ವ್ಯವಹಾರವು ಜೀವನದ ಎಲ್ಲ ರಂಗಗಳಲ್ಲೂ ಕಾಲಿಟ್ಟಿರುವ , ಸಂಬಂಧಗಳು ತೋರಿಕೆಗಾಗಿ ಉಳಿದಿರುವ , ಬಾಂಧವ್ಯಗಳು ನಶಿಸಿಯೇ ಹೋಗುತ್ತಿರುವ ಈ ಕಾಲಘಟ್ಟದಲ್ಲಿ , ಪಾಶ್ಚಿಮಾತ್ಯ ಅಂಧಾನುಕರಣೆಯ ನಶೆಯ ಕಪಿಮುಷ್ಟಿಯಲ್ಲಿ , ಕ್ರೌರ್ಯದ ಸುಳಿಯಲ್ಲಿ, ಜಾಳು ಜಾಳಾಗುತ್ತಿರುವ ಸಂಬಂಧಗಳ ಜಾಲದಲ್ಲಿ, ಹತಾಶರಾಗಿ ನಲುಗುತ್ತಿರುವ ನಮ್ಮ ಯುವಜನತೆಗೆ, ಸ್ನೇಹ, ಪ್ರೀತಿ, ವಾತ್ಸಲ್ಯ, ಮಮತೆ, ಅಂತ:ಕರಣ, ನಲುಮೆ, ಒಲುಮೆ, ಬಾಂಧವ್ಯಗಳ ರುಚಿಯನ್ನು ಮತ್ತೆ ಉಣಬಡಿಸುವ ಆಶಯದಿಂದ ರಚಿಸಿರುವ " ದಾಂಪತ್ಯ ಗೀತ" ಧಾರಾವಾಹಿಯನ್ನು ಪ್ರಸ್ತುತ ಪಡಿಸುತ್ತಿದ್ದೇನೆ. ಇದರ ಮೊದಲ ಭಾಗವಾದ "ಸೌಹಾರ್ದ ಸ್ನೇಹ" ಇದೋ ನಿಮಗಾಗಿ.
PART ONE
4 ಗಂಟೆಗೆ ಅರಚಿಕೊಳ್ಳುತ್ತಿದ್ದ ಅಲಾರಂ ಗಡಿಯಾರದ ತಲೆಯ ಮೇಲೊಂದು ಮೊಟಕಿ ಸುಮ್ಮನಾಗಿಸಿ , ನಿದ್ದೆಯಲ್ಲಿ ಏನೋ ಅಸ್ಪಷ್ಟವಾಗಿ ಗೊಣಗುತ್ತ ಪಕ್ಕಕ್ಕೆ ಹೊರಳಿದ ಚಿನ್ಮಯಿಯ ತಲೆ ನೇವರಿಸಿ , " ಮಲ್ಕೊ ಚಿನ್ನು" ಹೊದಿಕೆ ಸರಿಪಡಿಸಿದೆ. ಅಷ್ಟು ನಿದ್ದೆಯಲ್ಲೂ ಚಿನ್ಮಯಿಯ ಪುಟ್ಟ ಬಾಯಿ ಮೆಲ್ಲಗೆ ಅರಳಿತು. ಅವಳ ತಲೆ ನೇವರಿಸುತ್ತಿದ್ದ ನನ್ನ ಹಸ್ತವನ್ನು ಎಳೆದು ತನ್ನ ಕೆನ್ನೆಯ ಮೇಲಿಟ್ಟುಕೊಂಡು ಮತ್ತೆ ಆಳ ನಿದ್ರೆಗೆ ಜಾರಿದಳು. ಮತ್ತೈದು ನಿಮಿಷ ಹಾಗೆಯೇ ಕುಳಿತಿದ್ದವನು ಮೆಲ್ಲಗೆ ಕೈ ಬಿಡಿಸಿಕೊಂಡು ಎದ್ದು ಹೋಗಿ ಗಡಿಬಿಡಿಯಲ್ಲಿ ತಯಾರಾಗತೊಡಗಿದೆ. ಸ್ನಾನ ಮಾಡಿ ಹಿಂದಿನ ದಿನ ರಾತ್ರಿ ಚಿನ್ಮಯಿ ಆಯ್ಕೆ ಮಾಡಿ ಇಸ್ತ್ರಿ ಹಾಕಿಟ್ಟಿದ್ದ ತಿಳಿ ಕನಕಾಂಬರ ಬಣ್ಣದ ಶರ್ಟ್ ಹಾಗೂ ಕಡುಗಪ್ಪು ಬಣ್ಣದ ಪ್ಯಾಂಟ್ ಧರಿಸಿ ತಲೆಗೂದಲು ಬಾಚಿ ಮುಖವನ್ನು ಅಲಂಕರಿಸಿಕೊಂಡು ನನ್ನ ಮುದ್ದಿನ ಮಡದಿ ಚಿನ್ಮಯಿಯ ಆಯ್ಕೆಯ ಸುಗಂಧ ದ್ರವ್ಯ ಪೂಸಿಕೊಂಡು ತಯಾರಾದೆ. ಕನ್ನಡಿಯಲ್ಲಿನ ನನ್ನ ಪ್ರತಿಬಿಂಬಕ್ಕೆ ಕಣ್ಣು ಹೊಡೆದು ನನ್ನ ಮೆಚ್ಚುಗೆ ಸೂಚಿಸಿದೆ. ಈಗೇನಾದರೂ ಚಿನ್ನು ಗೆ ಎಚ್ಚರ ಆದ್ರೆ " ಛೀ, ಹೀಗಾ ತಲೆ ಬಾಚೋದು? " ಅಂತ ಹೇಳುತ್ತಾ ನನ್ನ ತಲೆ ಕೂದಲನ್ನು ಪೂರ್ತಿ ಕೆದರಿ ಮತ್ತೆ ಮೊದಲು ನಾನು ಬಾಚಿಕೊಂಡಿದ್ದ ಹಾಗೆಯೇ ಬಾಚಿ " ಹಾಂ. ಈಗ ಸರಿಯಾಯಿತು ನೋಡಿ' ಅನ್ನುತ್ತಾ ಕನ್ನಡಿಯ ಮುಂದೆ ನನ್ನನ್ನು ತಳ್ಳಿ ನಿಲ್ಲಿಸಿ, ತಾನು ಕನ್ನಡಿಯಲ್ಲಿ ತೋರುತ್ತಿಲ್ಲ ಎಂದು ನನ್ನನ್ನು ಹಿಂದಕ್ಕೆ ತಳ್ಳಿ ತಾನು ಕನ್ನಡಿಯ ಎದುರು ಪ್ರತಿಷ್ಠಾಪನೆ ಗೊಳ್ಳುತ್ತಿದ್ದಳು ನನ್ನ ಹುಡುಗಿ. ನನ್ನ ಭುಜದ ಎತ್ತರಕ್ಕೂ ಬರದ ಅವಳ ತಲೆಯನ್ನು ಹಿಂದಕ್ಕೆ ವಾಲಿಸಿ ನನ್ನೆದೆಗೆ ಒಂದು ಗುದ್ದು ಅವಳ ತಲೆಯಿಂದ ಕೊಡುತ್ತಿದ್ದುದರಲ್ಲಿ ಸಂಶಯವೇ ಇಲ್ಲ. ಒಂದು ವೇಳೆ ನಾನೇನಾದರೂ " ನಾ ಮೊದಲು ಹೀಗೇ ಅಲ್ವೇನೆ ಬಾಚಿಕೊಂಡಿದ್ದು " ಅಂದುಬಿಟ್ಟರೆ ಮುಗಿದೇ ಹೋಗುತ್ತಿತ್ತು. ಮೊದಲೇ ದೊಡ್ಡದಾದ ಕಣ್ಣುಗಳನ್ನು ಮತ್ತಷ್ಟು ಅರಳಿಸಿ, ತುಟಿಯನ್ನು ಕೊಂಕಿಸಿ , ಕೈಯನ್ನು ಸೊಂಟದ ಮೇಲಿಟ್ಟು, ಓರೆಯಾಗಿ ನಿಂತು, " ನೀವಿಷ್ಟು ಜೋರು ಅಂಥ ಗೊತ್ತಿರಲಿಲ್ಲ ನನ್ನ ಅಪ್ಪನಿಗೆ. ಇಲ್ಲಾಂದ್ರೆ ನನ್ನಷ್ಟು ಪಾಪದವಳನ್ನು ನಿಮಗ್ಯಾಕೆ ಕೊಟ್ಟು ಮದುವೆ ಮಾಡ್ತಿದ್ರು. ಏನೋ ನೀವು ಅಷ್ಟು ಗೋಗರೆದುಕೊಂಡರಲ್ಲ ಅಂಥ ಮಾಡಿಕೊಟ್ಟಿದ್ದು ತಿಳ್ಕೊಳಿ" ಎನ್ನುತ್ತಾ ಜಡೆಯನ್ನು ರೊಯ್ಯನೆ ಹಿಂದಕ್ಕೆ ಬೀಸಿ ಸೊಟ್ಟ ನಗು ನಗುತ್ತಾ ಬಿಂಕದ ನಡೆ ಹಾಕುತ್ತಾ ಅಲ್ಲಿಂದ ಜಾಗ ಕಾಲಿ ಮಾಡುತ್ತಿರುತ್ತಿದ್ದಳು. ನಾನು ಹೇಳಿದ್ದಕ್ಕೂ ಅವಳ ಉತ್ತರಕ್ಕೂ ತಾಳೆ ಹಾಕೋದ್ರಲ್ಲಿ ನನ್ನ ಕೂದಲು ಪೂರ್ತಿ ಕೆದರಿಹೋಗಿರುತ್ತಿತ್ತು.
ನನ್ನ ಮನದ ಆಲೋಚನೆಗಳು ಮುಖದ ಮೇಲೆ ನಸುನಗುವಾಗಿ ಪ್ರತಿಫಲನಗೊಂಡದ್ದನ್ನು ಕನ್ನಡಿಯಲ್ಲಿದ್ದ ನನ್ನ ಮುಖ ಸಾರಿತು. ಕೊನೆಯ ಬಾರಿ ಕೂದಲ ಮೇಲೆ ಬಾಚಣಿಗೆ ಆಡಿಸಿ ರಾತ್ರಿಯೇ ಸಿದ್ಧಪಡಿಸಿಟ್ಟಿದ್ದ ಬ್ಯಾಗ್ ಅನ್ನು ಎತ್ತಿಕೊಂಡು ಹೊರಟೆ. ಚಿನ್ನುವಿನ ಮೇಲೆ ಬಾಗಿ ಅವಳ ಹಣೆಯ ಮೇಲೆ ತುಟಿಯೊತ್ತಿದಾಗ ಅಂತಹ ನಿದ್ದೆಯಲ್ಲೂ ಅವಳ ತುಟಿಗಳು ನಸು ಬಿರಿದವು. ನನ್ನ ಒಂದು ಸಣ್ಣ ಸ್ಪರ್ಶಕ್ಕೂ , ನನ್ನ ಒಂದು ಸಣ್ಣ ನಗುವಿಗೂ, ನನ್ನ ಒಂದು ಸಣ್ಣ ನೋಟಕ್ಕೂ ಅದೆಷ್ಟು ಪ್ರತಿಕ್ರಿಯಿಸತ್ತೆ ಈ ಸೂಕ್ಷ್ಮ ಮನದ ಹುಡುಗಿ ಅನ್ನಿಸಿದಾಗ ನಾನೆಂತಹ ಅದೃಷ್ಟಶಾಲಿ ಎಂದು ಎದೆ ಉಬ್ಬಿತು. ಬಾಗಿಲಿಗೆ ಸಿಗಿಸಿದ್ದ ಮನೆಯ ಬೀಗದ ಕೈಯನ್ನು ಪಕ್ಕದಲ್ಲಿದ್ದ ಮೇಜಿನ ಮೇಲೆ ಚಿನ್ಮಯಿಗೆ ಕಾಣುವಂತೆ ಇಟ್ಟು, ಹೊರಗಡೆಯಿಂದ ಬಾಗಿಲೆಳೆದುಕೊಂಡು ನನ್ನಲ್ಲಿದ್ದ ಬೀಗದ ಕೈ ಇಂದ ಬೀಗ ಹಾಕಿ ಗೇಟಿನಿಂದ ಆಚೆ ಬರುವಷ್ಟರಲ್ಲಿ ರಸ್ತೆಯ ಕೊನೆಯ ಮನೆಯಲ್ಲಿದ್ದ ಸಂಜುವಿನ ರಿಕ್ಷಾ ಬಂದು ನಿಂತಿತು. ಹಿಂದಿನ ಸಂಜೆಯೇ ಹೇಳಿ ಬಂದಿದ್ದೆ ಅವನಿಗೆ ಬೆಳಗ್ಗೆ 5 45 ಕ್ಕೆ ಮುಖ್ಯ ಬಸ್ ನಿಲ್ದಾಣಕ್ಕೆ ಹೋಗಲು ರಿಕ್ಷಾ ತಾ ಎಂದು. ನಮಸ್ಕಾರಗಳ ವಿನಿಮಯ ನಡೆಯುತ್ತಿದ್ದಂತೆ ರಿಕ್ಷಾ ಹತ್ತಿದೆ. ರಸ್ತೆಯಲ್ಲಿ ವಾಹನಗಳ ಓಡಾಟ ಇನ್ನೂ ಹೆಚ್ಚಿರದ ಕಾರಣ 15 ನಿಮಿಷದಲ್ಲಿ ಬಸ್ ನಿಲ್ದಾಣ ತಲುಪಿ ಅಲ್ಲೇ ಇದ್ದ ಸಣ್ಣ ಹೋಟೆಲ್ ಒಂದರಲ್ಲಿ ಒಂದು ಲೋಟ ಬಿಸಿ ಕಾಫಿ ಸೇವಿಸಿ ನಾನು ಪಯಣಿಸಬೇಕಿದ್ದ ಬಸ್ ಹತ್ತಿ ಕುಳಿತೆ. 10 ನಿಮಿಷದಲ್ಲೇ ಬಸ್ ಹೊರಟಿತು.
ಬಾಲ್ಯ ಸ್ನೇಹಿತನ ಮದುವೆಗೆಂದು ಈ ಪಯಣ. ಎಲ್ಲೆಲ್ಲೋ ಹಂಚಿಹೋಗಿದ್ದ ಸ್ನೇಹಿತರೆಲ್ಲ ಒಟ್ಟಾಗಿ ಸೇರೋಣವೆಂದುಕೊಂಡಿದ್ದ ಸಂಭ್ರಮ. . ಹೆಚ್ಚಿನವರು ಹಿಂದಿನ ದಿನವೇ ಮದುವೆ ಮನೆ ತಲುಪಿಯಾಗಿತ್ತು. ನಾನೂ ಹಿಂದಿನ ದಿನವೇ ಹೋಗೋಣವೆಂದರೆ ನನ್ನ ಹುಡುಗಿಯ ಬಾಡಿದ ಮುಖ ನನ್ನನ್ನು ಹೋಗದಿರುವಂತೆ ಕಟ್ಟಿ ಹಾಕಿ ಬಿಟ್ಟಿತ್ತು. ನಾನಿಲ್ಲದೆ ಒಂದು ದಿನವೂ ಇರಲಾರಳು ಅವಳು. ಬೆಕ್ಕಿನ ಮರಿಯಂತೆ ನನ್ನ ಮಡಿಲಲ್ಲಿ ಮಲಗಿದರೆ ಮಾತ್ರ ನಿದ್ದೆ ಮಾಡೋದು ಅವಳು. ಆಕಸ್ಮಾತ್ ಕೆಲಸದ ಪ್ರಯುಕ್ತ ಒಂದೋ ಎರಡೋ ದಿನ ನಾನು ಮನೆ ಬಿಟ್ಟು ಹೊರಟರೆ ನಾನು ಹಿಂತಿರುಗುವ ತನಕ ಜಾಗರಣೆಯೇ. ಹಾಗಾಗಿ ಬೆಳಗಿನ ಬಸ್ ಗೆ ಹೊರಟಿದ್ದು. ಎರಡೂವರೆ ಮೂರು ಗಂಟೆಗಳ ಪ್ರಯಾಣ. ಸೀಟಿಗೊರಗಿ ನಿದ್ರಿಸಲಾರಂಭಿಸಿದೆ.
ಮದುವೆ ಮನೆಯಲ್ಲಿ ಒಟ್ಟಾದ ಸ್ನೇಹಿತ ಸ್ನೇಹಿತೆಯರು ಎಷ್ಟೋ ವರ್ಷಗಳ ಮಾತೆಲ್ಲ ಆಡಿ ಮುಗಿಸಿದೆವು. ಊಟವಾದ ಕೂಡಲೇ ಹೊರಟು ಸಂಜೆ ಬೇಗ ಹೋಗಿ ನಮ್ಮ ಭಾನುವಾರದ ಮಾಮೂಲಿ ತಿರುಗಾಟವಾದ ಸಮುದ್ರ ತೀರಕ್ಕೆ ಕರೆದುಕೊಂಡು ಹೋಗ್ತೀನಿ ಅಂತ ಮಾತು ಕೊಟ್ಟು ಬಂದಿದ್ದೆ. ಆದರೆ ಅಪರೂಪಕ್ಕೆ ಸಿಕ್ಕಿದ ಸ್ನೇಹಿತರ ಒತ್ತಾಯದ ಮೇರೆಗೆ ಅಲ್ಲಿಂದ ಹೊರಡುವಾಗಲೇ 5 ಗಂಟೆ. ಬಸ್ ಹತ್ತಿದ ಕೂಡಲೇ ಮನೆಗೆ ಫೋನಾಯಿಸಿದೆ. ಮನೆ ಸೇರುವುದು ತಡ ಆಗುವುದು ಎಂದು. ಸಣ್ಣ ಸ್ವರದಲ್ಲಿ ಉತ್ತರ ನೀಡಿದಳು ನನ್ನಾಕೆ "ಸರಿ" ಎಂದು. ಅವಳ ಸ್ವರದಲ್ಲಿದ್ದ ಬೇಸರ ಗ್ರಹಿಸಿದೆ. ಬಸ್ ಆದ್ದರಿಂದ ಹೆಚ್ಚು ಮಾತಾಡಲು ಆಗಲಿಲ್ಲ.
ಮನೆ ಸೇರಿದಾಗ 9 ಗಂಟೆ. ಮಾಮೂಲಿನಂತೆ ಮೂರು ಸಲ ಕರೆಗಂಟೆಯ ಒತ್ತಿದಾಗ ಬಂದು ಬಾಗಿಲು ತೆಗೆದು ಸೀದಾ ಅಡಿಗೆ ಮನೆಗೆ ನಡೆದಿದ್ದಳು. ನಾನು ಕೈ ಕಾಲು ತೊಳೆದು ಬರುವಷ್ಟರಲ್ಲಿ ಎರಡು ತಟ್ಟೆಯಿಟ್ಟು ಅಡುಗೆಯನ್ನು ಮುಂದಿಟ್ಟುಕೊಂಡು ಕುಳಿತಿದ್ದಳು. ಅವಳ ಸಪ್ಪಗಿದ್ದ ಮುಖ ನೋಡಿ ಅವಳನ್ನೇನೂ ಪ್ರಶ್ನಿಸದೆ ನನ್ನ ಪಾಡಿಗೆ ಮದುವೆ ಮನೆಯ, ಸ್ನೇಹಿತರ ಸಮಾಚಾರವನ್ನೆಲ್ಲಾ ಬಡಬಡನೆ ಹೇಳುತ್ತಾ ಊಟ ಮಾಡಿದೆ. ನಾನು ಹೇಳಿದಕ್ಕೆಲ್ಲ ಹ್ಞೂಗುಟ್ಟುತ್ತಾ ಊಟ ಮುಗಿಸಿ ಅಡಿಗೆ ಮನೆಯ ಕೆಲಸ ಪೂರೈಸಿ ಬರುವಷ್ಟರಲ್ಲಿ ನಾನು ಮಾರನೆ ದಿನ ಆಫೀಸಿಗೆ ಹೋಗಲು ಬೇಕಾದ ತಯಾರಿಯನ್ನೆಲ್ಲ ಮಾಡಿ ಮುಗಿಸಿಕೊಂಡೆ. ಕೋಣೆಯಿಂದ ಹೊರಬಂದಾಗ ಚಿನ್ನು ಹಾಲಿನಲ್ಲಿದ್ದ ಸೋಫಾದ ಮೇಲೆ ಕೈಲೊಂದು ಪುಸ್ತಕ ಹಿಡಿದು ಕೂತಿದ್ದಳು. ಪುಸ್ತಕ ಓದುತ್ತಿರಲಿಲ್ಲ ಅವಳು ಎನ್ನುವುದು ಸಣ್ಣ ಮಗುವಿಗೂ ಗೊತ್ತಾಗುತ್ತಿತ್ತು. ನಗೆಯನ್ನು ತಡೆಹಿಡಿದು ಸೋಫಾದ ಮೇಲೆ ಮೈಚೆಲ್ಲಿ ಚಿನ್ಮಯಿಯ ಮಡಿಲಲ್ಲಿ ತಲೆಯಿಟ್ಟೆ. ಮಾಮೂಲಿನಂತೆ ಆಗಿದ್ದರೆ ನನ್ನನ್ನು ತಳ್ಳಿ , ದೂಡಿ ಕೊನೆಗೆ ನಾನು ಏಳಲು ಹೋದಾಗ ನನ್ನ ತಲೆಯನ್ನು ಬಿಗಿಯಾಗಿ ಹಿಡಿದು ತನ್ನೆದೆಗೆ ಒತ್ತಿಕೊಂಡು ಮುದ್ದಿಸಬೇಕಿತ್ತು. ಉಹೂಂ. ಪುಸ್ತಕವನ್ನು ಮತ್ತಷ್ಟು ಗಂಭೀರವಾಗಿ ಓದುವಂತೆ ನಟಿಸಲು ಆರಂಭಿಸಿದಳು. ಅವಳ ಕೈಯಿಂದ ಪುಸ್ತಕ ಕಸಿದುಕೊಂಡು ಪಕ್ಕದಲ್ಲಿಟ್ಟ ನಾನು ಅವಳ ಸಪ್ಪಗಿದ್ದ ಮುಖವನ್ನೇ ನೋಡುತ್ತಾ " ಸಾರಿ ಮುದ್ದು...ಇವತ್ತು ಭಾನುವಾರ ಆದ್ರೂ ನಿನ್ ಜೊತೆ ಇರಲಿಲ್ಲ. ಸಂಜೆ ಬೇಗ ಬರ್ತೀನಿ ಅಂತ ಹೇಳಿ ಅದೂ ಮಾಡಲಿಲ್ಲ. ಅದಕ್ಕೆ ಇಷ್ಟೊಂದು ಬೇಜಾರು ಮಾಡಿಕೊಬೇಕಾ? ಹೋಗ್ಲಿ, ನಾಳೆ ರಜ ಹಾಕಿ ನಿನ್ ಎಲ್ಲಾದ್ರೂ ಕರೆದುಕೊಂಡು ಹೋಗ್ತೀನಿ ಇರು. ನೀನು ಹೀಗೆ ಮಾತೇ ಆಡದೆ ಮೌನ ಗೌರಿ ಆದ್ರೆ ಈ ಬಡಪಾಯಿ ಗತಿ ಏನು" ಮೃದುವಾಗಿ ಕೇಳಿದೆ. ಅಷ್ಟೇ ಸಾಕಾಯಿತು ಚಿನ್ಮಯಿಗೆ. ಕಣ್ಣುಗಳು ತುಂಬಿಕೊಂಡವು. ಹಲ್ಲುಗಳಿಂದ ತುಟಿಯನ್ನು ಕಚ್ಚಿ ಹಿಡಿದಿದ್ದಳು. ನಾನು ಹೇಳಿದ್ದು ಸರಿಯಲ್ಲ ಎಂಬಂತೆ ತಲೆ ಅಡ್ಡವಾಗಿ ಆಡಿಸಿದಾಗ ಒಂದು ಕಣ್ಣೀರ ಹನಿ ನನ್ನ ಕೆನ್ನೆಯ ಮೇಲೆ ಬಿತ್ತು. ಎದ್ದು ಕುಳಿತು ಅವಳನ್ನು ನನ್ನ ಮಡಿಲಿಗೆ ಎಳೆದುಕೊಂಡು ನನ್ನೆದೆಗೆ ಅಪ್ಪಿಕೊಂಡೆ. ಮೌನವಾಗಿ ಅಳುತ್ತಿದ್ದಳು. ನನ್ನ ಎದೆ ತೋಯುತ್ತಿತ್ತು. ಹೊಟ್ಟೆಯಲ್ಲಿ ಸಂಕಟವಾಗುತ್ತಿತ್ತು. ಅತ್ತು ಸಮಾಧಾನವಾದ ಚಿನ್ನು ಮುಖವೆತ್ತಿ ನಕ್ಕಳು. ಒದ್ದೆಯಾದ ಉದ್ದನೆಯ ಕಣ್ರೆಪ್ಪೆಗಳ ಅಡಿಯಿಂದ ಕಣ್ಣುಗಳು ಮಿಂಚಿದವು. "ಅಯ್ಯೋ, ಅಪರೂಪಕ್ಕೆ ಬಾಲ್ಯ ಸ್ನೇಹಿತರ ಜೊತೆ ಒಂದು ದಿನ ಖುಷಿಯಲ್ಲಿ ಕಳೆದು ಬಂದಿದೀರಿ. ಒಂದು ಭಾನುವಾರ ಎಲ್ಲೂ ಹೋಗಲಿಲ್ಲ ಆದ್ರೇನಂತೆ. ಮುಂದಿನ ವಾರ ಹೋದರಾಯಿತು. ಅದೂ ಅಲ್ಲದೆ, ನಂಗೆ ಕೈಯಡಿ, ಕಾಲಿನಡಿ ಬಂದು ತೊಂದರೆ ಕೊಡಕ್ಕೆ ನೀವಿಲ್ಲದೆ ಇದ್ದಿದ್ರಿಂದ ಇವತ್ತು ಬಾಕಿ ಇದ್ದ ಎಷ್ಟೋ ಕೆಲಸಗಳನ್ನು ಮುಗಿಸಿದೀನಿ ಗೊತ್ತಾ?" ಕಿಸಕ್ಕನೆ ನಕ್ಕು, ಏಟು ಕೊಡಲು ಎತ್ತಿದ್ದ ನನ್ನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಳು. ನಗುತ್ತಿದ್ದ ಸೇಬುಗೆನ್ನೆಯನ್ನು ಮೆಲ್ಲಗೆ ಕಚ್ಚಿದೆ. "ಆಹ್" ಎನ್ನುತ್ತಾ ಕೆನ್ನೆಯನ್ನು ಉಜ್ಜಿಕೊಂಡಳು. " ಹಾಗಿದ್ರೆ ಮತ್ಯಾಕೆ ಅಳು?" ನಗುತ್ತಿದ್ದವಳ ಮುಖ ಕೂಡಲೇ ನಗುವ ಮರೆಯಿತು. " ಇವತ್ತೇನು ಹೇಳಿ?" "ಭಾನುವಾರ" ಉತ್ತರಿಸಿದೆ. "ಯಾವ ಭಾನುವಾರ? ಯಾವ ತಿಂಗಳು?" ಮರುಪ್ರಶ್ನೆಯ ರಾಕೆಟ್ ಬಂತು " ಆಗಸ್ಟ್ ತಿಂಗಳ ಮೊದಲ ಭಾನುವಾರ." "ಅಂದ್ರೆ ಇವತ್ತಿನ ವಿಶೇಷ ಏನು?" ಮತ್ತೊಂದು ಬಾಣ. ಪಟ್ ಎಂದು ನನ್ನ ತಲೆಗೆ ನಾನೇ ಒಂದು ತಟ್ಟಿಕೊಂಡೆ. " ಸಾರಿ, ತುಂಬಾನೇ ಸಾರಿ ಮುದ್ದಮ್ಮ....ಮದುವೆಗೆ ಹೋಗಿ ಬರೋ ಗಡಿಬಿಡಿಯಲ್ಲಿ ಮರೆತೇಬಿಟ್ಟೆ ಇವತ್ತು ಫ್ರೆಂಡ್ ಶಿಪ್ ಡೇ ಅಂತ. ನಿಜಕ್ಕೂ ಸಾರಿ ಕಣೋ..." ...ಬಲಗೈಯನ್ನು ಮುಂದೆ ಚಾಚಿದೆ. ತೋರು ಬೆರಳು, ಕಿರುಬೆರಳನ್ನು ಉದ್ದಕ್ಕೆ ಬಿಟ್ಟು, ಉಳಿದ ಎರಡು ಬೆರಳು ಮಡಿಸಿ ಕೊಂಡು. ನಗುತ್ತಳುತ್ತ ಅವಳೂ ಅದೇ ರೀತಿ ಕೈ ನೀಡಿ ಇಬ್ಬರ ಚಾಚಿದ ಬೆರಳುಗಳು ತಾಗುವಂತೆ ಹಿಡಿದಳು. ಹೆಬ್ಬೆರಳುಗಳನ್ನು ಪರಸ್ಪರ ತಾಗಿಸಿ ಕೈಗಳನ್ನು ತಿರುಗಿಸಿ ಇಬ್ಬರೂ ಪರಸ್ಪರ ಕೈ ಕುಲುಕುತ್ತಾ ಶುಭಾಶಯ ಕೋರಿಕೊಂಡೆವು. ಪೂರ್ತಿ ಸಮಾಧಾನದಿಂದ ಆಗಷ್ಟೇ ಬಿರಿದ ಮಲ್ಲಿಗೆಯಂತೆ ನಕ್ಕಳು. " ಈಗ ಸಮಾಧಾನ ಆಯ್ತು. ಎಲ್ಲಿ ಹಾಗೇ ಮಲಗಿಬಿಡ್ತೀರೋ ಸುಸ್ತಾಗಿದೆ ಅಂತ ಅಂದುಕೊಂಡಿದ್ದೆ. " "ಹಾಗೆ ಒಂದು ವೇಳೆ ನಾ ಮಲಗಿದ್ರೂ ನನ್ನ ಎಬ್ಬಿಸಿ ಕೇಳುವಂಥ ಹಕ್ಕು, ಅಧಿಕಾರ ನಿನಗೆ ಇದೆ ಚಿನ್ನು....ಒಂದು ಕೈ ಕುಲುಕಿ ಶುಭಾಶಯ ಕೋರುವುದಷ್ಟೇ ನಿನ್ನ ಬೇಡಿಕೆ. ಅಷ್ಟನ್ನೂ ಪೂರೈಸದ ನಾನೆಂತಹ ಫ್ರೆಂಡ್ ಹೇಳು... ನಿನಗೆ ಹೆಂಡತಿಯಾಗೂ ನನ್ನ ಮೇಲೆ ಅಧಿಕಾರ ಇದೆ. ಒಬ್ಬ ಒಳ್ಳೆಯ, ಸದಾ ನನ್ನ ಒಳಿತನ್ನೇ ಬಯಸುವ ಸ್ನೇಹಿತೆಯಾಗಿಯೂ ನನ್ನ ಮೇಲೆ ಅಧಿಕಾರ ಇದೆ ನಿನಗೆ. ನನಗೋಸ್ಕರ ಇಷ್ಟೆಲ್ಲ ಮಾಡುವ ನಿನಗೆ ನಾನು ನಿನ್ನ ಸಣ್ಣ ಕೋರಿಕೆಯನ್ನೂ ಮರೆತೇ ಬಿಟ್ಟೆ ಅಂತ ನನ್ನ ಮೇಲೇ ನನಗೆ ಬೇಸರ ಚಿನ್ನಾ." ನನ್ನ ಬೇಸರ ನೋಡಿದ ಕೂಡಲೇ ಅವಳ ಬೇಸರ, ದುಃಖ ಎರಡೂ ಕಿಟಕಿಯಿಂದ, ಗವಾಕ್ಷಿ ಯಿಂದ ಹೊರಗೋಡಿದವು. " ಅಯ್ಯೋ, ನೀವು ಇಷ್ಟು ಸಂಕಟ ಪಡ್ತೀರಿ ಅಂತ ಗೊತ್ತಿದ್ರೆ ನಾನು ನೆನಪಿಸ್ತಾನೆ ಇರಲಿಲ್ಲ. ನೀವು ಇವತ್ತು ಫೋನ್ ಕಡೆನೂ ಗಮನ ಕೊಟ್ಟಿಲ್ಲ. ಇಲ್ಲಾಂದ್ರೆ ನಿಮಗೆ ಖಂಡಿತಾ ನೆನಪಾಗ್ತಾ ಇತ್ತು ಬಿಡಿ. ನಾನೊಬ್ಬಳು, ಸುಸ್ತಾಗಿ ಬಂದಿರೋ ನಿಮ್ಮನ್ನು ಕಾಡಿಬಿಟ್ಟೆ. ನನ್ನದೂ ಸಾರಿ ಕಣ್ರೀ. "
ಮದುವೆಗೆ ಮೊದಲು ನಾವು ಉತ್ತಮ ಸ್ನೇಹಿತರು. ನಾನು ಕೆಲಸ ಮಾಡುತ್ತಿದ್ದ ಆಫೀಸಿಗೆ ನಾನು ಸೇರಿದ ಮೂರು ವರ್ಷಗಳ ನಂತರ ಆಗಷ್ಟೇ ಡಿಗ್ರಿ ಮುಗಿಸಿದ್ದ ಚಿನ್ಮಯಿ ಸೇರಿದ್ದಳು. ನಾನು ಹೆಚ್ಚಾಗಿ ಯಾರೊಂದಿಗೂ ನಾನಾಗೇ ಮಾತನಾಡದ ಕಾರಣ ಅವಳಿಂದ ದೂರದಲ್ಲೇ ಇದ್ದೆ. ಉಳಿದವರಿಗೆಲ್ಲ ಅಚ್ಚು ಮೆಚ್ಚಿನ , ಆಫೀಸಿನ ಪುಟ್ಟ ಹುಡುಗಿಯಾಗಿದ್ದವಳು ನನ್ನ ಸ್ನೇಹ ಸಂಪಾದಿಸುವುದನ್ನೇ ಗುರಿ ಮಾಡಿಕೊಂಡು ಅದರಂತೆ ನಡೆದಿದ್ದಳು. ಅವಳ ಸರಳತೆ, ಸಹಜತೆ, ನಿರ್ಮಲತೆ, ಎಲ್ಲರನ್ನೂ ಹಚ್ಚಿಕೊಳ್ಳುವ, ಪ್ರೀತಿಸುವ, ಸ್ಪಂದಿಸುವ ಗುಣ, ಮುಗ್ಧತೆ, ಸ್ನೇಹಪರತೆ ನನ್ನನ್ನೂ ಸೆಳೆದು , ಅವಳನ್ನು ಬಾಳ ಸಂಗಾತಿ ಮಾಡಿಕೊಳ್ಳುವಂತೆ ಪ್ರಚೋದಿಸಿದ್ದವು. ಅವಳಲ್ಲಿ ಆ ಬಗ್ಗೆ ಪ್ರಸ್ತಾಪಿಸಿದಾಗ ತನ್ನ ತಂದೆಯತ್ತ ಕೈ ತೋರಿದ್ದಳು. ಮನೆಯವರೆಲ್ಲರ ಮೆಚ್ಚುಗೆ, ಒಪ್ಪಿಗೆಯ ಮೇರೆಗೆ ವಿವಾಹ ನೆರವೇರಿತ್ತು. ಅವಳದ್ದೊಂದು ಕರಾರು. ನಾವು ದಂಪತಿಗಳಾಗಿದ್ದರೂ ಮೊದಲು ಸ್ನೇಹಿತರು. ಗಂಡ, ಹೆಂಡತಿ ಅನ್ನುವ ಪಟ್ಟಗಳಿಗೆ ಒಂದಿಷ್ಟಾದರೂ ಅಹಂ ಅಂಟಿಕೊಂಡಿರತ್ತೆ. ಸ್ನೇಹದಲ್ಲಿ ಅಹಂ ಗೆ ಜಾಗವಿಲ್ಲ ಅಂತ ಅವಳ ವಾದ. ಹಾಗಾಗಿ ನಮ್ಮ ಜೀವನದಲ್ಲಿ ಯಾವ ಸಮಸ್ಯೆ ಎದುರಾದರೂ ಸ್ನೇಹಿತರಾಗಿ ಅದನ್ನು ದಾಟಿ ಬಂದಿರುವ ಸಾಧನೆ ನಮ್ಮದು. ನಮ್ಮ ಮದುವೆಯ ವಾರ್ಷಿಕೋತ್ಸವ, ನಾವು ಮೊದಲು ಭೇಟಿಯಾದ ದಿನ, ನಾವು ಮೊದಲು ಮಾತನಾಡಿದ ದಿನ, ಸ್ನೇಹಿತರ ದಿನಾಚರಣೆ ಇವೆಲ್ಲವೂ ಅವಳ ಕ್ಯಾಲೆಂಡರ್ ನ ಅಮೂಲ್ಯ ದಿನಗಳು. ಅವುಗಳ ಆಚರಣೆಗಳೂ ಅವಳಂತೆಯೇ ವಿಶಿಷ್ಟವಾದವು. ಬಲವಂತವಾಗಿ ಎಳೆದುಕೊಂಡು ಹೋಗಿ ಮಲಗಿಸಿ , ಹೊದಿಕೆ ಹೊದಿಸಿ , ಮಕ್ಕಳಿಗೆ ಮಾಡುವಂತೆ ತಟ್ಟುತ್ತಾ ಕುಳಿತಳು ನನ್ನ ಪಕ್ಕ. ಅವಳನ್ನೇ ನೋಡುತ್ತಾ ನೋಡುತ್ತಾ ನಿದ್ರೆಗೆ ಜಾರಿದೆ.
🙌🙌🙌🙌🙌🙌🙌🙌🙌🙌🙌🙌