ಪ್ರತಿ ವರ್ಷ ಮಾರ್ಚ್ 8ರಂದು "ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು" ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅವಳ ಮೇಲೊಂದು ಲೇಖನ.
ಇತ್ತೀಚಿನ ದಿನಗಳಲ್ಲಿ ತುಂಬಾ ದೊಡ್ಡ ವಿಚಾರವಾಗಿ ಚರ್ಚಿತವಾಗುತ್ತಿರುವುದು ಎಂದರೆ ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ಸಮಾನತೆ, ಸ್ತ್ರೀ ಸಬಲೀಕರಣ, ಸ್ತ್ರೀ ಶಕ್ತಿ ಎನ್ನಬಹುದು. ಇವೆಲ್ಲವೂ ಪ್ರತಿಯೊಬ್ಬ ಮಹಿಳೆಗೂ ದೊರಕಬೇಕು, ಮಹಿಳೆ ಯಾವತ್ತಿದ್ದರೂ ಪುರುಷನ ಸಮಾನವೇ ಎಂದು ಬಹಳ ಹಿಂದಿನಿಂದ ಎಷ್ಟೋ ಮಹನೀಯರು ಪ್ರತಿಪಾದಿಸುತ್ತಿದ್ದರೂ, ಅದಿನ್ನೂ "ನೀರ ಮೇಲಣ ಗುಳ್ಳೆಯಂತೆ" ಮಹಿಳೆಯಾದವಳಿಗೆ ಅನಿಸುತ್ತಿದೆ ಎಂದರೆ ಸುಳ್ಳಲ್ಲ.
ಹೆಣ್ಣಾದವಳು ಪುರುಷನಷ್ಟೇ ಬುದ್ಧಿವಂತಳು, ಸಮರ್ಥಳು, ಎಲ್ಲವನ್ನೂ ನಿಭಾಯಿಸುವ ಶಕ್ತಿ ಇರುವಳು ಎಂದು ಗೊತ್ತಿದ್ದರೂ ವಿವಿಧ ಕ್ಷೇತ್ರಗಳಲ್ಲಿ ಅವಳ ಉಪಸ್ಥಿತಿಯ ಸಂಖ್ಯೆಯನ್ನು ಗಮನಿಸಿದಾಗ ಸ್ತ್ರೀ ಸಮಾನತೆ ಆಚರಣೆಯಲ್ಲಿ ಇಲ್ಲ ಎನಿಸುತ್ತದೆ. ಹಲವು ಕೆಲಸಗಳನ್ನು ಒಂದೇ ಸಮಯದಲ್ಲಿ ಗಮನವಿಟ್ಟು ಮಾಡುವ ಕಲೆ ಇರುವುದು ಸ್ತ್ರೀಯರಿಗೆ. ಹಾಗಾಗಿಯೇ ಅವಳನ್ನು "ಮಲ್ಟಿ ಟಾಸ್ಕರ್" ಎನ್ನುವುದು. ಆದ್ದರಿಂದಲೇ ಅವಳು ಮನೆಯ ಒಳಗೂ, ಹೊರಗೂ, ಕುಟುಂಬ ಸದಸ್ಯರಿಗೂ, ಬರುವ ಅತಿಥಿಗಳಿಗೂ, ಹೀಗೆ ಎಲ್ಲಾ ಕಡೆಯಲ್ಲೂ ಎಲ್ಲಾ ಜನರನ್ನು ನೋಡಿಕೊಳ್ಳುವ ಉಪಚರಿಸುವ ತಾಳ್ಮೆ, ವ್ಯವಧಾನ, ಚಾಕಚಕ್ಯತೆಯ ಕಲೆ ಒಲಿದಿದೆ.
ಆದರೆ ವಿವಿಧ ಕೆಲಸದ ಕ್ಷೇತ್ರಗಳಲ್ಲಿ ಅವಳು ಮುಖ್ಯ ಸ್ಥಾನದಲ್ಲಿ ಕುಳಿತು ಕೆಲಸ ನಿರ್ವಹಿಸುವುದನ್ನು ನೋಡುವುದು ಕಡಿಮೆ ಎಂದೇ ಹೇಳಬಹುದು. ಅವಳಿಗೆ ಅಂತಹ ಶಕ್ತಿಯಿದ್ದರೂ, ಕೆಲಸ ಮಾಡುವ ಅನುಭವವಿದ್ದರೂ ಹೆಣ್ಣು ಎಂಬ ಕಾರಣಕ್ಕೆ ಮುಖ್ಯ ಸ್ಥಾನಗಳಿಗೆ ಅವಳನ್ನು ಆಯ್ಕೆ ಮಾಡುವಾಗ ಹಿಂದೂ ಮುಂದೂ ನೋಡುತ್ತದೆ ನಮ್ಮ ಸಮಾಜ. ಒಂದು ಮದುವೆಯಾದ ಮೇಲೆ ಅವಳು ಕೆಲಸ ಹೇಗೆ ನಿರ್ವಹಿಸುತ್ತಾಳೋ ಎಂಬ ಅನುಮಾನ, ಮತ್ತೊಂದು ಮಕ್ಕಳು ಆದಮೇಲೆ ಅವಳು ಮತ್ತೆ ಕೆಲಸಕ್ಕೆ ಹಿಂದಿರುಗುವುದು ಡೌಟು ಎಂಬ ಸಂದೇಹ..! ಎಷ್ಟೋ ಸಲ ಅವಳಿಗೆ ಮದುವೆ ಮಕ್ಕಳು ಆದನಂತರ ವಾಪಸ್ಸು ಕೆಲಸಕ್ಕೆ ಹಿಂದಿರುಗಲು ಆಕೆ ತಯಾರಾಗಿದ್ದರೂ ಸಮಾಜ ಅವಳನ್ನು ಸಂದೇಹಿಸುತ್ತದೆ.
ಹೆಣ್ಣು ಗಂಡು ಎಂಬ ತಾರತಮ್ಯ ಹುಟ್ಟುವ ಮನೆಯಿಂದಲೇ ಶುರುವಾಗುತ್ತದೆ ಎಂದರೆ ತಪ್ಪಲ್ಲ. ಬೆರಳಣಿಕೆಯಷ್ಟೇ ಮನೆಗಳಲ್ಲಿ ಇಬ್ಬರೂ ಮಕ್ಕಳನ್ನು ಸರಿಸಮಾನವಾಗಿ ಓದಿಸಿ, ಬೆಳೆಸಿ, ಪೋಷಿಸುತ್ತಾರೆ ಅವರ ಪೋಷಕರು. ಇನ್ನು ಎಷ್ಟೋ ಮನೆಗಳಲ್ಲಿ ಗಂಡು ಮಗ, ಹೆಣ್ಣು ಮಗಳು ಎಂಬ ನಾಮಾಂಕಿತದೊಂದಿಗೆ ಕೆಲಸಗಳನ್ನು ನಿರ್ವಹಿಸುವುದರಲ್ಲಿ ಪ್ರತ್ಯೇಕಿಸಿ ಚಿಕ್ಕ ವಯಸ್ಸಿನಿಂದಲೇ ಅಸಮಾನತೆಯನ್ನು ಇಬ್ಬರ ನಡುವೆ ಪರಿಚಯಿಸುತ್ತಾರೆ.
ಗಂಡು ಮಗ ಹೊರಗಿನ ಕೆಲಸಕ್ಕಷ್ಟೇ ಸೀಮಿತ, ಅವನೇನಿದ್ದರೂ ಮನೆಯ ದೀಪವೆಂದೂ, ಹೆಣ್ಣು ಮಗಳು ಮನೆಯ ಒಳಗಿನ ಕೆಲಸಗಳನ್ನು ಕಲಿತು ಮಾಡಬೇಕೆಂದು, ಅವಳೆಂದಿದ್ದರೂ ಇನ್ನೊಬ್ಬರ ಮನೆಯನ್ನು ಬೆಳಗುವವಳು ಎಂದುಕೊಂಡು ಅದೇ ರೀತಿಯಲ್ಲಿ ಬೆಳೆಸುತ್ತಾರೆ ಕೆಲವು ಪೋಷಕರು. ಆದರೆ ಗಂಡು ಮಗು ಎಂದು ಪರ್ವತದಷ್ಟು ಪ್ರೀತಿ-ಕಕ್ಕುಲಾತಿ, ಹೆಣ್ಣು ಮಗಳೆಂಬ ಚಿಕ್ಕ ಬೇಸರ, ಬೊಗಸೆಯಷ್ಟೇ ಪ್ರೀತಿ ನೀಡಿ ಅವರನ್ನು ಬೇರೆ ಬೇರೆ ರೀತಿಯಲ್ಲಿ ಕಾಳಜಿವಹಿಸಿ ನೋಡಿಕೊಂಡರೆ ನಿಜಕ್ಕೂ ಅದು ಮುಂದೆ ಅವರಿಗೆ ಮಾತ್ರವಲ್ಲ ಸಮಾಜಕ್ಕೆ ಸಹ ಮಾರಕ ಎನ್ನಬಹುದು.
ತಾನು ಮಾಡಿದ್ದೇ ಸರಿ ಎನ್ನುವ ಗಂಡು ಮಗನ ಧೋರಣೆ, ಅಹಮಿಕೆ ಹೆಮ್ಮರವಾಗಿ ಬೆಳೆದು, ಆ ವ್ಯಕ್ತಿ ಮುಂದೆ ತನಗೆ ಹೆಂಡತಿಯಾಗಿ ಬರುವವಳಿಗೆ, ತನ್ನ ಸುತ್ತಮುತ್ತ ಓಡಾಡುವ ಮಹಿಳೆಯರಿಗೆ, ಹುಟ್ಟಬಹುದಾದ ಹೆಣ್ಣು ಮಗುವಿಗೆ, ತನ್ನದೇ ರೀತಿಯಲ್ಲಿ ತೊಂದರೆ ಕೊಡುವ ಸಾಧ್ಯತೆ ಹೆಚ್ಚಿರುತ್ತದೆ. ತಾನು ಹೇಳಿದ್ದೇ ನಡೆಯಬೇಕು, ತಾನು ದುಡಿಯುವವನು, ತಾನೇ ಮನೆ ನೋಡಿಕೊಳ್ಳುವವನು, ಹಾಗಾಗಿ ತನ್ನ ಕೈಯಲ್ಲಿ ಎಲ್ಲರ ಭವಿಷ್ಯವಿದೆ ಎಂಬ ತಪ್ಪು ಕಲ್ಪನೆಯಲ್ಲಿ ಬಿದ್ದು ಸಂಬಂಧಗಳಿಗೆ ಬೆಲೆ ಕೊಡದೆ ಇರುವ ಸಾಧ್ಯತೆ ಇರುತ್ತದೆ.
ಹೆಣ್ಣು ಮಕ್ಕಳಿಗೆ ಸ್ತ್ರೀ ಸ್ವಾತಂತ್ರ್ಯ ಸಿಗಬೇಕೆಂದರೆ ಅವಳನ್ನು ಬೆಳೆಸುವ ಪರಿಸರ ಎಷ್ಟು ಮುಖ್ಯವೋ, ಗಂಡು ಮಗನನ್ನು ಬೆಳೆಸುವ ರೀತಿಯೂ ಅಷ್ಟೇ ಮುಖ್ಯ ಎನ್ನಬಹುದು. ಯಾವಾಗ ಗಂಡು ಮಕ್ಕಳಲ್ಲಿ ಹೆಣ್ಣಿನ ಬಗ್ಗೆ ಗೌರವ, ಪ್ರೀತಿ, ಪೂಜನೀಯ ಭಾವನೆ, ಇಬ್ಬರೂ ಸಮ ಎನ್ನುವ ಕಲ್ಪನೆ ಬರುತ್ತದೆಯೋ ಅಂದು ಸ್ತ್ರೀಗೆ ಪೂರ್ಣ ಸ್ವಾತಂತ್ರ್ಯ ಸಿಕ್ಕಿತು ಎಂದರ್ಥ..! ಇಲ್ಲದಿದ್ದರೆ ಒಂದು ಕಡೆ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಬೊಬ್ಬೆಯಿಡುವುದು ಮತ್ತೊಂದು ಕಡೆ ಆಸಿಡ್ ದಾಳಿ, ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳು ಅಲ್ಲಲ್ಲಿ ನಡೆಯುತ್ತಿರುವುದು ಸಾಗುತ್ತಲೇ ಇರುತ್ತವೆ.
ಈ ಎರಡೂ ವಿಷಯಗಳು ರೈಲ್ವೆ ಹಳಿಗಳಂತೆ ಪ್ರತ್ಯೇಕವಾಗಿ ಮುಂದುವರೆಯುತ್ತಲೇ ಇರುತ್ತದೆ ವಿನಃ ಎಲ್ಲಿಯೂ ಪರಿಹಾರ ಸಿಗುವುದಿಲ್ಲ.
ಇಂತಹ ದಾಳಿಗಳು ಕಡಿಮೆಯಾಗಬೇಕು ಎಂದರೆ ಸ್ತ್ರೀ ಬಲಿಷ್ಠಳಾಗುವುದು ಅಷ್ಟೇ ಮುಖ್ಯ. ಒಂಟಿ ಸ್ಥಳಗಳಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಯಾವುದೋ ಒಂದು ಸಂದರ್ಭದಲ್ಲಿ ಎದುರಾದಾಗ, ಹೆದರದೇ ತನ್ನ ಜಾಣ್ಮೆ, ಚತುರತೆಯನ್ನು, ತಂತ್ರಜ್ಞಾನದ ಸಹಾಯವನ್ನು ಮತ್ತು ಆ ಕ್ಷಣದ ಬುದ್ದಿವಂತಿಕೆಯನ್ನು ಉಪಯೋಗಿಸಿ ಪರಿಸ್ಥಿತಿಯನ್ನು ನಿಭಾಯಿಸಬೇಕು. ಯಾರು ಏನೇ ಹೇಳಿದರೂ ತುಂಬಾ ನಂಬಿಕಸ್ಥನು ಈತ ಎಂದು ಗೊತ್ತಿದ್ದರೂ ಹೆಣ್ಣು ಮಕ್ಕಳು ತಮ್ಮ ಕ್ಷೇಮದಲ್ಲಿ ತಾವಿರುವುದು ಒಳ್ಳೆಯದು. ಅದು ಕೆಲಸ ನಿರ್ವಹಿಸುವ ಜಾಗದಲ್ಲೇ ಆಗಿರಬಹುದು ಅಥವಾ ಹೊರಗಿನ ಯಾವುದೇ ಸ್ಥಳಗಳಲ್ಲಿಯೂ ಆಗಿರಬಹುದು.
ಹೆಣ್ಣು ಮಕ್ಕಳ ಮೇಲೆ ದಾಳಿಗಳು ನಡೆದಾಗ ಸರಕಾರ- ಪೊಲೀಸ್- ಕಾನೂನು ವ್ಯವಸ್ಥೆ ಸಹ ತ್ವರಿತವಾಗಿ ಕೆಲಸ ಮಾಡುವುದು ಬಲು ಅವಶ್ಯ. ಅಪರಾಧಿಗಳನ್ನು ಜೈಲಿಗೆ ಹಾಕಿ, ವರ್ಷಗಟ್ಟಲೆ ಅವರಿಗೆ ಊಟ ಕೊಟ್ಟು, ಉಪಚರಿಸುತ್ತಾ, ನೋಡಿಕೊಳ್ಳುತ್ತಾ ಇದ್ದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಘಾತುಕ ವ್ಯಕ್ತಿತ್ವ ಹೊಂದಿರುವ ಕೇಡಿಗಳು ತಾವೂ ಇಂತಹ ವಿದ್ವಂಸಕ ಕೃತ್ಯ ಮಾಡಿದರೂ, ಜೈಲಿಗೆ ಹೋಗಿ ಇರುತ್ತೇವೆ. ನೋಡಿಕೊಳ್ಳುವವರಿಗೆ ತನ್ನ ಊಟ- ಬಟ್ಟೆಯ ಖರ್ಚು ಬೀಳುತ್ತದೆ.
ಒಂದಷ್ಟು ವರ್ಷಗಳ ನಂತರ ಮತ್ತೆ ಫ್ರೀಯಾಗಿ ಹೊರಬಂದು ತನ್ನ ಕೆಟ್ಟ ಕೆಲಸವನ್ನು ಮುಂದುವರಿಸಬಹುದು ಎಂದುಕೊಳ್ಳುತ್ತಾರೆ..!
ಅದೇ ಕಠಿಣ ಶಿಕ್ಷೆಯನ್ನು ಬೇಗನೆ ಅವರಿಗೆ ನೀಡಿದರೆ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪುತ್ತದೆ. ತಪ್ಪು ಮಾಡುವ ಕೈಗಳು ಹೆದರಿ ಸುಮ್ಮನಾಗುತ್ತವೆ. ಅಪರಾಧಗಳ ಸಂಖ್ಯೆಯು ಸಹ ಗಣನೀಯವಾಗಿ ಕಡಿಮೆಯಾಗುತ್ತದೆ.
ಮಹಿಳೆಯಾದವಳಿಗೆ ಆರ್ಥಿಕ ಸಬಲೀಕರಣ ಇಂದಿನ ದಿನಗಳಲ್ಲಿ ನಿಜಕ್ಕೂ ಅವಶ್ಯವೆಂದೇ ಹೇಳಬಹುದು. ಮದುವೆಯಾಯಿತು, ಮಕ್ಕಳಾಯಿತು ಎಂದು ಕೆಲಸವನ್ನು ಬಿಟ್ಟು ಕುಳಿತರೆ ಮುಂದೆ ಅವಳಿಗೆ ತೊಂದರೆ ಎಂಬಂತೆ ಇದೆ ಈಗಿನ ಪರಿಸ್ಥಿತಿ. ಗೃಹಿಣಿಯಾಗಿ ಸಂಸಾರವನ್ನು ಸುಖವಾಗಿ ತೂಗಿಸಿಕೊಂಡು ಹೋಗುವ ಕಲೆ ಇರುವ ಅವಳಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತಷ್ಟು ಬಲ ತುಂಬುತ್ತದೆ. ಗೃಹಿಣಿಯಾಗಿ ಮಾತ್ರ ಅವಳನ್ನು ಸ್ವೀಕರಿಸುವ ಮನೋಭಾವ ಕೆಲವು ಮನೆಗಳಲ್ಲಿ ಮಾತ್ರ ಕಾಣಬಹುದು. ತಿಂಗಳಿಗೆ ಬೇಕಾಗುವ ಖರ್ಚು, ಅವಳಿಗೆ ಬೇಕು ಎನಿಸಿದ ವಸ್ತುಗಳ ಖರೀದಿಗೆ ಬೇಕಿರುವ ಹಣವನ್ನು ಪಡೆಯಲು ಯಾವಾಗಲೂ ಗಂಡನ ಮುಂದೆ ಕೈಚಾಚಬೇಕು ಎಂದರೆ ಹೆಂಡತಿಯಾದವಳಿಗೆ ಹಿಂಸೆ ಎನಿಸುತ್ತದೆ.
ಹಾಗಾಗಿ ಸ್ವಲ್ಪ ಆದಾಯ ಬಂದರೂ ಪರವಾಗಿಲ್ಲ ತನ್ನ ಖಾತೆಯಲ್ಲಿ ಒಂಚೂರು ಹಣವಿದ್ದರೆ ಬೇಕೆನಿಸಿದಾಗ ಉಪಯೋಗಿಸಬಹುದು ಎಂದು ಈಗಿನ ಮಹಿಳೆಯರಿಗೆ ಅನಿಸುವುದರಲ್ಲಿ ಅನುಮಾನವಿಲ್ಲ. ಒಟ್ಟಾರೆಯಾಗಿ ಸ್ತ್ರೀಯಾದವಳಿಗೆ ಸಮಾಜದಲ್ಲಿ ತನ್ನ ವಿದ್ಯೆ, ಬುದ್ಧಿ, ಹಣ, ಗೌರವ, ಸ್ಥಾನಮಾನಗಳು ಇದ್ದರೆ ಮಾತ್ರ ನೆಮ್ಮದಿ ಎಂತೆನಿಸುತ್ತದೆ. ಆದರೆ ಅವೆಲ್ಲವೂ ಇದ್ದು ಮನೆಯೆಂಬ ನಾಲ್ಕು ಗೋಡೆಗಳ ಮಧ್ಯೆ ಒಂದಲ್ಲ ಒಂದು ರೀತಿಯಲ್ಲಿ ಸಂಕಟವನ್ನು, ಶೋಷಣೆಯನ್ನು ಅನುಭವಿಸುತ್ತಿರುವ ಹೆಣ್ಣು ಮಕ್ಕಳು ಸಹ ಈ ಸಮಾಜದಲ್ಲಿ ಇದ್ದಾರೆ ಎಂಬುದೇ ವಿಪರ್ಯಾಸ..!
✍️ ಅಚಲ ಬಿ ಹೆನ್ಲಿ
ನಿಶ್ಚಲವಾಗಿರದೇ ಜೀವನದಿಯಂತೆ ಸಂಚರಿಸುತ್ತಲೇ ಇರಬೇಕು..!!