ಜಿಯೋರ್ಡನೋ ಬ್ರೂನೋ

ವಿಜ್ಞಾನದ ಏಳಿಗೆಗಾಗಿ ಹುತಾತ್ಮನಾದ ಮಹಾತ್ಮ

ProfileImg
20 Mar '24
6 min read


image

ವಿಜ್ಞಾನ ಜಗತ್ತು ಒಂದು ನಿರಂತರ ಬದಲಾವಣೆಯಾಗುತ್ತಿರುವ ಜಗತ್ತು. ಇಂದು ನಮಗೆ ಗೊತ್ತಿರುವುದೆಲ್ಲ ಇಂದಿಗಷ್ಟೇ ಸತ್ಯ. ನಾಳೆ ಅದು ಸತ್ಯವಾಗಿರಲೇಬೇಕೆಂದೇನೂ ಇಲ್ಲ. ವಿಜ್ಞಾನ ಜಗತ್ತಿನ ಯಾವುದೇ ಕ್ಷೇತ್ರದಲ್ಲಾದರೂ ಇಂಥ ಬದಲಾವಣೆಗಳು ಇದ್ದೇ ಇರುತ್ತವೆ. ಅದು ಜೀವವಿಜ್ಞಾನ, ಭೌತವಿಜ್ಞಾನ, ರಸಾಯನ ವಿಜ್ಞಾನ ಹೀಗೆ ಯಾವ ವಿಭಾಗದಲ್ಲೇ ಆದರೂ ಬದಲಾವಣೆಗಳು ಸಾಮಾನ್ಯ. ಟಾಲೆಮಿಯ ಕಾಲದಿಂದ ಹಿಡಿದು ಕೋಪರ್ನಿಕಸ್, ಕೆಪ್ಲರ್, ಗೆಲಿಲಿಯೋ, ನ್ಯೂಟನ್, ಐನ್ ಸ್ಟೀನ್, ಮ್ಯಾಕ್ಸ್ ಪ್ಲಾಂಕ್ ತನಕ ಸಾಗಿಬಂದು ಇಂದು ಐನ್ ಸ್ಟೀನ್ ಗಿಂತ ಮುಂದೆ ಸಾಗಿ ಸ್ಟೀಫನ್ ಹಾಕಿಂಗ್, ಮಿಷಿಯೋ ಕಾಕು ಅವರವರೆಗೆ ಸಾಗಿಬಂದ ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರದಲ್ಲಿ ಆಗಿರುವ ಬದಲಾವಣೆಗಳು ಅಪಾರ. ಆದರೆ ಈ ಬದಲಾವಣೆಗಳೇನೂ ಸುಲಭದಲ್ಲಿ ಆಗಿಲ್ಲ. ಪ್ರತಿಬಾರಿಯೂ ಹೊಸ ವಿಜ್ಞಾನಿಯೊಬ್ಬ ಹೊಸ ಸಿದ್ಧಾಂತವನ್ನು ಮಂಡಿಸಿದಾಗ ಜನಸಮೂಹದಿಂದ ಅದಕ್ಕೆ ಪ್ರತಿರೋಧ ವ್ಯಕ್ತವಾಗುವುದು ಸಾಮಾನ್ಯ. ಇಂದು ಜನರಲ್ಲಿ ವಿಜ್ಞಾನದ ಬಗೆಗೆ ಅರಿವು ಹೆಚ್ಚಿರುವ ಕಾರಣ ಅಂಥ ಪ್ರತಿರೋಧಗಳು ಕಡಿಮೆ ಅಥವಾ ಇಲ್ಲವೇ ಇಲ್ಲವೆಂದರೂ ತಪ್ಪಾಗಲಾರದು. ಆದರೆ ನಾಲ್ಕೈದು ಶತಮಾನಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಕೆಪ್ಲರ್, ಗೆಲಿಲಿಯೋ, ಟೈಕೋ ಬ್ರಾಹೆ ಹೀಗೆ ಸತ್ಯ ಹೇಳಲು ಪ್ರಯತ್ನಿಸಿದವರೆಲ್ಲ ಪ್ರತಿಗಾಮಿಗಳಿಂದ ತೊಂದರೆ ಎದುರಿಸಿದವರೇ. ಅವರಲ್ಲೆಲ್ಲ ಪ್ರಸಿದ್ಧನಾಗಿ, ಸತ್ತ ಮೇಲೂ ಅಮರನಾಗಿರುವ ವ್ಯಕ್ತಿಯೆಂದರೆ ಜಿಯೋರ್ಡನೋ ಬ್ರೂನೋ. ಅವನನ್ನು ಇವತ್ತಿಗೂ “ವಿಜ್ಞಾನದ ಹುತಾತ್ಮ” (ಮಾರ್ಟಿರ್ ಆಫ್ ಸೈನ್ಸ್) ಎಂದೇ ಕರೆಯುತ್ತಾರೆ.

1548ರಲ್ಲಿ ಇಟಲಿಯಲ್ಲಿ ಜನಿಸಿದ ಫಿಲಿಪ್ಪೋ ಬ್ರೂನೋ ಬಹುಮುಖ ಪ್ರತಿಭಾವಂತ. ಈತ ಒಬ್ಬ ಗಣಿತಜ್ಞ, ಕವಿ ಮತ್ತು ಖಗೋಳಶಾಸ್ತ್ರಜ್ಞ. ರೋಮನ್ ಕ್ಯಾಥೋಲಿಕ್ಕರ ಅರ್ಥಹೀನ ಆಚರಣೆಗಳನ್ನು ಪ್ರಶ್ನಿಸಿದ ಕಾರಣ ಆತ 1593ರಿಂದ ನಿರಂತರವಾಗಿ ಅವರ ಕೋಪಕ್ಕೆ ತುತ್ತಾಗಿ ದೈವವಿರೋಧಿ ಎನ್ನಿಸಿಕೊಂಡ. ಅವನ ವಿರುದ್ಧ ಹಲವು ವಿಚಾರಣೆಗಳನ್ನು ನಡೆಸಿ ಕೊನೆಗೆ ಅವನನ್ನು ತಪ್ಪಿತಸ್ಥ ಎಂದು ಘೋಷಿಸಲಾಯಿತು. ಅವನ ತಪ್ಪಿಗಾಗಿ (?) ಅವನಿಗೆ ಮರಣದಂಡನೆಯನ್ನೂ ವಿಧಿಸಲಾಯಿತು. ಅದಕ್ಕಾಗಿ ಆರಿಸಿಕೊಂಡ ವಿಧಾನ ಮಾತ್ರ ಮರಣದಂಡನೆಗಳಲ್ಲೇ ಅತ್ಯಂತ ಕ್ರೂರವಾದ ಜೀವಂತ ಸುಡುವ ಶಿಕ್ಷೆ. 1600ರ ಫೆಬ್ರವರಿ 17ರಂದು ಈ ಶಿಕ್ಷೆಯನ್ನು ನೆರವೇರಿಸಲಾಯಿತು. ಸುಟ್ಟುಬೂದಿಯಾದ ಮೇಲೆ ಬ್ರೂನೋ ಮಾನವಕುಲದ ಸಾಕ್ಷಿಪ್ರಜ್ಞೆಯನ್ನು ಕಲಕತೊಡಗಿದ. ಅವನನ್ನು ಕೊಂದವರಿಗೆ ಎಷ್ಟು ಪಶ್ಚಾತ್ತಾಪವಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಇಟಲಿಯ ಜನತೆ ಮತ್ತು ಇಡೀ ಜಗತ್ತಿನ ಜನತೆ ಅವನನ್ನು ಗೌರವಿಸಲಾರಂಭಿಸಿ ವಿಜ್ಞಾನದ ಹುತಾತ್ಮನೆಂದು ಕರೆದರು. ರೋಮ್ ನಗರದಲ್ಲಿ ಅವನ ಗೌರವಾರ್ಥ ನಿಲ್ಲಿಸಲಾದ ಪ್ರತಿಮೆಯೊಂದು ಇವತ್ತಿಗೂ ಇದೆ. ಸತ್ಯದ ಪ್ರತಿಪಾದನೆಗಾಗಿ ತೆರಬೇಕಾದ ಬೆಲೆಗೆ ಸಾಕ್ಷಿಯಾಗಿ ಈ ಪ್ರತಿಮೆ ನಿಂತಿದೆ.

ಬ್ರೂನೋ ಚಿಕ್ಕಂದಿನಿಂದಲೂ ಸ್ವತಂತ್ರ ಮತ್ತು ಕ್ರಾಂತಿಕಾರಿ ಚಿಂತನೆಗೆ ಹೆಸರಾಗಿದ್ದ. ತನ್ನ ಹದಿನೇಳನೇ ವಯಸ್ಸಿನಲ್ಲಿ ಬ್ರೂನೋ ತನ್ನ ಭೌತಶಾಸ್ತ್ರದ ಗುರುವಾದ ಜಿಯೋರ್ಡನೋ ಕ್ರಿಸ್ಪೋನ ನೆನಪಿಗಾಗಿ ತನ್ನ ಹೆಸರನ್ನು ಜಿಯೋರ್ಡನೋ ಬ್ರೂನೋ ಎಂದು ಬದಲಾಯಿಸಿಕೊಂಡ. ತನ್ನ ಅದ್ಭುತವಾದ ಸ್ಮರಣಶಕ್ತಿಯಿಂದಾಗಿಯೇ ಹೆಸರುವಾಸಿಯಾಗಿದ್ದ ಅವನು ಕ್ರಮೇಣ ತನ್ನ ಸ್ವತಂತ್ರ ಚಿಂತನೆಗಳಿಂದಾಗಿ ತೊಂದರೆಗಳಿಗೆ ಸಿಲುಕಿಕೊಳ್ಳತೊಡಗಿದ. ಎಲ್ಲೆಡೆ ಅವನ ಚಿಂತನೆಗಳಿಗೆ ವಿರೋಧಗಳು ಬರತೊಡಗಿದವು. ಅಂಥ ವಿರೋಧಗಳ ನಡುವೆಯೂ ಆತ ಹನ್ನೊಂದು ವರ್ಷಗಳನ್ನು ಕಳೆದನೆಂಬುದು ಅಚ್ಚರಿಯ ಸಂಗತಿಯೇ ಸರಿ. ಅಂದು ಜನರೆಲ್ಲ ನಂಬಿದ್ದು ಟಾಲೆಮಿ ಹೇಳಿದ್ದ ಭೂಕೇಂದ್ರ ಸಿದ್ಧಾಂತವನ್ನೇ. ಭೂಮಿಯೇ ವಿಶ್ವದ ಕೇಂದ್ರ, ಭೂಮಿಯ ಸುತ್ತ ಚಂದ್ರ, ಸೂರ್ಯ, ಗ್ರಹಗಳು ಮತ್ತು ನಕ್ಷತ್ರಗಳೆಲ್ಲ ವೃತ್ತಾಕಾರದ ಪಥಗಳಲ್ಲಿ ಸುತ್ತುತ್ತಿವೆ ಎಂದು ನಂಬಿದ್ದರು. ಕೋಪರ್ನಿಕಸ್ ಮೊದಲಬಾರಿಗೆ ಸೌರಕೇಂದ್ರ ಸಿದ್ಧಾಂತವನ್ನು ಪ್ರತಿಪಾದಿಸಿದಾಗ ಎಲ್ಲೆಡೆಯಿಂದ ಉಗ್ರಪ್ರತಿರೋಧ ಕಂಡುಬಂದಿತು. ಕೆಪ್ಲರ್ ಅಂತೂ ಸೂರ್ಯನ ಸುತ್ತ ಗ್ರಹಗಳು ಸುತ್ತುವುದರ ಬಗೆಗೆ ಮೂರು ನಿಯಮಗಳನ್ನೇ ಪ್ರತಿಪಾದಿಸಿದ. ಆದರೆ ಧರ್ಮಬೀರುಗಳು ಅದಕ್ಕೆಲ್ಲ ಕುರುಡರಾಗಿದ್ದರು. ತಾವು ನಂಬಿದ್ದನ್ನೇ ಸತ್ಯವೆಂದು ಪ್ರತಿಪಾದಿಸುತ್ತಿದ್ದರು. ಆದ್ದರಿಂದ ಬ್ರೂನೋ ಕೂಡ ಹಲವು ವರ್ಷಗಳ ಕಾಲ ಅಲೆಮಾರಿಯಾಗಬೇಕಾಯಿತು. ಏಕೆಂದರೆ ಸತ್ಯವನ್ನು ಪ್ರತಿಪಾದಿಸುವ ಅವನ ನಡೆ ಇಷ್ಟವಾಗದೆ ಅವನನ್ನು ಇದ್ದಲ್ಲಿ ಇರಲು ಬಿಡುತ್ತಿರಲಿಲ್ಲ. ಅಲ್ಲಿ ಇಲ್ಲಿ ಸುತ್ತಾಡಿ ಕೊನೆಗೆ 1579ರಲ್ಲಿ ಆತ ಜಿನೇವಾಕ್ಕೆ ಬಂದ.

ಬ್ರೂನೋನ ಜೀವನಚರಿತ್ರೆಯನ್ನು ಬರೆದ ಡಿ.ಡಬ್ಲ್ಯು. ಸಿಂಗರ್ ಎಂಬಾತ ಹೇಳುತ್ತಾನೆ “ಬ್ರೂನೋ ಒಬ್ಬ ಪ್ರೊಟೆಸ್ಟೆಂಟ್ ಆಗಿದ್ದಾನೆಯೇ ಎಂದು ಮೊದಲಿಗೆ ಅನ್ನಿಸುತ್ತಿತ್ತು. ಆದರೆ ಆತ ಯಾವುದೇ ಧಾರ್ಮಿಕ ಸಂಘಟನೆಯ ಸದಸ್ಯತ್ವವನ್ನು ಸ್ವೀಕರಿಸಿದಂತೆ ಕಾಣುವುದಿಲ್ಲ” ಎನ್ನುತ್ತಾನೆ. ಬ್ರೂನೋ ಸಹ ಜಿನೇವಾಕ್ಕೆ ಬಂದಾಗ ತನಗೆ ಯಾವುದೇ ಧಾರ್ಮಿಕ ವಿಷಯಗಳಲ್ಲಿ ಆಸಕ್ತಿಯಿಲ್ಲವೆಂದು ಸ್ಪಷ್ಟಪಡಿಸುತ್ತಾನೆ. ತಾನಲ್ಲಿಗೆ ಬಂದಿದ್ದು ಯಾವುದೇ ಕಿರಿಕಿರಿಗಳಿಲ್ಲದೆ ಸತ್ಯಾನ್ವೇಷಣೆಯ ದಾರಿಯಲ್ಲಿ ನೆಮ್ಮದಿಯಾಗಿ ಬದುಕಬೇಕೆಂಬ ಉದ್ದೇಶದಿಂದಲೇ ಹೊರತು ಬೇರೇನಲ್ಲವೆಂದು ಹೇಳುತ್ತಾನೆ. 

ಜಿನೇವಾದಲ್ಲಿ ಕೆಲಕಾಲ ಬ್ರೂನೋ ನೆಮ್ಮದಿಯಿಂದ ಬದುಕಿದ. ಆದರೆ ಆತನ ಸ್ವಭಾವ ಸುಮ್ಮನಿರುವಂಥದ್ದಾಗಿರಲಿಲ್ಲ. ಸತ್ಯಪ್ರಿಯತೆ ಮತ್ತು ನ್ಯಾಯನಿಷ್ಠುರತೆಯಿಂದಲೇ ಎಲ್ಲೆಡೆ ಹೆಸರುವಾಸಿಯಾಗುತ್ತ ಬಂದಿದ್ದ ಬ್ರೂನೋ ಆ್ಯಂಟನಿ ಡಿ ಲಾ ಫಾಯೆ ಎಂಬ ಪ್ರಸಿದ್ಧ ಪ್ರಾಧ್ಯಾಪಕನೊಬ್ಬನ ಬೋಧನೆಗಳನ್ನು ಟೀಕಿಸಿ ಪುಸ್ತಕವೊಂದನ್ನು ಪ್ರಕಟಿಸಿದ. ಕೂಡಲೇ ಅದಕ್ಕೆ ಉಗ್ರಪ್ರತಿಕ್ರಿಯೆಯನ್ನು ಎದುರಿಸಬೇಕಾಯಿತು. ಆತನನ್ನು ಮತ್ತು ಆ ಪುಸ್ತಕದ ಮುದ್ರಣಕಾರನನ್ನು ಕೂಡಲೇ ಬಂಧಿಸಲಾಯಿತು. ಅಲ್ಲಿ ತಪ್ಪೊಪ್ಪಿಕೊಳ್ಳುವಂತೆ ಹೇಳಿದರೂ ಆತ ತನ್ನದು ತಪ್ಪಿಲ್ಲವೆಂದು ನಿರ್ದಾಕ್ಷಿಣ್ಯವಾಗಿ ಹೇಳಿದ. ಈ ಘಟನೆಯ ನಂತರ ಅವನು ಜಿನೇವಾವನ್ನು ತೊರೆದ.

ನಂತರ ಆತ ಹೋಗಿದ್ದು ಫ್ರಾನ್ಸ್ ದೇಶಕ್ಕೆ. ಮೊದಲು ಲಿಯಾನ್ ಗೆ ಹೋದ ಆತ ನಂತರ ಟೌಲೋಸ್ ಪಟ್ಟಣಕ್ಕೆ ಹೋದ. 1580-81ರಲ್ಲಿ ಆತ ಟೌಲೋಸ್ ನಲ್ಲಿ ವಿದ್ಯಾರ್ಥಿಗಳಿಗೆ ಬಹಳ ಪ್ರಿಯನಾದ. ಅವರು ಅವನನ್ನು ತತ್ವಶಾಸ್ತ್ರದ ಅಧ್ಯಾಪಕನನ್ನಾಗಿ ನೇಮಿಸಿಕೊಂಡರು. ಆತ ಮರಳಿ ಕ್ಯಾಥೋಲಿಕ್ ಧಾರ್ಮಿಕತೆಗೆ ಬರಲು ಇಚ್ಛಿಸಿದ ಮತ್ತು ಅದಕ್ಕೆ ಅಲ್ಲಿನ ಪಾದ್ರಿ ಸಮ್ಮತಿಸಲಿಲ್ಲ ಎಂಬ ವದಂತಿಗಳಿದ್ದವು. 1581ರಲ್ಲಿ ಟೌಲೋಸ್ ನಲ್ಲಿ ಧಾರ್ಮಿಕ ಗಲಭೆಗಳು ಆರಂಭವಾದ ಬಳಿಕ ಅವನು ಪ್ಯಾರಿಸ್ ಗೆ ತೆರಳಿದ. ಅಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿ ತನ್ನ ಅಮೋಘವಾದ ನೆನಪಿನ ಶಕ್ತಿಯಿಂದಲೇ ಪ್ರಸಿದ್ಧನಾದ. ಅಲ್ಲಿ ಆತ ರಾಜನಾದ ಮೂರನೇ ಹನ್ರಿಯ ಗಮನಸೆಳೆದ. ಹೆನ್ರಿ ಅವನನ್ನು ತನ್ನ ಆಸ್ಥಾನಕ್ಕೆ ಆಹ್ವಾನಿಸಿದ. ಅಲ್ಲಿ ಆತ ರಾಜನ ಆಶ್ರಯದಲ್ಲಿ ಕ್ಷೇಮವಾಗಿ ಇರುವುದು ಸಾಧ್ಯವಾಯಿತು. ರಾಜನ ರಕ್ಷಣೆಯಲ್ಲಿ ತನ್ನ ಅನೇಕ ಕೃತಿಗಳನ್ನು ಅಲ್ಲಿ ಪ್ರಕಟಿಸಿದ. ಅವುಗಳಲ್ಲಿ ಅನೇಕವನ್ನು ರಾಜನ ಹೆಸರಿಗೆ ಅರ್ಪಿಸಿದ ಕೂಡ. 

ಬ್ರೂನೋ ಎಲ್ಲರ ಕಣ್ಣುಗಳನ್ನು ಕೆಂಪಾಗಿಸಿದ್ದು ಆತ ಜನರೆಲ್ಲರ ನಂಬಿಕೆಗಳಿಗೆ ವಿರುದ್ಧವಾಗಿ ಸತ್ಯಗಳನ್ನು ಹೇಳತೊಡಗಿದ್ದರಿಂದ. ಅವನು ನಕ್ಷತ್ರಗಳನ್ನು ಸಹ ನಮ್ಮ ಸೂರ್ಯನಂತೆಯೇ ಅತ್ಯಂತ ದೂರದಲ್ಲಿರುವ ಕಾಯಗಳು ಎಂದು ಹೇಳಿದ. ಜೊತೆಗೆ ಆ ಸೂರ್ಯರ ಸುತ್ತಲೂ ಭೂಮಿಯಂಥದೇ ಗ್ರಹಗಳು ಸುತ್ತುತ್ತಿರುತ್ತವೆ ಮತ್ತು ಆ ಗ್ರಹಗಳಲ್ಲೂ ನಮ್ಮಂತೆಯೇ ಜೀವಿಗಳಿರುತ್ತವೆ ಎಂದು ಹೇಳಿದ. ಇಂದು ನಮ್ಮೆಲ್ಲರ ಆಸಕ್ತಯನ್ನು ಕೆರಳಿಸಿರುವ ಸಂಶೋಧನಾ ಕ್ಷೇತ್ರವಿದು. ನಮ್ಮದೇ ಸೌರಮಂಡಲದಲ್ಲಿ ನೆರೆಯ ಮಂಗಳಗ್ರಹ ಮತ್ತು ಗುರುಗ್ರಹದ ಚಂದ್ರ ಯೂರೋಪಾಗಳಲ್ಲಿ ಜೀವಿಗಳ ವಾಸಕ್ಕೆ ಯೋಗ್ಯವಾದ ಪರಿಸರವಿದೆ ಎಂದು ನಂಬಲಾಗಿತ್ತು. ಅಲ್ಲಿನ ಪರಿಸರ ಒಮ್ಮೊಮ್ಮೆ ನಮ್ಮ ಭೂಮಿಯ ಪರಿಸರದಷ್ಟೇ ವಾಸಯೋಗ್ಯವಾಗಿ ಕಂಡರೂ ಅದು ಎಲ್ಲೋ ಒಂದೆರಡು ಅಂಶಗಳನ್ನು ಹೊರತುಪಡಿಸಿ ಇನ್ನುಳಿದಂತೆ ಜೀವಿಗಳಿರಬುದಾದ ಸಾಧ್ಯತೆ ತುಂಬಾ ಕಡಿಮೆ ಎಂದು ನಮಗೆ ತಿಳಿದಿದೆ. ಜೊತೆಗೆ ಅವುಗಳಲ್ಲಿ ಜೀವಿಗಳಿರಬಹುದಾದ ಯಾವುದೇ ಸಾಕ್ಷ್ಯಗಳೂ ಸಿಕ್ಕಿಲ್ಲ ಅದು ಬೇರೆ ಮಾತು. ಆದರೆ ಬೇರೆ ನಕ್ಷತ್ರಗಳ ಸುತ್ತ ಕೂಡ ಅನೇಕ ಗ್ರಹಗಳಿರುವುದು ನಮಗೆ ಗೊತ್ತಾಗಿದೆ. ಅವುಗಳಲ್ಲಿ ಕೆಲವಾದರೂ ವಾಸಯೋಗ್ಯ ಗ್ರಹಗಳಿರಬಹುದೆಂಬ ಭರವಸೆಯಿಂದ ನೋಡುತ್ತಿದ್ದೇವೆ. ಆದರೆ ನಾಲ್ಕು ಶತಮಾನಗಳ ಹಿಂದೆಯೇ ಬ್ರೂನೋ ಅಂಥದ್ದೊಂದು ಕಲ್ಪನೆಯನ್ನು ಹುಟ್ಟುಹಾಕಿದ್ದ.

1583ರಲ್ಲಿ ಬ್ರೂನೋ ಕಿಂಗ್ ಮೂರನೆಯ ಹೆನ್ರಿಯ ಶಿಫಾರಸು ಪತ್ರವೊಂದನ್ನು ಹಿಡಿದುಕೊಂಡು ಇಂಗ್ಲೆಂಡಿಗೆ ಹೋದ. ಅಲ್ಲಿ ಕೆಲಕಾಲ ಫಿಲಿಪ್ ಸಿಡ್ನಿ ಎಂಬ ಕವಿಯ ಜೊತೆಗೆ ಇದ್ದ. ಮುಂದೆ ಆತ ಆಕ್ಸ್ ಫರ್ಡ್ ಗೆ ಹೋಗಿ ಅಲ್ಲಿ ಉಪನ್ಯಾಸಕ ಹುದ್ದೆಗೆ ಪ್ರಯತ್ನಿಸಿದ. ಆದರೆ ಮೊದಲೇ ತನ್ನ ಪ್ರಖರ ಚಿಂತನೆಗಳಿಂದ ಎಲ್ಲೆಡೆ ಹೆಸರಾಗಿದ್ದ ಅವನಿಗೆ ಅಲ್ಲಿ ಕೆಲಸ ಸಿಗಲಿಲ್ಲ. ಅಲ್ಲಿ ಜಾರ್ಜ್ ಅಬ್ಬಾಟ್ ಎಂಬಾತ ಬ್ರೂನೋನನ್ನು ಗೇಲಿ ಮಾಡಿದ. ಕೋಪರ್ನಿಕಸ್ ನ ಸೌರಕೇಂದ್ರ ಸಿದ್ಧಾಂತವನ್ನು ಬೆಂಬಲಿಸಿ, ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂದಿದ್ದಕ್ಕೆ ಬ್ರೂನೋನ ತಲೆ ಸುತ್ತುತ್ತಿದೆ ಮತ್ತು ಆತನ ಮೆದುಳು ನಿಂತಲ್ಲಿ ನಿಲ್ಲುತ್ತಿಲ್ಲ ಎಂದು ಅವನ ತೇಜೋವಧೆಗೆ ಯತ್ನಿಸಿದ. ಅವನ ಮೇಲೆ ಕೃತಿಚೌರ್ಯದ ಆರೋಪವನ್ನೂ ಹೊರಿಸಿದ. ಆದರೆ ತನ್ನ ಪಾಡಿಗೆ ತಾನು ಕೆಲಸದಲ್ಲಿ ತೊಡಗಿದ್ದ ಬ್ರೂನೋ ಅನೇಕ ಕೃತಿಗಳನ್ನು ಪ್ರಕಟಪಡಿಸುವ ಮೂಲಕ ಇಂಗ್ಲೆಂಡಿನ ತನ್ನ ಸಮಯವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡ.

1585ರಲ್ಲಿ ಬ್ರೂನೋ ಪ್ಯಾರಿಸ್ಸಿಗೆ ಮರಳಿದ. ಆದರೆ ಅಲ್ಲಿನ ಪರಿಸ್ಥಿತಿ ಆಗ ತೀರಾ ಬಿಗಡಾಯಿಸಿತ್ತು. ರಾಜಕೀಯ ಗಲಭೆಗಳಿಂದ ಪ್ಯಾರಿಸ್ ಅಶಾಂತಿಯ ಗೂಡಾಗಿತ್ತು. ಬ್ರೂನೋ ತನ್ನ ಕೆಲಸಗಳನ್ನು ಇಂಥ ಪರಿಸ್ಥಿತಿಯಲ್ಲೂ ಮುಂದುವರೆಸಿದ. ಅರಿಸ್ಟಾಟಲ್ ಪ್ರತಿಪಾದಿಸಿದ್ದ ಪ್ರಕೃತಿವಿಜ್ಞಾನದ ಬಗೆಗಿನ ಕೆಲವು ನಂಬಿಗಳನ್ನು ಬುಡಮೇಲು ಮಾಡುವಂಥ ಸಿದ್ಧಾಂತಗಳನ್ನು ಬ್ರೂನೋ ಪ್ರತಿಪಾದಿಸಿದ. ಜೊತೆಗೆ ಗಣಿತಶಾಸ್ತ್ರದಲ್ಲೂ ಅನೇಕ ಕ್ರಾಂತಿಕಾರಿ ಸಿದ್ಧಾಂತಗಳನ್ನು ಪ್ರತಿಪಾದಿಸಿದ. ಇದರಿಂದಾಗಿ ಅಲ್ಲೂ ಅವನ ಬಗೆಗೆ ಅಸಹನೆ ಹೆಚ್ಚುತ್ತ ಹೋಯಿತು. ಕೊನೆಗೆ ಆತ 1586ರಲ್ಲಿ ಪ್ಯಾರಿಸ್ ತ್ಯಜಿಸಿ ಜರ್ಮನಿಯತ್ತ ಹೊರಟ.

ಆದರೆ ಬ್ರೂನೋಗೆ ಕೆಲಸ ಸಿಗುವುದು ಜರ್ಮನಿಯಲ್ಲೂ ಕಷ್ಟವೇ ಆಗಿತ್ತು. ಏಕೆಂದರೆ ಕ್ಯಾಥೋಲಿಕ್ಕರ ಅಸಹನೆ ಅಷ್ಟೊಂದು ತೀವ್ರವಾಗಿತ್ತು. ಕೆಲವುಕಾಲ ಏನೇನೋ ಮಾಡಿಕೊಂಡು ಬದುಕಿದ ಬ್ರೂನೋ ಕೊನೆಗೆ ವಿಟ್ಟನ್ ಬರ್ಗ್ ನಲ್ಲಿ ಉಪನ್ಯಾಸಕನಾಗಿ ಸೇರಿದ. ಅಲ್ಲಿ ಎರಡು ವರ್ಷಗಳ ಕಾಲ ಅರಿಸ್ಟಾಟಲ್ ಬಗೆಗೆ ಉಪನ್ಯಾಸ ನೀಡುತ್ತಿದ್ದ. 1591ರಲ್ಲಿ ಆತ ಫ್ರಾಂಕ್ ಫರ್ಟ್ ನಲ್ಲಿದ್ದಾಗ ಅಲ್ಲಿ ಪುಸ್ತಕ ಸಮ್ಮೇಳನವೊಂದರಲ್ಲಿ ಜಿಯೊವಾನ್ನಿ ಮೊಸೆನಿಗೋನಿಂದ ವೆನಿಸ್ ಗೆ ಬರುವಂತೆ ಆಹ್ವಾನ ಪಡೆದ. ಅದೇ ಸಮಯದಲ್ಲಿ ಪದುವಾ ವಿಶ್ವವಿದ್ಯಾನಿಲಯದಲ್ಲಿ ಗಣಿತ ಬೋಧಿಸುವ ಕೆಲಸಕ್ಕೆ ಪ್ರಯತ್ನಿಸಿದ. ಆದರೆ ಆ ಕೆಲಸ ಗೆಲಿಲಿಯೋಗೆ ಸಿಕ್ಕಿತು. ಹಾಗಾಗಿ ಬ್ರೂನೋ ವೆನಿಸ್ ಗೆ ಹೋದ. ಅಲ್ಲಿ ಕೆಲಕಾಲ ಬೋಧಕನಾಗಿದ್ದ ಅವನು ಕೊನೆಗೆ ಅಲ್ಲಿಂದ ಹೋಗುವ ಇಚ್ಛೆ ವ್ಯಕ್ತಪಡಿಸಿದಾಗ ಮೊಸೆನಿಗೋ ಅವನ ಬಗೆಗೆ ವೆನಿಸ್ ನ ಅಧಿಕಾರಿಗಳಿಗೆ ದೂರು ನೀಡಿದ. ಏಕೆಂದರೆ ಅವನಿಗೆ ಮೊದಲೇ ಬ್ರೂನೋನ ಸಿದ್ಧಾಂತಗಳ ಬಗೆಗೆ ಅಸಮಾಧಾನವಿತ್ತು. ಹಾಗಾಗಿ ಬ್ರೂನೋನನ್ನು ಬಂಧಿಸಲಾಯಿತು. ಅವನ ಬಂಧನದ ವಿಷಯ ತಿಳಿದ ರೋಮನ್ನರು ಅವನನ್ನು ತಮಗೆ ಹಸ್ತಾಂತರಿಸುವಂತೆ ಕೇಳಿಕೊಂಡರು. ಇಷ್ಟವಿಲ್ಲದಿದ್ದರೂ ಸಾಕಷ್ಟು ವಾದವಿವಾದದ ನಂತರ ಅವನನ್ನು ರೋಮನ್ನರಿಗೆ ಹಸ್ತಾಂತರಿಸಲು ವೆನಿಸ್ಸಿಗರು ಒಪ್ಪಿಕೊಂಡರು. ಅಲ್ಲಿಗೆ ಬ್ರೂನೋನ ಅಲೆಮಾರಿ ಜೀವನ ಕೊನೆಗೊಂಡು ಬಂಧನದ ಜೀವನ ಪ್ರಾರಂಭವಾಗಿತ್ತು. 

ಏಳು ವರ್ಷಗಳ ಕಾಲ ಬ್ರೂನೋ ಬಂಧನದಲ್ಲಿದ್ದ. ಈ ಹಂತದಲ್ಲಿ ನಡೆದ ಅವನ ವಿಚಾರಣೆಯ ಬಗೆಗೆ ಅನೇಕ ಮಹತ್ವದ ದಾಖಲೆಗಳು ಕಾಣೆಯಾಗಿವೆ. ಕೆಲವು ಪುಸ್ತಕಗಳು ಮಾತ್ರ ಇಂದು ಲಭ್ಯವಿವೆ. ಅವುಗಳ ಪ್ರಕಾರ ಆತನ ಮೇಲಿದ್ದ ಒಂದೇ ಆರೋಪವೆಂದರೆ ರೋಮನ್ ಕ್ಯಾಥೋಲಿಕ್ಕರ ನಂಬಿಕೆಗಳಿಗೆ ವಿರುದ್ಧವಾದ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದು. ವಿಜ್ಞಾನದ ಎಲ್ಲ ಶಾಖೆಗಳಲ್ಲಿ ಸತ್ಯವನ್ನು ಪ್ರತಿಪಾದಿಸುವ ಯತ್ನ ಬ್ರೂನೋನದ್ದಾಗಿತ್ತು. ಅದನ್ನು ಕ್ಯಾಥೋಲಿಕ್ಕರು ಪ್ರಬಲವಾಗಿ ವಿರೋಧಿಸಿದರಲ್ಲದೆ ತನ್ನ ಬೋಧನೆಗಳನ್ನು ಹಿಂತೆಗೆದುಕೊಳ್ಳುವಂತೆ ಅವನ ಮೇಲೆ ಒತ್ತಡ ತಂದರು. ಆದರೆ ಅವನು ಒಪ್ಪಲಿಲ್ಲ. ಆತನ ಸೂರ್ಯಕೇಂದ್ರ ಸಿದ್ಧಾಂತ ಮತ್ತು ವಿವಿಧ ವಿಶ್ವಗಳ ಪ್ರತಿಪಾದನೆಯ ಬಗೆಗೆ ಮುಖ್ಯವಾಗಿ ಕ್ಯಾಥೋಲಿಕ್ಕರ ಸಿಟ್ಟಿತ್ತು. ಭೂಮಿಗೆ ವಿಶೇಷವಾದ ಸ್ಥಾನಮಾನವನ್ನು ಕಲ್ಪಿಸಿದ್ದ ಅವರು ಭೂಮಿಯೇ ವಿಶ್ವದ ಕೇಂದ್ರ ಎಂಬ ತಮ್ಮ ವಾದವನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಗೆಲಿಲಿಯೋನಿಗೂ ಇದೇ ರೀತಿ ತಪ್ಪೊಪ್ಪಿಕೊಳ್ಳುವಂತೆ ಒತ್ತಡ ತರಲಾಗಿತ್ತು. ಆತ ಚರ್ಚಿನಲ್ಲಿ ತಪ್ಪೊಪ್ಪಿಕೊಂಡು ಸೂರ್ಯನೇ ಭೂಮಿಯನ್ನು ಸುತ್ತುತ್ತಿದೆ ಎಮದು ಜೋರಾಗಿ ಹೇಳಿ, ನಂತರ ತಾನೇನೇ ಹೇಳಿದರೂ ಭೂಮಿ ಸೂರ್ಯನ ಸುತ್ತ ಸುತ್ತುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದನೆಂಬ ಪ್ರತೀತಿಯಿದೆ. ಆದರೆ ಬ್ರೂನೋ ತಾನು ಮಾಡಿದ್ದು ಸರಿಯೆಂದೇ ದೃಢವಾಗಿ ಪ್ರತಿಪಾದಿಸಿದ. ವಿಶ್ವವು ಅನಂತವೆಂಬ ಪರಿಕಲ್ಪನೆಯನ್ನು ಮೊದಲು ನೀಡಿದ್ದೇ ಬ್ರೂನೋ ಎಂಬುದಕ್ಕೆ ಆಧಾರಗಳಿವೆ. ಇದೆಲ್ಲವನ್ನು ಮುಂದಿಟ್ಟುಕೊಂಡು ಅವನಿಗೆ ಮರಣದಂಡನೆಯನ್ನು ವಿಧಿಸಲಾಯಿತು.

ಹೀಗೆ ವಿಜ್ಞಾನಕ್ಕಾಗಿಯೇ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ, ನೇರ, ದಿಟ್ಟ ಚಿಂತನೆಯ ಬ್ರೂನೋ ಸತ್ಯವನ್ನು ಹೇಳಲು ಎಷ್ಟೇ ಕಷ್ಟ ಬಂದರೂ ಹಿಂಜರಿಯಲಿಲ್ಲ. ಕೊನೆಗೂ ಸತ್ಯವನ್ನು ಸುಳ್ಳೆಂದು, ಸುಳ್ಳನ್ನು ಸತ್ಯವೆಂದು ಹೇಳಲು ಒಪ್ಪದೆ ಅಮಾನುಷವಾಗಿ ಸಾವನ್ನಪ್ಪಿದ. ಅವನನ್ನು ಆಧುನಿಕ ಸತ್ಯಹರಿಶ್ಚಂದ್ರ ಎನ್ನುವುದು ತುಸು ಅತಿಶಯೋಕ್ತಿಯೆನಿಸಿದರೂ ಅವನ ಅಲೆಮಾರಿ ಜೀವನ, ಪಟ್ಟ ಕಷ್ಟಗಳನ್ನೆಲ್ಲ ನೋಡಿದರೆ ಅದು ತೀರಾ ಅಸಮಂಜಸವೂ ಅಲ್ಲ ಎನ್ನುವುದು ಅರ್ಥವಾಗುತ್ತದೆ. ಪ್ರತಿಬಾರಿ ವಿಜ್ಞಾನದಲ್ಲಿ ಹೊಸದೊಂದು ಆವಿಷ್ಕಾರ ಆದಾಗಲೂ ಬ್ರೂನೋನನ್ನು ಒಮ್ಮೆ ನೆನಪಿಸಿಕೊಳ್ಳುವುದು ಅವನಿಗೆ ನೀಡಿದ ಸೂಕ್ತ ಶ್ರದ್ಧಾಂಜಲಿಯಾಗಬಲ್ಲದು. ಅಲ್ಲವೇ?

Category:History



ProfileImg

Written by Srinivasa Murthy

Verified