ದಪ್ಪನೆಯ ಎತ್ತರದ ಶರೀರ. ತೊಳೆದಿಟ್ಟ ಶಿಲೆಯಂತಹಾ ಕಪ್ಪು ಬಣ್ಣ. ಕುರುಚಲು ಗಡ್ಡ. ಕೆದರಿದ ಕೂದಲು. ಎದುರಿಗೆ ನಿಂತನೆಂದರೆ ಎಂತವರ ಮೈ ಕೂಡಾ ಜುಮ್ ಎನ್ನಬೇಕು. ಕತೆಯಲ್ಲಿ ಬರುವ ರಾಕ್ಷಸನಂತೆ. ಆತ ಅಷ್ಟೊಂದು ತೂಕದ ಮನುಷ್ಯ. ದೇಹದಿಂದಷ್ಟೇ ಅಲ್ಲ. ಗುಣದಲ್ಲೂ ಕೂಡಾ. ಅವನೊಂದು ಅದ್ಭುತ .ಅಚ್ಚರಿ. ಅವನೇ ನಮ್ಮ ಮನೆಗಾಗಿ ದುಡಿದ ಶ್ರಮಜೀವಿ ಕೆಪ್ಪ..ಆ ಹೆಸರು ಹುಟ್ಟಿನಿಂದ ಬಂದುದಲ್ಲ..ಅವನಿಗೆ ಕಿವಿ ಕೇಳಿಸುತ್ತಿರಲಿಲ್ಲವಾದ್ದರಿಂದ ವಾಡಿಕೆಯಿಂದ ಬಂದ ಹೆಸರಷ್ಟೆ.ಅವನ ಕಿವಿ ಕೇಳಿಸುತ್ತಿರಲಿಲ್ಲವಾದ್ದರಿಂದ ಅಜ್ಜ ಅವನನ್ನು ನಾಲ್ಕು ಸಲ ಕೂಗಿದ ಮೇಲೆ ಓ ಎನ್ನುತ್ತಿದ್ದ .ಇದರಿಂದ ಸಿಟ್ಟಿಗೆದ್ದ ಅಜ್ಜ ಈ ಕರೆಯುತ್ತಿದ್ದರು . ಕ್ರಮೇಣ ಆ ಹೆಸರೇ ಖಾಯಂ ಆಯಿತು . ಅವನೊಬ್ಬ ಅನಾಥ. ಕೆಲಸಕ್ಕಾಗಿ ಯಾರೋ ನಮ್ಮ ಮನೆಗೆ ತಂದುಬಿಟ್ಟರು .ಆಪತ್ತಿಗಾದವರೇ ನೆಂಟರು ಎನ್ನುವಂತೆ. ಆಮೇಲೆ ಅವನು ಊರ ದಾರಿ ಮರೆತ..ನಮ್ಮ ಮನೆಯ ಭಾಗವಾಗಿ ಹೋದ. ನಮ್ಮ ಮನೆಗೆ ಮಾತ್ರವಲ್ಲ, ಮನೆಗೆ ಬರುವ ನೆಂಟರಿಗೆ, ಊರಿನವರಿಗೆ, ಪಕ್ಕದ ಊರಿನವರಿಗೆ ಹೀಗೆ ಎಲ್ಲರಿಗೂ ಆಪ್ತ ಕೆಪ್ಪನೇ ಆದ. ಹಠ ಮಾಡುವ ಹುಡುಗರಿಗೆ ಗುಮ್ಮನಂತೆ ಕಂಡ..ನಮ್ಮ ಮನೆಯವರಿಗೆಲ್ಲಾ ಬಲಗೈಯಂತಿದ್ದ. ಕೆಪ್ಪನೆಂದು ಕರೆದಾಗ ಅವನೆಂದೂ ಬೇಸರಿಸಲಿಲ್ಲ..ಬದಲಿಗೆ ನಗುತಿದ್ದ..ವಾಸ್ತವವನ್ನು ಅಷ್ಟು ಬೇಗನೆ ಒಪ್ಪಿಕೊಳ್ಳುವುದು ಸುಲುಭದ ಮಾತಲ್ಲ. ಅದು ಅವನಿಂದ ಮಾತ್ರ ಸಾಧ್ಯ. ಎಂದೂ ಜೋರುಧ್ವನಿಯಲ್ಲಿ ಮಾತನಾಡಿದವನಲ್ಲ. ಯಾರೊಂದಿಗೂ ಜಗಳ ಆಡಿದವನಲ್ಲ. ಹರಟೆ ಹೊಡೆದವನಲ್ಲ..ತಾನಾಯಿತೂ ತನ್ನ ಕೆಲಸವಾಯಿತೆನ್ನುವಂತೆ ಇರುತ್ತಿದ್ದ. ಅವನೊಬ್ಬ ಹಾಗಂ ರೂ ಅವನನ್ನು ದೂರ ಇಟ್ಟಿರಲಿಲ್ಲ..ಇದು ತುಂಬಾ ಹಿಂದಿನ ದಿನಗಳಿಗೆ ಸಂಬಂಧಪಟ್ಟಿದ್ದು. ಬಹುಷಃ ಈಗಿನ ದಿನಗಳಾಗಿದ್ದರೆ ಜಾತಿ-ಗೋತ್ರ. ಜೀತದ ವಿಷಬೀಜ ಭಿತ್ತಿ ತಮ್ಮೆಡೆಗೆ ಸೆಳೆದುಕೊಂಡುಬಿಡುತ್ತಿದ್ದರೇನೋ? ಒಂದು ವೇಳೆ ವಿಷವೆರೆದಿದ್ದರೂ ಆ ಬಿಲ್ವವೃಕ್ಷ ಬೇವಿನಮರವಾಗುತ್ತಿರಲಿಲ್ಲವೆಂಬುದು ನನ್ನ ಅನಿಸಿಕೆ.ಅಷ್ಟೊಂದು ಉತ್ತಮ ಗುಣ ಅವನಲ್ಲಿ. ಹೇಳಿದ ಕೆಲಸ ಇಲ್ಲವೆನ್ನುತ್ತಿರಲಿಲ್ಲ.
ನಾಲ್ಕು ಜನರಿಗಾಗುವಷ್ಟು ಅನ್ನವನ್ನು ಅವನೊಬ್ಬನೇ ಉಣ್ಣುತ್ತಿದ್ದ.ಎಂಟು ಜನರಿಗಾಗುವಷ್ಡು ಕಾಫಿ ಅವನೊಬ್ಬನೇ ಕುಡಿಯುತ್ತಿದ್ದ. ಹಾಗಂತ ಅವನಿಗೆಂದೂ ಊಟ-ತಿಂಡಿಗೆ ಕಡಿಮೆ ಮಾಡುತ್ತಿರಲಿಲ್ಲ. ಮನೆಯಲ್ಲಿ ಮಾಡಿದ ಅಡುಗೆಯನ್ನು ರಂಗೋಲಿ ಹಾಕಿ ಪ್ರಸಾದಕ್ಕೆಂದು ದೇವರ ನೈವೇದ್ಯಕ್ಕಾಗಿ ತೆಗೆದಿಡುವಂತೆ ಅವನ ಪಾಲು ತೆಗೆದಿಡಲಾಗುತಿತ್ತು. ಊಟಕ್ಕೆ ತಟ್ಟೆ ಸಾಲುತ್ತಿರಲಿಲ್ಲ, ತೋಟದಲ್ಲಿರುವ ಅಡಕೆ ಮರದ ಹಾಳೆಯನ್ನು ಕೊಯ್ದು ಒಣಗಿಸಿ ಅದರಲ್ಲಿ ಅನ್ನ ಬಡಿಸುತ್ತಿದ್ದರು. ತಪ್ಪೇನಿಲ್ಲ. ಅವನ ಅಧಿಕಾರ ಅದು. ಬೆಳಿಗ್ಗೆಯಿಂದ ಸಂಜೆಯವರೆಗೂ ದಣಿವರಿಯದೆ ದುಡಿಯುತಿದ್ದ. ಬೆಳಿಗ್ಗೆ ಎದ್ದು ತಲೆಗೆ ಕಂಬಳಿ ಕೊಪ್ಪೆ ಹಾಕಿದನೆಂದರೆ ದಿನಚರಿ ಆರಂಭವಾಯಿತೆಂದೇ ಅರ್ಥ. ಕೊಟ್ಟಿಗೆ ಶುಚಿಗೊಳಿಸಿ,ಜಾನುವಾರುಗಳ ಮೈತೊಳೆದು, ಹುಲ್ಲು ಹಾಕಿ ಉಳಿದ ಕೆಲಸಕ್ಕೆ ಹೊರಟುಬಿಡುತಿದ್ದ.ದೊಡ್ಡ-ದೊಡ್ಡ ಹುಲ್ಲಿನ ಹೊರೆ ಹೊರುತಿದ್ದ. ಬೇಲಿಗಾಗಿ ಮುಳ್ಳಿನ ಗಿಡವನ್ನೇ ಕಿತ್ತು ತರುತಿದ್ದ. ಆಲೆಮನೆಯಿದ್ದಾಗ ಗಾಣಕ್ಕೆ ಕಬ್ಬು ಕೊಡುತ್ತಿದ್ದ..ಭತ್ತ ತೂರುತ್ತಿದ್ದ. ಹೀಗೆ ನೂರೆಂಟು ಕೆಲಸ, ವಾರಕ್ಕೊಮ್ಮೆ ಮಾಂಸ ತಿನ್ನುತ್ತಿದ್ದ. ಅದೂ ಮನೆಯಲಲ್ಲ..ತೋಟದಲ್ಲಿ. ಮೂರು ಕಲ್ಲಿಟ್ಟು ಒಲೆ ಮಾಡಿ ಒಣಗಿದ ಎಲೆ, ತೆಂಗಿನ ಸಿಪ್ಪೆ ಹಾಕಿ ಬೆಂಕಿ ಹೊತ್ತಿಸುತ್ತಿದ್ದ.ಬೆಂಕಿ ಕೂಡ ಪಾಪದ ಕೆಪ್ಪನನ್ನು ಗೋಳು ಹೊಯ್ಯುತ್ತಿತ್ತು.ಮೀನು ಸಾರಿನ ಗುಂಗಿನ ನಡುವೆ ಇದು ಕಷ್ಟವಾದಂತೇನು ಅವನಿಗೆ ತೋರಲಿಲ್ಲ. ಅದರ ಮೇಲೆ ಪಾತ್ರೆಯಲ್ಲಿ ನೀರು ಕಾಯಲಿಡುತಿದ್ದ.ತಾನೇ ಹಿಡಿದು ತಂದ ಮೀನನ್ನು ಕಲ್ಲಿನ ಮೇಲೆ ತಿಕ್ಕಿ ತೊಳೆದು ಕತ್ತರಿಸುತಿದ್ದ. ಅಮ್ಮನ ಹತ್ತಿರ ಕೇಳಿ ತಂದ ಮಸಾಲೆಯಿಂದ ಮೀನು ಸಾರು ಮಾಡುತ್ತಿದ್ದ. ತೋಟದಲ್ಲಿ ಹೊಗೆ ಕಾಣಿಸಿತೆಂದರೆ ಕೆಪ್ಪನ ಸಾರಿನ ತಯಾರಿ ನಡೆಯುತ್ತಿದೆಯೆಂದೇ ಅರ್ಥ...ನಾವೆಲ್ಲಾ ಕುತೂಹಲದಿಂದ ನೋಡಲು ಹೋಗುತ್ತಿದ್ದೆವು. ನಾವು ಅಲ್ಲಿಗೆ ಬರುವುದ ನೋಡಿ ಗದರುತ್ತಿದ್ದ.. ಅಲ್ಲಿಂದ ಓಡಿದಂತೆ ಮಾಡಿ ಯಾವ ುದೋ ಸಂದಿಯಿಂದ ಅವನ ನಳಪಾಕ ನೋಡಿ ನಗುತ್ತಿದ್ದೆವು..ಯಾವ ಶಬ್ಧವಾದರೂ ಅವನಿಗೇನೂ ಕೇಳುತ್ತಿರಲ್ಲ. ಅದೇ ನಮಗೆ ಪ್ಲಸ್ ಪಾಯಿಂಟ್!
ಸಾಗರದ ಜಾತ್ರೆಗೆ ಅಪ್ಪ ಅವನನ್ನು ಕರೆದುಕೊಂಡು ಹೋಗಿ ತೊಟ್ಟಿಲು ಹತ್ತಿಸಿ ತಿರುಗಾಡಿಸಿಕೊಂಡು ಬಂದಿದ್ದರು..ಬಾವಿಯಲ್ಲಿ ಹೊಡೆಯುವ ಮೋಟಾರ್ ಬೈಕ್ ತೋರಿಸಿ ನಂತರ ಸ್ಟುಡಿಯೋದಲ್ಲಿ ಬೈಕ್ ಮೇಲೆ ಕೂರಿಸಿ ಫೋಟೋ ತೆಗೆಸಿದ್ದರು.ಬತ್ತಾಸು , ಕಾರ ಮಂಡಕ್ಕಿ ಕೊಡಿಸಿಕೊಂಡು ಬರುತ್ತಿದ್ದರು. ನಮ್ಮಂತೆಯೇ ಅವನೂ ಅಲ್ಲವೇ ...ಆಸೆ ಯಾರ ಸ್ವತ್ತೂ ಅಲ್ಲ. ಅವನೆಷ್ಟು ಮುಗ್ಧನೆಂದರೆ ಹಾವು ಕಚ್ಚಿ ಮೂರು ದಿನವಾದ ಮೇಲೆ ಅಪ್ಪನಿಗೆ ತಿಳಿಸಿ ಅಪ್ಪನಿಂದ ಬೈಸಿಕೊಡಿದ್ದ..ಅದು ವಿಷವಿರದ ಹಾವಾದ್ದರಿಂದ ಬದುಕಿ ಉಳಿದಿದ್ದ..ಅವನ ಮುಗ್ಧತೆಗೆ ಬೈಯ್ಯುವುದೋ..ಸುಮ್ಮನಿರುವುದೋ ಅಪ್ಪನಿಗೆ ತಿಳಿಯದಾಯಿತು.
ದೀಪಾವಳಿಯೆಂದರೆ ಅವನಿಗೆ ಎಲ್ಲಿಲ್ಲದ ಖುಷಿ.. ಕೊಟ್ಟಿಗೆ ಶುಚಿಗೊಳಿಸಿ. ಜಾನುವಾರುಗಳ ಮೈ ತೊಳೆದು ಜೇಡಿ-ಕೆಮ್ಮಣ್ಣು, ಬಣ್ಣ ಬಳಿದು ,ಕುತ್ತಿಗೆಗೆ ಗಂಟೆ ಕಟ್ಟಿ, ಪಚ್ಚೆತೆನೆ ಅಡಿಕೆಯಿಂದ ಮಾಡಿದ ಹಾರ ಕಟ್ಟಿ ಸಿಂಗರಿಸುತಿದ್ದ.ನಂತರ ತಾನೂ ಎರಡು ಹಂಡೆ ಬಿಸಿನೀರ ಸ್ನಾನ ಮಾಡಿ ತಲೆಯನ್ನು ಕೊಬ್ಬರಿ ಎಣ್ಣೆ ಹಾಕಿ ಒಪ್ಪವಾಗಿ ಬಾಚಿ, ಅಪ್ಪ ತಂದಿದ್ದ ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತಿದ್ದ. ನಂತರ ದೇವರ ಗುಡಿಯತ್ತ ಜಾನುವಾರು ಹೊಡೆದುಕೊಂಡು ಹೊರಟನೆಂದರೆ ಸಿಂಗಾರಗೊಂಡ ಜಾನುವಾರುಗಳಿಗಿಂತ ಕೆಪ್ಪನೇ ಬಿಳಿಯಾಗಿ ಹೊಳೆಯುತ್ತಿದ್ದ. ಜಾನುವಾರುಗಳ ಹೊಡೆದುಕೊಂಡು ಭೂತಪ್ಪನ ಗುಡಿಯ ವರೆಗೂ ಹೋಗಿ ದರ್ಶನ ಮಾಡಿಬರುತ್ತಿದ್ದ . ಕೃಷಿ ಉಪಕರಣ ಮತ್ತು ಮನೆದೇವರ ಪೂಜೆ ಮುಗಿದ ಬಳಿಕ ಹೋಳಿಗೆ ಊಟಮಾಡಿ ಎಲೆ-ಅಡಿಕೆ ಹಾಕಿ ಕುಳಿತನೆಂದರೆ ಅಂದು ಅವನಿಗೆ ರಜದಿನ ..
ಹೀಗೆ ದಿನಾ ಕಳೆಯುತಿತ್ತು. ಊಟ ಮಾಡಲು ಮಕ್ಕಳು ಹಠ ಹಿಡಿದರೆ ಕೆಪ್ಪ ಗುಮ್ಮನಾಗುತಿದ್ದ. ಮಕ್ಕಳಿಗೆ ಕೆಪ್ಪ ಕಥೆಯ ಗುಮ್ಮನಂತೆ ಕಂಡರೆ ದೊಡ್ಡವರಿಗೆ ಬಲಗೈ ಇದ್ದಂತೆ.ಆ ಹೆಸರು ಹೇಳಿದರೆ ದೈವ ಸಹಾಯವಿದ್ದಂತೆ. ಅವನಿಗೆ ವಯಸ್ಸಾಗುತತ್ತಾ ಬಂತು. ಆರೋಗ್ಯ ಕೈ ಕೊಡತೊಡಗಿತು. ಡಾಕ್ಟರ್ ಕೊಡುವ ಮಾತ್ರೆ ಔಷಧಿ ಮುಟ್ಟದಂತಾಯಿತು. ಮಲಗಿಯೇ ಇರುತಿದ್ದ. ಯಾವಾಗಲೂ ಏನೂ ಬೇಡದ ಅವನು ಕೊನೆಯ ದಿನಗಳಲ್ಲಿ ಏನಾದರೂ ತಿನ್ನಬೇಕೆನಿಸಿದರೆ ನನ್ನ ಕರೆದು ಪುಟಾಣಿ ಶೇಂಗಾ ತಂದುಕೊಡುವಂತೆ ಬಾಯಿಬಿಟ್ಟು ಕೇಳುತಿದ್ದ.. ಸದಾ ಕೆಲಸ ಮಾಡಿಕೊಂಡು ಓಡಾಡಿಕೊಂಡಿರುತ್ತಿದ್ದ ವ್ಯಕ್ತಿ ಹೀಗೆ ಮಲಗಿದ್ದು ನಮಗಾರಿಗೂ ಸಹಿಸಲಾಗುತ್ತಿರಲಿಲ್ಲ. ಒಂದು ದಿನ ಮಗುವಿನ ಮನಸ್ಸಿನವ ಮಗುವಂತೆ ಮಲಗಿದ್ದ. ಮತ್ತೆಂದೂ ಮೇಲೇಳದಂತೆ!! ಗೋಡೆ ಬದಿ ಮುಖ ಮಾಡಿ ಬಿಕ್ಕಳಿಸಿದ್ದೆ. ತುಂಬು ಕುಟುಂಬದಲ್ಲಿ ನನ್ನ ಬಿಟ್ಟರೆ ಬೇರಾವ ಮಕ್ಕಳೂ ಇರಲಿಲ್ಲ. ಹೀಗಾಗಿ ನನಗೆ ಕೆಪ್ಪನೇ ಗೆಳೆಯರಂತಾಗಿದ್ದ. ಅವ ಎಲ್ಲಿ ಹೋದರೆ ಅಲ್ಲಿ ಅವನ ಹಿಂದೆ ಹೋಗುತ್ತಿದ್ದೆ..ಅವ ಮಾಡುವ ಕೆಲಸ ಗಮನಿಸುತ್ತಿದ್ದೆ. ಹಾಳೆ ಟೊಪ್ಪಿ ತಲೆಗಿಟ್ಟು ಅವನೊಂದಿಗೆ ಬಾಳೆಗೊನೆ ಹೊರುತ್ತಿದ್ದೆ..ಅಡಕೆ ಆಯುತ್ತಿದ್ದೆ. ಅವನ ಕೆಲಸವಾಗುವವರೆಗೂ ಎನಾದರೊಂದು ಆಟವಾಡುತ್ತಾ ಸಮಯ ಕಳೆಯುತ್ತಿದ್ದೆ...ನನ್ನ ಬಾಡಿಗಾರ್ಡ್ ಅವನಾಗಿದ್ದರೆ ನಾನವನ ಬಾಸ್ ಆಗಿದ್ದೆ.. ಎಲ್ಲಾ ನೆನಪಾಗಿ ಮೌನ ಆವರಿಸಿತು...ದೊಡ್ಡ ದೇಹದ ಆತ ಮಣ್ಣಲ್ಲಿ ಮಣ್ಣಾಗಿಹೋಗಿದ್ದ.. ಅವನಿಂದು ನಮ್ಮೊಡನೆಯಿಲ್ಲ ನಿಜ. ಅವನ ಹೆಜ್ಜೆಗುರುತುಗಳು.. ಬೆವರಹನಿಗಳು...ಕೈ ಬೆರಳಚ್ಚುಗಳು ಕೊಟ್ಟಿಗೆಯ ಗೋಡೆಯ ಮೇಲೆ ಹಾಗೆಯೇ ಇವೆ... ಮನೆಯವರ ಮನದಿಂದ ಎಂದೂ ಅವನನ್ನು ಮರೆಯಾಗುವುದಿಲ್ಲ. ಈಗಲೂ ಎಲ್ಲೋ ಹುಟ್ಟಿರುತ್ತಾನೆ ರಾಜಕುಮಾರನಾಗಿ ... ಹಿಂದಿನ ಜನ್ಮದ ಸೇವೆಗಾಗಿ... ನಿಷ್ಥೆಗಾಗಿ...ಇಂದಿಗೂ ನಮ್ಮ ಮನೆಯಲ್ಲಿ ಅವನ ಗುಣಗಾನ ನೆಡೆಯುತ್ತದೆ ಪೂಜನೀಯಭಾವದ ಹಕ್ಕುದಾರನವನು .ಈಗಲೂ ಕೊಟ್ಟಿಗೆಯ ಗೋಡೆಗಳನ್ನು ದಿಟ್ಟಿಸಿ ನೋಡುತ್ತೇನೆ...ಅವನ ನಗುಮುಖ ಹಾದುಹೋಗುತ್ತದೆ.. ಧ್ವನಿಯೊಮ್ಮೆ ಗಾಳಿಯಲ್ಲಿ ಕೇಳಿ ಬರುತ್ತದೆ.. ಈಗಲೂ ಆಕಾಶದತ್ತ ಮುಖಮಾಡಿ ಧನ್ಯತೆಯ ನೋಟ ಬೀರುತ್ತೇನೆ .
ಸೌಮ್ಯ ಜಂಬೆ. ಮೈಸೂರು