“ನೋವಿನ ಬೆಂಕಿಯಲ್ಲಿ ಬೆಂದರಳಿದ ಬಣ್ಣ - ವ್ಯಾನ್ ಗೋ”

ಇಂದು ಲಕ್ಷಾಂತರ ಕಲಾವಿದರಿಗೆ ಸ್ಪೂರ್ತಿ 'ವಿನ್ಸಂಟ್ ವ್ಯಾನ್ ಗೋ'. ಅವನ ಚಿತ್ರಗಳು ಬಿಲಿಯನ್ಗಟ್ಟಲೆ ಡಾಲರುಗಳಿಗೆ ಮಾರಾಟವಾಗುತ್ತವೆ. ಯಾತನೆಯನ್ನೇ ಉಂಡ ಆ ಮಹಾನ್ ಕಲಾವಿದನ ಬದುಕಿನ ಬಗ್ಗೆ ಗೊತ್ತೆ?

ProfileImg
14 Oct '23
8 min read


image

ಕಲೆಯೆಂಬ ಗಾಢವಾದ ಅನುಭೂತಿ

ಉಳಿದ ಎಲ್ಲದರಂತೆ ಮನುಷ್ಯರ ಭಾವನೆಗಳು ಸಹ ಕಾಲ ಕಾಲಕ್ಕೆ ರೂಪಾಂತರಗೊಳ್ಳುತ್ತವೆ. ಅಭಿವ್ಯಕ್ತಿಯ ರೀತಿಗಳು ಹೊಸತಾಗುತ್ತಲೇ ಇರುತ್ತವೆ. ಒಳಗಿರುವುದನ್ನು ವ್ಯಕ್ತಪಡಿಸಲು ಭಾಷೆ ಅನ್ನುವ ಮನುಷ್ಯರ ಉಪಕರಣ ಸಾಲದಾಗುತ್ತದೆ. ಹೇಳಬೇಕಾದದ್ದನ್ನು ಹೇಳಲಾಗದೆ ಒದ್ದಾಡುವಾಗಲೇ, ಕಲೆ ನಮ್ಮ ಅಂತರಾಳವನ್ನು ಹೊರಗೆಡಹಲು ಸಹಕಾರಿಯಾಗುವುದು. ಕಲೆಯೆಂದರೆ ಮನದೊಳಗಿನ ಹಲವು ಮಾತುಗಳೊಂದಿಗೆ, ಸುತ್ತಲಿನ ಲೋಕವನ್ನು ಒಂದು ತಂತಿಯಲ್ಲಿ ಜೋಡಿಸುವ ತುಂಬಾ ಗಾಢವಾದ ಅನುಭೂತಿ ; ಹಲವೊಮ್ಮೆ ಜೀವ ಹಿಂಡುವ ಪ್ರಕ್ರಿಯೆ ಮತ್ತು ಕೆಲವೊಮ್ಮೆ ಜೀವ ಘಾತುಕ ಶಕ್ತಿಗಳ ವಿರುದ್ಧದ ಬಂಡಾಯವು ಹೌದು.

ಒಂದು ಸದ್ದು, ಒಂದು ಸನ್ನೆ, ಒಂದೆರಡು ಗೆರೆಗಳಿಂದ ಉತ್ಪತ್ತಿಯಾದಂತಿರುವ ನಮ್ಮ ಕಲಾಭಿವ್ಯಕ್ತಿ ಇಂದು ನಾನಾ ರೂಪಗಳಾಗಿ ಬೆಳೆದಿವೆ. ಕಲಾವಿದರು ಅನಿಸಿಕೊಳ್ಳುವುದು ಅನಿವಾರ್ಯವೇನಲ್ಲ, ಆದರೆ ವಿಜ್ಞಾನದಂತೆ ಕಲೆ ಕೂಡಾ ಮನುಷ್ಯ ಮನಸ್ಸುಗಳ ವಿಕಸನಕ್ಕೆ ಇಂಬು ನೀಡುತ್ತದೆ. ಕಲೆಗೆ ಮನುಷ್ಯರ ನಡುವೆ ಬೇಧವಿಲ್ಲ. ಕಲಾವಿದರು ಉಳಿದ ಮನುಷ್ಯರಿಗಿಂತ ಉನ್ನತರಾಗಿರುವವರು ಅಲ್ಲ. ಕ್ರೀಯಾಶೀಲತೆಯೋ, ಬುದ್ದಿವಂತಿಕೆಯೋ ಒಬ್ಬ ವ್ಯಕ್ತಿಯನ್ನು ಉಳಿದವರಿಗಿಂತ ಎತ್ತರಕ್ಕೇರಿಸುವುದಿಲ್ಲ. ನಾನಾ ರಸಗಳ ಸಮ್ಮಿಲನವಾದ ದೇಹ ಹೊತ್ತ ಪ್ರತಿ ಮನುಷ್ಯರು ಭಿನ್ನರಾಗಿರುತ್ತಾರೆ ಎಂಬುದಷ್ಟೇ ಸತ್ಯ.

ಹೀಗೆ ಭಿನ್ನವಾಗಿ, ತೀವ್ರವಾಗಿ ಮತ್ತು ಆಳವಾಗಿ ಜಗತ್ತನ್ನು ಗ್ರಹಿಸಿದ ಕಲಾವಿದನೊಬ್ಬನ ಬಣ್ಣ ಮತ್ತು ಬದುಕನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಕಷ್ಟಸಾಧ್ಯ. ತಾನು ಗ್ರಹಿಸಿದ್ದೆಲ್ಲವನ್ನೂ, ಅದಕ್ಕಿಂತಲೂ ಗಾಢ ಬಣ್ಣಗಳಿಂದ ಚಿತ್ರಿಸಿದಾತನ ಬದುಕು ಕೂಡಾ ಚಿತ್ರ ವಿಚಿತ್ರವಾಗಿತ್ತು. ಆ ಮಹಾನ್ ಕಲಾವಿದನ ಪಡಿಪಾಟಲುಗಳ ಚಿತ್ತ ಮತ್ತು ಅದರ ಪಡಿಯಚ್ಚಿನಂತಿರುವ ಅವನ ಚಿತ್ರಗಳನ್ನು ಅಕ್ಷರಗಳ ಮೂಲಕ ಹರವಿಟ್ಟು, ಅರಿತುಕೊಳ್ಳುವ ಪುಟ್ಟ ಪ್ರಯತ್ನವಿದು.

ತನ್ನೆಲ್ಲಾ ನೋವನ್ನು ಹಿಂಡಿ, ನೋವಿನ ಬಣ್ಣಗಳನ್ನು ಕ್ಯಾನ್ವಾಸಿನಲ್ಲಿ ಜಿನುಗಿಸಿ, ಅದರಲ್ಲಿ ಅದ್ದಿದ ಕುಂಚದಲ್ಲಿ ಕಲೆಯರಳಿಸಿದ ಕಲೆಗಾರ "ವಿನ್ಸೆಂಟ್ ವ್ಯಾನ್ ಗೋ". ಆದ್ದರಿಂದಲೇ, ಕನ್ನಡದಲ್ಲಿ 'ವ್ಯಾನ್ ಗೋ' ಜೀವನ ಚರಿತ್ರೆ ಬರೆದ 'ನೇಮಿಚಂದ್ರ'ರವರು, ಆ ಪುಸ್ತಕಕ್ಕೆ 'ನೋವಿಗದ್ದಿದ ಕುಂಚ' ಎಂದು ಹೆಸರಿಟ್ಟಿದ್ದು. ಆತ ಬದುಕಿದ್ದ ಕಾಲಘಟ್ಟದಲ್ಲಿ ಅವನ ಪೈಂಟಿಗ್ ಗಳಿಗೆ ಸಿಗಬೇಕಾದ ಅಂಗೀಕಾರ ಸಿಗಲಿಲ್ಲ. ತನ್ನ ಪೈಂಟಿಂಗನ್ನು ಮಾರಲಾಗದೇ ತುತ್ತು ಅನ್ನಕ್ಕಾಗಿ ಪರದಾಡಿದ. ಆದರೂ, ಆತನಿಗೆ ತಾನು ಕಾಣುವ ಲೋಕವನ್ನು ಕುಂಚದಲ್ಲಿ ಚಿತ್ರಿಸುವುದಲ್ಲದೇ  ಬೇರೆ ಬದುಕಿರಲಿಲ್ಲ. ತೀವ್ರವಾಗಿ ಬದುಕಬೇಕು, ಆ ತೀವ್ರತೆಯ ಆಳದಿಂದ ಕಲೆ ಅರಳಬೇಕು ; ಇದು ವ್ಯಾನ್ ಗೋ ಕಲೆಗಾಗಿ ಜೀವ ತೇಯ್ದ ಪರಿಯಾಗಿತ್ತು. ಕಲೆ ಮತ್ತು ಬದುಕು ಅವನಿಗೆ ಬೇರೆ ಬೇರೆಯಾಗಿರಲಿಲ್ಲ.

Book written by Nemichandra. 

ವ್ಯಾನ್ ಗೋನ ಹುಟ್ಟು ಮತ್ತು ವಿರಹದ ಆರಂಭ

1852ರ ಮಾರ್ಚ್ 30 ರಂದು ನೆದರ್​​ಲ್ಯಾಂಡಿನ ಝುಂಡರ್ಟ್ ನಗರದಲ್ಲಿ  ‘ಥಿಯೋಡ್ರಸ್ ವ್ಯಾನ್ ಗೋ ಮತ್ತು ಅನ್ನಾ ವ್ಯಾನ್ ಗೋ’ ದಂಪತಿಗಳಿಗೆ ಮೊದಲ ಮಗು ಜನಿಸುತ್ತದೆ. ಆ ಗಂಡು ಮಗುವಿಗೆ ಅದರ ತಾತನ ಹೆಸರಾದ 'ವಿನ್ಸಂಟ್' ಎಂದು ನಾಮಕರಣ ಮಾಡಲು ದಂಪತಿಗಳು ತೀರ್ಮಾನಿಸಿರುತ್ತಾರೆ. ಆದರೆ ಆ ಮಗು ಹುಟ್ಟುತ್ತಲೇ ಮರಣವನ್ನಪ್ಪುತ್ತದೆ. ಸರಿಯಾಗಿ ಒಂದು ವರ್ಷದ ನಂತರ ಅದೇ ಮಾರ್ಚ್ 30ಕ್ಕೆ ಅನ್ನಾ ಮತ್ತೊಂದು ಗಂಡು ಮಗುವಿಗೆ ಜನ್ಮವೀಯುತ್ತಾಳೆ. ಮೊದಲ ಹೆರಿಗೆಯಲ್ಲಿ ಸತ್ತ ಮಗುವಿಗೆ ಇಡಬೇಕೆಂದಿದ್ದ ಹೆಸರನ್ನು ಈ ಮಗುವಿಗೆ ಇಡುತ್ತಾರೆ. ಹಾಗೇ ಹುಟ್ಟಿದವನೇ 'ವಿನ್ಸೆಂಟ್ ವ್ಯಾನ್ ಗೋ'. ವಿನ್ಸಂಟ್ ನ ತಂದೆ ಚರ್ಚಿನಲ್ಲಿ ಪ್ರೊಟೆಸ್ಟೆಂಟ್ ಮತದ ಪರವಾಗಿ ಕೆಲಸ ಮಾಡುವ ಅಧಿಕಾರಿಯಾಗಿರುತ್ತಾನೆ. ತನ್ನ ತಂದೆಯೊಂದಿಗೆ ಚರ್ಚಿಗೆ ಹೋಗುವ ಪುಟ್ಟ ವಿನ್ಸೆಂಟ್, ಚರ್ಚಿನ ದಾರಿಯಲ್ಲಿರುವ ಸ್ಮಶಾನದಲ್ಲಿ ತನ್ನದೇ ಹೆಸರಿನ ಸಮಾಧಿ ಕಂಡು ಬೆಚ್ಚಿ ಬಿದ್ದದ್ದು ಉಂಟು. ತನ್ನ ಅಣ್ಣನ ಜೀವವನ್ನು ಬಲಿತೆಗೆದುಕೊಂಡು ಹುಟ್ಟಿದ ಪಾಪಿ ನಾನು ಎಂಬ ತಪ್ಪಿತಸ್ಥ ಭಾವನೆ ಬಾಲ್ಯದಲ್ಲಿ ವ್ಯಾನ್ ಗೋನನ್ನು ಕಾಡುತ್ತದೆ.

ವ್ಯವಸ್ಥಿತ ಶಿಕ್ಷಣ ಕ್ರಮಗಳನ್ನು ಅನುಸರಿಸಲಾಗದ ವಿನ್ಸೆಂಟ್ ನನ್ನು ಆತನ ಹೆತ್ತವರು ಬೇರೆ ಬೇರೆ ಶಾಲೆಗಳಿಗೆ ಸೇರಿಸುತ್ತಾರೆ. ಎಷ್ಟೆಲ್ಲಾ ಮಾಡಿದರೂ, ವಿನ್ಸೆಂಟ್ ವಿಧ್ಯಾಭ್ಯಾಸ ಪೂರ್ತಿಗೊಳಿಸುವಲ್ಲಿ ಪೂರ್ತಿ ಸಫಲನಾಗುವುದಿಲ್ಲ. ಮುಂದೆ ತನ್ನ ಚಿಕ್ಕಪ್ಪನ ಆರ್ಟ್ ಗ್ಯಾಲರಿಯಲ್ಲಿ ಸಣ್ಣ ಉದ್ಯೋಗಕ್ಕೆ ಸೇರುತ್ತಾನೆ. ಆ ಆರ್ಟ್ ಗ್ಯಾಲರಿ ಮೊದಲ ಬಾರಿಗೆ ವ್ಯಾನ್ ಗೋನ ಮುಂದೆ ಬಣ್ಣಗಳ ಪ್ರಪಂಚವನ್ನು ತೆರೆದಿಡುತ್ತದೆ. ಅಲ್ಲಿ ಒಳ್ಳೆ ಸೇಲ್ಸ್ ಮ್ಯಾನ್ ಅನ್ನಿಸಿಕೊಳ್ಳುತ್ತಾನೆ, ಆದರೂ ಅಲ್ಲಿ ಚಿತ್ರಗಳ ಬೆಲೆಗಳ ಕುರಿತು ನಡೆಯುವ ಚರ್ಚೆಗಳು, ಅದರ ಮಾರಾಟದ ಯಾಂತ್ರಿಕತೆ ಮುಗ್ಧ ಹೃದಯಿಯಾದ ವ್ಯಾನ್ ಗೋಗೆ ಕಿರಿಕಿರಿಯುಂಟು ಮಾಡುತ್ತದೆ. ಈ ನಡುವೆ ಆ ಆರ್ಟ್ ಗ್ಯಾಲರಿ ಲಂಡನಿನಲ್ಲಿದ್ದ ತನ್ನ ಶಾಖೆಗೆ ವ್ಯಾನ್ ಗೋನನ್ನು ಕಳುಹಿಸುತ್ತದೆ. ಅಲ್ಲಿ ತಾನು ವಾಸವಿದ್ದ ಮನೆಯೊಡತಿಯ ಮಗಳು 'ಉರುಸ್ವುಲಾ' ಮೇಲೆ ವ್ಯಾನ್ ಗೋಗೆ ಪ್ರೇಮಾಂಕುರವಾಗುತ್ತದೆ. ಕೊನೆಗೆ ಪ್ರೇಮ ನಿವೇದನೆ ಮಾಡಿದಾಗ ವ್ಯಾನ್ ಗೋಗೆ ನಿರಾಶೆಯಾಗುತ್ತದೆ. ಒಳಗೊಳಗೆ ಪ್ರೇಮಿಸಿ ನಡೆಯುವ ನೀನೊಬ್ಬ ಮೂರ್ಖ ಅಂತನ್ನುವ ಉರುಸ್ವುಲಾ, ತಾನು ಮತ್ತೊಬ್ಬನನ್ನು ಪ್ರೇಮಿಸುತ್ತಿರುವುದಾಗಿ ಹೇಳುತ್ತಾಳೆ. ಆ ಪ್ರೇಮ ಅವಮಾನದಲ್ಲಿ ಕೊನೆಯಾಗುತ್ತದೆ. ಆ ವಿರಹ ವೇದನೆಯಿಂದ ವಿಚಲಿತನಾಗುವ ವಿನ್ಸಂಟ್ ತನ್ನ ಆರ್ಟ್ ಗ್ಯಾಲರಿಯ ಉದ್ಯೋಗದಲ್ಲಿ ಅಸಡ್ಡೆ ತೋರಲಾರಂಭಿಸುತ್ತಾನೆ. ಆತನ ಸ್ವಭಾವದಲ್ಲು ಏರುಪೇರಾಗಲು ಆರಂಭವಾಗುತ್ತದೆ. ಕೊನೆಗೆ ಅದರ ಮ್ಯಾನೇಜ್ಮೆಂಟ್ ಅವನನ್ನು ಕೆಲಸದಿಂದ ಕಿತ್ತು ಹಾಕುತ್ತದೆ. 

ಕಲ್ಲಿದ್ದಲಿನ ಗಣಿಯಲ್ಲಿ ಕಲಾವಿದ

ಮುಂದೆ ಸ್ವಲ್ಪ ಕಾಲದ ನಂತರ ವ್ಯಾನ್ ಗೋನ ಉದ್ವಿಗ್ನತೆಗಳು ತಾತ್ಕಾಲಿಕವಾಗಿ ಶಮನವಾಗುತ್ತವೆ. ಪ್ರಾಥಮಿಕ ಶಾಲೆಯೊಂದರಲ್ಲಿ ಅಧ್ಯಾಪಕನಾಗಿ ಅಲ್ಪಕಾಲ ಕೆಲಸಮಾಡುತ್ತಾನೆ. ಅಲ್ಲಿಯೂ ಆತನ ಮನಸ್ಸು ನಿಲ್ಲುವುದಿಲ್ಲ. ದೇವರನ್ನು ಅರಸಲು ತೊಡಗಿ, ಬೈಬಲ್ ಓದತೊಡಗುತ್ತಾನೆ. ಧರ್ಮದ ನೆರಳಿನಲ್ಲಿ ಸಮಾಧಾನ ಹುಡುಕ ಬಯಸಿ, ಚರ್ಚಿನಲ್ಲಿ ಮತ ಕಲಿಕೆಗೆ ಸೇರ ಬಯಸುತ್ತಾನೆ. ತನ್ನ ದಾರಿಯಲ್ಲೇ ಮಗನೂ ನಡೆಯ ಹೊರಟದ್ದು ತಂದೆಗೆ ಖುಷಿಯ ವಿಷಯವೇನು ಆಗಿರಲಿಲ್ಲ. ಆದರೆ, ಅಲ್ಲಿಯವರೆಗೆ ಧೈವಭಯವಿಲ್ಲದೇ ಇದ್ದ ತನ್ನ ಮಗ ದೇವರ ಬಗ್ಗೆ ಚಿಂತಿಸತೊಡಗಿದ್ದು ಸಮಾಧಾನ ತಂದಿತ್ತು. ಮತ ವಿಧ್ಯಾಭ್ಯಾಸ ಪಡೆಯಲು ವ್ಯಾನ್ ಗೋ ಇಚ್ಛಿಸುತ್ತಾನಾದರೂ, ಅದಕ್ಕೆ ಬೇಕಾದ ಏಕಾಗ್ರತೆ ಹಾಗು ತಾಳ್ಮೆ ಅವನಲ್ಲಿರುವುದಿಲ್ಲ. ಹಾಗಿರುವಾಗ ಬೆಲ್ಜಿಯಂನ ಕಲ್ಲಿದ್ದಲಿನ ಗಣಿಯ ಕುರಿತು, ಅಲ್ಲಿ ಕೆಲಸ ಮಾಡುವ ಶ್ರಮಜೀವಿಗಳ ಬಗ್ಗೆ ಅವನು ಎಲ್ಲೋ ಓದುತ್ತಾನೆ. ರಜಾದಿನಗಳ ಹೊರತಾಗಿ ಹೊರಗಿನ ಲೋಕ ಕಾಣದೆ, ಅಲ್ಪ ಬೆಳಕಿನೊಂದಿಗೆ ಗುಹೆಗಳಂತ ಗಣಿಗಳಲ್ಲಿ ಕೆಲಸ ಮಾಡುವವರ ಬಗ್ಗೆ ವ್ಯಾನ್ ಗೋಗೆ ಕನಿಕರ ಮೂಡುತ್ತದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಕತ್ತಲೆಯ ಕೂಪದಲ್ಲಿರುವ ಗಣಿ ಕೆಲಸಗಾರರಿಗೆ ಪರಿಶುದ್ಧ ಬೈಬಲಿನ ಬೆಳಕು ಹಂಚಲು ವ್ಯಾನ್ ಗೋ ನಿರ್ಧರಿಸುತ್ತಾನೆ. ಒಂದೆರಡು ಸಲ ಕೇಳಿದಾಗ ಇದಕ್ಕೊಪ್ಪದ ಚರ್ಚ್, ಕೊನೆಗೂ ವ್ಯಾನ್ ಗೋನನ್ನು ಬೆಲ್ಜಿಯಂಗೆ ಕಳುಹಿಸಿ ಕೊಡುತ್ತದೆ.

ಕಲ್ಲಿದ್ದಲಿನ ಗಣಿಯಲ್ಲಿ ಕಷ್ಟಕರ ಕೆಲಸ ಮಾಡುತ್ತಿದ್ದ ಕೆಳವರ್ಗದವರ ನರಳಿಕೆ ಕಂಡು ವ್ಯಾನ್ ಗೋ ನಲುಗಿದ. "ನನ್ನ ಸುತ್ತಲಿರುವ ಜನಗಳು ಸಮಾಧಾನವಿಲ್ಲದೆ ನರಳುತ್ತಿರುವಾಗ, ನಾನೊಬ್ಬನೇ ಹೇಗೆ ಆರಾಮಾಗಿರಲಿ?" ವ್ಯಾನ್ ಗೋ ತನಗೆ ತಾನೇ ಪ್ರಶ್ನೆ ಹಾಕಿಕೊಂಡ. ಚರ್ಚಿನ ಆದೇಶಗಳನ್ನು ಸರಿಯಾಗಿ ಪಾಲಿಸದೆ ಆ ತಳವರ್ಗದ ಜನಗಳ ಸೇವೆ ಮಾಡಲಾರಂಭಿಸಿದ. ತನಗೆ ಚರ್ಚಿನಿಂದ ದೊರೆತ ವಸತಿಯಲ್ಲಿ ಅಲ್ಲಿನ ಜನಗಳಿಗೂ ಮಲಗಲು ಜಾಗ ನೀಡಿದ. ತನಗೆ ಸಿಕ್ಕ ದುಡ್ಡು, ವಸ್ತ್ರಗಳನ್ನು ಆ ಕಷ್ಟ ಸಹಿಷ್ಣುಗಳೊಂದಿಗೆ ಹಂಚಿಕೊಂಡ. ಗಣಿ ಕೆಲಸಗಾರರು ಮ್ಯಾನೇಜ್ಮೆಂಟ್ ವಿರುದ್ಧ ಹೋರಾಟಕ್ಕಿಳಿದಾಗಲೂ ಅವರನ್ನು ಬೆಂಬಲಿಸಿದ. ಚರ್ಚಿನ ಆಡಳಿತ ಮಂಡಳಿಗೆ ಅವನ ನಡವಳಿಕೆಗಳ್ಯಾವುವು ಸರಿ ಕಾಣಲಿಲ್ಲ. ಚರ್ಚು ಅವನನ್ನು ಆ ಕೆಲಸದಿಂದ ವಜಾ ಮಾಡುತ್ತದೆ. 

ಮಾಡಿದ ಉದ್ಯೋಗಗಳ್ಯಾವುವು ಕೈ ಹಿಡಿಯದೇ, ಕೈಯಲ್ಲಿ ಬಿಡಿಗಾಸು ಇರದ ಕಾಲ. ವ್ಯಾನ್ ಗೋನ ವಯಸ್ಸು ಇಪ್ಪತ್ತೇಳು. ಆವಾಗ, ಆ ದುರಿತಕಾಲದಲ್ಲೇ ವ್ಯಾನ್ ಗೋ ಸಂಪೂರ್ಣವಾಗಿ ಚಿತ್ರ ಬಿಡಿಸಲು ಶುರುಮಾಡುತ್ತಾನೆ. 'ಚಾರ್ಲ್ಸ್  ಡಿಕನ್ಸನ್' ಅಭಿಮಾನಿಯಾಗಿದ್ದ ವ್ಯಾನ್ ಗೋ, ಆತ ಅಕ್ಷರಗಳಿಂದ ಸೃಷ್ಟಿಸಿದ್ದನ್ನು ನಾನು ಚಿತ್ರಗಳಿಂದ ಸೃಷ್ಟಿಸುತ್ತೇನೆ ಎಂದು  ಘೋಷಿಸುತ್ತಾನೆ. ತಮ್ಮ ಥಿಯೋನ ಹೊರತಾಗಿ ಉಳಿದೆಲ್ಲರೂ ಅವನನ್ನು ಅಪಹಾಸ್ಯ ಮಾಡುತ್ತಾರೆ. ಚಿತ್ರ ಬಿಡಿಸಲು‌ ಉತ್ಸುಕನಾಗಿ ತಿರುಗಾಡುತ್ತಾನಾದರೂ, ಎಲ್ಲಿಯೂ ನೆಲೆ ನಿಲ್ಲಲಾಗುವುದಿಲ್ಲ. ಮತ್ತೆ ಬೆಲ್ಜಿಯಂನ 'ಬೊಹಿನಾಶಿ'ಯ  ಕಲ್ಲಿದ್ದಲಿನ ಗಣಿಗಳಿಗೆ ಹಿಂತಿರುಗುತ್ತಾನೆ. ಅಲ್ಲಿನ ಗಣಿ ಕೆಲಸಗಾರನಾದ 'ಚಾರ್ಲ್ಸ್ ಡಿಕ್ರೂಸ್'ನ ಗುಡಿಸಲಿನ ಇಕ್ಕಟ್ಟಿನ ಜಾಗ ವ್ಯಾನ್ ಗೋನ ಚಿತ್ರಕಲೆಯ ಆಗರವಾಗುತ್ತದೆ. ಮುಂದೆ ಆ ಜಾಗ ಸಾಲದಾದಾಗ ವಿನ್ಸಂಟ್ ಬಯಲಿಗೆ ಬರುತ್ತಾನೆ. ಅಲ್ಲಿನ ಕೆಲಸಗಾರರ, ಮತ್ತವರ ಜೀವನವನ್ನು ರೇಖಾ ಚಿತ್ರಗಳಲ್ಲಿ ಬಿಡಿಸುತ್ತಾನೆ. ಈ ನಡುವೆ ಸಹೋದರ ಥಿಯೋನ ಆಗ್ರಹದಂತೆ ಚಿತ್ರಕಲಾ ಅಕಾಡೆಮಿಯಲ್ಲಿ ವಿಧ್ಯಾರ್ಥಿಯಾಗಿ ಸೇರುತ್ತಾನೆ ವಿನ್ಸಂಟ್. ನಿಗ್ರಹಗಳ ವಿರೋಧಿಯಾದ ವಿನ್ಸಂಟಿಗೆ ಅಕಾಡೆಮಿಯಲ್ಲಿ ಹೆಚ್ಚುಕಾಲ ಉಳಿಯಲಾಗುವುದಿಲ್ಲ. ಮುಂದೆ, ತನ್ನ ದೂರದ ಸಂಬಂಧಿಯೂ ಆದ ಡಚ್ಚ್ ಚಿತ್ರಗಾರ 'ಆ್ಯಂಟೋನ್ ಮೋವೆ'ಯ ಮೂಲಕ ವ್ಯಾನ್ ಗೋಗೆ ಜಲವರ್ಣಗಳು ಹಾಗು ತೈಲವರ್ಣಗಳ ಪರಿಚಯವಾಗುತ್ತದೆ. 

A pair of shoes 

ಗಾಡ ಬಣ್ಣಗಳ ಕಣ್ಣೀರು

ಗಾಢ ಬಣ್ಣಗಳನ್ನು, ತುಂಬಾ ದಪ್ಪವಾಗಿ ಮೆತ್ತಿರುತ್ತಿದ್ದ ವ್ಯಾನ್ ಗೋನ ಚಿತ್ರಗಳು ಸಾಂಪ್ರದಾಯಿಕ ಕಲೆಯ ಪರಿಮಿತಿಗಳಿಗೆ ಸವಾಲಾಗಿದ್ದವು. ಜೀವನ ಮತ್ತದರ ಚಿತ್ರಣಗಳಲ್ಲಿ ಬೇಧ ತೋರದ ಕಲಾವಿದನ ರೋಧನೆ ಅಂದು ಯಾರಿಗೂ ಕೇಳಿಸಿರಲಿಲ್ಲ. ಛತ್ರಿ ಹಿಡಿದು ಮಳೆಯಲ್ಲಿ ನಿಂತು, ಮಳೆಯ ಚಿತ್ರ ಬಿಡಿಸುತ್ತಿದ್ದ ವ್ಯಾನ್ ಗೋ, ಗ್ರಾಮಸ್ಥರ ಕಣ್ಣಿಗೆ ವಿಚಿತ್ರವಾಗಿ ಕಾಣಿಸುತ್ತಿದ್ದ. ಅವನ ಸುತ್ತಲಿನ ಜನರಿಗೆ ಅವನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ತಿಳುವಳಿಕೆಯಿಲ್ಲದ ಉದ್ಧಟತನದಿಂದ ಅವರು ಆತನನ್ನು ಗೇಲಿ ಮಾಡುತ್ತಾರೆ, ಮಕ್ಕಳು ಕೂಡ ಕುಹುಕವಾಡುತ್ತಾರೆ. ಜಗತ್ತಿನ ಕಣ್ಣಿಗೆ ವಿದೂಷಕನಂತೆ ಕಾಣುವ ವ್ಯಾನ್ ಗೋನನ್ನು, ತಮ್ಮ ಸರ್ಕಸಿನಂತಹ ಸಮಾಜದಿಂದ ಪ್ರತ್ಯೇಕಿಸುತ್ತಾರೆ ಆ ಕಾಲದ ಜನ.

ಆಕೆಯ ಹೆಸರು 'ಸಿಯೆನ್ ಹೂರ್ನಿಕ್' ಅಥವಾ ಹಾಗೆಂದು ವ್ಯಾನ್ ಗೋ ಅವಳನ್ನು ಕರೆಯುತ್ತಿದ್ದ. ವಿನ್ಸಂಟ್ ಅವಳನ್ನು ಪ್ರಥಮ ಭಾರಿಗೆ ನೋಡಿದಾಗ, ಕೈಯಲ್ಲೊಂದು ಮಗುವನ್ನಿಟ್ಟುಕೊಂಡಿದ್ದ ಸಿಯೆನ್, ಮತ್ತೊಂದು ಮಗುವಿನ ಗರ್ಭಧರಿಸಿದ್ದಳು. ಅವಳ ಮುಖದಲ್ಲಿದ್ದ ಯಾತನೆಯ ನೆರಳು ಅವನಲ್ಲಿ ಪ್ರೇಮ ಉಕ್ಕಿಸುತ್ತದೆ. ಆಕೆಗೆ ದುಡ್ಡು ಕೊಟ್ಟು ತನ್ನ ಚಿತ್ರಗಳಿಗೆ ಮಾಡೆಲ್ ಆಗಿಸುತ್ತಾನೆ. ಅವಳನ್ನು ಮದುವೆಯಾಗ ಬಯಸಿ ತಮ್ಮ ಥಿಯೋಗೆ ಪತ್ರವನ್ನೂ ಬರೆಯುತ್ತಾನೆ. ಥಿಯೋ ಇದಕ್ಕೆ ಸುತರಾಂ ಸಮ್ಮತಿಸುವುದಿಲ್ಲ. ಪ್ರಸವದ ನಂತರ ತನ್ನ ತಾಯಿಯ ನಿರ್ದೇಶನದಂತೆ ಸಿಯೆನ್ ತನ್ನ ಹಳೇ ವೇಶ್ಯ ವೃತ್ತಿಗೆ ಹಿಂತಿರುಗಿ ಹೋಗುವುದಾಗಿ ಹೇಳುತ್ತಾಳೆ. ತನ್ನ ಕೈಯಲ್ಲಿದ್ದ ಕೊನೆಯ ನಾಣ್ಯವನ್ನು ಅವಳ ಕೈಯಲ್ಲಿರಿಸುವ ವ್ಯಾನ್ ಗೋ ಅವಳನ್ನು ಕಣ್ಣೀರಿನೊಂದಿಗೆ ಬೀಳ್ಕೊಡುತ್ತಾನೆ.  

ಅಲ್ಲಿಂದ ವ್ಯಾನ್ ಗೋ 'ನ್ಯೂಯೆನ್ನೆನ್' ಎಂಬ ಗ್ರಾಮಕ್ಕೆ ಹೋಗುತ್ತಾನೆ. ಅಲ್ಲಿನ ಕೃಷಿಕರ ಕಷ್ಟಗಳನ್ನು ಅರಿತು ಚಿತ್ರ ಬಿಡಿಸಲು, ಸ್ವತಃ ಗೋಧಿ ಹೊಲಗಳಿಗೆ ಹೋಗಿ ಕೆಲಸವನ್ನೂ ಮಾಡುತ್ತಾನೆ. ಅಲ್ಲಿ ಆತನಿಗೆ 'ಮಾರ್ಗರೇಟ್' ಎಂಬ ಹೆಣ್ಣಿನೊಂದಿಗೆ ಪ್ರಣಯವಾಗುತ್ತದೆ. ಎರಡೂ ಕಡೆಯ ಮನೆಯವರು ಒಪ್ಪದೇ ಆ ಸಂಬಂಧ ಕೊನೆಗೊಳ್ಳುತ್ತದೆ. ಮಾರ್ಗರೇಟ್ ಆತ್ಮಹತ್ಯೆಗೆ ಯತ್ನಿಸಿದ್ದೂ ಸೇರಿದಂತೆ, ಆ ಕಾಲದಲ್ಲಿ ನಡೆದ ಹಲವು ಘಟನೆಗಳು ಅವನನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ. ಆ ಕಾಲಘಟ್ಟದಲ್ಲೇ ವ್ಯಾನ್ ಗೋನ ಇನ್ನೊಂದು‌ ಸುಪ್ರಸಿದ್ಧ ಚಿತ್ರ 'ಆಲೂಗಡ್ಡೆ ತಿನ್ನುವವರು'(The Potato eaters) ರಚಿಸಲ್ಪಡುವುದು. ಗದ್ದೆಗಳಲ್ಲಿ ಬಿತ್ತಿ, ಬೆಳೆದ ತಮ್ಮ ಅದೇ ಗಡಸು ಕೈಗಳಿಂದ ಅಲೂಗಡ್ಡೆ ತಂದು ಬೇಯಿಸಿ, ಒಂದೇ ಒಂದು ಲಾಂಧ್ರದ ಬೆಳಕಿನಲ್ಲಿ ತಿನ್ನುವ ಅವರ ಬದುಕಿನ ಭೀಕರ ವಾಸ್ತವತೆಯನ್ನು ಅದರ ಎಲ್ಲಾ ತೀವ್ರತೆಯೊಂದಿಗೆ ಚಿತ್ರಿಸುತ್ತಾನೆ ವ್ಯಾನ್ ಗೋ.

The Potato Eaters

ಹಳದಿ ಮನೆಯಲ್ಲಿ ತುಂಡಾದ ಕಿವಿ

1888 ರಲ್ಲಿ ಫ್ರಾನ್ಸಿನ 'ಪ್ಲೇ ಸಾ ಮಾರ್ಟಿನ' ಎಂಬ ಬೀದಿಯಲ್ಲಿರುವ ಹಳದಿ ಬಣ್ಣ ಬಳಿದಿರುವ ಮನೆಯೊಂದನ್ನು ವ್ಯಾನ್ ಗೋ ಬಾಡಿಗೆಗೆ ಪಡೆಯುತ್ತಾನೆ. ಆ ಮನೆ ಮುಂದೆ 'ಹಳದಿ ಮನೆ'ಯೆಂದೇ ಪ್ರಸಿದ್ಧವಾಗುತ್ತದೆ. 'ದಿ ಸ್ಟ್ರೀಟ್' ಎಂಬ ಹೆಸರಿನ ವ್ಯಾನ್ ಗೋನ ಚಿತ್ರದಲ್ಲಿ ಆ ಮನೆಯನ್ನು ಕಾಣಬಹುದು. ಆ ಮನೆ ವ್ಯಾನ್ ಗೋನ ವಿಭ್ರಾಂತಿಯ, ಉನ್ಮಾದದ ದಿನಗಳಿಗೆ ಸಾಕ್ಷಿಯಾಗುತ್ತದೆ. 'ಸೂರ್ಯಕಾಂತಿ' ಎಂಬ ವಿನ್ಸಂಟಿನ ವಿಖ್ಯಾತ ಚಿತ್ರ ರಚಿಸಲ್ಪಡುವುದು ಇದೇ ಮನೆಯಲ್ಲಿ. ಆ ಮನೆಗೆ ಚಿತ್ರಗಾರ 'ಪೌಲ್ ಗಾಗಿನ್' ಬರುತ್ತಾನೆ. ಇವರಿಬ್ಬರೂ ಸೇರಿ ಚಿತ್ರಗಳನ್ನು ಬಿಡಿಸುತ್ತಾರೆ. ಇಬ್ಬರೂ ಅವರ ಕಲಾಕೃತಿಗಳನ್ನು ಮಾರಿ ಬಂದ ಅಲ್ಪ ದುಡ್ಡಲ್ಲಿ ವೇಶ್ಯಾಲಯಗಳಿಗೆ ಭೇಟಿ ನೀಡುತ್ತಾರೆ. ಇವರಿಬ್ಬರ ನಡುವಿನ ಎಲ್ಲಾ ವ್ಯವಹಾರಗಳಲ್ಲು ಜಗಳಗಳು ನಡೆಯುತ್ತದೆ. “ರೇಸರ್ ಒಂದನ್ನು ನನ್ನ ಕೊರಳ ಮೇಲಿಟ್ಟು ವ್ಯಾನ್ ಗೋ ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದಾಗಿಯೂ” ಗಾಗಿನ್ ಹೇಳಿಕೊಂಡಿದ್ದಾನೆ. ಆ ಘಟನೆಯ ನಂತರ ಗಾಗಿನ್ ಆ ಹಳದಿ ಮನೆಗೆ ಹೋಗುವುದಿಲ್ಲ. ಒಂಟಿಯಾಗುವ ವ್ಯಾನ್ ಗೋಗೆ ಆ ಮನೆ ಕರಾಳವೆನಿಸುತ್ತದೆ. ಶೂನ್ಯ ಭಾವ ಆವರಿಸುತ್ತದೆ. ತಾನು ಕಂಡಿದ್ದ 'ಆರ್ಟಿಸ್ಟ್ ಕಾಲೋನಿ' ಎಂಬ ಕಲಾ ಕುಟೀರ ಕಟ್ಟುವ ಕನಸು ನುಚ್ಚುನೂರಾಗುತ್ತದೆ. ಚಿತ್ತಭ್ರಮೆಯಲ್ಲಿ ಉನ್ಮಾದಿಯಾಗುವ ವಿನ್ಸೆಂಟಿನ ಕಿವಿಗಳಿಗೆ ಒಂದೇ ಸಮನೆ ಯಾವ್ಯಾವುದೋ ಶಬ್ದಗಳು(Voices) ಕೇಳಿಸಲಾರಂಭಿಸುತ್ತದೆ. ಇಂತದ್ದೇ ಉನ್ಮಾದದ ಗಳಿಗೆಯಲ್ಲಿ ಸ್ಥಿಮಿತ ಕಳೆದುಕೊಳ್ಳುವ ವ್ಯಾನ್ ಗೋ ರೇಜರ್ ಕೈಗೆತ್ತಿಕೊಂಡು ಹುಚ್ಚನಂತೆ ತನ್ನ ಎಡ ಕಿವಿಯನ್ನು ಕತ್ತರಿಸಿಕೊಳ್ಳುತ್ತಾನೆ. ತಾನೇನು ಮಾಡಿಕೊಂಡಿದ್ದೇನೆಂದು ಗೊತ್ತಾಗುವಷ್ಟರಲ್ಲಿ ರಕ್ತ ಧಾರೆಯಾಗಿ ಹರಿಯುತ್ತಿರುತ್ತದೆ. ಅಲ್ಲಿದ್ದ ಬಟ್ಟೆಯನ್ನೆಲ್ಲ ಕಟ್ಟಿ ಸ್ವತಃ ತಾನೇ ಬ್ಯಾಂಡೇಜ್ ಕಟ್ಟಿಕೊಳ್ಳುತ್ತಾನೆ. ನಂತರ ತುಂಡುಮಾಡಿದ ಕಿವಿಯನ್ನು ಪೇಪರಿನಲ್ಲಿ ಮಡಚಿಟ್ಟುಕೊಂಡು, ಕಿವಿ ಮುಚ್ಚುವಂತ ಟೊಪ್ಪಿ ಧರಿಸಿ, ಪಕ್ಕದಲ್ಲಿದ್ದ ವೇಶ್ಯೆಯರ ಬೀದಿಗೆ ಹೋಗುತ್ತಾನೆ. ವೇಶ್ಯಾಲಯಕ್ಕೆ ಹೋಗಿ  ಗಾಗಿನ್ನನ ಇಷ್ಟದ ವೇಶ್ಯೆಯಾಗಿದ್ದ ರೇಚಲ್ ಳನ್ನು ಕಂಡು, ಅವಳ ಕೈಗೆ ಕಿವಿಯ ತುಂಡಿನ ಪೊಟ್ಟಣವನ್ನಿಡುತ್ತಾನೆ. ಬಿಚ್ಚಿ ನೋಡಿದ ರೇಚಲ್ ತಲೆ ತಿರುಗಿ ಬೀಳುತ್ತಾಳೆ. ವ್ಯಾನ್ ಗೋ ಅಲ್ಲಿಂದ ತನ್ನ  ಹಳದಿ ಮನೆಗೆ ಹಿಂತಿರುಗುತ್ತಾನೆ. ಮರುದಿವಸ ಅವನ ಮನೆಗೆ ಬಂದ ಪೋಲಿಸರು ಪ್ರಜ್ಞಾಹೀನನಾಗಿ ಬಿದ್ದಿದ್ದ ವ್ಯಾನ್ ಗೋನನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಆಸ್ಪತ್ರೆಯಿಂದ ಮರಳಿ ಹಳದಿ ಮನೆಗೆ ಬಂದ ಮೇಲೆ ವ್ಯಾನ್ ಗೋ ಕಿವಿಗೆ ಬ್ಯಾಂಡೇಜ್ ಹಾಕಿದ್ದಂತೆಯೇ ರಚಿಸಿದ ಆತನ  ಸ್ವ-ಚಿತ್ರಗಳು(Self portrait) ಜಗತ್ಪ್ರಸಿದ್ಧವಾದವುಗಳಾಗಿವೆ.

Self portrait and The Street (The Yellow House)

ನನ್ನ ಮನಸ್ಸು ಸ್ಥಿಮಿತದಲ್ಲಿಲ್ಲ, ನನಗೆ ಚಿಕಿತ್ಸೆಯ ಅವಶ್ಯಕತೆಯಿದೆ ಎಂದು 1889ರಲ್ಲಿ ಸ್ವಯಂ ಮಾನಸಿಕ ರೋಗಿಗಳ ಆಸ್ಪತ್ರೆಗೆ ದಾಖಲಾಗುತ್ತಾನೆ. ಅಲ್ಲಿನ ಪರಿಚಾರಕರು ಅವನನ್ನು ಚೆನ್ನಾಗಿಯೇ ಪರಿಚರಿಸುತ್ತಾರೆ. ಇಂದಿನಷ್ಟು ವೈದ್ಯಕೀಯ ವಿಜ್ಞಾನ ಬೆಳೆದಿರದ ಆ ಕಾಲದಲ್ಲಿ 'ಎಪಿಲೆಪ್ಸಿ' ಎಂಬ ಖಾಯಿಲೆಯಿರುವುದಾಗಿ ಗುರುತಿಸುತ್ತಾರೆ. ವ್ಯಾನ್ ಗೋಗೆ 'ಬೈಪೋಲರ್ ಅಸ್ವಸ್ಥತೆ' ಇದ್ದಿರಬಹುದು ಎಂದು ಇಂದಿನ ಡಾಕ್ಟರುಗಳು ಅಭಿಪ್ರಾಯ ಪಡುತ್ತಾರೆ. ಸಹೋದರ ಥಿಯೋನ ಕೋರಿಕೆಯಂತೆ ಆ ಆಸ್ಪತ್ರೆಯಲ್ಲಿ ವ್ಯಾನ್ ಗೋಗೆ ಚಿತ್ರ ಬರೆಯಲು ಬೇಕಾದ ವ್ಯವಸ್ಥೆ ಮತ್ತು ವಿಹರಿಸಲು ಬೇಕಾದ ಸ್ವಾತಂತ್ರ್ಯ ದೊರಕುತ್ತದೆ. ಮಾನಸಿಕ ಆಸ್ಪತ್ರೆಯ ಕೋಣೆಗಳಲ್ಲಿ ಕೂತು, ಕಿಟಕಿಯ ಮೂಲಕ ಆತ ಎವೆಯಿಕ್ಕದೆ ಆಕಾಶವನ್ನು ನೋಡಿದ. ಕಣ್ಣುಗಳನ್ನೇ ಸುಟ್ಟುಕೊಳ್ಳುವಷ್ಟು ಆಳವಾಗಿ ಸೂರ್ಯನನ್ನು ದಿಟ್ಟಿಸಿದ. ಆ ದಿನಗಳಲ್ಲೇ ಆತ ತನ್ನ ಜಗದ್ವಿಖ್ಯಾತ ಪೈಂಟಿಂಗ್ "The Starry Night"(ನಕ್ಷತ್ರಗಳ ರಾತ್ರಿ) ಬಿಡಿಸಿದ್ದು. ಈ ಚಿತ್ರ ಬಿಡಿಸುವುದಕ್ಕೆ ವಾರದ ಹಿಂದೆಯಷ್ಟೇ ಅದೇ ಪೈಂಟುಗಳನ್ನು ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಹುಚ್ಚು ಮನಸ್ಸಾಗಿತ್ತು ಅವನದು. ಯಾರಿಗೂ ಕಾಣದಂತ ಆಕಾಶ, ನಕ್ಷತ್ರಗಳು ವ್ಯಾನ್ ಗೋನ ಛಿದ್ರಗೊಂಡ ಆಂತರ್ಯದ ನೋಟಕ್ಕೆ ಕಾಣಿಸಿತ್ತು. ನಕ್ಷತ್ರಗಳನ್ನು ಸುರುಳಿಯಾಕಾರದಲ್ಲಿ ಬರೆದ ವ್ಯಾನ್ ಗೋನ ಮನದ ಕಣ್ಣುಗಳಿಗೆ ಅವುಗಳೊಳಗೆ ನಡೆಯುವ ಫ್ಯೂಷನ್ ಕಾಣಿಸರಬೇಕು. ಮಾನಸಿಕ ಅಸ್ವಸ್ಥತೆಗಳ ಸುಳಿಯಲ್ಲೂ, ವ್ಯಾನ್ ಗೋ ಅನ್ನುವ ಜೀನಿಯಸ್ ಕಲಾವಿದನ ಚಿತ್ರಗಳು ಪ್ರಖರವಾಗಿ ಹೊಳೆಯುತ್ತವೆ.

The Starry Night

ತಮ್ಮ ಥಿಯೋನ ಮಡಿಲಲ್ಲಿ

ವ್ಯಾನ್ ಗೋನ ಬದುಕಿನುದ್ದಕ್ಕು ಗೆಳೆಯನಾಗಿ ಮತ್ತು ಬೆಂಬಲವಾಗಿ ನಿಂತದ್ದು ಆತನ ತಮ್ಮ 'ಥಿಯೋ ವ್ಯಾನ್ ಗೋ'. ಥಿಯೋನ ಜೊತೆ ವಿನ್ಸಂಟಿಗೆ ಆತ್ಮಬಂಧವೆನ್ನಬಹುದಾದ ಅತ್ಯಾಪ್ತ ಬಂಧವಿತ್ತು. ವಿನ್ಸೆಂಟ್ ಮತ್ತು ಥಿಯೋ ಪರಸ್ಪರ ಹಲವಾರು ಪತ್ರಗಳನ್ನು ಬರೆಯುತ್ತಾರೆ. ಮುಂದೆ ಈ ಪತ್ರಗಳಿಂದ ವಿನ್ಸೆಂಟಿನ ಬದುಕು ಮತ್ತು ಚಿತ್ರಗಳ ಕುರಿತಾದ ಹಲವಾರು ಸೂಕ್ಷ್ಮ ವಿಷಯಗಳು ಬೆಳಕಿಗೆ ಬರುತ್ತವೆ. ವ್ಯಾನ್ ಗೋಗೆ ಪೈಂಟಿಂಗಿಗೆ ಬೇಕಾಗುವ ಸಾಮಗ್ರಿಗಳು ಮತ್ತು ದುಡ್ಡನ್ನು ಥಿಯೋ ಕಳುಹಿಸಿ ಕೊಡುತ್ತಿದ್ದ. ತಾನು ಮಾಡಿದ ಖರ್ಚುಗಳ ವಿವರವನ್ನು ವ್ಯಾನ್ ಗೋ ಥಿಯೋನಿಗೆ ಪತ್ರಗಳ ಮುಖಾಂತರ ತಿಳಿಸುತ್ತಲೂ ಇದ್ದ. ಮುಂದೆ ತನ್ನ ಚಿತ್ರಗಳು ಮಾರಾಟವಾದಾಗ ಥಿಯೋನಿಂದ ಪಡೆದ ಹಣವನ್ನು ಹಿಂತಿರುಗಿಸುವ ಇರಾದೆಯಿತ್ತು ವ್ಯಾನ್ ಗೋಗೆ.  ಥಿಯೋ ದಂಪತಿಗಳಿಗೆ ಮಗು ಜನಿಸಿದಾಗ ಖುಷಿ ಪಡುವ ವಿನ್ಸೆಂಟ್, ಮಗುವಿನ ಕೋಣೆಯಲ್ಲಿ ತೂಗು ಹಾಕಲು ಹೂಗಳು ತುಂಬಿದ ರೆಂಬೆ-ಕೊಂಬೆಗಳ ಚಿತ್ರ ಬರೆಯುತ್ತಾನೆ. ಆದರೆ, ಅದಾದ ನಂತರದ ದಿನಗಳಲ್ಲೇ ಥಿಯೋಗೆ ಬರೆದ ಪತ್ರದಲ್ಲಿ ದುಃಖ ಮತ್ತು ವಿಪರೀತ ಒಂಟಿತನವನ್ನು ವ್ಯಕ್ತಪಡಿಸುವುದಕ್ಕಾಗಿಯೇ ಚಿತ್ರವೊಂದನ್ನು ರಚಿಸುತ್ತಿದ್ದೇನೆ ಅನ್ನುತ್ತಾನೆ. ಹಾಗೇ ರಚಿಸಿದ ಚಿತ್ರವೇ, 'ಕಾಗೆಗಳಿರುವ ಗೋಧಿ ಹೊಲ''(Wheatfield with crows). ಅದು ವ್ಯಾನ್ ಗೋ ಬಿಡಿಸಿದ ಕೊನೆಯ ಚಿತ್ರವೆಂದೇ ಹೇಳಲಾಗುತ್ತದೆ.  

Wheatfield with Crows

ಜುಲೈ 27, 1890 ರಲ್ಲಿ ತನ್ನೆದೆಗೆ ಗುಂಡು ಹೊಡೆದುಕೊಳ್ಳುತ್ತಾನೆ ವಿನ್ಸೆಂಟ್ ವ್ಯಾನ್ ಗೋ. ಎರಡು ದಿವಸ ಕಳೆದು, ತಮ್ಮನ ಮಡಿಲಲ್ಲಿ ಕೊನೆಯುಸಿರೆಳೆಯುತ್ತಾನೆ. ಗುಂಡೇಟನ್ನು ಆತ್ಮಹತ್ಯೆಯೆನ್ನುತ್ತಾರೆ. ಇಲ್ಲಾ, ಇದು ಯಾರೋ ಮಾಡಿದ ಕೊಲೆಯೆನ್ನುವವರೂ ಇದ್ದಾರೆ. ಒಟ್ಟಾರೆ  ತನ್ನ ಕಾಲಕ್ಕೆ ಅರಗಿಸಿಕೊಳ್ಳಲಾಗದಂತಹ ಅತ್ಯಪೂರ್ವ ಕಲಾಕೃತಿಗಳನ್ನು ರಚಿಸಿದ ಕಲಾವಿದನ ದಾರುಣ ಬದುಕು ಹಾಗೇ ಕೊನೆಯಾಗಿತ್ತು.

ಪ್ರತಿಭೆಯ ಪ್ರಖರ ರೂಪವಾಗಿದ್ದ ವ್ಯಾನ್ ಗೋ ಬೆಂಕಿಯನ್ನುಂಡೇ ಬದುಕಿದ. ಬೆಂಕಿಯಲ್ಲಿ ಬೆಂದ ಬಟಾಟೆ, ಕರಕಲಾದ ಮನುಷ್ಯರು, ಪ್ರಾಣಿಗಳಲ್ಲಿನ ಭಾವನೆಗಳು, ಓರೆಕೋರೆಯಾಗಿದ್ದ ಚರ್ಚು, ಕಿತ್ತು ಹೋದ ಬೂಟು, ದುಃಖ ತುಂಬಿದ ಬಯಲು, ತಣ್ಣಗಿನ ಆಕಾಶ ಮತ್ತು ಸುಡುವ ನಕ್ಷತ್ರಗಳ ಚಿತ್ರಗಳನ್ನು ಬಿಡಿಸಿದ. ತನಗೆ ತಾನೇ ಮಾಡೆಲ್ ಆಗಿ, ಸಿಕ್ಕುಗಳು ತುಂಬಿದ ತನ್ನದೇ ರೂಪವನ್ನು ಚಿತ್ರವಾಗಿಸಿದ. ಮಹಾ ಯಾತನೆಯಾದ ತನ್ನ ಬದುಕನ್ನು ತೀಕ್ಷ್ಣವಾದ ಬಣ್ಣಗಳಿಂದ ಎದುರಿಸಿ ಸೋತು, ಸತ್ತ ವ್ಯಾನ್ ಗೋ. ಸತ್ತ ನಂತರ ಜಗತ್ತಿನ ಕಲಾವಿದರಿಗೆಲ್ಲಾ ದಾರಿ ದೀಪವಾದ. ತಾನು ಕತ್ತಲೆಯಲ್ಲಿ ಬಿದ್ದರೂ, ಕಲೆಯ ಬೀದಿಗೆ ಬೆಳಕಾದ.

 

 

 

Category:Arts and Crafts



ProfileImg

Written by Guru

Writer, Poet & Automotive Enthusiast