ಮಹಾನ್ ಸಾಧಕರು

ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್

ProfileImg
21 Apr '25
2 min read


image

ಹಾಕಿ ಎಂಬ ಆಟದ ಬಗ್ಗೆ ಕೇಳಿದಾಗ ಭಾರತೀಯರು ರೋಮಾಂಚನಗೊಳ್ಳುವ ಹೆಸರು ಎಂದರೆ ಮೇಜರ್ ಧ್ಯಾನ್ ಚಂದ್. ಅವರನ್ನು "ಹಾಕಿ ಮಾಂತ್ರಿಕ", "ಭಾರತೀಯ ಹಾಕಿಯ ಜಾದೂಗಾರ", "ದಿ ವಿಝಾರ್ಡ್" ಎಂಬೆಲ್ಲ ಬಿರುದುಗಳಿಂದ ಸ್ಮರಿಸಲಾಗುತ್ತದೆ. ಅವರು ಭಾರತೀಯ ಹಾಕಿಗೆ ಜಾಗತಿಕ ಗರಿಮೆ ತಂದುಕೊಟ್ಟ ಅಪೂರ್ವ ಕ್ರೀಡಾಪಟು.

ಧ್ಯಾನ್ ಚಂದ್ ಅವರು ಆಗಸ್ಟ್ 29, 1905 ರಂದು ಉತ್ತರ ಪ್ರದೇಶದ ಅಲ್ಲಾಹಾಬಾದ್ (ಈಗ ಪ್ರಯಾಗರಾಜ್)ನಲ್ಲಿ ಜನಿಸಿದರು. ಅವರ ತಂದೆ ಸೇನೆಯಲ್ಲಿದ್ದರು ಮತ್ತು ಧ್ಯಾನ್ ಚಂದ್ ಕೂಡ 16ನೇ ವಯಸ್ಸಿಗೆ ಸೇನೆಗೆ ಸೇರಿದರು. ಬಾಲ್ಯದಲ್ಲಿ ಅವರಿಗೆ ಹಾಕಿಯ ಬಗ್ಗೆ ವಿಶೇಷ ಆಸಕ್ತಿ ಇರಲಿಲ್ಲ. ಆದರೆ ಸೇನೆಗೆ ಸೇರಿದ ಬಳಿಕ ಅವರು ಹಾಕಿ ಪಟುಗಳ ಆಟವನ್ನು ನೋಡಿ ಅತೀವ ಪ್ರೇರಿತರಾದರು. ಮುಂದೆ ಹಾಕಿ ಆಟದ ದಂತಕತೆಯಾಗಿ ಜಗದ್ವಿಖ್ಯಾತರಾದರು. ಹಾಕಿಯಲ್ಲಿ ಅವರ ಹೆಸರು ಅಜರಾಮರವಾಯಿತು.

ಧ್ಯಾನ್ ಚಂದ್ ಅವರ ಆಟದ ಶೈಲಿ ಅಭೂತಪೂರ್ವವಾಗಿತ್ತು. ಅವರು ಬಾಲನ್ನು ನಿಯಂತ್ರಣ ಮಾಡುವ ಹಾಗೂ ಗೋಲು ಹೊಡೆಯುವ ರೀತಿಯು ಪ್ರೇಕ್ಷಕರನ್ನು ಮೋಡಿ ಮಾಡುತ್ತಿತ್ತು, ಮಂತ್ರಮುಗ್ಧರನ್ನಾಗಿಸುತ್ತಿತ್ತು. ಕೆಲವೊಮ್ಮೆ ಪ್ರತಿಸ್ಪರ್ಧಿಗಳಿಗೆ ಬಾಲನ್ನು ಧ್ಯಾನ್ ಚಂದ್ ಅವರು ಅಯಸ್ಕಾಂತದಂತೆ ಯಾವಾಗಲೂ ತಮ್ಮ ಹತ್ತಿರ ಸೆಳೆದುಕೊಂಡಿದ್ದಾರೋ ಎಂದು ಭಾಸವಾಗುತ್ತಿತಂತೆ. ಇವರ ಆಟದ ಮೂಲಕ ಹಾಕಿ ಒಂದು ಕಲೆ ಎಂಬ ಅರ್ಥವನ್ನು ಭಾರತವಷ್ಟೇ ಅಲ್ಲ, ಇಡೀ ಜಗತ್ತು ಅರಿತುಕೊಂಡಿತು.

ಧ್ಯಾನ್ ಚಂದ್ ಅವರು 1928, 1932 ಮತ್ತು 1936 ರ ಒಲಿಂಪಿಕ್ಸ್ಗಳಲ್ಲಿ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದರು. ಈ ಮೂರು ಒಲಿಂಪಿಕ್‌ಗಳಲ್ಲಿಯೂ ಭಾರತ ಚಿನ್ನದ ಪದಕ ಗೆದ್ದುಕೊಂಡಿತು. ಅವರ ಆಟದ ಹೊರತಾಗಿ ಅವರ ನಾಯಕತ್ವವೂ ತಂಡವನ್ನು ಗೆಲುವಿನ ಹಾದಿಯಲ್ಲಿ ನಡೆಸಿತು.

1928: ಆಮ್ಸ್ಟರ್‌ಡ್ಯಾಮ್ ಒಲಿಂಪಿಕ್ಸ್ – ಭಾರತಕ್ಕೆ ಚಿನ್ನದ ಪದಕ.

1932: ಲಾಸ್ ಏಂಜೆಲ್ಸ್ ಒಲಿಂಪಿಕ್ಸ್ – ಭಾರತಕ್ಕೆ ಚಿನ್ನದ ಪದಕ.

1936: ಬರ್ಲಿನ್ ಒಲಿಂಪಿಕ್ಸ್ – ನಾಯಕತ್ವದೊಂದಿಗೆ ಚಿನ್ನದ ಪದಕ.

1936ರ ಬರ್ಲಿನ್ ಒಲಿಂಪಿಕ್ಸ್‌ನ ಬಳಿಕ ಜರ್ಮನಿಯ ನಿರಂಕುಶಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರು ಧ್ಯಾನ್ ಚಂದ್ ಅವರ ಆಟದಿಂದ ಮಹದಚ್ಚರಿಗೊಂಡು ಅವರನ್ನು ತನ್ನ ಸೇನೆಯಲ್ಲಿ ಉನ್ನತ ಹುದ್ದೆಯೊಂದಕ್ಕೆ ಆಹ್ವಾನಿತರಾಗಿ ಕರೆಕೊಟ್ಟಿದ್ದ ಎನ್ನುವ ಮಾಹಿತಿ ಲಭ್ಯವಿದೆ. ಆದರೆ ಧ್ಯಾನ್ ಚಂದ್ ಅವರು ಅದನ್ನು ತಿರಸ್ಕರಿಸಿ ತಮ್ಮ ದೇಶದ ಸೇವೆಯಲ್ಲೇ ಮುಂದುವರಿದರು.

ಭಾರತ ಸರ್ಕಾರ 1956 ರಲ್ಲಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅಲ್ಲದೆ, ಅವರ ಜನ್ಮದಿನವಾದ ಆಗಸ್ಟ್ 29 ರಂದು ಪ್ರತಿ ವರ್ಷ 'ರಾಷ್ಟ್ರೀಯ ಕ್ರೀಡಾ ದಿನ' (National Sports Day) ವಾಗಿ ಆಚರಿಸಲಾಗುತ್ತದೆ.

ಧ್ಯಾನ್ ಚಂದ್ ಅವರು 1979ರ ಡಿಸೆಂಬರ್ 3 ರಂದು ನಿಧನರಾದರು. ಆದರೆ ಅವರ ಹೆಸರು ಮತ್ತು ಕೊಡುಗೆಗಳು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಸದಾ ಅಮರವಾಗಿವೆ.




ProfileImg

Written by Amrut C Rao

Amrut C Rao, Barige, B Dodderi Post, Sorab Tq, Shimoga District 577434, ಫೋನ್ ನಂಬರ್ - 9481985721

0 Followers

0 Following