ತುಳುನಾಡಿನಲ್ಲಿ ಹಬ್ಬದ ಋತುವಿನ ಅಂತ್ಯದಿನ ಪತ್ತನಾಜೆ

ಇಂದಿನಿಂದ ದೀಪಾವಳಿ ತನಕ ಉತ್ಸವ, ಜಾತ್ರೆಗಳಿಲ್ಲ

ProfileImg
24 May '24
1 min read


image

ಪತ್ತನಾಜೆ ಭಾರತದ ತುಳುನಾಡಿನಲ್ಲಿ ಹಬ್ಬದ ಋತುವಿನ ಅಂತ್ಯದ ಒಂದು ದಿನದ ಆಚರಣೆಯಾಗಿದೆ. ತುಳುನಾಡಿನ ಜನರು ಎಲ್ಲಾ ರೀತಿಯ ಹಬ್ಬಗಳಿಗೆ ತಮ್ಮದೇ ಆದ ಧಾರ್ಮಿಕ ಮತ್ತು ಸಾಮಾಜಿಕ ಗಡುವನ್ನು ಹೊಂದಿದ್ದಾರೆ.

ದೀಪಾವಳಿಯಿಂದ ತೊಡಗಿ ಪತ್ತನಾಜೆ ತನಕ ತುಳುನಾಡಿನಲ್ಲಿ ಧಾರ್ಮಿಕ ಆಚರಣೆಗಳಿಗೆ ವಿಶೇಷ ಮಹತ್ವ ಇರುತ್ತದೆ. ದೈವಗಳಿಗೆ ನೇಮ ಮನೆಯ ದೈವಕ್ಕೆ ಕೋಲ, ಊರಿನ ದೇವಾಲಯಗಳಲ್ಲಿ ಉತ್ಸವ, ಜಾತ್ರೆ ಹೀಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.

ತುಳು ಪಂಚಾಂಗದ ವಾಡಿಕೆಯನ್ನು ಇಲ್ಲಿ ಸಂಪ್ರದಾಯದ ರೂಪದಲ್ಲಿ ಆಚರಿಸಲಾಗುತ್ತಿದೆ. ಪತ್ತನಾಜೆಯ ಬಳಿಕ ಎಲ್ಲಾ ದೈವಗಳ ಗುಡಿಗಳಿಗೆ ಬಾಗಿಲು ಹಾಕಲಾಗುತ್ತದೆ. ಮುಂದಿನ ದೀಪಾವಳಿಯ ತನಕ ದೈವಸ್ಥಾನಗಳಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳು ಇರುವುದಿಲ್ಲ.

ತುಳುನಾಡಿನಲ್ಲಿ ಮಳೆಗಾಲದ ಬಳಿಕ ನಾಗರಪಂಚಮಿ ಯಿಂದ ದೇವಾಲಯ ಮತ್ತು ದೈವಸ್ಥಾನಗಳಲ್ಲಿ ಪಂಚ ಪರ್ವ ಆರಂಭವಾಗುತ್ತದೆಯಾದರೂ ದೀಪಾವಳಿಯ ಬಳಿಕವಷ್ಟೇ ಅಧಿಕೃತ ಉತ್ಸವ, ನೇಮ, ಜಾತ್ರೆಗಳು ನಡೆಯುತ್ತವೆ. 

ಪತ್ತನಾಜೆಯ ಬಳಿಕ ತುಳುನಾಡಿನಲ್ಲಿ ಕೃಷಿಕಾರ್ಯಗಳು ಆರಂಭವಾಗುವ ಕಾರಣ ಇತರ ಕಾರ್ಯಕ್ರಮಗಳನ್ನು ನಡೆಸಲು ಬಿಡುವು ಇರುವುದಿಲ್ಲ.

ಕೃಷಿ ಪದ್ಧತಿಯ ಹಿನ್ನೆಲೆಯಲ್ಲಿ ತುಳುನಾಡಿನ ಜನಜೀವನ ನಡೆದುಕೊಂಡು ಬಂದಿದ್ದು, ಭತ್ತದ ಗದ್ದೆಗಳು ಮಾಯವಾಗಿ ಅಡಿಕೆ, ಕಾಳುಮೆಣಸು, ಕೊಕ್ಕೊ ಬೆಳೆ ಚಾಲ್ತಿಗೆ ಬಂದರೂ ಅನೂಚಾನ ಸಂಪ್ರದಾಯವನ್ನು ಮಾತ್ರ ತಪ್ಪದೇ ಪಾಲಿಸ ಲಾಗುತ್ತಿದೆ.

ಆದ ಕಾರಣವೇ ದೀಪಾವಳಿ ಪಾಡ್ಯದಿಂದ ಪತ್ತನಾಜೆಯ ತನಕ ಉತ್ಸವ ನೇಮಗಳು ನಡೆಯುತ್ತವೆ.ದೇವೆರ್ ಉಲಾಯಿ ಆಪುನ ಪತ್ತನಾಜೆಯ ಉತ್ಸವ ಮುಗಿದು ಪ್ರಸಾದ ವಿತರಣೆಯೊಂದಿಗೆ ದೇವರ ಉತ್ಸವಮೂರ್ತಿಯನ್ನು ಗರ್ಭಗುಡಿಯೊಳಗೆ ಕೊಂಡೊಯ್ಯುವ ಪ್ರಕ್ರಿಯೆಯನ್ನು ದೇವೆರ್ ಉಲಾಯಿ ಆಪುನ (ದೇವರು ಒಳಗೆ ಹೋಗುವುದು) ಮತ್ತು ದೀಪಾವಳಿಯಂದು ನಡೆಯುವ ಮೊದಲ ಬಲಿಉತ್ಸವವನ್ನು  ದೇವೆರ್ ಪಿದಾಡುನ (ದೇವರು ಹೊರಡುವುದು) ಎಂಬ ಸಂಪ್ರದಾಯವನ್ನು ಇಂದಿಗೂ ಪಾಲಿಸಲಾಗುತ್ತಿದೆ. 

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಕಾಸರಗೋಡು ತಾಲೂಕುಗಳಲ್ಲಿ ಈ ಸಂಪ್ರದಾಯ ಬಳಕೆಯಲ್ಲಿದೆ.

Category:History



ProfileImg

Written by Praveen Chennavara