇ 50 ರಷ್ಟು ಹೃದಯ ಸಂಬಂಧಿ ಕಾಯಿಲೆಗಳು 55 ವರ್ಷದ ಒಳಗಿನವರಲ್ಲಿ ಕಂಡು ಬರುತ್ತಿವೆ. ಹಾರ್ಟ್ ಅಟ್ಯಾಕ್ ಅಥವಾ ಕಾರ್ಡಿಯಾಕ್ ಅಟ್ಯಾಕ್ ನಿಂದ  ಕಿರಿಯ ವಯಸ್ಸಿನವರು ಸಾವಿಗೀಡಾಗುತ್ತಿರುವ ಪ್ರಕರಣಗಳನ್ನು ನಾವು ನಿತ್ಯ ಕೇಳುತ್ತಿದ್ದೇವೆ, ನೋಡುತ್ತಿದ್ದೇವೆ. ಹೃದಯಾಘಾತ ಎನ್ನುವುದು ಅತ್ಯಂತ ತುರ್ತು ವೈದ್ಯಕೀಯ ಪರಿಸ್ಥಿತಿಯಾಗಿದೆ. ಇದು ಯೋಚಿಸಿ ತೀರ್ಮಾನ‌ ಕೈಗೊಳ್ಳಲು ಸಮಯ ನೀಡುವುದಿಲ್ಲ. ಹೃದಯಾಘಾತವಾದಾಗ ತಕ್ಷಣ ಏನು ಮಾಡಬೇಕು ಎಂಬುದನ್ನು ಅರಿಯುವುದು ಎಲ್ಲರಿಗೂ ಅನಿವಾರ್ಯವಾಗಿದೆ.

ಎಲ್ಲವೂ ಸರಿ ಇದೆ ಅಂದುಕೊಂಡು, ನಿತ್ಯದ ಕೆಲಸಗಳಲ್ಲಿ ತೊಡಗಿಕೊಂಡಿರುತ್ತೇವೆ. ಊಟ, ತಿಂಡಿ, ನಿದ್ರೆ ಹಾಗೂ ಆರೋಗ್ಯ ಸಹ ಮೇಲ್ನೋಟಕ್ಕೆ  ಸರಿಯಾಗಿಯೇ ಇರುತ್ತದೆ. ಆದರೆ ಹಠಾತ್ತನೆ ಹೃದಯಾಘಾತವಾಗಿ ಆಸ್ಪತ್ರೆಗೆ ಸೇರುವ ಮುನ್ನವೇ ಇದು ಹೇಗಾಯಿತು, ಏನಾಯಿತು ಎನ್ನುವಷ್ಟರಲ್ಲೇ ಬದುಕಿನ ಯಾನ ಮುಗಿದು ಹೋಗಿರುತ್ತದೆ.

ಹಾಗಾದರೆ ಈ ಯುವ ಸಮುದಾಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತವನ್ನು ತಡೆಗಟ್ಟಲು ವಹಿಸಬೇಕಾದ ಮುನ್ನೆಚ್ಚರಿಕೆಗಳು ಎನು ? ಯಾವ ರೀತಿಯ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂಬುದಕ್ಕೆ ಕೆಲವೊಂದು ವಿಧಾನಗಳನ್ನು ಅರಿತುಕೊಳ್ಳಬೇಕು.

ಹೃದಯದ ರಕ್ತನಾಳಗಳಲ್ಲಿ ರಕ್ತ ಚಲನೆಗೆ ಅಡಚಣೆಯಾಗಿ ಸರಿಯಾದ ಪ್ರಮಾಣದ ರಕ್ತ ಪೂರೈಕೆಯಾಗದಿರುವಾಗ ಉಂಟಾಗುವ ವೈದ್ಯಕೀಯ ತುರ್ತು ಸ್ಥಿತಿಯೇ ಹೃದಯಾಘಾತ. ಇದು ಹೃದಯದ ಸ್ನಾಯುಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಈ ವೇಳೆ ತತ್‍ಕ್ಷಣ ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಬೇಕು. ಇಲ್ಲದಿದ್ದಲ್ಲಿ ಹೃದಯಾಘಾತ ಮರಣಕ್ಕೂ ಕಾರಣವಾಗಬಹುದಾದಷ್ಟು ಅಪಾಯಕಾರಿ ಮತ್ತು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ.

ವೈದ್ಯಕೀಯ ಅಧ್ಯಯನಗಳ ಪ್ರಕಾರ ಹೃದಯದ ಕಾಯಿಲೆಗಳಿಗೆ ಕಾರಣವಾಗುವ ಅಂಶಗಳು ಹತ್ತು ಹಲವಾರಿವೆ. ಅವುಗಳಲ್ಲಿ ಅತಿಯಾದ ಧೂಮಪಾನ ಕೂಡ ಒಂದು ಎನ್ನುತ್ತಾರೆ ಪ್ರಸ್ತುತ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ವೈದ್ಯ ಡಾ.ದಿಲೀಪ್ ಕುಮಾರ್.

ಅತಿಯಾದ ಧೂಮಪಾನದಿಂದ ಮಾನವನ ರಕ್ತದಲ್ಲಿ ವಿಷಕಾರಿ ನಿಕೋಟಿನ್ ಅಂಶ ಸೇರುತ್ತದೆ. ರಕ್ತನಾಳದಲ್ಲಿ ಲಿಪಿಡ್ ಪಾರ್ಟಿಕಲ್ಸ್ ಮತ್ತು ಪ್ಲೇಟ್ಲೆಟ್ ಕಂಟೆಂಟ್‌ ಜಮಾಯಿಸಿ ರಕ್ತಚಲನೆಗೆ ಅಡ್ಡಿಯಾಗಿ ಹೃದಯಾಘಾತ ಸಂಭವಿಸುತ್ತದೆ ಎಂದು ಅವರು ವಿವರಿಸುತ್ತಾರೆ‌.


ಅತಿಯಾದ ದೇಹದ ತೂಕ ಒಳ್ಳೆಯದಲ್ಲ

ವಯಸ್ಸು ಮತ್ತು ಎತ್ತರಕ್ಕೆ‌ ತಕ್ಕಂತೆ ನಮ್ಮ‌ ದೇಹದ ತೂಕವನ್ನು ಕಾಯ್ದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಅಂಶ. ದೇಹದಲ್ಲಿ ಅನಗತ್ಯ ಕೊಲೆಸ್ಟ್ರಾಲ್ ಪ್ರಮಾಣ‌ ಹೆಚ್ಚಾದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೈಹಿಕವಾಗಿ ಯಾವುದೇ ರೀತಿಯ ಚಟುವಟಿಕೆ ಮಾಡದೆ, ಆಹಾರ ಸೇವನೆಯಲ್ಲಿ ಇತಿಮಿತಿ ಇಲ್ಲದಿರುವುದು ದೇಹದ ತೂಕ‌ ಹೆಚ್ಚಾಗಲು ಕಾರಣವಾಗುತ್ತದೆ. ಇದು ಚೈನ್ ಲಿಂಕ್ ನಂತೆ ರಕ್ತದೊತ್ತಡ, ಮಧುಮೇಹ ನಂತರ ಹೃದಯಾಘಾತಕ್ಕೂ ಕಾರಣವಾಗುತ್ತದೆ.


ಅತಿ ಜಿಡ್ಡು ಸೇವನೆ ಹೃದಯಾಘಾತಕ್ಕೆ ಆಹ್ವಾನ

ಎಣ್ಣೆಯಲ್ಲಿ ಕರೆದ ಪದಾರ್ಥಗಳು, ಬೀದಿ ಬದಿ ಮಾರಾಟವಾಗುವ ಪದಾರ್ಥಗಳು, ಅಧಿಕ‌ ಜಿಡ್ಡಿನಾಂಶದ ಆಹಾರ‌ಗಳ ಅತಿಯಾದ ಸೇವನೆ‌ ಇದೆಲ್ಲವೂ ಹೃದಯ‌ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತವೆ. ಕೆಲವರಂತೂ ಸ್ನಾಕ್ಸ್ ಗಳಿಗೆ ದಾಸರಾಗಿರುತ್ತಾರೆ.‌ ಬೀದಿ ಬದಿಯಲ್ಲಿ ಮಾರಾಟವಾಗುವ ಜಿಡ್ಡು ಹಾಗೂ ಪಾಮ್ ಎಣ್ಣೆ ಬಳಸಿ ತಯಾರಿಸಿದ ತಿನಿಸುಗಳನ್ನು ಹೆಚ್ಚು ಹೆಚ್ಚು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಗೊತ್ತಿದ್ದರೂ ಬಾಯಿಯ ರುಚಿಗೆ ಮಾರು ಹೋಗಿ ವಾರದಲ್ಲಿ ಎರಡ್ಮೂರು ಅಥವಾ ಅದಕ್ಕಿಂತ‌ ಹೆಚ್ಚು ಬಾರಿ ಇಂತಹ ತಿನಿಸುಗಳನ್ನು ತಿನ್ನುತ್ತಾರೆ. ಅದೆಷ್ಟೋ ಸ್ನಾಕ್ಸ್ ತಯಾರಕರು ಬಹಳ ದಿನಗಳವರೆಗೆ ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಳಸಿ ತಿನಿಸುಗಳನ್ನು ತಯಾರಿಸುತ್ತಾರೆ. ಇದನ್ನು ಸೇವಿಸುವುದು ಸಹ ಹೃದಯ ಸಂಬಂಧಿ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆಯೇ ಸರಿ.

ಸಾಧಾರಣವಲ್ಲದ ರಕ್ತದೊತ್ತಡ

ಇತ್ತೀಚಿನ ದಿನಮಾನಗಳಲ್ಲಿ ಸಣ್ಣ ವಯಸ್ಸಿನಲ್ಲೇ ರಕ್ತದೊತ್ತಡ ಏರುಪೇರಾಗುವುದು ಸಾಮಾನ್ಯವಾಗಿದೆ. ರಕ್ತದೊತ್ತಡ ಹೆಚ್ಚಾಗುವುದರಿಂದ ಹೃದಯಾಘಾತ ಸಂಭವಿಸುತ್ತದೆ. ನಮ್ಮಲ್ಲಿನ ದೈಹಿಕ ಬಲದಿಂದ ರಕ್ತದೊತ್ತಡದ ಪರಿಣಾಮಗಳು ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ಹೀಗಾಗಿ ಇಪ್ಪತ್ತೈದು ವರ್ಷ ದಾಟಿದ ಪ್ರತಿಯೊಬ್ಬರೂ ಕನಿಷ್ಟ ಮೂರು ತಿಂಗಳಿಗೊಮ್ಮೆ ಅಥವಾ ಗರಿಷ್ಠ ಆರು ತಿಂಗಳಿಗೊಮ್ಮೆಯಾದರೂ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ರೂಪಿಸಿಕೊಳ್ಳಬೇಕು. ಇದಕ್ಕೆ ಯಾವುದೇ ಹಣ ಕೊಡಬೇಕಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ‌ ಪರೀಕ್ಷೆ ಮಾಡಿಸಿಕೊಳ್ಳಬಹುದು. ಆನಂತರ ಬಿಪಿ ಹೆಚ್ಚು ಅಥವಾ ಕಡಿಮೆ ತೋರಿಸಿದರೆ ವೈದ್ಯರ ಸಲಹೆ ಪಡೆದು ಸೂಕ್ತ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯಂತ ಅವಶ್ಯಕ.


ಅನಿಯಂತ್ರಿತ ಮಧುಮೇಹದಿಂದ ಹೃದಯಾಘಾತ

ಸಕ್ಕರೆ ಕಾಯಿಲೆ ಎಂದು ಕರೆಯಿಸಿಕೊಳ್ಳುವ ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ಹೃದಯಾಘಾತದ‌ ತೊಂದರೆ ಸಂಭವಿಸುತ್ತದೆ. ಇದೊಂದು ದೀರ್ಘ ಕಾಲದ ಆರೋಗ್ಯ ಸಮಸ್ಯೆಯಾಗಿದ್ದು ನಿರಂತರ ವೈದ್ಯರ ಆಪ್ತ ಸಮಾಲೋಚನೆ ಅಗತ್ಯವಾಗಿರುತ್ತದೆ. ವೈದ್ಯರ ಸೂಕ್ತ ಮಾರ್ಗದರ್ಶನ ಪಡೆದು ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಿಕೊಡರೆ ಹೃದಯಾಘಾತ ಹಾಗೂ ಪಾರ್ಶ್ವವಾಯುಗಳಿಂದ ರಕ್ಷಿಸಿಕೊಳ್ಳಬಹುದು.


ಮಾನವನ ದೇಹಕ್ಕೆ ವ್ಯಾಯಾಮ ಅತ್ಯಗತ್ಯ

ಪ್ರತಿಯೊಬ್ಬ ಮಾನವನು ತನ್ನ ದೈಹಿಕ ಆರೋಗ್ಯವನ್ನು ಹದವಾಗಿಟ್ಟುಕೊಳ್ಳಲು ವ್ಯಾಯಾಮಕ್ಕೆ ಪ್ರಥಮ ಆದ್ಯತೆ ಕೊಡಬೇಕು. ನಿತ್ಯ ಬೆಳೆಗ್ಗೆ ಅಥವಾ ಸಂಜೆ ಸಮಯ ಕನಿಷ್ಟ ಒಂದು ಗಂಟೆ ಕಾಲ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಅಭ್ಯಾಸ.‌ ವ್ಯಾಯಾಮದಿಂದ ದೇಹದ ಎಲ್ಲ ಭಾಗಗಳಲ್ಲಿ ರಕ್ತಚಲನೆ ಉತ್ತಮಗೊಂಡು ಅನಗತ್ಯ ಬೊಜ್ಜು ಕರಗುತ್ತದೆ. ಇದರಿಂದ ಉತ್ಸಾಹಭರಿತ ದೈಹಿಕ ಸಾಮರ್ಥ್ಯ ನಿಮ್ಮದಾಗಿ ಉತ್ತಮ ಆರೋಗ್ಯ ಹೊಂದುವಿರಿ.


ಹಸಿರು ತರಕಾರಿಗಳ ಸೇವನೆ

ಕೇಲ್ ಮತ್ತು ಪಾಲಕ್ ಸೇರಿದಂತೆ ಇತರ ಹಲವಾರು ತರಕಾರಿಗಳು ಪೊಟ್ಯಾಸಿಯಮ್‌ ಹಾಗೂ ಮೆಗ್ನೀಸಿಯಂ ಹೊಂದಿರುತ್ತವೆ. ಇದರಲ್ಲಿ ರಕ್ತದೊತ್ತಡ ಸರಿದೂಗಿಸುವ ಶಕ್ತಿಯಿರುತ್ತದೆ. ಮನುಷ್ಯನ ದೇಹದಲ್ಲಿ ರಕ್ತದೊತ್ತಡ ಸರಿಯಾದ ಸ್ಥಿತಿಯಲ್ಲಿದೆ ಎಂದಾದರೆ ಬಹುತೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಡಿವಾಣ ಬಿದ್ದಂತೆ. ಅಲ್ಲದೇ ಕಡಿಮೆ ಕ್ಯಾಲೊರಿಗಳು ಹಾಗೂ ಸಮೃದ್ಧವಾಗಿ ಫೈಬರ್ ಹೊಂದಿರುವ ತರಕಾರಿಗಳ ಸೇವನೆಯಿಂದ ಹೃದಯ ರಕ್ತನಾಳದ ಆರೋಗ್ಯವನ್ನು ಉತ್ತೇಜಿಸಲು ಬಲು ಸಹಕಾರಿಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಸಿರು ತರಕಾರಿಗಳು ಪ್ರತಿಯೊಬ್ಬರ ನಿತ್ಯ ಆಹಾರದ ಭಾಗವಾಗಬೇಕು. ಯಾವುದೇ ಆರೋಗ್ಯ ಸಮಸ್ಯೆ ಇದ್ದಾಗಲೂ ವೈದ್ಯರು ತರಕಾರಿ ಸೇವನೆ ತ್ಯಜಿಸುವಂತೆ ಹೇಳುವುದಿಲ್ಲ. ಕಾರಣ ತರಕಾರಿ ಎಂತಹ ಸಂದರ್ಭದಲ್ಲೂ ಮನುಷ್ಯನ ದೇಹಕ್ಕೆ ಕೆಡುಕುಂಟು ಮಾಡುವುದಿಲ್ಲ.  

ಡ್ರಗ್ಸ್‌ಗೆ ದಾಸರಾಗುವುದು ಮಾರಕ

ಡ್ರಗ್ಸ್‌ಗಳ ಸೇವನೆಗೆ ದಾಸರಾಗಿ ಸಿಕ್ಕಸಿಕ್ಕ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ. ವೈದ್ಯರ ಸಲಹೆ ಇಲ್ಲದೇ ಯಾವುದೇ ಔಷಧೋಪಚಾರ ಮಾಡಿಕೊಳ್ಳುವುದು ಸಲ್ಲದು. ಇದು ಕಡಿಮೆ ವಯಸ್ಸಿನಲ್ಲೇ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.


ಈ ಎಲ್ಲಾ ವಿಧಾನಗಳನ್ನು ಅನುಸರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯುವಕರು ಮುಖ್ಯವಾಗಿ ನಿರ್ಲಕ್ಷ್ಯ ಮನೋಭಾವ ಬಿಟ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಹಾರ್ಟ್ ಅಟ್ಯಾಕ್ ಅಥವಾ ಕಾರ್ಡಿಯಾಕ್ ಅರೆಸ್ಟ್‌ಗಳಂಥ ಮಾರಣಾಂತಿಕ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು.

Disclaimer: The views expressed in this article are solely those of the author and do not represent the views of Ayra or Ayra Technologies. The information provided has not been independently verified. It is not intended as medical advice. Readers should consult a healthcare professional or doctor before making any health or wellness decisions.
Category:Health and Wellness



ProfileImg

Written by ಎಂ.ಡಿ.ಯುನುಸ್

Verified

ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ