ಹೆಣ್ಣು ಮಾಯೆ ಸರಿ, ಆದರೆ ಗಂಡಸು...?

ಯಾರ ಮನೋ ದೌರ್ಬಲ್ಯ ಎಷ್ಟು ದೊಡ್ಡದು...!

ProfileImg
27 Apr '24
6 min read


image

ಮನುಷ್ಯರು ಎಂದಾಗ ಸಹಜವಾಗಿ ಅಲ್ಲಿ ಹೆಣ್ಣು ಮತ್ತು ಗಂಡು ಇಬ್ಬರು ಸೇರುತ್ತಾರೆ. ಆದರೆ ಇವರಿಬ್ಬರಲ್ಲಿ ಹೆಣ್ಣು ವಿಶೇಷ ಏಕೆಂದರೆ, ಬ್ರಹ್ಮನ ಸೃಷ್ಟಿಯಲ್ಲಿ ಎರಡು ಅದ್ಭುತಗಳಿವೆ. ಒಂದು ಹೆಣ್ಣು, ಇನ್ನೊಂದು ಮಾಯೆ. ಮಾಯೆ ಅದು ಹೆಣ್ಣು ಅಥವಾ ಗಂಡು ಎರಡು ಅಲ್ಲ, ಅದಕ್ಕೆ ರೂಪ, ಆಕಾರ ಇಲ್ಲ. ಆದರೂ ಮಾಯೆ ಎನ್ನುವುದು ಹೆಣ್ಣಾಗಿ ಸಂಕೇತಿ ನೋಡಲಾಗುತ್ತದೆ. ಮನುಷ್ಯನಿಗೆ (ಗಂಡಸರಿಗೆ) ಇಷ್ಟವಾಗುವುದು ಪ್ರಪಂಚದಲ್ಲಿ ಎರಡಿವೆ. ನೋಡಿದ ತಕ್ಷಣ ಕಣ್ಣು ಸೆಳೆಯುವ ಜಿಂಕೆ, ಇನ್ನೊಂದು ಜಿಂಕೆ ಕಣ್ಣಿನಂತ ಹೆಣ್ಣು. ಜಿಂಕೆ ಎಂದರೇನೆ ಮಾಯಾಮೃಗ! ಅದನ್ನು ಅಷ್ಟು ಸುಲಭವಾಗಿ ಬೇಟೆಯಾಡಿ ಗೆಲ್ಲಲು ಸಾಧ್ಯವಿಲ್ಲ.  ಹೆಣ್ಣು ಎಂದರೆ ಚಂಚಲ. ಯಾವುದು ಸ್ಥಿರವಲ್ಲ, ಚಂಚಲವೋ ಅದು ಮಾಯೆ. ಹೆಣ್ಣಿನ ಮನಸ್ಸು ಜಿಂಕೆಯಂತೆ ವೇಗವಾಗಿ ಓಡುತ್ತಿರುತ್ತವೆ ಮತ್ತು ಭಾವನೆಗಳು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ.

ಗಂಡು, ಹೆಣ್ಣಿನಲ್ಲಿ; ಗಂಡು ಬಹುದೊಡ್ಡ ಸ್ವಾರ್ಥಿ. ಆದರೂ ಅವನು ಸ್ವಾರ್ಥ ತೀರಾ ಸೀಮಿತವಾದದ್ದು. ಜಿಂಕೆ ಒಂದನ್ನು ಬೇಟೆಯಾಡಿದಾಗ ಎರಡು ಉದ್ದೇಶಗಳು ಈಡೇರುತ್ತವೆ. ಮೊದಲನೆಯದು ಸವಿಯಲು ರುಚಿ ರುಚಿಯಾದ ಮಾಂಸ ದೊರೆಯುತ್ತದೆ. ಸತ್ತ ಜಿಂಕೆಯ ಚರ್ಮ ಸುಲಿದು ಮಾರಾಟ ಮಾಡಿದರೆ ಹಣ ಬರುತ್ತದೆ. ಹೇಗೆ ನೋಡಿದರೂ ಒಂದಕ್ಕೆ ಎರಡು ಲಾಭ. ಪ್ರತಿಗಂಡು ಹೆಣ್ಣಿನಲ್ಲಿ ಎರಡು ಅಪೇಕ್ಷೆಗಳನ್ನು ಹೊಂದಿರುತ್ತಾನೆ. ಅವಳಿಂದಾಗಿ ಸುಖಿಸಬೇಕು, ಎರಡು ತನಗೆ ಸಂಬಂಧಿಸಿದ ದೈನಂದಿಕ ಬಹುತೇಕ ಕೆಲಸಗಳು ಅವಳಿಂದ ಮಾಡಿಸಿಕೊಳ್ಳಬೇಕು.ವಾಸ್ತವಕ್ಕೆ ಗಂಡು ಹೆಣ್ಣಿನಷ್ಟು ದೊಡ್ಡ ಅಪೇಕ್ಷಗಳೆನ್ನು ಹೊಂದಿರುವುದಿಲ್ಲ. ಅವನ ಎರಡು ಇಚ್ಛೆಗಳನ್ನು ಅವಳು ಪೂರೈಸಿದರೆ ಅವನು ಸಂತೃಪ್ತ. ಮತ್ತವನ ಇಚ್ಚೆಗಳು ಕೂಡ ತೀರಾ ಅಲ್ಪದ್ದು. ಕಾಲಕಾಲಕ್ಕೆ ಒಳ್ಳೆ ಅಡಿಗೆ ಮಾಡಿ ಹಾಕಬೇಕು. ತನ್ನ ಬಟ್ಟೆಗಳನ್ನು ಒಗೆದು ಸರಿಯಾಗಿ ಇಸ್ತ್ರಿ ಮಾಡಿ ಇಟ್ಟು, ದುಡಿದು ಮನೆಗೆ ಬಂದಾಗ ನಗು ನಗುತ ಸ್ವಾಗತಿಸ ಬೇಕು, ಒಂದಷ್ಟು ಸಮಯ ಏಕಾಂತವಾಗಿ ಅವನೊಂದಿಗೆ ಅವಳು ಕಳೆಯಬೇಕು. ಇವನ ಈ ಬಯಕೆಗಳಿಗೆ ಹೆಚ್ಚಿನ ಖರ್ಚಿಲ್ಲ.

ಆದರೆ ಹೆಣ್ಣಿನ ಬಕೆಟ್ ಲಿಸ್ಟ್ ದೊಡ್ಡದಾಗಿರುತ್ತದೆ. ಅವಳು ಯಾವುದನ್ನು ಒಂದೇ ಏಟಿಗೆ ಒಪ್ಪುವುದಿಲ್ಲ. ಅದೆಷ್ಟೇ ಶಾಪಿಂಗ್ ಮಾಡಿದ ನಂತರವೂ ಅದರೊಳಗೂ ಅಸಂತೃಪ್ತಿ ಇದ್ದೇ ಇರುತ್ತದೆ. ನೂರು ಸೀರೆ ಖರೀದಿಸಿದ ಮೇಲು ಅವಳ ವಾರ್ಡ್ ರೋಬ್ ನಲ್ಲಿ 101ನೇ ಸೀರೆಗೆ ಜಾಗವಿರುತ್ತದೆ. ಚಿನ್ನದ ರೇಟ್ ಎಷ್ಟೇ ಜಾಸ್ತಿಯಾದರೂ ಇವಳ ಮೈಯ ಮೇಲೆ ಅದು ಕಮ್ಮಿಯಾಗಿಯೇ ಕಾಣುತ್ತದೆ. ಹೆಣ್ಣಿನ ಬಯಕೆಗಳಲ್ಲಿ ಪ್ರಾಕ್ಟಿಕಲಿಟಿ ಕಡಿಮೆ, 

ಅನ್ ರಿಯಾಲಿಸ್ಟಿಕ್ ಜಾಸ್ತಿ. ಹದಿನೈದು ಸಾವಿರದ ರೇಷ್ಮೆ ಸೀರೆಯನ್ನು ಗಂಡ ಪ್ರೀತಿಯಿಂದ ತಂದು ಕೊಟ್ಟರು,   ಅದ್ಯಾರೋ ಹೊಸ ಫ್ಯಾಷನ್ ಅಂತ ಸಾವಿರ ರೂಪಾಯಿ ಸೀರೆಯುಟ್ಟು ಹೊರಟಿದ್ದನ್ನು ಕಂಡು 'ಇದು ಒಂದು ಸೀರೆನಾ! 'ಅಂತ ಹದಿನೈದು ಸಾವಿರದ ಸೀರೆಯನ್ನು ಕೂಡ ತಿರಸ್ಕರಿ ಬಿಡ್ತಾಳೆ. ಅವಳು ಒಂದು ವಸ್ತುವಿನ ಮೌಲ್ಯವೆಷ್ಟು ಅಂತ ಲೆಕ್ಕ ಹಾಕಲ್ಲ, ಅವಳಿಗೆ ಬೇಕಿರುವುದೆಲ್ಲ ಬೇರೆಯವರ ಹತ್ರ ಏನಿದೆ ಅದು ತನ್ನ ಹತ್ತಿರಾನೂ ಇರಬೇಕು. ಅವಳತ್ರ ಇರುವ ಯಾವ ಡಿಸೈನ್ (ಸೀರೆ, ಒಡವೆ ಇತ್ಯಾದಿ) ಅವಳಿಗೆ ಇಷ್ಟ ಆಗಲ್ಲ. ಬೇರೆಯವರ ಡಿಸೈನ್ಗಳು ಎಷ್ಟೇ ಕೆಟ್ಟದಾಗಿರುತ್ತದೆ ಅಷ್ಟಷ್ಟು ಇವಳಿಗೆ ಇಷ್ಟವಾಗುತ್ತದೆ. ಅದಕ್ಕೆ ಆ ಆ ಸೀರೆ ಒಡವೆ ಇತ್ಯಾದಿಗಳ ಬಗ್ಗೆ ಬೇರೆಯವರ ಹೇಳಬೇಕಾದರೆ, 'ಅವಳತ್ರ ಇರೋದು ಯಾವುದು ಚೆನ್ನಾಗಿಲ್ಲ' ಅಂತಾಳೆ. ಹಾಗೆ ಹೇಳ್ತಾಳೆ ಅಂದಾಗ ಒಳಗಿರುವ ಅರ್ಥ, ತನ್ನ ಹತ್ರ ಅದಿಲ್ಲ ಅಂತ ಕೊರಗು.

ಯಾವ ಹೆಣ್ಣಾದರೂ ಸರಿಯೇ ಅವಳಿಗೆ ಸದಾ ಎರಡು ಅಪೇಕ್ಷೆಗಳಿರುತ್ತವೆ. ಮೊದಲನೇದಾಗಿ ಒಂದು; ಇತರರ (ಅವರು ಕೂಡ ಹೆಣ್ಣುಗಳೇ) ಹತ್ತಿರ ಏನೆಲ್ಲ ಇದೆಯೋ ಅದು ತನ್ನ ಹತ್ತಿರ ಇರಬೇಕೆಂದು ಬಯಸುತ್ತಾಳೆ.  ಎರಡು; ತನ್ನ ಹತ್ತಿರ ಏನಿದೆ ಅದು ಮೊದಲನೇದಾಗಿ ಒಂದು ಇರಬಾರದೆಂದು ಅಪೇಕ್ಷಿಸುತ್ತಾಳೆ. ತನ್ನತ್ತಿರ ಏನಿದಿಯೋ ಅದು ಇತರರ ಹತ್ತಿರ ಇಲ್ಲದಾಗ ಅದು ಕೂಡ ಆನಂದವೇನಿದೆ ಅದೇ ಹೆಣ್ಣಿಗೆ ಜಗತ್ತಿನಲ್ಲಿ ಅತ್ಯಂತ ಪ್ರೀತಿ ಪಾತ್ರವಾದ ಸುಖ. ತನ್ನ ಹತ್ರ ಇಲ್ಲದೆ ಬೇರೆಯವರ ಹತ್ರ ಇದ್ದರೆ ಅದಕ್ಕಿಂತ ಕೆಟ್ಟ ನರಕ ಯಾತನೆ ಇನ್ನೊಂದು ಇರಲಾರದು. ಏಕೆಂದರೆ, ಮಾಯೆ ಎಂದರೆ ಆ ಕ್ಷಣಕ್ಕೆ ಏನು ಇಷ್ಟವಾಗುತ್ತದೋ ಅದನ್ನು ಪಡೆದೆ ತೀರಬೇಕು ಎಂಬ ಭಾವನೆ. ಅದು ಸಾಧ್ಯವಾಗದೆ ಹೋದರೆ ಅದನ್ನು ಪಡೆದೆ ತೀರುವ ಹಠಕ್ಕೆ ಬಿದ್ದು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾಳೆ ಹೆಣ್ಣು ಎಂಬ ಮಾಯೆ.

ಹೆಣ್ಣಿನ ಇಂತಹ ಹಠಗಳ ಹಿಂದೆ ಒಂದು ಕಥೆ ಇದೆ…

ಹಿಂದೆ ಒಮ್ಮೆ, ಋಷಿ ಒಬ್ಬ ತಪಸ್ಸನ್ನು ಆಚರಿಸುತ್ತಿದ್ದನು.  ಹೆಂಡತಿ ಮಕ್ಕಳು ಸಂಸಾರವಿಲ್ಲದೆ ಸಂತೋಷವಾಗಿ ಜೀವಿಸುತ್ತಿದ್ದನು. ಹೀಗಿರುವ ಕಾಲಕ್ಕೆ, ಅವನಿದ್ದ ಆ ಅರಣ್ಯಕ್ಕೆ ಒಂದು ಅಪ್ಸರೆಯ ಆಗಮನವಾಯಿತು. ಅವನು ಅವನ ಪಾಡಿಗೆ ತಪಸ್ಸನ್ನಾಚರಿಸುತ್ತಿದ್ದನು, ಅವಳು ತನ್ನ ಪಾಡಿಗೆ ತಾನೆ ಪ್ರಕೃತಿಯ ಅಂದದ ಮುಂದೆ ವಿಹರಿಸುತ್ತಿದ್ದಳು. ಯಾರಿಗೂ ಯಾರು ಪರಿಚಯವಿಲ್ಲದಾಗ ಯಾವುದೇ ತಕರಾರು ಇರಲಿಲ್ಲ. ಆದರೆ ಎಷ್ಟೇ ಋಷಿಯಾದರೂ ಅವನು ಒಂದು ಗಂಡಸೆ ತಾನೇ? ಸರಿ ಸುಮ್ಮನೆ ಇಲ್ಲದೆ, ಒಂದು ದಿನ ಮಾತನಾಡಿಸಿಯೆಬಿಟ್ಟನು. ಅವಳು ಕೂಡ ಅವನೊಂದಿಗೆ ನಗುನಗುತ ಮಾತನಾಡಿದಳು. ಹೀಗೆ ಮಾತು ಮಾತು, ಬೆಳೆದು ಬೆಳೆದು ಇಬ್ಬರೂ ಹತ್ತಿರವಾದರು. ಮತ್ತೇನಿದೆ ನಡೆಯಬೇಕಾದ ಒಂದು ಕ್ರಿಯೆ ನಡೆದೇ ಹೋಯಿತು.

ಈಗ ಋಷಿಗೆ ಚಿಂತೆ ಮೊದಲಾಯಿತು, 'ಇರೋ ಸಂಸಾರವನ್ನೇ ಬಿಟ್ಟು ಬಂದು ಖುಷಿಯಾಗಿದ್ದೇನೆ. ಈಗ ಇವಳ ಜೊತೆ ಸೇರಿ ಮತ್ತೆ ಸಂಸಾರಿಯಾಗ ಬಿಟ್ಟೆ. 'ಅಯ್ಯೋ !ನಾನು ಕೆಟ್ಟೆ!!' ಅಂತ ರೋಧಿಸಿದನು. ಎಲ್ಲಿಯವರೆಗೂ ಕಣ್ಣೆದುರಿಗೆ ಮಾಯೆ ಕಾಣುವುದಿಲ್ಲವೋ, ಮನಸ್ಸಿಗೂ, ಸ್ಪರ್ಶಕ್ಕೂ ಅದರ ಅನುಭವ ತಟ್ಟುವುದಿಲ್ಲ. ಮಾಯೆ ತೊರೆದು ಬಂದವನು ಮತ್ತೆ ಮಾಯೆ ನೋಡಿದಾಗ, ಅದು ಮಾಯೆ ಎಂದು ಗೊತ್ತಿದ್ದು ಮಾಯೆಗೆ ಒಳಗಾದನು. ಆ ಅಪ್ಸರೆಗೆ ಈಗ ಅದೇನು ನಿರಾಳ, ಸುಖದ ಭಾವ! 'ನಾವಿಬ್ಬರು ವಿವಾಹವಾಗಿ ಇಲ್ಲೊಂದು ಸಂಸಾರ ಶುರುವು ಮಾಡೋಣ' ಅಂದಳು. 'ಇಲ್ಲ... ನಾನು ತಪಸ್ಸನ್ನು ಮಾಡಬೇಕು, ನಾನು ವೈರಾಗ್ಯದಲ್ಲಿದ್ದೇನೆ' ಅಂತಲ್ಲ ಹೇಳಿ ನೋಡಿದ, ಆದರೆ ಈಗಾಗಲೇ ಮನಸ್ಸಿನೊಳಗೆ ಆ ಮಾಯೆಗೆ ಅರ್ಧ ಸೋತು ಸುಣ್ಣವಾಗಿದ್ದ. ಗಂಡಸರಿಗೆ ಇರುವ ಅತಿ ದೊಡ್ಡ ವೀಕ್ನೆಸ್, ಹೆಣ್ಣು ಹೆಚ್ಚು ಒತ್ತಡ ಹಾಕಿದರೆ ತಡೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ಮದುವೆಗೆ ಹಠ ಮಾಡಿದ ಅವಳೆದುರು ಸೋತು ಅವಳನ್ನು ಮದುವೆಯಾದನು. (ವಾಸ್ತವಕ್ಕೆ ಅವನಿಗೂ ಒಳಗೊಳಗೆ ಸಂಸಾರಿಯಾಗುವ ಆಸೆ ಇತ್ತು)

ಮದುವೆಯಾದ ಒಂದಷ್ಟು ಕಾಲ ಅವನಿಗೂ ಎಲ್ಲಿಲ್ಲದ ಆನಂದ. 'ಇದೇನು ಜೀವನ ಎಷ್ಟು ಚೆನ್ನಾಗಿದೆ!' ಅಂತ ಅವನು ಅಂದುಕೊಳ್ಳುವ ಕಾಲಕ್ಕೆ ಈ ವಿಷಯವನ್ನು ತಿಳಿದ ಅವನ ಹಿಂದಿನ ಸಂಸಾರಿಕ ಜೀವನದ ಪತ್ನಿ ಅಲ್ಲಿಗೆ ಓಡಿ ಬಂದಳು. ಹಿಂದೆ ಇವನನ್ನು ಅಪ್ರಯೋಜಕನೆಂದು ತಿರಸ್ಕರಿಸಿದ್ದಳು. ಇದರಿಂದ ನೊಂದು ಹೋಗಿದ್ದ ಇವನು ಸಂಸಾರಿಕ ಜೀವನವನ್ನು ಬಿಟ್ಟು ಋಷಿಯಾಗಿದ್ದನು. ಬಹು ವರ್ಷಗಳ ಕಾಲ ಇವರಿಬ್ಬರ ನಡುವೆ ಸಂಪರ್ಕವಿರಲಿಲ್ಲ. ಈಗ ಓಡಿ ಬಂದ ಅವನ ಮೊದಲನೇ ಪತ್ನಿ ಈಗ ನನ್ನ ಗಂಡ ನನಗೆ ಬೇಕು ಅಂತ ಕೂತಳು. ಆದರೆ ಅಪ್ಸರೆ 'ಈಗಾಗಲೇ ನೀನು ನಿನ್ನ ಗಂಡನನ್ನು ತೊರೆದಿರುವೆ. ಅವನಿಗೂ ನಿನಗೂ ಯಾವುದೇ ಸಂಬಂಧವಿಲ್ಲ ಅಂದಮೇಲೆ ನೀನೀಗ ಯಾಕೆ ವಾಪಸ್ ಬಂದಿರುವೆ? ಅಂತ ಪ್ರಶ್ನಿಸಿದಳು.ಅದಕ್ಕೆ ಮೊದಲನೆಯ ಪತ್ನಿ 'ಹೌದು ನಾನು ಅವನನ್ನು ಅಪ್ರಯೋಜಕನೆಂದು ತೋರದಿದ್ದೆ, ಈಗಲೂ ನನಗೆ ಅವನ ಮೇಲೆ ಯಾವುದೇ ಮೋಜಿಲ್ಲ. ಆದರೂ ನಾನು ಅವನನ್ನು ಈಗ ಎರಡನೇ ಮದುವೆಯಾಗಿರುವ ನಿನ್ನಿಂದ ದೂರ ಮಾಡಲೆಂದೆ ಬಂದಿದ್ದೇನೆ' ಎಂದಳು. 

'ಅದ್ಯಾಕೆ...' ಅಂತ ಅಪ್ಸರೆ ಕೇಳಿದಳು. ಅದಕ್ಕೆ ಅವನ ಮೊದಲನೇ ಪತ್ನಿ 'ಯಾವುದೇ ಹೆಣ್ಣಾದರೂ ಎರಡನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಒಂದು, ತನ್ನದು ಅಂತ ಏನಿದೆ ಅದು ತನ್ನಲ್ಲೇ ಉಳಿಯಬೇಕು. ಎರಡು, ತಾನು ತಿರಸ್ಕರಿಸಿದ್ದನ್ನು ಬೇರೊಬ್ಬರು ಪುರಸ್ಕರಿಸಿದರೆ ಅದನ್ನು ಸಹಿಸುವುದಿಲ್ಲ' ಎಂದಳು. ಇದಕ್ಕೆ ಅಪ್ಸರೆ ಕೂಡ ಮರುತ್ತರ ಕೊಟ್ಟು, 'ಹೌದು ಈಗ ನಾನು ಅವನನ್ನು ಪಡೆದಿದ್ದೇನೆ. ಹೀಗಾಗಿ ನಾನು ಪಡೆದುಕೊಂಡಿರುವ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ನಿನಗೆ ಬಿಟ್ಟು ಕೊಡುವುದಿಲ್ಲ' ಎಂದಳು. ಇಬ್ಬರು ಎಂಡ್ ಆಫ್ ದ ಡೇ ಮಹಿಳೆಯರು, ಮಾಯೆಯ ಮಾಯಾಂಗನೆರು, ಒಬ್ಬರಿಗಿಂತ ಒಬ್ಬರಿಗೆ ಜಲಸ್ ಜಾಸ್ತಿ. ಯಾರು ಯಾರಿಗೂ ಕಡಿಮೆ ಇಲ್ಲದಂತೆ ಹಠಕ್ಕೆ ಬಿದ್ದಿದ್ದರು. 

ಇವರಿಬ್ಬರ ಹಠದಲ್ಲಿ ಬಲಿಯಾಗಿ ನಿಂತಿದ್ದ ಆ ಋಷಿ, 'ನನ್ನ ಪಾಡಿಗೆ ನಾನು ಇದ್ದಾಗ ಎಲ್ಲವೂ ಚೆನ್ನಾಗಿತ್ತು. ಆ ಮಾಯೆಯನ್ನು ಮಾತನಾಡಿಸಿದೆ ತಡ ಮತ್ತೆ ಮನಸ್ಸಿನಲ್ಲಿ ಕಾಮನೆಗಳು ಮೊದಲಾಯಿತು. ಕಾಮನೆಗಳ ಫಲ ಮತ್ತೆ ಮನಸ್ಸು ದುಃಖದಿಂದ. ಭಾರವಾಯಿತು' ಅಂತ ನೊಂದು ಕುಳಿತಿದ್ದನು ಅದೇ ಸಮಯಕ್ಕೆ ಸರಿಯಾಗಿ ಅದೇ ದಾರಿಯಲ್ಲಿ  ಮತ್ತೊಬ್ಬ ಋಷಿಯ ಆಗಮನವಾಯಿತು ಅವರನ್ನು ನೋಡಿದ ಈ ಋಷಿ ಮುನು, 'ಗುರುಗಳೇ ನಿಮ್ಮಲ್ಲಿ ಒಂದು ಪ್ರಶ್ನೆ ಕೇಳಬಹುದೇ ?' ಎಂದನು. 'ಅಗತ್ಯವಾಗಿ ಕೇಳು ಶಿಷ್ಯ' ಎಂದರು. 'ನೀವು ಯಾವ ಕಾರಣದಿಂದ ಸನ್ಯಾಸ ಧರ್ಮ ಸ್ವೀಕರಿಸಿದ್ದು' ಅಂತ ಕೇಳಿದ. 'ಏನಿಲ್ಲ ನನ್ನ ಪತ್ನಿಗೆ ನಾನು ಏನೆಲ್ಲಾ ತಂದು ಕೊಟ್ಟರು ಎಷ್ಟೇ ಪ್ರೀತಿ ತೋರಿಸಿದರು ಅವಳು ಮಾತ್ರ ಯಾವುದನ್ನೂ ಒಪ್ಪುತ್ತಿರಲಿಲ್ಲ.. ಎಲ್ಲದಕ್ಕೂ ಒಂದೇ ಹಠ. ಹೆಂಡತಿಗೆ ಚೆನ್ನಾಗಿ ಗೊತ್ತಿತ್ತು, ತಾನು ಹಠ ಮಾಡಿದರೆ ಏನನ್ನಾದರೂ ಗೆಲ್ಲಬಹುದು ಅಂತ. ಅವಳ ಹಠದಿಂದ ಸಂಸಾರಕ್ಕಿಂತ ಸನ್ಯಾಸವೇ ಉತ್ತಮವೆಂದು ನನಗನಿಸಿತು. ಕೊನೆಗೆ ಅವಳನ್ನು ಸಾಕಲಾರದೆ ಅವಳಿಗೆ ಬೇರೊಬ್ಬನೊಂದಿಗೆ ಮದುವೆ ಮಾಡಿಕೊಟ್ಟೆ. ನನಗೂ ಅದರಿಂದ ಒಂದಷ್ಟು ಕಾಲ ಸಂತೋಷ ಮತ್ತು ವಿರಾಮ ಸಿಕ್ಕಿದ್ರು. ಇದಾದ ಕೆಲವು ಕಾಲಕ್ಕೆ ಮತ್ತೆ ನನ್ನ ಹಳೆಯ ಹೆಂಡತಿ ಓಡಿ ಬಂದಳು. ಆ ಹೊಸ ಗಂಡನಿಗಿಂತ ಹಳೆ ಗಂಡನೇ ಅತ್ಯುತ್ತಮನೆಂದಳು. ಕಾರಣ ಕೇಳಿದರೆ, ಎರಡನೆಯವನ ಜೊತೆ ಸಂಸಾರ ಮಾಡಿದ ಮೇಲೆ ಗೊತ್ತಾಗಿದ್ದು ಮೊದಲನೆಯವನೇ ತುಂಬಾ ಒಳ್ಳೆಯವನೆಂದು ಎಂದಳು. ಯಾವುದು ಒಳ್ಳೆಯದು ಅದು ನಮ್ಮ ಹತ್ತಿರ ಇದ್ದಾಗ ತಿಳಿಯದು, ಅದಕ್ಕಿಂತ ಹೆಚ್ಚಾಗಿ ಹಠದ ಮುಂದೆ ಯಾವ ಒಳ್ಳೆಯದು ನಿಲ್ಲದು. ಅವಳಿಗೆ ಅದು ತಿಳಿಯುವ ಕಾಲಕ್ಕೆ ನಾನು ಸನ್ಯಾಸ ಧರ್ಮವನ್ನು ಪ್ರವೇಶಿಸಿದೆ' ಅಂತ ಬದಲಿ  ಕೊಟ್ಟು ಹೊರಟು ಹೋದನು.

ಈಗ ಈ ಋಷಿಗೆ ಎರಡು ವಿಷಯಗಳು ಸ್ಪಷ್ಟವಾಗಿ ಅರ್ಥವಾಯಿತು ಒಂದು; ತನ್ನ ಮೊದಲನೆಯ ಹೆಂಡತಿ ಏನಿದ್ದಾಳೆ ಅದು ಹಠ. ಅವಳಲ್ಲಿ ಇರುವುದು ಬರಿ ಕ್ರೋಧ. ಎಲ್ಲಿ ಯಾವುದು ಕ್ರೋಧದಿಂದ ವ್ಯವಹರಿಸಲ್ಪಡುತ್ತದೊ ಅವೆಲ್ಲವೂ ವಿನಾಶವಾಗುತ್ತದೆ. ಹಠದಿಂದ ಹೆಣ್ಣು ಒಲಿದರು, ಮುನಿದರು ಕೊನೆಗೆ ಅದು ನಾಶವನ್ನೇ ಸಂಕೇತಿಸುತ್ತದೆ. ಒಂದು ಹೆಣ್ಣು ಹಠ ಮಾಡಿದರೆ ಅದರ ಜೊತೆಗೆ ಗಂಡು ಕೂಡ ಅದರಲ್ಲಿ ಬಲಿಯಾಗುತ್ತಾನೆ.

ಈಗ ಹೊಸ ಹೆಂಡತಿಯಾಗಿರುವ ಅಪ್ಸರೆ ಏನಿದ್ದಾಳೆ ಅದು ಮಾಯೆ.ಅಪ್ಸರೆ ಮೊದಮೊದಲು ಇಲ್ಲಿಗೆ ಬಂದಾಗ, ಜಿಂಕೆಯಂತೆ ಅಲ್ಲಿಯಲ್ಲಿ ಓಡಾಡುತ್ತಿದ್ದಾಗ ಮನಸ್ಸು ಸುಮ್ಮನೆ ಇಲ್ಲದೆ ತಪಸ್ಸನ್ನು ಭಂಗಗೊಳಿಸಿ ಅವಳನ್ನೇ ನೋಡುತ್ತಿತ್ತು. ಅದು ಮಾಯೆ, ಆ ಮಾಯೆಗೂ ಚೆನ್ನಾಗಿ ಗೊತ್ತು. ಒಂದು ಸಲ ಯಾವುದೇ ಗಂಡು ತನ್ನಡೆಗೆ ಆಕರ್ಷಿತನಾದನೆಂದರೆ,  ಸತ್ತರೂ ಸರಿಯೇ ಆ ಮೋಹ ಅಷ್ಟೊಂದು ಬೇಗ ಅಳಿಯದು ಅಂತ. ಇನ್ನು ಹೆಣ್ಣು, ಮಾಯೆ ಎನ್ನುವುದು ಸತ್ಯವೇಯಾದರೂ ಅದಕ್ಕಿಂತ ದೊಡ್ಡ ಸತ್ಯ ಪುರುಷನ ಮನಸ್ಸಿನ ಯಾತನೆ. ಪತಂಗ ಅಥವಾ ದೀಪದ ಹುಳವು ಬೆಂಕಿಯಿಂದ ಆಕರ್ಷಿತವಾಗಿ ಬೆಂಕಿಯ ಸುತ್ತ ಹಾರುತ್ತ ಹಾರುತ್ತ ಬೆಂಕಿಯನ್ನು ಹಿಡಿಯಲು ಹೋಗಿ ಆ ಬೆಂಕಿಯಿಂದಲೇ ಸಾವನ್ನಪ್ಪುತ್ತದೆ. ಮಾಯಾ ರೂಪೀ ಸ್ತ್ರೀಯರನ್ನು ನೋಡಿ, ಅವಳ ಮೋಹದಲ್ಲಿ ಮೋಸ ಹೋಗಿ ಗಂಡು ಕೂಡ ಅತಂತ್ರನಾಗಿ ಪತಂಗವೇ ಆಗುತ್ತಾನೆ. 

ಇದರಿಂದ ಅಂತಿಮವಾಗಿ ತಿಳಿಯಲ್ಪಡುವುದು: ಹೆಣ್ಣು ಮಾಯೆ, ಅದೆಂದು ವಾಸ್ತವವಾದಿಯಲ್ಲ.ಪುರುಷ ವಾಸ್ತವವಾದಿಯಾದರು ಮಾಯೆಗೆ ಅಧೀನ. ಗಂಡು ಮಾಡುವ ಅತಿ ದೊಡ್ಡ ತಪ್ಪು, ಮಾಯೆಗೆ ವಾಸ್ತವವನ್ನು ವಿವರಿಸಿ ವಾಸ್ತವದಲ್ಲಿ ಬದುಕುವಂತೆ ಹೇಳುವುದು. ಅದಕ್ಕಿಂತ ಮುಖ್ಯವಾಗಿ, ಅವನಿಗೆ ಮಾಯೆಯೊಳಗೆ ಬೀಳುವುದು ಗೊತ್ತಿದೆ, ಆದರೆ ಅದರಿಂದ ಬಿಡಿಸಿಕೊಳ್ಳುವುದು ಗೊತ್ತಿಲ್ಲ. ಬಿಡಿಸಿಕೊಳ್ಳಲಾಗದ ಅವನ ಯಾತನೆ ಏನಿದೆ ಅದು ಅಂತಿಮವಾಗಿ ಅವಳ ಮೇಲಷ್ಟೇ ಅಲ್ಲ ಬದುಕಿನ ಮೇಲೆಯೇ ವಿರಕ್ತಿಯನ್ನು ಉಂಟುಮಾಡುತ್ತದೆ. ಜೀವನದ ಅಂತಿಮ ಸತ್ಯವೇನೆಂದರೆ ಹೆಣ್ಣು ಮಾಯೆಯಾದರೆ, ಅದನ್ನು ಅಂಟಿಸಿಕೊಂಡ  ಬದುಕಿನಲ್ಲಿ ಅಂತಿಮವಾಗಿ ಉತ್ಪತ್ತಿಯಾಗುವ ವಿರಕ್ತಿ ಅದೇನಿದೆ ಅದೇ ಪುರುಷ. 

Disclaimer: This post has been published by Ravindra Kotaki from Ayra and has not been created, edited or verified by Ayra
Category:Philosophy



ProfileImg

Written by Ravindra Kotaki

Verified

ಲೇಖಕ/ಅಂಕಣಕಾರ

0 Followers

0 Following