ಈ ಜಗತ್ತಿನ ಅತ್ಯಂತ ಸುಂದರವಾದ ಪಕ್ಷಿಗಳ ಪಟ್ಟಿ ಮಾಡುತ್ತ ಹೋದರೆ ಅದರಲ್ಲಿ ಖಂಡಿತವಾಗಿಯೂ ನಮ್ಮ ದೇಶದ ನವಿಲಿಗೆ ಪ್ರಮುಖವಾದ ಸ್ಥಾನ ಸಿಕ್ಕೇ ಸಿಗುತ್ತದೆ. ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿದೆ ನಿಜ, ಆದರೂ ನವಿಲಿನ ಸೌಂದರ್ಯವನ್ನು ಯಾರೂ ಅಲ್ಲಗಳೆಯಲಾರರು. ನಮ್ಮ ದೇಶದ ರಾಷ್ಟ್ರೀಯ ಪಕ್ಷಿಯೂ ಆಗಿರುವ ನವಿಲು ನನಗೆ ಮೊದಲಿನಿಂದಲೂ ಕುತೂಹಲ ಉಂಟುಮಾಡಿದ ಪಕ್ಷಿ. ನಮ್ಮ ಮನೆಯ ಬಳಿ ರಾಜ್ಯ ಹೆದ್ದಾರಿ ಇದ್ದುದರಿಂದ ತೀರಾ ದೊಡ್ಡ ನಗರಗಳಂತಲ್ಲವಾದರೂ ಒಂದು ಮಟ್ಟದ ಗೌಜು-ಗಲಾಟೆ ಇದ್ದೇ ಇರುತ್ತಿತ್ತು. ಹಾಗಾಗಿ ನನಗೆ ಮನೆಯ ಬಳಿ ಎಲ್ಲೂ ನವಿಲುಗಳನ್ನು ನೋಡುವ ಅವಕಾಶವಿರಲಿಲ್ಲ. ನನ್ನ ಒಂದನೆಯ ತರಗತಿಯ ಪಠ್ಯಪುಸ್ತಕದಲ್ಲಿ ಸುಂದರವಾದ ನವಿಲಿನ ಚಿತ್ರ ಇತ್ತು. ಅದನ್ನು ನೋಡಿದಾಗಲೇ ನನಗೆ ನವಿಲಿನ ಬಗ್ಗೆ "ಲವ್ ಅಟ್ ಫಸ್ಟ್ ಸೈಟ್" (ಮೊದಲ ನೋಟದ ಪ್ರೇಮ) ಉಂಟಾಗಿದ್ದು ಎಂದರೆ ತಪ್ಪಾಗಲಾರದು. ಆದಷ್ಟು ಬೇಗ ನವಿಲನ್ನು ನೋಡಲೇ ಬೇಕೆಂಬ ಬಯಕೆ ನನ್ನಲ್ಲಿ ಉಂಟಾಗಿತ್ತು. ಅದುವರೆಗೂ ನಾನು ಜೀವಂತ ನವಿಲನ್ನು ಎಂದೂ ನೋಡಿರಲೇ ಇಲ್ಲ. ನನ್ನ ಪಾಲಿಗೆ ನವಿಲೆಂದರೆ ಕನ್ನಡ ಪಠ್ಯಪುಸ್ತಕದಲ್ಲಿದ್ದ ಚಿತ್ರ ಮತ್ತು ಗೆಳೆಯರು ಆಗೀಗ ಶಾಲೆಗೆ ತರುತ್ತಿದ್ದ ನವಿಲುಗರಿಗಳು. ಆ ನವಿಲುಗರಿಗಳ ಅಂದಚೆಂದಕ್ಕೆ ಮಾರುಹೋಗಿದ್ದ ನಾನು ಒಬ್ಬ ಸ್ನೇಹಿತನನ್ನು ಕಾಡಿಸಿ ಪೀಡಿಸಿ ಒಂದು ನವಿಲುಗರಿಯನ್ನು ನಾಲ್ಕು ಸೀಮೆಸುಣ್ಣಗಳಿಗೆ ಬದಲಾಗಿ ತಂದು ಮನೆಯಲ್ಲಿಟ್ಟುಕೊಂಡಿದ್ದೆ. ನನಗೆ ಅದು ಆ ವಯಸ್ಸಿನಲ್ಲಿ ಅಲ್ಲಾವುದ್ದೀನನ ಅದ್ಭುತ ದೀಪಕ್ಕಿಂತಲೂ ವಿಸ್ಮಯಕರ ವಸ್ತುವಾಗಿತ್ತು. ರಾತ್ರಿ ಮಲಗುವಾಗಲೂ ಅದನ್ನು ಪಕ್ಕದಲ್ಲೇ ಇಟ್ಟುಕೊಂಡು ಮಲಗುತ್ತಿದ್ದೆ.
ಆಗ ನಮ್ಮ ಮನೆಯಲ್ಲಿ ಒಂದು ಆಕಳು ಇತ್ತು. ಅಪ್ಪ ಅದಕ್ಕೆ ಹುಲ್ಲು ತರಲು ಆಗಾಗ ಗದ್ದೆಗೆ ಹೋಗುತ್ತಿದ್ದರು. ಒಂದು ದಿನ ಗದ್ದೆಯಿಂದ ಬಂದಾಗ ಹತ್ತಾರು ನವಿಲುಗಳನ್ನು ನೋಡಿದ್ದಾಗಿ ಹೇಳಿದರು. ಸರಿ, ನನ್ನ ಕನಸಿನ ನವಿಲು ನನ್ನ ಮನಸ್ಸಿನಲ್ಲೇ ರೆಕ್ಕೆ ಬಿಚ್ಚಿ ಹಾರಾಡತೊಡಗಿತು. ಮರುದಿನ ನನ್ನನ್ನೂ ಗದ್ದೆಗೆ ಕರೆದೊಯ್ಯುವಂತೆ ಅಪ್ಪನಿಗೆ ದುಂಬಾಲು ಬಿದ್ದೆ. ಅಪ್ಪ ಒಪ್ಪಿದರು. ಆ ರಾತ್ರಿಯಿಡೀ ನನಗೆ ಸರಿಯಾಗಿ ನಿದ್ರೆ ಬರಲೇ ಇಲ್ಲ. ಒಮ್ಮೊಮ್ಮೆ ಕಣ್ಣು ಮುಚ್ಚಿದಂತೆ, ತೂಕಡಿಕೆ ಬಂದಂತೆ ಭಾಸವಾಗುತ್ತಿತ್ತಾದರೂ ಆ ಮಂಪರಿನಲ್ಲೇ ಮನದ ತುಂಬ ಮಯೂರ ಸಾಮ್ರಾಜ್ಯ. ಥಟ್ಟನೇ ಎಚ್ಚರವಾಗಿಬಿಡುತ್ತಿತ್ತು. ಮರುದಿನ ಬೆಳಿಗ್ಗೆ ಅಪ್ಪನನ್ನು ಕಾಡಿಸಿ ಪೀಡಿಸಿ ಮಾಮೂಲಿಗಿಂತ ತುಸು ಬೇಗನೇ ಗದ್ದೆಗೆ ಹೊರಡಿಸಿದೆ.
ನಾವು ಗದ್ದೆಗೆ ಹೋಗುವ ದಾರಿಯಲ್ಲಿ ಎರಡೂ ಬದಿಗಳಲ್ಲಿ ದಟ್ಟವಾದ ಕಾಡು ಬೆಳೆದಿತ್ತು. ಹೋಗುವ ದಾರಿಯುದ್ದಕ್ಕೂ ನಮಗೆ ಮಯೂರಗಾನ ಕೇಳುತ್ತಲೇ ಇತ್ತು. ಆಗ ಅಪ್ಪ "ನಿನ್ನ ಅದೃಷ್ಟ ಚೆನ್ನಾಗಿದೆ. ತುಂಬಾ ನವಿಲುಗಳಿವೆ ಎನ್ನಿಸುತ್ತಿದೆ. ಬೇಗ ಹೋಗೋಣ ಬಾ" ಎಂದರು. ನಾನೂ ದಾಪುಗಾಲಿಕ್ಕುತ್ತ ಗದ್ದೆಯನ್ನು ಪ್ರವೇಶಿಸಿದೆ. ಆದರೆ ಅಲ್ಲಿ ನಾನು ನಿರೀಕ್ಷಿಸಿದ್ದ ದೃಶ್ಯ ನನ್ನ ಕಣ್ಣಿಗೆ ಕಾಣಿಸಲಿಲ್ಲ. ನಾನು ದಾರಿಯಲ್ಲಿ ಬರುವಾಗ ಕೇಳಿಸುತ್ತಿದ್ದ ನವಿಲಿನ ಕೂಗಿನ ಆಧಾರದ ಮೇಲೆ ಕನಿಷ್ಠ ನಾಲ್ಕೈದು ನವಿಲುಗಳಾದರೂ ಗದ್ದೆಯಲ್ಲಿ ಇರಬಹುದೆಂದು ಭಾವಿಸಿದ್ದೆ. ಆದರೆ ಅಲ್ಲಿ ಒಂದೇ ಒಂದು ನವಿಲೂ ಇರಲಿಲ್ಲ. ನನಗಾದ ನಿರಾಸೆಯನ್ನು ಪದಗಳಲ್ಲಿ ವರ್ಣಿಸಲಸಾಧ್ಯ. ಅಪ್ಪ ಹುಲ್ಲು ಕೊಯ್ದು ಮುಗಿಯುವ ತನಕ, ಅಂದರೆ ಮುಂದಿನ ಒಂದು ತಾಸು ನಾನು ಕಾಡಿನತ್ತಲೇ ದೃಷ್ಟಿ ನೆಟ್ಟು ನವಿಲು ಬರಬಹುದೆಂದು ಕಾಯುತ್ತ ಕುಳಿತಿದ್ದೆ. ಅವುಗಳ ಅಶರೀರವಾಣಿಯೇನೋ ಕಾಡಿನಿಂದ ನಿರಂತರವಾಗಿ ಕೇಳಿಸುತ್ತಲೇ ಇತ್ತಾದರೂ ಅವು ಕಾಡು ಬಿಟ್ಟು ಗದ್ದೆಗೆ ಬರುವ ಮನಸ್ಸು ಮಾಡಲೇ ಇಲ್ಲ. ಅಲ್ಲದೆ ಅವುಗಳನ್ನು ಹುಡುಕಿಕೊಂಡು ಶಬ್ದದ ಜಾಡು ಹಿಡಿಯುತ್ತ ಕಾಡು ನುಗ್ಗುವ ಧೈರ್ಯ ನನಗೆ ಆಗ ಇರಲಿಲ್ಲ. ಹಾಗಾಗಿ ಬಂದ ದಾರಿಗೆ ಸುಂಕವಿಲ್ಲವೆಂದು ನಿರಾಶನಾಗಿ ಹಿಂದಿರುಗಿದೆ. ಹೀಗಾಗಿ ನನ್ನ ನವಿಲು ನೋಡುವ ಆಸೆ ತಾತ್ಕಾಲಿಕವಾಗಿ ರೆಕ್ಕೆ ಮುರಿದುಕೊಂಡು ಗೂಡು ಸೇರಿತು.
ಹೀಗಿರುವಾಗ ನಮ್ಮ ಮನೆಯ ಬಳಿಯಲ್ಲೇ ವಾಸವಾಗಿದ್ದ ಅಜ್ಜ-ಅಜ್ಜಿ ಮನೆ ಬಿಟ್ಟು ಸ್ವಲ್ಪ ದೂರದ ಹಳ್ಳಿಯೊಂದರಲ್ಲಿ ಮನೆ ಮಾಡಿದರು. ಅವರ ಈ ಹೊಸ ಮನೆ ಮುಖ್ಯರಸ್ತೆಯಿಂದ ತುಂಬ ದೂರವಿದ್ದು, ಅಲ್ಲಿಗೆ ಖಾಸಗಿ ವಾಹನಗಳನ್ನು ಹೊರತುಪಡಿಸಿ ಬೇರಾವುದೇ ವಾಹನಗಳು ಹೋಗುತ್ತಿರಲಿಲ್ಲ. ಅಲ್ಲದೆ ಮನೆಯ ಸುತ್ತಮುತ್ತ ಕಾಡು, ಹೊಲಗದ್ದೆಗಳು ಸಾಕಷ್ಟಿದ್ದುದರಿಂದ ವನ್ಯಜೀವಿಗಳಿಗೆ ಅದೊಂದು ಅತ್ಯಂತ ಪ್ರಶಸ್ತವಾದ ವಾತಾವರಣವನ್ನು ಕಲ್ಪಿಸಿಕೊಟ್ಟಿತ್ತು. ಅಲ್ಲದೆ ಅಲ್ಲೆಲ್ಲ ತುಂಬಾ ನವಿಲುಗಳಿವೆ ಎಂದು ಅಜ್ಜ ಹೇಳಿದ್ದರಿಂದ ನನಗೆ ತುಂಬಾ ಖುಷಿಯಾಗಿತ್ತು. ಅವರ ಮನೆಗೆ ಹೋದಾಗಲೆಲ್ಲ ಮನದಣಿಯೆ ನವಿಲುಗಳನ್ನು ನೋಡಬಹುದೆಂದು ಸಂತಸಪಟ್ಟೆ. ಹೀಗಾಗಿ ಅಲ್ಲಿಗೆ ಮೊದಲಬಾರಿಗೆ ಹೋದಾಗಲೇ ಎಲ್ಲೆಲ್ಲಿ ಓಡಾಡಿದರೆ ನವಿಲುಗಳನ್ನು ನೋಡಬಹುದು ಎಂದೆಲ್ಲ ಅಜ್ಜನ ಬಳಿ ಕೇಳಿ ತಿಳಿದುಕೊಂಡು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ಆದರೆ ಮೊದಲ ದಿನವೇ ನನ್ನ ಉತ್ಸಾಹದ ಬಲೂನಿಗೆ ಸೂಜಿ ಚುಚ್ಚಿದ್ದು ಅಲ್ಲಿದ್ದ ಬೃಹದಾಕಾರದ ಎಮ್ಮೆಗಳು ಮತ್ತು ಕೋಣಗಳು. ನಾನು ಗೇಟಿನ ಬಳಿ ಹೋಗುತ್ತಿದ್ದಂತೆ ಅಲ್ಲೇ ಗೇಟಿನ ಹೊರಗೆ ಸ್ವಲ್ಪ ದೂರದಲ್ಲೇ ಭಾರೀ ಎಮ್ಮೆಯೊಂದು ಮೇಯುತ್ತ ನಿಂತಿತ್ತು. ಅದರ ಚೂಪಾದ ಕೊಂಬುಗಳು ಮತ್ತು ಇರಿಯುವಂಥ ಕಣ್ಣೋಟ ಕಂಡು ನನ್ನ ಎದೆ ಧಸಕ್ಕೆಂದಿತು. ಅದು ಒಂದು ಕ್ಷಣ ಮೇಯುವುದನ್ನು ನಿಲ್ಲಿಸಿ ಕತ್ತೆತ್ತಿ ನನ್ನತ್ತಲೇ ನೋಡತೊಡಗಿತು. ಅದರ ಮೇಲೆ ಸಾಕ್ಷಾತ್ ಪಾಶಧಾರಿಯಾದ ಯಮನೇ ಕುಳಿತು ನನ್ನತ್ತ ನೋಡಿ ಗಹಗಹಿಸಿದಂತೆ ಭಾಸವಾಯಿತು. ಗೇಟು ತೆರೆಯುವ ಧೈರ್ಯ ಸಾಲದೆ ಯಥಾಪ್ರಕಾರ ಅದನ್ನೇ ನೋಡುತ್ತ ನಿಂತೆ. ಅದು ಕೆಲವು ಕ್ಷಣ ನನ್ನತ್ತ ದಿಟ್ಟಿಸಿ ನೋಡಿ ಆಮೇಲೆ ತನ್ನ ಪಾಡಿಗೆ ತಾನು ಮೇಯತೊಡಗಿತ್ತು. ಹಾಗಾಗಿ ನನ್ನ ನವಿಲು ನೋಡುವ ಸಾಹಸಕ್ಕೆ ಮತ್ತೊಮ್ಮೆ ಅಲ್ಪವಿರಾಮ ಬಿತ್ತು.
ಇದಾಗಿ ಕೆಲವು ದಿನಗಳ ಬಳಿಕ ನಡೆದ ಒಂದು ಘಟನೆ ಎಮ್ಮೆಗಳ ಬಗ್ಗೆ ನನಗಿದ್ದ ಭಯವನ್ನು ಹೋಗಲಾಡಿಸಲು ಸಹಕಾರಿಯಾಯಿತು. ಒಮ್ಮೆ ನಾನು ಅಜ್ಜಿಯ ಜೊತೆ ಅವರ ಮನೆಗೆ ಹೋಗುತ್ತಿದ್ದೆ. ಆಗ ನನಗೆ ದಾರಿಯಲ್ಲಿ ಭಾರೀ ಎಮ್ಮೆ, ಕೋಣಗಳ ದರ್ಶನವಾಯಿತು. ನನಗೆ ಅವುಗಳನ್ನು ಕಂಡಾಗ ಮತ್ತೆ ಭಯ ಆವರಿಸಿಕೊಂಡಿತು. "ಅವು ನಮ್ಮ ಮೈಮೇಲೆ ಏರಿ ಬಂದು ಇರಿದರೆ ಏನು ಗತಿ?" ಎಂದು ಅಜ್ಜಿಯ ಬಳಿ ಕೇಳಿದೆ. "ಅವು ಏನೂ ಮಾಡುವುದಿಲ್ಲ. ತಮ್ಮ ಪಾಡಿಗೆ ತಾವು ಮೇಯುತ್ತಿರುತ್ತವೆ. ನೀನು ಸುಮ್ಮನೆ ಬಾ" ಎಂದರು. ನಾನಾದರೋ ಭಯದಿಂದ ಕ್ಷಣಕ್ಷಣಕ್ಕೂ ಹಿಂತಿರುಗಿ ನೋಡುತ್ತ ಹೋಗುತ್ತಿದ್ದೆ. ಆದರೆ ಅವು ಮಾತ್ರ ಅಮ್ಮ ಅಸ್ತಿತ್ವವನ್ನು ಗಣನೆಗೇ ತೆಗೆದುಕೊಳ್ಳದೆ ನಿರಾತಂಕವಾಗಿ ಮೇಯುತ್ತ ಇದ್ದವು. ನನಗೆ ಅದರಿಂದಾಗಿ ಅವುಗಳ ಬಗ್ಗೆ ಇದ್ದ ತಪ್ಪುಕಲ್ಪನೆಗಳು ಮಾಯವಾಗಿ ಭಯ ಸಾಕಷ್ಟು ಕಡಿಮೆಯಾಯಿತು.
ಕೆಲವು ದಿನಗಳ ನಂತರ ಒಮ್ಮೆ ನಾನು ಧೈರ್ಯ ಮಾಡಿ ಮತ್ತೊಮ್ಮೆ ಕಾಡಿನತ್ತ ಹೊರಟೆ. ಈ ಬಾರಿಯೂ ಮತ್ತೆ ಕೋಣವೊಂದು ಗೇಟಿನ ಬಳಿಯಲ್ಲೇ ಮೇಯುತ್ತ ನಿಂತಿತ್ತು. ಎದೆ ಡವಗುಟ್ಟುತ್ತಿದ್ದರೂ ಧೈರ್ಯ ಮಾಡಿ ಗೇಟು ತೆಗೆದು ಹೊರಗೆ ಕಾಲಿಟ್ಟೆ. ಆ ಕ್ಷಣ ಕೋಣ ಮೇಯುವುದನ್ನು ನಿಲ್ಲಿಸಿ ನನ್ನತ್ತ ನೋಡತೊಡಗಿತು. ಮತ್ತೆ ನನ್ನ ಭಯ ಮರುಕಳಿಸಿತು. ಆದರೂ ಹುಂಬ ಧೈರ್ಯ ಮಾಡಿ ಎರಡು ಹೆಜ್ಜೆ ಮುಂದಿಟ್ಟೆ. ಕೋಣ ಅಷ್ಟಕ್ಕೇ ಸುಮ್ಮನಾಗಿ ನನಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಮೇಯಲಾರಂಭಿಸಿತು. ಇನ್ನೇನೂ ತೊಂದರೆಯಿಲ್ಲವೆಂದು ನಾನು ನಿಶ್ಚಿಂತನಾಗಿ ಗದ್ದೆಯತ್ತ ಹೊರಟೆ. ಗದ್ದೆಗೆ ಹೋಗುವ ದಾರಿಯಲ್ಲಿ ನಾನು ಕನಿಷ್ಠ ಹತ್ತಾದರೂ ಎಮ್ಮೆ-ಕೋಣಗಳನ್ನು ಕಂಡಿರಬಹುದು. ಅವೆಲ್ಲವೂ ಒಂದು ಕ್ಷಣ ಕುತೂಹಲದಿಂದ ನನ್ನತ್ತ ದೃಷ್ಟಿಸಿ ಮತ್ತೆ ತಮ್ಮ ಪಾಡಿಗೆ ತಾವು ಮೇಯಲು ತೊಡಗಿದವೇ ಹೊರತು ನನ್ನತ್ತ ಕನಿಷ್ಠ ಆಸಕ್ತಿಯನ್ನೂ ತೋರಿಸಲಿಲ್ಲ. ಅವುಗಳನ್ನು ಸುಮ್ಮನೆ ಬಿಟ್ಟರೆ ಅವು ನನಗೇನೂ ಮಾಡುವುದಿಲ್ಲವೆಂದು ನನಗೆ ಮನವರಿಕೆಯಾಯಿತು. ಯಾವುದೇ ಪ್ರಾಣಿಯಾದರೂ, ಅದು ಕಾಡುಪ್ರಾಣಿಯಿರಲಿ ಅಥವಾ ಸಾಕುಪ್ರಾಣಿಯಿರಲಿ ನಾವೇನೂ ಅವಕ್ಕೆ ತೊಂದರೆ ಮಾಡದಿದ್ದರೆ ಅವೂ ನಮಗೆ ತೊಂದರೆ ಮಾಡಲಾರವು ಎಂಬ ಪಾಠವನ್ನು ಕಲಿತೆ. ಹಾಗೇ ಸೀದಾ ಗದ್ದೆ ಬಯಲಿನ ತನಕ ಹೋದೆ. ಆ ದಿನ ನನಗೆ ನವಿಲುಗಳೇನೂ ಕಾಣದಿದ್ದರೂ ಕೂಡ ಗದ್ದೆಯಲ್ಲಿ ಸುತ್ತಾಡಿ ಅಲ್ಲಿನ ಸುತ್ತಮುತ್ತಲಿನ ಪರಿಸರವನ್ನು ಪರಿಚಯ ಮಾಡಿಕೊಂಡೆ.
ಇದಾದ ನಂತರ ನನಗೆ ಕೋಣಗಳ ಬಗೆಗಿನ ಭಯ ಸಂಪೂರ್ಣ ಹೊರಟುಹೋಯಿತು. ಹಾಗಾಗಿ ಒಬ್ಬನೇ ನವಿಲು ನೋಡಲು ಧೈರ್ಯವಾಗಿ ಕಾಡಿಗೆ ಹೋಗುತ್ತಿದ್ದೆ. ಆದರೆ ನನಗೆ ಮೊದಮೊದಲು ವನ್ಯಜೀವಿಗಳ ವೀಕ್ಷಣೆಗೆ ಅಗತ್ಯವಾದ ತಾಳ್ಮೆಯಾಗಲಿ, ಕೌಶಲ್ಯವಾಗಲಿ ಅಥವಾ ನಿಶ್ಶಬ್ದವಾಗಿ ಚಲಿಸುವ ಚಾಕಚಕ್ಯತೆಯಾಗಲಿ ಇರಲಿಲ್ಲ. ಗೂಳಿಯಂತೆ ಎಲ್ಲೆಂದರಲ್ಲಿ ನುಗ್ಗುತ್ತಿದ್ದೆ. ಹಾಗಾಗಿ ಎಷ್ಟೋ ದೂರದಿಂದಲೇ ನನ್ನ ಸುಳಿವು ಸಿಕ್ಕಿ ನವಿಲುಗಳೆಲ್ಲ ಪರಾರಿಯಾಗುತ್ತಿದ್ದವು. ಹಾಗಾಗಿ ಕಿವಿಗೆ ಕೇಳಿಸುತ್ತಿದ್ದ ನವಿಲುಗಳು ಕಣ್ಣಿಗೆ ಕಾಣಿಸುತ್ತಿರಲಿಲ್ಲ. ನನಗೆ ನಾನು ಎಲ್ಲಿ ಎಡವುತ್ತಿದ್ದೇನೆಂದು ಅರ್ಥವಾಗುತ್ತಿರಲಿಲ್ಲ. ಹೀಗಿರುವಾಗ ಒಂದು ದಿನ ಅಪ್ಪನ ಜೊತೆ ಗದ್ದೆಯಲ್ಲಿ ಹೋಗುತ್ತಿದ್ದಾಗ ಅಪ್ಪ ಒಂದು ನವಿಲನ್ನು ತೋರಿಸಿದರು. ನಮ್ಮಿಂದ ಸುಮಾರು ಐವತ್ತು ಮೀಟರ್ ದೂರದಲ್ಲಿದ್ದ ಅದರ ತಲೆ ಮತ್ತು ಜುಟ್ಟು ಮಾತ್ರ ನನಗೆ ಅಸ್ಪಷ್ಟವಾಗಿ ಕಾಣಿಸಿತು. ನಾವು ಅತ್ತ ಹೋಗಬೇಕೆಂದುಕೊಳ್ಳುವಷ್ಟರಲ್ಲಿ ಯಾರೋ ಅತ್ತ ಹೋಗಿದ್ದರಿಂದ ನವಿಲು ಗಾಬರಿಯಾಗಿ ಕಾಡಿನತ್ತ ಓಡಿ ಮಾಯವಾಯಿತು.
ನಾನು ಮೊದಲಬಾರಿಗೆ ನವಿಲನ್ನು ಹತ್ತಿರದಿಂದ ನೋಡಿದ ಸನ್ನಿವೇಶವನ್ನು ನೆನಪಿಸಿಕೊಂಡರೆ ಈಗಲೂ ನಗು ಉಕ್ಕಿ ಬರುತ್ತದೆ. ಅದೊಂದು ದಿನ ನಾನು ಅಜ್ಜನ ಮನೆಯ ಗೇಟು ತೆರೆದು ಹೊರಗೆ ಹೊರಟಿದ್ದೆ. ಗೇಟಿನಿಂದ ಸುಮಾರು ಹತ್ತು ಮೀಟರ್ ದೂರದಲ್ಲಿ ಒಂದು ತಿರುವಿದೆ. ಆ ತಿರುವಿನ ಬಳಿ ಒಂದು ನವಿಲು ನಿಂತಿರುವುದು ನನಗೆ ಕಾಣಿಸಿತು. ಅದು ಏನನ್ನೋ ತಿನ್ನುವುದರಲ್ಲಿ ಮಗ್ನವಾಗಿತ್ತು. ಹಾಗಾಗಿ ಸದ್ದಿಲ್ಲದೆ ಹತ್ತಿರ ಹೋದರೆ ಅದನ್ನು ವಿವರವಾಗಿ ವೀಕ್ಷಿಸಬಹುದೆಂದು ಬೆಕ್ಕಿನ ಹೆಜ್ಜೆ ಇಡುತ್ತ ಅದರತ್ತ ತೆರಳಿದೆ. ಆದರೆ ಆ ಚಾಣಾಕ್ಷ ನವಿಲು ನನ್ನನ್ನು ನೋಡಿಯೇ ಬಿಟ್ಟಿತು. ಕ್ಷಣಾರ್ಧದಲ್ಲಿ ಅದು ಪಕ್ಕದ ಕಾಡಿಗೆ ನುಗ್ಗಿ ಕಣ್ಮರೆಯಾಯಿತು. ನನಗೆ ನಿರಾಶೆಯಾಯಿತಾದರೂ ಪಟ್ಟು ಬಿಡದೆ ನಾನು ಅದು ಓಡಿಹೋದ ದಿಕ್ಕಿನಲ್ಲಿ ಮುಂದುವರೆದು ಕಾಡನ್ನು ವಿವರವಾಗಿ ಪರಿಶೀಲಿಸತೊಡಗಿದೆ. ಅದು ಹೆಚ್ಚೇನೂ ದೂರ ಹೋಗಿರಲಾರದೆಂಬುದು ನನ್ನ ಅನಿಸಿಕೆಯಾಗಿತ್ತು. ಆದರೆ ನಾನು ಸುಮಾರು ಒಂದು ತಾಸು ಹುಡುಕಿದರೂ ನವಿಲಿನ ಪತ್ತೆಯೇ ಇಲ್ಲ. ಅಷ್ಟು ಹೊತ್ತಿಗಾಗಲೇ ಅದು ಊರನ್ನೇ ಬಿಟ್ಟು ಹೋಗಿರಲಿಕ್ಕೂ ಸಾಧ್ಯವಿತ್ತು! ನಾನು ಮತ್ತೆ ನಿರಾಶನಾಗಿ ಮರಳಿ ಮನೆಯತ್ತ ಹೆಜ್ಜೆ ಹಾಕುತ್ತಿರಬೇಕಾದರೆ ನನ್ನ ತಲೆಯಮೇಲೆಯೇ ಬಡಬಡನೆ ಸದ್ದಾಯಿತು. ಗಾಬರಿಯಿಂದ ನಾನು ತಲೆಯೆತ್ತಿ ನೋಡಿದೆ. ಅಷ್ಟರಲ್ಲಿ ಆ ನವಿಲು ಅಲ್ಲೇ ನನ್ನ ಪಕ್ಕದಲ್ಲೇ, ಕೈಚಾಚಿದರೆ ಎಟುಕುವಷ್ಟು ಸಮೀಪದಲ್ಲೇ ನೆಲಕ್ಕಿಳಿದು ಓಡಿಹೋಯಿತು! ಅದು ಅದೇ ನವಿಲಿದ್ದರೂ ಇರಬಹುದು ಅಥವಾ ಬೇರೆಯದಿದ್ದರೂ ಇರಬಹುದು, ಆದರೆ ನಾನು ಮಾತ್ರ ಅದೇ ನವಿಲೆಂದು ಭಾವಿಸಿದ್ದೆ ಅಷ್ಟೆ! ನನ್ನ ಎದೆಬಡಿತ ಸಹಜಸ್ಥಿತಿಗೆ ಬರಲು ಕೆಲವು ನಿಮಿಷಗಳೇ ಬೇಕಾದವು. ನಂತರ ನವಿಲಿನ ರೆಕ್ಕೆಬಡಿತದ ಶಬ್ದಕ್ಕೆ ಹೆದರಿದ್ದಕ್ಕೆ ನನ್ನ ಬಗ್ಗೆ ನನಗೇ ನಗು ಬಂದಿತು. ಮೊದಲಬಾರಿಗೆ ನವಿಲನನ್ನು ಸಮೀಪದಿಂದ ನೋಡಿದ ಸಂತೋಷ ನನ್ನದಾಯಿತು.
ಒಮ್ಮೆ ನವಿಲನ್ನು ನೋಡಿದ ಬಳಿಕ ನನಗೆ ಅವುಗಳಿಗೆ ಗೊತ್ತಾಗದಂತೆ ಸಮೀಪಿಸುವ ಕಲೆ ಕರಗತವಾಗುತ್ತ ಹೋಯಿತು. ಇದರ ನಂತರ ಅನೇಕ ಸಲ ನಾನು ಎಷ್ಟೋ ನವಿಲುಗಳನ್ನು ಕೆಲವೇ ಅಡಿಗಳಷ್ಟು ದೂರದಿಂದ ಗಂಟೆಗಟ್ಟಲೆ ನೋಡುತ್ತ ಕುಳಿತದ್ದಿದೆ. ಆಗೆಲ್ಲ ಅವು ನನ್ನನ್ನು ಗುರುತಿಸಲು ವಿಫಲವಾಗುತ್ತಿದ್ದುದನ್ನು ನೋಡಿ ನಾನು ವನ್ಯಜೀವಿ ವೀಕ್ಷಣೆಯ ಕೆಲವು ಮೂಲಪಾಠಗಳನ್ನಾದರೂ ಅರಿತಿದ್ದೇನೆಂದುಕೊಂಡು ಸಂತೋಷಪಟ್ಟೆ. ಆದರೆ ಭಾರೀ ಗೊಂಡಾರಣ್ಯಗಳಲ್ಲಿ ನನ್ನ ಈ ಕೌಶಲ್ಯಗಳೆಲ್ಲ ಯಾವ ಮೂಲೆಗೂ ಸಾಲುವುದಿಲ್ಲವೆಂದು ಈಗ ನನಗೆ ಚೆನ್ನಾಗಿ ಗೊತ್ತು, ಆದರೆ ಆಗ ಗೊತ್ತಿರಲಿಲ್ಲ. ನಾನು ಯಾವ ಜಿಮ್ ಕಾರ್ಬೆಟ್‌ಗೂ ಕಡಿಮೆ ಇಲ್ಲವೆಂದು ಹೆಮ್ಮೆಪಟ್ಟುಕೊಂಡಿದ್ದೆ! ತನ್ನ ಬಾವಿಯನ್ನು ಬಿಟ್ಟರೆ ಬೇರೆ ಪ್ರಪಂಚವಿಲ್ಲವೆಂದುಕೊಂಡಿದ್ದ ಬಾವಿಯೊಳಗಿನ ಕಪ್ಪೆಯಾಗಿದ್ದೆ ನಾನು.
ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತೆ ನೆನಪಿರುವ ಒಂದು ಘಟನೆ ಎಂದರೆ ಒಮ್ಮೆ ಆರು ನವಿಲುಗಳನ್ನು ಒಟ್ಟಿಗೆ ನೋಡಿದ್ದು. ಅಂದು ಬೆಳಿಗ್ಗೆ ಎದ್ದವನೇ ಗದ್ದೆಯತ್ತ ಹೊರಟೆ. "ಕಾಫಿ ಕುಡಿದು ಹೋಗೋ" ಎಂಬ ಅಜ್ಜಿಯ ಕೂಗನ್ನು ಕೇಳಿಸಿಯೂ ಕೇಳಿಸಿಕೊಳ್ಳದವನಂತೆ ಹೊರಟೆ. ನಾನು ಗದ್ದೆಯ ಸಮೀಪ ಹೋಗುತ್ತಿದ್ದಂತೆ ಕಂಡ ಆ ದೃಶ್ಯ ಅದ್ಭುತವಾಗಿತ್ತು. ಒಂದಲ್ಲ, ಎರಡಲ್ಲ ಆರು ನವಿಲುಗಳು ಸ್ವಚ್ಛಂದವಾಗಿ ಗದ್ದೆಯಲ್ಲಿ ಮೇಯುತ್ತಿದ್ದವು. ನನಗೆ ಅದನ್ನು ನೋಡಿ ಆದ ಖುಷಿ ವರ್ಣಿಸಲಸಾಧ್ಯ. ಅಷ್ಟೊಂದು ನವಿಲುಗಳಿರಬಹುದೆಂದು ನಾನು ಖಂಡಿತ ಊಹಿಸಿರಲಿಲ್ಲ. ಅಲ್ಲೇ ಗದ್ದೆಯ ಬದಿಯಲ್ಲಿ ಬೆಳೆದಿದ್ದ ದೊಡ್ಡ ಕಣಗಿಲೆ ಮರದ ಹಿಂದೆ ಅಡಗಿಕೊಂಡು ಪ್ರಕೃತಿಯ ಆ ಅದ್ಭುತ ಸೃಷ್ಟಿಯನ್ನು ಮನದಣಿಯೆ ಕಣ್ತುಂಬಿಕೊಂಡೆ. ಏನಿಲ್ಲವೆಂದರೂ ಒಂದು ಗಂಟೆಯಕಾಲ ನನ್ನ ಕಣ್ಣಿಗೆ ಹಬ್ಬವಾಗಿತ್ತು.
ಇನ್ನೊಂದು ದಿನ ನಾನು ಮನೆಯಂಗಳದ ಕಸ ಗುಡಿಸುತ್ತಿರಬೇಕಾದರೆ ಭಾರವಾದ ಯಾವುದೋ ಹಕ್ಕಿಯೊಂದು ಪಕ್ಕದ ಕಾಡಿನಲ್ಲಿ ರೆಕ್ಕೆಬಡಿದಂತೆ ಶಬ್ದವಾಯಿತು. ಹಿಂದಿನ ಅನುಭವಗಳಿಂದ ಆ ಪಕ್ಷಿ ಯಾವುದೆಂದು ನನಗೆ ಗೊತ್ತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕೂಡಲೇ ಪೊರಕೆಯನ್ನು ಅಂಗಳದಲ್ಲೇ ಬಿಸುಟು ಶಬ್ದ ಬಂದತ್ತ ಓಡಿದೆ. ನೋಡನೋಡುತ್ತಿದ್ದಂತೆ ಅಲ್ಲಿನ ದೊಡ್ಡ ಹುಣಸೆಮರದ ಮೇಲೆ ಒಂದರ ಹಿಂದೊಂದರಂತೆ ಆರು ನವಿಲುಗಳು ಹಾರಿಬಂದು ಕುಳಿತವು. ಯಥಾಪ್ರಕಾರ ನನಗೆ ಬೇರೆಲ್ಲ ಕೆಲಸಗಳೂ ಮರೆತೇ ಹೋದವು. ಒಂದು ಗಂಟೆಗೂ ಹೆಚ್ಚು ಕಾಲ ಅವುಗಳನ್ನೇ ವೀಕ್ಷಿಸುತ್ತ ನಿಂತಿದ್ದೆ. ಮರಳಿ ಮನೆಗೆ ಹೋದ ಮೇಲೆ ಪೊರಕೆಯನ್ನು ಅಂಗಳದಲ್ಲೇ ಎಸೆದು ಓಡಿದ್ದಕ್ಕಾಗಿ ಅಜ್ಜಿಯಿಂದ ಬೈಯಿಸಿಕೊಂಡಿದ್ದಾಯಿತು.
ಇನ್ನೊಂದು ದಿನ ಅಜ್ಜಿ ಹಳ್ಳಕ್ಕೆ ಬಟ್ಟೆ ಒಗೆಯಲು ಹೋಗಿದ್ದರು. ಮನೆಯಲ್ಲಿ ನಾನು ಒಬ್ಬನೇ ಇದ್ದೆ. ಹೀಗಿರುವಾಗ ಪಕ್ಕದ ಕಾಡಿನಿಂದ ವಿಚಿತ್ರವಾದ ತುತ್ತೂರಿಯಂಥ ಧ್ವನಿ ಕೇಳಿಸಿತು. ನನಗೆ ಆಶ್ಚರ್ಯವಾಯಿತು. ನಾನು ಆ ಧ್ವನಿಯನ್ನು ಕೇಳುತ್ತಿರುವುದು ಅದೇ ಮೊದಲ ಸಲವಾಗಿತ್ತು. ಹಾಗಾಗಿ ಅದೇನೆಂದು ತಿಳಿಯದೆ ಕುತೂಹಲದಿಂದ ಅತ್ತ ಹೋದೆ. ನಾನು ಅಲ್ಲಿಗೆ ತಲುಪುವಷ್ಟರಲ್ಲಿ ಆ ಧ್ವನಿ ನಿಂತುಹೋಗಿತ್ತು. ಅತ್ತಿತ್ತ ನೋಡಿದಾಗ ಅಲ್ಲೊಂದು ಮರದ ಮೇಲೆ ನವಿಲೊಂದು ಕುಳಿತಿದ್ದು ಕಾಣಿಸಿತು. ಆದರೆ ನನಗೆ ಆಗ ನವಿಲು ಆ ರೀತಿ ಕೂಗುತ್ತದೆಂದು ತಿಳಿದಿರಲಿಲ್ಲ. ಹಾಗಾಗಿ ಅದನ್ನು ನಿರ್ಲಕ್ಷಿಸಿ ಹಾಗೆ ಕೂಗಿದವರಾರೆಂದು ಹುಡುಕುತ್ತಿದ್ದೆ. ಅಷ್ಟರಲ್ಲಿ ಮತ್ತೆ ಆ ಧ್ವನಿ ಕೇಳಿಸಿತು. ಆಗ ನನಗೆ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತಾಯಿತು ಅದು ಆ ನವಿಲಿನದೇ ಧ್ವನಿ ಎಂದು! ಇನ್ನೂ ಒಂದಿಷ್ಟು ಹೊತ್ತು ಸದ್ದಿಲ್ಲದೆ ನಿಂತು ಮತ್ತೆರಡು ಸಲ ಅದು ಕೂಗಿದಾಗ ಆ ತುತ್ತೂರಿಯ ಧ್ವನಿ ನವಿಲಿನದ್ದೇ ಎಂದು ಖಚಿತಪಡಿಸಿಕೊಂಡೆ. ಅಜ್ಜಿ ಮರಳಿಬರುವವರೆಗೂ ನನಗೆ ಒಳ್ಳೆಯ ಮನರಂಜನೆ ಲಭಿಸಿತು.
ಅದಾದ ಬಳಿಕ ನನಗೆ ನವಿಲುಗಳು ಅತ್ಯಂತ ಸಾಮಾನ್ಯ ಸಂಗತಿಯಾಗಿಬಿಟ್ಟವು. ಮೊದಲು ಯಾವ ಪಕ್ಷಿಯನ್ನು ದೇವಲೋಕದಿಂದಲೇ ಇಳಿದುಬಂದದ್ದೆಂದು ತಿಳಿದಿದ್ದೆನೋ, ಯಾವ ಪಕ್ಷಿಯನ್ನು ನೋಡಲು ಅಸಾಧಾರಣ ಮಹಿಮಾನ್ವಿತರಿಗಷ್ಟೇ ಸಾಧ್ಯವೆಂದು ನಾನು ಭಾವಿಸಿದ್ದೆನೋ ಅದು ಬೇರೆಲ್ಲ ಪಕ್ಷಿಗಳಂತೆ ಒಂದು ಸರ್ವೇಸಾಧಾರಣ ಪಕ್ಷಿ ಮತ್ತು ಅದನ್ನು ನೋಡಲು ಒಂದಿಷ್ಟು ಕಾಡಿನಲ್ಲಿ ಓಡಾಡುವ, ಅಡಗಿ ಕೂರುವ ಮತ್ತು ನಿಶ್ಶಬ್ದವಾಗಿ ಚಲಿಸುವ ಚಾಕಚಕ್ಯತೆಯಿರುವ ಯಾರಿಗಾದರೂ ಸಾಧ್ಯವಿದೆಯೆಂದು ನನಗೆ ಅರ್ಥವಾಯಿತು. ಅಜ್ಜಿಮನೆಯಲ್ಲಿದ್ದಷ್ಟು ದಿನವೂ ದಿನಕ್ಕೊಂದು ನವಿಲನ್ನಾದರೂ ನೋಡಿಯೇ ನೋಡುತ್ತಿದ್ದೆ. "ಪ್ರತಿದಿನವೂ ಅದನ್ನು ನೋಡುತ್ತಲೇ ಇರುತ್ತೀಯ. ಮತ್ತೆ ಮತ್ತೆ ಅದನ್ನು ನೋಡಲು ಓಡುತ್ತೀಯ. ನೋಡಿ ನೋಡಿ ಬೇಸರ ಬರುವುದಿಲ್ಲವೇ?" ಎಂದು ಅಜ್ಜಿ ಕೇಳುತ್ತಿದ್ದರು. ಅವರಿಗೆ ಏನೆಂದು ಉತ್ತರಿಸಬೇಕೆಂದೇ ನನಗೆ ತಿಳಿಯುತ್ತಿರಲಿಲ್ಲ. ಏಕೆಂದರೆ ವನ್ಯಜೀವಿಗಳ ವೀಕ್ಷಣೆಯಲ್ಲಿ ಎಂಥ ಆನಂದ ಅಡಗಿದೆ ಎನ್ನುವುದನ್ನು ಅವುಗಳ ಬಗ್ಗೆ ಆಸಕ್ತಿಯಿಲ್ಲದವರಿಗೆ ಹೇಳಿ ಅರ್ಥಮಾಡಿಸುವುದು ಬಹಳ ಕಷ್ಟ. ಹಾಗಾಗಿ ನಾನು ಅವರ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗದೆ ನಕ್ಕು ಸುಮ್ಮನಾಗುತ್ತಿದ್ದೆ.
ಆದರೆ ನವಿಲುಗಳನ್ನು ಎಷ್ಟೇ ಸಂಖ್ಯೆಯಲ್ಲಿ ನೋಡಿದ್ದರೂ ಗರಿಬಿಚ್ಚಿ ನರ್ತಿಸುವ ನವಿಲನ್ನು ನಾನು ನೋಡಿರಲಿಲ್ಲ. ಒಮ್ಮೆ ಆ ಆಸೆಯೂ ಈಡೇರುವ ಸಮಯ ಬಂದಿತು. ನವಿಲು ಗರಿಬಿಚ್ಚುವಂತೆ ಮಾಡಲು ಏನು ಮಾಡಬೇಕೆಂದು ನಾನು ಕೇಳಿದಾಗ ಅನೇಕ ಜನ ಮೂರ್ಖರು ಅವುಗಳನ್ನು ಬೆನ್ನಟ್ಟಿ ಹೋಗಬೇಕೆಂದೂ ಸ್ವಲ್ಪ ದೂರ ಓಡಿದ ನಂತರ ಅವು ಸುಸ್ತಾಗಿ ಗರಿಬಿಚ್ಚಿ ನಿಲ್ಲುತ್ತವೆ ಎಂದೂ ಹೇಳಿದ್ದರು. ನಾನೂ ಅದನ್ನು ನಂಬಿ ಎಷ್ಟೋ ಸಲ ಕಂಡ ಕಂಡ ನವಿಲುಗಳನ್ನೆಲ್ಲ ಅಟ್ಟಿಸಿಕೊಂಡುಹೋಗಿ ಎಲ್ಲೆಲ್ಲೋ ನುಗ್ಗಿ ಮೈಕೈ ಎಲ್ಲ ತರಚಿ ಗಾಯಮಾಡಿಕೊಂಡು ಮನೆಗೆ ಮರಳುತ್ತಿದ್ದೆ. ಆಗೆಲ್ಲ ಅಜ್ಜಿ ನನಗೆ ಬೈಯುವುದಲ್ಲದೆ ನನಗೆ ಆ ಉಪಾಯ ಹೇಳಿಕೊಟ್ಟವರಿಗೂ ಹಿಡಿಶಾಪ ಹಾಕುತ್ತಿದ್ದರು. ಒಂದು ದಿನ ಮಾತ್ರ ನಾವು ನಾಲ್ಕೆöÊದು ಜನ ಗೆಳೆಯರು ನವಿಲು ನೋಡಲು ಗದ್ದೆಗೆ ಹೋಗಿದ್ದೆವು. ನಮ್ಮಿಂದ ಸುಮಾರು ನೂರು ಮೀಟರ್ ದೂರದಲ್ಲಿ ನಾಲ್ಕಾರು ನವಿಲುಗಳು ಮೇಯುತ್ತಿದ್ದವು. ನಾವೆಲ್ಲ ಅಲ್ಲಿದ್ದ ಕಣಗಿಲೆ ಮರದ ಹಿಂದೆ ಅಡಗಿಕೊಂಡು ಅವುಗಳನ್ನೇ ಗಮನಿಸುತ್ತಿದ್ದೆವು. ಅಷ್ಟರಲ್ಲಿ ಅವು ಮುಂದುವರೆಯುತ್ತ ಗದ್ದೆಯ ಮಧ್ಯೆ ಬೆಳೆದಿದ್ದ ಒಂದು ಮರದ ಹಿಂದೆ ಮರೆಯಾದವು. ಅಷ್ಟರಲ್ಲಿ ನಮ್ಮಲ್ಲೇ ಸ್ವಲ್ಪ ಮುಂದೆ ಹೋಗಿದ್ದ ನನ್ನ ಸ್ನೇಹಿತೆಯೊಬ್ಬಳು "ಏ ಇಲ್ಲಿ ಬನ್ರೋ. ಒಂದು ನವಿಲು ಗರಿಬಿಚ್ಚಿ ಕುಣಿಯುತ್ತಿದೆ" ಎಂದು ಉದ್ವೇಗದಿಂದ ಕೂಗಿದಳು. ನಾವೆಲ್ಲ ಮುಂದೆ ಓಡಿದಾಗ ಅಲ್ಲಿ ಕಂಡ ದೃಶ್ಯ ನಮ್ಮನ್ನು ಬೆಕ್ಕಸಬೆರಗಾಗಿಸಿತು. ಒಂದು ನವಿಲು ಗರಿಬಿಚ್ಚಿಕೊಂಡು ವೃತ್ತಾಕಾರವಾಗಿ ತಿರುಗುತ್ತಿತ್ತು!
ನನಗಾದ ಸಂತೋಷವನ್ನು ಪದಗಳಲ್ಲಿ ವರ್ಣಿಸಲಸಾಧ್ಯ. ನಾವು ಅಲ್ಲೇ ನಿಂತಿದ್ದರೆ ತುಂಬಾ ಹೊತ್ತು ಅದನ್ನು ನೋಡುತ್ತ ನಿಲ್ಲಬಹುದಿತ್ತು. ಆದರೆ ನಾವು ಇನ್ನಷ್ಟು ಹತ್ತಿರದಿಂದ ಆ ಮಯೂರನರ್ತನದ ವೈಭವವನ್ನು ಕಣ್ತುಂಬಿಕೊಳ್ಳಬೇಕೆಂದು ಎಚ್ಚರಿಕೆಯಿಂದ ಅತ್ತ ಹೆಜ್ಜೆ ಹಾಕತೊಡಗಿದೆವು. ನಾವು ಎಷ್ಟೇ ಎಚ್ಚರದಿಂದಿದ್ದರೂ ಐದು ಜನರಿದ್ದರಿಂದ ನಮ್ಮ ಸುಳಿವು ಸಿಕ್ಕಿ ಅವು ಪರಾರಿಯಾದವು. ನಮಗೆ ನಿರಾಶೆಯಾದರೂ ಕನಿಷ್ಠ ಕೆಲವು ಕ್ಷಣಗಳವರೆಗಾದರೂ ಗರಿಬಿಚ್ಚಿ ಕುಣಿಯುವ ನವಿಲಿನ ದರ್ಶನವಾಯಿತೆಂದು ಸಮಾಧಾನಪಟ್ಟುಕೊಂಡೆ.
ನವಿಲುಗಳಲ್ಲಿ ಶುಭ್ರಶ್ವೇತವರ್ಣದ ನವಿಲುಗಳೂ ಇವೆ. ನಾನು ಮೊದಲು ಇವುಗಳನ್ನು ಪ್ರತ್ಯೇಕ ಪ್ರಭೇದವೆಂದೇ ತಿಳಿದಿದ್ದೆ. ಆದರೆ ಆಮೇಲೆ ತಿಳಿಯಿತು ಮಾಮೂಲಿ ನವಿಲುಗಳಲ್ಲೇ ವರ್ಣತಂತುಗಳ ವ್ಯತ್ಯಾಸದಿಂದ ಬಿಳಿ ನವಿಲುಗಳು ಜನಿಸುತ್ತವೆ ಎಂದು. ನಾನು ಮೊದಲು ಬಿಳಿನವಿಲುಗಳನ್ನು ಕಂಡಿದ್ದು ಮೈಸೂರು ಮೃಗಾಲಯದಲ್ಲಿ. ಅಲ್ಲಿ ಪಕ್ಷಿಗಳ ಆವರಣದ ಬಳಿ ಹೋಗುತ್ತಿದ್ದಂತೆಯೇ ನವಿಲುಗಳ ಕೇಕೆ ಸ್ವಾಗತಿಸುತ್ತದೆ. ನಾನು ಒಂದೆರಡು ಬಾರಿ ಪಿಲಿಕುಳ ನಿಸರ್ಗಧಾಮ ಹಾಗೂ ತ್ಯಾವರೆಕೊಪ್ಪದ ಸಿಂಹಧಾಮಕ್ಕೆ ಹೋದಾಗ ಅಲ್ಲಿಯೂ ನವಿಲುಗಳನ್ನು ಕಂಡಿದ್ದೆ. ಆದರೆ ಅಲ್ಲಿನ ನವಿಲುಗಳು ನನಗೆ ಅಷ್ಟೇನೂ ಖುಷಿ ಕೊಡಲಿಲ್ಲ. ಏಕೆಂದರೆ ಅಲ್ಲಿ ಸುತ್ತಲಿನ ಪರಿಸರವೂ ಅಷ್ಟೊಂದು ಆಪ್ಯಾಯಮಾನವಾಗಿಲ್ಲ.
ಇಂದು ನವಿಲುಗಳು ಅಪರೂಪವಾಗುತ್ತಿವೆ ಎಂಬ ಕೂಗುಗಳ ಮಧ್ಯೆಯೇ ಅಲ್ಲೊಂದು ಇಲ್ಲೊಂದು ಆಶಾಕಿರಣಗಳೂ ಕಾಣಿಸಿಕೊಳ್ಳುತ್ತವೆ. ಇತ್ತೀಚೆಗೆ ಒಮ್ಮೆ ನಾನು ಶೃಂಗೇರಿಯಿಂದ ಮೂಡಿಗೆರೆಗೆ ಹೋಗುವ ದಾರಿಯಲ್ಲಿ ನವಿಲೊಂದು ರಸ್ತೆ ದಾಟುವುದನ್ನು ನೋಡಿದೆ. ಕೆಲವೊಮ್ಮೆ ಮೂಡಿಗೆರೆಗೆ ಹೋಗುವಾಗ ದಾರಿಯಲ್ಲಿ ರಸ್ತೆಬದಿಯ ಗದ್ದೆಗಳಲ್ಲಿ ನವಿಲುಗಳು ಕಾಣಸಿಗುತ್ತವೆ. ಈಗ ಮೊದಲಿನಂತೆ ಯಾರೂ ಗದ್ದೆಗಳಲ್ಲಿ ನಾಟಿ ಮಾಡುತ್ತಿಲ್ಲ. ಹಾಗಾಗಿ ನವಿಲುಗಳು ಧಾನ್ಯ ಹೆರಕುತ್ತ ತಿರುಗುತ್ತಿರುತ್ತವೆ. ಒಮ್ಮೊಮ್ಮೆ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ರೆಕ್ಕೆ ಬಡಿಯುತ್ತ ಹಾರುವಾಗ ಕಣ್ಣಿಗೆ ಬೀಳುತ್ತವೆ. ಹಾರುವಾಗ ಅವುಗಳ ರೆಕ್ಕೆಯ ಬುಡದಲ್ಲಿ ಮೋಹಕವಾದ ಕೆಂಬಣ್ಣ ಕಾಣುತ್ತದೆ.
ಇಷ್ಟೆಲ್ಲ ನನ್ನನ್ನು ಆಕರ್ಷಿಸಿದ ಈ ಸುಂದರ ಪಕ್ಷಿಯ ಬಗ್ಗೆ ಒಂದಿಷ್ಟು ತಿಳಿಯಬೇಡವೆ? ನವಿಲು "ಗ್ಯಾಲಿಫಾರಂಸ್" ವರ್ಗದ "ಫ್ಯಾಸಿಯಾನಿಡೇ" ಕುಟುಂಬಕ್ಕೆ ಸೇರಿದ ಪಕ್ಷಿ. ನಮಗೆಲ್ಲ ಗೊತ್ತಿರುವುದು ಒಂದೇ ನವಿಲಾದರೂ ಈ ಕುಟುಂಬದಲ್ಲಿ ಮೂರು ಪ್ರಭೇದಗಳಿವೆ. ಮೊದಲನೆಯದು ನಮಗೆಲ್ಲ ಚಿರಪರಿಚಿತವಾದ ಭಾರತದ ನವಿಲು ಅಥವಾ ಇಂಡಿಯನ್ ಪೀಫೌಲ್ (ಪಾವೋ ಕ್ರಿಸ್ಟೇಟಸ್). ಎರಡನೆಯದು ಹಸಿರು ನವಿಲು (ಪಾವೋ ಮ್ಯುಟಿಕಸ್). ಇದು ಮ್ಯಾನ್ಮಾರ್ ಮತ್ತು ಜಾವಾಗಳಲ್ಲಿ ಕಂಡುಬರುತ್ತದೆ. ಮೂರನೆಯದು ಕಾಂಗೋ ದೇಶದ ನವಿಲು (ಅಫ್ರೋಪಾವೋ ಕಾಂಗೆನ್ಸಿಸ್). ಗಂಡುಗಳಲ್ಲಿ ಮಾತ್ರ ಕಂಡುಬರುವ ತನ್ನ ಅತ್ಯಾಕರ್ಷಕ ವರ್ಣಮಯ ಗರಿಗಳಿಗಾಗಿ ನವಿಲು ವಿಶ್ವಪ್ರಸಿದ್ಧವಾದ ಪಕ್ಷಿ. ನಮ್ಮ ಪುರಾಣಗಳಲ್ಲೂ ನವಿಲಿನ ಉಲ್ಲೇಖವಿರುವುದನ್ನು ಕಾಣಬಹುದು. ಅದನ್ನು ಕುಮಾರಸ್ವಾಮಿಯ ವಾಹನವೆಂದು ಪುರಾಣಗಳು ಹೇಳುತ್ತವೆ. ಗಂಡುನವಿಲು ತನ್ನ ಗರಿಗಳನ್ನು ಬಿಚ್ಚಿ ಹೆಣ್ಣನ್ನು ಆಕರ್ಷಿಸಲು ಮಾಡುವ ನೃತ್ಯವನ್ನು ನೋಡಲು ಎರಡು ಕಣ್ಣುಗಳು ಸಾಲವು. ತಮ್ಮ ಈ ಭಾರವಾದ ಗರಿಗಳಿಂದ ಕೂಡಿದ ಶರೀರದಿಂದಾಗಿ ನವಿಲುಗಳು ಬಹಳ ದೂರ ಹಾರಲಾರವು. ಸಾಮಾನ್ಯವಾಗಿ ನೆಲದ ಮೇಲೆಯೇ ಓಡಾಡುವ ಅವು ಅಗತ್ಯಬಿದ್ದಾಗ ಸಾಕಷ್ಟು ಶ್ರಮವಹಿಸಿ ಒಂದಿಷ್ಟು ದೂರ ಹಾರುತ್ತವೆ. ಆದರೆ ಇತರ ಸಣ್ಣ ಪಕ್ಷಿಗಳಂತೆ ತುಂಬಾ ದೂರ ಲೀಲಾಜಾಲವಾಗಿ ಹಾರಲಾರವು. ಕಾಡಿನಲ್ಲಿ ಸಾಮಾನ್ಯವಾಗಿ ಹುಲಿ, ಚಿರತೆ, ಕಾಡುಬೆಕ್ಕು ಇತ್ಯಾದಿಗಳು ಅವುಗಳ ಶತ್ರುಗಳು. ಆದರೆ ಅವುಗಳಿಗೆ ತುಂಬಾ ದೊಡ್ಡ ಶತ್ರುಗಳೆಂದರೆ ಮನುಷ್ಯರೇ. ಅವುಗಳನ್ನು ಮಾಂಸಕ್ಕಾಗಿ ಮತ್ತು ಚಂದದ ಗರಿಗಳಿಗಾಗಿ ಕೊಲ್ಲುವ ದುರಭ್ಯಾಸದಿಂದಾಗಿ ಅವು ಅಪಾಯದಂಚಿಗೆ ಸರಿದಿವೆ. ಕೃಷಿಯಲ್ಲಿ ಕೀಟನಾಶಕಗಳ ಬಳಕೆ ಮತ್ತು ಅರಣ್ಯನಾಶದಿಂದಾಗಿ ಅವು ಸಂಕಷ್ಟಕ್ಕೆ ಸಿಲುಕಿವೆ. ಅರಣ್ಯನಾಶದ ಪರಿಣಾಮವನ್ನಂತೂ ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಮೊದಲು ಪ್ರತಿನಿತ್ಯ ನಾನು ನವಿಲುಗಳನ್ನು ನೋಡುತ್ತಿದ್ದ ಅಜ್ಜಿಮನೆಯ ಸುತ್ತಲಿನ ಪರಿಸರ ಈಗ ಗುರುತು ಹಿಡಿಯಲಾರದಷ್ಟು ಬದಲಾಗಿದೆ. ಈಗ ಅಜ್ಜಿಯೂ ಆ ಮನೆಯಲ್ಲಿಲ್ಲ. ಅಲ್ಲಿ ಸುತ್ತಮುತ್ತ ಅರ್ಧಕ್ಕಿಂತಲೂ ಹೆಚ್ಚು ಕಾಡು ಯಾರ್ಯಾರದೋ ಕೊಡಲಿಗೆ ಆಹುತಿಯಾಗಿದೆ. ಪರಿಣಾಮ ಮೊದಲು ದಿನಕ್ಕೆ ಕನಿಷ್ಠ ಐದಾರರ ಸಂಖ್ಯೆಯಲ್ಲಿ ಸಿಗುತ್ತಿದ್ದ ನವಿಲುಗಳು ಈಗ ವಾರಕ್ಕೆ ಮೂರೋ ನಾಲ್ಕೋ ಕಂಡರೆ ಅದೇ ಹೆಚ್ಚು ಎಂಬಂತಾಗಿದೆ. ನಾನು ಇಲ್ಲೆಂದೂ ವೈಜ್ಞಾನಿಕವಾಗಿ ನವಿಲು ಗಣತಿ ಮಾಡಿಲ್ಲ, ಮಾಡುವ ವಿಧಾನಗಳೂ ನನಗೆ ಗೊತ್ತಿಲ್ಲ. ಆದರೆ ಇಲ್ಲಿ ಕನಿಷ್ಠ ಶೇಕಡಾ ೬೦-೭೦ ರಷ್ಟು ನವಿಲುಗಳು ನಿರ್ನಾಮವಾಗಿವೆ ಎಂಬುದು ನನ್ನ ಅಂದಾಜು.
ನವಿಲುಗಳು ಗದ್ದೆಗೆ ದಾಳಿ ಮಾಡಿ ಪೈರನ್ನು ತಿಂದು ನಾಶಮಾಡುತ್ತವೆ ಎಂಬ ಕಾರಣಕ್ಕೆ ಅವುಗಳಿಗೆ ವಿಷಪ್ರಾಶನ ಮಾಡಿ ನೂರಾರು ನವಿಲುಗಳನ್ನು ಹತ್ಯೆ ಮಾಡಿದ ಹೃದಯವಿದ್ರಾವಕ ಸುದ್ದಿ ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅಂಥ ಘಟನೆಗಳು ಸಂಭವಿಸುತ್ತಲೇ ಇವೆ. ಅಳಿದುಳಿದ ಸಣ್ಣಪುಟ್ಟ ಕಾಡುಗಳನ್ನೂ ಆಪೋಶನ ತೆಗೆದುಕೊಂಡು ಗದ್ದೆ-ತೋಟ ಮಾಡಿದರೆ ಅವಾದರೂ ಪಾಪ, ಎಲ್ಲಿಗೆ ಹೋಗಬೇಕು? ಬೇರೆ ದಾರಿಯಿಲ್ಲದೆ ನಮ್ಮ ಬೆಳೆಗಳನ್ನೇ ಅವಲಂಬಿಸಬೇಕಾಗುತ್ತದೆ. ಈ ಸಮಸ್ಯೆಯ ಮೂಲವನ್ನು ಹುಡುಕುವುದು ತುಂಬಾ ಕಷ್ಟ. ಇಲ್ಲಿ ತಪ್ಪು ಯಾರದು? ವಿಷ ಉಣಿಸಿದವನದ್ದು ತಪ್ಪು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಅವನೊಬ್ಬನ ತಪ್ಪಲ್ಲ. ಅವನು ಕಾಡನ್ನೇ ಕಡಿದು ವನ್ಯಜೀವಿಗಳ ಆವಾಸಸ್ಥಾನವನ್ನು ಆಕ್ರಮಿಸಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸಿದ ಅವನ ಹಿಂದಿನ ಅನೇಕ ತಲೆಮಾರುಗಳ ವಿವೇಕಶೂನ್ಯತೆಯೂ ಇಲ್ಲಿ ಕಂಡುಬರುತ್ತದೆ. ಹಿಂದೆ ಆಗಿಹೋದ ಅಂಥ ತಪ್ಪುಗಳನ್ನು ಈಗ ಸರಿಪಡಿಸುವುದಂತೂ ಕಷ್ಟಸಾಧ್ಯವಾದ ಸಂಗತಿಯೇ ಸರಿ. ನಾವಿಲ್ಲಿ ಯಾವುದೇ ವನ್ಯಜೀವಿಗಳ ಹತ್ಯೆಯನ್ನು ತೆಗೆದುಕೊಂಡರೂ ಅದರ ಹಿಂದೆ ಅದಕ್ಕೆ ಕಾರಣವಾದ ಅಂಶಗಳು ಎಷ್ಟೋ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದವು ಎಂಬುದನ್ನು ಮರೆಯುವ ಹಾಗಿಲ್ಲ. ಉದಾಹರಣೆಗೆ ಗದ್ದೆಗೆ ದಾಳಿ ಮಾಡಿ ಪೈರನ್ನು ಹಾಳುಗೆಡವಿದ ಆನೆಯೊಂದನ್ನು ಒಬ್ಬ ಕೊಂದನೆಂದಿಟ್ಟುಕೊಳ್ಳಿ. ಅದಕ್ಕೆ ನೇರವಾದ ಹೊಣೆಗಾರ ಅವನೊಬ್ಬನೇ ಆದರೂ ಆನೆಗಳ ಆವಾಸಸ್ಥಾನದ ನಾಶದಲ್ಲಿ ಅವನ ಹಿಂದಿನವರೂ ಭಾಗಿಯಾಗಿದ್ದರೆಂಬುದು ಸತ್ಯ. ಏಕೆಂದರೆ ಒಬ್ಬನೇ ಮನುಷ್ಯ ಯಾವುದೇ ಒಂದು ಜೀವಿಸಂಕುಲವನ್ನು ಅಳಿವಿನಂಚಿಗೆ ತರುವಷ್ಟು ಸಮರ್ಥವಾಗಿ ನಾಶಮಾಡಲು ಸಾಧ್ಯವೇ ಇಲ್ಲ. ತಿಳಿದೋ ತಿಳಿಯದೆಯೋ ಅವನು ಇತರರ ಕೃತ್ಯಗಳಲ್ಲಿ ಪಾಲುದಾರನಾಗುತ್ತಾನೆ.
ಇಂದು ಅಜ್ಜಿಯ ಮನೆ ಇದ್ದಲ್ಲಿ ಹೋಗಿ ನೋಡಿದರೆ ಅಲ್ಲಿ ದಟ್ಟವಾದ ವಿಷಾದದ ಛಾಯೆಯೊಂದನ್ನು ಹೊರತುಪಡಿಸಿ ಬೇರೇನೂ ಕಾಣಿಸುವುದಿಲ್ಲ. ಅಲ್ಲಿ ಈಗ ಉಳಿದಿರುವ ಪ್ರತಿಯೊಂದು ಮರವೂ ದುರಂತ ಕಥೆಗಳನ್ನು ಹೇಳುತ್ತ ರೋದಿಸುತ್ತಿರುವಂತೆ ಭಾಸವಾಗುತ್ತದೆ. ಯಾವುದೇ ಕ್ಷಣದಲ್ಲಾದರೂ ಸಾವು ತಮ್ಮ ಮೇಲೆರಗಬಹುದೆಂಬ ಭಯದಲ್ಲೇ ಅವು ಕಾಲ ತಳ್ಳುತ್ತಿರುವಂತೆ ಭಾಸವಾಗುತ್ತದೆ. ಸದಾ ನವಿಲುಗಳ ತುತ್ತೂರಿಯ ಸ್ವರದಿಂದ ಗಿಜಿಗುಡುತ್ತಿದ್ದ ಕಾಡಿನಲ್ಲೀಗ ಸ್ಮಶಾನ ಮೌನ! ಅಲ್ಲೀಗ ಮುಂಜಾನೆಯಲ್ಲಿ ಮೊದಲಿನಂತೆ ನವಿಲುಗಳ ಕೂಗು, ಕಾಡುಕೋಳಿಗಳ ಕೇಕೆ ಕೇಳಿಸುವುದಿಲ್ಲ. ಕೇಳಿಸುವುದು ಗರಗಸಗಳ ಶಬ್ದ ಅಷ್ಟೇ!