ನಾನೂ ಸೈಕಲ್ ಬಿಡಲು ಕಲಿತೆ

ಸೈಕಲ್ ಬಿಡಲು ಕಲಿಸಿದ ಚಿಕ್ಕಪ್ಪ ಪೆಲತ್ತಡ್ಕ ರಾಮಕೃಷ್ಣ ಭಟ್

ProfileImg
04 Jun '24
5 min read


image

ದೊಡ್ಡವರ ದಾರಿ: ಸೈಕಲ್ ಬಿಡಲು ಕಲಿಸಿದ ಚಿಕ್ಕಪ್ಪ ಪೆಲತ್ತಡ್ಕ ರಾಮಕೃಷ್ಣ ಭಟ್  
ನಾನೂ ಸೈಕಲ್ ಬಿಡಲು ಕಲಿತಿದ್ದೆ..ಅದರಲ್ಲೇನು ಮಹಾ ಅಂತೀರಾ ? ಹೌದು ಅದರಲ್ಲಿಯೇ ಇರುವುದು ವಿಶೇಷತೆ.
ನಾನು ಐವತ್ತೆರಡು  ವರ್ಷ ಹಿಂದೆ ಹುಟ್ಟಿದ್ದು.ಆ ಕಾಲದಲ್ಲಿ ನಾವ್ಯಾರೂ ಮೂರು ಚಕ್ರದ ಮಕ್ಕಳ ಸೈಕಲನ್ನು ನೋಡಿಯೇ ಇಲ್ಲ‌,ಎರಡು ಚಕ್ರದ ಸೈಕಲನ್ನು ಹುಡುಗಿಯರು ಬಿಡುದು ಬಿಡಿ ನೋಡುದೂ ಅಪರಾದ ಎನಿಸಿದ್ದ ಕಾಲವದು.
ನನ್ನ ಅಣ್ಣ ದೊಡ್ಡಮ್ಮನ ಮಗ ಅಣ್ಣ ಸೈಕಲ್ ಬಿಡ್ತಾ ಇದ್ದಿದ್ದು ಗೊತ್ತು ನನಗೆ.
ಗೇರು ಬೀಜ ಕೊಯ್ದು ಮಾರಾಟ ಮಾಡಿ ,ಅಲೂಮಿನಿಯಂ ಕಬ್ಬಿಣದ ಸರಿಗೆ ಮುಳ್ಳು ಇತ್ಯಾದಿ ದಾರಿಯಲ್ಲಿ ಮನೆ ಆಸು ಪಾಸು ಬಿದ್ದ ಗುಜರಿಯನ್ನು ( ಆಗ ಕರೆಂಟು ಬಂದ ಸಮಯ ಅಲ್ಯೂಮೀನಿಯಂ ಸರಿಗೆಗೆಗಳ ತುಂಡುಗಳು ದಾರಿ ದಾರಿ ಬಿದ್ದಿರ್ತಿದ್ದವು ) ಹೆಕ್ಕಿ ಮಾರಾಟ ಮಾಡಿದ ಪುಡಿಕಾಸು ನಮ್ಮಲ್ಲಿ ಇರ್ತಿತ್ತು.
ಇದನ್ನು ಬೇಕಾದ ಹಾಗೆ ಖರ್ಚು ಮಾಡುವ ಸ್ವಾತಂತ್ರ್ಯ ನಮಗಿತ್ತು.ಆದರೆ ಏನು ಹೇಗೆ ಖರ್ಚು ಮಾಡಿದ್ದೇವೆ ಎಂಬುದರ ಲೆಕ್ಕ ಕೊಡಬೇಕಿತ್ತು
ಊರಲ್ಲಿ ಗಂಟೆಗೆ 50 ಪೈಸೆ ಗೆಸೈಕಲ್ ಗಳನ್ನು ಬಾಡಿಗೆಗೆ ಕೊಡುವ ಅಂಗಡಿಗಳಿದ್ದವು.
ಊರ ಹುಡುಗರು ಬಾಡಿಗೆಗೆ ಸೈಕಲ್ ಪಡೆದು ಓಡಿಸ್ತಾ ಇದ್ದರು.ಸೈಕಲ್ ಓಡಿಸುವ ಹುಡುಗರೆಂದರೆ ಖಾಲಿಪೋಲಿಗಳು ಎಂಬ ಅಭಿಪ್ರಾಯ ಇತ್ತು.
ಈ ನಡುವೆಯೂ ಹೆತ್ತವರ ಕಣ್ಣು ತಪ್ಪಿಸಿ ಅಣ್ಣ ಮತ್ತು ದೊಡ್ಡಮ್ಮನ ಮಗ ಅಣ್ಣ ಸೈಕಲ್ ಬಾಡಿಗೆಗೆ ಪಡೆದು ಓಡಿಸುತ್ತಿದ್ದರು.
ನನಗೂ ಸೈಕಲ್ ಓಡಿಸಬೇಕೆಂಬ ಮಹದಾಸೆ ಇತ್ತು‌‌.ಓಡಿಸುದು ಬಿಡಿ ಮುಟ್ಟಿ ನೋಡಲು ಕೂಡ ನಮಗೆ ಅವಕಾಶ ಇರಲಿಲ್ಲ.ಸೈಕಲ್ ಅಂಗಡಿ ಕಡೆಯ ದಾರಿಯಲ್ಲಿ ಹೋಗುವಾಗ ಓರೆಗಣ್ಣಿನಲ್ಲಿ ನೋಡುತ್ತಿದ್ದೆ‌.ನೇರವಾಗಿ ನೋಡುವಂತಿಲ್ಲ.ಹೆಣ್ಣು ಮಕ್ಕಳು ತಲೆತಗ್ಗಿಸಿ ಶಾಲೆಗೆ ಹೋಗಿ ಬರಬೇಕು‌.ಆ ಕಡೆ ಈಕಡೆ ನೋಡುವಂತಿಲ್ಲ.ಎಂಬ ಅಲಿಖಿತ ಶಾಸನ ಇತ್ತು ನಮಗೆಲ್ಲ.
ನಾನು ಏಳನೆಯ ತರಗತಿಯಲ್ಲಿ ಓದುತ್ತಿದ್ದಾಗ ನನ್ನ ಅಕ್ಕನ‌ ಮದುವೆ ಆಯಿತು.ನನ್ನ ಸಣ್ಣಜ್ಜಿಯ ( ತಂದೆಯ ಚಿಕ್ಕತಾಯಿ ,ತಾಯಿಯ ಸೋದರತ್ತೆ ,ನನ್ನ ತಂದೆ ತಾಯಿ ಸೋದರ ಸಂಬಂಧಿಗಳು) ಮೊಮ್ಮಗನೆ ನನ್ನ ಅಕ್ಕನ ಗಂಡ ಬಾವ.ನನ್ನ ಅಕ್ಕನ‌ಮನೆ ಮತ್ತು ಸಣ್ಣಜ್ಜಿಯ ಮನೆ ಹತ್ತಿರ ಹತ್ತಿರ ಇತ್ತು.
ಅಕ್ಕನ ಮದುವೆಯಾದ ನಂತರ ನಾವು ಅಕ್ಕನ ಮನೆಗೆ ಹೋಗಿ ಬರುವಾಗ ಸಣ್ಣಜ್ಜಿಯ ಮನೆಗೂ ಆಗಾಗ ಹೋಗುತ್ತಿದ್ದೆವು.
.ಅಜ್ಜಿ ಮಗನ ಮನೆ ಸಮೀಪವೇ ಒಂದು ಕೊಟ್ಟಗೆಯನ್ನು ಮನೆಯಾಗಿ ಬದಲಾಯಿಸಿ ಸ್ವತಂತ್ರವಾಗಿ ಬದುಕುತ್ತಿದ್ದರು.ಅಲ್ಲಿಯೇ ಸಮೀಪ ಇದ್ದ ಚಿಕ್ಕಪ್ಪ ಮೊಮ್ಮಕ್ಕಳು ದಿನಾಲೂ ಬಂದು ಹೋಗುತ್ತಿದ್ದರು.ಬೇಕಾದುದನ್ನು ತಂದು ಕೊಡುತ್ತಿದ್ದರು.ಅಜ್ಜಿ ತನ್ನ ಪಾಲಿನ ಅಡಕೆ ತೆಂಗಿನ ಕಾಯಿಯನ್ನು ಬಳಸುತ್ತಿದ್ದರು.
ಪೆಲತ್ತಡ್ಕ ಅಜ್ಜಿ ಮನೆಗೆ ಹೋಗುದೆಂದರೆ ನಮಗೆ ಬಹಳ ಸಂಭ್ರಮ ಅಜ್ಜಿ ಯಕ್ಷಗಾನ‌ಪ್ರಿಯೆ ,ನಮ್ಮನ್ನೆಲ್ಲ ಯಕ್ಷಗಾನ ನೋಡಲು ಕರಕೊಂಡು ಹೋಗುತ್ತಿದ್ದರು.ತರತರಹದ ತಿಂಡಿ ಮಾಡುತ್ತಿದ್ದರು.ಮೊಮ್ಮಕ್ಕಳಿಗೆ ಮಾಡಿ ಕೊಟ್ಟು ಅಜ್ಜಿಯೂ ತಿಂದುಂಡು ಸಂತಸಪಡುತ್ತಿದ್ದರು .ಏನೆನೋ ಜಾನಪದ ಕಥೆಗಳನ್ನು ಹೇಳುತ್ತಿದ್ದರು 
ಇದೊಂದು ಆಕರ್ಷಣೆಯಾದರೆ ಇನ್ನೊಂದು ಆಕರ್ಷಣೆ ಚಿಕ್ಕಪ್ಪನ ಮಗನ ಸೈಕಲ್‌.ಸಣ್ಣಜ್ಜಿಯ ಮಗ ಚಿಕ್ಕಪ್ಪ ಆಗಿನ ಕಾಲಕ್ಕೇ ಓದಿದವರಾಗಿದ್ದು ಆಧುನಿಕ ಮನೋಭಾವದವರಾಗಿದ್ದರು‌..
ಹಾಗಾಗಿ ಹೆಣ್ಣುಮಕ್ಕಳು ಸೈಕಲ್ ತುಳಿಯಬಾರದೆಂಬ ಮನೋಭಾವ ಅವರಿಗಿರಲಿಲ್ಲ.ಮತ್ತು ನಾವೆಲ್ಲ ಸೈಕಲ್ ತುಳಿದರೆ ಸೈಕಲ್ ಹಾಳಾಗುತ್ತದೆ ಎಂಬ ಬಾವವೂ ಇರಲಿಲ್ಲ.
ನನ್ನ ತಮ್ಮ ಈಶ್ವರ ,ಸಣ್ಣಜ್ಜಿಯ ನೇರ ಮೊಮ್ಮಕ್ಕಳಾದ ವೆಂಕಟೇಶ ಮೊದಲಾದ ಹುಡುಗರು ಬೇಗ ಸೈಕಲ್ ಕಲಿತು ಬಿಡುತ್ತಿದ್ದರು‌.ಹುಡುಗಿಯರು ಯಾರೂ ಸೈಕಲ್ ಕಲಿಯಲು ಆಸಕ್ತಿ ತೋರಿರಲಿಲ್ಲ
ನನಗೆ ತುಂಬಾ ಆಸೆ ಇತ್ತು.ನಾನು ಇವರೆಲ್ಲ‌ಅಂಗಳದಲ್ಲು ಸೈಕಲ್ ಬಿಡುದನ್ನು ಆಸೆಗಣ್ಣಿನಿಂದ ನೋಡುದನ್ನು ಗಮನಿಸಿ ಚಿಕ್ಕಪ್ಪ( ರಾಮ‌ಕೃಷ್ಣ ಭಟ್ ಪೆಲತ್ತಡ್ಕ)
ನನ್ನನ್ನು ಕರೆದು ನೀನೂ ಸೈಕಲ್ ಬಿಡು ಎಂದರು‌.ಒಬ್ಬಳೇ  ಸೈಕಲ್ ದೂಡಿಕೊಂಡು ಕಲಿಯಲು ತುಂಬಾ ಟ್ರೈ ಮಾಡಿದೆ ಆಗಲಿಲ್ಲ.ಆಗ ಚಿಕ್ಕಪ್ಪ ಸೈಕಲನ್ನು ಹಿಂದೆ ಹಿಡಿದುಕೊಂಡರು .

ಅವರು ಹಿಡಿದುಕೊಂಡಾಗ ಸೈಕಲ್ ಬಿಡಲು ಆಯ್ತು.ನನಗೆ ಕಲಿಸುವ ಸಲುವಾಗಿ  ತುಂಬಾ ಸಲ ಸೈಕಲ್ ಹಿಡಿದುಕೊಂಡು ಅಂಗಳಕ್ಕೆ ಸುತ್ತು ಬಂದಿದ್ದರು‌
ಯಾಕೋ ಏನೋ ಎಷ್ಟೇ ಪ್ರಯತ್ನ ಪಟ್ಟರೂ ಅವರು ಕೈ ಬಿಟ್ಟ ಕೂಡಲೇ ನನಗೆ ಬ್ಯಾಲನ್ಸ್ ತಪ್ಪಿ ಬಿಡಲು ಆಗುತ್ತಿರಲಿಲ್ಲ.ತುಂಬಾ ದಿನ ನನಗೆ ಸೈಕಲ್ ಕಲಿಸಲು ಯತ್ನ ಮಾಡಿದರು ಅವರು.ಕೊನೆಗೆ ದೊಡ್ಡ ಸಮತಟ್ಟಾದ ಬಯಲಿಗೆ ಕರೆದುಕೊಂಡು ಹೋಗಿ ಬಿಡು ಬಿದ್ದರೆ ಹಿಡಿದುಕೊಳ್ತೇನೆ ಎಂದರು.ಹಾಗೇ ಹೇಗೋ ನನಗೆ ಸೈಕಲ್ ಬಿಡುವ ಬ್ಯಾಲನ್ಸ್ ಬಂತು
.ಅಷ್ಟರಲ್ಲಿ ನನ್ನ ಹಿಂದೆ ಹಿಡಿದುಕೊಂಡು ಓಡಿ ಬರುತ್ತಿದ್ದ ಚಿಕ್ಕಪ್ಪನ ಭಾರ ಕಡಿಮೆ ಎಂದರೂ ಹತ್ತು ಕೆಜಿ ಕಡಿಮೆ ಆಗಿರಬಹುದು.
ಅವರಿಗೆ ಇಬ್ಬರು ಗಂಡು ಮಕ್ಕಳು.ಹಾಗಾಗಿಯೋ ಏನೋ ಗಂಡು ಬೀರಿಯಾಗಿದ್ದ ನನ್ನ ಬಗ್ಗೆ ಬಹಳ ಪ್ರೀತಿ ಇತ್ತು.
ನಾನು ಪಿಯುಸಿ ಓದುವ ತನಕ ಆಗಾಗ ಅಕ್ಕನ‌ಮನೆಗೆ ಹೋಗುತ್ತಿದ್ದೆ ಆಗ ಸಣ್ಣಜ್ಜಿ ಮನೆ ಮತ್ತು ಚಿಕ್ಕಪ್ಪನ ಮನೆಗೂ ಹೋಗುತ್ತಿದ್ದೆ.ನನಗೂ ಚಿಕ್ಕಮ್ಮನಿಗೂ ಬಹಳ ಸ್ನೇಹವಿತ್ತು‌
ನಂತರ  ಬಿ ಎಸ್ ಸಿ ಓದಲು ಉಜಿರೆ ಎಸ್ ಡಿ ಎಂ ಕಾಲೇಜಿಗೆ ಸೇರಿದೆ‌‌‌.ಹಾಸ್ಟೆಲಿಗೆ ಸೇರಿದೆ .ಎರಡನೆ ವರ್ಷ ಓದುತ್ತಿರುವಾಗ ಮದುವೆ ಆಯಿತು‌.
ನಂತರ ಸಂಸಾರದ ತಾಪತ್ರಯಗಳು ಓದಿನ ನಡುವೆ ಅಕ್ಕನ‌ಮನೆಗಾಗಲೀ ಸಣ್ಣಜ್ಜಿ ಮನೆ ಚಿಕ್ಕಪ್ಪನ ಮನೆಗಾಗಲೀ ಹೋಗಲಾಗಲಿಲ್ಲ.
2001 ರಲ್ಲಿ ನಾನು ಹಗಲು ಹೊತ್ತಿನಲ್ಲಿ  ಬದಳಗ್ಗೆ 8 ರಿಂದ ಸಂಜೆ 3 ರ ತನಕ ಚಿನ್ಮಯ ಹೈಸ್ಕೂಲ್ ನಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ.ಸಂಜೆ ಆರರಿಂದ ಒಂಬತ್ತರ ತನಕ ಸಂತ ಅಲೋಷಿಯಸ್ ಸಂಧ್ಯಾ ಶಾಲೆಯನ್ನು ವಿಜ್ಞಾನದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ.ಆಗ ನನಗೆ ನಡೆದುಕೊಂಡು ಹೋಗಲು ಸಮಯ ಹೊಂದಾಣಿಕೆ ಮಾಡಿಕೊಳ್ಳಲು ಸಮಸ್ಯೆ ಆಯಿತು.ಹಾಗಾಗಿ ಒಂದು ಟುವೀಲರ್ ತೆಗೆಯಲು ನಿರ್ಧರಿಸಿದೆವು
ನನಗೆ ಗಾಡಿ ಬಿಡಲು ಬರುತ್ತಿರಲಿಲ್ಲ ಆದರೆ ಒಂದು ಕಾಲದಲ್ಲಿ ಚಿಕ್ಕಪ್ಒನ ಸತತ ಯತ್ನದಿಂದ ಸೈಕಲ್ ಬಿಡಲು ಕಲಿತಿದ್ದೆನಲ್ಲ.ಅದು ದೈರ್ಯ ಕೊಡ್ತು‌.ಸೈಕಲ್ ಕಲಿತವರಿಗೆ ಸ್ಕೂಟರ್ ಬಿಡಲು ಸುಲಭದಲ್ಲಿ ಬರುತ್ತದೆ ಎಂದು ಹೇಳುದು ಕೇಳಿದ್ದೆ..
ಅಂತೂ ಬಜಾಜ್ ಶೋರೂಮಿಗೆ ಹೋಗಿ ಬಜಾಜ್ ಸ್ಪಿರಿಟ್ ಅನ್ನು ಆಯ್ಕೆ ಮಾಡಿದೆ.
ಟೆಸ್ಟ್ ರೈಡಿಗೆ ಕೀ ಕೊಟ್ಟರು‌.ಗಾಡಿ ಬಿಡುದು ಬಿಡಿ.ಕೀಯನ್ನು ಎಂತ ಮಾಡಬೇಕು ಎಂಬುದೇ ನಮಗೆ ಗೊತ್ತಿರಲಿಲ್ಲ.ಪ್ರಸಾದರಿಗೂ ಟುವೀಲರ್ ಬಿಡಲು ಬರುತ್ತಿರಲಿಲ್ಲ.ಹಾಗೆ ಬಜಾಜ್ ಶೋರುಮಿನ ಸ್ಟಾಫೇ ಟೆಸ್ಟ್ ರೈಡಿಗಾಗಿ ಪ್ರಸಾದರನ್ನು ಹಿಂದೆ ಕೂರಿಸಿಕೊಂಡು ಎರಡು ಕಿಮೀ ಹೋಗಿ ಬಂದರು.ಅವರೇ ಮನೆಗೆ ಗಾಡಿಯನ್ನು ತಂದುಕೊಟ್ಟು ಕೀ ಹಾಕಿ ಹೇಗೆ ಸ್ಟಾರ್ಟ ್ ಮಾಡಬೇಕು,ಎಕ್ಸಿಲೇಟರ್ ಕೊಡಬೇಕು,ಬ್ರೇಕ್ ಕೊಡಬೇಕು ಅಟೋ ಸ್ಟಾರ್ಟ್ ಮಾಡುದು ಹೇಗೆ ಕಿಕ್ ಸ್ಟಾರ್ಟ್ ಮಾಡುದು ಹೇಗೆ ಇತ್ಯಾದಿ ಹೇಳಿಕೊಟ್ಡರು.
ಡಬಲ್ ಸ್ಟಾಂಡ್ ಹಾಕಿಕೊಟ್ಟು ಹೋದರು..ಅಲ್ಲಿಯೆ ಅದನ್ನು ಸ್ಟಾರ್ಟ್ ಮಾಡಿ ಪೂಲ್ ಎಕ್ಸಿಲೇಟರ್  ಕೊಟ್ಟೆ

ಆ ಭಯಾನಕ ಸದ್ದು ಈಗಲೂ ನನಗೆ ಕೇಳಿಸಿದಂತಾಗು ಎದೆ ಧಸಕ್ ಆಗುತ್ತದೆ.ಅಷ್ಟು ಗಾಬರಿಯಾಗಿದ್ದೆ.ಅದಕ್ಕೆ ಸರಿಯಾಗಿ ಅತ್ತೆ ಆ ದಿನ ನಮ್ಮ‌ಮನೆಗೆ ಬಂದಿದ್ದರು.ನಾವು ಗಾಡಿ ತೆಗೆಯುವ ವಿಚಾರ ಹೇಳಿರಲಿಲ್ಲ.ಹಾಗಾಗಿ ಏನನ್ನುವರೋ ಎಂಬ ಆತಂಕ.ಅವರೇನೂ ಹೇಳಲಿಲ್ಲ.ಗಾಡಿ ತಗೊಂಡ ಬಗ್ಗೆ ಸಂತಸಪಟ್ಟರು
ಅ ದಿನ ರಾತ್ರಿ ಇಡೀ ಆತಂಕ ,ಲೋನ್ ಮಾಡಿ ( 23,000₹) ಗಾಡಿ ತಂದಾಗಿದೆ ಬಿಡಲು ಬಾರದಿದ್ದರೆ ಏನು ಮಾಡುದು ಅಂತ.ನನ್ನ ಆತಂಕ ನೋಡಿದ ಪ್ರಸಾದ್ ತಲೆಬಿಸಿ ಮಾಡಬೇಡ.ಡ್ರೈವಿಂಗ್ ಕ್ಲಾಸಿಗೆ ಸೇರಿದರೆ ಹೇಳಿಕೊಡ್ತಾರೆ.ಅಟೋದಲ್ಲಿ ಅಭ್ಯಾಸ ಮಾಡಿಸಿ ಸ್ಕೂಟರ್ ಅಭ್ಯಾಸ ಮಾಡಿಸಿ ಹೇಳಿಕೊಡ್ತಾರೆ ಎಂದರು
ಮರುದಿನ ಭಾನುವಾರ‌,ಪ್ರಸಾದ್ ಏನೋ ಕೆಲಸದಲ್ಲಿ ಹೊರಗೆ ಹೋಗಿದ್ದರು.ನಾನೂ ಅತ್ತೆ ಸೇರಿ ಗಾಡಿಯನ್ನು ತಳ್ಳಿಕೊಂಡು ಮನೆ ಎದುರಿನ ರಸ್ತೆಗೆ ತಂದೆವು.
ಅದೃಷ್ಟಕ್ಕೆ ಹೆಚ್ಚು ಜನ ಸಂಚಾರವಿಲ್ಲದ ಒಂದು ಪರ್ಲಾಂಗಿನಷ್ಟು ದೂರದ ರಸ್ತೆ ಇತ್ತು.ಎರಡೂ ಬದಿಗಳಲ್ಲಿ ಮನೆಗಳ ಕಾಂಪೌಂಡ್ ಇತ್ತು‌ ಹಾಗಾಗಿ ಗಾಡಿ ಬ್ಯಾಲನ್ಸ್ ತಪ್ಪ  ಎಲ್ಲೆಲ್ಲೋ ಹೋಗಿ ಬೀಳುವ ಅಪಾತ ಇರಲಿಲ್ಲ.ಒಮ್ಮೆ ಮನೆಯ ಎದುರಿನಿಂದ ಸ್ಟಾರ್ಟದ ಮಾಡಿ ಕಾಲು ಊರಿಕೊಂಡೇ ಮುಖ್ಯ ರಸ್ತೆಯವರೆಗೆ ಬಂದೆ ಅಲ್ಲಿಂದ ಹಾಗೆಯೇ ಹಿಂದೆ ಬಂದೆ ಆಗ ನಮ್ಮ ಫ್ಲಾಟ್ ನ ಹನ್ನೊಂದೂ ಮನೆಗಳಲ್ಲಿ ಕಿಟಕಿ ತೆರೆದು ನಾನು ಗಾಡಿ ಬಿಡುವ ಚಂದ ನೋಡ್ತಾ ಇದ್ದರು 
ನನಗೆ ಇನ್ನಷ್ಟು ಆತಂಕ ಅಯಿತು‌.
ನಾನಿದ್ದ ಪ್ಲಾಟ್ ನಲ್ಲಿ ಹನ್ನೊಂದು ಮನೆಗಳಿದ್ದವು.ನಮ್ಮ ಹೊರತಾಗಿ ಎಲ್ಲರಲ್ಲೂ ಟುವೀಲರ್ ಇತ್ತು ಇಬ್ಬರಲ್ಲಿ ಕಾರು ಇತ್ತು‌.
ಇವರೆಲ್ಲ ಪೇಟೆಗೆ ಹೋಗುವಾಗ ಅರವಿಂದನ್ನು ಎತ್ತಿಕೊಂಡು ನಾನು ಹೋಗುತ್ತಿರುವುದನ್ನು ನೋಡಿ ಕೂಡ ಒಮ್ಮೆ ಕೂಡ ಡ್ರಾಪ್ ಮಾಡಿದವರಲ್ಲ.ಬರ್ತೀರಾ ಎಂದು ಕೇಳಿದವರಲ್ಲ.

ಹಾಗಾಗಿ ಒಂದು ಪಂಥ ಬಂತು .ಬಿದ್ದು ಕೈಕಾಲು ಸೊಂಟ ಮುರಿದರೂ ಸರಿಯೇ ,ಗಾಡಿ ಬಿಡಲೇ ಬೇಕೆಂದು ನಿರ್ಧರಿಸಿದೆ.
ಅಟೋ ಸ್ಟಾರ್ಟರ್ ಇದ್ದ ಕಾರಣ ಸ್ಟಾರ್ಟ್ ಮಾಡುದಯ ಕಷ್ಟದ ವಿಚಾರವಾಗಿರಲಿಲ್ಲ.ಸ್ಟಾರ್ಟ್ ಮಾಡಿ ಎಕ್ಸಿಲೇಟರ್ ಕೊಟ್ಟು ಕಾಲು ನೆಲದಿಂದ ತೆಗೆದು ಮೇಲೆ ಇಟ್ಟೆ‌.ಒಂದು ಕ್ಷಣ ಆಚೀಚೆ ವಾಲಾಡಿದರೂ ನಂತರ ಹಿಡಿತ ಸಿಕ್ತು.ಮುಖ್ಯ ರಸ್ತೆಯವರೆಗೆ ಹೋದೆ.ಸಡನ್ ಬ್ರೇಕ್ ಹಿಡಿದು ಬಿದ್ದೆ.ಅಷ್ಟರಲ್ಲಿ ಅತ್ತೆಯವರು ಓಡಿ ಬಂದರು‌.ಇಬ್ಬರೂ ಸೇರಿ ಗಾಡಿ ಎತ್ತಿ ನಿಲ್ಸಿದೆವು.
ಅದೃಷ್ಟಕ್ಕೆ ಗಾಡಿಗಾಗಲೀ ನನಗಾಗಲೀ ಸಣ್ಣ ತರಚು ಗಾಯ ಗೀರು ಬಿಟ್ಟರೆ ದೊಡ್ಡ ಏಟಾಗಿರಲಿಲ್ಲ.
ನಂತರ ಅಲ್ಲಿಂದ ಸ್ಟಾರ್ಟ್ ಮಾಡಿ ಎಕ್ಸಿಲೇಟರ್ ಕೊಟ್ಟು ಮನೆ ಸಮೀಪ ಬಂದೆ.ಸಮೀಪ ಬರುತ್ತಿದ್ದಂತೆ ಎಕ್ಸಿಲೇಟರ್ ಕಡಿಮೆ ಮಾಡಿ ನ್ಯೂಟ್ರಲ್ ಗೆ ತಂದಯ ಬ್ರೇಕ್ ಹಿಡಿದು ನಿಲ್ಲಿಸಿದೆ.ತೆರೆದ ಬಾಗಿಲು ಕಿಟಕಿಗಳು ಮುಚ್ಚಿಕೊಂಡವು.!
ಮತ್ತೆಂತದೂ ಸಮಸ್ಯೆ ಆಗಲಿಲ್ಲ‌
ಅಷ್ಟರ ತನ ಒಮ್ಮೆಯೂ ಡ್ರಾಪ್ ಕೇಳದ ಮಂದಿ ನಾನು ಗಾಡಿಯಲ್ಲಿ ಓಡಾಡಲು ಆರಂಭಿಸಿದ ನಂತರ ನಾನು ವಾಕಿಂಗ್ ಹೋಗುವಾಗ ಕೂಡ ಬನ್ನ ಡ್ರಾಪ್ ಕೊಡ್ತೇನೆ ಎಂದು ಹೇಳುತ್ತಿದ್ದರು.ಬೇಡ ವಾಕಿಂಗ್ ಹೊರಟಿದ್ದೇನೆ ಎಂದರೂ ಒತ್ತಾಯ ಮಾಡಿ ಪಾರ್ಕ್ ಹತ್ರ ಬಿಡ್ತೇನೆ ಅಲ್ಲಿಯೇ ವಾಕ್ ಮಾಡಿ ಎನ್ನುತ್ತಿದ್ದರು.ಇದು ವಿಚಿತ್ರ ಜಗತ್ತು

ಇಂತಹ ಜಗತ್ತಿನಲ್ಲಿ ತಲೆಯೆತ್ತಿ ಆತ್ಮವಿಶ್ವಾಸದಿಂದ ಬದುಕಲು ನನಗೆ ಸ್ಕೂಟರ್ ಸಹಾಯ ಮಾಡಿತು.ಇದರ  ಯಶಸ್ಸು ಪೂರ್ತಿಯಾಗಿ ನನಗೆ ಸೈಕಲ್ ಕಲಿಸಿದ ಪೆಲತ್ತಡ್ಕ ಚಿಕ್ಕಪ್ಪ ರಾಮಕೃಷ್ಣ ಭಟ್ರಿಗೆ ಸಲ್ಲುತ್ತದೆ‌.ನನ್ನಂತಹ ಒಡ್ಡಿಗೆ ಹರಸಾಹಸ ಪಟ್ಟು ಸೈಕಲ್ ಬಿಡಲು ಕಲಿಸಿದ್ದರು ಅವರು.ಅದೇ ಆತ್ಮ ವಿಶ್ವಾಸವೇ ನನಗೆ ಟುವೀಲರ್ ಬಿಡಲು ಕಾರು ಬಿಡಲು ಕಲಿಯಲು ಬೆನ್ನುಬಾಗಿ ನಿಂತಿತ್ತು‌.
ಅಂದು ಅವರು ಸೈಕಲ್ ಕಲಿಸದೇ ಇದ್ದಿದ್ದರೆ ಇಂದಿಗೂ ನಾನು ನನ್ನ ಒರಗೆಯ ಹುಡುಗಿಯರಂತೆ ಇರುತ್ತಿದ್ದೆ‌.ನನ್ನ ಓರಗೆಯ ಹುಡುಗಿಯಲ್ಲಿ ಯಶೋದಾ ಬಿಟ್ಟರೆ ಬೇರೆಯಾರೂ ಡ್ರೈವಿಂಗ ಕಲಿಯಲಿಲ್ಲ‌
ಹಳ್ಳಿಯಲ್ಲಿ ಹುಟ್ಟಿ ಬೆಳೆದವರಿಗೆ ಸೈಕಲ್ ತುಳಿದೂ ಅಭ್ಯಾಸವಿಲ್ಲದವರಿಗೆ ಡ್ರೈವಿಂಗ್ ಕಲಿಯುದು ಸ್ವಲ್ಪ ಕಷ್ಟದ್ದೇ.ಈ ನಿಟ್ಟಿನಲ್ಲಿ ನಾನು ನನಗೆ ಸೈಕಲ್ ಬಿಡಲು ಕಲಿಸಿದ ಚಿಕ್ಕಪ್ಪನಿಗೆ ಚಿರ ಋಣಿ
ತುಂಬಾ ದಿವಸದಿಂದ ಈ ಬಗ್ಗೆ ಬರೆಯಬೇಕೆಂದು ಕೊಂಡಿದ್ದೆ.ಸೈಕಲ್ ದಿವಸ ಇಂದು ಎಂದು ಗೊತ್ತಾಗಿ ಇದೇ ಸಕಾಲ ಎಂದು ಬರೆದೆ 
ಡಾ.ಲಕ್ಷ್ಮೀ ಜಿ ಪ್ರಸಾದ್

Category:Stories



ProfileImg

Written by Dr Lakshmi G Prasad

Verified