ಅವಳ ನಲುಮೆಯ ಸಾಗರದಿಂದ..

ಮನದ ತಲ್ಲಣಗಳನ್ಯಾವುದನ್ನೂ ಮಾತುಗಳಲ್ಲಿ ವ್ಯಕ್ತಪಡಿಸಲಾಗದ ಅವಳುಸಿರ ಮೌನ ನನ್ನನ್ನೂ ಆವಾಹಿಸಿಕೊಂಡಿರುವಾಗ, ಅವಳ ನಲುಮೆಯ ಸಾಗರದಿಂದ ಒಂದು ಚಿಟಿಕೆಯಾದರೂ ನನ್ನೊಳಗೆ ಪ್ರವಹಿಸಲಿ

ProfileImg
27 Jan '24
4 min read


image

‘ಅಬ್ಬ’ ಎಂಬ ಮೊದಲ ಗೆಳತಿ

ಅಮ್ಮನ ದೂರದ ಸಂಬಂಧಿಯಾದ ಆಕೆ, ಅಮ್ಮ ಮತ್ತು ಅವಳಮ್ಮ ಇಬ್ಬರಿಗೂ ಆಸರೆಯಾಗಿದ್ದಳು. ನನ್ನ ಅಪ್ಪ-ಅಮ್ಮನ ಮದುವೆ ಮಾಡಿಸಲು ನೆರವಾಗಿದ್ದಳು. ಅಮ್ಮ ಅವಳನ್ನು ಮಾಮಾ (ಅತ್ತೆ) ಎಂದು ಕರೆಯುತ್ತಿದ್ದಳು. ನಾವು ಮಕ್ಕಳು ‘ಅಬ್ಬ’ ಅನ್ನುತ್ತಿದ್ದೆವು. ಅಬ್ಬ ನನಗೆ ಸಿಕ್ಕಿದ ಮೊದ ಮೊದಲ ಗೆಳತಿಯಾಗಿದ್ದಳು. ನನ್ನ ಉಳಿದ ಅಜ್ಜಿಯರು ಗಂಡು ಮಕ್ಕಳ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತಿದ್ದರೆ, ಅಬ್ಬ ಮಾತ್ರ ಪ್ರೀತಿಯನ್ನು ಸಮಾನವಾಗಿ ಹಂಚಿ ಉಣ್ಣುತ್ತಿದ್ದಳು. ಬಾಲ್ಯದಲ್ಲಿ ಅಬ್ಬ ನನಗೆ ಕಥೆಗಳನ್ನು ಹೇಳುತ್ತಿದ್ದಳು. ಇವತ್ತಿನ ನನ್ನ ಓದು, ಬರಹಗಳು ಅನಕ್ಷರಸ್ಥಳಾದ ಅವಳ ಅರಿವಿನ ನೆರಳಿನಂತೆ ಅನಿಸುತ್ತದೆ. ಬಾಲಮಂಗಳ ಮತ್ತು ಅಪರೂಪಕ್ಕೆ ಚಂದಮಾಮ ಓದಲು ಸಿಗುತ್ತಿದ್ದ ಬಾಲ್ಯದ ದಿನಗಳವು. ಸಣ್ಣ ವಯಸ್ಸಿಂದಲೇ ನನ್ನ ಅಬ್ಬನಿಗೆ ಮಹಾಭಾರತವನ್ನು ಓದಿ ಹೇಳುತ್ತಿದ್ದೆ. ಎಷ್ಟು ಕೇಳಿದರೂ ಸಾಕಾಗದ ಅಬ್ಬ ಮತ್ತು ಎಷ್ಟು ಭಾರಿಯಾದರೂ ಓದಿ ಹೇಳಲು ಉತ್ಸುಕನಾದ ನಾನು; ಮಹಾಭಾರತದ ಪಾತ್ರಧಾರಿಗಳಾಗಿದ್ದೆವು. ವಾರಪತ್ರಿಕೆ ಹೊರತುಪಡಿಸಿದರೆ ಆ ಕಾಲದಲ್ಲಿ ಮನೆಯಲ್ಲಿದ್ದ ಪುಸ್ತಕವೆಂದರೆ ಅದೊಂದೆ ಆಗಿತ್ತು. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಕಾದು ಕೂತು ಓದುತ್ತಿದ್ದುದು ತರಂಗ ವಾರಪತ್ರಿಕೆಯನ್ನು. ಬುಧವಾರ ಮನೆಗೆ ತರಂಗ ಬರ್ತಾ ಇತ್ತು. ಅಮ್ಮ ಓದ್ತಾ ಇದ್ರು. ಜೊತೆಗೆ ನಾನೂ ಓದುತ್ತಿದ್ದೆ. ಪ್ರತೀ ಬುಧವಾರ ತರಂಗಕ್ಕಾಗಿ ಕಾಯುತ್ತಲಿದ್ದೆ. ಅದರಲ್ಲಿನ ‘ಆಘಾತ’ ಧಾರಾವಾಹಿಯನ್ನು ಅಮ್ಮ ಓದುತ್ತಿದ್ದರು, ಅದರಿಂದಾಗಿ ನಾನೂ ಓದುತ್ತಿದ್ದೆ. ಆ ಕಾದಂಬರಿ ಸಿನಿಮಾ ಆಯ್ತು. ಶ್ರುತಿ ಅಭಿನಯದಲ್ಲಿ ಸುರೆಶ್ ಹೆಬ್ಳೀಕರ್ ಸಿನಿಮಾ ಮಾಡಿದ್ರು. ಮೊನ್ನೆ ಅದ್ಯಾವುದೋ ಹಾಡಿಗಾಗಿ ಯೂಟ್ಯೂಬ್ ಜಾಲಾಡುತ್ತಿದ್ದರೆ, ಆ ಸಿನಿಮಾ ಕಣ್ಣಿಗೆ ಬಿದ್ದು, ನೆನಪ ಕೊಂಡಿಯೊಂದು ಹಠಾತ್ತನೆ ಹಿಂದಕ್ಕೆಳೆದೊಯ್ದಿತು. ಕೊಂಡಿಗೆ ಕೊಂಡಿ ಸೇರಿ ನೆನಪು ಸರಪಳಿಯಾಗತೊಡಗಿದವು. 

ಕಥೆಗಳನ್ನು ಹೇಳುತ್ತಲೇ, ನನ್ನ ಬಾಲ್ಯ ಮುಗಿಯುವ ಮೊದಲೇ ನಮ್ಮನ್ನು ಬಿಟ್ಟು ಹೋದ ಅಬ್ಬ ಕಥೆಯಾಗಿ ಬಿಟ್ಟಳು. ಅವಳ ಬಗ್ಗೆ ಕಥೆ, ಕವಿತೆಗಳನ್ನು ಬರೆದರೂ, ಅವಳನ್ನು ಮೀರಲಾಗದೆ ಹೋದೆ ನಾನು. ಇತ್ತ, ಅಮ್ಮ ಓದುವುದನ್ನು ನಿಲ್ಲಿಸಿ ಹಲವು ವರ್ಷಗಳೇ ಆಗಿವೆ. ಆಘಾತ ಸಿನಿಮಾದಿಂದಾಗಿ, ನೆನಪಿನ ಸುರುಳಿಯಲ್ಲಿ ಅಮ್ಮನ ಬದುಕು ಸುಳಿದಿತ್ತು. ಹೇಳಲಾಗದ ವಿಷಾದದ ಸುಳಿಯದು. ಆ ನಾಯಕಿಯ ಪಾತ್ರದಲ್ಲಿ ಅಮ್ಮ ತನ್ನನ್ನು ತಾನು ಕಲ್ಪಿಸಿಕೊಂಡಿದ್ದಳಾ? ಗೊತ್ತಿಲ್ಲ. ಆ ಕಾಲಘಟ್ಟದಲ್ಲಿ ಮದುವೆಗೆ ಕೊರಳು ಕೊಟ್ಟ ಬಹುತೇಕ ಹುಡುಗಿಯರಂತೆ, ಆಘಾತಗಳ ಲೋಕದಲ್ಲಿ ಪಯಣಿಸಿ ಜರ್ಜರಿತಳಾಗಿದ್ದಳೆಂಬುದು ಗೊತ್ತು. ಮೆಕ್ಸಿಕನ್ ಬರಹಗಾರ ‘ಹ್ವಾನ್ ರುಲ್ಫೋ’ ನ ಕಾದಂಬರಿ ಮತ್ತು ಕಥೆಗಳನ್ನು ‘ಬೆಂಕಿಬಿದ್ದ ಬಯಲು ಮತ್ತು ಪೆದ್ರೋ ಪರಾಮೊ’ ಎಂಬ ಹೆಸರಿನಲ್ಲಿ ‘ಓ ಎಲ್ ನಾಗಭೂಷಣ ಸ್ವಾಮಿ’ ಕನ್ನಡಕ್ಕೆ ಅನುವಾದಿಸಿದ್ದಾರೆ. ನೆನಪುಗಳು ಎದ್ದು ಬಂದು ಎದೆ ಪರಚುವಂತೆ, ಸತ್ತವರು ಎದ್ದು ಮಾತನಾಡುತ್ತಿದ್ದ ಹಲವು ಪಾತ್ರಗಳಿದ್ದವು ಆ ಪುಸ್ತಕದಲ್ಲಿ. ಅದರಲ್ಲಿ ಬರುವ ಹೆಣ್ಣು ಪಾತ್ರಗಳು ನನ್ನ ಅಮ್ಮನಂತಹ ಹಲವಾರು ಹೆಣ್ಣುಗಳ ಪ್ರತಿಬಿಂಬದಂತೆ ಅನಿಸಿತ್ತು. 

ನಾನು ಗುರುವಾರ ಹುಟ್ಟಿದ್ದೆ. ಅವಳಿಗದು ಮೊದಲ ಹೆರಿಗೆ. ಬುಧವಾರ ರಾತ್ರಿ ಅದೆಷ್ಟು ನೋವುಂಡಿದ್ದಳೋ ಏನೋ ! ನೆನಪಿನ ಪ್ರಸವದ ಹಿಂದೆಯೇ ಠಳ್ಳೆನ್ನುವುದು ನೋವಿನ ಝಲಕ್. ಎಂದೂ ಬಿಡದೇ ಕಾಡುವ, ಅಳಿಸುವ, ಆಳುವ, ಬದುಕಿಸುವ, ಪೊರೆಯುವ, ಭಾವದಲೆಯಲ್ಲಿ ತೇಲಿಸುವ ಆಕೆ ನನ್ನೊಳಗಿನ ಶಾಂತಸಾಗರದಲ್ಲಿ ಸುಪ್ತವಾಗಿ ಬಿಡದೇ ಮುಲುಗುತ್ತಿರುವ ಜ್ವಾಲಾಮುಖಿಯೇ ಆಗಿದ್ದಾಳೆ. ನನ್ನೆಲ್ಲಾ ಹುಚ್ಚು ಆಲೋಚನೆಗಳಿಗೆ ಮುನ್ನುಡಿಯಾಗಿ, ಜಗದ ಸತ್ಯಗಳನ್ನರಿಯುವಾಗಿನ ಕನ್ನಡಿಯಾಗಿ ಎದೆಮಧ್ಯದಿ ಅಜರಾಮರ ಸ್ಥಾಪಿತೆ. ಪುರುಷಾಧಿಪತ್ಯದ ಕೋಟೆಯಿಂದ ಹೊರಬರುವ ಪ್ರಯತ್ನಕ್ಕೆ, ಇದಾವುದರ ಅರಿವಿಲ್ಲದೆಯೂ ಮೂಲ ಕಾರಣಳಾದವಳು ಅಮ್ಮ.

ಯಕ್ಷಗಾನ

‘ಆಘಾತ’ ಸಿನಿಮಾ ನೋಡಿ ಫೇಸ್ಬುಕ್ ಒಳಹೊಕ್ಕರೆ, ಗೆಳತಿ ಯಕ್ಷಗಾನ ಕುರಿತಾಗಿ ಹಾಕಿದ್ದ ಸ್ಟೇಟಸ್ ನೋಡಿ ಮತ್ತೆ ಮನಸ್ಸು ಹಿಂದಕ್ಕೋಡಿತ್ತು. ಮತ್ತದೇ ಬುಧವಾರದ ನೆನಪು. ಪ್ರತೀ ಬುಧವಾರ 9:30 ಗಂಟೆ ಆಗೋದಿಕ್ಕೆ ಕಾಯ್ತಾ ಕೂತಿರ್ತಿದ್ವಿ ನಾನು ಮತ್ತು ಪೊಪ್ಪ. ಅಮ್ಮ ಕೂಡಾ ಕಿವಿಯಾಗ್ತಿದ್ರು. ಒಂಬತ್ತೂವರೆಗೆ ಸರಿಯಾಗಿ ರೇಡಿಯೋದಲ್ಲಿ ತಾಳಮದ್ದಳೆ ಶುರುವಾಗ್ತಾ ಇತ್ತು‌. ಭಾಗವತರ ಕಂಚಿನ ಕಂಠ ಮೊಳಗಲಾರಂಭಿಸುತಿತ್ತು. ಪೌರಾಣಿಕ ಪಾತ್ರಗಳ ಅಬ್ಬರ, ಮಧ್ಯೆ ಬರುವ ನಕ್ಕು ನಗಿಸುವ ವಿದೂಷಕರ ನಡುವೆ ಪುರಾಣ ಕಥೆಗಳು ಸಾಗ್ತಾ ಇದ್ದವು. ಅರ್ಧಗಂಟೆ ಕಳೆದದ್ದು ಗೊತ್ತೇ ಆಗ್ತಿರ್ಲಿಲ್ಲ. ದೇಹವೆಲ್ಲ ಕಿವಿಯಾಗಿಸಿ ಕೇಳುತ್ತಿದ್ದ ಯಕ್ಷಗಾನವೆಂಬುದು ಅವತ್ತಿನ ಬಾಲ್ಯದ ಕೌತುಕದ ಮನಕ್ಕೆ ಅಪಾರ ಆನಂದವೀಯುತ್ತಿತ್ತು. ಯಕ್ಷಗಾನ ಸುತ್ತಮುತ್ತ ನಡೆಯುತ್ತಿತ್ತಾದರೂ, ಬಾಲ್ಯ ಕಳೆಯುತ್ತಿದ್ದಂತೆ ಟಿವಿ, ಸಿನಿಮಾಗಳ ಹಾವಳಿಗಳಿಂದಾಗಿ ಅದರ ಮೇಲಿದ್ದ ಆಕರ್ಷಣೆ ಕುಂಠಿತವಾಗಿತ್ತು. ಕೆಲವು ಬಾರಿ ಯಕ್ಷಗಾನಗಳಿಗೆ ಹೋಗಿರುವೆನಾದರು ಅಮ್ಮನೊಂದಿಗೆ ಹೋದ ಆ ರಾತ್ರಿ ಯಾಕೋ ಮರೆಯಲಾಗಿಲ್ಲ.

ಮನೆಗೆ ಟಿವಿ ಬಂದ ಹೊಸತು, ಆಗ ತಾನೆ ಸಿನಿಮಾ ಗುಂಗು ಹಿಡಿಯಲಾರಂಭಿಸಿದ ಬಾಲ್ಯದ ದಿನಗಳು. ಶಾಲಾ ಮೈದಾನದಲ್ಲಿ ರಾತ್ರಿಯಿಡಿ ಯಕ್ಷಗಾನ ನಡೆದಿತ್ತು. ಅರ್ಧ ಆಟ(ಯಕ್ಷಗಾನ) ಮುಗಿಯುವವರೆಗೂ ಅಮ್ಮನ ಜೊತೆ ಇದ್ದು, ಮಧ್ಯದಲ್ಲಿ ಎದ್ದು ಹೊರಗೆ ಬಂದಿದ್ದೆ. ಆ ದಿನ ಬೆಳಿಗ್ಗೆಯಷ್ಟೆ ಅಪ್ಪನ ಪರ್ಸಿಂದ ಕದ್ದ ಇಪ್ಪತ್ತು ರೂಪಾಯಿಯ ನೋಟು ಚಡ್ಡಿ ಕಿಸೆಯಿಂದ ಕೈಗೆ ಬಂದಿತ್ತು. ಬೆಳಗ್ಗಿನವರೆಗೆ ಆಟದ ಟೆಂಟಿನ ಹೊರಗೆಯೇ ಇದ್ದೆ. ಅಲ್ಲಿನ ತಾತ್ಕಾಲಿಕ ಗೂಡಂಗಡಿಗಳಲ್ಲಿ ಕೈಯಲ್ಲಿದ್ದ ದುಡ್ಡು ಮುಗಿಯುವವರೆಗೂ ತಿಂದು, ಬಡ ಕುಡುಕರ ಮಂಗಾಟಗಳನ್ನು ನೋಡುತ್ತಾ ಬೆಳಗ್ಗೆ ಟೆಂಟೊಳಗೆ ಹೋಗಿದ್ದೆ. ಅಮ್ಮನ ಮುಖ ಗಂಟಿಕ್ಕಿತ್ತು. ಏನೂ ಮಾತಾಡದೆ ಜೊತೆ ನಡೆದಿದ್ದಳು. ಅಮ್ಮ ಸಿಡುಕುತ್ತಿರಲಿಲ್ಲ. ಅವಳ ಮನಸ್ಸು ಅಸ್ತವ್ಯಸ್ತವಾಗಿತ್ತು. ಎಂದಿನ ಅಸ್ವಸ್ಥತೆ ಉಲ್ಬಣಿಸಿದ್ದು ಮುಖದಲ್ಲಿ ಸ್ಪಷ್ಟವಾಗಿತ್ತು. ಬೆಳಗ್ಗಿನವರೆಗೆ ಅವಳೊಬ್ಬಳನ್ನೆ ಬಿಟ್ಟು ಬಂದಿದ್ದ ಅಪರಾಧಿ ಭಾವ ನನ್ನನ್ನಾವರಿಸಿತ್ತು. ಇವತ್ತಿಗೂ ಕಾಡುವ ಆ ದಿನ ಬುಧವಾರದ ರೇಡಿಯೋದ ಯಕ್ಷಗಾನದೊಂದಿಗೆ ತಳುಕು ಹಾಕಿಕೊಂಡಿದೆ. ಇವತ್ತು ನಗರಗಳ ಸುಸಜ್ಜಿತ ರಂಗಮಂದಿರಗಳಲ್ಲಿ ಮಂಗಳೂರಿನ ಈ ಕಲಾಪ್ರಕಾರವು ಪ್ರದರ್ಶಿತವಾಗುತ್ತಿದೆ. ನಾಟಕಗಳಂತೆ ಯಕ್ಷಗಾನವು ಬಡವರ ಬಯಲಾಟದಿಂದ ನಗರದ ಸೀಮಿತ ಕಲಾಸ್ವಾದಕರಿಗಾಗಿಯಷ್ಟೆ ನಡೆಯುತ್ತಿರುವಂತೆ ತೋರುತ್ತಿದೆ. ಬಯಲಿಗೆ ಗೋಡೆ ಕಟ್ಟಿ, ಕಲೆಯನ್ನು ಬಂಧಿಸಿಡುವಲ್ಲಿ ವ್ಯಸ್ತರು ನಮ್ಮ ಜನ. ಅಮ್ಮನ ಅಸ್ತವ್ಯಸ್ತ ನೋಟ ಮತ್ತು ರೇಡಿಯೋದ ಗುರ್ರ್ರ್ರ್ರ್ರ್ ಸದ್ದು ಮಾತ್ರ ಮನದಲ್ಲಿ ಅಚ್ಚೊತ್ತಿದಂತಿದೆ.

ನೆನಪಿಗೆ ತುಕ್ಕು ಹಿಡಿಯುವುದಿಲ್ಲ !

ಖುಷಿ-ದುಃಖ, ಕಾಮ-ಪ್ರೇಮ, ಜಗತ್ತಿನ ಪ್ರ್ಯಾಕ್ಟಿಕಲ್ ವ್ಯವಹಾರಗಳೆಲ್ಲವೂ ಒಂದು ಭ್ರಮೆ ಅನ್ನಿಸುವ ಹೊತ್ತಿಗೆ, ತನ್ನ ಬದುಕಿನ ಪರಿವೆಯೇ ಇಲ್ಲದೇ ಬದುಕೆಂಬುದು ಭ್ರಮೆ ಎಂಬಂತೆ ಬದುಕುತ್ತಿರುವ ‘ಅಮ್ಮ’ ನಿಗೂಡ ತತ್ವಜ್ಞಾನಿಯೇನೋ ಅಂತನ್ನಿಸುತ್ತಿರುತ್ತದೆ. ಕೋಳಿ ಮಾಂಸ ಪ್ರಿಯೆಯಾದ ಅವಳು ಮಾಂಸ ಜಗಿಯುವುದನ್ನು ನೋಡುವುದೇ ಚಂದ. ಮನುಷ್ಯರ ದೇಹಕ್ಕೆ ಅತಿ ಮುಖ್ಯವಾಗಿ ಬೇಕಾದದ್ದು ಆಹಾರ ಮತ್ತು ನಿದ್ರೆ ಎಂಬುದನ್ನು ತನಗೆ ಗೊತ್ತಿಲ್ಲದೆಯೇ ಪರಿಪಾಲಿಸುತ್ತಾಳೆ. ಬದುಕನ್ನು ಇಂಚಿಂಚಾಗಿ ಅನುಭವಿಸಬೇಕು, ಬದುಕಿನ ಒಲವು ಮತ್ತು ನೋವಿನ ಆಳಕ್ಕಿಳಿಯಬೇಕೆಂದು ನಾನು ಚಡಪಡಿಸುವಾಗ, ತನ್ನ ಬದುಕಿನ ಮತ್ತು ಸುತ್ತಲಿನ ಜಗದ ಗೊಡವೆಯೇ ಇಲ್ಲದೆ ಬದುಕುತ್ತಿರುವ ಆಕೆಯ ಒಳಗನ್ನು ಅರಿಯಲಾಗದ ವೇದನೆ ಆಳವಾಗಿ ಕೆಣಕುತ್ತದೆ. 

ಬುದ್ದಿಯಿಲ್ಲದ ವಯಸ್ಸಲ್ಲಿ , ತಾಯೆಂಬ ಮಮಕಾರ ಮರೆತು ದರ್ಪದಿಂದ ವರ್ತಿಸಿದ ನೆನಪುಗಳು ಹನಿಗಳಾಗಿ ಕೆನ್ನೆ ಸವರುತ್ತವೆ. ನಾನಿನ್ನೂ ಅವಳ ಗರ್ಭದೊಳಗಿಂದ ಹೊರ ಬಂದಿಲ್ಲವೆಂಬ ಭಾವ ಆವಾಗಾವಾಗ ಆವರಿಸುತ್ತದೆ. ಅವಳ ಮೆದುಳ ನರಗಳ ನೆರಳೇ ನನ್ನ ಆಲೋಚನೆಗಳಾಗಿ ಬೆಳೆಯುತ್ತಿವೆ ಎಂದನಿಸುತ್ತದೆ. ಇಡೀ ಲೋಕವೇ ಮುಷ್ಟಿಯೊಳಗೆಂದು ಭಾವಿಸುತ್ತಿರುವವನಿಗೆ ಹಠಾತ್ತನೆ ಅವಳೆದೆಯೊಳಗೇ ಅಲೆದಾಡುತ್ತಿರುವಂತೆ ಭಾಸವಾಗುತ್ತದೆ. ಲೋಕದ ಕಣ್ಣಿಗೆ ಅಸ್ಪಷ್ಟ ಬಣ್ಣಗಳ ಯಾರೂ ನೋಡದ ಚಿತ್ರ ಅವಳು. ಅವಳೊಳಗಿನ ಕೆಂಬಣ್ಣದಿಂದ ಸ್ರವಿಸಿ ಬಣ್ಣದ ಲೋಕದೊಳಗೆ ಸೇರಿಹೋದ ಮೂಢ ನಾನು. ಮನದ ತಲ್ಲಣಗಳನ್ಯಾವುದನ್ನೂ ಮಾತುಗಳಲ್ಲಿ ವ್ಯಕ್ತಪಡಿಸಲಾಗದ ಅವಳುಸಿರ ಮೌನ ನನ್ನನ್ನೂ ಆವಾಹಿಸಿಕೊಂಡಿರುವಾಗ, ಅವಳ ನಲುಮೆಯ ಸಾಗರದಿಂದ ಒಂದು ಚಿಟಿಕೆಯಾದರೂ ನನ್ನೊಳಗೆ ಪ್ರವಹಿಸಲಿ.

ಗಾಜಿನ ಲೋಟದಲ್ಲಿ ಬಿಯರಿನ ನೊರೆ ಉಕ್ಕುವಾಗ ಅಮ್ಮ ನೆನಪಾಗುತ್ತಾಳೆ. ಸಾರಾಯಿ ಇಲ್ಲದ ಬಾಟಲಿಯಂತೆ ಖಾಲಿಯಾಗಿರುವಾಗಲು ಅಮ್ಮ ನೆನಪಾಗುತ್ತಾಳೆ. ಸಾರಾಯಿ ಬಾಟಲಿಯೇ ಆಗಿ ಹೋದ ಅಪ್ಪ ಕಣ್ಣ ಮುಂದೆ ಹಾದು ಹೋಗುವಾಗಲೂ, ಅಮ್ಮನ ನೋವು ಕಣ್ಣಿಗಡರುತ್ತದೆ. ನೆನಪಿಗೆ ತಕ್ಕು ಹಿಡಿಯುವುದಿಲ್ಲ ಅನ್ನುವಾಗಲೇ, ಧ್ಯಾನ ಅದನ್ನೂ ಮೀರಿ ನಮ್ಮನ್ನು ಹಸಿಯಾಗಿಡುತ್ತದೆ. ಮರದ ಬೇರು ಮತ್ತು ಮರದ ಮೇಲಿರುವ ಹಕ್ಕಿ ಎರಡೂ ನಾವೇ ಆಗುವ ಧ್ಯಾನಸ್ಥ ಸ್ಥಿತಿ ಅಥವಾ ಚಟುವಟಿಕೆ ಎಲ್ಲಾ ಮಕ್ಕಳದು ಆಗಿರುತ್ತದೆ. ಆ ಧ್ಯಾನಕ್ಕೆ, ನಮ್ಮೊಳಗಿನ ಪ್ರಕೃತಿಗೆ,  ಹಸಿತನದ ಹುಟ್ಟಿಗೆ ತಾಯಿ ಒಂದು ಕಾರಣಳು ಅಷ್ಟೇ. ಆಕೆಯು ಸಾಮಾನ್ಯ ಮನುಷ್ಯಳು. ಆದರೆ ಆಕೆಯನ್ನು ಸಹಜವಾಗಿರಲು ಬಿಡಲೇ ಇಲ್ಲ. ಅಮ್ಮ ಅನ್ನುವ ಪದವನ್ನು ದೇವತೆಯಾಗಿಸಿ ಮೂಲೆಗೆ ತಳ್ಳಿದ್ದಾರೆ. ಆಕೆಯನ್ನು ಸಾಧಾರಣ ಮನುಷ್ಯಳಾಗಿ ಬದುಕಲು ಬಿಡದೆ ಎತ್ತರಕ್ಕೇರಿಸಿ ನರಳಿಸಿದ್ದಾರೆ. ಅವಳನ್ನು ಹೆರುವ ಯಂತ್ರವಾಗಿಸಿದ್ದಾರೆ. ಹೆತ್ತಷ್ಟೂ ಬಡವಾಗುವ ಜೀವದ ಮೇಲೆ ತಾಯ್ತನದ ಹೆಸರಿನಲ್ಲಿ ಸಹನೆ, ತ್ಯಾಗಗಳನ್ನು ಹೇರಿದ್ದಾರೆ. ಅವಳ ಪ್ರೇಮವನ್ನು, ಸಿಟ್ಟನ್ನು, ಸಂದಿಗ್ಧತೆಗಳನ್ನು ಪೂರ್ತಿಯಾಗಿ ಹೊರಹಾಕಲು ಬಿಡದೆ ಬಂಧಿಸಿದ್ದಾರೆ. ಪವಿತ್ರತೆಯ ಆಪಾದನೆಯನ್ನು ಹೊರಿಸಿ, ಅವಳ ಆಸೆ-ಆಕಾಂಕ್ಷೆಗಳಿಗೆ ಕಡಿವಾಣ ಹಾಕಿದ್ದಾರೆ. ಆರ್ಥಿಕವಾಗಿ ಅಡಿಯಾಳಾಗಿಸಿ ಕೊಂದಿದ್ದಾರೆ. ಇವೆಲ್ಲಾ ಗೊತ್ತಿದ್ದೂ ಇಷ್ಟೆಲ್ಲಾ ಬರೆದು ಅಸಹಾಯಕತೆಯನ್ನು ಪ್ರದರ್ಶನಕ್ಕಿಡುವ ನನ್ನಂತವರ ಗೋಸುಂಬೆತನವನ್ನು ಅರ್ಥಮಾಡಿಕೊಳ್ಳಬೇಕಿದೆ…

ಬುಧವಾರ ಅಂದರೆ ನೆನಪಾಗುವುದೇ ಯಕ್ಷಗಾನ ಆಲಿಸುವ ಅಪ್ಪ ಮತ್ತು ತರಂಗ ಓದುತ್ತಿದ್ದ ಅಮ್ಮ. ಇವತ್ತಿಗೀಗ ಟಿವಿ ನ್ಯೂಸ್, ಬಿಗ್ಬಾಸುಗಳ ನಡುವೆ ಅಪ್ಪನಿಗೆ ಯಕ್ಷಗಾನ ಮರೆತು ಹೋದಂತಿದೆ. ಅಮ್ಮನಂತೂ ಮೌನ ಸಾಮ್ರಾಜ್ಞಿ..

Disclaimer: This post has been published by Guru Sullia from Ayra and has not been created, edited or verified by Ayra
Category:Personal Experience



ProfileImg

Written by Guru Sullia

Writer, Poet & Automobile enthusiast