ಸುಡು ಬಿಸಿಲಿನಲ್ಲಿ ಸೆರಗ ಹೊದ್ದು ಅಮ್ಮ ಹಪ್ಪಳಗಳ ಒಣಗಿಸಿ,ಸಂಡಿಗೆ ಒತ್ತಿ ಬಂದು ಏನೋ ಸಾಧನೆಯ ಸಂಭ್ರಮ ,ಬಾಯಾರಿಕೆಯ ಸಂಕಟದಲ್ಲಿ ಸಾವರಿಸುವಷ್ಟು ನೀರು ಕುಡಿದು ದಿನಂಪ್ರತಿ ಕೆಲಸಗಳಲ್ಲಿ ತೊಡಗಿಕೊಂಡ ನೆನಪು ಬೇಸಿಗೆ ರಜೆಯ ಸಡಗರದಲ್ಲಿ ಮನೆಯಲ್ಲೇ ಉಳಿದು ಅಮ್ಮನಿಗೆ ಹಪ್ಪಳ ಒತ್ತಲು ಸಹಕರಿಸುತ್ತಾ ಹರಿದ ಹಸಿಹಪ್ಪಳಗಳ ಬಾಯಿಗಿರಿಸಿ ,ಒಣಗಿಸುವ ನೆಪದಲ್ಲೂ ಅಮ್ಮನೊಂದಿಗೆ ಸಂಜೆ ಹಪ್ಪಳ ಸುಟ್ಟುಕೊಡು ವಂತೆ ಆಗ್ರಹದೊಂದಿಗೇ ಕೈಜೋಡಿಸಿದವರಿಗೇ ಆ ಮೆಲುಕು ಅದ್ಭುತ.ಸರಿಸುಮಾರು ಡಬ್ಬಿಗಳು ತುಂಬಿದ ಮೇಲೆ ಅಮ್ಮನಿಗೆ ಸಮಾಧಾನ.ಈ ಮಳೆಗಾಲಕ್ಕೆ ಇಷ್ಟು ಸಾಕು ಎಂದು ಲೆಕ್ಕಾಚಾರ ಅವಳದು.ಎಷ್ಟಾದರು ಹಸಿವು ನೀಗಿಸುವ ಕೈ ಅಲ್ಲವೇ ! ಒಂದಿಷ್ಟು ನೆಂಟರಿಷ್ಟರು ಬಂದರೆ ,ಮಗಳ ಮನೆಗೆಂದೋ,ಮಕ್ಕಳು ಇಷ್ಟಪಡುತ್ತಾರೆ ಎಂತಲೇ ಹೆಚ್ಚಾಗಿ ಮಾಡಿ ಇಡುವ ಸ್ವಭಾವ ಅವಳದು.
ಅಂತೂ ಮಳೆಗಾಲದ ಮೋಡ ಕವಿದರೆ .ಹೇಳೀ ಕೇಳೀ ಮಲೆನಾಡು ಪ್ರದೇಶ. ಬಿಟ್ಟೂ ಬಿಡದೆ ಸುರಿಯುವ ಜಿಟಿಜಿಟಿ ಮಳೆ. ತಂಪಾದ ಗಾಳಿ, ಜೂನ್ ಮಾಸವೆಂದರೇ ಮಾನ್ಸೂನ್ ಎನ್ನುವ ಕಾಲವೊಂದಿತ್ತು.ಶಾಲೆಗಳು ಪ್ರಾರಂಭ ದಾರಿ ಉದ್ದಕ್ಕೂನೀರಗುಂಡಿಯ ಮೇಲೆ ನಡೆಯುತ್ತಾ.ನಗೆಯುತ್ತಾ ಆಡುತ್ತಾ ಮನೆಗೆ ಬಂದರೆ ಬೆಚ್ಚನೆಯ ಹಂಡೆಯ ಬಿಸಿನೀರು ಕಾಲಿಗೆ, ಸೌದೆ ಒಲೆಯ ಕಾವಿಗಾಗಿ ಅಲ್ಲೇ ನಮ್ಮ ಠಿಕಾಣಿ. ಗದ್ದೆ ಇಂದ ತೊಯ್ದು ಬಂದ ಪಪ್ಪ ನಮ್ಮ ಆಸುಪಾಸಿನಲ್ಲಿ ಕಂಬಳಿ ಒಣ ಹಾಕಿದರೆ ಅದರಿಂದಲೂ ಸುರಿವ ನೀರ ಹನಿಗಳ ಜೊತೆ ಆಟ.
ಅಮ್ಮ ಬಿಸಿಬಿಸಿ ಕಾಫಿ, ಟೀ ಕಾಯಿಸಿ ತಂದರೆ ಸ್ವರ್ಗ ಅದು. ಹಪ್ಪಳ ಕೊಡಮ್ಮ ಎಂದರೆ,"ಈಗಲೇ ತೆಗೆದರೆ ಹೆಂಗೆ,ಇನ್ನೂ ಮಳೆಗಾಲ ಪ್ರಾರಂಭವಾಗಿದ್ದು ಅಷ್ಟೇ", ಅನ್ನುವ ಅಂಬೋಣ!…ಜೊತೆಗೇ ಒಲೆಬದಿ ಬಿಟ್ಟು ಸರಿದರೆ ಸುಟ್ಟು ಕೊಡುವೆ ಎಂಬ ಮಂದಸ್ಮಿತ ನಗು. ಸರಿ ಸರಿ ಎಂದು ಹಿಂದೆ ಸರಿದರೆ ,ಕೈ ಬೊಬ್ಬೆ ಬರುವಷ್ಟು ಸುಡುವ ಕೆಂಡವ ಹಿಂದೆ ಸರಿಸಿ, ಅಮ್ಮ ಎಲ್ಲರಿಗೂ ಆಗುವಷ್ಟು ಹಪ್ಪಳವ ಹದವಾಗಿ ಕೆಂಡಗಳ ಮೇಲೆ ಸುಡುತ್ತಿದ್ದರೆ ಮನೆತುಂಬಾ ಘಮ. ಚಳಿಗೆ ಕುರುಕಲು ಎಷ್ಟಿದ್ದರು ಕಮ್ಮಿಯೇ,ಆಗಿನ ಕಾಲಕ್ಕಂತು ಬೇರೆ ಬಗೆಯ ಅಂಗಡಿ ತಿಂಡಿಗಳು ಕಡಿಮೆಯೆ.ಅವಿದ್ದರು ಸಹ ಸುಟ್ಟ ತರಹೇವಾರಿ ಅಕ್ಕಿ,ಗೆಣಸು,ಗೋಧಿ,ಹಲಸಿ ನಿಂದ ಮಾಡಿದ ಹಪ್ಪಳಗಳ ಮುಂದೆ ಏನೂ ರುಚಿಸದು.
ಸಾಕಾಗುವಷ್ಟು ಕೊಡದ ಅಮ್ಮ,ನಾಳೆಗೂ ಬೇಕು,ಎಲ್ಲಾ ಒಂದೇ ದಿನಕ್ಕಲ್ಲ .ಹಪ್ಪಳ ಮಾಡುವಾಗ ಬನ್ನಿ ಒಣಗಿಸಿ ಅಂದರೆ ಒಬ್ಬರೂ ಬರಲ್ಲ ಈಗ ಒಳ್ಳೆ ರುಚಿ ಉಂಟಲ್ಲವ !? ಎನ್ನುತ್ತಾ ಅದೇಕೋ ಹಪ್ಪಳ ಮಾಡುವಾಗ ಇಣುಕಿಯೂ ನೋಡದ ಪಪ್ಪನ ಮೇಲಿನ ಹುಸಿ ಮುನಿಸ್ಸನ್ನು ಹೊರಹಾಕಿದಂತಿತ್ತು. ನಿಮಗೂ ತಿಂದಿದ್ದು ಸಾಕು ಹೋಗಿ ಪಾಠ ಬರೆದು,ಓದಲು ಕೂರಬೇಕು ಎಂದು ತಾಕೀತು ಮಾಡುತ್ತಿದ್ದ ಕಾಲ ಈಗ ಬರೀ ಗೌಣ. ಹಪ್ಪಳದ ಘಮಲು ಮಾತ್ರ ಈಗಲೂ ಮೂಗಿಗೆ ಬಡಿದಂತಿದೆ ಅನುಭವಿಸಿ ಸವಿದವರಿಗೆ.
ರಾತ್ರಿಯಾಗುವುದೇ ಬೇಗ, ನಿಶ್ಯಬ್ಧದ ನಡುವೆ ಕಪ್ಪೆಗಳ ವಟವಟ ಅರಚಾಟ,ಹಂಚಿನಿಂದ ಸುರಿವ ಮಳೆಹನಿಗಳ ನೀರಿಗಾಗಿ ಇಟ್ಟ ಕೊಡಪಾನದ ಸದ್ದು,ಗುಡುಗು-ಮಿಂಚುಗಳು ಅಲಂಕರಿಸಿ ಬೆಳಗುವ ದೀಪದಂತೆ ಆಗೊಮ್ಮೆ ಈಗೊಮ್ಮೆ.ಬಿಟ್ಟರೆ ಕಡುಗತ್ತಲು,ಮನೆಯಲ್ಲೂ ಬುಡ್ಡಿ ಸೀಮೇ ಎಣ್ಣೆ ದೀಪಗಳು,ಗಾಳಿಗೆ ಆರಿದಾಗಲೊಮ್ಮೆ ಬೆಚ್ಚಿ ಅಮ್ಮ-ಪಪ್ಪನ ಕರೆದರೆ ಓದಿದ್ದು ಸಾಕು ಬದಿಗಿಟ್ಟು ಊಟಕ್ಕೆ ಕರೆದ ರೀತಿ ಸವಿಮೆಲುಕಲ್ಲದೆ ಇನ್ನೇನು!
ಊಟಕ್ಕೆ ಎಲ್ಲರೂ ಒಟ್ಟಿಗೆ ಕುಳಿತರೆ ದೀಪಗಳ ಬೆಳಕಿಗೆ ಮಳೆ ಹುಳುಗಳ ಕಾಟ. ಆಗ ಕಷ್ಟವೆನಿಸಿದರು ನೆನಪುಗಳು ಎಲ್ಲರಿಗೂ ಇಂದು ಹಿತವಾಗಿದೆ. ಕರಿದ ಕರಂಕುರಂ ಸಂಡಿಗೆಯ ಜೊತೆ ,ಕರಿದ ಸಂಡಿಗೆ ಮೆಣಸು,ಬಿಸಿ ಅನ್ನ ಸಾರು ತಿಂದವರಪಾಲಿಗಂತು ಪರಮ್ಮಾನ್ನ.ಉಂಡು ಬೆಚ್ಚಗೆ ಅಪ್ಪ-ಅಮ್ಮನ ಜೊತೆ ಮಗ್ಗಲು ಸೇರಿದರೆ ….ಮಳೆ ನಿಂತರು,ಮಳೆಹನಿ ನಿಲ್ಲದಂತೆ…ಎಂಬ ಗಾದೆಯಂತೆ ಸಂವತ್ಸರಗೇ ಕಳೆದರು ಮಾಸದ ಆ ಮಧುರ,ಸವಿಯಾದ ಹಪ್ಪಳ ಸಂಡಿಗೆಗಳ ಬಾಲ್ಯದ ನೆನಪುಗಳೆಂಬ ಮೆಲುಕು ಯಾರನ್ನೂ ಬಿಡದು.
ಆಧುನೀಕತೆಗೆ ಸಿಕ್ಕಿ ಸದಾ ಧಾವಂತದಲ್ಲೇ ಧಣಿವಿನಲೇ ,ಕಟ್ಟಡಗಳ ಮಧ್ಯೆ ಬದುಕು ಕಳೆವ ವರ್ತಮಾನ ಜೀವನ ಶೈಲಿ ಯಾಂತ್ರಿಕವಾಗಿ ಕೊನೆಯಾಗುತ್ತಿದೆ. ಆದರೆ ಈ ನೆನಪುಗಳೆಂಬ ದೇವರ ವರ, ಒಂದು ಕೂಡು ಕುಟುಂಬದ ಸಹಜೀವನ ,ಸರಳತೆಯ,ಪ್ರೀತಿಯ ,ಪ್ರಾಕೃತಿಕ ಬಾಂಧವ್ಯಗಳನ್ನು ಬೆಸೆಯುತ್ತಿದ್ದ ಭೂತಕಾಲ ಈಗ ಎಲ್ಲರಿಗೂ ಬೇಕು,ಆದರೆ ದುಸ್ತರ! ಕಾಲಗಳೇ ಅಂದ್ಲು ಬದಲಾದಂತೆ,ಸುಡುವ ಧಗೆ,ಮರಗಳೇ ಇಲ್ಲದ ಕಾಡು ,ಊರುಗಳು ಇನ್ನೆಲ್ಲಿಯ ಮಳೆ!? ಬದಲಾದ ಅವಸರದ ಅಮ್ಮಂದಿರ ಕೈ ರುಚಿಯ ಹಪ್ಪಳ ಸಂಡಿಗೆಗಳೂ ಕನಸು,ಇದ್ದರೆ ಅವರೆ ಪುಣ್ಯವಂತರು…ಆದರೂ ತಿನ್ನಬೇಕೆಂದರೆ ವ್ಯಾವಹಾರಿಕ ಜಗತ್ತಿನಲ್ಲಿ ಎಲ್ಲವೂ ಸುಲಭ ಲಭ್ಯ…ಕರಿಯುವ ಕೈಗೆ ಸಮಯ ಬೇಕಷ್ಟೇ. ಆಗಲೂ ಘಮಗುಡಬಹುದು ಕುರುಕಲು ಘಮಲು.
ನೆನಪಾಗಿಸಿದವು ಇಂದಿನ ಮಳೆಹನಿಗಳು…..
ಧನ್ಯವಾದಗಳು
ಮಮತ.ಶೆಟ್ಟಿ.ಮಲ್ನಾಡ್
ಬೆಂಗಳೂರು.ಶಿಕ್ಷಕಿ
7892114060
ಅಪರಿಚಿತರ ನಡುವೆ ಪರಿಚಿತರ ಇರುವಿಕೆಯ ಹುಡುಕಾಟ
0 Followers
0 Following