"ಮಗನೇ, ಅದು ಹಾಗಲ್ಲ," ಅಂತ ನನ್ನ ಮಗನಿಗೆ ಹೇಳ್ತಾ ಇದ್ದಾಗ, ನನ್ ಮಗನ ಉತ್ತರ "ನಿನಿಗೆ ಗೊತ್ತಿಲ್ಲ ಅಮ್ಮ ಗೂಗಲ್ನಲ್ಲಿ ಹಿಂಗೇ ಇದ್ದಿದ್ದು "ಅಂತ ಕೇಳಿ ದಂಗಾದೆ. ಕಾರಣ ನಮ್ಮ ಬಾಲ್ಯದಲ್ಲಿ ಪ್ರಶ್ನೆ ಕೇಳಿದಾಗ ಉತ್ತರ ಸಿಗ್ತಾನೇ ಇರ್ಲಿಲ್ಲ ಅನ್ನಬಹುದು. ಸಿಕ್ಕರೆ ಅದು ಹುಣಸೆ ಕೋಲಿನಲ್ಲಿ ಅಷ್ಟೇ!
ನಮ್ಮ ಮಕ್ಕಳ ಬಾಲ್ಯ ಅಮೂಲ್ಯವೋ ಹಾಗೆ ನಮ್ಮ ಬಾಲ್ಯ ಅಮೋಘ. ಒಂದು ದಿನ ಶಾಲೆ ತಪ್ಪಿದರೆ ಮರುದಿನ ಬೆತ್ತದ ಏಟು. ಒಂದು ದಿನ ತಿಂದರೆ ಮತ್ತೆ ಎಂದೂ ಶಾಲೆ ತಪ್ಪಿಸುವ ಆಲೋಚನೆ ಕೂಡಾ ಮಾಡುತ್ತ ಇರಲಿಲ್ಲ.
ಈಗ ಹೆತ್ತವರಿಗೆ ಕೂಡಾ ಮಕ್ಕಳಿಗೆ ಹೊಡೆಯುವ, ಬೈಯುವ ಹಕ್ಕಿಲ್ಲ ಅಂತಾನೆ ಹೇಳಬಹುದು. ಅಲ್ಲದೇ ಮಕ್ಕಳಿಗೆ ಸಣ್ಣ ಏಟು ತಡೆದುಕೊಳ್ಳುವ ಶಕ್ತಿ ಕೂಡಾ ಇಲ್ಲ. ಮಕ್ಕಳು ಬುದ್ದಿವಂತರಾಗ್ತಾ ಇದ್ದಾರೆ,ಆದರೆ ಮಾನಸಿಕವಾಗಿ ದೈಹಿಕವಾಗಿ ದುರ್ಬಲರು ಅಂತಾನೆ ಹೇಳಬಹುದು
ಈಗಿನ ಶೈಕ್ಷಣಿಕ ಕ್ರಮಗಳು ಮಕ್ಕಳಿಗೆ ಸ್ವಾತಂತ್ರತೆಯನ್ನು ಕೊಟ್ಟಿದೆ ಸಂತೋಷದ ವಿಚಾರ. ಹಾಗೆಯೇ ಸ್ಪರ್ಧಾತ್ಮಕ ಮನೋಭಾವನೆಯನ್ನು ಹುಟ್ಟು ಹಾಕಿದೆ. ಅವನಿ(ಳಿ )ಗಿಂತ ನಾನು ಹೆಚ್ಚು ಅಂಕ ಪಡೀಬೇಕು ಇಲ್ಲದಿದ್ದರೆ ತಾನು ಪ್ರಯೋಜನವಿಲ್ಲದವನು(ಳು )ಎಂಬ ಕೀಳರಿಮೆ ಕೆಲವು ಮಕ್ಕಳಲ್ಲಿ ಬೆಳೆದು ಬಿಟ್ಟಿದೆ.
ಪರೀಕ್ಷೆಯಲ್ಲಿ ಸ್ವಲ್ಪ ಅಂಕ ಕಡಿಮೆಯಾದರೆ, ಮನೆಯಲ್ಲಿ ಬೈದರೆ, ಮೊಬೈಲ್ ಉಪಯೋಗ ನಿರ್ಭಂದಿಸಿದರೆ, ಬುದ್ದಿಮಾತು ಹೇಳಿದರೆ, ಇಂತಹ ಸಣ್ಣ ಸಣ್ಣ ವಿಚಾರಕ್ಕೆ ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತ ಇದ್ದಾರೆ. ಇದು ನಿಜವಾಗಿಯೂ ಖೇದಕರ ಸಂಗತಿಯಾಗಿದೆ
ಹಿಂದೆ ಹತ್ತು ಮಕ್ಕಳನ್ನು ಹೆತ್ತು ಸಾಕಿ ಸಲಹಿರುವ ಮಹಾತಾಯಿ ಈಗಿನ ಎರಡು ಮಕ್ಕಳನ್ನು ಸುಧಾರಿಸುವುದು ಭಾರೀ ಕಷ್ಟವೆನಿಸಬಹುಸು. ಮೊದಲಿನ ಕಾಲದಲ್ಲಿ ತನ್ನ ಹಸುಗೂಸನ್ನು ತೊಟ್ಟಿಲಿಗೆ ಹಾಕಿ ದುಡಿಮೆಗೆ ಹೋದರೆ ಮಧ್ಯಾಹ್ನ ಹಾಲೂಡಿಸಲು ಬರುವುದಾಗಿತ್ತು. ಈಗ ಒಂದು ಕ್ಷಣ ದೃಷ್ಟಿ ಬೇರೆಡೆಗೆ ತಿರುಗಿದ ಕೂಡಲೇ ಮಗುವಿನ ಕಿತಾಪತಿಯೇ ಬೇರೆ.
ನಮ್ಮ ಬಾಲ್ಯದ ಆಟಗಳೇ ಬೇರೆ. ಈಗಿನ ಮಕ್ಕಳಿಗೆ ಮೊಬೈಲೇ ಆಟ.ನಮ್ಮ ಆಟಗಳಿಂದ ಮನಸ್ಸಿಗೆ ಸಂತೋಷ, ದೇಹಕ್ಕೆ ವ್ಯಾಯಾಮ ಸಿಗ್ತಾ ಇತ್ತು. ಆದ್ರೆ ಮೊಬೈಲ್ ನೋಡೋದ್ರಿಂದ ಕಣ್ಣಿಗೂ ಆಯಾಸ, ದೇಹಕ್ಕೂ ಆಲಸ್ಯ. ಎಷ್ಟು ಉಪಯೋಗ ಇದೆಯೋ ಅಷ್ಟೇ ಉಪದ್ರವವಿದೆ. ಎಲ್ಲವೂ ನಾವು ಉಪಯೋಗಿಸುವ ಮಿತಿಯಲ್ಲಿ ಅಡಗಿದೆ.
ಈ ಪೀಳಿಗೆಯ ಮಕ್ಕಳಿಗೆ ಹಸಿವೆಯೇ ಇಲ್ಲವೇ? ಯಾಕೆಂದ್ರೆ ನಮ್ಮ ಬಾಲ್ಯದಲ್ಲಿ ಅಮ್ಮ ತುತ್ತು ಕೊಡೋವಾಗ ಒಂದು ಅನ್ನವೂ ವ್ಯರ್ಥವಾಗತ್ತಿರಲಿಲ್ಲ, ಅಲ್ಲದೇ ಆಸಕ್ತಿಯಿಂದ ತಿನ್ನುತ್ತಿದ್ದೆವು.
ತಂಗುಳನ್ನವೇ ಆದರೂ ಮೃಷ್ಟಾ ನ್ನ ವಾಗಿತ್ತು.ಚಂದಮಾಮನೇ ನಮ್ಮ ಕೈಗೆಟುಕದ ಆಟಿಕೆ. ಇಂದಿನ ಕೂಸುಗಳಿಗೆ ಊಟ ಮಾಡಿಸಬೇಕಾದರೆ ತಾಯಿ ತನ್ನ ಬುದ್ದಿವಂತಿಕೆಯನ್ನೆಲ್ಲಾ ಬಳಸಬೇಕಾಗುತ್ತದೆ. ಮೊಬೈಲು ಬೇರೆ ಬೇಕು. ಒಂದು ಬಗೆ ತಿಂದಿಲ್ಲ ಎಂದರೆ ಇನ್ನೊಂದು ಬಗೆಯ ಖಾದ್ಯವನ್ನು ಮಾಡಿ ತಿನಿಸುವಳು.
ಇಂದಿನ ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೇವೆ? ಕೆಳಗಿಟ್ಟರೆ ಇರುವೆ ಹೊತ್ತುಕೊಂಡು ಹೋಗುತ್ತೆ, ಆಕಾಶದಲ್ಲಿಟ್ಟರೆ ಕಾಗೆ ಹೊತ್ತುಕೊಂಡು ಹೋಗುತ್ತೆ ಅನ್ನೋ ಥರ ಬೆಳೆಸುತ್ತೇವೆ. ಯಾಕಂದ್ರೆ ಹೆರೋದೇ ಒಂದೋ ಎರಡೋ! ಸ್ವಂತಿಕೆ ಅನ್ನೋದು ನಾವು ಕಲಿಯೋಕೆ ಬಿಟ್ಟಿಲ್ಲ. ಸ್ಕೂಲ್ ಬ್ಯಾಗ್ನಿಂದ ಹಿಡಿದು ಎಲ್ಲಾ ಭಾರವನ್ನು ಹೆತ್ತವರಾದ ನಾವು ವಹಿಸಿಕೊಳ್ಳುತ್ತೇವೆ. ಎಲ್ಲದಕ್ಕೂ ನಮ್ಮನ್ನು ಅವಲಂಬಿತರಾಗುತ್ತಾರೆ .ಅಷ್ಟು ಜಾಗರೂಕತೆ!.
ಜೀವನ ಪಾಠ ಕಲಿಯಲು ಅವಕಾಶವೇ ಇಲ್ಲವೆನಿಸುತ್ತದೆ. ಇದೇ ಅಭ್ಯಾಸದಿಂದ ಜೀವನದ ಒಂದು ಹಂತಕ್ಕೆ ಬರುವಾಗ ಒಂದೇ ಸಲ ಒತ್ತಡ ಉಂಟಾದಾಗ ಮಕ್ಕಳಿಗೆ ಜೀವನ ಕಷ್ಟವೆನಿಸುತ್ತದೆ. ಮಾನಸಿಕವಾಗಿ ಶಾರೀರಿಕವಾಗಿ ತುಂಬಾ ಒತ್ತಡ ಅನುಭವಿಸುವ ಸಾಧ್ಯತೆ ಇದೆ.ಕೆಲವು ಮಕ್ಕಳು ಇದರಿಂದ ಹೊರಬರಲಾರದೇ ಆತ್ಮಹತ್ಯೆಯ ದಾರಿಯನ್ನು ಹಿಡಿಯಲೂ ಬಹುದು.
ನನ್ನ ಪ್ರಕಾರ ಮಕ್ಕಳು ಬೆಳೆಯಬೇಕಾದರೆ, ಅವರು ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಬೇಕಾದ್ರೆ ಸ್ವಲ್ಪ ಮಟ್ಟಿನ ಜೀವನ ಪಾಠವನ್ನು ಕಲಿಯಲೇ ಬೇಕು. ಹೆತ್ತವರಾದ ನಾವು ಅವರನ್ನು ಗಟ್ಟಿಗೊಳಿಸಬೇಕೇ ವಿನಃ ಅವರನ್ನು ಬಲಹೀನರನ್ನಾಗಿಸಬಾರದು.
ಶೈಕ್ಷಣಿಕ ವ್ಯವಸ್ಥೆಯೂ ಕೂಡಾ ಪುಸ್ತಕದ ಬದನೇಕಾಯಿ ಆಗಿರದೇ ಜೀವನ ಪಾಠದ ಬುತ್ತಿಯಾಗಿರಲಿ ಎಂದು ಬಯಸುತ್ತೇನೆ.
ಹವ್ಯಾಸಿ ಬರಹಗಾರ್ತಿ
0 Followers
0 Following