ರಾತ್ರಿಯ ಕಾರ್ಗತ್ತಲು ಮೆಲ್ಲನೆ ಸರಿಯತೊಡಗಿ ಅದನ್ನು ಸೀಳಿಕೊಂಡು ಬೆಳಕಿನ ಕಿರಣಗಳು ಬೆಳಕು ಚೆಲ್ಲಲು ಹವಣಿಸುತ್ತಿತ್ತು .
ಮಲಗಿಯೇ ಕೌದಿಯನ್ನು ಎಳೆದು ಹೊಚ್ಚಿಕೊಂಡು ಬೆಚ್ಚಗೆ ಮಲಗಲು ಹವಣಿಸಿದ್ದ ಮಾಧವಿಯ ಹತ್ತಿರ ನಿದ್ದೆ ಸುಳಿಯದೆ ಮನದಲ್ಲಿನಾ ಹೆದರಿಕೆ ಮತ್ತಷ್ಟು ಹೆಚ್ಚಾಗಿ ಆವಳ ಮನಸಿನಲ್ಲಿ ನೂರೊಂದು ಪ್ರಶ್ನೆಗಳು ಉದ್ಭವಿಸಿತ್ತು.
ಆ ನಾಗಮ್ಮ ಬೇರೆ ಬೇಗ ಬರ್ತೀನಿ ಅಂತ ಹೇಳಿ ಹೋದವಳು ಬರಲೇಯಿಲ್ಲಾ. ಸಿದ್ಲಿಂಗು ಒಳ್ಳೆಯವನೇ ಇರಬಹುದು ಆದರೆ ಮನಸ್ಸು ಯಾಕೋ ಯಾರನ್ನೂ ನಂಬುತ್ತಿಲ್ಲ ಎನಿಸಿತ್ತು.
ಈಗಾ ಈ ಪ್ರಪಂಚದಲ್ಲಿ ರುದ್ರೇಶಣ್ಣನನ್ನು ಬಿಟ್ಟರೇ ನನಗಿನ್ಯಾರು ಇಲ್ಲಾ.ಅವರೇನಾದರೂ ಬಾರದೇ ಹೋದರೇ ನನ್ನ ಗತಿ?ಅದನ್ನು ನೆನೆಸಿಕೊಳ್ಳುತ್ತಿದ್ದಂತೆ ಜೀವ ನಡುಗಿತ್ತು. ಬಾಣಲೆಯಿಂದ ಬೆಂಕಿಗೆ ಎನ್ನುವಂತಾಗದಿರಲಿ ದೇವರೇ ನನ್ನ ಬಾಳು"
ಎಂದು ಮನದಲ್ಲಿಯೇ ಬೇಡಿಕೊಂಡಿದ್ದಳು.
ಹಾಗೆಯೇ ಆವಳ ಮನಸ್ಸು ಹಿಂದಕ್ಕೋಡಿತ್ತು.
ಮಾಧವಿಗೆ ತನ್ನ ಹೆತ್ತವರ ನೆನಪುಗಳು ಮಸುಕು ಮಸುಕಷ್ಟೇ . ಅವಳು ಮೂರು ವರ್ಷದವಳಿದ್ದಾಗ ಮಲೆ ಮಾದೇಶ್ವರ ಜಾತ್ರೆಯಲ್ಲಿ ತಂದೇ ತಾಯಿಯೊಂದಿಗೆ ಹೋಗಿದ್ದ ನೆನಪು ಸಹಾ ಅವಳಿಗೆ ಸರಿಯಾಗಿರಲಿಲ್ಲ. ತನ್ನ ಅಪ್ಪಾ ಅಮ್ಮನಿಂದ ಬೇರಾಗಿ ಅಳುತ್ತಾ ಓಡಾಡುತ್ತಿದ್ದ ಮೂರು ವರ್ಷದ ಹುಡುಗಿಯನ್ನು ಯಾರೋ ಕರೆತಂದು ಪೊಲೀಸ್ ಸ್ಟೇಷನ್ನಿಗೆ ಬಿಟ್ಟು ಹೋಗಿದ್ದರು.ಅವಳನ್ನು ಹುಡುಕಿಕೊಂಡು ಯಾರೂ ಬಾರದಿದ್ದ ಕಾರಣ ಮಕ್ಕಳಿಲ್ಲದ ಪೊಲೀಸ್ ಪೇದೆ ರಾಮಚಂದ್ರಪ್ಪ ಅವಳನ್ನು ತನ್ನ ಮನೆಗೇ ಕರೆತಂದಿದ್ದ. ಎರಡುದಿನಗಳವರೆಗೂ ಅತ್ತೂ ಅತ್ತೂ ಕೊನೆಗೆ ಆತನ ಹೆಂಡತಿ ಜಾನಕಿಯನ್ನು ಅಮ್ಮಾ ಎಂದೇ ಕರೆಯತೊಡಗಿತ್ತು.
ಎಂಟು ಹತ್ತು ದಿನಗಳಾದರೂ ಮಗುವನ್ನು ಹುಡುಕಿಕೊಂಡು ಯಾರೂ ಬಾರದಿದ್ದಾಗ ಆ ಮುದ್ದಾದ ಮಗುವನ್ನು ಅನಾಥಾಶ್ರಮಕ್ಕೇ ಕಳಿಸಲು ಮನಸು ಬಾರದೇ ರಾಮಚಂದ್ರಪ್ಪ ದಂಪತಿಗಳು ತಾವೇ ಮಗುವನ್ನು ಸಾಕತೊಡಗಿದ್ದರು. ಮಗುವಿಗೆ ಮಾಧವಿ .ಎಂದು ಹೆಸರಿಟ್ಟು ಬೆಳೆಸಿದ್ದರು.ಮಗು ಸಹಾ ಅವರೇ ತನ್ನ ಹೆತ್ತವರು ಎಂದು ನಂಬಿತ್ತು.
ಓದಿನಲ್ಲಿ ಚುರುಕಾಗಿದ್ದ ಮಾಧವಿ ಎಸ್.ಎಸ್. ಎಲ್. ಸಿ.ಯಲ್ಲಿ ಒಳ್ಳೆ ಅಂಕಗಳೊಂದಿಗೆ ಪಾಸಾಗಿದ್ದು ತಂದೇ ತಾಯಿಗೆ ಬಹಳ ಖುಷಿ ನೀಡಿತ್ತು. ಆದರೆ ಆ ಖುಷಿ ಬಹಳ ದಿನ ಉಳಿಯಲಿಲ್ಲ.
ನೆಂಟರ ಮದುವೆಗೆಂದು ಹೋಗಿದ್ದ ರಾಮಚಂದ್ರಪ್ಪ ಜಾನಕೀ ದಂಪತಿಗಳ ಬೈಕಿಗೆ ಲಾರಿಯೊಂದು ಗುದ್ದಿ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ಅಲ್ಲಿಂದ ಶುರುವಾಗಿತ್ತು ಮಾಧವಿಯ ಕಷ್ಟದ ದಿನಗಳು. ವಿಷಯ ತಿಳಿದು ಧಾವಿಸಿ ಬಂದಿದ್ದ ರಾಮಚಂದ್ರಪ್ಪನ ತಮ್ಮ ಗೋವಿಂದನಿಗೇ ಮಾಧವಿಯನ್ನು ಕಂಡರೇ ಆಗುತ್ತಿರಲಿಲ್ಲ.
ಮುಂದೆ ಹೇಳದಿದ್ದರೂ ಒಳಗೊಳಗೇ ಕುದಿಯುತ್ತಿದ್ದ ಗೋವಿಂದ .ಈಗ ಸಿಕ್ಕಿರುವ ಅವಕಾಶ ಉಪಯೋಗಿಸಿಕೊಂಡು .ಒಂದೇ ಕಲ್ಲಿಂದ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನದಲ್ಲಿದ್ದ.ಹೇಗಾದರೂ ಅಣ್ಣನ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಂಡು ಮಾಧವಿಯನ್ನು ಮನೆಯಿಂದ ಹೊರ ಹಾಕಬೇಕು ಎಂದುಕೊಂಡಿದ್ದವನು ಅವಳೊಂದಿಗೆ ನಯವಾಗಿ ಮಾತಾಡುತ್ತಾ ಅವಳನ್ನು ಕರೆದುಕೊಂಡು ಹೋಗಿ ಪಕ್ಕದ ಊರಿನಲ್ಲಿ ಧoದೆ ನಡೆಸುತ್ತಿದ್ದ ರಾಜಮ್ಮನಿಗೇ ಅವಳನ್ನು ಮಾರಿ ಹೋಗಿಬಿಟ್ಟಿದ್ದ.
ಮೂರು ನಾಲ್ಕು ದಿನ ಕಳೆಯುವುದರಲ್ಲಿ ಮಾಧವಿಗೆ ಅಲ್ಲಿನ ವ್ಯವಹಾರ ಏನೆಂದು ಗೊತ್ತಾಗಿಹೋಗಿತ್ತು.ಹೇಗಾದರೂ ಮಾಡಿ ಅಲ್ಲಿಂದಾ ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಿದ್ದಳು.ಮರುದಿನ ತನ್ನನ್ನು ಪಡೆಯಲು ಸಾಹುಕಾರ್ ಚಿನ್ನಪ್ಪ ಬೆಲೆ ಕಟ್ಟಿದ್ದಾನೆ ಎಂದು ಗೊತ್ತಾಗಿ ಧೈರ್ಯ ಮಾಡಿ, ಸರಿಯಾದ ಸಮಯ ನೋಡಿ ಹಿತ್ತಲಿನ ಗೇಟ್ ನಿಂದ ನುಸುಳಿ ಓಡಿ ಬಂದಿದ್ದಳು. ದಾರಿ ತಿಳಿಯದೆ ಅದೆಷ್ಟು ದೂರ ಓಡಿ ಬಂದಿದ್ದಳೋ ಬಿಸಿಲಿಗೆ ತಲೆ ಸುತ್ತಿ ಹೆದ್ದಾರಿಯ ರಸ್ತೆ ಬದಿಯಲ್ಲಿ ಜ್ಞಾನ ತಪ್ಪಿ ಬಿದ್ದಿದ್ದಳು.
ಅದೇ ಸಮಯದಲ್ಲಿ ಅಲ್ಲಿ ಹೋಗುತ್ತಿದ್ದ ಇನ್ಸ್ಪೆಕ್ಟರ್ ರುದ್ರೇಶ್ ಅವಳನ್ನ ಎತ್ತಿಕೊಂಡು ತನ್ನ ಮನೆಗೆ ಕರೆತಂದು ಉಪಚರಿಸಿದ್ಧ. ಪ್ರಜ್ಞೆ ಬಂದ ಮೇಲೆ ಎದ್ದು ಹೊರಡಲು ನೋಡಿದವಳಿಗೆ ಸಮಾಧಾನ ಮಾಡಿ ಅವಳ ಬಗ್ಗೆ ಎಲ್ಲಾ ವಿಷಯ ತಿಳಿದುಕೊಂಡವನಿಗೆ ರಾಜಮ್ಮ ಎಂಥ ಹೆಂಗಸು ಎಂದು ಗೊತ್ತಿದ್ದು ಅವಳನ್ನು ಈ ಹಳ್ಳಿಗೆ ತಕರೆತಂದು ತನ್ನ ಬಾಲ್ಯದ ಸ್ನೇಹಿತ ಸಿದ್ಲಿಂಗನ ಮನೆಯಲ್ಲಿರಿಸಿದ್ದ.
ಹೊರಗಿನಿಂದ ಕೇಳಿ ಬರುತ್ತಿದ್ದ .ಜನರ ಜೋರು ಜೋರು ಮಾತುಗಳು, ಓಡಾಟ ಮಾಧವಿಯ ಯೋಚನಾಲಹರಿಯನ್ನು ತುಂಡರಿಸಿತ್ತು.
ಯಾರ್ಯಾರೋ ನಡೆದು ಹೋಗುತ್ತಿರುವ ಸದ್ದಿಗೆ ಒಂದು ಕ್ಷಣ ಭಯವಾದರೂ ಸಿದ್ದಲಿಂಗು ಇದ್ದದರಿಂದ ಭಯ ಪಡದೆ .ಏನೋ ಗಲಾಟೆ ಆದಂತಿದೆ …ಎಂದುಕೊಂಡು ಕಿಟಕಿಯಲ್ಲಿ ಹಣಕಿ ನೋಡಿದವಳು ಏನೊಂದು ಅರ್ಥವಾಗದೆ ಹೊರಗಡೆ ಬಂದು ಬಾಗಿಲು ತೆಗೆದ ಮಾಧವಿಗೆ ಹಳ್ಳಿಯ ಜನ ಸಣ್ಣೇಗೌಡರ ಮನೆಯತ್ತ ಧಾವಿಸುತ್ತಿದ್ದದ್ದು ಕಂಡು ಇಷ್ಟು ಬೆಳಿಗ್ಗೆ ಎಲ್ಲಾ ಎಲ್ಲಿಗೆ ಹೋಗ್ತಿದ್ದಾರೆ ? ಏನಾಗಿದೇಯೋ ಏನೋ, ಎಂದುಕೊಂಡವಳು ಯಾರನ್ನು ಕೇಳೋದು ಎಂದರಿವಾಗದೆ ಪಕ್ಕದ ಮನೆ ಸಂಕರೀಯನ್ನು ನೋಡಿ
"ಸಂಕ್ರಕ್ಕ ಎಲ್ಲಾ ಯಾಕಿಂಗೆ ಓಡ್ತಾ ಹೋಗ್ತಿದಿರಿ ?
ಎಲ್ಲಿಗೋಯ್ತಾಯಿದ್ದೀರಿ.? ಯಾರಿಗೆ ಏನಾಗೈತೆ..?"
"ಅಯ್ಯ ಇದೇನು ಇಂಗೇ ಕೇಳ್ತಿದ್ದೀಯ? ಎಲ್ಲಿ ಸಿದ್ಲಿಂಗು? ನಮ್ಮ ಸಣ್ಣೆಗೌಡರನ್ನ ಆ ದೆವ್ವ ಸಾಯಿಸಿಬುಟ್ಟಯಿತ್ತಂತೆ. ಅದ್ಕೇ ಕಣವ್ವ ಒಯಿತಿರಾದು .ಪೋಲೀಸ್ನೋರು ಬಂದವರೇ. ನಮ್ಮ ಪೂಜಾರಪ್ಪ ದೇವಸ್ಥಾನಕ್ಕ ಹೋಯಿತಿದ್ರಂತೆ ಆಗ ಅವರ ಮನೆ ಆಳು ಕೆಂಚ ಜೋರಾಗಿಕೂಕ್ಕೊಂಡು ಬೀದಿಗೆ ಓಡಿ ಬಂದನಂತೆ ಆಗ್ಲೇ ಗೊತ್ತಾಗಿದ್ದು. ಬಿರ್ನೆ ಸಿದ್ದಲಿಂಗಣ್ಣನ್ನ ಕಳಿಸು ಓಗು!"
ಎಂದು ತನ್ನ ಹೆಜ್ಜೆಯ ವೇಗ ಹೆಚ್ಚಿಸಿದ್ದಳು.
ಮಾಧವಿಗೆ ಸಣ್ಣೇಗೌಡ ಸತ್ತಿದ್ದು ಎದೆಯಲ್ಲಿ ಭಯ ಹುಟ್ಟಿಸಿತ್ತು.ಅವಳು ಈ ಹಳ್ಳಿಗೆ ಬಂದಮೇಲೆ ಇದು ಎರಡನೇ ಸಾವಾಗಿತ್ತು.ಕೊಲೆಯೋ?ದೆವ್ವವೇ ಸಾಯಿಸಿತ್ತೋ? ಒಟ್ಟಲ್ಲಿ ಎರಡು ಹೆಣವಂತು ಉರುಳಿದ್ದೂ ದಿಟವಾಗಿತ್ತು. ಒಳಗೇ ನಡೆದವಳು ಮಲಗಿದ್ದ ಸಿದ್ಲಿoಗನನ್ನು ಅಲುಗಿಸಿ ಎಬ್ಬಿಸುತ್ತಾ
"ಏಳ್ರಣ್ಣ ನೀವು : ಹೀಗೇ ಮಲಗಿದ್ದೀರಾ, ಅಲ್ಲಿ ನಿಮ್ಮ ಒಡೆಯ ಸಣ್ಣೇಗೌಡ್ರು ಸತ್ತೋಗಿದ್ದಾರಂತೆ!"
ಆವಳ ಮಾತು ಮುಗಿಯುವ ಮುನ್ನವೇ ಥಟ್ಟನೇ ಎದ್ದು ಕುಳಿತ ಸಿದ್ಲಿoಗು
"ಎನ್ತಂಗ್ಯವ್ವ ಏನ್ ಯೋಳ್ದೆ?ಇನ್ನೊಂದ್ಕಿತಾ ಯೋಳು!"
ಎಂದು ಕಂಬಳಿ ಜಾಡಿಸಿ ಒದ್ದು ಮೇಲಕ್ಕೆದ್ದವನು
"ಯಾರು ಯೋಳಿದ್ದು ನಿಂಗೆ? ರಾತ್ರಿ ನಾನೇ ಮಾತಾಡ್ಸಿಕೊಂಡು ಬಂದಿದ್ದೀನಿ. ಚೆಂದಾಗೇ ಇದ್ರಲ್ಲ ನಾನು ಬರೋ ಗಂಟ ನೀನು ಆಚಿಗೆಲ್ಲು ಓಗಬ್ಯಾಡ. ಮನಿಯಾಗೇ ಇರವ್ವ!"
ಎಂದು ಮುಖ ತೊಳೆದು ಶರ್ಟ್ ಹಾಕಿಕೊಂಡು ದಾರದ ಮೇಲೆ ಹಾಕಿದ್ದ ಟಿವೆಲ್ ತೆಗೆದು ಹೆಗಲ ಮೇಲೆ ಹಾಕಿಕೊಂಡು ಹೊರ ನಡೆದವನು ಮನದಲ್ಲಿ
"ಎಪ್ಪಾ ನಮ್ಮಳ್ಳಿ ನಾಗೇ ಇದು ನಾಕನೇ ಸಾವು ಆಗೈತೆ.
ಯಾಕೆ ಆ ದೆವ್ವಕ್ಕೇ ಕ್ವಾಪ?ದೇವಿರಮ್ಮ ಸತ್ತಿದ್ರಾಗೆ ಗೌಡರ ಕೈವಾಡ ಐತಾ…..?. ಅಂದ್ರೆ ಇದು ದೆವ್ವದ ಕೆಲ್ಸನೇ ಇರ್ಬೋದಾ . ಗೌಡ್ರಿಗೆ ಎಂಗಸರ ತೆವಲು ರವಷ್ಟು ಜಾಸ್ತಿನೇ. ಆ ಇಸ್ಯದಾಗೆ ಏನಾದ್ರೂ ಆಗಿರ್ಬೋದ…? ಒಟ್ಟನಾಗೆ ಗೌಡ್ರು ಇಂಗ್ ಸಾಯಬೇಕು ಅಂತ ಅವರ ಹಣೆನಾಗೇ ಬರ್ದಿತ್ತೇನೋ?
ಎಂದುಕೊಂಡು ಹೆಗಲ ಮೇಲಿನ ಟವೆಲ್ ತಲೆಗೆ ಸುತ್ತಿಕೊಂಡು ಓಡು ನಡಿಗೆಯಲ್ಲಿ ಗೌಡರ ಮನೆಯತ್ತ ದೌಡಾಯಿಸಿದ್ದ.ಗೌಡರ ಮನೆಯ ಮುಂದೆ ಇಡೀ ಹಳ್ಳಿಯೇ ಜಮಾಯಿಸಿತ್ತು.
ಪೊಲೀಸ್ ಇನ್ಸ್ಪೆಕ್ಟರ್ ಮಹದೇವಪ್ಪ ಹಾಗೂ ಇನ್ಸ್ಪೆಕ್ಟರ್ ಅಂಜನಪ್ಪ ಇನ್ನಿಬ್ಬರು ಪೇದೆಗಳು ಶವದ ಸುತ್ತಾ ನೆರೆದಿದ್ದರು. . ಗೌಡರ ಶವವನ್ನು ಯಾರೂ ಮುಟ್ಟಲು ಬಿಟ್ಟಿರಲಿಲ್ಲ. ಗೌಡರ ಕಣ್ಣುಗಳು ಅಗಲವಾಗಿ ತೆರೆದುಕೊಂಡಿತ್ತು. ಸಾಯೋ ಮುಂಚೆ ಅವರು ಏನನ್ನೋ ನೋಡಿ ಹೆದರಿದ್ದಂತೆ ಕಂಡಿತು.
ಎಲ್ಲಿಯೂ ಕೈಬೆರಳುಗಳ ಗುರುತಾಗಲೀ ಮತ್ತೇನಾಗಲಿ ಏನೂ ಸಿಕ್ಕಿರಲಿಲ್ಲ.
ಸಿದ್ಲಿoಗನ್ನ ನೋಡಿದವರು ಯಾರೋ
"ಆಗೋ ಸಿದ್ಲಿoಗ ಬಂದವನೇ ಅವನು ಗೌಡರ ಖಾಸಾ ಮನ್ಸಾ!"
. ಎಂದಾಗ ಅವನನ್ನು ಹತ್ತಿರ ಕರೆದ ಇನ್ಸ್ಪೆಕ್ಟರ್
"ನೀನೇ ಅಲ್ವಾ ಗೌಡರನ್ನು ಕಡೆಯಲ್ಲಿ ನೋಡಿದವನು?ಆಗ ಅವರನ್ನು ನೋಡೋಕ್ಕೇ ಯಾರಾದ್ರೂ ಬಂದಿದ್ರೇನು? ಇಲ್ಲಾ ಯಾರಾದ್ರೂ ಬರವರು ಇದ್ರಾ?"
" ಇಲ್ಲಾ ಸಾರ್ ಯಾರು ಇರಲಿಲ್ಲ. ಯಾರೂ ಬಂದಿರಲೂಯಿಲ್ಲ ,ಯಾರಾದ್ರೂ ಬತ್ತಾರೆ ಅಂತೇನೂ ನನ್ ತಾವ ಯೋಳ್ಳಿಲ್ಲ ಒಡೆಯ. ಯಾರಾದ್ರೂ ಬರೋವರು ಇದ್ದಿದ್ರೆ ನಾನು ಎಲ್ದು ಗಿಲಾಸ್ ಮಾಡಗಿಬುಟ್ಟೇ ಒಯ್ತಿದ್ದೆ.!".
ಅವನ ಉತ್ತರ ಸರಿಯಾಗಿದೆ ಅನ್ನಿಸಿದರೂ
ಇನ್ಸ್ಪೆಕ್ಟರ್ ಬಿಡದೆ ಅವನನ್ನು ಮತ್ತಷ್ಟು ಪ್ರಶ್ನೆ ಮಾಡಿದವರಿಗೆ ನಿರಾಶೆಯೇ ಆಗಿತ್ತು.
ಗೌಡಿತಿ ರತ್ನಮ್ಮ ಮೊನ್ನೆ ಬೆಳಿಗ್ಗೆಯೇ ಪಕ್ಕದೂರಿನ ತಮ್ಮನ ಮನೆಗೇ ಹೋಗಿದ್ದವಳು ವಿಷಯ ತಿಳಿದು ಧಾವಿಸಿ ಬಂದಿದ್ದಳು.
ತಾಯಿಯ ಗೋಳಾಟಕ್ಕೇ ಜನರ ಸಮಾದಾನ ನಡೆದೇಯಿತ್ತು. ಮಗಳು ಪಾರ್ವತಿ ಸುಮ್ಮನೆ ಒಂದುಕಡೆ ಮೌನವಾಗಿ ನಿಂತಿದ್ದಳು.
ಅಷ್ಟರಲ್ಲಿ ಅಂಬುಲೆನ್ಸ್ ಬರುತ್ತಿದ್ದ ಶಬ್ದ ಕೇಳಿ ಎಲ್ಲರ ಕಣ್ಣುಗಳು ಅತ್ತಾ ತಿರುಗಿದ್ದವು.. ಗೌಡರ ಶವವನ್ನು ಪೋಸ್ಟ್ ಮಾರ್ಟoಗಾಗಿ ಸಾಗಿಸಲಾಗಿತ್ತು.
ಕೆಲವೇ ದಿನಗಳಲ್ಲಿ ಪೋಸ್ಟ್ ಮಾಸ್ಟಮ್ ರಿಪೋರ್ಟ್ ಬಂದಿತ್ತು. ಏನನ್ನೋ ನೋಡಿ ಹೆದರಿದ್ದೀರಬಹುದು ಹಾಗಾಗಿ ಕಣ್ಣುಗಳು ಅಗಲಗೊಂಡಿವೆ ಅದೇ ಸಮಯದಲ್ಲಿ ಅವರಿಗೆ ಹೃದಯ ಸ್ಥoಬನವಾಗಿದೆ ಎಂದು ಬರೆದಿತ್ತು.
ಹಾಗಾಗಿ ಸಣ್ಣೇಗೌಡರು ಹೇಗೇ ಸತ್ತರು?ಅಥವಾ ನಿಜ್ವಾಗ್ಲೂ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದೀರಬಹುದೇ? ಎಂದು ಕೆಲವರು ಯೋಚಿಸಿದರೆ ಮಿಕ್ಕ ಹಳ್ಳಿಗರು ಮಾತ್ರ ಇದನ್ನು ಹಾರ್ಟ್ ಅಟ್ಯಾಕ್ ಎಂದು ನಂಬಿರಲೇಯಿಲ್ಲಾ.
ಊರ ನಡುವಿನ ಅರಳಿಕಟ್ಟೆಯ ಮೇಲೆ ಕುಳಿತಿದ್ದ ಹಿರಿಯರ ಗುಂಪಿನೊಡನೆ ಕರಿಬಸ್ಯ, ನಾಗೇಶಣ್ಣ,ರಮೇಶಪ್ಪ ಮತ್ತಿತರರೂ ಸೇರಿದ್ದರು. ಅಲ್ಲಿ ಯಾರಿಗೂ ಗೌಡರ ಸಾವು ಸಹಜವೆನಿಸದೆ ಅದು ನಿಜ್ವಾಗ್ಲೂ ದೆವ್ವದ ಕೆಲಸವೇ ಎನಿಸಿತ್ತು. ದೇವಿರಮ್ಮ ದೆವ್ವವಾಗಿ ತನ್ನ ಸೇಡು ತೀರಿಸಿಕೊಂಡಿದ್ದಾಳೆ ಎಂದೇ ಅವರು ದೃಢವಾಗಿ ನಂಬಿದ್ದರು.. ಅದಕ್ಕೇ ಕಾರಣವೂ ಇತ್ತು.
ಎಂಟು ತಿಂಗಳ ಹಿಂದೆ ಇದೇ ವೀರಗೌಡನ ಹಳ್ಳಿ ಎಂಬ ಊರಲ್ಲಿ .ಜನಾ ಶಾಂತಿ ನೆಮ್ಮದಿಯಿಂದ ಜೀವಿಸುತ್ತಿದ್ದರು.ಆ ಊರಲ್ಲಿ ಅಂಗಡಿ ಇಟ್ಟುಕೊಂಡಿದ್ದ ಶಾಂತವೀರ ಬಡ ಹುಡುಗಿ ದೇವಿರಮ್ಮನನ್ನು ಮದುವೆಯಾಗಿ ಬಂದಿದ್ದ.
ದೇವೀರಮ್ಮ.ನೋಡಲು ತುಂಬಾ ಸುಂದರವಾಗಿದ್ದಳು.ಸರಿಯಾಗಿ ಹೇಳಬೇಕು ಎಂದರೆ ಆ ಹಳ್ಳಿಯಲ್ಲಿ ಅವಳಷ್ಟು ಚಲುವೆ ಯಾರೂ ಇರಲಿಲ್ಲವೆಂದೇ ಹೇಳಬಹುದಾಗಿತ್ತು.
ಸ್ವಲ್ಪ ದಿನ ಗಂಡ ಹೆಂಡತಿಯರ ಸಂಸಾರಬಹಳ ಚೆನ್ನಾಗಿ ನಡೆದಿತ್ತು. ಯಾರ ಕಣ್ಣು ತಾಕಿತ್ತೋ ಆ ಜೋಡಿಗೆ ಎನ್ನುವಂತೆ ಇದ್ದಕ್ಕಿದ್ದಂತೆ ಕಾಮಾಲೆ ರೋಗ ಬಂದು ಶಾಂತವೀರ ಮೃತಪಟ್ಟಿದ್ದ.
ಮೊದಲೇ ಅನಾಥೆಯಾಗಿದ್ದ ದೇವಿರಮ್ಮನ ಸಹಾಯಕ್ಕೆ ವಿಷಯ ತಿಳಿದರೂ ಅಣ್ಣ ಅತ್ತಿಗೆ ಬಂದಿರಲಿಲ್ಲ.ಹಾಗಾಗಿ ಊರ ಗೌಡರೆನಿಸಿಕೊಂಡ ಚನ್ನೇಗೌಡರು,ಅಣ್ಣಪ್ಪ,ಸಣ್ಣೇಗೌಡರು ನಂಜುಂಡಯ್ಯ ಮತ್ತಿತರರೂ ಸೇರಿ ಶಾಂತವೀರನ ಅಂತ್ಯ ಸಂಸ್ಕಾರ ನಡೆಸಿದ್ದರು.
ಆದರೇ ಅವಳಿಗೆ ಧೈರ್ಯ ತುಂಬಿ ಆವಳ ಸಹಾಯಕ್ಕೆ ನಿಂತದ್ದು ಮಾತ್ರ ಆವಳ ಗೆಳತಿಯಾದ ಸಣ್ಣೇಗೌಡರ ಮಗಳು ಪಾರ್ವತಿ.ಡಿಗ್ರಿ ಮುಗಿಸಿದ್ದಾಕೆ ದೇವಿರಮ್ಮನಿಗೆ ಧೈರ್ಯ ತುಂಬಿ ಅಂಗಡಿ ನಡೆಸುವ ಸಲಹೆ ಕೊಟ್ಟಿದ್ದಲ್ಲದೆ ಸಾಮಾನು ತರಿಸಿ ಕೊಡುವುದನ್ನೂ ತಾನೇ ವಹಿಸಿಕೊಂಡಿದ್ದಳು.ಹಾಗಾಗಿ ಜೀವನ ನಡೆಸಲು ತೊಂದರೆ ಆಗದಿದ್ದರೂ ದೇವಿರಮ್ಮನೇ ಅಂಗಡಿಯಲ್ಲಿ ಕೂರಬೇಕಾಗಿಬಂದಿತ್ತು.
ವ್ಯಾಪಾರವೇನೋ ಚೆನ್ನಾಗಿ ನಡೆದರೂ ಬಂದವರು ಸಾಮಾನು ಕೊಡುವಾಗ, ತೆಗೆದುಕೊಳ್ಳುವಾಗ ಆವಳ ಕೈ ಮುಟ್ಟುವುದು, ಹಿಡಿಯುವುದು ಮಾಡುವಾಗ ಅವಳಿಗೇ ಹಿಂಸೆಯಾಗುತ್ತಿತ್ತು. ಆದರೆ ಬೇರೆ ದಾರಿಯಿಲ್ಲದೆ ಎಲ್ಲವನ್ನೂ ಸಹಿಸಿಕೊಂಡು ಇರುತ್ತಿದ್ದಳು. ಅವಳೊಂದಿಗೆ ನಿತ್ಯ ಮಲಗಲು ಕೆಂಪಿಯನ್ನು ನಿಯಮಿಸಿದ್ದೂ ಗೌಡರ ಮಗಳೇ.
ಅದೊಂದು ಮಳೆಗಾಲ ನಾಲ್ಕು ದಿನದಿಂದ ಒಂದೇ ಸಮನೆ ಸುರಿಯುತ್ತಿದ್ದ ಮಳೆಗೆ ಹೊಳೆ ತುಂಬಿ ಹರಿದು ಕೋಡಿ ಬಿದ್ದಿತ್ತು. ಮನೆಯಿಂದ ಯಾರೂ ಹೊರಗೇ ಬಂದಿರಲಿಲ್ಲ. ಮಳೇ ನಿಂತು ಎರಡು ದಿನಗಳಾದರೂ ದೇವಿರಮ್ಮ ಅಂಗಡಿ ಬಾಗಿಲು ತೆರೆಯದೆ ಇದ್ದದ್ದು ಅಚ್ಚರಿಯಾಗಿತ್ತು.
ಮನೆಯಿಂದಾಚೆಗೂ ಬಾರದವಳನ್ನು ಕಂಡು ಅಕ್ಕ ಪಕ್ಕದವರು ಹೋಗಿ ಹಿರಿಯರಿಗೆ ಸುದ್ದಿ ಮುಟ್ಟಿಸಿದ್ದರು. ಮುಚ್ಚಿದ್ದ ಬಾಗಿಲಿನಿಂದ ಬರುತ್ತಿದ್ದ ಕೆಟ್ಟ ವಾಸನೆಗೆ ಅವರಾಗಿ ಬಾಗಿಲು ತೆರೆಯದೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ಬಾಗಿಲು ಒಡೆದು ನೋಡಿದಾಗ ದೇವಿರಮ್ಮ ನೇಣು ಬಿಗಿದುಕೊಂಡು ಸತ್ತಿದ್ದು ಬೆಳಕಿಗೆ ಬಂದಿತ್ತು. ಆದರೆ ಅವಳೇಕೆ ಸತ್ತಳು? ಸಾಯುವಂಥದ್ದು ಏನಾಗಿತ್ತು?ಎಂದು ಮಾತನಾಡಿಕೊಂಡರೂ ಉತ್ತರ ಮಾತ್ರ ಯಾರಿಗೂ ಹೊಳೆದಿರಲಿಲ್ಲ.
ಊರ ಹಿರಿಯರು ಪೊಲೀಸರಿಗೆ ಶವವನ್ನು ಪರಿಕ್ಷಿಸಲು ಅವಕಾಶ ಕೊಡದೆ ಹೆಣ್ಣುಮಗಳು ಒಬ್ಬಳೇ ಬಾಳಲಾಗದೆ ಆತ್ಮಹತ್ಯೆ ಮಾಡಿಕೊಂಡು ಸತ್ತಿರಬಹುದು. ಶವ ಪರೀಕ್ಷೆ ಮಾಡುವುದು ಬೇಡವೆಂದು ಪೊಲೀಸರಿಗೇ ಹಣ ಕೊಟ್ಟು ಕೇಸ್ ಮುಚ್ಚಿಸಿ ಆವಳ ಹೆಣಕ್ಕೆ ಸಂಸ್ಕಾರ ಮಾಡಿಸಿದ್ದರು.
ಆದರೆ ಎಲ್ಲರಿಗೂ ಕೆಂಪಿ ಎಲ್ಲಿಹೋದಳೆoದೇ ತಿಳಿಯಲಿಲ್ಲ.ಸುಮಾರು ದಿನಗಳ ನಂತರ ಆವಳ ಶವ ಊರ ಕೊನೆಯಲ್ಲಿದ್ದ ಪಾಳು ಭಾವಿಯಲ್ಲಿ ಬಿದ್ದಿತ್ತು.
ದಿನ ಕ್ರಮೇಣ ವಿಷಯ ಜನಗಳ ಮನಸಿನಿಂದ ಮರೆಯಾಗಿ ಹೋಗಿತ್ತು.
ಆದರೇ ಅಮವಾಸೆ ಹುಣ್ಣಿಮೆ ಸಮಯದಲ್ಲಿ ದೇವಿರಿಯ ಮನೆಯಿಂದ ಅಳುವ, ಕಿಲಕಿಲನೆ ನಗುವ ಶಬ್ದ ಕೇಳಿಸತೊಡಗಿದಾಗ ಜನರು ಹೆದರಿಕೆಯಿಂದ ಯಾರೂ ಅತ್ತ ಸುಳಿಯದoತಾಗಿತ್ತು.ಹಾಗಾಗಿ ಆ ಮನೆ ಮತ್ತು ಅಂಗಡಿ ಪಾಳು ಬಿದ್ದಿತ್ತು. ಅಕ್ಕಪಕ್ಕದ ಮನೆಯವರೂ ಸಹಾ ತಮ್ಮ ಮನೆಗಳನ್ನು ಅಲ್ಲಿಂದ ಬೇರೆ ಕಡೆಗೆ ಬದಲಾಯಿಸಿಕೊಂಡಿದ್ದರು.
ಅದಾದ ಎರಡೇ ತಿಂಗಳಿಗೆ ಕಿರಾಣಿ ಅಂಗಡಿಯ ನಂಜುಂಡಯ್ಯ ಇದ್ದಕ್ಕಿದ್ದಂತೆ ಮನೆಯ ಹೊರಗಡೆ ಬಾಗಿಲಿನ ಹತ್ತಿರ ಬಿದ್ದು ಸತ್ತಿದ್ದ.
ಅದಾದ ತಿಂಗಳಿಗೇ ಚನ್ನೇ ಗೌಡರು ಮಲಗಿದಲ್ಲಿಯೇ ಸಾವನ್ನಪ್ಪಿದಾಗ ಮಾತ್ರ .. ಎಲ್ಲರ ಮನದಲ್ಲಿ ಅಷ್ಟು ಗಟ್ಟಿಮುಟ್ಟಾಗಿ ಜಟ್ಟಿಯಂತಿದ್ದ ಗೌಡರು ಹೀಗೇ ಸಾಯುವುದು ಎಂದರೆ….ಅಸಾಧ್ಯ ನಿಜವಾಗ್ಲೂ ,ಇದು ದೇವೀರಮ್ಮನ ದೆವ್ವದ ಕೆಲಸವೇ ಇರಬೇಕು ಎoದು ಕೊಂಡಿದ್ದರು.
ಈಗ ನೋಡಿದರೆ. ಸಣ್ಣೇಗೌಡರು ಸತ್ತಿದ್ದರು. ಇದು ಕೊಲೆಯೋ? ಅಥವಾ ಸಹಜವಾದ ಸಾವೇ ? ಇದೂ ಸಹಾ ದೆವ್ವದ ಕೆಲಸವೇ?ಎನ್ನುವುದು ಯಾರಿಗೂ ತಿಳಿಯದಾಗಿತ್ತು.
ಬೊಮ್ಮನಹಳ್ಳಿ ಠಾಣೆಯಲ್ಲಿ ಕುಳಿತಿದ್ದ ರುದ್ರೇಶನ ಮನಸು ಸರ್ಕಾರದ ಧೋರಣೆಗೆ ಬೇಸತ್ತು ಹೋಗಿತ್ತು. ಇದ್ದಕ್ಕಿದ್ದಂತೆ ತನ್ನ ವಿಧವೆ ತಾಯಿ ಕೆರೆಯಲ್ಲಿ ಬಿದ್ದು ಸತ್ತಾಗ ಅವನ ಸೋದರಮಾವ ಅವನನ್ನು ಆ ಊರಲ್ಲಿರಲು ಬಿಡದೆ ಕರೆತಂದು ತನ್ನ ಬಳಿಯಲ್ಲಿರಿಸಿಕೊಂಡು ಅವನನ್ನು ತನ್ನ ಮಗನoತೆ ನೋಡಿಕೊಂಡಿದ್ದರೂ ಹೈಸ್ಕೂಲ್ ಓದುತ್ತಿದ್ದ ರುದ್ರೇಶನ ಮನಸಲ್ಲಿ ತನ್ನ ತಾಯಿಯ ಸಾವು ಸಹಜವಲ್ಲ ಎನ್ನುವ ಅನುಮಾನ ಇದ್ದೇಯಿತ್ತು. ಅದನ್ನು ತಿಳಿಯಬೇಕು ಎಂಬಾಸೆಯಿಂದಲೇ
ಚೆನ್ನಾಗಿ ಓದಿ ಇನ್ಸ್ಪೆಕ್ಟರ್ ಹುದ್ದೆಗೆ ಸೇರಿದ್ದ. ಅದೆಷ್ಟು ಪ್ರಯತ್ನ ಪಟ್ಟರೂ ಅವನ ಪೋಸ್ಟಿಂಗನ್ನು ತನ್ನ ಊರಿಗೆ ಹಾಕಿಸಿಕೊಳ್ಳಲು ಆಗಿರಲಿಲ್ಲ. .
ಹಾಗಾಗಿ ಅವನಿಗೆ ಬೇಸರವಾಗಿತ್ತು.. ಮಾಧವಿಯನ್ನು ಕರೆತಂದು ಅವಳ ಜೀವನಕ್ಕೆ ಒಂದು ವ್ಯವಸ್ಥೆ ಮಾಡಬೇಕು ಎಂದುಕೊಂಡು ಮಾಧವಿಯನ್ನು ಕರೆತರಲು ಅಂದೇ ಊರಿಗೆ ಬಂದಿದ್ದ.
ಅವನ ಮನದಲ್ಲಿಯೂ ಇದೆಲ್ಲಾ ಸಾವುಗಳು ನಿಜ್ವಾಗ್ಲೂ ದೆವ್ವದ ಕೆಲಸವೇ?ಎಂಬುದನ್ನು ಅದೇಕೋ ಅವನ ಮನಸು ಒಪ್ಪಿರಲಿಲ್ಲ.ಇದುವರೆಗೂ ನಡೆದಿದ್ದ ಸಾವಿನಲ್ಲಿ ದೆವ್ವದ ಕೈವಾಡವಿಲ್ಲಾ ಇದನ್ನು ಯಾರೋ ಮಾಡುತ್ತಿದ್ದಾರೆ ಎಂಬ ನಂಬಿಕೆಯೂ ಅವನಲ್ಲಿ ಅಷ್ಟೇ ಬಲವಾಗಿತ್ತು.
ಮಾದೇವಪ್ಪ ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂಬ ಶೆoಕೆಯೂ ಅವನ ಮನದಲ್ಲಿತ್ತು.
ಗೆಳೆಯನಿಗೆ ಕರೆ ಮಾಡಲು ಸರಿಯಾದ ನೆಟ್ವರ್ಕ್ ಸಿಗದ ಕಾರಣ ಮಳೆಯಲ್ಲಿಯೇ ಕೊಡೆ ಹಿಡಿದೇ ಹೊರಗಡೆ ಬಂದಿದ್ದ.
ಸಂಜೆಯಿಂದಲೇ ಜಿಟಿ ಜಿಟಿ ಮಳೆ ಶುರುವಾಗಿತ್ತು .ಅಮಾವಾಸೆಯಾ ಹಿಂದಿನ ದಿನವಾದ್ದರಿಂದ . ಆಗಸದಲ್ಲಿ ಮೋಡ ಕವ್ವನೇ ಕವಿದು ಇಡೀ ಊರನ್ನು ಗಾಢಕತ್ತಲಲ್ಲಿ ಮುಳುಗಿಸಿತ್ತು.
ಅಲ್ಲಿದ್ದ ದಿಬ್ಬದ ಮೇಲೆ ನಿಂತರೆ ನೆಟ್ವರ್ಕ್ ಸಿಗಬಹುದು ಎನಿಸಿ ನಡೆದು ಬರುವಾಗ ದೂರದಲ್ಲಿ ಯಾರೋ ನಡೆದು ಹೋಗುತ್ತಿದ್ದದ್ದು ಕಾಣಿಸಿತ್ತು. ದಿಟ್ಟಿಸಿ ನೋಡಿದಾಗ ಅದು ಹೆಣ್ಣಾಕೃತಿ ಎಂದರಿವಾಗಿತ್ತು. ತನ್ನ ಹೆಜ್ಜೆಯ ವೇಗ ಹೆಚ್ಚಿಸಿದ್ದ.
ಸ್ವಲ್ಪ ಹತ್ತಿರ ಹೋದಾಗ ಹಿಂದೆ ತೂಗಾಡುತ್ತಿದ್ದ ಜಡೆಯಿಂದಾಗಿ ಅದು ಪಾರ್ವತಿಯೇ ಎಂದು ಗೊತ್ತಾಗಿತ್ತು.
ಅವಳು ದೇವಿರಮ್ಮನ ಮನೆಯತ್ತ ಹೋಗುತ್ತಿದ್ದದ್ದು ನೋಡಿ "ಅರೆ ಇದೇಕೆ ಈ ಕತ್ತಲಲ್ಲಿ ಆ ಪಾಳು ಬಿದ್ದ ಮನೆಗೆ ಹೋಗುತ್ತಿದ್ದಾಳೆ"
ಎನಿಸಿ ಅಲ್ಲಿಯೇ ಇದ್ದ ಮರದ ಹಿಂದೆ ಅಡಗಿ ನಿಂತಿದ್ದ.
ಸ್ವಲ್ಪ ಹೊತ್ತಿನಲ್ಲಿಯೇ ಪಾರ್ವತಿ ಕೆಲವು ವಸ್ತುಗಳನ್ನು ಹಿಡಿದು ಹೊರಬರುವುದನ್ನು ನೋಡಿ ಅವನಿಗೆ ಅತ್ಯಂತ ಅಚ್ಚರಿಯಾಗಿತ್ತು.ಅವಳು ಮುಂದೆ ಹೆಜ್ಜೆ ಇಟ್ಟ ಕೂಡಲೇ ಮರದ ಹಿಂದಿನಿಂದ ಬಂದು ಪಾರ್ವತಿ……ಎಂದಾಗ ಬೆಚ್ಚಿ ತಿರುಗಿ ನೋಡಿದವಳು ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡು
" ಹೇಗಿದ್ದೀ ರುದ್ರೇಶ.?ಇದೇನು ಇಲ್ಲಿ ಇನ್ವೆಸ್ಟಿಗೇಷನ್ ಮಾಡೋಕ್ ಬಂದಿದ್ದೀಯಾ.? "
ಎಂದು ಕುಹಕದಿಂದ ನುಡಿದಾಗ
"ಅಂಗೈ ಹುಣ್ಣಿಗೆ ಕನ್ನಡಿ ಏಕೆ ಬೇಕು ಪಾರ್ವತಿ? ನನಗೆಲ್ಲಾ ಗೊತ್ತಿದ್ದರೂ ನಾನೇನು ಮಾಡುವ ಹಾಗಿಲ್ಲ. ಕಾನೂನು ನನಗೇ ಅನುಮತಿ ನೀಡಿಲ್ಲ.!"
"ಮಾಡಿದ ಪಾಪಕ್ಕೇ ಸರಿಯಾದ ಶಿಕ್ಷೆ ಆಗಲೇಬೇಕು ಅಲ್ಲವೇ? ನನಗನ್ನಿಸಿದಂತೆ ಪಾಪಿಗಳಿಗೆ ಸರಿಯಾದ ಶಿಕ್ಷೆ ಆಗಿದೆ ಅದೇ ನನಗೇ ತೃಪ್ತಿ. ಒಂದು ವೇಳೆ ನೀನು ನನ್ನನ್ನು ಬಂಧಿಸಿದರೂ ಚಿಂತೆಯಿಲ್ಲ. ನನ್ನ ಮುಗ್ಧ ಗೆಳತಿಯನ್ನು ಹಾಳು ಮಾಡಿದ್ದಲ್ಲದೆ ಅವಳನ್ನ ಚಿತ್ರಹಿಂಸೆ ಕೊಟ್ಟು ಸಾಯಿಸಿ ನೇಣು ಹಾಕಿದವರಿಗೆ ಸರಿಯಾದ ಶಿಕ್ಷೆಯಾಗಿದೆ. ಅವರು ಸತ್ತ ಮೇಲೆ ತಾವು ಮಾಡಿದ ಪಾಪಕ್ಕೆ
ಸರಿಯಾದ ಶಿಕ್ಷೆ ಅನುಭವಿಸುತ್ತಾರೆ.ಎಂಬ ವೇದಾಂತದಲ್ಲಿ ನನಗೇ ನಂಬಿಕೆಯಿಲ್ಲ. ಬೇಕಿದ್ದರೆ ನೀನು ನನ್ನನ್ನು ಅರೆಸ್ಟ್ ಮಾಡಬಹುದು. ಆದರೇ ಸಾಕ್ಷಿ ಎಲ್ಲಿದೆ.? ನ್ಯಾಯಾಲಯ ಸಾಕ್ಷಿ ಕೇಳುತ್ತದೆ ರುದ್ರೇಶ್. ಇದು ದೆವ್ವದ ಕೆಲಸವೇ ಎಂದು ಎಲ್ಲರೂ ನಂಬಿದ್ದಾರೆ ನೀನು ಅದನ್ನೇ ನಂಬು. ದೆವ್ವದ ಸೇಡು ತೀರಿತು. ದೆವ್ವದ ನೆರಳಾದರೂ ಸ್ವಲ್ಪ ಕಾಲ ಕಾಮುಕರ ಮನಸಲ್ಲಿ ಇರಲಿ.!"
"ಅಕ್ಕಾ ನಡೀರಿ ಮಳೆ ಜೋರಾಯ್ತು ದೊಡ್ಡಮ್ಮೋರ್ಗೆ ಎಚ್ಚರ ಆದ್ರೆ ಕಷ್ಟ!"
ಎಂದು ಕೊಡೆ ಹಿಡಿದು ಬಂದ ನಿಂಗ ರುದ್ರೇಶನನ್ನು ನೋಡಿ ಅಲ್ಲಿಯೇ ನಿಂತುಬಿಟ್ಟಾಗ ಅವನನ್ನು ಎಚ್ಚರಿಸಿದ ಪಾರ್ವತಿ
"ಗುಡ್ ನೈಟ್ ರುದ್ರೇಶ್,ನೀನೊಮ್ಮೆ ನಿನ್ನ ತಾಯಿಯನ್ನು ನೆನೆಸಿಕೋ ಆಗ ನಿನಗೇ ಸಮಾಧಾನ ಸಿಗಬಹುದು!" ಎಂದು ನಿಂಗನೊಡನೆ ಹೆಜ್ಜೆ ಹಾಕುತ್ತ ಕತ್ತಲಲ್ಲಿ ಕರಗಿ ಹೋಗುತ್ತಿದ್ದವಳನ್ನು ಕಣ್ಣು ಬಿಟ್ಟು ನೋಡುತ್ತಲೇ ಇದ್ದು ಬಿಟ್ಟಿದ್ದ ರುದ್ರೇಶ್.
0 Followers
0 Following