ರೀ ನೋಡ್ರಿ ಯಾವುದೋ ಮಗು ನಮ್ಮ ಹಿಂದೇನೇ ಬರ್ತಿದೇರೀ ..
ಏ ಸುಮ್ನಿರೆ ಎಲ್ಲಿ ಹೋದ್ರೂ ನಿನ್ನು ಗುನುಗು ಇದ್ದೇ ಇದೆ. ಯಾರ ಮಗುವೋ ಏನೊ ಅದರ ತಾಯಿ ಇಲ್ಲೇ ಎಲ್ಲೊ ತರಕಾರಿ ಕೊಳ್ತಾ ಇದ್ದೇಕು. ಬೇಗ ಹೋಗೋಣ. ಮಳೆ ಬೇರೆ ಬರೋ ಹಾಗಿದೆ. ಪ್ರಭಾಕರ್ ಮಡದಿ ಸುಶೀಲಗೆ ಹೇಳುತ್ತಲೆ ಕಾರು ಸ್ಟಾರ್ ಮಾಡಿದ. ಕಾರು ಎರಡು ಮೀಟರ್ ಮುಂದೆ ಹೋಗುತ್ತಲೇ ಸುಶೀಲ ಕಿಟ್ಟನೆ ಕಿರುಚಿದಳು. ಆ ಮಗು ಕಾರಿನ ಎದುರಾಗಿ ಓಡಿ ಬಂದಿತ್ತು. ಪ್ರಭಾಕರ್ ಕೂಡಲೇ ಬ್ರೇಕ್ ಹಾಕಿ ಕಾರು ಮಗುವಿನ ಮೇಲೆ ಹೋಗದಂತೆ ತಡೆಯುವಲ್ಲಿ ಸಫಲನಾಗಿದ್ದರೂ ಮಗು ಬಿದ್ದು ಎಚ್ಚರ ತಪ್ಪಿತ್ತು.
“ಏನ್ರಿ ಕನಸ್ ಕಾಡ್ತ ಕಾರ್ ಬಿಡ್ತೀರೇನ್ರಿ? ಕಣ್ ಕಾಣಿಸಲ್ಲವಾ” ಎಂದೆಲ್ಲ ಸುತ್ತುಮುತ್ತಲಿನ ಜನರ ಬೈಗಳು ಕೇಳುತ್ತಲೇ ಪ್ರಭಾಕರ್ ಅಂಗಡಿಯೊಂದರಿಂದ ನೀರು ಕೇಳಿ ತಂದು ಮಗುವಿನ ಮುಖಕ್ಕೆ ಹಾಕಿ ಎಚ್ಚರ ಬರಿಸಿದ. ಮಗು ಅಮ್ಮ " ಅಳತೊಡಗಿತು. ಇಷ್ಟಾದರೂ ಮಗುವಿನ ತಾಯಿಯ ಪತ್ತೆಯೇ ಇರಲಿಲ್ಲ. ಎಲ್ಲರೂ ಮಗುವಿನ ತಾಯಿಯನ್ನು, ಪ್ರಭಾಕರನನ್ನೂ ಬೈಯುತ್ತಾ ಚದುರಿ ಹೋದರೂ ಮಗುವನ್ನು ಕೇಳಿಕೊಂಡು ಯಾರೂ ಬರಲಿಲ್ಲ, ಸಂತೆಯಿಡೀ ಖಾಲಿಯಾಗಿ ಅಂಗಡಿಗಳು ಮುಚ್ಚತೊಡಗಿದ್ದರೂ ಮಗುವಿನ ಅಳುವೂ ನಿಂತಿರಲಿಲ್ಲ. ಬಿಸ್ಕೆಟ್ ಕೊಟ್ಟು ಸುಶೀಲ ಮಗುವನ್ನು ಸಮಾಧಾನಿಸಲು ಪ್ರಯತ್ನಿಸಿದರೂ ಬಿಸ್ಕೆಟ್ ಕೈಯಲ್ಲಿ ಹಿಡಿದು ಮಗು ಅಳುತ್ತಿತ್ತು. ಸುಶೀಲ ನಿನ್ನ ಹೆಸರೇನು ಮರೀ ಎಂದು ಕೇಳಿದಾಗ ಮಗು ಕಿರಣ ಎಂದುತ್ತರಿಸಿತು. ಮನೆ ಎಲ್ಲಿದೆ ಎಂದು ಕೇಳಲು 'ದೂರ' ಎಂದುತ್ತರಿಸಿತು. ಪ್ರಭಾಕರ್ಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಕತ್ತಲು ಬೇರೆ ಕವಿಯುತ್ತಿತ್ತು. ಕೊನೆಗೆ ಸುಶೀಲ 'ರೀ ಕತ್ತಲಾಗಿದೆ. ಈಗ ಮಗನ ಮನೆಗೆ ಕರೊಂಡು ಹೋಗೋಣ. ನಾಳೆ ಪೋಲೀಸ್ ಕಂಪ್ಲೆಂಟ್ ಕೊಟ್ಟು ಮಗುವಿನ ತಾಯಿನ ಹುಡುಕಿಸೋಣ' ಎಂದು ಹೇಳಿದಾಗ 'ಬೇವಾರ್ಸಿಗಳು, ಮಕ್ಕನ್ನ ಹೆರ್ತಾವೆ, ನೋಡ್ಕೊಳ್ಳೋಕೆ ಆಗಲ್ವ”ಎನ್ನುತ್ತಲೇ ಪ್ರಭಾಕರ್ ಕಾರು ಹತ್ತಿದರು. ಮಗು ಸುಶೀಲಳ ಮಡಿಲಲ್ಲೇ ನಿದ್ದೆ ಮಾಡಿತ್ತು. ಇದೆಲ್ಲವನ್ನೂ ಕಸದ ತೊಟ್ಟಿಯ ಹಿಂದಿನಿಂದ ಜೋಡಿ ಕಂಗಳು ವೀಕ್ಷಿಸುತ್ತಿದ್ದವು.
ಕಿರಣ ಈಗ ಪ್ರಭಾಕರ್ ಮನೆಗೆ ಹಳಬನಾಗಿದ್ದ. ಮಕ್ಕಳಿಲ್ಲದಿದ್ದ ಸುಶೀಲ ಮಗುವನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು ಅವನನ್ನು ಆರೈಕೆ ಮಾಡುತ್ತಾ ತನಗೆ ಮಕ್ಕಳಿಲ್ಲವೆಂಬ ಕೊರಗನ್ನು ಸುಶೀಲ ಮರೆತಿದ್ದಳು. ಪ್ರಭಾಕರ್‌ಗೆ ಮಾತ್ರ ಕಿರಣನನ್ನು ಕಂಡರೆ ಆಗುತ್ತಿರಲಿಲ್ಲ. ಅವನು ಕಿರಣ ಸಿಕ್ಕಿದ ಮರುದಿನವೇ ಸಬ್ ಇನ್ಸ್‌ಪೆಕ್ಟರ್ ಹರೀಶ್ ಅವರಲ್ಲಿ ಕಂಪ್ಲೆಂಟ್ ಕೊಟ್ಟಿದ್ದನು. ಹರೀಶ್ ಮಗುವಿನ ತಾಯಿಯನ್ನು ಹುಡುಕಿಕೊಡುವುದಾಗಿ ಆಶ್ವಾಸನೆಯಿತ್ತು, ಅದುವರೆಗೆ ಮಗು ನಿಮ್ಮಲ್ಲೇ ಇರಲಿ ಎಂದಿದ್ದರು. ಅದರಿಂದ ಪ್ರಭಾಕರ್‌ಗೆ ಕಿರಣನನ್ನು ತನ್ನ ಮನೆಯಲ್ಲಿರಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಇದರಿಂದ ಸುಶೀಲ ಗೆಲುವಾಗಿದ್ದಳು.
ಮದುವೆಯಾದ ಹೊಸದರಲ್ಲಿ ಪ್ರಭಾಕರ್ ಸುಶೀಲಳಿಗೆ ಪ್ರೀತಿಯ ಹೊಳೆಯನ್ನೇ ಹರಿಸಿದ್ದ. ಭಾರತದ ಎಲ್ಲೆಡೆಯಲ್ಲಿಯೂ ಅವರಿಬ್ಬರು ಜೋಡಿ ಹಕ್ಕಿಗಳಂತೆ ವಿಹರಿಸಿದ್ದರು. ಕಾಫಿ ಎಸ್ಟೇಟ್ ಓನರ್ ಆಗಿರುವ ಪ್ರಭಾಕರ್‌ಗೆ ಹಣದ ಕೊರತೆ ಇರಲಿಲ್ಲ. ಆಗ ಅವನ ತಂದೆ ಶೇಷಪ್ಪ ಇದ್ದಿದ್ದರಿಂದ ಜವಾಬ್ದಾರಿಯೂ ಇರಲಿಲ್ಲ. ಒಂದು ದಿನ ಬೇಲೂರು ಹಳೆಬೀಡಿಗೆ ಹೋಗಿ ಶಿಲ್ಪಕಲೆಯ ತವರೂರಿನ ಸೌಂದರ್ಯವನ್ನು ಸವಿದಿದ್ದರೆ ಮತ್ತೊಂದು ದಿನ ಕನ್ಯಾಕುಮಾರಿಗೆ ಹೋಗಿ ಒಂದೆಡೆಯಲ್ಲಿ ಮುಳುಗುವ ಕಾತುರದಲ್ಲಿದ್ದ ಸೂರ್ಯನನ್ನು ಮತ್ತೊಂದೆಡೆಯಲ್ಲಿ ನಿದ್ದೆಯಿಂದ ಆಗ ತಾನೇ ಎಚ್ಚೆತ್ತು ಮೂಡುತ್ತಿದ್ದ ಚಂದ್ರನನ್ನು ನೋಡಿ ಅಲ್ಲಿಯ ರಮಣೀಯತೆಗೆ ಮಾರುಹೋಗಿದ್ದರು. ಪ್ರಭಾಕರ್ ಸುಶೀಲ ಒಬ್ಬರನ್ನೊಬ್ಬರು ಒಂದು ಕ್ಷಣವೂ ಬಿಟ್ಟು ಇರುತ್ತಿರಲಿಲ್ಲ. ಆದರೆ ವಧಿಗೆ ಇದು ಸಹನವಾಗಲಿಲ್ಲವೋ ಏನೋ? ಒಂದು ದಿನ ಹೊರಗೆ ಸುತ್ತಾಡಲೆಂದು ಸ್ಕೂಟರಿನಲ್ಲಿ ಹೋಗಿದ್ದಾಗ ಹುಚ್ಚು ಕಟ್ಟಿ ಓಡಿ ಬರುತ್ತಿದ್ದ ಎತ್ತೊಂದು ಅಡ್ಡ ಸಿಕ್ಕಿ ಇಬ್ಬರೂ ಬಿದ್ದಿದ್ದರು. ಎಚ್ಚರವಾದಾಗ ಇಬ್ಬರೂ ನರ್ಸಿಂಗ್ ಹೋಮ್ ಒಂದರಲ್ಲಿ ಇದ್ದರು.
೧. ಡಾಕ್ಟರ್ ಜಯರಾಮ್ ಬಂದು “ನೀವಿಬ್ಬರೂ ಅದೃಷ್ಟಶಾಲಿಗಳು ಹೆಚ್ಚೇನು ಪೆಟ್ಟಾಗಿಲ್ಲ. ನಿಮಗೆ ಕಿಡ್ನಿಗೆ ಪೆಟ್ಟಾಗುವುದು ಸ್ವಲ್ಪದರಲ್ಲಿ ತಪ್ಪಿಹೋಗಿದೆ. ಕಿಡ್ನಿಗೆ ಪೆಟ್ಟಾಗಿದ್ದರೆ ನಾವು ಏನು ಮಾಡುವ ಹಾಗೂ ಇರಲಿಲ್ಲ. ಸದ್ಯ ನೀವು ಮಕ್ಕಳ ಜೊತೆ ಬಂದಿಲ್ಲವಲ್ಲ. ಎಳೆ ಮಕ್ಕಳಿಗೆ ಪೆಟ್ಟನ್ನು ತಡ್ಕೊಳೋಕೆ ಕಷ್ಟ ಆಗ್ತಿತ್ತು ... ಹೀಗೆ ಡಾ. ಜಯರಾಮ್ ಅವರು ಮಾತು ಮುಂದುವರಿಯುತ್ತಲೇ ಪ್ರಭಾಕರ್ ಡಾಕ್ಟರ್.... ನಮ್ಮ ವಿವಾಹವಾಗಿ ಒಂದು ವರ್ಷ ಆಯಿತಷ್ಟೆ. ಮಕ್ಕಳಾಗಿಲ್ಲ. ಎಂದು ಹೇಳುತ್ತಲೇ ಡಾ. ಜಯರಾಮ್ ಅವರ ಮುಖ ಸ್ವಲ್ಪ ಏನೋ ಅಹಿತವನ್ನು ಹೇಳಲಿರುವಂತೆ ಯೋಚನಾಕ್ರಾಂತವಾಯಿತು. ಆದರೂ ಅದನ್ನು ತೋರ್ಪಡಿಸದೆ “ನೋಡಿ ಮಕ್ಕಳೇ ಏನು ಜೀವನದಲ್ಲಿ ಪರಮ ಗುರಿ ಅಲ್ಲ. ಮಡದಿ ಮಕ್ಕಳಿಗಿಂತಲೂ ಹೆಚ್ಚಿನದು ಇದೆ. ಅದೆಷ್ಟೋ ಮಕ್ಕಳು ತಂದೆ ತಾಯಂದಿರನ್ನು ಕಳೆದುಕೊಂಡು ಅವರ ಪ್ರೀತಿಯಿಂದ ವಂಚಿತರಾಗಿ ಅನಾಥಾಲಯಗಳಲ್ಲಿ ಇದ್ದಾರೆ. ಮದರ್ ತೆರೇಸಾ ಅವರನ್ನು ನೋಡಿ ... ಡಾ. ಜಯರಾಮ್ ಮುಂದುವರಿಸುತ್ತಲೇ ಇದ್ದಾಗ "ಅದೆಲ್ಲ ನಮಗೆ ಏಕೆ ಹೇಳುತ್ತೀರ” ಡಾಕ್ಟರ್ ಎಂದು ಪ್ರಭಾಕರ್ ಪ್ರಶ್ನಿಸಿದ. ಆಗ ಅವರು “ಸ್ವಲ್ಪ ಧೈರ್ಯ ತಂದುಕೊಳ್ಳಿ. ಈ ಅಪಘಾತದಲ್ಲಿ ನೀವು ನಿಮ್ಮ ಪುರುಷತ್ವವನ್ನು ಕಳೆದುಕೊಂಡಿದ್ದೀರ. ನಿಮಗೆ ಮಕ್ಕಳಾಗುವಂತಿಲ್ಲ" ಎಂದು ನುಡಿದಿದ್ದರು.
ಪ್ರಭಾಕರ್ ಸುಶೀಲ ಇಬ್ಬರಿಗೂ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಗಿತ್ತು. ಅವರ ಕನಸುಗಳೆಲ್ಲ ನುಚ್ಚು ನೂರಾಗಿತ್ತು. ಈ ವಾರ್ತೆ ಕೇಳಿದ ಸ್ವಲ್ಪ ದಿನಗಳಲ್ಲೇ ಮಗನಿಗೆ ಕುಲದೀಪಕನು ಹುಟ್ಟಲಾರ ಎಂಬ ಕೊರಗಿನಿಂದ ಶೇಷಪ್ಪನವರು ಸ್ವರ್ಗಸ್ಥರಾಗಿದ್ದರು. ಅಂದಿನಿಂದ ಸುಶೀಲ ಒಂಟಿ, ಪ್ರಭಾಕರ್ ಪೂರ್ತಿ ಬದಲಾಗಿದ್ದ. ಕುಡಿತಕ್ಕೆ ಮರೆ ಹೋಗಿದ್ದ. ಬೇರೆಯವರ ಮಕ್ಕಳನ್ನು ದ್ವೇಷಿಸುತ್ತಿದ್ದ, ಯಾಂತ್ರಿಕವಾಗಿ ಜೀವನ ನಡೆಯುತ್ತಿತ್ತು. ಮೊಲದಂತೆ ವೇಗವಾಗಿ ಓಡಿದ ಮೊದಲ ಒಂದು ವರ್ಷ ಈಗ 2ನೇ ವರುಷ ಆಮೆಯಂತೆ ನಿಧಾನವಾಗಿ ತೆವಳತೊಡಗಿತ್ತು.
ಈಗ ಕಿರಣ ಸುಶೀಲಳ ಯಾಂತ್ರಿಕ ಬದುಕಿಗೆ ತಿರುವು ಕೊಟ್ಟಿದ್ದ. ಗುಂಡುಗುಂಡಗೆ ನೋಡಲು ಮುದ್ದಾಗಿದ್ದ ಕಿರಣ ನಕ್ಕರೆ ಕೆನ್ನೆಯಲ್ಲಿ ಗುಳಿ ಮೂಡಿ ದೃಷ್ಟಿ ತಾಕುವಂತೆ ಇದ್ದ. ಅವನ ಮುದ್ದು ಮಾತು ಕೇಳುತ್ತಾ ಸುಶೀಲ ಪ್ರಪಂಚವನ್ನೇ ಮರೆಯುತ್ತಿದ್ದಳು. ಕಿರಣ ಬಂದು ಆಗಲೇ ಮೂರು ತಿಂಗಳು
ಆಗಿತ್ತು. ಯಾರೂ ಅವನನ್ನು ಕೇಳಿಕೊಂಡು ಬಂದಿರಲಿಲ್ಲ. ಪ್ರಭಾಕರ್ ಕಿರಣನನ್ನು ಅನಾಥಾಲಯದಲ್ಲಿ ಬಿಡಲು ನಿರ್ಧರಿಸಿದಾಗ ಸುಶೀಲ ಅದನು ಬಲವಾಗಿ ವಿರೋಧಿಸಿದಳು. ಮಕ್ಕಳಾಗದ ನಮಗೆ ಕಿರಣ ದೇವರಿತ್ತ ಕೊಡುಗೆ. ಅವನನ್ನು ನಾವು ಬೆಳೆಸೋಣ. ಇಲ್ಲವಾದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪ್ರಭಾಕರನಲ್ಲಿ ಜಗಳವಾಡಿದ್ದಳು. ಅದರಿಂದ ಪ್ರಭಾಕರ್ ಸುಮ್ಮನಾಗಿದ್ದರೂ ಅದಕ್ಕೆ ತಕ್ಕ ಸಂದರ್ಭ ಕಾಯುತ್ತಿದ್ದ. ಅದಕ್ಕೆ ಸರಿಯಾಗಿ ಸುಶೀಲಳ ತಂದೆಯಿಂದ ಫೋನ್ ಬಂತು. ಸುಶೀಲಳ ತಾಯಿಗೆ ಹುಷಾರಿರಲಿಲ್ಲ. ಹಾಗೆ ಅವಳು ಕಿರಣನನ್ನು ಕೆಲಸದವಳ ಕೈಗೊಪ್ಪಿಸಿ ಜಾಗ್ರತೆ ಹೇಳಿ 'ವಾರದೊಳಗೆ ಬರುತ್ತೇನೆ' ಎಂದು ತಂದೆ ಮನೆಗೆ ಹೋದಳು. ಪ್ರಭಾಕರ್‌ಗೆ ಕಾಯುತ್ತಿದ್ದ ಸಂದರ್ಭ ಸಿಕ್ಕಿತ್ತು.
ಸುಶೀಲ ಅತ್ತ ಹೋಗುತ್ತಲೇ ಕಿರಣನನ್ನು ಕೂಡಲೇ ಅನಾಥಾಲಯದಲ್ಲಿ ಬಿಟ್ಟು ಬಂದರು. ಮತ್ತೆರಡು ದಿನ ಕಳೆದಿತ್ತು. ಮಧ್ಯಾಹ್ನ ಮಲಗಿರುವಾಗ ಅಂಚೆಯವನು ರಿಜಿಸ್ಟರ್ ಪತ್ರಕ್ಕೆ ಸಹಿ ಹಾಕಿಸಿ ಪತ್ರವನ್ನು ಕೊಟ್ಟು ಹೋದ. ಯಾರಿಂದ ಬಂದಿದೆ ಎಂದು ನೋಡಿದಾಗ ಸುಜಾತ, ನರ್ಸ್ ಪ್ರತಿಮಾ ನರ್ಸಿಂಗ್ ಹೋಂನ ನರ್ಸ್ ನನಗೆ ರಿಜಿಸ್ಟರ್ ಪತ್ರ ಬರೆಯಲು ಏನಿದೆ ಎಂದುಕೊಳ್ಳುತ್ತಲೇ ಕಾಗದ ಒಡೆದು ಓದತೊಡಗಿದ.
ಪ್ರಾರಂಭದಲ್ಲೇ Dear ಪ್ರಭು ಹೀಗೆ ನನ್ನನ್ನು ಹೇಳುವವರು ಯಾರೆಂದು ಯೋಚಿಸುತ್ತಲೇ ಅವನಿಗೆ ನೆನಪಾದಳು ಸುಜಾತ, ಪ್ರಭಾಕರ್‌ನ ಮೊದಲು ಮನಸೋಲಿಸಿದ್ದ ಹುಡುಗಿ ಸುಜಾತ, ಪ್ರಭಾಕರ್, ಸುಜಾತ ಒಬ್ಬರನ್ನೊಬ್ಬರು ಮನಸ್ಸಾರೆ ಪ್ರೀತಿಸುತ್ತಿದ್ದರು. ಅವರಿಬ್ಬರೂ ಮದುವೆ ಆಗುವುದೆಂದೂ ನಿಶ್ಚಯ ಆಗಿತ್ತು. ಇದಕ್ಕೆ ಎರಡು ಕಡೆಯ ಹಿರಿಯರಿಂದಲೂ ಸಮ್ಮತಿಯೂ ಇತ್ತು.
ಒಂದು ದಿನ ಅವರಿಬ್ಬರೂ ಹೊರಗೆ ಹೋಗಿದ್ದಾಗ ಯೌವ್ವನ ಸೆಳೆತಕ್ಕೊಳಗಾಗಿ ಅವರಿಬ್ಬರೂ ಒಂದಾಗಿದ್ದರು. ಹೇಗಿದ್ದರೂ ಮುಂದೆ ವಿವಾಹವಾಗುವವರೇ ತಾನೆ ಎಂದು ಇಬ್ಬರು ಗಾಬರಿಯಾಗದಿದ್ದರೂ ಮನದ ಮೂಲೆಯಲ್ಲಿ ಅಳುಕಿತ್ತು. ಆದರೆ ವಿಧಿಯ ಆಟವೇ ಬೇರೆ ಆಗಿತ್ತು. ಸುಜಾತಳ ಮೈಮೇಲೆ ಎದ್ದ ತೊನ್ನಿನ ಕಲೆ ಅವಳ ಜೀವನವನ್ನೇ ಬೇರೆ ಮಾಡಿತ್ತು. ತಾನು ಪ್ರೀತಿಸಿದ್ದ ಪ್ರಭಾಕರ್‌ನ ಬಾಳು ಹಾಳು ಮಾಡಲಿಚ್ಛಿಸದೆ ಅವನಿಂದ ದೂರವಾಗಿ ನರ್ಸಿಂಗ್ ಹೋಂ ಒಂದರಲ್ಲಿ ನರ್ಸ್ ಆಗಿ ಸೇರಿಕೊಂಡಿದ್ದಳು. ಆದರೆ ಪ್ರಭಾಕರ್‌ಗೆ ಅವಳೆಲ್ಲಿದ್ದಾಳೆಂದು ತಿಳಿದಿರಲಿಲ್ಲ. ಮನೆಯವರಿಗೂ ತಿಳಿಸದೇ ಅವಳು ದೂರ
90
ಹೋಗಿದ್ದಳು. ಪ್ರಭಾಕರ್ ಮುಂದೆ ಸುಶೀಲಳನ್ನು ವಿವಾಹವಾಗಿದ್ದ, ಸುಜಾತ ಆ ದಿನದ ತಪ್ಪಿನಿಂದಾಗಿ ಗರ್ಭ ಧರಿಸಿದ್ದಳು. ಅವಳು ಸಮಾಜಕ್ಕೆ ಹೆದರದೆ ಮಗುವನ್ನು ಹೆತ್ತು ಸಾಕಿದ್ದಳು. ಅಪಘಾತ ಆಗಿ ಪ್ರಭಾಕರ್ ನರ್ಸಿಂಗ್ ಹೋಮನಲ್ಲಿದ್ದಾಗ ಅಲ್ಲೇ ನರ್ಸ್ ಆಗಿದ್ದ ಸುಜಾತಳಿಗೆ ಅವರಿಗೆ ಮಕ್ಕಳಾಗಿಲ್ಲ. ಇನ್ನು ಆಗುವಂತಿಲ್ಲ ಎಂದು ತಿಳಿದಿತ್ತು. ಅಂದಿನಿಂದ ಅವಳಿಗೆ ಕಿರಣನನ್ನು ಪ್ರಭಾಕರ್‌ಗೆ ಒಪ್ಪಿಸಿ ಈ ಪ್ರಪಂಚದಿಂದ ದೂರವಾಗುವ ಆಸೆ ಪ್ರಬಲವಾಗಿತ್ತು. ಆ ದಿನ ಸಂತೆಗೆ ಹೋಗಿದ್ದಾಗ ಪ್ರಭಾಕರ್ ಸುಶೀಲ ಮುಂದೆ ಹೋಗುತ್ತಿರುವುದನ್ನು ನೋಡಿದ ಅವಳು ಕಿರಣನ ಹತ್ತಿರ ಅವರ ಹಿಂದೆ ಹೋಗು ನಿನಗೆ ಬಿಸ್ಕೆಟು ಕೊಡುತ್ತಾರೆ ಎಂದು ನಂಬಿಸಿ ದೂರ ಸರಿದು ನೋಡುತ್ತಿದ್ದಳು. ಮುಂದಿನದೆಲ್ಲವನ್ನು ಅವಳು ಗಮನಿಸಿದ್ದಳು. ಸುಶೀಲ ಕಿರಣವನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿರುವುದನ್ನು ನೋಡಿ ಅವಳಿಗೆ ತೃಪ್ತಿಯಾಗಿತ್ತು. ಇದನ್ನೆಲ್ಲ ಕಾಗದದಲ್ಲಿ ಬರೆದು ಕೊನೆಗೆ ಪ್ರಭು ... ನಿಮ್ಮಿಂದ ನಾನು ದೂರವಾದುದಕ್ಕೆ ಯಾರ ಹಿಂದೆಯೂ ಓಡಿ ಹೋಗಿರಬಹುದೆಂಬ ಭಾವನೆ ಇರಬಹುದಲ್ಲವೇ. ನಿಮಗೆ ಹೇಳದೆ ಇದ್ದುದ್ದಕ್ಕೆ ಕ್ಷಮಿಸಿ. ಈ ಪತ್ರ ನಿಮಗೆ ತಲುಪುವ ಮೊದಲೇ ನಾನು ಈ ಪ್ರಪಂಚದಿಂದ ದೂರವಾಗಿರುತ್ತೇನೆ. ನಿಮ್ಮ ಮಗು ಕಿರಣನನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮ್ಮಿಬ್ಬರ ಜೀವನದ ಆಶಾಕಿರಣವಾಗಲಿ ಅವನು ಎಂದು ಹಾರೈಸಿ ಇದನ್ನು ಇಲ್ಲಿಗೆ ನಿಲ್ಲಿಸುತ್ತದ್ದೇನೆ.
ಇಂತೀ ನಿಮ್ಮ ಹತಭಾಗ್ಯ
ಸುಜಾತ
ಸುಜಾತ ನೀನೆಷ್ಟು ವಿಶಾಲ ಹೃದಯಿ, ನಿನ್ನನ್ನು ನಾನು ಅರ್ಥ ಮಾಡಿಕೊಳ್ಳಲೇ ಇಲ್ಲ. ಈಗಲೇ ಕಿರಣನನ್ನು ಅನಾಥಾಲಯದಿಂದ ಕರೆತರುತ್ತೇನೆ ಎಂದು ಪ್ರಲಾಪಿಸುತ್ತಲೇ ಪ್ರಭಾಕರ್ ಅನಾಥಾಲಯಕ್ಕೆ ಧಾವಿಸಿದನು. ಅಲ್ಲಿಯವರಿಗೆ ವಿಷಯ ತಿಳಿಸಿ ಕಿರಣನನ್ನು ಹಿಂದಕ್ಕೆ ಕೊಡುವಂತೆ ಕೇಳಿದರು. ಆದರೆ ಕಾಲ ಮಿಂಚಿ ಹೋಗಿತ್ತು. ಪ್ರಭಾಕರ್ ಕಿರಣನನ್ನು ಅನಾಥಾಶ್ರಮಕ್ಕೆ ಸೇರಿಸಿದ ಅರ್ಧ ಗಂಟೆಯಲ್ಲೇ ಬಂದ, ಮಕ್ಕಳಿಲ್ಲದ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ದಂಪತಿಗಳು ಕಿರಣನನ್ನು ದತ್ತುಪುತ್ರನನ್ನಾಗಿ ಸ್ವೀಕರಿಸಿ ಅಮೆರಿಕಕ್ಕೆ ಅದೇ ದಿನವೇ ಕರೆದೊಯ್ದಿದ್ದರು. ಈಗ ಏನೂ ಮಾಡುವಂತಿಲ್ಲ. ಹಕ್ಕಿ ಕೈ ಜಾರಿಹೋಗಿತ್ತು.
- ಡಾ.ಲಕ್ಷ್ಮೀ ಜಿ ಪ್ರಸಾದ್