ಕಣ್ಣಿಗೆ ಕಾಣುವ ದೇವರು
ಅಮ್ಮ ಎಂದರೆ ಏನೋ ಹರುಷವು ನಮ್ಮ ಪಾಲಿಗೆ ಅವಳೇ ದೈವವು ಎನ್ನುವ ಸಾಲುಗಳು ಇಂದಿಗೂ ಪ್ರಸ್ತುತ. ಮಗು ಹಡೆದರೆ ತಾಯಿಯಾಗಲಾರಳು. ತಾಯಿಯಾಗಲು ಒಂದಷ್ಟು ತ್ಯಾಗ ಮಾಡಬೇಕಾಗಿ ಬರುವುದು. ಹಗಲು ರಾತ್ರಿ ನಿದಿರೆ ತ್ಯಜಿಸಿ ಹಾಲೂಡಿಸಿ ಆರೈಕೆ ಮಾಡಬೇಕು. ಅಷ್ಟೇ ಸಾಕೇ? ತಾಳ್ಮೆ ಕಲಿಸಿಕೊಡುವ ಮಗುವಿಗೆ ವಂದಿಸಿ ಸಹನೆಯನ್ನು ಮೈಗೂಡಿಸಿಕೊಳ್ಳಬೇಕು. ತ್ಯಾಗ ಮತ್ತು ತಾಳ್ಮೆ ಎಂದರೇನೇ ತಾಯಿ.
ಕರುಳ ಕುಡಿ ಚಿಗುರುವ ಮುನ್ನ : ಒಂಭತ್ತು ತಿಂಗಳು ಗರ್ಭದಲ್ಲಿ ಶಿಶುವನ್ನು ಪೋಷಿಸುವುದು ಅಷ್ಟು ಸುಲಭದ ಮಾತಲ್ಲ. ಅನೇಕ ತರಹದ ಸಮಸ್ಯೆಗಳ ಎದುರಿಸಬೇಕಾಗುತ್ತದೆ. ಆಲಸ್ಯ, ವಾಂತಿ, ವಾಕರಿಕೆ, ಎದೆಉರಿ, ಹೊಟ್ಟೆ ಉಬ್ಬರ , ನಿದ್ರಾಹೀನತೆ, ಕಾಲಿಗೆ ಜೋಂಪು ಹಿಡಿಯುವುದು, ಬೆನ್ನು ನೋವು ಹೀಗೆ . ಅಲ್ಲದೇ ಏಳು ತಿಂಗಳ ಮೇಲೆ ಮಗುವು ತನ್ನ ಬೆಳವಣಿಗೆಯನ್ನು ಚುರುಕುಗೊಳಿಸುತ್ತದೆ. ಇದರಿಂದ ಹೆರಿಗೆಯಾಗುವ ತನಕವೂ ಆ ಭಾರವನ್ನು ಹೊತ್ತುಕೊಂಡಿರುವುದು ಸವಾಲಾಗಿ ಪರಿಣಮಿಸುತ್ತದೆ. ಸೂಕ್ತ ವೈದ್ಯರ ಸಲಹೆಯ ಮೇರೆಗೆ ಕಾಳಜಿವಹಿಸಬೇಕಾಗುತ್ತದೆ.
ತಾಯಿಯ ಗರ್ಭದಲ್ಲಿರುವಾಗಲೇ ಸಂಸ್ಕಾರವನ್ನು ಕಲಿಸುವುದು ಒಳ್ಳೆಯದು: ಸತಿಪತಿಯರು ಕುಳಿತು ಚರ್ಚಿಸಿ ತಮಗೆ ಜನಿಸುವ ಮಗುವು ಹೇಗಿರಬೇಕು ಎಂದು ನೂರಾರು ಕನಸುಗಳ ಹೆಣೆದು ಪೋಷಕರಾಗಲು ಮುಂದಡಿಯಿಡುತ್ತಾರೆ. ಮುಂದೆ ಜನಿಸುವ ತಮ್ಮ ಮಗು ಏನಾಗಬೇಕು? ಹೇಗೆ ಬದುಕಿ ಬಾಳಬೇಕು, ಅದರ ಭವಿಷ್ಯದ ಬಗೆಗೆ ಚಿಂತಿಸುತ್ತ ಅನೇಕ ಯೋಜನೆಗಳನ್ನು ರೂಪಿಸುತ್ತಾರೆ. ಅದೊಂದು ಮಹತ್ವಾಕಾಂಕ್ಷೆ ಎಲ್ಲ ತಂದೆ ತಾಯಿಯಂದಿರಿಗೂ ಇರುತ್ತದೆ. ಮಕ್ಕಳಿಗೆ 'ಹಾಗೆ ಮಾಡು ಹೀಗೆ ಮಾಡು' ಎಂದು ಬುದ್ಧಿವಾದ ಹೇಳಿದರೆ ನಡೆಯದು. ಆ ಮಗು ಕೇಳುವುದಿಲ್ಲ. ಏಕೆ ಹೇಳಿ? ಮಗು ಹೆತ್ತವರು ಏನು ಮಾಡುವರೋ ಅದನ್ನೇ ಅನುಕರಣೆ ಮಾಡುವುದು. ಏನು ಹೇಳುತ್ತಾರೋ ಅದನ್ನು ಕೇಳುವುದಿಲ್ಲ. ಹೀಗಿರುವಾಗ ಗರ್ಭದಲ್ಲಿರುವಾಗಲೇ ತಯಾರಿ ಅಗತ್ಯ. ಆಧ್ಯಾತ್ಮಿಕ ಒಲವು, ವಿಜ್ಞಾನ, ತಂತ್ರಜ್ಞಾನ, ಗಣಿತ ವಿಷಯಗಳಲ್ಲಿ ಆಸಕ್ತಿ, ಪುಸ್ತಕಗಳ ಓದು, ಕ್ರೀಡೆ, ಕಲೆ ಸಂಗೀತ ,ಸಾಹಿತ್ಯ, ಸಾಂಸ್ಕೃತಿಕವಾದ ಆಸಕ್ತಿ ಬೆಳೆಸುವುದು , ಹಬ್ಬಗಳು ನಮ್ಮ ಸಂಪ್ರದಾಯಗಳ ಆಚರಣೆ, ಹಾಗೂ ಅದರ ಅರಿವು ಬೆಳೆಸಿಕೊಂಡಿರಬೇಕು. ಅತಿಯಾಗಿ ಕೋಪಿಸಿಕೊಳ್ಳದೇ, ಒತ್ತಡಕ್ಕೆ ಒಳಗಾಗದೇ, ಕಣ್ತುಂಬಾ ನಿದ್ದೆ ಮಾಡುತ, ಯಾವುದೋ ಹಳೆ ನೋವನ್ನು ಪದೇ ಪದೇ ನೆನಪು ಮಾಡಿಕೊಂಡು ಅಳುತ್ತಾ, ಚಿಂತಿಸುತ್ತಾ ಕುಳಿತುಕೊಳ್ಳದೇ, ಸಣ್ಣ ಸಣ್ಣ ವಿಷಯಕ್ಕೂ ಅಸಮಧಾನ ಹೊರಹಾಕಿ ಜಗಳ ಕಾಯದೇ ಮನಸ್ಸನ್ನು ಸಮಚಿತ್ತದಿಂದಿರಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೇ ಮಗುವೂ ಕೂಡ ಅದನ್ನೇ ಅನುಸರಿಸುತ್ತದೆ. ಮಗುವು ನಿಮ್ಮದೇ ಒಂದು ಭಾಗವಾದ ಕಾರಣ ಗರ್ಭಿಣಿಯರು ಬಹಳ ಜಾಗೃತೆವಹಿಸಬೇಕು. ಏಳು ತಿಂಗಳ ಮೇಲೆ ಗರ್ಭದಲ್ಲಿರುವ ಶಿಶುವು ಹೊರಗಿನ ಎಲ್ಲ ಸದ್ದು, ಮಾತು, ಸಂಗೀತ ಕೇಳಿಸಿಕೊಳ್ಳುತ್ತದೆ. ಇದಕ್ಕೆ ಮಹಾಭಾರತದ ಅಭಿಮನ್ಯುವಿನ ಕತೆಯೇ ಉದಾಹರಣೆ.
ಹೀಗಿರುವಾಗ ತಾಯಿಗೆ ಇದೆಲ್ಲದರ ಪ್ರಜ್ಞೆ ಇರಬೇಕು ತಾನೆ. ಬದಲಾಗಿ ಬಸುರಿ ಬಯಕೆ ಎಂಬ ಹೆಸರಿನಲ್ಲಿ ತನಗೆ ಇಷ್ಟವೆಂದು ಕುರುಕಲು ತಿಂಡಿ , ರಾಸಾಯನಿಕಯುಕ್ತ ತಂಪುಪಾನೀಯ ಸೇವನೆ, ಪಿಜ್ಜಾ ಬರ್ಗರ್ ಸೇವನೆ, ಮಧ್ಯಪಾನ ಧೂರ್ಮಪಾನ, ಹಾರರ್ ಸಿನೆಮಾ ನೋಡುವುದು, ಕೊಲೆ ಅತ್ಯಾಚಾರ ರಕ್ತಪಾತದಿಂದ ಕೂಡಿದ ಸಿನೆಮಾ ನೋಡುವುದು, ಏಕೆ ಹೀಗೆ ಎಂದು ಪ್ರಶ್ನಿಸಿದರೆ (ಕ್ರೇಜ್) ಹುಚ್ಚು ಬಯಕೆ ಎನ್ನುವುದು, ಮುಂಜಾಗರೂಕತೆ ವಹಿಸಿಕೊಳ್ಳದೇ ಅನೇಕ ದುಸ್ಸಾಹಸಕ್ಕೆ ಕೈಹಾಕುವುದು, ದೂರದೂರಕ್ಕೆ ಪ್ರಯಾಣ ಬೆಳೆಸುವುದು, ಟ್ರೆಕ್ಕಿಂಗ್ ಗೆ ಹೋಗುವುದು, ಆಫೀಸು ಕೆಲಸವೆಂದು ವಿಶ್ರಾಂತಿ ಪಡೆಯದೇ ಬಿಡುವಿರದ ಕೆಲಸದಲ್ಲಿ ತೊಡಗಿಸಿಕೊಳ್ಳುವುದು, ಅತಿಯಾದ ಮೊಬೈಲ್ ಲಾಪ್ ಟಾಪ್ ಬಳಕೆ ಇವೆಲ್ಲವೂ ಸರಿಯಲ್ಲ.
ಹಟಮಾರಿತನ, ಒರಟುತನ ತೋರಿಸದೇ ಗರ್ಭಿಣಿಯ ಅ ಆ ಹಂತದಲ್ಲಿ ನವಮಾಸವು ಸಾತ್ವಿಕತೆ, ವಿನಯತೆ, ಬೌದ್ಧಿಕ ಬೆಳವಣಿಗೆಗೆ ಒತ್ತು ನೀಡುವುದು, ಹಿತಮಿತವಾದ ವ್ಯಾಯಾಮ ಮಾಡುವುದು, ನೀರು ಕುಡಿಯುವುದು, ತಾವು ಸೇವಿಸುವ ಆಹಾರ, ಆರೋಗ್ಯದ ಮೇಲೆ ಕಾಳಜಿ ವಹಿಸಿದರೆ ಜನಿಸುವ ಮಗುವೂ ಆರೋಗ್ಯ ಪೂರ್ಣವಾಗಿರುತ್ತದೆ.
ಕಣ್ಣಿಗೆ ಕಾಣುವ ದೇವರು: ಕಾಲ ಬದಲಾದಂತೆ ತಾಯಿಯೂ ಬದಲಾಗುತ್ತಿದ್ದಾಳೆ. ಆಗಿನ ಕಾಲದ ತಾಯಿ ಎಂದರೆ ಉಡುವ ಬಟ್ಟೆ, ಆಡುವ ಮಾತು, ನಡೆದುಕೊಳ್ಳುವ ರೀತಿ, ನೋಡಿದಾಗ ಲಕ್ಷಣವೆನಿಸುವ ಮುಖ, ಘಲ್ ಘಲ್ ಎನ್ನಲು ಕೈತುಂಬಾ ಗಾಜಿನ ಬಳೆಗಳು, ಉದ್ದ ಜಡೆ ಜೊತೆಗೆ ಅದಕ್ಕೆ ಸಿಕ್ಕಿಸಿಕೊಂಡ ಘಮಿಸುವ ಹೂವಿನ ಮೊಳ(ಮಾಲೆ) , ಕೊರಳಿನಲ್ಲಿ ಮಾಂಗಲ್ಯಸರ, ಕಾಲುಂಗುರ, ಮನೆಯೊಳಗೆ ನಡೆದಾಗಲೆಲ್ಲಲ್ಲ ಸದ್ದು ಮಾಡುವ ಕಾಲ್ಗೆಜ್ಜೆಯನ್ನು ನೀವು ಕಾಣಬಹುದು. ಮಿತ ಭಾಷಿ, ಹಸನ್ಮುಖಿ, ಅದೇ ತರಹ ಶಾಲೆಗೆ ಹೋಗುವ ಮಕ್ಕಳು ತಮ್ಮ ಶಿಕ್ಷಕಿಯರಲ್ಲಿಯೂ ತಾಯಿಯನ್ನು ಕಾಣುತ್ತಾರೆ.
ಆದರೆ ಈಗ ಉದ್ಯೋಗಕ್ಕೆ ಹೋಗುವ ಸ್ವಾವಲಂಬಿ ಅಮ್ಮ. ಸಮಾನತೆಯ ಕೂಗಿನ ಹೆಸರಿನಲ್ಲಿ ಹೊಂದಾಣಿಕೆಯ ಕೊರತೆ, ಬಣ್ಣಬಣ್ಣದ ನೋಟುಗಳನ್ನು ಕುಣಿಸುತ್ತಾ ಪತಿಯನ್ನು ಮಗುವನ್ನು ಹಂಗಿಸುವ, ಅವಮಾನಿಸುವ, ಕಾಳಜಿ ತೋರಿಸದೇ ಸ್ವಾರ್ಥಿಯಾಗಿ ನಡೆದುಕೊಳ್ಳುವ ಅಮ್ಮಂದಿರನ್ನು ನೋಡುತ್ತಿದ್ದೇವೆ. ತೊಡುವ ಬಟ್ಟೆ, ಆಡುವ ಮಾತು ಎಲ್ಲವೂ ಬದಲಾಗುತ್ತಿದೆ. ಪ್ರತಿಷ್ಠೆಯ ಪರಾಕಾಷ್ಠೆ ಸಂಪ್ರದಾಯಗಳೆಲ್ಲವೂ ಗೊಡ್ಡು ಎನಿಸುತ್ತಿದೆ. ಮಗುವೂ ಕೂಡ ಅದನ್ನೇ ಅನುಸರಿಸಬೇಕು ಎಂದು ತಾಕೀತು ಮಾಡುವುದು. ಹಣದ ವಿಷಯಕ್ಕೆ ಜಗಳ ಮಾಡುವುದು, ವಿಪರೀತಕ್ಕೇರಿ ವಿಚ್ಛೇದನ ಬಯಸಿ ಏಕಪೋಷಕಿಯಾಗಿ ಬದುಕುವ ಮನೋಭಾವ ಹೆಚ್ಚಾಗುತ್ತಿದೆ. ಇಂತಹ ಅಸಮಧಾನಗಳು ಬೂದಿ ಮುಚ್ಚಿದ ಕೆಂಡದಂತೆ ಸದಾ ಒಳಗೊಳಗೆ ಸುಡುತ್ತಲೇ ಇರುವುದು. ಏಕಪೋಷಕರಾಗಿ ಬದುಕುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ವಾವಲಂಬನೆಯ ಹೆಸರಿನಲ್ಲಿ ಕೆಲವರು ಬೇಕಂತಲೇ ವೈವಾಹಿಕ ಜೀವನಕ್ಕೆ ಗೌರವ ಕೊಡದೇ ಮಗುವೊಂದು ಜನಿಸುವ ತನಕ ಕಾದು ನಂತರದಲ್ಲಿ ಏನೋ ಪಿಳ್ಳೆ ನೆಪವ ಹೇಳಿ ತಮ್ಮ ಸಂಗಾತಿಯಿಂದ ದೂರ ಸರಿಯುವುದನ್ನು ನಾವು ಕಾಣಬಹುದಾಗಿದೆ. ಕೆಲವು ಅನಿವಾರ್ಯ ಸಮಸ್ಯೆಗಳ ಹೊರತುಪಡಿಸಿ ಜೀವನವನ್ನು ತಮ್ಮ ಕೈಯಾರೆ ಹಾಳು ಮಾಡಿಕೊಳ್ಳುವುದು ಸರಿಯಲ್ಲ.
ಇಂತಹ ಅಮ್ಮನನ್ನು ನೋಡಿ ಬೆಳೆಯುವ ಮಕ್ಕಳ ಮನಸ್ಥಿತಿ ಕೂಡ ಬದಲಾಗಿರುತ್ತದೆ. ಈ ಆ ತರಹದ ಮಕ್ಕಳಲ್ಲಿ ಅಭದ್ರತೆ ಕಾಡುವುದು. ಸ್ನೇಹಿತರು ಇಲ್ಲದಿರುವುದು, ಪರಿಪೂರ್ಣವಾದ ಪ್ರೀತಿ ಕಾಳಜಿ ದೊರಕದೆ ನಂಬಿಕೆಯ ಕೊರತೆ, ಯಾವಾಗಲೂ ಜಗಳ ಕಾಯುವುದು, ಸಿಡುಕುವುದು, ಸ್ವಾರ್ಥ ಮನೋಭಾವ, ಹಂಚಿಕೊಳ್ಳುವ ಗುಣವಿಲ್ಲದಿರುವುದು ಎದ್ದು ಕಾಣಿಸುತ್ತದೆ.
ನಿಮ್ಮ ಸ್ವಾರ್ಥಕ್ಕೆ ಮಗುವಿನ ಭವಿಷ್ಯ ಕೆಡಿಸುವುದು ಎಷ್ಟು ಸರಿ? ಮೊದಮೊದಲು ಇರುವ ಉತ್ಸಾಹ ನಂತರದಲ್ಲಿ ಕಡಿಮೆಯಾಗಿ ನಿಮಗೆ ಒಬ್ಬ ಸಂಗಾತಿ ಬೇಕನಿಸಿದಾಗ ಈ ಮಗುವಿನ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರುವುದಿಲ್ಲ. ಅಥವಾ ನನ್ನ ಜೀವನ ನನ್ನ ಇಷ್ಟ ಎಂದು ನಿಮ್ಮ ಒಂಟಿತನ ಕಳೆಯಲು ಜೊತೆಗಾರನ ಹುಡುಕಿ ಪ್ರೀತಿಯೋ, ಸ್ನೇಹವೋ ಹೆಸರು ನೀಡಿ ವ್ಯವಹರಿಸುತ್ತಿದ್ದರೆ ನಿಮ್ಮ ಮಗುವಿಗೆ ಹೇಗಾಗಬೇಡ. ಬದ್ಧತೆ ಇದ್ದರೆ ಮಾತ್ರವೇ ಸಿಂಗಲ್ ಪೇರೆಂಟ್ ಆಗಿ ಬದುಕು ನಡೆಸಬೇಕು. ಅದು ಕೊನೆ ತನಕವೂ ಒಂಟಿಯಾಗಿ ಹೋರಾಡಿ ಮಗುವಿಗೆ ಉತ್ತಮ ಭವಿಷ್ಯ ನೀಡುವ ಎಂಬ ಮನಃಸಂಕಲ್ಪ ಮಾಡಿಕೊಂಡರಷ್ಟೇ ಆ ಮಗುವಿಗೆ ಉಜ್ವಲ ಭವಿಷ್ಯ ನೀಡಲು ಸಾಧ್ಯ.
ಹಾಗಾಗಿ ಅಮ್ಮನಾಗುವ ಬದಲು ತಾಯಿಯಾದರೆ ಮಾತ್ರವೇ ಅವಳು ಕಣ್ಣಿಗೆ ಕಾಣುವ ದೇವರಾಗಲು ಸಾಧ್ಯ.
ಸಿಂಧು ಭಾರ್ಗವ, ಬೆಂಗಳೂರು.
ಲೇಖಕರು.
Freelance writer
0 Followers
0 Following