ಉಡುಗೊರೆ

ProfileImg
09 Oct '23
8 min read


image

ಕಳೆದ ನಾಲ್ಕು ದಿನಗಳಿಂದ ಮನೆಯಲ್ಲಿ ಏನೋ ಪಿಸುಪಿಸು ಗುಸುಗುಸು ನಡೆಯುತ್ತಿತ್ತು . ಅಮ್ಮನಿಗೋ, ಅತ್ತಿಗೆಗೋ ಕಾಲ್ ಮಾಡಿ ಭಾರೀ ಉತ್ಸಾಹದಿಂದ ಮಾತುಕತೆಯಾಡುತ್ತಿದ್ದವಳು ನಾನು ಅಲ್ಲಿ ಹೋದೊಡನೆ   "ಆಮೇಲೆ ಮಾಡ್ತೀನಿ", ಎನ್ನುತ್ತಾ ಫೋನ್ ಇಟ್ಟುಬಿಡುತ್ತಿದ್ದಳು. ಒಂದು ದಿನ ಅಣ್ಣನ ಜೊತೆಯೂ ಮಾತುಕತೆ ನಡೆದಿತ್ತು ಎಂದು ಗುಮಾನಿ ನನಗೆ.. ಆಶ್ರಯಿ ಬಂದರಂತೂ ಅಡಿಗೆಮನೆ ಹೊಕ್ಕವಳು ಅರ್ಧಗಂಟೆಯಾದರೂ ಹೊರಸುಳಿಯುತ್ತಿರಲಿಲ್ಲ.  ನಾನು ಮನೆಗೆ ಬಂದ ನಂತರ ಗಳಿಗೆಗೊಮ್ಮೆ" ಓ ರೀ " ಎನ್ನುತ್ತ , ಏನಾದರೂ ಹೇಳುತ್ತಾ ನನ್ನ ಹಿಂದೆ ತಿರುಗದಿದ್ದರೆ ಅವಳಿಗೆ ಸಮಾಧಾನವೇ ಇರುತ್ತಿರಲಿಲ್ಲ. ಒಂದೊಂದು ಸಣ್ಣ ಸುದ್ದಿಗೂ ಅವಳ  ಪೀಠಿಕೆ, ಮುನ್ನುಡಿ, ಹಿನ್ನುಡಿ, ಅಭಿಪ್ರಾಯ, ಪ್ರತಿಕ್ರಿಯೆ ಇಲ್ಲದಿದ್ದರೆ ಅದು ಬಹಳ ನೀರಸ ಸುದ್ದಿ ಎಂದೇ ಅರ್ಥ.  ರಸ್ತೆಯ ಕೊನೆಯಲ್ಲಿದ್ದ  ಕಾಮಾಕ್ಷಮ್ಮನ ಮನೆಯಲ್ಲಿ ಹಸು ಕರು ಹಾಕಿದ್ದರ ಸುದ್ದಿಗೂ ಅಷ್ಟೇ ಪ್ರಾಮುಖ್ಯತೆ... ಎದುರು ಮನೆ ಕಲ್ಪನಾಳಿಗೆ ವಿದೇಶೀ ವ್ಯಾಸಂಗಕ್ಕೆ ಸೀಟು ಸಿಕ್ಕಿದ ಸುದ್ದಿಗೂ ಅಷ್ಟೇ ಪ್ರಾಮುಖ್ಯತೆ ಚಿನ್ಮಯಿಯ ಬಾಯಲ್ಲಿ.  ಎಲ್ಲರ ಸುದ್ದಿಯೂ ಚಿನ್ಮಯಿಯನ್ನು ತಲುಪುತ್ತಿತ್ತು. ಅವಳು ಅದನ್ನು ನಮ್ಮ ಮನೆಯ ಗೋಡೆಗಳ ಆಚೆಗೆ ಹೋಗಲು ಬಿಡುತ್ತಿರಲಿಲ್ಲ.  ನನ್ನ ಕಿವಿಗೆ ಹಾಕಿಬಿಟ್ಟರೆ ಮುಗಿಯಿತು. ಅವಳಿಂದ ಇನ್ಯಾರಿಗೂ ಸುದ್ದಿ ಹೋಗುವುದಿಲ್ಲವೆಂಬ ನಂಬಿಕೆ ಗಟ್ಟಿಯಾಗಿತ್ತು ಎಲ್ಲರಿಗೂ. ಹಾಗಾಗಿ ಎಲ್ಲರಿಗೂ ಕಿವಿ ಅವಳು.  ಅವಳ ಕಿವಿ ನಾನು.  ವಿಪರ್ಯಾಸ ನೋಡಿ.  ಅವಳು ನನಗೆ ಹೇಳಿ ಆದ ಕೂಡಲೇ ಆ ವಿಷ್ಯ ಅವಳ ತಲೆಯಿಂದ  ಹೊರಗೆ.  ಆದ್ರೆ ನನಗೆ ಬೇಕಿರಲಿ ಬೇಡವಾಗಿರಲಿ , ಅವಳು ಹೇಳಿದ್ದನ್ನು ನಾನು ತಲೆ ಎನ್ನುವ ಉಗ್ರಾಣದಲ್ಲಿ ಪೇರಿಸಿಡಬೇಕಿತ್ತು.  ಅದೂ ವ್ಯಕಿಗೆ, ಸುದ್ದಿಗೆ ಅನುಗುಣವಾಗಿ ವಿಂಗಡಿಸಿ ಇಟ್ಟುಕೊಳ್ಳಬೇಕಿತ್ತು.  ಯಾವಾಗ ಅದನ್ನು ನನ್ನಿಂದ ಹೊರಗೆ ತರಿಸ್ತಾಳೋ ಅನ್ನೋದು ಗೊತ್ತಿಲ್ಲದೆ ಇರೋದ್ರಿಂದ.  

               " ನನಗ್ಯಾಕೆ ಇದೆಲ್ಲ ಹೇಳ್ತೀ??" ಎಂದರೆ  " ನನಗೋಸ್ಕರ ಇಷ್ಟೂ ಮಾಡಕ್ಕಾಗಲ್ವಾ " ಅಂತ ಕಣ್ಣಗಲ ಮಾಡಿ ನನ್ನ ನೋಡುವಾಗ ನಾನು ಯಥಾಪ್ರಕಾರ ಗೋಣುಬಸವ.

      " ನಿಮಗೆ ಹೇಳಿ ಆದ ಮೇಲೆ ನನ್ನ ತಲೆ ಖಾಲಿ ಮಾಡಿಬಿಡ್ತೀನಿ. ನಿಮಗೆ ಹೇಗೂ ಆಫೀಸ್ ಕೆಲಸ ವಿಂಗಡಿಸಿ ಇಟ್ಟುಕೊಳ್ಳೋ ಪರಿಣಿತಿ ಇದೆಯಲ್ಲ. ಅದನ್ಯಾಕೆ ದಂಡ ಮಾಡೋದು " ಅಂತ ನನ್ನ ತಲೆಯನ್ನ ಗುರಿ ಮಾಡಿ ಇಟ್ಟುಕೊಂಡು ಗುರ್ರ್ ಅಂತಾಳೆ.  

       ನಾನೇನಾದರೂ  ರೇಗಿದರೆ, ಗದರಿದ್ರೆ, ಮುನಿಸಿಕೊಂಡರೆ ಆಗ ಮೆದುಳಿನ ವಿಜ್ಞಾನದ ಬಗ್ಗೆ ಪಾಠ ಶುರು ಆಗತ್ತೆ. " ಇಲ್ಲಿ  ನೋಡಿ. ಗಮನ ಕೊಟ್ಟು ಕೇಳಿಸಿಕೊಳ್ಳಿ.   ನಮ್ಮ ದೇಹದ ಜೀವಕೋಶಗಳು ಸತ್ತರೆ ಹೊಸ ಜೀವಕೋಶಗಳು ಹುಟ್ಟಿ ಅದರ ಕೆಲಸ ನಿಭಾಯಿಸತ್ವೆ.  ಆದರೆ ಮೆದುಳಿನ ಜೀವಕೋಶಗಳು ಹಾಗಲ್ಲ.  ಒಮ್ಮೆ ಸತ್ತರೆ ಮತ್ತೆ ಹೊಸದು ಹುಟ್ಟಲ್ಲ.  ಇರೋ ಕೋಶಗಳನ್ನು ಬಲಪಡಿಸಿಕೊಳ್ಳಬೇಕು.. ಹೊಸ ನರತಂತುಗಳು ಜೋಡಣೆ ಆಗುವಂತೆ ಮಾಡಬೇಕು. ಹಾಗೆ ಮಾಡಬೇಕಾದ್ರೆ ಹೊಸ ಹೊಸ ವಿಷಯಗಳನ್ನು, ಮೆದುಳಿಗೆ ಸಂಬಂಧ ಪಟ್ಟ ಹೊಸ ಆಟಗಳನ್ನು ಆಡಬೇಕು. ಹೊಸ ಭಾಷೆ ಕಲಿಯಬೇಕು. ಪದಬಂಧ ಬಿಡಿಸಬೇಕು. sudoku  solve ಮಾಡಬೇಕು. ಎಡಗೈ, ಬಲಗೈಗಳನ್ನು ಸಮನಾಗಿ ಉಪಯೋಗಿಸಬೇಕು . ಸಾಧಾರಣವಾಗಿ ಮಾಡುವ ಕೆಲಸಗಳನ್ನು , ಉದಾಹರಣೆಗೆ ....ಬರೆಯುವುದು, ಕಸ ಗುಡಿಸುವುದು, ತಲೆ ಬಾಚುವುದು ಇತ್ಯಾದಿ.... ಇದುವರೆಗೂ ಉಪಯೋಗಿಸುತ್ತಿದ್ದ ಉಲ್ಟಾ ಕೈಯಿಂದ ಮಾಡಲು ಅಭ್ಯಾಸ ಮಾಡಬೇಕು. ಸಂಖ್ಯೆಗಳನ್ನು ಒಂದೇ ಉಸಿರಲ್ಲಿ ಹೇಳುವುದು, ಏರಿಕೆ ಕ್ರಮ, ಇಳಿಕೆ ಕ್ರಮದಲ್ಲಿ ಒಂದರ ನಂತರ ಮತ್ತೊಂದು ಹೇಳುವುದು, ಮಧ್ಯೆ ಮಧ್ಯೆ ಅಂಕೆಗಳನ್ನು ಬಿಟ್ಟು ವೇಗವಾಗಿ ಹೇಳುವುದು, ಕಣ್ಣುಗಳನ್ನು ಮುಚ್ಚಿ ಪರಿಚಿತ ಸ್ಥಳದಲ್ಲಿ ಓಡಾಡುವುದು, ಹಿಂದಕ್ಕೆ ಹಿಂದಕ್ಕೆ ನಡೆಯುವುದು, ಕಣ್ಣು ಮುಚ್ಚಿ ಕುಳಿತು --ವಾಸನೆಗಳ ಗ್ರಹಿಸುವುದು, ಶಬ್ದಗಳನ್ನು ಆಲಿಸುವುದು, ಸ್ಪರ್ಶದಿಂದ ವಸ್ತುವನ್ನು ಗುರುತಿಸುವುದು, ರುಚಿಯಿಂದ  ಅಡಿಗೆ ಪದಾರ್ಥವನ್ನು ಕಂಡುಹಿಡಿಯುವುದು.... ; ನೆನಪಿನ ಶಕ್ತಿಯ ಪರೀಕ್ಷೆ, ಬರವಣಿಗೆ, ಕೈ ಬೆರಳುಗಳನ್ನು ಉಪಯೋಗಿಸುವಂತಹ  ಯಾವುದೇ ಸಂಗೀತ ಉಪಕರಣಗಳ ಕಲಿಕೆ, ಇತ್ಯಾದಿ, ಇತ್ಯಾದಿ, ಇತ್ಯಾದಿ....ಇವುಗಳನ್ನೆಲ್ಲ ದಿನನಿತ್ಯ ಮಾಡುತ್ತಿದ್ದರೆ ಮರೆವಿನ ಕಾಯಿಲೆ ಬರುವುದಿಲ್ಲ ವಯಸ್ಸಿನನುಗುಣವಾಗಿ ಬರುವ ಮೆದುಳಿನ ಕಾಯಿಲೆಗಳನ್ನು ದೂರ ಇಡಬಹುದು. ..ಅಷ್ಟೇ ಅಲ್ಲದೆ ಚುರುಕಾಗಿ ಇರುತ್ತೇವೆ ಗೊತ್ತಾ??"  

   ಇಷ್ಟು ಕೇಳಿಸಿಕೊಳ್ಳುವ ಹೊತ್ತಿಗೇ ನನ್ನ ತಲೆ ಗಿರ್ ಎಂದುಬಿಡುತ್ತದೆ.  ನಾನು ಥಂಡಾ ಆಗಿದ್ದು ಕಂಡವಳು ಮೆಲ್ಲ ಮುಂದುವರೆಸುತ್ತಾಳೆ. " ಅದೂ ಅಲ್ದೆ, ನೀವು  ಒಬ್ಬ  perfectionist... ಕೊಂಚವೂ ಆಚೆ ಈಚೆ ಆಗುವಂತಿಲ್ಲ.  You are a man of habits.  ಶಿಸ್ತಿನ ಸಿಪಾಯಿ.  ಸಂಶೋಧನೆಗಳ ಪ್ರಕಾರ ಈ ರೀತಿ rigid ಆಗಿ,  ಒಂದೇ ರೀತಿಯ ದಿನಚರಿ ಇರುವವರಿಗೆ  alzheimer's ಕಾಯಿಲೆ ಬರೋ ಸಾಧ್ಯತೆ ಹೆಚ್ಚು ಅಂತೆ.  ಅದಕ್ಕಾಗಿಯೇ ನಿಮ್ಮ routine ಕೆಲಸಗಳ ಮಧ್ಯೆ ಬಂದು ನಾನು ಏನಾದ್ರೂ ತರಲೆ ಮಾಡೋದು , ಬೇರೆ ಬೇರೆ ವಿಷಯ ನಿಮಗೆ ಕೊಟ್ಟು ,  ನಿಮ್ಮ ಮೆಮೊರಿ ನ ಟೆಸ್ಟ್ ಮಾಡೋದು  ಗೊತ್ತಾಯ್ತಾ?? "   ಕೊರಳು ಕೊಂಕಿಸಿ ಕಣ್ಣು ಹೊಡೆದು ಹುಬ್ಬು ಮೇಲೆತ್ತಿ ಕೇಳಿದರೆ ಈ ಬಡಪಾಯಿ ಏನು ಮಾಡಲು ಸಾಧ್ಯ? ನೀವೇ ಹೇಳಿ.    "ಹುಂ . ಹೇಳಮ್ಮ " ಅಂತ ಕೇಳಿಸ್ಕೊಳೋದು ತಾನೇ?  ನೀವಾದ್ರೂ ಅಷ್ಟೇ ಮಾಡ್ತಿದ್ರಿ ನಿಮ್ಮ ಮಡದಿಯರ ಬಳಿ ಅಂತ ಎಲ್ಲರಿಗೂ ಗೊತ್ತು ಬಿಡಿ.


         ನಾನೇನಾದರೂ ಅವಳನ್ನು ಮತ್ತೆ ಕೆದಕಿ "ನನ್ನ ನೆನಪಿನ ಶಕ್ತಿಗೆ, ಮೆದುಳಿಗೆ ವ್ಯಾಯಾಮ ಮಾಡಿಸ್ತಾ ಇದ್ದೀ. ಆದ್ರೆ ಪಾಪ, ನಿನ್ನ ತಲೆ ಎಲ್ಲ ಕಾಲಿ ಕಾಲಿ ಆಯ್ತಲ್ಲ ಈಗ " ಅಂತ  ಅಂದುಬಿಟ್ಟೆ ಅಂತ ಇಟ್ಕೊಳ್ಳಿ. ಆಗ ನೋಡಬೇಕು ಅವಳ ಸ್ಟೈಲ್ ನೀವು. ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ, ಜಡೆಯನ್ನು ರೊಯ್ಯನೆ ಹಿಂದಕ್ಕೆ ಎಸೆದು, ನಾಗರಹಾವು ಸಿನಿಮಾ ನೋಡಿದೀರಾ ವಿಷ್ಣುವರ್ಧನ್ ದು.? ಅದರಲ್ಲಿ ಜಯಂತಿಯವರು ಒನಕೆ ಓಬವ್ವನ ಪಾತ್ರಧಾರಿಯಾಗಿರೋದನ್ನು ನೆನಪಿಸಿಕೊಳ್ಳಿ. ಆ ಭಂಗಿಯಲ್ಲಿ ನಿಂತು ತನಗೆ ಬೇಕಾದವರೆಲ್ಲರ ಮೊಬೈಲ್ ಫೋನ್ ನಂಬರ್ ಗಳನ್ನು, ಎಲ್ಲರ ಹುಟ್ಟುಹಬ್ಬದ ದಿನಾಂಕಗಳನ್ನು, ನನಗೆ ಒಂದು ವರ್ಷದ ಹಿಂದೆ ಹೇಳಿದ್ದ ವಿಷಯಗಳನ್ನು ಸಮಯ , ದಿನಾಂಕ ಮತ್ತು ದಿನದ ಸಮೇತ ಹೇಳಲು ಶುರು ಮಾಡ್ತಾಳೆ...................  ' ಸಾಕು....ಸಾಕಮ್ಮ, ....ಸಾಕು ಕಣೇ ನಿಲ್ಲಿಸು " ಅಂತ ಹೇಳಿದರೂ ಎಕ್ಸ್ ಪ್ರೆಸ್ ರೈಲಿನ ತರಹ ನಿಲ್ಲದೆ ಓಡೀ ಓಡೀ ಕಡೆಗೆ ಉಸಿರು ತೆಗೆದುಕೊಳ್ಳಲು ನಿಂತಾಗ ನನ್ನ ಕೈಯಿಂದ ಅವಳ ಬಾಯನ್ನು ಮುಚ್ಚಿ ಹಿಡಿದುಕೊಂಡು ಬಿಡುತ್ತೇನೆ. ಕೊಸರಾಡಿ ಬಿಡಿಸಿಕೊಳ್ಳುವಷ್ಟರಲ್ಲಿ ಅವಳ ಗಮನವನ್ನು ಬೇರೆ ಇನ್ಯಾವುದೋ ವಿಷಯಕ್ಕೆ ಹರಿಸಿಬಿಡುತ್ತೇನೆ.  ಸದ್ಯ , ಮರೆತಳಲ್ಲಾ ಅಂತ  ನೆಮ್ಮದಿಯ ಉಸಿರು ಬಿಡುವಷ್ಟರಲ್ಲಿ ನನ್ನ ಮುಂದೆ ಬಂದು ನಿಂತು ಹುಬ್ಬೇರಿಸುತ್ತಾಳೆ. " ನಿನ್ನ ನೆನಪಿನ ಶಕ್ತಿ ಅಗಾಧವೂ, ಅಮೋಘವೂ, ಅಖಂಡವೂ, ಅಪರಿಮಿತವೂ , ಸಾಗರದಷ್ಟು ವಿಶಾಲವೂ, ಹಿಮಾಲಯದಷ್ಟು ಎತ್ತರವೂ ಆಗಿದೆ ಮಹರಾಯ್ತೀ.." ಮಂಡಿಯೂರಿ ಅವಳ ಮುಂದೆ ಕುಳಿತುಬಿಡುತ್ತೇನೆ.   ನನ್ನ ಕ್ರಾಪನ್ನು ಕೆದರಿ, ಕೂದಲು ಹಿಡಿದು ಜಗ್ಗಿ  , " ಹಾಗೆ ಬನ್ನಿ ದಾರಿಗೆ" ಎಂದವಳು ಆ ಖುಷಿಯಲ್ಲಿ ಪಕ್ಕೆ ಹಿಡಿದುಕೊಂಡು ಹತ್ತು ನಿಮಿಷ ಕಿಲಕಿಲನೆ ನಗುತ್ತಾಳೆ. ಆ ನಗೆ, ಆ ಸಂಭ್ರಮ ನೋಡುವುದೇ ನನ್ನ ಕಣ್ಣಿಗೆ ಹಬ್ಬ. ಅದೆಷ್ಟು ನಿಷ್ಕಲ್ಮಷ ನಗೆ.... ಹೃದಯದಲ್ಲಿ ಹುಟ್ಟಿ ಗಂಟಲಿನಿಂದ ಹೊರಹರಿದು ಸೇಬುಕೆನ್ನೆಯ ತುಂಬಾ ಹರಡಿ ಮಗುವಿನಂತ ಮುಗ್ಧ ಕಣ್ಣುಗಳನ್ನು ಅರಳಿಸುವ ನಗೆ...ಯಾವ ದೇವನ ಸೃಷ್ಟಿಯೋ ಇದು.......!!!!


         ಹೌದು...ಇಷ್ಟೆಲ್ಲ ನನ್ನ ಬಳಿ ಹೇಳಿಕೊಳ್ಳುವ ಹುಡುಗಿ ಈ ನಾಲ್ಕು ದಿನಗಳಿಂದ ಏನೋ ಗುಟ್ಟು ಮಾಡ್ತಾ ಇದ್ದಾಳೆ.   ಏನಿರಬಹುದು?  ನನ್ನಿಂದ ಮುಚ್ಚಿಟ್ಟು ಉಳಿದವರೊಡನೆ ಹೇಳ್ತಾ ಇದಾಳೆ ಅಂತ ಆದ್ರೆ ಅದು ನನಗೆ ಸಂಬಂಧಿಸಿದ್ದೇ ಇರಬೇಕು.  ಏನಾದ್ರೂ ನನ್ನ ಮೇಲೆ ಬಾಂಬ್ ಸಿಡಿಸುವ (ಪಟಾಕಿ ) ಯೋಜನೆ ಹಾಕ್ತಿದಾಳಾ ಹೇಗೆ?  


         ಶುಕ್ರವಾರ ಬೆಳಗ್ಗೆ ಎದ್ದೊಡನೆ ತರಾತುರಿಯಲ್ಲಿ ಅಡಿಗೆ, ತಿಂಡಿಗಳ ತಯಾರಿ ನಡೆಯುತ್ತಿತ್ತು. ನಾನು ಹೊರಡುವ ಹೊತ್ತಿಗೆ ಚಿನ್ಮಯಿ ತಯಾರಾಗಿ ಆಶ್ರಯಿಗೆ ಕಾಯುತ್ತಿದ್ದಳು ಶಾಪಿಂಗ್  ಗೆ ಹೊರಡೋಕೆ.  ಹಬ್ಬಕ್ಕೆ ಸೀರೆ ತೊಗೋ ಅಂತ ಅವಳ ಕೈಲಿ ಒಂದಷ್ಟು ನೋಟು ತುರುಕಿದೆ.  ಖುಷಿಯಿಂದ ಧನ್ಯವಾದ ಹೇಳಿ  ಪರ್ಸಿನಲ್ಲಿ ಇಟ್ಟುಕೊಂಡಿತು ಹುಡುಗಿ. .


         ಸಂಜೆ ಮನೆಗೆ ಬಂದಾಗ ಚಿನ್ಮಯಿ ಆಗಲೇ ಬಂದು ಕೆಲಸಗಳನ್ನೆಲ್ಲ ಮುಗಿಸಿ ಕುಳಿತುಕೊಂಡಂತೆ ಅನ್ನಿಸಿತು. ಏನೋ ಕೆಲಸ ಸಾಧಿಸಿದ ತೃಪ್ತಿ ಮುಖದಲ್ಲಿದ್ದರೂ ಏನೋ ರಹಸ್ಯದ ಉತ್ಸುಕತೆಯೂ ಮುಖದಲ್ಲಿ ತೋರಬಂದಿತ್ತು.  ನನಗೆಂದು ಸುಂದರವಾದ ಕಡುಗೆಂಪು ಬಣ್ಣದ T shirt ತಂದಿದ್ದಳು. ಅವಳಿಗೊಂದು ಬಿಳಿಯ ಪುಟ್ಟ ಪುಟ್ಟ ಹೂಗಳ ಚಿತ್ರಗಳಿದ್ದ ಕಂದು ಬಣ್ಣದ ಅಂಚಿಲ್ಲದ cotton  ಸೀರೆ. 


        " ನಾಳೆ ಚಿಂತನ್ ಅಣ್ಣ ಬರ್ತಾನಂತೆ....ಏನೋ ಕೆಲಸ ಇದ್ಯಂತೆ..."  ಖುಷಿ ಖುಷಿಯಾಗಿ ಬಿತ್ತರಿಸಿದಳು. ನನ್ನ ಅನುಮಾನ ಸತ್ಯವಾಗುವ ಸೂಚನೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಏನೇ ಇದ್ದರೂ ನಾಳೆ ಗೊತ್ತೇ ಆಗತ್ತೆ . ಊರಿಗೆ ಬಂದವರು ನೀರಿಗೆ ಬಾರದಿರುತ್ತಾರೆಯೇ?


       ಶನಿವಾರ ಸಂಜೆ ಆಫೀಸಿನಿಂದ ಬರುತ್ತಿದ್ದ ಹಾಗೆಯೇ ಎದುರಾದ ಚಿಂತನ್. ತಂಗಿಯನ್ನೇ ಹೋಲುವ ಮುಖ. ಆಕರ್ಷಣೀಯ ನಗು, ಉತ್ತಮ ವ್ಯಕ್ತಿತ್ವ ಹೊಂದಿದ ಚಿಂತನ್ ನನ್ನ  ಭಾವನಷ್ಟೇ ಅಲ್ಲದೆ ಆತ್ಮೀಯ ಗೆಳೆಯನೂ  ಆಗಿಹೋಗಿದ್ದ. ಅಪ್ಪಿಕೊಂಡು ಬೆನ್ನು ಚಪ್ಪರಿಸಿದೆ. " ಚಿನ್ನೂ, ನಿನ್ನ ಶ್ರೀ ಬಂದರು ." ಅಣ್ಣನ ಸ್ವರ ಕಿವಿ ತಲುಪುತ್ತಿದ್ದಂತೆ ಬಿರುಗಾಳಿಯಂತೆ ಓಡಿ ಬಂದಳು.

     " ಓ ರೀ, ಅಣ್ಣಂಗೆ ವಿಶ್ ಮಾಡಿದ್ರ? "

     "  ಓ....ಮಾಡಿಯಾಯ್ತು ದೀಪಾವಳಿಯ ಶುಭಾಶಯಗಳನ್ನು.....ನೋಡು...ಆಫೀಸಿನಲ್ಲಿ ಕೊಟ್ಟಿದ್ದ  ಸ್ವೀಟ್ ಪ್ಯಾಕೆಟ್ ಸಹ ಕೊಟ್ಟಿದೀನಿ ಅವನ ಕೈಗೆ ,"  ನಗೆಯಾಡುತ್ತ ನುಡಿದೆ.


      " ಅಯ್ಯೋ...ನೀವು ಕೊಡೋದಲ್ಲ ಸ್ವೀಟ್....ಅವನು ಕೊಡಬೇಕು ಸ್ವೀಟ್...ಅದೂ ಡಬಲ್ ಸ್ವೀಟ್....ಒಂದು promotion ಆಗಿದ್ದಕ್ಕೆ....ಇನ್ನೊಂದು ಅಪ್ಪನಾಗಿ ಪ್ರೊಮೋಟ್ ಆಗ್ತಿರೋದಕ್ಕೆ...ಅಣ್ಣ , ಕೊಡೋ ಸ್ವೀಟ್ ಬೇಗ. "


        ಸಂಭ್ರಮದ ಅಲೆಗಳ ಕಲರವ ಎದ್ದಿತು. ಸ್ವೀಟ್ ತಿಂದು ವಿವರಗಳನ್ನೆಲ್ಲ ಸಂಗ್ರಹಿಸಿ ಆಯ್ತು. ಇದೆಯೋ ಸಮಾಚಾರ? ಗುಸು ಗುಸು ಪಿಸಿಪಿಸಿ ಎಲ್ಲ?   ಬಟ್ಟೆ ಬದಲಿಸಲು ಕೋಣೆಗೆ ಹೋದೆ. ಏನೋ ಬದಲಾವಣೆಯಾಗಿದೆ ಅನ್ನಿಸ್ತು. ರೂಮಿನ ಮೇಜಿನ ಮೇಲೆ, ಹಳೆಯ ಮರದ ಬೀರುವಿನ ಮೇಲೆ ರಾಶಿಯಾಗಿದ್ದ ಚೆಲ್ಲಾಪಿಲ್ಲಿಯಾಗಿದ್ದ ಪುಸ್ತಕಗಳು ಕಾಣಿಸುತ್ತಿಲ್ಲ. ಅಯ್ಯೋ....ಆ ಬೀರು ವೇ ಮಾಯವಾಗಿದೆ.  ಮಂಚ ದೊಡ್ಡದಾಗಿ ಕಾಣಿಸ್ತಿದೆ. ಅರೇ... ಕರಿಮರದ ಮಂಚ. ನಮ್ಮ ಹಳೆಯ ಮಂಚ ಯಾವುದೋ ಸಾಧಾರಣ ಮರದ್ದು. ನನ್ನ ಅಪ್ಪನ ಕಾಲದ್ದು ಅದು. ಈಗ ವಿಶಾಲವಾದ ಮಂಚ , ಅದಕ್ಕೆ ತಕ್ಕುದಾದ ಹಾಸಿಗೆ, ಹೊದಿಕೆ, ದಿಂಬುಗಳು.... ಮಂಚದ ತಲೆಯ ಭಾಗದಲ್ಲಿ ಆಚೆ ಈಚೆ ಅದೇ ಕರಿ ಮರದ ಸ್ಟ್ಯಾಂಡ್ಗಳೆರಡು. ಒಂದರ ಮೇಲೆ ನನ್ನ, ಚಿನ್ನುವಿನ ಮದುವೆಯ ದಿನ ತೆಗೆದ ಒಂದು ಚೆಂದದ ಫೋಟೋ. ಕೋಣೆಯ ಸುತ್ತ ಕಣ್ಣು ಹಾಯಿಸಿದೆ. ಒಂದು ಗೋಡೆಯಿಂದ  ಇನ್ನೊಂದು ಗೋಡೆಯ ತನಕ  ಮೈ ಚಾಚಿದ್ದ ಅದೇ ಕರಿ ಮರದ ಬುಕ್ ಶೆಲ್ಫ್
cum ಕಂಪ್ಯೂಟರ್ ಟೇಬಲ್.  ಓಡಿಹೋಗಿ ಬಾಗಿಲುಗಳನ್ನೆಳೆದು ತೆಗೆದು ನೋಡಿದೆ. ನನ್ನ ಅಷ್ಟೂ ಪುಸ್ತಕಗಳು ಒಂದು ಕಡೆ, ಚಿನ್ಮಯಿಯ ಸಂಗ್ರಹಗಳು ಇನ್ನೊಂದೆಡೆ ಜೋಡಿಸಲ್ಪಟ್ಟಿದ್ದವು. ಹಿಂದಕ್ಕೆ ಹೆಜ್ಜೆ ಹಾಕಿ ಪೂರ್ತಿ ಕೋಣೆಯನ್ನ ಕಣ್ಣರಳಿಸಿ ನೋಡಿದೆ. ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ, ಹೊರಗೇನೂ ಕಾಣಿಸದಂತೆ ಜೋಡಿಸಿದ್ದ ರೀತಿಯಿಂದ ಕೋಣೆಯೇ ವಿಶಾಲವಾಗಿ ಕಾಣುತ್ತಿತ್ತು.


       ತಿಂಗಳುಗಳ ಹಿಂದೆ ಯಾವುದೋ ಪತ್ರಿಕೆಯಲ್ಲಿ ಬಂದಿದ್ದ ಚಿತ್ರವೊಂದನ್ನು ತೋರಿಸಿದ್ದೆ ಚಿನ್ಮಯಿಗೆ. ಈ ರೀತಿಯ ಪುಸ್ತಕದ ಬೀರು ಇದ್ದರೆ ಚೆಂದ ಅಂತ ಹೇಳಿದ್ದೆ. ಅದು ಇವತ್ತು ಸಾಕಾರಗೊಳ್ಳುತ್ತೇ ಅನ್ನೋ ಕಲ್ಪನೆ ಕೂಡ ಇರದ ನಾನು ತಲೆ ಎತ್ತಿದಾಗ ಬಾಗಿಲಲ್ಲೇ ನಿಂತು ನನ್ನನ್ನೇ ದಿಟ್ಟಿಸುತ್ತಿದ್ದ  ಅಣ್ಣ ತಂಗಿ ಕಣ್ಣಿಗೆ ಬಿದ್ದರು. ಸುಸ್ತಾಗಿ ಹೋಗಿದ್ದ ಮುಖ ಆದರೆ ಫಳ ಫಳ ಹೊಳೆಯುವ ಕಣ್ಣುಗಳ ಒಡತಿ ಮುಂದೆ ಬಂದು ನನ್ನನ್ನು ಹಿಡಿದು ಮಂಚದ ಮೇಲೇ ಕೂಡಿಸಿ ನನ್ನ ಕಾಲ ಬುಡದಲ್ಲಿ ಕುಳಿತಳು. " ಇಷ್ಟ ಆಯ್ತಾ ಬಂಗಾರಾ, ನನ್ನ ಉಡುಗೊರೆ? "  

         
          ಕಟ್ಟಿ ಹೋದ ಗಂಟಲಿನಿಂದ " ಥಾಂಕ್ ಯು ಸೋ ಮಚ್.." ಪಿಸುಗುಟ್ಟಿದೆ.  " ದುಡ್ಡು ಎಲ್ಲಿತ್ತೆ  ಇಷ್ಟೊಂದು ನಿನ್ನ ಹತ್ರ?"


        ಉತ್ತರಿಸಿದ್ದು ಚಿಂತನ್...." ಗಲಾಟೆ ಮಾಡಿ ಅವಳ ಅಕೌಂಟ್ ಮಾಡಿಸಿದ್ನಲ್ಲ ಭಾವ ಅವಳು ಕೆಲಸಕ್ಕೆ ಸೇರಿದ ಕೂಡಲೇ....  ಅವಳ ಉಳಿತಾಯದ ಹಣ., ಅಪ್ಪ ಆಮ್ಮ ಹಬ್ಬಗಳಿಗೆ ಕೊಟ್ಟ ಹಣ ಎಲ್ಲ ಅದಕ್ಕೇ ಹಾಕಿಸ್ತಾ ಇದ್ದಳು.   ಅವಳು ಭಾರೀ ಶ್ರೀಮಂತಳು ಭಾವಾ..ನೋಡಕ್ಕೆ ಹೀಗಿದ್ದಾಳೆ ಅಷ್ಟೇ.." ತಂಗಿಯನ್ನು ರೇಗಿಸಿದ ಅಣ್ಣ. " ದೀಪಾವಳಿ ವಿಶೇಷ ರಿಯಾಯಿತಿ ಇದೆ ಅಂತ ಗೊತ್ತಾಗಿ ನನ್ನ ಸಹಾಯ ಕೇಳಿದಳು. ನಾನು ಮಾಡಿದೆ . ಅಷ್ಟೇ"

  
          "ಇದೇನಾ ಒಂದು ವಾರದಿಂದ ನಡೆಯುತ್ತಿದ್ದ
ಪಿತೂರಿ?  ನನಗೊಂಚೂರೂ ಗೊತ್ತಾಗಲೇ ಇಲ್ಲವಲ್ಲೇ??" ಕಾಲಿನ ಬಳಿ ಕುಳಿತವಳ ಕಿವಿ ಹಿಂಡಿದೆ.  " ಹಳೇ ಮಂಚ ಎಲ್ಲಿಟ್ಟೀ? "


     " ಎರಡು ಮಂಚ ಅಲ್ವಾ ಅದು? ರಿಪೇರಿ ಮಾಡಿಸಿ polish ಹಾಕಿಸಿ guest room ಗೆ ಹಾಕಿಸಿದೆ. ನಿಮ್ಮ ಹಳೇ ಬೀರು, ಗಾಜಿನ ಬಾಗಿಲಿತ್ತಲ್ಲ , ಅದಕ್ಕೂ polish ಹಾಕಿಸಿ ಅಡಿಗೆ ಮನೆಯಲ್ಲಿಟ್ಟಿದೀನಿ. ನನ್ನ ಪಿಂಗಾಣಿ ಸಾಮಾನುಗಳ showcase ಅದು ಈಗ. "


        " ಬಲು ಜಾಣೆ ನೀನು. ಬಟ್ಟೆ ಬರೆ ತೊಗೋ...ಏನಾದ್ರೂ ತೊಗೋ ಅಂತ ನಿನಗೆ ಕೊಟ್ಟ ಪಾಕೆಟ್ ಮನಿ ಉಳಿಸಿ ಭಾರೀ ಉಡುಗೊರೆ ಕೊಟ್ಟುಬಿಟ್ಟೀ ನನಗೆ....ಪಾಪ , ತುಂಬಾ ಕೆಲಸ ಮಾಡಿರಬೇಕಲ್ವಾ  ಬೆಳಗ್ಗೆಯಿಂದ? "


      " ಅವಳು ಮಾತ್ರಾ ಮಾಡಿದ್ದಲ್ಲ ಭಾವಾ. ನನ್ನ ಕೈಲೂ ಅಷ್ಟೇ ಮಾಡಿಸಿದ್ದಾಳೆ . ಅದಕ್ಕೆ ಈಗ ಗೋಳಿಬಜೆಯ ಲಂಚ ನನಗೀಗ..." ಚಿಂತನ್ ನುಡಿದಾಗ  " ಇನ್ನು ಹತ್ತು ನಿಮಿಷದಲ್ಲಿ ರೆಡಿ ಮಾಡ್ತೀನಿ. ನೋಡೋಣ. ನಾನು ಫಾಸ್ಟ್ ಆಗಿ ಮಾಡ್ತೀನಾ ನೀನು ಫಾಸ್ಟ್ ಆಗಿ ತಿಂತೀಯಾ ಅಂತ " ಅಣ್ಣನಿಗೆ ಚಾಲೆಂಜ್ ಹಾಕಿ ಅಡಿಗೆ ಮನೆಗೆ ಓಡುತ್ತಿದ್ದವಳನ್ನು ತಡೆದೆ.  ಪ್ಯಾಂಟ್ ನ ಕಿಸೆಗೆ ಕೈ ಹಾಕಿ ಸಣ್ಣ ಡಬ್ಬಿಯೊಂದನ್ನು ತೆಗೆದು ಅವಳ ಕೈಲಿಟ್ಟೆ. "  ನಿನ್ನ ದೊಡ್ಡ ಉಡುಗೊರೆಗೆ ನನ್ನದೊಂದು ಚಿಕ್ಕ ಉಡುಗೊರೆ. "


         ಪುಟ್ಟ ಡಬ್ಬಿಯೊಳಗಿಂದ ಚಿನ್ನದ  ಪುಟ್ಟ ಮೂಗಿನ ನತ್ತೊಂದನ್ನು ಹೊರತೆಗೆದಳು. ಉಂಗುರಾಕಾರದಲ್ಲಿ ಅಮೆರಿಕನ್ ಡೈಮಂಡ್ ಹರಳುಗಳನ್ನು ಕೂಡಿಸಿದ ನತ್ತು.  ಕಳೆದ ವಾರ ಚಿನ್ಮಯಿ ಇದರ ಬಗ್ಗೆ ಆಶ್ರಯಿ ಜೊತೆ ಮಾತಾಡ್ತಾ ಇದ್ದದ್ದು ಕಿವಿಯ ಮೇಲೆ ಬಿದ್ದಿತ್ತು.


         " ಎಷ್ಟು ಚೆನ್ನಾಗಿದೆ ರೀ. ನಾಳೆ ಎಣ್ಣೆ ನೀರು ಹಾಕಿಕೊಂಡಾದ ಮೇಲೆ ಹಾಕಿಕೊಳ್ತೀನಿ. ತುಂಬಾ ಮುದ್ದಾಗಿದೆ. "  ಎದೆಗೊತ್ತಿಕೊಂಡು ಓಡಿದಳು. ಆಶ್ಚರ್ಯದಿಂದ ನೋಡುತ್ತಿದ್ದ  ಚಿಂತನ್ ಕೇಳಿದ. 
" ಅದ್ಹೇಗೆ ಇಬ್ಬರೂ ಮಾತಾಡಿಕೊಂಡಂತೆ ಒಂದೇ ದಿನ surprise gift ತಂದಿದೀರಿ. ಅವಳು ತರೋದು ನಿಮಗೆ ಗೊತ್ತಿತ್ತಾ? "


       "ಇಲ್ಲ ಕಣೋ. ಅದೇ ನಮ್ಮಿಬ್ಬರ ಟೆಲಿಪಥಿ..." 
ಕಣ್ಣು ಹೊಡೆದೆ . "ನಾಳೆ ಎಣ್ಣೆ ನೀರಿನ ಕಾಟ ಕೊಡದೆ ಇರಲಿ ಅಂತ ಲಂಚ ಕೊಟ್ಟೆ ಆವಳಿಗೆ. "
ಜೋರಾಗಿ ನಕ್ಕ ಚಿಂತನ್.." ಯಾರಿಗೆ ಹೇಳ್ತಾ ಇದೀರಿ ಭಾವ?  ಅವಳು ಕೊಡೋ ಕಾಟ ತಮಗೆಷ್ಟು ಪ್ರಿಯ ಅಂತ ಇಡೀ ಪ್ರಪಂಚಕ್ಕೇ ಗೊತ್ತು ಬಿಡಿ. "  ಆ ತಂಗಿಯ ಅಣ್ಣ ಅಲ್ವೇ?  ಉತ್ಪ್ರೇಕ್ಷೆ ಮಾಡೋದರಲ್ಲಿ ನಿಸ್ಸೀಮರು. 5 ನಿಮಿಷ ಅವಳ ದೃಷ್ಟಿಯಲ್ಲಿ ಒಂದೂವರೆ ಗಂಟೆ. ಒಂದು ಸಲಕ್ಕಿಂತ ಹೆಚ್ಚಾದದ್ದು ಅವಳ ದೃಷ್ಟಿಯಲ್ಲಿ ಲಕ್ಷ ಸಲ.  ಈಗ ಇವನು " ಇಡೀ ಪ್ರಪಂಚಕ್ಕೇ ಗೊತ್ತು"  ಅನ್ನುತ್ತಿದ್ದಾನೆ.  ನಿಮಗೂ ಗೊತ್ತಾಗಿಬಿಟ್ಟಿದೆಯಾ? !!!!!  ಅಯ್ಯೋ ರಾಮಾ!!!!.. 

                           🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹

 

Category:Relationships



ProfileImg

Written by Indira Udupa