ಕರೋನಾ ಲಾಕ್ ಡೌನ್ ನ ಸುದೀರ್ಘ ರಜೆಯಲ್ಲಿ ಹೊತ್ತೇ ಹೋಗದ ಆ ಸಮಯದಲ್ಲಿ ಗಿರೀಶ ತನ್ನ ಮನೆಯ ಅಟ್ಟವನ್ನೇರಿದ. ಚಿಕ್ಕಂದಿನಿಂದಲೂ ಅವನಿಗಿದ್ದ ಒಂದು ಹವ್ಯಾಸವೆಂದರೆ ನೆನಪಾದಾಗಲೆಲ್ಲ ಮನೆಯ ಅಟ್ಟವನ್ನೇರುವುದು.ಅಲ್ಲಿರುವ ಹಳೆಯ ಕಾಲದ ರಾಶಿ ರಾಶಿ ಪುಸ್ತಕಗಳಲ್ಲಿ ಯಾವುದಾದರೂ ಒಂದನ್ನೆತ್ತಿಕೊಂಡು ಓದುವುದು.ಹಾಗೆ ಓದಲು ಕುಳಿತನೆಂದರೆ ಅವನಿಗೆ ಊಟ ತಿಂಡಿ ಯಾವುದರದ್ದೂ ನೆನಪಿರುತ್ತಿರಲಿಲ್ಲ. ಯಾರೂ ಕರೆದರೂ ಕೇಳಿಸುತ್ತಲೂ ಇರಲಿಲ್ಲ. “ಇವನೊಬ್ಬ ಅಟ್ಟ ಹತ್ತಿ ಕುಳಿತನೆಂದರೆ ಇವನಿಗೆ ಯಾವುದೂ ಬೇಡ” ಎಂದು ಗೊಣಗುತ್ತಲೇ ಅಮ್ಮ ಅಟ್ಟವೇರಿ ಬಂದಾಗ ಮಾತ್ರ ಗಿರೀಶ ಕೆಳಗಿಳಿಯುತ್ತಿದ್ದ. ಆ ಪುಸ್ತಕಗಳನ್ನೆಲ್ಲ ಓದಿ ಬರುವಾಗ ಅವನಿಗೆ ಹೊಸತೊಂದು ಲೋಕವನ್ನು ಪ್ರವೇಶಿಸಿ ಬಂದಂತಾಗುತಿತ್ತು. ಅವನಲ್ಲೊಂದು ಹೊಸ ಚೈತನ್ಯ ಹುರುಪು ತುಂಬಿರುತಿತ್ತು.ಇಂದೂ ಹಾಗೆ ಅಟ್ಟವೇರಿ ಕುಳಿತು ಪುಸ್ತಕಗಳ ರಾಶಿಯನ್ನು ತಡಕಾಡುತ್ತಿದ್ದಾಗ ಡೈರಿಯೊಂದು ಸಿಕ್ಕಿತು!. ತೆರೆದು ನೋಡಿದರೆ ಅಪ್ಪನ ಕೈ ಬರಹ..!! ರೋಮಾಂಚನ ವೆನಿಸಿತು. ಬಹಳ ಕುತೂಹಲಭರಿತನಾಗಿ ಪುಟಗಳನ್ನು ಒಂದೊಂದಾಗಿ ತೆರೆಯುತ್ತಾ ಹೋದ. ಕೆಲವು ಪುಟಗಳು ಖಾಲಿ..ಕೆಲವು ಕಡೆ ಓದಲೇ ಸಾಧ್ಯವಿಲ್ಲದಂತಹ ಅಸ್ಪಷ್ಠ ಬರಹ. ಕೆಲವೆಲ್ಲ ಅವನಿಗೆ ಗೊತ್ತಿರುವಂತಹ ಘಟನೆಗಳೇ. ಪುಟ ತೆರೆದಂತೆ ಒಂದು ಪುಟ ಮಾತ್ರ ಅವನನ್ನು ಮುಂದೆ ಹೋಗದಂತೆ ತಡೆಯಿತು.! ಓದಲು ಕಷ್ಟವಾಗುತಿದ್ದರೂ ಅಸಾಧ್ಯವೆಂಬಂತಿರಲಿಲ್ಲ. ಮೊದಲ ವಾಕ್ಯವೇ ಅವನಲ್ಲೊಂದು ವಿಚಿತ್ರ ಕುತೂಹಲ ಮೂಡಿಸಿತು.
“ನನ್ನ ಜೀವನದಲ್ಲಿ ನನ್ನ ಅರಿವಿಗೆ ಬಂದಂತೆ ನಾನು ಮಾಡಿದ ಮೊದಲ ಹಾಗೂ ಕೊನೆಯ ಏಕೈಕ ತಪ್ಪು...”
ಗಿರೀಶನಿಗೆ ಎದೆ ಢವಢವಿಸತೊಡಗಿತು..ಅಪ್ಪ ತನ್ನ ಖಾಸಗೀ ಜೀವನದ ಬಗ್ಗೆ ಹೇಳಿಕೊಳ್ಳಲು ಆರಂಭಿದಂತನ್ನಿಸಿ ವಿಚಿತ್ರ ಭಾವನೆ ಉದ್ವೇಗ ಆವರಿಸತೊಡಗಿತು.ಮೈಯೆಲ್ಲ ಕಣ್ಣಾಗಿ ಓದತೊಡಗಿದ.---......
.."ಆ ದಿನ ಪಕ್ಕದ ಮನೆಯಲ್ಲಿ ಮದುವೆ ಸಂಭ್ರಮ. ಮದುವೆ ಮನೆ ಜನರ ಗೌಜಿ ಗದ್ದಲಗಳಿಂದ ತುಂಬಿ ಹೋಗಿತ್ತು. ಸರಬರನೆ ಸದ್ದು ಮಾಡುತ್ತಾ ಓಡಾಡುತ್ತಿದ್ದ ಹೆಂಗೆಳೆಯರು..ಮನಸ್ಥಿತಿ ಅಂತಸ್ತುಗಳಿಗನುಸಾರವಾಗಿ ಅಲ್ಲಲ್ಲಿ ಗುಂಪು ಗುಂಪಾಗಿ ಹರಟೆ ಚರ್ಚೆ ನಗುವಿನಲ್ಲಿ ಮುಳುಗಿ ಹೋದ ಗಂಡಸರು..ಚಪ್ಪರವಿಡೀ ಪುಟುಪುಟುನೆ ಓಡಾಡುತ್ತ ಆಟ ಆಡುತ್ತ ನಕ್ಕು ನಲಿಯುತ್ತಿರುವ ಪುಟಾಣಿಗಳು...
ಇದ್ದಕ್ಕಿದ್ದಂತೆ ಮನೆಯ ಯಜಮಾನಿತಿ ಅಮೂಲ್ಯವಾದ ವಸ್ತುವೊಂದನ್ನು ಕಳೆದು ಕೊಂಡವರಂತೆ ಗರ ಬಡಿದವರಂತೆ ಚಪ್ಪರವಿಡೀ ಓಡಾಡತೊಡಗಿದರು.
"ಏನಾಯಿತು?” ಯಾರೋ ಕೇಳಿದರು
.“ನನ್ನ ಚಿನ್ನದ ನೆಕ್ಲೆಸ್ ಒಂದು ಕಳೆದು ಹೋಯಿತು..ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ..”
ಆಕೆ ಹೆಚ್ಚು ಕಡಿಮೆ ಅಳುತ್ತಳುತ್ತಲೇ ನುಡಿದು ಮತ್ತೆ ಇಡೀ ಮನೆ ಚಪ್ಪರ ತುಂಬಾ ಹುಡುಕುತ್ತ ಓಡಾಡಿದರು. ಅವರ ಗಂಡನಂತೂ ಅವರನ್ನೇ ಜರೆಯುತ್ತ ಅವರ ಹಿಂದೆಯೇ ಅಲೆಯ ತೊಡಗಿದರು. ಗುಂಪು ಗುಂಪಾಗಿ ಹರಟೆ ನಗು ಮಾತುಕತೆ ಗಳಲ್ಲಿ ತೊಡಗಿಸಿಕೊಂಡಿದ್ದವರು ಮುಖ ಮುಖ ನೋಡಿಕೊಳ್ಳುತ್ತ ತಾವೂ ಹುಡುಕಲಾರಂಭಿಸಿದರು. ಅರೆ ಹುಚ್ಚರಂತೆ ತಿರುಗಾಡುತ್ತಿದ್ದ ಗಂಡ ಹೆಂಡತಿಯನ್ನು ಕುಲಪುರೋಹಿತರು ತಮ್ಮ ಅಧಿಕಾರವನ್ನುಪಯೋಗಿಸಿ ಕರೆದು ಬುದ್ಧಿವಾದ ಹೇಳಿ ; ‘ಮೊದಲು ನಿಮ್ಮ ಮಗಳ ಮದುವೆ ಕಾರ್ಯಕ್ರಮ ಮುಗೀಲಿ..ಮುಹೂರ್ತ ಮೀರುತ್ತಿದೆ..ಆಮೇಲೆ ಎಲ್ಲರೂ ಸೇರಿ ಹುಡುಕಿದರಾಯಿತು. ಎಲ್ಲಿ ಹೋಗತ್ತೆ? ಇಲ್ಲೇ ಎಲ್ಲೋ ಬಿದ್ದಿರಬಹುದು ಸಿಕ್ಕೇ ಸಿಗುತ್ತೆ..ಮನೆ ದೇವರಿಗೊಂದು ಹರಕೆ ಹೊತ್ತುಕೊಳ್ಳಿ.... ‘ಬಂದವರೆದುರು ಬೀಗರೆದುರು ಮರ್ಯಾದೆ ಹೋಗುವುದು ಬೇಡ’ ಎಂದು ಗಂಡನೂ ಗದರಿಸಿ ಬುದ್ದಿ ಹೇಳಿ ಮದುವೆ ಮಂಟಪಕ್ಕೆ ಬಂದರು. ಅಕ್ಕಿ ತುಂಬಿದ್ದ ಮಗಳ ಕೈಗೆ ಧಾರೆ ಎರೆಯುತ್ತಿದ್ದ ಗಂಡ ಹೆಂಡತಿಯ ಮುಖದಲ್ಲಿ ಒಂಚೂರೂ ಕಳೆಯಿಲ್ಲ...!
ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದವರು ಮತ್ತೆ ತಮ್ಮ ತಮ್ಮ ಕೆಲಸ ಮಾತುಕತೆಗಳಲ್ಲಿ ತಲ್ಲೀನರಾದರು. ದೂರದಲ್ಲಿ ಮೌನವಾಗಿ ಕುಳಿತಿದ್ದ ನನ್ನ ಮನಸಿನಲ್ಲೊಂದು ಹೊಸಾ ಆಸೆ ಹುಟ್ಟಿತು. ನಾನು ಹುಡುಕಲೇ..? ಆ ನೆಕ್ಲೇಸು ನನಗೆಲ್ಲಿಯಾದರೂ ಸಿಕ್ಕಿಬಿಟ್ಟರೆ..!!ಎದೆಯೊಳಗೆ ಝಲ್ ಎನಿಸಿತು..ಪಾದದಿಂದ ತಲೆಯ ವರೆಗೆ ಮೈ ಕಂಪಿಸತೊಡಗಿತು.ಯಜಮಾನಿತಿ ಮತ್ತು ಮನೆಯ ಇತರರು ಅನಿವಾರ್ಯವಾಗಿ ಉಳಿದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಹುಡುಕುತಿದ್ದ ಕೆಲ ಮಂದಿ ಅವರೂ ಸುಮ್ಮನಾಗಿ ಮತ್ತೆ ತಮ್ಮದೇ ಲೋಕದಲ್ಲಿ ಮುಳುಗಿ ಹೋದರು. ನಾನು ನಿಧಾನವಾಗಿ ಗುಂಪಿನಿಂದ ಬೇರೆಯಾಗಿ ಅಲ್ಲಿ ಇಲ್ಲಿ ಸುಳಿಯಲಾರಂಭಿಸಿದೆ.ಎದೆಯೊಳಗೆ ಢವ..ಢವ.. ಹೊಟ್ಟೆಯಲ್ಲಿ ಸಂಕಟ ..ತಳಮಳ......
ಎರಡು ವಾರದಿಂದ ಮಗ ಹೊಟ್ಟೆ ನೋವು ಎಂದು ಅಳುತ್ತಿದ್ದ ದೃಶ್ಯ ಕಣ್ಣಮುಂದೆ ಬಂತು. ಮೊದ ಮೊದಲು ನಿರ್ಲಕ್ಷಿಸಿ ಹಳ್ಳಿ ಮದ್ದನ್ನೆಲ್ಲ ನೀಡಿದರೂ ಕಡಿಮೆ ಕಾಣದಾದಾಗ ಪಕ್ಕದಲ್ಲೇ ಇದ್ದ ಡಾಕ್ಟರ್ ನ್ನು ಭೇಟಿಯಾದರು. ಅವರೂ ಮೂರು ದಿನಕ್ಕೆ ಔಷಧ ಬರೆದು ಕೊಟ್ಟು ; ಏನಾಗುತ್ತೋ ನೋಡೋಣ ಎಂದಿದ್ದರು. ಆದರೆ ಮಗನ ಅಳು ಜೋರಾಯಿತೇ ವಿನಃ ಕಡಿಮೆಯಾಗದೆ ಪುನಃ ಡಾಕ್ಟರನ್ನೇ ಭೇಟಿಯಾದಾಗ ಅವರು ಇನ್ನು ಇದಕ್ಕೆ ನಾನು ಮದ್ದು ಕೊಡುವುದಿಲ್ಲ ,ನೀವು ಪಟ್ಟಣಕ್ಕೇ ಹೋಗಿ ದೊಡ್ಡ ಡಾಕ್ಟರನ್ನೇ ಸಂಪರ್ಕಿಸಿ , ಹೊಟ್ಟೆಯ ಸ್ಕ್ಯಾನಿಂಗ್ ಮಾಡಿಸಬೇಕು ಎಂದಾಗ ನಖಶಿಖಾಂತ ಬೆವೆತು ಹೋಗಿದ್ದೆ..
“ಏನಾಗಿರಬಹುದು ಡಾಕ್ಟರ್..??”
“ಹಾಗೇನೂ ಆಗಿರಲಿಕ್ಕಿಲ್ಲ..ಗಾಬರಿಪಡುದೇನೂ ಬೇಡ…ಯಾವುದಕ್ಕೂ ಸ್ಕ್ಯಾನಿಂಗ್ ಮಾಡಿಸಿದಾಗ ಸರೀ ಗೊತ್ತಾಗುತ್ತೆ...”
ಈ ವೈದ್ಯರ ಶಿಫಾರಸು ಪತ್ರ ಹಿಡಿದುಕೊಂಡು ದೂರದ ಮಂಗಳೂರಿನ ದೊಡ್ಡ ಆಸ್ಪತ್ರೆಗೆ ಹೋಗಿ ಡಾಕ್ಟರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿದಾಗ ಬಂದ ರಿಪೋರ್ಟ್ “ಹೊಟ್ಟೆಯೊಳಗೊಂದು ಸಣ್ಣ ಗಡ್ಡೆಯಿದೆ..”
"ಇದೇನು ಡಾಕ್ಟರ್..??”
ಕಣ್ಣಲ್ಲಿ ನೀರು ಚಿಮ್ಮಿತು...
“ಯಾಕಷ್ಟೊಂದು ಗಾಬರಿ ಬೀಳ್ತೀರಿ? ಗಡ್ಡೆಯನ್ನು ತೆಗೆಸಿದರಾಯಿತು ಅಷ್ಟೆ..”
"ಅಂದ್ರೆ??’"
"ಅಂದ್ರೆ ಆಪರೇಶನ್ ಮಾಡಿ ಆ ಗಡ್ಡೆಯನ್ನು ತೆಗೆಸಿದರೆ ನಿಮ್ಮ ಮಗನ ಹೊಟ್ಟೆ ನೋವು ಸಂಪೂರ್ಣ ವಾಸಿಯಾಗುತ್ತೆ..”
“ಆಪರೇಶನ್ ಮಾಡಿಸಲೇ ಬೇಕೆ? ಮಾತ್ರೆ ಔಷಧಿಗಳಿಂದ ಕಡಿಮೆಯಾಗಲಾರದೆ?”
"ಇಲ್ಲ.. ಆಪರೇಶನ್ ಒಂದೇ ಅದಕ್ಕೆ ಸರಿಯಾದ ಮತ್ತು ಸೂಕ್ತವಾದ ಚಿಕಿತ್ಸೆ..ಔಷಧಿಗಳಿಂದ ಗಡ್ಡೆ ಕರಗೋದಿಲ್ಲ..”
ಸ್ವಲ್ಪ ಹೊತ್ತಿನ ಮೌನದ ಬಳಿಕ ಕೇಳಿದೆ...
“ದುಡ್ಡು…... ದುಡ್ಡು ಎಷ್ಟಾಗುತ್ತೆ ಡಾಕ್ಟರ್..?”
"ಅಂದಾಜು ಹದಿನೈದರಿಂದ ಇಪ್ಪತ್ತು ಸಾವಿರ...”
ಡಾಕ್ಟರ್ ಎದುರು ಮುಂದಿನ ಮಾತುಕತೆಗಳಿಗೆ ಅವಕಾಶ ಇರಲಿಲ್ಲ..ನೋವಿಗೆ ಅಂತ ಬರೆದು ಕೊಟ್ಟ ಔಷಧಿಗಳನ್ನು ಖರೀದಿಸಿ ರಸ್ತೆಯಲ್ಲಿ ಹೇಗೆ ಹೇಗೋ ನಡೆಯುತ್ತಿದ್ದೆ..ಮೈಮೇಲೆ ಪರಿವೆಯೇ ಇಲ್ಲದಂತೆ.. ಇಪ್ಪತ್ತು ಸಾವಿರ...ಎಲ್ಲಿಂದ ಹೊಂದಿಸಲಿ..?ಯಾರು ಮಾತನಾಡಿಸಿದರೂ ವಿನಾಕಾರಣ ಸಿಟ್ಟು...ಅಸಹನೆ..ಯಾರ ಬಳಿ ಹೇಳಿಕೊಳ್ಳಲಿ..?
ಬಯಸಿ ಬಯಸಿ ಪಡೆದ ಏಕೈಕ ಪುತ್ರ...ವಂಶೋದ್ಧಾರಕ...…
ಸಾಲ ಕೇಳೋಣವೇ..? ಯಾರ ಬಳಿ..? ಯಾರಿದ್ದಾರೆ ಆತ್ಮೀಯರು..? ಬಂಧು ಬಳಗದವರಿಗೆಲ್ಲ ವಿಷಯ ಗೊತ್ತಾದರೂ ಅನುಕಂಪ ಸೂಚಿಸಿದರೇ ವಿನಃ ನನ್ನನ್ನು ನಂಬಿ ಅಷ್ಟು ದೊಡ್ಡ ಮೊತ್ತ ಸಾಲ ಕೊಡಲು ಯಾರೂ ಸಿದ್ಧವಿರಲಿಲ್ಲ..ನಿದ್ದೆಯಿಲ್ಲದ ರಾತ್ರೆಗಳು........ನೆಮ್ಮದಿಯಿಲ್ಲದ ಹಗಲುಗಳು..
ಎಲ್ಲಿಂದಾದರೂ ಹಣ ಕದ್ದರೆ ಹೇಗೆ..? ಥೂ..ಮನಸು ಹೇಸಿತು..
“ದೇವರೇ ದಾರಿ ತೋರಿಸು” ಸದ್ದಿಲ್ಲದೇ ಬಿಕ್ಕು.........
.ಬಚ್ಚಲಿಗೆ ಹೋಗುವ ಕಡಿದಾದ ದಾರಿ..ಪೊದೆಗಳೆಡೆಯಲ್ಲಿ ತರಗೆಲೆಗಳ ಅಡಿಯಲ್ಲಿ ಏನೋ ಮಿನುಗಿದಂತೆ..ಬಗ್ಗಿ ಸರಿಸಿ ನೋಡಿದರೆ..ಹೊಳೆಯುವ ನೆಕ್ಲೆಸ್..!! ಹೃದಯದ ಬಡಿತ ಹೆಚ್ಚಿತು..ಯಾರಾದರೂ ಅಡಗಿಸಿ ಇಟ್ಟದ್ದಾಗಿರಬಹುದೇ..?ಬಗ್ಗಿ ಎತ್ತಿಕೊಂಡು ಆಚೀಚೆ ನೋಡಿದೆ..ಪುಣ್ಯ..ಯಾರೂ ಇಲ್ಲ..ನೆಕ್ಲೇಸನ್ನು ಹಾಗೇ ಎತ್ತಿಕೊಂಡು ಕಿಸೆಯೊಳಗೆ ಬಚ್ಚಿಟ್ಟೆ.. ಹೃದಯದ ಬಡಿತ ನನಗೇ ಕೇಳಿಸುತ್ತಿತ್ತು..ಉದ್ವೇಗವನ್ನು ಹತ್ತಿಕ್ಕಿಕೊಳ್ಳಲಾಗದೆ ಸೀದಾ ಮನೆಗೆ ಓಡಿದೆ..ಹೆಂಡತಿ ಮದುವೆ ಮನೆಯಲ್ಲಿದ್ದರೆ,ಮಗ ನಿದ್ದೆ ಹೋಗಿದ್ದ.ಮದುವೆ ಊಟ ಮುಗಿಸಿ ಬಂದ ಹೆಂಡತಿಗೆ ಆಶ್ಚರ್ಯ! ಅರೆ ನೀವಿಲ್ಲಿ..!? ನಿಮ್ಮ ಊಟ ಅಷ್ಟು ಬೇಗ ಆಯಿತೆ?"
“ಹುಂ”
"ನಿಮ್ಮನ್ನು ಅಲ್ಲಿ ಎಲ್ಲೂ ಕಾಣಿಸ್ಲೇ ಇಲ್ಲ..?”
"ನಾನಲ್ಲಿಯೇ ಇದ್ದೆ.. ಹೆಂಗಸರ ನಡುವಿನ ಮಾತಿನಲ್ಲಿ ನಿನಗೆ ಹೇಗೆ ಗೊತ್ತಾಗೋದು?”
ಸಾಧ್ಯವಾದಷ್ಟು ಸಿಟ್ಟು ವ್ಯಂಗ್ಯಗಳನ್ನೆಲ್ಲ ಬೆರೆಸಿ ಹೇಳಿದಾಗ ಹೆಂಡತಿ ಸುಮ್ಮನಾದಳು. ಹೊಟ್ಟೆ ಹಸಿವಿನಲ್ಲಿ ಚುರುಗುಡುತ್ತಿತ್ತು..ಸ್ವಲ್ಪ ಕೆಲಸವಿದೆ ಎಂದವನೇ ಹೊರಗೆ ಹೋಗಿ ಹೋಟೇಲ್ ನಲ್ಲಿ ಊಟ ಮಾಡಿ ಬಂದೆ.ಮನೆಗೆ ಬಂದವಳೇ ಹೆಂಡತಿ ಮಾತಿಗಾರಂಭಿಸಿದಳು.
“ ಮದುವೆ ಮನೆಯಲ್ಲಿ ಒಂಚೂರು ಕಳೆಯಿರಲಿಲ್ಲ..ಗೊತ್ತ.... ಶಾಂತಕ್ಕ ಒಂದು ತುತ್ತು ಕೂಡ ಊಟ ಮಾಡಲಿಲ್ಲ. ಅವರಿಗೆ ನೆಕ್ಲೇಸ್ ನದ್ದೇ ಚಿಂತೆ..ಅಲ್ಲ ನೆಕ್ಲೆಸ್ ಏನಾಗಿರಬಹುದು.....? ಯಾರಿಗೆ ಸಿಕ್ಕಿದೆಯೋ ಏನೋ..ಅಲ್ಲ ಚಿನ್ನಸಿಕ್ಕಿದವರು ಮತ್ತೆ ಕೊಡ್ತಾರಾ? .. ನಂಗೆ ಸಿಕ್ಕಿದ್ರೆ ನಾನು ಕೊಡ್ತಿದ್ದೆನಪ್ಪ... ನಂಗೆ ಬೇಡ ಅವರ ಕಣ್ಣೀರಿನ ಶಾಪ..! ಏಳು ಜನ್ಮ ಕಳೆದರೂ ಪರಿಹರಿಸ್ಲಿಕೆ ಸಾಧ್ಯ ಇಲ್ಲ..”
ಹೆಂಡತಿಯ ಮಾತುಗಳಿಂದ ಕಾದ ಸೀಸ ಕಿವಿಗೆ ಸುರಿದಂತಾಗುತ್ತಿತ್ತು.. ಹೋಗಿ ಕೊಟ್ಟು ಬರಲೇ..? ಮನಸು ಹೊಯ್ದಾಟಕ್ಕೆ ಸಿಲುಕಿ ನರಳಿತು..ಇಲ್ಲ ಇದು ದೇವರೇ ತೋರಿಸಿದ ಹಾದಿ.... ಮರುದಿನವೇ ಪೇಟೆಗೆ ಹೋಗಿ ನೆಕ್ಲೆಸ್ ನ್ನು ಮಾರಿ ಬಂದೆ. ಮೂವತ್ತು ಸಾವಿರ ಸಿಕ್ಕಿತು..ದೇವರೇ ನನ್ನನ್ನು ಕ್ಷಮಿಸು ಎಂದು ಸಾವಿರ ಬಾರಿ ದೇವರಲ್ಲಿ ಪ್ರಾರ್ಥಿಸಿದೆ.ಮರುದಿನವೇ ಮಗನನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದೆ.ಒಂದು ವಾರ ಆತಂಕದಲ್ಲಿಯೇ ಕಳೆಯಿತು.ಶಸ್ತ್ರ ಚಿಕಿತ್ಸೆ ಯಶಸ್ವಿಯೂ ಆಯಿತು. ಈಗ ಮಗನ ಮುಖದಲ್ಲಿ ಮತ್ತೆ ಮೊದಲಿನ ಕಳೆ ಕಾಣಲು ಸಾಧ್ಯವಾಗಿದೆ. ಜೀವನದ ಬಹಳ ದೊಡ್ಡ ಒಂದು ಗಂಡಾಂತರ ಕಳೆದು ಹೋಯಿತು. ಇದಕ್ಕೆಲ್ಲ ಕಾರಣ ನೆರೆಮನೆ ಶಾಂತಕ್ಕನ ನೆಕ್ಲೆಸ್.. ಆ ನೆಕ್ಲೆಸ್ ನ ಋಣವನ್ನು ನಾನು ಈ ಜನ್ಮ ದಲ್ಲಿ ತೀರಿಸಲು ಸಾಧ್ಯವೇ..? ತೀರಿಸಲಾಗದೆ ಹೋದರೆ ನನಗೆ ಯಾವ ನರಕ ಕಾದಿದೆಯೋ.....!!!?
ಅಪ್ಪನ ಬರಹ ಅಲ್ಲಿಗೆ ನಿಂತಿತ್ತು..ಗಿರೀಶ ಎಷ್ಟು ಹೊತ್ತು ಹಾಗೇ ಕುಳಿತಿದ್ದನೋ ಅವನಿಗೇ ಅರಿವಿಲ್ಲ..
“ಅಪ್ಪಾ ..ಅಪ್ಪಾ..”
ಮಗಳು ಧಾತ್ರಿಯ ಕರೆಗೆ ಓಗೊಟ್ಟು ಕೆಳಗಿಳಿದವನ ಬಳಿ ಮಗಳ ಪ್ರಶ್ನೆ.
.“ಅಷ್ಟೊಂದು ಹೊತ್ತು ನಿಮ್ಮನ್ನು ಓದಿಸಿಕೊಂಡು ಹೋದ ಪುಸ್ತಕ ಯಾವುದಪ್ಪ ಅದು?”
“ಅವರಿಗೆ ಓದ್ಲಿಕೆ ಅಲ್ಲಿ ಸಾವಿರಾರು ಪುಸ್ತಕಗಳಿವೆ ಧಾತ್ರಿ..”
ಮಡದಿಯ ವ್ಯಂಗ್ಯ...
ಅವರ ಮಾತುಗಳು ಅವನ ಕಿವಿಗೆ ಬೀಳುತಿತ್ತೇ ಹೊರತು ಮನಸಿಗಿಳಿಯುತ್ತಿರಲಿಲ್ಲ..ತನ್ನ ಹೊಟ್ಟೆ ನೋವಿನ ವ್ಯಥೆ ಅವನಿಗೆ ಮಸುಕು ಮಸುಕಾಗಿ ನೆನಪಿತ್ತು ಅಷ್ಟೆ..ನೋವಿನ ತೀವ್ರತೆಯಲ್ಲಿ ನರಳಿದ್ದು..ರಾತ್ರಿ ಇಡೀ ಅಪ್ಪ ಅಮ್ಮ ನಿದ್ದೆಗೆಟ್ಟು ತನ್ನನ್ನು ಸಂತೈಸಿದ್ದು... ಎಲ್ಲ ಅಸ್ಪಷ್ಟ.. ಅಪ್ಪನ ಆರ್ಥಿಕ ಕಷ್ಟದ ಅರಿವು ಮಾತ್ರ ಅವನಿಗೆ ಕಿಂಚಿತ್ತೂ ಇರಲಿಲ್ಲ..ಆಮೇಲೆ ಕೆಲವೊಮ್ಮೆ ಅಮ್ಮ ಆಗಾಗ ಶಾಂತಕ್ಕನ ಮನೆಯವರ ಸುದ್ದಿ ಹೇಳುತ್ತಿರುವಾಗೆಲ್ಲ ಆಕೆಯ ಚಿನ್ನದ ನೆಕ್ಲೆಸ್ ಕಳೆದು ಹೋದ ವಿಚಾರವನ್ನು ಬಹಳ ಭಾವ ಪೂರ್ಣವಾಗಿ ವಿವರಿಸುತ್ತಿದ್ದಳು..ಶಾಂತಕ್ಕ ತನ್ನ ನೆಕ್ಲೇಸಿನ ಬಗ್ಗೆ ಪ್ರತಿ ದಿನವೂ ಹಲುಬುತಿದ್ದರಂತೆ. ಒಂದೊಂದು ಗ್ರಾಂ ಚಿನ್ನ ಖರೀದಿಸಲೂ ಹರಸಾಹಸ ಪಡುತಿದ್ದ ಕಾಲದಲ್ಲಿ ಇಪ್ಪತ್ತು ಗ್ರಾಂ ನ ನೆಕ್ಲೆಸನ್ನು ಕಳೆದು ಕೊಂಡರೆ ಹೇಗಾಗಬಹುದು? ಅಮ್ಮ ಹೇಳುತ್ತಿದ್ದರು..‘ನೆಕ್ಲೇಸು ಕಳೆದುಕೊಂಡ ಮೇಲೆ ಅವರು ಮೊದಲಿನಂತೆ ಇರಲೇ ಇಲ್ಲ... ಎಂದು ಹೇಳುತ್ತ ಅವರ ಕತೆಯನ್ನು ಸಮಾಪ್ತಿಗೊಳಿಸುತಿದ್ದರು. ಗಿರೀಶ ಶಾಂತಕ್ಕನಿಗಾಗಿರಬಹುದಾದ ದುಃಖ ವ್ಯಥೆಯನ್ನು ಕಲ್ಪಿಸಿಕೊಳುತಿದ್ದ. ತನಗೆಲ್ಲಿಯಾದರೂ ಆ ನೆಕ್ಲೇಸು ಸಿಕ್ಕಿರುತಿದ್ದರೆ ತಾನು ಖಂಡಿತವಾಗಿಯೂ ಹಿಂತಿರುಗಿಸುತ್ತಿದ್ದೆ..ಎಂದುಕೊಳ್ಳುತಿದ್ದ..ಕ್ರಮೇಣ ಗಿರೀಶ ತನ್ನ ವಿದ್ಯಾಭ್ಯಾಸ ..ಉದ್ಯೋಗ ಎಂದೆಲ್ಲ ಹಲವಾರು ಊರುಗಳನ್ನೆಲ್ಲ ಸುತ್ತಿ ಇದೀಗ ಒಂದು ಕಡೆಯಲ್ಲಿ ತನ್ನಿಷ್ಟದಂತೆ ತನ್ನ ಮೂಲ ಮನೆಯಂತೇ ಇರುವ ಮನೆಯನ್ನು ಕಟ್ಟಿಸಿದ್ದ..ಅಪ್ಪ ಕಾಲವಾಗಿ ವರ್ಷಗಳೇ ಸಂದಿತ್ತು..ಅಪ್ಪ ತನ್ನ ಜೀವನದುದ್ದಕ್ಕೂ ಆದರ್ಶಗಳನ್ನೇ ಬೋಧಿಸುತಿದ್ದರು..ಸಂದರ್ಭ ಸಿಕ್ಕಿದಾಗೆಲ್ಲ ಅಪ್ಪ ಆಡುತ್ತಿದ್ದ ಪ್ರತೀ ಮಾತಿನಲ್ಲಿಯೂ ತೋರಿಸುತ್ತಿದ್ದ ಮೌಲ್ಯಗಳೆಡೆಯಲ್ಲಿ ಅಪ್ಪನ ಕೀಳರಿಮೆ ಧ್ವನಿಸುತಿತ್ತೆ?ಯಾವೊಂದು ಕಷ್ಟವನ್ನೂ ಅಪ್ಪ ಹೇಳಿಕೊಂಡವರಲ್ಲ...ತನಗೊಂದು ಉದ್ಯೋಗವಾದ ಮೇಲೆ ಗಿರೀಶನೇ ಎಲ್ಲವನ್ನೂ ಅರಿತುಕೊಂಡು ಅವರಿಗೆ ನೆರವಾಗುತ್ತಿದ್ದ..ಆದರೆ ಈ ಒಂದು ವಿಷಯ ಮಾತ್ರ ಬೆಳಕಿಗೆ ಬಂದಿರಲೇ ಇಲ್ಲ...ತನ್ನ ಜೀವನದ ಗತಿ ಬದಲಾಗಲು ಶಾಂತಕ್ಕನ ನೆಕ್ಲೆಸ್ ಒಂದು ಕಾರಣವಾಯಿತಲ್ಲ.!!!!!
.ಅದನ್ನು ಕಳೆದುಕೊಂಡ ಶಾಂತಕ್ಕ ಅದೆಷ್ಟು ದುಃಖಿಸಿದರೋ.ಹಲುಬಿದರೋ..ಅದೆಷ್ಟು ದೇವರಿಗೆ ಹರಕೆ ಹೊತ್ತರೋ…!
ತಂದೆಗೂ ಬೇರೆ ದಾರಿಗಳಿರಲಿಲ್ಲ..ಶಾಂತಕ್ಕನ ಕರುಳುಹಿಂಡಿ ದೇವರು ತನ್ನ ತಂದೆಗೆ ದೇವರು ದಾರಿ ತೋರಿಸಿದನೇ..?ಅಪ್ಪನಿಗೆ ಬಳಿಕವಾದರೂ ನೆಕ್ಲೆಸ್ ಹಿಂತಿರುಗಿಸಬಹುದಿತ್ತೆ?..ಇಲ್ಲ ಅವರಷ್ಟೊಂದು ಸ್ಥಿತಿವಂತರಾಗಲೇ ಇಲ್ಲ..ಈಗ ಶಾಂತಕ್ಕ ಹೇಗಿದ್ದಾರೋ..ಅವರನ್ನೊಮ್ಮೆ ಮಾತಾಡಿಸಿ ಬರೋಣವೇ...?
ಆದರೆ ಯಾವ ಕಾರಣದೊಂದಿಗೆ ಅಲ್ಲಿಗೆ ಹೋಗಲಿ?ತನ್ನ ಈ ಸಮೃದ್ಧಭರಿತ ಜೀವನಕ್ಕೆ ಶಾಂತಕ್ಕನ ನೆಕ್ಲೆಸು ಕಾರಣವಾಯಿತಲ್ಲ ಎನಿಸಿ ಗಿರೀಶನಿಗೇಕೋ ತನ್ನ ಜೀವನದ ಬಗ್ಗೆಯೇ ಜಿಗುಪ್ಸೆ ಮೂಡಿತು. ಯಾರದೋ ಹೊಟ್ಟೆಯುರಿಯಲ್ಲಿ ತನ್ನ ಜೀವನ ಅರಳಿತಲ್ಲ?ಹೊಸತೊಂದು ಋಣಭಾರದಲ್ಲಿ ಸಿಲುಕಿ ಅವನ ಮನಸು ಹೇಳಲಾಗದ ಗೊಂದಲ ಬೇಸರಗಳಿಂದ ನರಳಿತು...ಹಗಲು ರಾತ್ರಿಯೆನ್ನದೆ ಅಪರಾಧೀ ಪ್ರಜ್ಞೆ ಕಾಡತೊಡಗಿತು. ಹಣ ಖರ್ಚಾದರೂ ಸರಿ..ಅದೇ ರೀತಿಯ ನೆಕ್ಲೇಸನ್ನು ಕೊಟ್ಟುಬರಲೇ? ಕೊಟ್ಟು ಬರುವುದೇನೋ ಸುಲಭ..ಆದರೆ ಇದರಿಂದ ಅಪ್ಪನ ವ್ಯಕ್ತಿತ್ವಕ್ಕೆ ಮಸಿ ಬಳಿದಂತಾಗೋದಿಲ್ಲವೇ? ತನ್ನ ಜೀವನದುದ್ದಕ್ಕೂ ಸತ್ಯ ಪ್ರಾಮಾಣಿಕತೆ ಶುದ್ಧವಾದ ಮನಸು, ವ್ಯಕ್ತಿತ್ವ ಹೊಂದಿದ್ದ ಅಪ್ಪನ ಚಾರಿತ್ರ್ಯಕ್ಕೆ ತಾನು ಅಪಚಾರವೆಸಗಿದಂತಾಗೋದಿಲ್ಲವೇ?..ತನ್ನ ಮಗನ ಭವಿಷ್ಯಕ್ಕೋಸ್ಕರ ಅವರು ದೇವರು ಮೆಚ್ಚದ ಕಾರ್ಯ ಮಾಡಿದರು ಎಂದು ಶಾಂತಕ್ಕನ ಮನೆಯವರು ಅಂದುಕೊಳ್ಳುವುದಿಲ್ಲವೇ? ಮಾತ್ರವಲ್ಲದೆ ತನ್ನೆಲ್ಲಾ ಬಂಧುಬಳಗದವರ ಬಳಿ ಹೇಳಿಕೊಂಡು ಆಡಿಕೊಳ್ಳಲಾರರೆ?..ಇಷ್ಟು ವರ್ಷಗಳ ಕಾಲ ಬಹಳವೇ ಜತನದಿಂದ ಕಾಪಾಡಿಕೊಂಡು ಬಂದ ನಮ್ಮ ಕುಟುಂಬದ ಘನತೆ ಗೌರವ ಮರ್ಯಾದೆ ಬೀದಿಪಾಲಾಗುದಿಲ್ಲವೇ? ಜನಗಳ ಬಾಯಿಗೆ ಸಿಲುಕಿ ಕೊನೆಕೊನೆಗೆ ಅದು “ಸಿಕ್ಕಿದ ನೆಕ್ಲೆಸು” ಎಂಬುದು ಹೋಗಿ “ಕದ್ದ ನೆಕ್ಲೆಸು” ಎಂದು ಬದಲಾಗುವುದರಲ್ಲಿ ಯಾವ ಅನುಮಾನವೂ ಇಲ್ಲ..ಅವರದು ಕಳ್ಳರ ಕುಟುಂಬ ಎಂಬ ವದಂತಿ ಹರಡಲು ಯಾವ ಸಾಕ್ಷಿಯೂ ಬೇಕಾಗಲಾರದು.ಬೇಡ ಹೀಗೇ ಇರಲಿ. ಶಾಂತಕ್ಕನ ಮನೆಯವರು ಆ ಘಟನೆಯನ್ನು ಎಂದೋ ಮರೆತಿರಬಹುದು. ತಾನೇಕೆ ಮತ್ತೆ ಅದನ್ನು ಕೆದಕಲಿ?ತನ್ನವ್ಯಾಪ್ತಿಗೆ ಮೀರಿದ ಘಟನೆಯೊಂದು ತನ್ನ ಜೀವನದುದ್ದಕ್ಕೂ ತನ್ನನ್ನು ಅಪರಾಧೀ ಪ್ರಜ್ಞೆಯಲ್ಲಿ ಬದುಕುವಂತೆ ಮಾಡಿದ ಬಗ್ಗೆ ಗಿರೀಶ ಯಾವ ನಿರ್ಧಾರವನ್ನೂ ಕೈಗೊಳ್ಳದಾದ.ಹಿಂತಿರುಗಿಸುವುದಾದರೂ ಅಷ್ಟೊಂದು ಮೊತ್ತವನ್ನು ತಾನು ಕಳೆದುಕೊಳ್ಳಲು ಸಿದ್ಧನಾಗಬೇಕು.ಏನಿಲ್ಲವೆಂದರೂ ಲಕ್ಷದ ಮೇಲೆ…..!!!!!
ಆದರೆ ತನ್ನ ಜೀವನ ಮಾತ್ರವಲ್ಲ,ತನ್ನ ಮಕ್ಕಳ ಜೀವನವೂ ಶಾಂತಕ್ಕನ ನೆಕ್ಲೇಸಿನ ಋಣದ ನೆರಳಿನಲ್ಲಿಯೇ ಸಾಗಬೇಕೆ? ದೇವರು ಅಪ್ಪನಿಗೇನೋ ದಾರಿ ತೋರಿಸಿದ. ಆ ಸಂದರ್ಭದಲ್ಲಿ ಅಪ್ಪನಿಗದು ಅವರ ಜೀವನದ ಪ್ರಶ್ನೆಯಾಗಿತ್ತು…. ಆದರೆ ಈಗ ತನ್ನ ಮನಃಶಾಂತಿಯ ಪ್ರಶ್ನೆ. ಜೊತೆಗೆ ಅಪ್ಪನ ವ್ಯಕ್ತಿತ್ವದ ಪ್ರಶ್ನೆ.. ಸತ್ಯಕ್ಕೆ ಆಗುವ ಅಪಚಾರದ ಪ್ರಶ್ನೆ.. ಪ್ರಾಮಾಣಿಕತೆಯ ಪ್ರಶ್ನೆ..ಋಣಭಾರದ ಪ್ರಶ್ನೆ....
ಆದರೆ ದಿನಕಳೆದಂತೆ ಗಿರೀಶನಿಗೆ ಅಪರಾಧೀ ಪ್ರಜ್ಞೆ ತೀವ್ರವಾಗಿ ಕಾಡತೊಡಗಿತು......
************
ಶಾಂತಕ್ಕ ದಂಗಾದರು. ಕಿವಿಗಳು ಕೇಳುತ್ತಿರುವ ವಿಷಯವನ್ನು ಮನಸು ಸ್ವೀಕರಿಸುತ್ತಿರಲಿಲ್ಲ.. ಇದು ಕನಸೋ ಭ್ರಮೆಯೋ ವಾಸ್ತವವೋ ಏನೊಂದೂ ಕಲ್ಪಿಸಿಕೊಳ್ಳಲಾಗದ ತೀವ್ರ ಸಂದಿಗ್ಧತೆ.. !!!
ಹೀಗೂ ಆಗುತ್ತದೆಯೇ..ಎಂದು ಆಶ್ಚರ್ಯ.!!! ಈಗಿನ ಕಾಲದಲ್ಲಿಯೂ ಇಂತಹವರು ಇದ್ದಾರೆಯೇ..!!!?? ಇದೇನಾದರೂ ಮೋಸದ ಜಾಲವಿರಬಹುದೇ? ಆದರೆ ಗಿರೀಶನ ಕಣ್ಣುಗಳನ್ನು ದಿಟ್ಟಿಸುತ್ತಿದ್ದಂತೆ ಶಾಂತಕ್ಕ ಕುಬ್ಜರಾಗಿ ಹೋದರು. ಆ ಕಣ್ಣುಗಳಲ್ಲಿಯ ಭಾವನೆಯೇ ಅವರ ಅಷ್ಟೂ ಯೋಚನೆಗಳನ್ನು ಕೊಚ್ಚಿಕೊಂಡು ಹೋಯಿತು.
"ಅಮ್ಮ ದಯವಿಟ್ಟು ನನ್ನ ತಂದೆಯನ್ನು ಕ್ಷಮಿಸಿ ” ಎನ್ನುತ್ತ ಆ ಹಿರಿ ಜೀವದ ಕಾಲಿಗೆರಗಿದ. ಅವನಿಗರಿವಿಲ್ಲದಂತೆಯೇ ಅವನ ಎದೆಯೊಳಗಿನ ತೊಳಲಾಟ ಉದ್ವೇಗವೆಲ್ಲ ಕಣ್ಣೀರಾಗಿತ್ತು.ಗಿರೀಶ ತಂದಿದ್ದ ಪೊಟ್ಟಣದಲ್ಲಿದ್ದ ಚಿನ್ನದ ಬಿಸ್ಕೀಟುಗಳನ್ನು ನೋಡುತ್ತ ಶಾಂತಕ್ಕ ನುಡಿದರು:
“ಗಿರೀಶ ನೆಕ್ಲೆಸು ಕಳೆದು ಹೋದದ್ದರ ಬಗ್ಗೆ ನನಗೆ ವಿಪರೀತವಾದ ಮರೆಯಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟು ದುಃಖವಿತ್ತು ನಿಜ. ಆದರೆ ಈಗ ಮಾತ್ರ ನಾನದನ್ನು ಸಂಪೂರ್ಣವಾಗಿ ಮರೆತಿದ್ದೇನೆ. ಧನಕನಕ ಆಸ್ತಿಗಳಿಗಾಗಿ ಅತಿಯೆನಿಸುವಷ್ಟು ಹಲುಬುವ ಮನೋಭಾವ ಈಗ ಕಣ್ಮರೆಯಾಗಿದೆ. ಒಬ್ಬ ವ್ಯಕ್ತಿಯ ಜೀವದ ಜೊತೆಗೆ ಒಂದು ಕುಟುಂಬವನ್ನೇ ನನ್ನ ನೆಕ್ಲೇಸು ಉಳಿಸಿತಲ್ಲ..!!!ಇದಕ್ಕಿಂತ ದೊಡ್ಡ ಪುಣ್ಯ ಬೇರಿನ್ನೇನು ಬೇಕು ನನಗೆ ಹೇಳು ? ಗಿರೀಶ ದಯವಿಟ್ಟು ನನ್ನನ್ನು ಆ ಪುಣ್ಯದಿಂದ ವಂಚಿತಳನ್ನಾಗಿ ಮಾಡಬೇಡ.....”
ಅವರ ಧ್ವನಿಯಲ್ಲಿದ್ದ ಆ ದೃಢತೆಗೆ ಗಿರೀಶ ಏನೊಂದೂ ಉತ್ತರಿಸಲಾಗದೆ ಕಲ್ಲಿನಂತೆನಿಂತೇ ಇದ್ದ.. ....
*ತೆಂಕಬೈಲು ಸೂರ್ಯನಾರಾಯಣ
ಅಂಚೆ: ಕರೋಪಾಡಿ ಬಂಟ್ವಾಳ ತಾಲೂಕು.ದ.ಕ. 574279 9481020521