ಬಿರು ಬೇಸಿಗೆಯಲ್ಲಿ ಮನಸಿಗೆ ಹರ್ಷ ತರುವ 'ಗುಲ್ ಮೊಹರ್'

ProfileImg
20 May '24
2 min read


image

ಪ್ರತೀ ವರ್ಷ ಬಿರು ಬೇಸಿಗೆ ಸಸ್ಯ, ಪ್ರಾಣಿ ಸಂಕುಲವನ್ನು ಹೈರಾಣ ಮಾಡುತ್ತದೆ. ಬಿಸಿಲ ಧಗೆಯ ನಡುವೆ ಎಲ್ಲಿ ದೃಷ್ಟಿ ಹಾಯಿಸಿದರೂ ಹಸಿರಿಲ್ಲದೆ ಭಣಗುಡುತ್ತಿರುವ ಪರಿಸರ ಕಾಣಿಸುತ್ತದೆ. ಬಿಸಿಲ ಧಗೆಗೆ ಬಸವಳಿದು ವಸುಂಧರೆ ಹಸಿರು ಹೊದಿಕೆ ಹೊದ್ದುಕೊಳ್ಳಲು ಮಳೆಗಾಗಿ ಕಾಯುತ್ತಿದ್ದರೆ, ‘ಮೇ ಫ್ಲವರ್’ ಎಂದೇ ಕರೆಯಲ್ಪಡುವ ‘ಗುಲ್ ಮೊಹರ್’ ವೃಕ್ಷಗಳು ಬೇಸಿಗೆಯಲ್ಲಿ ಮೈ ತುಂಬ ರಕ್ತವರ್ಣದ ಹೂವುಗಳನ್ನು ಹೊದ್ದುಕೊಂಡು ದಾರಿಹೋಕರಿಗೆ ಉಲ್ಲಾಸ ನೀಡುತ್ತವೆ!

ಬಿರು ಬೇಸಿಗೆವರೆಗೂ ಮೈ ಮೇಲೆ ಹೊದ್ದುಕೊಂಡಿದ್ದ ಎಲೆಗಳನ್ನು ಉದುರಿಸಿ ರಕ್ತವರ್ಣದ ಹೂವುಗಳೊಂದಿಗೆ ಮೇ ತಿಂಗಳಿನಲ್ಲಿ, ಜೂನ್‌ನಲ್ಲಿ ಮಳೆ ಬರುವ ವೇಳೆ ಕಂಗೊಳಿಸುವ `ಗುಲ್ ಮೊಹರ್' ಮೂಲತಃ ಮಡಗಾಸ್ಕರ್‌ನದ್ದು. ಬೇಸಿಗೆಯ ಸುಡು ಬಿಸಿಲಿನಲ್ಲಿ ಜನರು ಹೊರಗಡೆ ತಿರುಗಾಡಲು ಕಷ್ಟಪಟ್ಟರೂ, ಕೆಂಪು ವರ್ಣದ ಹೂವುಗಳೊಂದಿಗೆ ಕಂಗೊಳಿಸುವ ಗುಲ್ ಮೊಹರ್ ದಾರಿಹೋಕರಿಗೆ ಒಂದಷ್ಟು ಹೊತ್ತು ಮನಸಿಗೆ ಖುಷಿ ನೀಡುವುದು ಸುಳ್ಳಲ್ಲ.

ಮೇ ತಿಂಗಳ ಬಿರುಬಿಸಿಲ ನಡುವೆ ಕೆಂಪು ಹೂ ಬಿಟ್ಟು ಕಂಗೊಳಿಸುವ ಗುಲ್ ಮೊಹರ್‌ನ್ನು ಜನರು ಸ್ಥಳೀಯವಾಗಿ `ಮೇ ಫ್ಲವರ್' ಎಂದು ಕರೆಯುವುದೂ ಇದೆ. ಇದಕ್ಕೆ ಕಾರಣ ಏಪ್ರಿಲ್-ಮೇ ತಿಂಗಳಿನಲ್ಲಿ ಇದು ಹೂ ಬಿಡುವುದೇ ಆಗಿದೆ. ಈ ವೃಕ್ಷದ ಬಗ್ಗೆ ತಿಳುವಳಿಕೆ ಇರುವ ಜನರು ಮಾತ್ರ ಇದನ್ನು ‘ಗುಲ್ ಮೊಹರ್’ ಎಂದು ಕರೆಯುತ್ತಾರೆ.

ಮೈಸೂರು ಮಹಾರಾಜರ ಕೊಡುಗೆ: ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಸುತ್ತಾಡಿದರೆ ಈ ವೃಕ್ಷ ತನ್ನ ರಕ್ತ ಬಣ್ಣದ ಹೂವುಗಳಿಂದ ಗಮನ ಸೆಳೆಯುತ್ತದೆ. ಮೈಸೂರಿನ ಪ್ರಮುಖ ರಸ್ತೆಗಳಲ್ಲಿ  ಹೂ ಬಿಟ್ಟು ಕಂಗೊಳಿಸುತ್ತಿರುವ ಈ ವೃಕ್ಷವನ್ನು ಮೈಸೂರು ಮಹಾರಾಜರು ವಿದೇಶದಿಂದ ತಂದು ನೆಡಿಸಿದರು. ಪರಿಸರದ ಬಗ್ಗೆ ಕಾಳಜಿ ಹೊಂದಿದ್ದ ಮಹಾರಾಜರಿಂದಾಗಿ ಇವು ಕೆಂಪು ಹೂ ಹೊದ್ದುಕೊಂಡು ನಗುತ್ತಿವೆ ಎಂದು ಇತಿಹಾಸ ಬಲ್ಲ ವೃಕ್ಷಪ್ರಿಯರು ಹೇಳುತ್ತಾರೆ.

ಇಂದು ಕರ್ನಾಟಕ ಮಾತ್ರವಲ್ಲ, ನಮ್ಮ ದೇಶದ ಹಲವು ಭಾಗಗಳಲ್ಲಿ ಕೆಂಪು ವರ್ಣದ ಹೂ ಬಿಡುವ ಗುಲ್ ಮೊಹರ್ ಕಾಣಸಿಗುತ್ತದೆ. ಅರಣ್ಯ ಇಲಾಖೆ ಕಳೆದ ಕೆಲ ದಶಕಗಳಿಂದ ಸಾಮಾಜಿಕ ಅರಣ್ಯ ಯೋಜನೆಯಡಿ ಇದನ್ನು ನೆಟ್ಟಿದ್ದು ತನ್ನ ಹೂವಿನ ಮೂಲಕ ನೋಡುಗರನ್ನು ಸೆಳೆಯುತ್ತಿದೆ.

ಆಕರ್ಷಕ ಹೂ: ಸಾಮಾನ್ಯವಾಗಿ ಗುಲ್ ಮೊಹರ್ ಏಪ್ರಿಲ್-ಮೇ ತಿಂಗಳಿನಲ್ಲಿ  ಹೂ ಬಿಟ್ಟು ಕಂಗೊಳಿಸುತ್ತದೆ. ಈ ಅವಧಿಯುಲ್ಲಿ  ಮರದ ತುಂಬಾ ಹೂಗಳು ಗೋಚರಿಸುತ್ತವೆ. ೨೦ರಿಂದ ೪೦ ಅಡಿಗಳವರೆಗೂ ಗುಲ್ ಮೊಹರ್ ಬೆಳೆಯಬಲ್ಲದು. ಇದು ಹೆಚ್ಚು ಎತ್ತರ ಬೆಳೆಯದೆ ಛತ್ರಿಯಾಕಾರದಲ್ಲಿ  ಬೆಳೆಯುತ್ತದೆ. ಈ ವೃಕ್ಷವನ್ನು ನೆರಳಿಗಾಗಿ, ಅಲಂಕಾರದ ದೃಷ್ಟಿಯಿಂದ ರಸ್ತೆ ಬದಿಯಲ್ಲಿ  ನೆಡುವುದೇ ಹೆಚ್ಚು.

ಹೂ ಬಿಟ್ಟ ಗುಲ್‌ಮೊಹರ್ ಸುತ್ತ ಮಕರಂದ ಹೀರಲು ಜೇನುನೊಣ, ದುಂಬಿಗಳು ಗಿರಕಿ ಹೊಡೆಯುವ ದೃಶ್ಯ ಕಂಡು ಬರುವುದು ಸಾಮಾನ್ಯ. ಬಿಸಿಲ ಬೇಗೆಯಿಂದ ಪಾರಾಗಲು ಎಲೆ ಉದುರಿಸುವ ಗುಲ್ ಮೊಹರ್ ಈ ವೇಳೆ ಆಕರ್ಷಕ ಹೂ ಬಿಡುತ್ತದೆ. ಸುಮಾರು ೭-೮ ಸೆಂ.ಮೀ. ಉದ್ದದ ಐದು ಎಸಳಿನ ಕೆಂಪು ಬಣ್ಣದ ಸುಮಗಳಿಗೆ ಮನಸೋಲುವ ಜೇನು ನೊಣ, ದುಂಬಿಗಳು ಮಧು ಹೀರುವ ಮೂಲಕ ತಮ್ಮ ಆಹಾರ ಹುಡುಕಿಕೊಳ್ಳುತ್ತವೆ. ಇದರ ಜೊತೆಗೇ ಪರಾಗ ಸ್ಪರ್ಶ ಕ್ರಿಯೆ ನಡೆದು ಗುಲ್‌ಮೊಹರ್‌ನ ಸಂತಾನೋತ್ಪತಿಯ ಕೆಲಸವೂ ಸರಾಗವಾಗಿ ನಡೆಯುÄತ್ತದೆ.

ದಾರಿಹೋಕರಿಗೆ ಖುಷಿ: ಬಿರು ಬಿಸಿಲ ನಡುವೆ ರಸ್ತೆಯಲ್ಲಿ  ನಡೆದುಕೊಂಡು ಹೋಗುವವರು, ಬಸ್ ನಿಲ್ದಾಣದಲ್ಲಿ  ಬಸ್‌ಗಾಗಿ ಕಾಯವ ಪ್ರಯಾಣಿಕರು ಸುಂದರವಾಗಿ ಅರಳಿದ ಗುಲ್‌ಮೊಹರ್ ಹೂವುಗಳನ್ನು ಕಂಡು ಖುಷಿ ಪಡುತ್ತಾರೆ. ಆಕರ್ಷಕ ರಕ್ತವರ್ಣದ ಹೂ ಹೊತ್ತ ಗುಲ್‌ಮೊಹರ್ ಬಿಸಿಲಿನ ಬೇಗೆಯಲ್ಲಿ  ಮುದುಡಿದ ಮನಸುಗಳಿಗೆ ಸಾಂತ್ವನ ಹೇಳಿದಂತೆ ಭಾಸವಾಗುತ್ತದೆ ! ಕೆಂಪು ವರ್ಣದ ಗುಲ್‌ಮೊಹರ್ ಹೂವುಗಳಿಗೆ ಹೇಳಿಕೊಳ್ಳುವ ಸುವಾಸನೆ ಇಲ್ಲ. ಆದರೆ ಇದು `ಟುಬೆಬಿಯಾ' ಮರದಂತೆ ಮೈ ತುಂಬಾ ಹೂ ಹೊದ್ದುಕೊಂಡು ನೋಡುಗರನ್ನು  ತನ್ನತ್ತ ಸೆಳೆಯುತ್ತದೆ.

ಹೂ ಬಿಟ್ಟ ಕೆಲ ವಾರಗಳ ಬಳಿಕ ಇದು ಉದ್ದನೆಯ ಕೋಡನ್ನು ಬಿಡುತ್ತದೆ. ಈ ಕೋಡಿನೊಳಗೆ ಬೀಜಗಳು ಇರುತ್ತವೆ. ಕತ್ತಿಯಂತೆ ಉದ್ದವಾಗಿರುವ ಈ ಕೋಡನ್ನು ಹಿಡಿದುಕೊಂಡು ಗ್ರಾಮೀಣ ಭಾಗದ ಮಕ್ಕಳು ಪರಸ್ಪರ ‘ಕತ್ತಿ ಜಳಪಿಸುವುದೂ’ ಇದೆ. ಈ ಹೂವಿನ ಉದ್ದನೆಯ ಉಗುರಿನಂಥ ರಚನೆಯನ್ನು ಮಕ್ಕಳು ತಮ್ಮ ಬೆರಳುಗಳಿಗೆ ಸಿಕ್ಕಿಸಿಕೊಂಡು ರಾಕ್ಷಸನ ಉಗುರು ಎಂದು ಪರಸ್ಪರ ಹೆದರಿಸಲು ಯತ್ನಿಸುತ್ತಾರೆ.

-ಅರುಣ್ ಕಿಲ್ಲೂರು

Category:Nature



ProfileImg

Written by Arun Killuru

Author,Journalist,Photographer