ಸಮೂಹ ಸನ್ನಿ ಯಿಂದ ಮೊಬೈಲ್ ಸನ್ನಿ ವರೆಗೆ…
ಮುದ್ದೇರು ಕಪ್ಪಲೆಯಲ್ಲಿದ್ದ ಒಂದು ಬೃಹತ್ ನೇರಳೆ ಮರ ಮತ್ತು ಅತ್ತಿಹಣ್ಣಿನ ಮರ ನಮ್ಮ ಬಾಲ್ಯದ ಆಕರ್ಷಣೆ.ನೇTVರಳೆ ಮರ ವರ್ಷಕೊಮ್ಮೆ ಮಾತ್ರ ಫಲಬಿಡುತಿತ್ತು. ಆದರೆ ಅತ್ತಿ ಹಣ್ಣಿನ ಮರ ಒಂದೂವರೆ ತಿಂಗಳಿಗೊಮ್ಮೆ ಹಣ್ಣು ಬಿಡುತ್ತಿತ್ತು.ಸದಾ ಬರಗಾಲದ ಮಕ್ಕಳಿಗೆ 'ಔದುಂಬರ' ಫಲಕ್ಕಿಂತ ಮಿಗಿಲಾದ ಹಣ್ಣು ಬೇಕೇ??ರಾಶಿ ರಾಶಿ ಹಣ್ಣಿನ ವೃಷ್ಠಿಯನ್ನೇ ಸುರಿಸುತ್ತಿದ್ದ ಈ ಮರದ ಬಳಿ ನನಗೆ ದಿನಗಳ ಲೆಕ್ಕ ಗೊತ್ತಾಗುತ್ತಿರಲಿಲ್ಲವಾದರೂ ಹತ್ತು ಹದಿನೈದು ದಿನಕ್ಕೊಮ್ಮೆ ಅತ್ತಕಡೆ ಹೋಗಿಬರುತ್ತಿದ್ದೆ. ನನಗೆ ಕಡಿಮೆ ವಯಸ್ಸು... ಹತ್ತರ ಆಸುಪಾಸು ಇರಬೇಕು..ಆ ನಾನು ಹೇಳುತ್ತಿರುವ ಘಟನೆಗೆ ಅದಾಗಲೇ ಶೇಂಗಾ ಬೀಜ ಸಿದ್ಧ ಪಡಿಸಿಕೊಂಡು ಬಹಳ ದಿನಗಳಾಗಿತ್ತು. ವಯಸ್ಕರರು ಪರಸ್ಪರ ಯಾರು ಜೊತೆಯಾದರೂ ಇನ್ನೂ ಮಳೆಬರಲಿಲ್ಲ...ದನಕರುಗಳಿಗೆ ಹುಲ್ಲು-ಸೊಪ್ಪು, ನೀರು- ನಿಡಿ ಬಗ್ಗೆಯೇ ಮಾತು. ಅದೇ ಎಲ್ಲರ ಮಾತುಕತೆಯಾಗಿತ್ತು.ಅಂದರೇ ಮಳೆಗಾಲ ಆರಂಭವಾಗಿತ್ತಾದರೂ ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಅದಾಗಲೇ ಬಿತ್ತುವ ಸಕಾಲ ಮೀರಿತ್ತು.. ಮೊದಲು ಬಿತ್ತಿದ್ದ ಪೈರು ಮಳೆ ಇಲ್ಲದೇ ಒಣಗತೊಡಗಿತ್ತು.
ಒಂದು ಸಂಜೆ ನಾಲ್ಕೈದು ಗಂಟೆಯ ವೇಳೆಗೆ ಅತ್ತಿ ಮರದ ಸಮೀಪ ಹೋಗಿದ್ದೆ. 'ಭೂಮಪ್ಪ' ಎಂಬ ಹಿರಿಯಜ್ಜ ಒಂದು ಆಕಳು ,ಒಂದು ಎಮ್ಮೆ ,ಒಂದು ಎಮ್ಮೆ ಮಣಕ,ಮತ್ತು ಒಂದು ಕರುವನ್ನು ಬಿಟ್ಟುಕೊಂಡು ಬೇಸಿಗೆಯಲ್ಲಿ ಬೆಳೆದ ಜೋಳದ ಕೂಳೆಯಲ್ಲಿ ಮೇಯಿಸುತ್ತಿದ್ದರು.ಅವುಗಳಿಗೋ ಮೆಯ್ಯಲು ಒಂದು ಕಡ್ಡಿಯೂ ಇರದೇ ದಿನವಿಡೀ ಮೇಯ್ದರೂ ಒಂದು ಹಿಡಿ ಹುಲ್ಲು ಆಗದಷ್ಟು ಇಲ್ಲದ ಹುಲ್ಲಿನಲ್ಲಿ ಮೆಯ್ಯುತ್ತಿದ್ದವು. ಭೂಮಜ್ಜ ಮಾತ್ರ ಮೇವಿಲ್ಲದ ಬಯಲಲಿ ಅವುಗಳನ್ನು ನಿಯಂತ್ರಿಸಲು ಪ್ಪ... ಪ್ಪ... ಓಪ್ಪ... ಎಂದು ಅದ್ದಲಿಸುತ್ತಾ ಎಲೆ ಉದುರಿಸಿದ ಕರಿ ಜಾಲಿ ಮರದ ನೆರಳಿನಲ್ಲಿ ಕೋಲು ಹಿಡಿದು ಕೂತಿದ್ದ...ಆ ಅಜ್ಜನಿಗೆ ಬೇಜಾರಾದ್ರೂ ಸಿಟ್ಟುಬಂದರೂ ಆ ಎಮ್ಮೆ ಕರಗಳ ಹತ್ರವೇ ಮಾತಾಡಬೇಕಿತ್ತು. ಯಾರಾದರೂ ನರಪಿಳ್ಳೆ ದೂರದಲ್ಲಿ ಕಂಡರೂ ಕೂಗಿ ಕರೆದು ಮಾತಾಡಿಸುತ್ತಿದ್ದ ಕಾಲ. ಹಾಗೆಯೇ ಅತ್ತಿ ಹಣ್ಣಿನ ಮರದಬಳಿ ನನ್ನನ್ನು ನೋಡಿದ ಭೂಮಜ್ಜ.. ಹೋಯ್...ಲೇ...ಹುಡ್ಗ...ಬಾ ಇಲ್ಲಿ ಬಾ ಇಲ್ಲಿ... ಎಂದು ಕೂಗಿ ಕರೆದ…
ಭೂಮಜ್ಜ ಕರೆದ ಕೂಗಿಗೆ ಹತ್ತಿರ ಹೋದ ನಾನು ಏನಜ್ಜ?? ಎಂದು ಕೇಳಿದ್ದಕ್ಕೆ ಮಳೆ ಬರಲಿಲ್ಲಲ್ಲೋ ಅಂದ…
ನನಗೇನು ಗೊತ್ತಜ್ಜ...??ಮಳೆಯಾವಾಗ ಬರುವುದೋ ಏನೋ..ದೊಡ್ಡವರು ನೀನೇ ಹೇಳಬೇಕು ಎಂದೆ…
ಭೂಮಜ್ಜ:ಕೂತ್ಕ ಬಾ ಇಲ್ಲಿ…
ಜೋಳದ ಹೊಲಕ್ಕೆ ನೀರು ಬಿಡಲು ಮಾಡಿದ್ದ ಬೋದಿನ ಮೇಲೆ ಕುಳಿತೆ..
ಕೈಯಲ್ಲಿಡಿದ ಕೋಲಿನಿಂದ ಕಪ್ಪಿರುವೆಗಳು ಯಾವು ಯಾವುದೋ ಹುಲ್ಲಿನ ಬೀಜಗಳನ್ನು ಹೊತ್ತುಕೊಂಡು ಹೋಗಿ ತಮ್ಮ ಬಿಲದಲ್ಲಿ ಸೇರಿಸುತ್ತಿದ್ದವು ಅವುಗಳನ್ನು ತೋರಿಸುತ್ತಾ "ನೋಡಿಲ್ಲಿ ... ಈ ಇರುವೆ ಹುಲ್ಲಿನ ಬೀಜಗಳನ್ನು ಭೂಮಿಯ ಒಳಗೆ ಹಾಕುತ್ತಿದ್ದಾವೆಂದರೇ ಮಳೆ ಬರಲು ಇನ್ನೂ ತಡ ಆಗುತ್ತದೆ ನಾಳೆ 'ಬೇಸ್ತುವಾರ' ಕ್ಕೆ ಹದಿನೈದು ದಿನಕ್ಕೆ ಗುಡ್ಡದ ದೇವರನ್ನು ಹೊರಡಿಸುತ್ತಾರೆ". ಅಂದ... ಅಬಾಲನಾದ ನಾನು ಆವೃದ್ಧನ ಅನುಭವದ ಆ ಮಾತನ್ನು ಅರಗಿಸಿಕೊಳ್ಳವಷ್ಟು ಬುದ್ಧಿಶಕ್ತಿ ನನಗಿರಲಿಲ್ಲ…
ಅಂದರೇ ಏನಜ್ಜ??ಮಳೆ ಬರದೇ ಇರುವುದಕ್ಕೆ ಅವು ಹುಲ್ಲಿನ ಬೀಜಗಳನ್ನು ಹೊತ್ತುಕೊಂಡು ಹೋಗುತ್ತಿದ್ದಾವ???
ಹ್ಞೂಂ ಮತ್ತೆ... ಈ ಹುಲ್ಲಿನ ಬೀಜದ ಒಳಗೆ ಸಣ್ಣದು ಒಂದು ರಾಗಿ ತರ 'ಪಪ್ಪು' ಇರತ್ತೆ... ಅದನ್ನ ಅವು ತಿಂತಾವೆ...ಮಳೆ ಯಾವಾಗ ಬತ್ತಾತೆ ಅಂತ ಅವುಕ್ಕೆ ಗೊತ್ತಗತ್ತೆ.. ಅದಕ್ಕೆ ಅವುಗಳ ಊಟಕ್ಕಾಗಿ ಹೊತ್ತುಕೊಂಡು ಹೋಗುತ್ತಿವೆ. ಒಂದು ವೇಳೆ ಮಳೆ ಬರುವ ಕಾಲ ಹತ್ತಿರ ಇದೆ ಎಂದರೆ,ಇವತ್ತೂ ನಾಳೆಯೋ ಮಳೆ ಬರಬಹುದೆಂದರೇ ಇವೇ ಇರುವೆಗಳು ತಾವು ಮನೆಯೊಳಗೆ ಬಚ್ಚಿಟ್ಟ ಬೀಜಗಳನ್ನು ಹೊರಗೆ ತಂದು ಹಾಕುತ್ತಾವೆ. ಮಳೆಗೆ ಅವೇ ಬೀಜಗಳು ಹುಟ್ಟಿ ಹುಲ್ಲಾದರೇ ಮುಂದಕ್ಕೆ ಅವುಗಳಿಗೂ, ದನಕರುಗಳಿಗೂ, ಹುಳ ಹುಪ್ಪಟೆಗಳಿಗೂ ಊಟವಾಗಲಿ ಅಂತ ಹಂಗ್ ಮಾಡುತ್ತಾವೆ... "ಹಿಂಗೆ ಒಂದು ಸಾರಿ ಮೂರು ವರ್ಷ ಮಳೆ ಬರದೇ ಬರಗಾಲ ಬಂದಿತ್ತಂತೆ... ಯಾರ ಮನೆಯಲ್ಲೂ ಬೀಜಕ್ಕೂ ಯಾವ ಕಾಳು ಕಡಿ ಇಲ್ಲದಂತಾಗಿತ್ತಂತೆ... ಅಂತ ಸಮಯದಲ್ಲಿ ಈ ಕಪ್ಪು ಇರುವೆಗಳು ತಮ್ಮ ಮನೆಯ ಗೂಡಿನಲ್ಲಿ ಬಚ್ಚಿಟ್ಟ ರಾಗಿ, ನವಣೆ, ಸಜ್ಜೆ ನೂರೆಂಟು ಜಾತಿಯ ಹುಲ್ಲಿನ ಬೀಜಗಳನ್ನೆಲ್ಲಾ ಮಳೆ ಬರುವ ಎರಡ್ಮೂರು ದಿನಗಳ ಮುನ್ನಾ ಹೊರಗೆ ತಂದು ಹಾಕಿದ್ದವಂತೆ.. ಮನೆ ಮಂದಿಯೆಲ್ಲಾ ಪುಟ್ಟಿ ತೆಗೆದುಕೊಂಡು ಹೋಗಿ ಪ್ರತಿ ಇರುವೆಯ ಗೂಡಿನ ಸಮೀಪ ಬಿದ್ದಿದ್ದ ಬೀಜಗಳನ್ನೆಲ್ಲಾ ತುಂಬಿಕೊಂಡು ಬಂದು ಅವನ್ನೇ ಬಿತ್ತಿ ಬೆಳೆದು ಬದುಕಿದರಂತೆ!! ಎಂದು ಹೇಳಿದ...ಅದಕ್ಕೆ ಕಪ್ಪಿರುವೆ ಒಳ್ಳೆಯವು ಅವುಗಳನ್ನು ಸಾಯಿಸಬಾರದು "ಎಂದು ಹೇಳುತ್ತಿದ್ದರು...ನಾನು ಹೊಲದಿಂದ ಮನೆಗೆ ಬಂದು ದನಗಳಿಗೆ ಹುಲ್ಲು ಹಾಕಬೇಕಾದ್ದರಿಂದ ಸರಿಯಜ್ಜ ಹೊತ್ತಾಯಿತು ದನಗಳಿಗೆ ಹುಲ್ಲು ಹಾಕಬೇಕು ಎಂದು ಹೇಳಿ ಎದ್ದುಬಂದೆ…
ಆ ಭೂಮಜ್ಜ ಹೇಳುತ್ತಿದ್ದ ದಿನಗಳು ಅಂದಾಜು ಜೂನ್ ಜುಲೈ ತಿಂಗಳ ಕೊನೆಯ ದಿನಗಳು ಎಂದೆನಿಸುತ್ತದೆ. ಗುಡ್ಡದದೇವರು ಆಷಾಢ ಮಾಸದ ಕೊನೆಯಲ್ಲಿ ಗಂಗಾ ಪೂಜೆಗೆ ಕರೆದುಕೊಂಡು ಹೋಗುವರು. ಇಷ್ಟುದಿನ ಆದರೂ ಮಳೆ ಬಂದಿರಲಿಲ್ಲ…
ಇದಾದ ಒಂದು ವಾರದ ನಂತರ ಮಂಗಳವಾರ ಎಲ್ಲರೂ ಮನೆಗೊಬ್ಬ ಗಂಡುಮಕ್ಕಳು 'ರಚ್ಚುಕಟ್ಟೆ'ತಾಗೆ ಸಭೆ ಸೇರಬೇಕೆಂಬ ಡಂಗೂರ ಸಾರಿದ್ದರು. ನಮ್ಮ ಮನೆ ಊರಲ್ಲಿ ಇರಲಿಲ್ಲವಾದ್ದರಿಂದ ಪ್ರತ್ಯಕ್ಷವಾಗಿ ನಮಗೆ ಡಂಗೂರ ಕೇಳಿರಲಿಲ್ಲ. ಆದರೆ ಹೊಲಗದ್ದೆಗಳಲ್ಲಿ ಪರಸ್ಪರರು ಸೇರಿ ಮಾತಾಡುತ್ತಿದ್ದಾಗ ಇದರ ಮಾಹಿತಿಯು ನನಗೂ ಗೊತ್ತಾಗಿತ್ತು. ಯಾವುದೋ ಊರಿನ ಶಕ್ತಿದೇವರು ಮಳೆ ಬಾರದಿರಲು "ಏಳೂರಿನಲ್ಲಿ ಎಲ್ಲಿಯೋ ತೊನ್ನು ಇರವವರು ಸತ್ತಾಗ ಅವರನ್ನು ಸುಡದೇ ಊತಿಟ್ಟಿದ್ದಾರಂತೆ.. ಅದಕ್ಕೇ ಮಳೆ ಬಂದಿಲ್ಲ. ಹೊರತೆಗೆದು ಸುಡುವವರೆಗೂ ಮಳೆಬರುವುದಿಲ್ಲ'' ಎಂದು ದೈವವೇ ನುಡಿದಿದೆಯಂತೆ! ಡಂಗೂರದಂತೆ ಮಂಗಳವಾರ ಸಭೆ ಸೇರಿಯೂ ಆಯಿತು.ಸಭೆಯಲ್ಲಿ ತೀರ್ಮಾನಿಸಿ ಆಯಿತು. ಸಭೆಯ ತೀರ್ಮಾನ ಏನೆಂದರೇ 'ಕಳೆದ ಆರುತಿಂಗಳಲ್ಲಿ ಯಾವುದೋ ಊರಲ್ಲಿ 'ತೊನ್ನು ಇರುವ ಸತ್ತವರನ್ನು ಸುಡದೇ ಸಮಾಧಿ ಮಾಡಿದ್ದಾರಂತೆ'ಅವರಿಂದ ಸುತ್ತಲಿನ ಏಳು ಗ್ರಾಮಕ್ಕೆ ಮಳೆ ಬರುವುದಿಲ್ಲವಂತೆ.. ಹಾಗಂತ ಯಾವ್ಯಾವೋ ಶಕ್ತಿ,ಶೂದ್ರ ದೇವತೆಗಳೆಲ್ಲಾ ನುಡಿದಿದ್ದಾವಂತೆ.ಅದಕ್ಕೆ ಅಂತಹ 'ಸಮಾಧಿಗಳನ್ನು ತೆಗೆದು ಸುಡಬೇಕು' ಎಂದು ತೀರ್ಮಾನ ಮಾಡಿದ್ದಾರೆ. ಈ ಕಾರ್ಯವನ್ನು ಮಾಡಲು ಏಳು ಊರಿನವರೂ ನಾಳೆ ಬುದುವಾರವೇ ಮೃತದೇಹ ಹೊರಗೆ ತೆಗೆಯಲು ತಮ್ಮ ತಮ್ಮ ಊರಿನ ಜನ ಕಾರ್ಯಗತರಾಗಲು ಹೋಗಬೇಕೆಂದು ಗ್ರಾಮದ ಮುಖಂಡರಿಂದ ಪರ್ಮಾನು ಹೊರಡಿಸಿದ್ದರು.
ಹಿಂದೂ ಧರ್ಮದಲ್ಲಿ ಸಮಾಧಿಯನ್ನು ಬಗೆದು ದೇಹವನ್ನು ಹೊರತೆಗೆಯಲು ಅವಕಾಶ ಇಲ್ಲದಿದ್ದರೂ ಏಳುಗ್ರಾಮಕ್ಕೆ ಬಂದೊದಗಿದ ದೋಷ.. ವಿಪತ್ತು ... ಮಳೆಯಾಗದೇ ಇರೋ ತರ ಶಾಪ! ಎಂದು ಇದನ್ನು ಬಹು ವಿಶೇಷ ಪ್ರಕರಣವೆಂದು ಪರಿಗಣಿಸಿ ತೊನ್ನು ಇದ್ದವರು ಅಥವಾ ತೊನ್ನು ಇರುವ ಸಂಶಯಾಸ್ಪದ ಸತ್ತವರ ಸಮಾಧಿಗಳನ್ನು ಅಗೆದು,ಸಮಾಧಿಯಲ್ಲಿ ಯಥಾ ಸ್ಥಿತಿಯಲ್ಲಿರುವ ಅಸ್ತಿಗಳನ್ನು ಚಿತೆಯಲ್ಲಿ ಹಾಕಿ ಸುಡಬೇಕಿತ್ತು. ಅದರಂತೆ ನಮ್ಮ ಊರಿನ ಅದ್ಯಾರದೋ ಸಮಾಧಿ ತೆಗೆದು ಸುಟ್ಟು ಹಾಕಿ ಬಂದಿದ್ದರು.ಈ ಕಾರ್ಯವನ್ನು ಸುತ್ತಲಿನ ಏಳೂರಿನ ಗ್ರಾಮಸ್ಥರು ಏಕಕಾಲದಲ್ಲಿ ನೆರವೇರಿಸಿದ್ದರು.ಕಾಕತಾಳೀಯ ಎಂಬಂತೆ ಅಂದೇ ಸಂಜೆಯಾಗುತ್ತಲೇ ಮೋಡಕವಿದು ಗುಡುಗು ಸಿಡಿಲು ಅರ್ಭಟಿಸುತ್ತಾ ಮುಕ್ಕಾಲು ಗಂಟೆ ಬಡಿದ ಬಿರುಮಳೆಗೆ ಹಳ್ಳ ಬಂದಿತ್ತು.ಅಂದು ಆ ಸಮಾಧಿಯ ದೇಹದ ಮೂಳೆಗಳು ಹೊರ ತೆಗೆದು ಸುಟ್ಟಿದ್ದರಿಂದಲೇ ದೋಷ ಕಳೆದು ಮಳೆ ಬಂದಿದ್ದು.. ಹಾಗೆ...ಹೀಗೆ ಏನೇನೋ ಅಂತೆ ಕಂತೆಗಳ ಕಥೆಗಳ ಹೇಳುತ್ತಿದ್ದರು.* *ಒಬ್ಬೊಬ್ಬರ ಬಾಯಲ್ಲಿ ಒಂದೊಂದು ಸ್ವರೂಪ ಪಡೆದು ಕಥೆಯು ವಿಸ್ತಾರವಾಗುತ್ತಿತ್ತು.ಇನ್ನೂ ಯಾರೋ ಬದುಕಿರುವ ಅಂತಹ ಲಕ್ಷಣಗಳು ಇರುವವರನ್ನೂ ಕೂಡ ಹಾಗೆ ಮಾಡುವುದು ಎಂದು ಅವರನ್ನೂ ಜೀವಾಂತವಾಗಿ ಸುಟ್ಟು ಹಾಕುತ್ತಿದ್ದರು.ಇನ್ನೂ ಕೆಲವರಿಗೆ ಬಿಳಿ ಮಚ್ಚೆಗಳು ಇದ್ದರೂ ಕಾಣುವುದಿಲ್ಲವಂತೆ.. ಅದು ಗೊತ್ತಾಗುವುದು ಅವರು ಸತ್ತು ಮಳೆ ಬರದೇ ಹೋದ ಮೇಲಂತೆಯೇ....ಏನೇನೋ ಚಿತ್ರ ವಿಚಿತ್ರ ಕಥೆಗಳು ನಾನು ಆ ದಿನಗಳಲ್ಲಿ ಆಗಿದ್ದು ಕೇಳಿದ ಸ್ಪಷ್ಟ ನೆನಪು.
ಇತ್ತೀಚಿನ ವರ್ಷಗಳಲ್ಲಿ ಎರಡ್ಮೂರು ವರ್ಷಕ್ಕೊಮ್ಮೆ ಆಗಾಗ ಅಲ್ಲಲ್ಲಿ ಬರಗಾಲ ಬಂದಾಗ ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುತ್ತಾವೆ.ಈ ಬಾರಿ (2024)ಅಕಾಲಿಕ ಮಳೆ ಎಲ್ಲ ಕಡೆಯೂ ಆಯಿತಾದರೂ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಶಿವನಿಯ ಭಾಗ ಮಳೆ ಆಗಲಿಲ್ಲ.ಬರಗಾಲದ ತೀವ್ರ ಹೊಡೆತಕ್ಕೆ ತತ್ತರಿಸಿ ಅಡಿಕೆ ತೆಂಗು ಒಣಗುವ ಡೆಡ್ ಲೈನ್ ಗೆ ಬಂದಾಗ ಸುತ್ತಮುತ್ತಲಿನ ಎಲ್ಲಾ ಭಾಗಕ್ಕೂ ಮಳೆಯಾಗಿ ಒಂದು ಹೋಬಳಿಯ ಆರೆಂಟು ಹಳ್ಳಿಗಳ ವ್ಯಾಪ್ತಿಯಲ್ಲಿ ಮಳೆಯಾಗದೇ ಇರುವಾಗ ಅಸಹಾಯಕರಾದ ಗ್ರಾಮಸ್ಥರು ನಂಬಿದ್ದು ಈ ಮೂಢನಂಬಿಕೆಯನ್ನೇ...!ಹಿರಿಯ ತಲೆಗಳ ಆಲೋಚನೆಯಂತೆ ನಮ್ಮ ಊರುಗಳಿಗೆ ಮಳೆ ಬರದೇ ಇರುವ ಕಾರಣವನ್ನು ಪರಸ್ಪರವಾಗಿ ಚರ್ಚಿಸಿ ಏಳೂರಿನ ಗ್ರಾಮಸ್ಥರು ಅದ್ಯಾವುದೋ ಶಕ್ತಿದೇವರ ಸನ್ನಿಧಿಯಲ್ಲಿ ದೇವರ ಪ್ರಾರ್ಥನೆ ಮಾಡಿದಾಗ ಅವರಿಗೆ ದೇವರ ಆಜ್ಞೆ ಆಗಿದ್ದು ಸುತ್ತಲಿನ ಏಳು ಊರುಗಳಲ್ಲಿ ಇತ್ತೀಚಿಗೆ ಅಸುನೀಗಿದ ಬಿಳಿ ಮಚ್ಚೆಯ ಚರ್ಮದವರನ್ನು ಸುಡದೇ ಸಮಾಧಿ ಮಾಡಿರುವುದಂತೆ.!! ಅದರಂತೆ ಎಲ್ಲಾ ಊರಿನವರು ಸೇರಿ ಅಂತಹ ಸಮಾಧಿಯನ್ನು ಅಗೆದು ಅವರ ಅಸ್ತಿಗಳಿಗೆ ಪುನಃ ಅಗ್ನಿ ಸ್ಪರ್ಶವನ್ನು ಮಾಡಿದ ದಿನವೇ ಕಾಕತಾಳೀಯ ಎಂಬಂತೆ ಸಿಕ್ಕಾಪಟ್ಟೆ ಮಳೆಯಾಯಿತು ಎಂದು ಪತ್ರಿಕೆಗಳೇ ವರದಿಯನ್ನು ಮಾಡಿದ್ದು ನಾನು ಓದಿದ್ದೇನೆ.
ಇಂತಹ ಸುದ್ದಿ ಸಮಾಚಾರಗಳು ಇತರ ಊರುಗಳ ಜನರಿಗೆ ಬಿದ್ದು ಅಯ್ಯೋ ನಮ್ಮೂರಿಗೂ ಮಳೆ ಬಂದಿಲ್ಲ. ಅಥವಾ ಇನ್ನಾವುದೋ ರೀತಿಯ ಅನಿಷ್ಠ ಕೆಡುಗಳಿಗೆ ಯಾವುದೋ ಕಾರಣ ಎಂದು ನಂಬುವ ಮೂಢರು ಕಾರ್ಯಪ್ರವೃತ್ತರಾಗುವ ಅಸಹಜ ಅನುಕರಣೆಯೇ ಈ ಸಮೂಹ ಸನ್ನೀ…
ಕೆಲವು ವರ್ಷಗಳ ನಂತರ ಹರಡಿದ ಮತ್ತೊಂದು ಸುದ್ದಿ ಎಂದರೇ ಮಕ್ಕಳ ಕಳ್ಳರು ಬಂದಿರುವುದು.ಅವರು ಮಕ್ಕಳನ್ನು ಕೈ ಕಾಲು ಕಟ್ಟಿ ಹಿಡಿದುಕೊಂಡು ಹೋಗಿ ಕಿಡ್ನಿ ಹೃದಯ,ಇತರೆ ಅಂಗಾಗಳನ್ನು ಕೊಯ್ದು ಮಾರಾಟ ಮಾಡುವವರಂತೆ...ಅದಕ್ಕಾಗಿ ಮಕ್ಕಳು ಒಬ್ಬೊಬ್ಬರು ಇಬಿಬ್ಬರೂ ಎಲ್ಲಿ ಹೋಗುವ ಹಾಗೆ ಇರಲಿಲಲ್ಲ.. ಒಂದು ವಾಹನದ ಶಬ್ಧ ಆದರೆ ಮರೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದ ಕಾಲ.. ನಮ್ಮ ಮನೆ ತೋಟದಲ್ಲಿದ್ದುದು,ನಮ್ಮ ಹೊಲ ಮತ್ತೊಂದು ಮುಖ್ಯ ರಸ್ತೆಯ ಮಗ್ಗುಲಲ್ಲಿ ಇದ್ದಕಾರಣ ದಿನವಿಡೀ ಭಯದಲ್ಲೇ ಆತಂಕದಲ್ಲೇ ಕಾಲ ಕಳೆಯುತ್ತಿದ್ದೆವು.ಒಂದು ದಿನ ರಸ್ತೆ ಬದಿಯಲ್ಲಿ ನಾನು ನಮ್ಮ ಅಕ್ಕ ದನಗಳ ಮೇಯಿಸುವಾಗ ಒಂದು ಜೀಪ್ ಪೂರ್ವದಿಂದ ಪಶ್ಚಿಮಕ್ಕೆ ಸಾಗಿತು.ಆಗಿನ ಕಳ್ಳರು ಜೀಪಲ್ಲೇ ಬರುತ್ತಾರೆ. ಇವರಿರಬಹುದು ಎಂದು ಅಂದು ಕೊಂಡೆವಾದರೂ ಆ ಸಮಯಕ್ಕೆ ಸರಿಯಾಗಿ ಮತ್ತೊಂದು ಅಂಬಾಸಿಡರ್ ಕಾರು ಎದುರಿಗೆ ಬಂದದ್ದರಿಂದ ಎರಡೂ ವಾಹನ ಹಾದು ಹೋದವು. ಎಂಟತ್ತು ನಿಮಿಷದ ಬಳಿಕ ಪುನಃ ಹಿಂದಿರುಗಿದ. ಆ ಜೀಪ್ ನಾನು ನನ್ನ ಅಕ್ಕ ರಸ್ತೆಯ ಪಕ್ಕ ದನಗಳ ಹಿಡಿದು ಮೇಯಿಸುತ್ತಿದ್ದ ನೇರಕ್ಕೆ ಬಂದಾಗ ತಲೆಗೆ ಮಪ್ಲರ್ ಸುತ್ತಿದ್ದ ವ್ಯಕ್ತಿಯೊಬ್ಬ ಜೀಪಿನೊಳಗಿಂದಲೇ "ನಿಲ್ಸು ನಿಲ್ಸು ಗಾಡಿ ನಿಲ್ಸಪ್ಪ... ಎಂದು ಜೀಪಿನಲ್ಲೇ ಇನ್ನೇನು ಹಾರಿ ನಮ್ಮನ್ನು ಹಿಡಿಯುವವನು ಎಂಬಂತೆ ಅಬ್ಬರಿಸಿದ.ದನಗಳ ಹಗ್ಗ ಬಿಟ್ಟು ಅಳುತ್ತಾ ಕೂಗುತ್ತಾ ದಿಕ್ಕಾಪಾಲು ಓಡುತ್ತಿದ್ದ ನಾವು ಅದೇ ವೇಳೆಗೆ ನಮ್ಮ ಪಕ್ಕದ ಹೊಲದಲ್ಲಿ ಒಂದಿಬ್ಬರು ವಯಸ್ಕರು ಹೊಲದಲ್ಲಿ ಅಡ್ಡಾಡುತ್ತಿದ್ದವರು... ಏಯ್ ಏಯ್ ಏನು...?? ಏನು?? ಎಂದು ಕೂಗಿದ್ದಕ್ಕೆ ಸ್ಲೋ ಆಗುತ್ತಿದ್ದ ಜೀಪ್ ಮಿಂಚಿನ ವೇಗದಲ್ಲಿ ಹೋಗಿಬಿಟ್ಟಿತ್ತು. ಈ ಘಟನೆ ನಿಜವಾಗಿಯೂ ನಡೆದಿದ್ದಾಗಿದ್ದು ಇದರ ಅರ್ಥ ನನಗೆ ಇನ್ನೂ ಆಗಿಲ್ಲ... ಅಂದಿನಿಂದ ರಸ್ತೆಯ ಮಗ್ಗುಲಲ್ಲಿ ದನಗಳ ಮೇಯಿಸದೇ ಕನಿಷ್ಠ ಇನ್ನೂರು ಮುನ್ನೂರು ಮೀಟರ್ ದೂರವೇ ಇರಬೇಕೆಂದು ಅಂತಹ ಸಂಶಯಾಸ್ಪದ ವ್ಯಕ್ತಿಗಳನ್ನು ಕಂಡರೆ,ಅಥವಾ ಅಪರಿಚಿತರು ಯಾರಾದರೂ ಜೀಪು ಕಾರು ನಿಲ್ಲಿಸಿ ನಮ್ಮತ್ತ ಬರುತ್ತಿದ್ದರೆ ದನಗಳ ಬಿಟ್ಟು ಓಡುವುದು ಎಂದು ಅಪ್ಪ ಅಮ್ಮ ಹೇಳಿದ್ದರು. ಅಂದಿನಿಂದ ಹೈಸ್ಕೂಲ್ ದಿನಗಳವರೆಗೂ ನನಗೆ ಈ ಕಳ್ಳರ ಭಯ ಇದ್ದೇ ಇತ್ತು. ಇತ್ತೀಚೆಗೆ ನಾಲ್ಕೈದು ವರ್ಷಗಳ ಹಿಂದೆಯೂ ಇಂತಹ ಸುದ್ದಿಯು ಹರಿದಾಡಿ ಚಿಂದಿ ಆಯುವ,ಸಣ್ಣಪುಟ್ಟ ವ್ಯಾಪಾರ ಮಾಡುವ ಹೆಂಗಸರು,ಯುವಕರನ್ನು ಕೆಲ ಹಳ್ಳಿಗಳಲ್ಲಿ ಹಿಡಿದು ಬಡಿದು ಕೊಂದದ್ದೂ ಉಂಟು…
ಇದೇ ಇತ್ತೀಚೆಗೆ ಇಂತಹದ್ದೇ ಮತ್ತೊಂದು ವಿಚಾರ ಉತ್ತರ ಕರ್ನಾಟಕದಲ್ಲಿ ಹರಿದಾಡುತ್ತಿತ್ತು. ಅದೇನೆಂದರೇ ಒಬ್ಬ ಸಹೋದರ ಇರುವ ಅಕ್ಕ ತಂಗಿಯರು ಸಹೋದರನಿಗೆ ಬೆಳ್ಳಿಯ ಕೈ ಕಡಗ ಕೊಡಬೇಕು ಇಲ್ಲವಾದರೆ ಸಹೋದರರ ಜೀವಕ್ಕೇ ಅಪಾಯ..! ಇದು ಎಷ್ಟು ವ್ಯಾಪಕವಾಗಿ ಜನಮನದಲ್ಲಿ ಸಂಚರಿಸಿತ್ತೆಂದರೇ ಕೆಲಸ ಕಾರ್ಯಗಳನ್ನು ಬಿಟ್ಟು ಸಾಲ ಮಾಡಿ ಊರಿಗೆ ಹೋಗಿ ಕೈ ಕಡಗ ತೊಡಿಸಿಬಂದರು. ಇನ್ನೂ ಕೆಲವು ವರ್ಷಗಳ ಹಿಂದೆ ಸಹೋದರಿಯರು ತಾಳಿಯಲ್ಲಿರುವ ಕೆಂಪು ಹವಳದ ಮಣಿಗಳನ್ನು ಒಡೆದು ಹಾಕಬೇಕು. ಇಲ್ಲವಾದರೇ ಗಂಡನೇ ರಕ್ತಕಾರಿ ಸಾಯುವನೆಂಬ ಎಂಬ ಸುದ್ದೀಯೂ ಬಾರೀ ಸದ್ದು ಮಾಡಿತ್ತು. ಇದನ್ನು ಕೇಳಿದ ಸಾವಿರಾರು ಜನ ಮುತ್ತೈದೆಯರು ಹಿಂದೆ ಮುಂದೆ ಕೇಳದೇ ನೋಡದೆ ನಿಂತನಿಲುವಿನಲ್ಲೇ ತಾಳಿಯಲ್ಲಿರುವ ಹವಳದ ಮಣಿಗಳನ್ನು ಕುಟ್ಟಿ ಒಡೆದಾಕಿದ್ದರು.!! ಇಂತಹ ವಿಚಾರಗಳೇ ಸಮೂಹ ಸನ್ನಿ. ಜನಗಳ ಮನಸಿನಲ್ಲಿ ಏಕಾ ಏಕಿ ಮಾನಸಿಕವಾಗಿ ಇಂತಹದ್ದೊಂದು ವಿಚಾರ ಸಂಚಲನ ಉಂಟು ಮಾಡಿಸುತ್ತದೆ. ಇದನ್ನೇ ಸಮೂಹ ಸನ್ನಿ ಎನ್ನುವರು. ಈ ಸನ್ನಿಗೆ ಒಳಗಾದವರು ಯಾರ ಮಾತನ್ನು ಕೇಳದೇ ಏನಾದರೂ ಆಗಲಿ ಅಂತ ಮಾಡಿಯೇ ಮಾಡುತ್ತಾರೆ.ಇದರಿಂದ ಕೆಲವು ವರ್ಗದವರು ಆರ್ಥಿಕ ನಷ್ಟಕ್ಕೆ ಒಳಗಾಗುವುದರ ಜೊತೆಗೆ ಒಂದು ರೀತಿಯ ಮಾನಸಿಕ ಕಾಯಿಲೆಯಾದ ಸನ್ನಿಗೆ ಒಳಗಾಗುವರು…
ಈ ತೆರನಾದ ಆಲೋಚನೆ ಮತ್ತು ಕಾರ್ಯಗಳು ಮಾನಸಿಕ ಸ್ಥಿಮಿತದ ತೊಳಲಾಟ. ಬಾವೋನ್ಮಾದದ ಉದ್ವೇಗದಿಂದ ಈ ಜನ ಕೆಲವೊಂದು ವಿಚಾರಗಳಲ್ಲಿ ಅಸಹಾಯಕರಾಗಿ ಸಂಬಂಧಗಳು,ಜೀವ,ಜೀವನದ ವಿಷಯದಲ್ಲಿ ಇದು ಮಾಡಲೇಬೇಕಾದ ಆದ್ಯ ಕರ್ತವ್ಯವೆಂದು ಭಾವಿಸಿರುವವರು ಬಹಳ ಜನ ಇದ್ದಾರೆ.ಅವರಿವರು ಹೇಳಿದರು ಅವರೆಲ್ಲಾ ಮಾಡಿದರು ನಾನು ಮಾಡಲಿಲ್ಲ...ನಾನು ಕೊಡಲಿಲ್ಲ..ಅದರಂತೆ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.. ಎಂಬ ಭಾವನೆ ಅತಿಯಾಗಿ ಕಾಡುವುದು.ಕಾಲು ಭಾಗದಷ್ಟು ಅವೆಲ್ಲಾ ಸುಳ್ಳು ಪೊಳ್ಳಂತೆ ಎಂಬ ಅಭಿಪ್ರಾಯ ಬಂದರೂ ಅಷ್ಟೊತ್ತಿಗಾಗಲೇ ಮುಕ್ಕಾಲು ಭಾಗ ಆ ಕೆಲಸವನ್ನು ಮಾಡಿ ಮುಗಿಸಿರುತ್ತಾರೆ.!ವೈಯಕ್ತಿಕವಾಗಿ ಅದು ಬೇಡ ಅನಿಸಿದರೂ ಹತ್ತಿರ ಸಂಬಂಧಿಗಳೇ ಇಂತಹ ಕೆಲವನ್ನು ಮಾಡಿ ಆಯಿತಾ??ಎಲ್ಲೋ ಹೋಗತ್ತೆ ಅದೊಂದು ಕೊಟ್ಟು ಬಿಟ್ಟರಾಯಿತು ಎಂಬ ಸ್ಥಿತಿಗೆ ತಲುಪಿ ನಿಯಂತ್ರಿಸಿಕೊಳ್ಳಲಾಗದೇ ಮಾನಸಿಕ ತಳಮಳ ಅಥವಾ ಕಿರಿಕಿರಿಗೊಳಗಾಗಿ ಆ ಕೆಲಸವನ್ನು ಮಾಡುವವರೆಗೂ ಸನ್ನಿಗೊಳಗಾಗಿ ಆ ಕೆಲಸಗಳನ್ನು ಮಾಡುವರು. ಇದು ಒಬ್ಬರ ಮಾನಸಿಕ ಸ್ಥಿತಿಗೆ ಸೀಮಿತವಾಗದೇ ಇದು ಸಾಂಕ್ರಾಮಿಕ ರೋಗದಂತೆ ಬೆಂಕಿಯಂತೆ ಒಬ್ಬರಿಂದ ಒಬ್ಬರಿಗೆ ಊರಿಂದ ಊರಿಗೆ ಬಹಳ ದೀಡೀರನೇ ಹಬ್ಬುತ್ತದೆ. ಕೆಲವೊಮ್ಮೆ ಕೆಲವು ಕುಟುಂಬ ಕೆಲವು ಗ್ರಾಮಸ್ಥರು ಇದೊಂದು ತುರ್ತುಪರಿಸ್ಥಿತಿಯ ರೀತಿಯಲ್ಲಿ ಜನ ಕಾರ್ಯಪ್ರವೃತ್ತರಾಗುವರು.
ಲೇಖನ ಮುಗಿಸುವ ಮುನ್ನಾ ಇತ್ತೀಚೆಗೆ ಈ 'ಸಮೂಹ ಸನ್ನಿ' individual 'ಸನ್ನಿ' ಯಾಗಿಯೂ ಪರಿವರ್ತನೆಯಾಗಿದೆ. ಇತ್ತೀಚಿನ ದಿನಗಳಲ್ಲೀ ಯುವಸಮೂಹ ಹೆಚ್ಚು ಕಡಿಮೆ ಮೊಬೈಲ್ ಹಿಡಿದು Reels ಮಾಡುವುದು ಇದೊಂದು ತೆರನಾದ ಸನ್ನಿಯೇ... ಅವರು ಯಾರೋ reels ಮಾಡಿದ್ದಾರೆ. ಅದಕ್ಕೆ ಅಷ್ಟು views ಬಂದಿದೆ. Subcribes ಬಂದಿದೆ. Ads view ಆಗಿದೆ... ಇದರಿಂದ ಹಣ ಬಂತಂತೆ ಎನ್ನುವ ಭ್ರಮೆಯಲ್ಲಿ 'ಮೊಬೈಲ್ ಸನ್ನಿ' ಹಿಡಿದಿದೆ. ಇದಷ್ಟೇ ಅಲ್ಲದೇ ಮೊಬೈಲ್ ಲ್ಲಿ ಗೇಮ್ ಆಡುವುದು. ಜೂಜು, ಯಾವುಯಾವುದೋ ಅಶ್ಲೀಲ website ಲ್ಲಿ ವೀಡಿಯೋ ಚಿತ್ರಗಳನ್ನು ನೋಡುವುದು ಇದೆಲ್ಲದೂ ಕೂಡ ಮಾನಸಿಕ ರೋಗವೇ...ಅದೇ ಈ ಸನ್ನಿ... ಇದು ದಿನದಿಂದ ದಿನಕ್ಕೆ ಚಟವಾಗಿ ಚಟ್ಟಕ್ಕೆ ರಹದಾರಿಯಾಗುವವು.
ಮನುಷ್ಯನಿಗೆ ಸನ್ನಿಯ ರೀತಿಯಲ್ಲಿ ಹಿಡಿದ ಕೆಲಸ ಹಠ ಬಿಡದೇ ಮಾಡುವ ರೀತಿಯಲ್ಲಿ ಮಾನಸಿಕವಾಗಿ ಸಿದ್ಧರಿರುವಂತೆ ಇರಬೇಕು...ಮನುಷ್ಯನ ಕುಲ ಉದ್ಧಾರದ ಕಡೆ ಆಲೋಚಿಸುವ ಅದರಂತೆ ಕರ್ತವ್ಯ ನಿರ್ವಹಿಸುವ ಸನ್ನಿ ಹಿಡಿದರೆ ಒಂದಷ್ಟು ಉದ್ದಾರದ ಮಾತಾಗಬಹುದೇನೋ... ಆದರೆ ಕೆಲಸಕ್ಕೆ ಬಾರದ ವಿಚಾರಗಳನ್ನು ತಲೆಕೆಡಿಸಿಕೊಳ್ಳುವಂತೆ ಸನ್ನಿಗಳಾಗುವುದು ಅಪ್ರಸ್ತುತ…
Picture courtesy-google
✍️ _ನಾಗೇಂದ್ರ ಬಂಜಗೆರೆ._
0 Followers
0 Following